August 7, 2012

ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?




ಮಾರನಯಕನ ಹಳ್ಳಿ ಎಂಬಲ್ಲಿಗೆ ಹೊರಟಿದ್ದ ಒಬ್ಬ ನಗರವಾಸಿಗಳು ಬೇರೆ ಸಂಚಾರ ವ್ಯವಸ್ತೆ ಇಲ್ಲದೆ ಬಸ್ಸಿಂದ ಇಳಿದು ಮರದಡಿ ನಿಂತಿದ್ದರು.  ಘಲ್...ಘಲ್....ಸದ್ದು ಮಾಡುತ್ತಾ ಬಂದ ಜೋಡಿ ಎತ್ತಿನ ಗಾಡಿಯವನು ಮರದ ಕೆಳಗೆ ನಿಂತಿದ್ದ ಈ ನಗರವಾಸಿಗಳನ್ನು ನೋಡಿ "ಎಲ್ಲಿಗೆ ಹೋಗಬೇಕು?" ಎಂದು ಕೇಳಿದ.  " ಸ್ವಲ್ಪ ದೂರದಲ್ಲಿರುವ ಮಾರನಾಯಕನ ಹಳ್ಳಿಗೆ " ಎಂದು ಹೇಳಿ " ನನ್ನ ಅಲ್ಲಿತನಕ ತಲುಪಿಸಿ ಬಿಟ್ಟರೆ ನಿನ್ನ ಬಾಡಿಗೆ ಏನಿದೆಯೋ ಅದನ್ನ ಕೊಡುತ್ತೀನಿ. ಅಷ್ಟು ಮಾಡಿ ಪುಣ್ಯ ಕಟ್ಕೊ" ಎಂದು ಒಂದೇ ಸಮನೆ ಹೇಳಿದರು.  " ಅದಕ್ಕೇನಂತೆ, ನಾನು ಆ ಕಡೆಗೆ ಹೋಗ್ತಾ ಇದೀನಿ. ಬನ್ನಿ ಸ್ವಾಮೀ" ಎಂದು ಸ್ನೇಹದಿಂದ ಕರೆದ. ಎತ್ತಿನ ಗಾಡಿ ಬಹಳ ದಿನದ ನಂತರ ಹತ್ತಿ ಕೂತರು. ಕುಲುಕಾಟದ ಮಣ್ಣಿನ ರಸ್ತೆಯಲ್ಲಿ ಧೂಳು ಅಡರುತ್ತಿತ್ತು ಜೊತೆಗೆ ರಣ ಬಿಸಿಲು.  ಇದನ್ನು ಗಮನಿಸಿದ ಗಾಡಿಯವ " ಸ್ವಾಮೀ,  ಅಲ್ಲೇ  ಛತ್ರಿ ಮಡಗಿವ್ನಿ ಬಿಚ್ಚಿಕೊಳಿ. ಪ್ಯಾಟೆ ಜನಕ್ಕೆ ಈ ಬಿಸಿಲು ಆಗಬರಂಗಿಲ್ಲಾ." ಎಂದು ಸಹಜವಾಗಿ ಅಂದ.

ಗಾಡಿ ಸಾಗುತ್ತ ಇದ್ದಂಗೆ " ಈ ಗ್ರಾಮದಲ್ಲಿ ಒಬ್ಬರು ವೆಂಕಪ್ಪ ನಾಯಕರು ಅಂತ........ ತುಂಬಾ ದೊಡ್ಡ ಮನುಷ್ಯರು, ದೊಡ್ಡ ದಾನಿಗಳು....... ಅವರು ಈಗ ಹೇಗಿದ್ದಾರೆ? ನಿಮಗೇನಾದರೂ ಗೊತ್ತ?  ನಾನು ಅವರನ್ನ ......" ಹೇಳುತ್ತಿರುವ ಮಧ್ಯೆ ಬಾಯಿಹಾಕಿ " ಅವ್ರು ಇನ್ನೆಲ್ಲಿ ಸ್ವಾಮೀ? ಅವರನ್ನ ಆ ಸ್ವಾಮೀ ಕರಕ್ಕಂಡು ಬಿಟ್ಟ.  ಅದಿರ್ಲಿ, ನೀವು ಯಾಕೆ ಅವರನ್ನ ಕೇಳ್ತಾ ಇದ್ದೀರಿ?" ಎಂದು ಮರು ಪ್ರಶ್ನೆ ಹಾಕಿದ. ಈ  ಮಾತು ಕೇಳಿದ ನಗರವಾಸಿಗಳಿಗೆ ಅತ್ಯಂತ ನಿರಾಸೆಯಾಯಿತು.  ಏನೂ ತಿಳಿಯದೆ  ತಲೆ ಕೆಳಕ್ಕೆ ಮಾಡಿ ಕಣ್ಣು ತುಂಬಿಕೊಂಡರು. ಇದನ್ನು ಗಮನಿಸಿದ ಗಾಡಿಯವ " ನಿಮಗೆ ಸಂಬಂಧವಾ? ನಿಮ್ಮ ಕಣ್ಣನೀರು ನೋಡಿದರೆ ನಿಮಗೆ ತುಂಬಾ ಹತ್ತಿರದವರು ಅನಿಸುತ್ತೆ? " ಎಂದು ಅನುಮಾನ ವ್ಯಕ್ತ ಪಡಿಸಿದ.  " ನಾನು ಈ ಊರಿನವನೇ, ಈಗ್ಗೆ 35 ವರ್ಷಗಳ ಹಿಂದೆ ಈ ಊರು ಬಿಟ್ಟು ಪಟ್ನ ಸೇರಿಕೊಂಡವಿ. ವೆಂಕಪ್ಪ ನಾಯಕರು ನನ್ನ ಓದಿಗೆ ಸಹಾಯ ಮಾಡಿ ಚನ್ನಾಗಿ ಓದು ಅಂತ ಪ್ರೋತ್ಸಾಹ ಕೊಟ್ಟರು. ನಾನು ಒಳ್ಳೆ ಕೆಲಸಕ್ಕೆ ಸೇರಿಕೊಂಡು ವಿದೇಶಕ್ಕೆ ಹೋಗಿಬಿಟ್ಟೆ. ಕಳೆದ ಸಾರಿ ಭಾರತಕ್ಕೆ ಬಂದಾಗ ಈ ಹಳ್ಳಿಗೆ  ಬರಲಾಗಲಿಲ್ಲ. ಈ ಸಾರಿ ನಾಯಕರನ್ನ ನೋಡೇ ಹೋಗಬೇಕೆಂದು ಬಂದೆ.  ಆದರೆ, ನಂಗೆ ಅವರನ್ನ ನೋಡಿ ಆಶೀರ್ವಾದ ಪಡೆಯುವ ಭಾಗ್ಯ ಇಲ್ಲವಾಯಿತಲ್ಲ ಎಂದು ದುಃಖ ಆಗ್ತಾ ಇದೆ. " ಎಂದು ಬಿಕ್ಕಳಿಸಿದರು.  ಅಷ್ಟರಲ್ಲಿ ಗಾಡಿ ನಾಯಕರ ಮನೆ ಹತ್ತಿರಕ್ಕೆ ಬಂತು.

" ಸ್ವಾಮೀ......ಇಳೀರಿ. ನಾಯಕರ ಮನೆ ಬಂತು.  ಬನ್ನಿ ಒಳಕ್ಕೆ." ಎಂದು ಆತ್ಮೀಯವಾಗಿ ಒಳಕ್ಕೆ ಕರೆದ.  ಒಳಗೆ ಹೋಗಿ ಕುರ್ಚಿಯ ಮೇಲೆ ಕೂತ ಅವರ ಕಣ್ಣಿಗೆ ಬಿದ್ದದ್ದು ವೆಂಕಪ್ಪ ನಾಯಕರ ದೊಡ್ಡ ಫೋಟೋ. ಕಣ್ಣು ತುಂಬಿ ಬಂತು.  ಎದ್ದು ನಿಂತು ಕೈ ಜೋಡಿಸಿ "ನನ್ನನ್ನ  ಕ್ಷಮಿಸಿ ಬಿಡಿ,  ನಾನು ನಿಮ್ಮನ್ನ ನೋಡಲು ಬಹಳ ವರ್ಷ ಬರಲಿಲ್ಲ. ನೀವು ನನಗೆ ಮಾಡಿದ ಉಪಕಾರ ಹೇಗೆ ತೀರಿಸಲಿ? " ಎಂದು ಗದ್ಗದಿತರಾದರು.  ಅಷ್ಟರಲ್ಲಿ ಮನೆ ಒಳಗಿದ್ದವರೆಲ್ಲ ಹಜಾರಕ್ಕೆ ಬಂದರು.  ಗಾಡಿಯವ "ಇವರು ಅಯ್ಯಂಗೆ ಬೇಕಾದವರು."  ಎಂದು ಪರಿಚಯ ಹೇಳಿದ. ಜೋಬಿಗೆ ಕೈ ಹಾಕಿ ಗಾಡಿ ಬಾಡಿಗೆ ಕೊಡಲು ಪಾಕೆಟ್ ತೆಗಯಲು ಹೋದಾಗ " ಸ್ವಾಮೀ, ನಾನೂ ನಾಯಕರ ಕುಟುಂಬದ ಕುಡಿ. ಏನೋ ಕಾರಣ ಎಲ್ಲವನ್ನು ಕಳೆದುಕೊಂಡು ಈಗ ನಾವೆಲ್ಲಾ ಗತಿ ಕೆಟ್ಟವರಾಗಿದ್ದೇವೆ. ಕೊನೆ ಉಳಿದಿರುವ ಈ ಜೋಡಿ ಎತ್ತು ನಮ್ಮನ್ನ ಸಾಕ್ತಾ ಇತೆ. ನನ್ನ ಹಿರಿಯರು ನಮ್ಮನ್ನ ಕೈ ಬಿಟ್ಟಿಲ್ಲ ಸ್ವಾಮೀ" ಎಂದ .   ಅವರು ದಂಗಾಗಿ ಹೋದರು.  ತಕ್ಷಣ ಅವರ ಮನಸ್ಸಿನಲ್ಲಿ ಇದು ನನಗೆ ಸರಿಯಾದ ಸಮಯ ಇವರಿಗೆ ಸಹಾಯ ಮಾಡಲು ಎಂದು ಜೇಬಿಂದ ಸಾವಿರದ ಹತ್ತು ನೋಟುಗಳನ್ನು ಗಾಡಿಯವನ ಕೈಯಲ್ಲಿಡಲು ಮುಂದೆ ಬಾಗಿದರು.  ಹಾವು ತುಳಿದವನಂತೆ  ನಾಕು ಹೆಜ್ಜ ಹಿಂದೆ ಹೋಗಿ " ನಮ್ಮ ಹಿರಿಯರು ಕೈನೀಡಿ ಕೊಟ್ಟು ಬೆಳೆಸಿದ ನಿಮ್ಮಂತಹವರ ಹತ್ತಿರ ನಾವು ಪಡ ಕೊಂಡರೆ,  ದಾನ ಕೊಟ್ಟಿದ್ದನ್ನ ಮತ್ತೆ ಹಿಂದ್ದಕ್ಕೆ ಪಡೆದ ಪಾಪ ಬರುತ್ತೆ. ನಮ್ಮ ಹಿರಿಯರಿಗೆ ಅವಮಾನ ಮಾಡಿದ ಹಾಗಾಗುತ್ತೆ. ಖಂಡಿತ ಬೇಡ. ನಿಮಗೆ ನಮ್ಮ ಅಯ್ಯನ ಮೇಲೆ ಗೌರವ ಇದ್ರೆ ಇವೆಲ್ಲ ಏನೊ ಬೇಡ." ಎಂದು ಸಾರಾಸಗಟಾಗಿ ತಿರಸ್ಕರಿಸಿದ.  ಇವರ ಬಾಯಿಂದ ಏನೂ ಹೊರಳಲೇ ಇಲ್ಲ.

ದಾನಶೂರರಾಗಲು ಹಣ ಮುಖ್ಯವೋ?  ಮನಸ್ಸು ಮುಖ್ಯವೋ? ನಮ್ಮ ಮನಸ್ಸೇ ಮಿತ್ರ, ನಮ್ಮ ಮನಸ್ಸೇ ಶತ್ರು. ನಾವು ಎಷ್ಟು ದೊಡ್ಡ ಮನಸ್ಸಿನವರು ಆಗಬಹುದು, ಹಾಗೆಯೇ ಚಿಕ್ಕವರೂ ಆಗಬಹುದು.  ನಾವು ಏನು ಚಿಂತಿಸುತ್ತೆವೋ   ಅದೇ ಆಗುತ್ತೇವೆ.  ಎಲ್ಲವು ನಮ್ಮ ಕೈಯಲ್ಲೇ ಇದೆ. ಮನಸ್ಸಿನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡರೆ ಬದುಕಿನಲ್ಲಿ ಮೇಲೇರಲು ಸಾಧ್ಯ.  

(ನನ್ನ ಮಿತ್ರರ  ಜೀವನದಲ್ಲಿ ಆದ ಸತ್ಯ ಘಟನೆಯ ಚಿತ್ರಣ )




6 comments:

  1. ಒಳ್ಳೆಯ ಅನುಭವ...ಸುಂದರ ಕಥಾನಕ...
    ಮನುಜನ ಸಾಮಾನ್ಯ ಗುಣ ಕಷ್ಟದಲ್ಲಿದ್ದಾರೆ, ಹಿರಿಯರು ಕಾಲವಶವಾಗಿದ್ದರೆ, ಅಪಘಾತವಾಗಿದೆ, ಮದುವೆ ಅಥವಾ ಇನ್ನ್ಯಾವುದು ಸಮಾರಂಭ..ಇವೆಲ್ಲ ಸಮಯದಲ್ಲಿ ಸಹಾಯ ಅಂತ ಅಂದ್ರೆ ಮೊದಲು ದುಡ್ಡು/ಹಣ ಅನ್ನುವ ತಪ್ಪು ಕಲ್ಪನೆ ಬೇರೂರಿಬಿಟ್ಟಿದೆ...ಹಣ/ದುಡ್ಡು ಹೌದು ಮುಖ್ಯ ಅದಿಲ್ಲದೆ ಮೇಲಿನ ಅಥವಾ ಇನ್ನ್ಯಾವುದೇ ಕಾರ್ಯ ನಡೆಯದು..ಆದ್ರೆ ಎಲ್ಲ ಸಮಯದಲ್ಲೂ ಸಂತ್ರಸ್ತರು ಅದನ್ನ ಅಪೇಕ್ಷೆ ಪಡುವುದಿಲ್ಲ...ನಾನು ನಿನ್ನ ಜೊತೆ ಇದ್ದೇನೆ ಅನ್ನುವ ನೈತಿಕ ಬಲ ಹಣ ಹಾಗು ಎಲ್ಲಕ್ಕಿಂತಲೂ ಹೆಚ್ಚು.......ಆದ್ರೆ ಮನುಜನ ಗುಣ..ಏನು ಮಾಡಲಾಗದು...ದಾನ ವೀರ ಶೂರರು ಆಗೋದು...ಪರಿಸ್ಥಿತಿಯನ್ನ ಗೆದ್ದು ಹೊದ್ದು ನಿಲ್ಲೋದು...ರಾಜಿ ಮಾಡಿಕೊಳ್ಳೋದು ಅಲ್ಲ...

    ReplyDelete
    Replies
    1. ಆತ್ಮೀಯ ಶ್ರೀಕಾಂತ್
      " ಸಾಧನೆ ಮಾಡಬೇಕಾದರೆ ರಾಜಿ ಮಾಡಿಕೊಳ್ಳುವುದನ್ನು ಇಲ್ಲ ಮಾಡಬೇಕು " ಎಂದು ಎಲ್ಲೋ ಓದಿದ ನೆನಪು. ಈ ಘಟನೆಯಲ್ಲಿ ಮೂವರ ಮನಸ್ಸು ವಿಶಾಲವಾದುದೆ! ಹೀಗಾಗಿ ಮನಸ್ಸೇಮುಖ್ಯ ಎಂದೇ ಹೇಳಬೇಕಾಗುತ್ತದೆ.
      ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು

      Delete
  2. k manjunath kmanjunathmce@rediffmail.com
    10:31 PM (11 hours ago)

    to me
    Dear Prakash

    OH! Too much of human bondage packed into one! What to consider?

    (1) Greatness of Maranayak

    (2) Gratefulness of the beneficiary

    (3) Fullness of the descendent

    Well narrated

    KM

    ReplyDelete
    Replies
    1. ಆತ್ಮೀಯ ಮಂಜುನಾಥ್ ರವರೆ,
      ನಿಮ್ಮ ವಿಶ್ಲೆಶಾತ್ಮಕ ಅಭಿಪ್ರಾಯ ಮತ್ತು ಮೆಚ್ಚುಗೆಗೆ ಧನ್ಯವಾದಗಳು

      Delete
  3. ಇಟ್ಟು ಕೊಳೆಯಿಸದೆ, ಕೊಟ್ಟು ಸವೆಯಿಸುವುದೆ ದಾನ!
    ಪಡೆದುದಕೆ ಪ್ರತಿಯಾಗಿ ಹನಿಯೆರಡ ಮಿಡಿದುದೆ ಕೃತಜ್ಞತೆ!

    ReplyDelete
    Replies
    1. ಆತ್ಮೀಯ ರಜನೀಶನಿಗೆ
      ಉತ್ತಮವಾದ ಅಭಿಪ್ರಾಯ. ನಿಜ ಕೊಳೆತು ನಾರುವುದಕ್ಕಿಂತ, ಉಪಯೋಗದಲಿ ಸವೆಯುವುದೇ ಉತ್ತಮೋತ್ತಮ. ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.

      Delete