February 2, 2016

ಮಾತು-ಮೌನ-ಧ್ಯಾನ

ಮಾತು-ಮೌನ-ಧ್ಯಾನ
ಧ್ಯಾನದಲ್ಲಿ ಹಲವಾರು ವಿಧಾನಗಳವೆ. ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸರಳ ವಿಧಾನವೂ ಕೂಡಾ ಧ್ಯಾನದಲ್ಲಿ ಒಂದು; ಪ್ರತಿಕ್ಷಣದಲ್ಲಿ ಸಂಭವಿಸುವ ಶಬ್ಧ ಸ್ಪೋಟಗಳು ನಮ್ಮ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. "ಮನಸ್ಸು ಶಬ್ಧಗಳ ಮತ್ತು ಪದಗಳ ಸಂತೆ. ಈ ಪ್ರಕ್ರಿಯೆಯು ದಿನವಿಡೀ ನಡೆಯುತ್ತಿರುತ್ತದೆ. ನಮ್ಮ ಮನಸ್ಸಿನೊಳಗೆ ಆಲೋಚನೆಗಳೇ ತುಂಬಿಕೊಂಡಿರುತ್ತದೆ. ಈ ಪದಗಳ ಭಾರದಿಂದ ಮನಸ್ಸು ನಿತ್ರಾಣಗೊಳ್ಳುತ್ತದೆ. ಆಗ ಸ್ವ-ಜ್ಞಾನದ ಅನುಭವವೇ ಆಗುವುದಿಲ್ಲ. ಏಕೆಂದರೆ, ಈ ಸ್ವಜ್ಞಾನ ಇರುವುದು (sub conscious)ಶಬ್ದ ಮತ್ತು ಪದಗಳ ಆಚೆಗೆ"

ವಿಜ್ಞಾನ ಭೈರವ ತಂತ್ರದ 24ನೇ ಅಧ್ಯಾಯದಲ್ಲಿ  " ಮೊದಲು ಅಕ್ಷರಗಳಾಗಿ,ನಂತರ ಶಬ್ಧಗಳಾಗಿ,ಆಮೇಲೆ ಭಾವವಾಗಿ.... ಕೊನೆಗೆ ಎಲ್ಲವನ್ನೂ ಪಕ್ಕಕ್ಕೆ ಇರಿಸಿ ಸ್ವತಂತ್ರವಾಗಿ ಕೇಳಿಸಿಕೊ. ಪ್ರತಿ ಶಬ್ಧದ ಶಬ್ಧಗಳನ್ನು ಕೇಳಿಸಿಕೋ."  ಈ ರೀತಿಯ ಧ್ಯಾನಕ್ಕೊ೦ದು ವಿಧಾನವನ್ನು ಸೂಚಿಸುತ್ತಾರೆ. ಬೆನ್ನು ನೇರವಾಗಿ, ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ತೋಳುಗಳನ್ನು ಅಗಲಿಸಿ ಕುಳಿತುಕೊಳ್ಳಬೇಕು. ಇಡೀ ದೇಹ ಸಡಿಲವಾಗಿರಬೇಕು. ಮುಖದಲ್ಲಿ ಮ೦ದಹಾಸವಿರಬೇಕು. ಕಿವಿಯ ಮೇಲೆ ಬೀಳುತ್ತಿರುವ ಎಲ್ಲಾ ಶಬ್ಧಗಳನ್ನು ಕೇಳಿಸಿಕೊಳ್ಳುತ್ತಾ ಕುಳಿತುಕೊಳ್ಳಬೇಕು. ಯಾವುದೇ ಶಬ್ಧಕ್ಕೆ ಪ್ರತಿಕ್ರಿಯೆ ನೀಡುವುದು ಬೇಡ. ಎಲ್ಲವೂ ಕೇಳಿಸಲಿ. ನಾವಾಗಿಯೇ ಕೇಳಿಸಿಕೊಳ್ಳುವ ಪ್ರಯತ್ನ ಬೇಡ. ತ೦ತಾನೆಕೇಳುವೂದು ಕೇಳಲಿ. ಯಾವುದೇ ಶಬ್ಧಗಳ ವಿಮಶೆ೯ಬೇಡ. ಎಲ್ಲಿ೦ದಲಾದರೂ ಬರಲಿ, ಸುಮನೆ ಕೇಳಿಸಿಕೊಳ್ಳಿ. ಇದು ಅದರ ಪಾಡಿಗೆ ಅದು ನಡೆಯಲಿ; ಕೇಳುವಿಕೆಯಲ್ಲಿ ಸ್ವತಂತ್ರ ನಿರಂತರತೆ, ಇರಲಿ. ಅದರಲ್ಲೇ ಇನ್ನಷ್ಟು ಆಳವಾಗಿ..... ಮತ್ತಷ್ಟು ಆಳವಾಗಿ..... ಆಳಕ್ಕೆ ಹೋದಷ್ಟೂ ಶಬ್ಧದೊಳಗಣ ನಿಶ್ಯಬ್ಧಗೋಚರವಾಗುತ್ತದೆ...... ಆಳವಾಗಿ ಅನುಭವಿಸುತ್ತಾ ಹೋದ೦ತೆ.... ತಿಳಿಯಾದ ಮೌನ.... ನಿಶ್ಯಬ್ಧ.... ಈ ನಿಶ್ಯಬ್ಧದ ಆಲಿಸುವಿಕೆಯೂ ತಂತಾನೆ ಆಗುತ್ತಿರುತ್ತದೆ....... ಹಾಗೆಯೇ ಆಗಲಿ.
   
ಈ ದಿವ್ಯ ಮೌನದ ಸ್ಪಶ೯ ಕೆಲವೇ ಕ್ಷಣಕ್ಕಾದರೂ ನಮ್ಮದಾಗುತ್ತದೆ. ನಮ್ಮನ್ನು ನಾವು ಧ್ಯಾನಕ್ಕೆ ಅಪಿ೯ಸಿಕೊಂಡಷ್ಟು ಮೌನದ ಸ್ಪಶ೯ ದಿನದಿಂದ ದಿನಕ್ಕೆ ನಮ್ಮೊಳಗೆ ಈಜಲು  ಪ್ರಾರಂಭ ಮಾಡುತ್ತದೆ. ಆಗ ಧ್ಯಾನಸ್ಥ ಸ್ಥಿತಿ ಮೀನಿನಂತೆ ಸಹಜವಾಗಿ, ಹಗುರವಾಗಿ ನಮ್ಮೊಳಗೆ ತೇಲುತ್ತದೆ. ನಾವು ಶಬ್ಧಗಳನ್ನು ಆಲಿಸುತ್ತಾ ಸಾಗಿದೆವು; ನಂತರದಲ್ಲಿ ಶಬ್ಧ ಮಾಯವಾಗಿ ಮೌನದ ಸ್ಪರ್ಶವಾಯಿತು. ನಾವು ಶಬ್ಧಗಳನ್ನು ತಡೆಯಲು ಪ್ರಯತ್ನಿಸಲಿಲ್ಲ; ಶಬ್ಧ ಮಾಯವಾಗಿ ಮೌನದ ಸ್ಪರ್ಶವಾಯಿತು. ನಾವು ಶಬ್ಧಗಳನ್ನು ತಡೆಯಲಿಲ್ಲ; ಅಳಿಸಲಿಲ್ಲ, ಶಬ್ಧಗಳು ಎಲ್ಲೂ ಹೋಗಿರಲಿಲ್ಲ; ಅವು ಇದ್ದಲ್ಲೇ ಇದ್ದವು; ಆದರೆ, ನಮ್ಮ ಸ್ಥಿತಿ ಮಾತ್ರ ಬದಲಾಯಿತು. ನಿತ್ಯ ಜೀವನದಲ್ಲೂ ಕೂಡಾ ನಾವು ಸುಮ್ಮನೆ ಕೇಳಿಸಿ ಕೊಳ್ಳುವುದರಲ್ಲೇ, ನೂರಾರು ಸಮಸ್ಸೆಗಳಿಗೆ  ಪರಿಹಾರ ದೊರೆಯುತ್ತದೆ. ಧ್ಯಾನಸ್ಥ ಸ್ಥಿತಿಗೆ ತಲುಪಿದ ಮೇಲೆ ಕಛೇರಿಯಲ್ಲೇ ಇರಲಿ, ಟ್ರಾಫಿಕ್ ನ ಮಧ್ಯೆಯೇ  ಇರಲಿ, ನಮ್ಮೊಳಗೊಂದು ರೀತಿಯ ಬದಲಾವಣೆ  ಕಂಡುಬರುತ್ತದೆ. 

ಈ ಬದಲಾವಣೆಯನ್ನು ನಾವು ಪ್ರತಿಕ್ಷಣ ಗಮನಿಸಬಹುದು. ನಮ್ಮೊಳಗಿನ ಮುಖ್ಯ ಬದಲಾವಣೆಯೆಂದರೆ, ನಮ್ಮ ಮಾತಿನ ದುಂದುವೆಚ್ಚ ಕಡಿಮೆ ಆಗಿರುತ್ತದೆ. ವಿಪರೀತವಾದ ಮಾತು, ಅನಗತ್ಯ ಶಬ್ಧಗಳ ಬಳಕೆ, ವಾದವಿವಾದಗಳು ನಶಿಸುತ್ತಾ,ನಾವಾಡುವ ಪ್ರತಿ ಮಾತಿಗೂ ಮೌಲ್ಯ ಬರಲು ಪ್ರಾರಂಭವಾಗುತ್ತದೆ. ಆಗ ನಾವು ಮಾಡುವ ಪ್ರತಿ ಕ್ರಿಯೆಯು ಹಗುರವಾಗಿರುತ್ತದೆ. ಇದರಿಂದ ನಮ್ಮ ಸುತ್ತಲಿನ ಜಗತ್ತೇನೂ ಬದಲಾಗುವುದಿಲ್ಲ; ಅದು ಇದ್ದಂತೆಯೇ ಇರುತ್ತದೆ. ಆದರೆ ನಮ್ಮ ಸ್ಥಿತಿಯು ಮಾತ್ರ ಸಾಕಷ್ಟು ಬದಲಾಗಿರುತ್ತದೆ.   

January 23, 2016

ಭಯ 
ಮನುಷ್ಯನ  ಹದಿನಾಲ್ಕು ಗುಣಗಳಲ್ಲಿ 'ಭಯ' ವು ಕೂಡ ಒಂದು ಪ್ರಬಲವಾದ ಗುಣ.  ಹದಿನಾಲ್ಕು ಗುಣಗಳಲ್ಲಿ ಕೆಲವನ್ನು ಉದಾತ್ತೀಕರಣಗೊಳಿಸಿಕೊಳ್ಳಬೇಕು. ಇನ್ನು ಕೆಲವೊಂದನ್ನು ದೈವೀಕರಿಸಿಕೊಳ್ಳಬೇಕಾಗುತ್ತದೆ. ಮತ್ತೆ ಕೆಲವೊಂದನ್ನು ಸಂಪೂಣ೯ವಾಗಿ ಇಲ್ಲವಾಗಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಭಯ ಎಂಬುದನ್ನು  ಇಲ್ಲವಾಗಿಸಿಕೊಳ್ಳಬೇಕಾಗುತ್ತದೆ. ದೈರ್ಯದಿಂದ ಇರಲು ಅಭ್ಯಾಸ ಮಾಡಬೇಕಾಗುತ್ತದೆ. "ಧೈರ್ಯಂ ಸರ್ವತ್ರ ಸಾಧನಂ".  

ಭಯವಿರಬಾರದು ಎಂದರೆ ಗುರುಹಿರಿಯರಲ್ಲಿ ಭಯ-ಭಕ್ತಿ ಇರಬಾರದು ಎಂದಥರ್ವಲ್ಲ. ಕೆಲವರು ಅನಗತ್ಯವಾಗಿ, ಅನಾವಶ್ಯಕವಾಗಿ ಭಯಪಡುತ್ತಿರುತ್ತಾರೆ. ಇಂತಹವರ ಭಯವು ಎಷ್ಟು ಬಾಲಿಶವಾಗಿರುತ್ತೆಂದರೆ- ಯಾರಾದರೂ ನಮಗೆ ಏನಾದರೂ ಕೇಡು ಮಾಡಬಹುದೇನೋ  ಎಂಬ ಭಯ, ನಮಗೆ ಒಂದು ಪಕ್ಷ ಕಷ್ಟಗಳು,  ತೊಂದರೆಗಳು, ದುಃಖ -ದುಮ್ಮಾನಗಳು ಬಂದುಬಿಟ್ಟರೆ  ಏನು ಮಾಡುವುದು? ಯಾರೂ ಮನೆಯಲ್ಲಿ ಇಲ್ಲದೆ ಇದ್ದಾಗ ಆಕಸ್ಮಾತ್ತಾಗಿ  ಸಾವು ಬಂದುಬಿಟ್ಟರೆ ಏನುಗತಿ ? ಹೀಗೆ ಹಲವು ಹದಿನೆಂಟು ರೀತಿಯ ಭಯದಿಂದ ಹೆದರಿಕೊ೦ಡು ದಿನನಿತ್ಯದಲ್ಲಿ ಹಲವರು ಬದುಕಿದ್ದೂ  ಸತ್ತಂತೆ ಹೇಡಿಗಳಾಗಿ ಇರುತ್ತಾರೆ. ಇಂತಹ ಹೆದರಿಕೆಗೆ ಯಾವುದೇ ಸ್ಪಷ್ಟ ಕಾರಣವಿಲ್ಲ. ಇದು ಕೇವಲ ಇವರ ದುರ್ಬಲವಾದ ಮನಸ್ಥಿತಿ ಅಷ್ಟೇ.  ಈ ಜಗತ್ತನ್ನು ನಿರ್ವಾಹ ಮಾಡುವ ಸೃಷ್ಟಿಕತ೯ನಲ್ಲಿ, ತಾನು ದೃಢವಾಗಿ ನಂಬಿದ ಗುರುವಿನಲ್ಲಿ ಹಾಗೂ ನಮ್ಮ ಋಷಿಮುನಿಗಳು ನಮಗಾಗಿ ಬಿಟ್ಟುಹೋದ ತತ್ತ್ವ, ಸಿದ್ದಾಂತಗಳಲ್ಲಿ ಅಚಲ ನಂಬಿಕೆಯುಳ್ಳವರು ಯಾವತ್ತೂ ಹೆದರುವುದಿಲ್ಲ . ಭಗವಂತನ ಮೇಲೆ ಅಚಲವಾದ ವಿಶ್ವಾಸವಿರಿಸಿ ನೆಮ್ಮದಿಯಾಗಿ ಬದುಕುತ್ತಾರೆ. ಯಾವುದು ಆಗಲೇಬೇಕೆಂಬ ನಿಶ್ಚಯ ಭಗವಂತನ ಸಂಕಲ್ಪದಲ್ಲಿ ಆಗಿಹೊಗಿದೆಯೋ ಅದು ಆಗಿಯೇ ತೀರುತ್ತದೆ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದೇ ರೀತಿ ಯಾವುದು ಆಗಬಾರದೆಂಬುದು ಭಗವಂತನ ಸಂಕಲ್ಪದಲ್ಲಿ ನಿಶ್ಚಯವಾಗಿದೆಯೋ ಅದನ್ನು ಆಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಅರಿತು, ಅನ್ಯಥಾ ಚಿಂತೆ ಬಿಟ್ಟು ತಮ್ಮ ಕೆಲಸ ತಾವು ಮಾಡುತ್ತಾ  ಸತ್ಯದಲ್ಲಿ ಮತ್ತು  ಧಮ೯ದಲ್ಲಿ ಬದುಕುತ್ತಾರೆ.  

ಧೈಯ೯ದಿಂದ ಹೆಜ್ಜೆ ಮುಂದಿಟ್ಟಾಗ ಯಶಸ್ಸು ಖಂಡಿತ. ನಾವು  ಸಂಶಯದಿಂದ ಹೆದರಿ ಹಿಂದೆ ಹೆಜ್ಜೆ ಇಟ್ಟರೆ ಸೋಲು ಅನುಭವಿಸಬೇಕಾಗುತ್ತದೆ . ಸತ್ಯಕಾಗಿ, ಧಮ೯ಕ್ಕಾಗಿ ದುಡಿಯುವ೦ತಹ  ಅವಕಾಶ ಸಿಕ್ಕಾಗ ಸಂತೋಷದಿಂದ ಸ್ವಿಕರಿಸಿ,  ಅದೆಷ್ಟೇ ಕಷ್ಟ ಬಂದರೂ ಎದುರಿಸುವ ದೃಢ ಸಂಕಲ್ಪದೊಂದಿಗೆ  ನಮ್ಮ ಮನಸ್ಸು ಗಟ್ಟಿಮಾಡಿಕೊಳ್ಳಬೇಕು. ನಾವು ನ್ಯಾಯನಿಷ್ಟುರಿಗಳಾಗಬೇಕು,  ದಾಕ್ಷಿಣ್ಯಪರರಾಗಬಾರದು. ಒಂದು ಪಕ್ಷ ಮರಣವೇ ಸಂಭವಿಸುವುದಾದರು ಅದನ್ನೇ  ಮಹಾನವಮಿ ಎಂದು ಸಂತೋಷದಿಂದ ಸಾವನ್ನು ಸ್ವೀಕರಸಲು ತಯಾರಾದಾಗ ಭಗವಂತನ ಸಹಾಯ ನಮ್ಮೊಂದಿಗೆ ಸದಾಕಾಲ ಇದ್ದೆ ಇರುತ್ತದೆ. 

ಅಸಂಖ್ಯಾತ ಮಹಾತ್ಮರು, ಸಂತರು, ಶರಣರು ಸತ್ಯ-ಧಮ೯ದ ಮಾಗ೯ದಲ್ಲಿ ನಡೆದು, ಪರೋಪಕಾರ ಮಾಡುತ್ತಾ ಸಮಾಜ, ರಾಷ್ಟ್ರ , ಧಮ೯ಕ್ಕಾಗಿ ಬದುಕಿ ತಮ್ಮ ಜೀವನವನ್ನು  ಸಾಥ೯ಕಪಡಿಸಿಕೊಂಡಿದ್ದಾರೆ.   ಅವರಿಗೆ ಯಾವ ಭಯವು ಕಾಡಲಿಲ್ಲ.  ಅವರ ಜೀವನದ ಆದರ್ಶವೆನ್ನೆಲ್ಲಾ  ದೇಶಕ್ಕಾಗಿ ಮುಡುಪಾಗಿಸಿ,  ನಮಗಾಗಿ ದುಡಿದಿದ್ದಾರೆ; ದೇಶಕ್ಕಾಗಿ ಮಡಿದಿದ್ದಾರೆ. ಮರಣಭಯವನ್ನು ಗೆದ್ದು ಅಮರಾತ್ಮರಾಗಿದ್ದಾರೆ. ಇಂತಹ ಮರಣಭಯವನ್ನೇ  ಗೆದ್ದವರು ಮಾತ್ರ ನಿಜವಾದ ಶರಣರಾಗಲು ಸಾಧ್ಯ. ಇಂತಹ ಆದರ್ಶ ಪುರುಷರು ಹುಟ್ಟಿದ ನಾಡಲ್ಲಿ ನಾವಿರುವುದು ನಮ್ಮ ಪರಮ ಸೌಭಾಗ್ಯವಲ್ಲವೇ? ಇಂತಹವರು ನಮಗೆ ಆದರ್ಶರಾಗಬೇಕಲ್ಲವೇ?

" ಚಿಂತೆ ಯಾತಕೋ? ಮನದಿ ಭ್ರಾಂತಿ ಯಾತಕೋ?" ಎಂದು ಪುರಂದರ ದಾಸರು ಕೇಳುತ್ತಾ " ನಂಬಿ ಕೆಟ್ಟವರಿಲ್ಲವೋ ರಂಗಯ್ಯನ, ನಂಬದೆ ಕೆಟ್ಟರೆ ಕೆಡಲಿ" ಎಂಬ ಆಶ್ವಾಸನೆ ಕೊಡುತ್ತಾರೆ.   ಚಿಂತೆ ಬಿಟ್ಟು ಭಗವಂತನ ಸ್ಮರಣೆ ಮಾಡುತ್ತಾ ಸತ್ಯಧರ್ಮದ ಹಾದಿಯಲ್ಲಿ ಜೀವನ ನಡೆಸುವವಗೆ ಯಾವ ಭಯವು ಕಾಡದು. 

April 6, 2015

ಜೀವನ ಸುಂದರ ಮತ್ತು ಸ್ವಾರಸ್ಯ

ಜೀವನ ಸುಂದರ ಮತ್ತು ಸ್ವಾರಸ್ಯ

ಈ ಜಗತ್ತಿನಲ್ಲಿರುವ ಅದೆಷ್ಟೋ ಅದ್ಭುತ ಎನಿಸುವ ಹಲವಾರು ಅನ್ವೇಷಣೆಗೆ  ಮಾನವ ಕಾರಣನಾಗಿದ್ದಾನೆ. ಜೀವನದಲ್ಲಿ ಸುಖದ ನಿರಂತರ ಹುಡುಕಾಟದ ಸಲುವಾಗಿ ತನ್ನ ಅನುಕೂಲವನ್ನು ಆಶ್ರಯಿಸಿ ಹಲವಾರು ಸಾಧನ ಸಾಮಗ್ರಿಗಳನ್ನು ಕಂಡುಹಿಡಿದಿದ್ದಾನೆ.  ಒಂದರ ನಂತರ ಮತ್ತೊಂದರಂತೆ ಇವನ ಸುಖದ ಅನ್ವೇಷಣೆ ನಿರಂತರವಾಗಿ ಸಾಗಿದೆ.  ಆದರೂ,  ಮಾನವನಿಗೆ ನಿಜವಾಗಿ ಬೇಕೆನಿಸಿದ ಸುಖ ಸಿಕ್ಕಿಲ್ಲದವನಂತೆ ಚಡಪಡಿಸುತ್ತಿದ್ದಾನೆ. ಅವನಿಗೆ ಏನು ಬೇಕು? ಎನ್ನುವುದರ ಬಗ್ಗೆಯೂ ಅವನಿಗೆ ಗೊಂದಲವಿದೆ.  ಅವನಿಗೆ ಏನು ಸಿಕ್ಕರೆ ಸುಖ ಸಂಪೂರ್ಣವಾಗಿ ಸಿಗುತ್ತದೆ? ಎನ್ನುವ ಬಗ್ಗೆ ಹಲವಾರು ಸಂಶಯಗಳಿವೆ. " ಇಷ್ಟಾದರೆ ಮತ್ತಷ್ಟು ಬೇಕೆಂಬಾಸೆ, ಮತ್ತಷ್ಟಾದರೆ ಮಗದಷ್ಟು ಬೇಕೆಂಬಾಸೆ "  ಹೀಗಾಗಿ ಅವನ ಹುಡುಕಾಟ ನಿರಂತರವಾಗಿ ಸಾಗುತ್ತಾ ಇದೆ.  "ಹೊರಗಿನ ಪ್ರಪಂಚದಲ್ಲಿ ಎಷ್ಟೇ ಸುಖವೆನ್ನುವ ವಸ್ತುವಾಗಲಿ, ಭಾವನೆಯಾಗಲಿ ನಮಗೆ ಸಿಕ್ಕಂತೆ ಅನಿಸಿದರೂ ಅದು ಕೇವಲ ತಾತ್ಕಾಲಿಕವಾದದ್ದು, ಅದರಿಂದ ನಮಗೆ ನಿರಂತರ ಸುಖ ಸಿಗಲು ಸಾಧ್ಯವಿಲ್ಲ" ಎಂಬ ಸತ್ಯದ ಅರಿವು ಇಲ್ಲದಿರುವುದು ಮಾನವನ ದೌರ್ಬಲ್ಯಗಳಲ್ಲಿ ಒಂದಾಗುತ್ತದೆ ಎಂದು ಸಂತರು ಅಭಿಪ್ರಾಯಪಡುತ್ತಾರೆ. ಯಾವುದು ಲೌಕಿಕ ಪ್ರಪಂಚದಲ್ಲಿ ಸುಖವನ್ನು ನೀಡಬಲ್ಲದೋ ಅದು ದುಃಖವನ್ನು ತಪ್ಪದೆ ನೀಡುತ್ತದೆ.  ಈ ದುಃಖದಿಂದ ತಪ್ಪಿಸಿಕೊಳ್ಳಲು ಮತ್ತೊಂದು ಸುಖದ ಅನ್ವೇಷಣೆ, ಮತ್ತೆ ದುಃಖ  ಹೀಗೆ ಸಾಗಿದೆ ನಮ್ಮ ನಿತ್ಯದ ಬದುಕು. ಮಾನವ ಎಲ್ಲವನ್ನು ಗೆದ್ದೇ ಬಿಡುತ್ತೆನೆಂಬ  ಹುಚ್ಚು ಸಾಹಸದಲ್ಲಿ ತನ್ನೆಲ್ಲ ಶ್ರಮ, ಬುದ್ಧಿವಂತಿಕೆವನ್ನು ವ್ಯಯಿಸಿ ನಿತ್ಯದ ಸುಖವನ್ನು ಬಲಿಕೊಟ್ಟು ನಿರಾಶನಾಗುತ್ತಿದ್ದಾನೆ.  ಆದರೆ, ಮಾನವ ತನ್ನ ಇತಿಮಿತಿಗಳನ್ನು ಅರಿಯದಿರುವುದೂ  ಒಂದು ದೋಷವಾಗಿದೆ. ಈ ಪ್ರಪಂಚದಲ್ಲಿ ಅದೆಷ್ಟು ವಿಸ್ಮಯಕಾರಕವಾದದ್ದು ಪ್ರಕೃತಿಯಲ್ಲಿ ಇದೆ ಎಂದು ಪಟ್ಟಿ ಮಾಡುತ್ತಾ ಹೋದರೆ,  ಆಗ ಮಾನವ ಪ್ರಕೃತಿಯನ್ನು ಮೀರಿಸಲಾಗಲಿ, ಗೆಲ್ಲಲಾಗಲಿ ಸಾಧ್ಯವಿಲ್ಲ ಮತ್ತು ತನ್ನ ಸಾಧನೆಗೊಂದು ಮಿತಿ ಇದೆ ಎಂದು ಅರ್ಥವಾಗುತ್ತದೆ. 
  

ಮಾನವ, ತನ್ನ ಇತಿಮಿತಿಯಲ್ಲಿ ದುಡಿಯುತ್ತಿರುವ ತಾನು ಎಲ್ಲಕ್ಕೂ ಕಾರಣ ಎಂದು ಎಷ್ಟು ಅಹಂಕಾರದಿಂದ ಕೊಚ್ಚಿಕೊಂಡರು ಕೆಲವು ಪ್ರಶ್ನೆಗಳಿಗೆ ನಿರುತ್ತರನಾಗಲೇ ಬೇಕಾಗುತ್ತದೆ.  " ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರಾರು? ಕಲ್ಲಿನೊಳು ಕೂಗುವ ಕಪ್ಪೆಗಳಿಗೆ ಅಲ್ಲಲ್ಲಿ ಆಹಾರವಿತ್ತವರು ಯಾರು?" ಎಂದು ಪುರಂದರ ದಾಸರು ಕೇಳಿದರೆ,  " ಇಳೆ ನಿಂಬು ಮಾಮರಕೆ ಹುಳಿನೀರೆದವರಾರು? ಕಬ್ಬು ಬಾಲೆ ಹಲಸು ನಾರಿಕೇಳಕ್ಕೆ ಸಿಹಿನೀರೆದವರಾರು? ಮರುಗ ಮಲ್ಲಿಗೆ ಪಚ್ಚೆಗೆ ಪರಿಮಳದ ನೀರೆದವರಾರು? " ಎಂದು ಅಕ್ಕಮಹಾದೇವಿ ಕೇಳುತ್ತಾಳೆ.  ಈ ಪ್ರಶ್ನೆಗೆ ಮಾನವನ ಉತ್ತರ ಕೇವಲ " ನಾನಲ್ಲ ನಾನಲ್ಲ ..... " ಎನ್ನುವುದೇ ಆಗಿದೆ. ಹೀಗೆ  ಹುಡುಕುತ್ತಾ ಹೋದರೆ ಈ ಅಚ್ಚರಿಗಳ ಸರಮಾಲೆ ಎಲ್ಲೆಲ್ಲೂ ಕಾಣುತ್ತದೆ.  ಆದರೆ, ನಮಗೆ ನೋಡುವ ಕಣ್ಣಿರಬೇಕು ಅಷ್ಟೇ! 

ಈ ಆಚ್ಚರಿ  ಅರ್ಥವಾಗಬೇಕಾದರೆ  ಬದುಕಿನ ಅರ್ಥವನ್ನು ತಿಳಿಯಬೇಕಾಗುತ್ತದೆ ಎಂದು ನಮ್ಮ ದಾರ್ಶನಿಕರು ಮಾರ್ಮಿಕವಾಗಿ ಹೇಳಿದರು.  ಅಂತರಂಗದ ಅಂಧಕಾರವನ್ನು ತೊರೆದು ಸಾತ್ವಿಕ ಜೀವನದ ಕಡೆ ಮುಖ ಮಾಡಿದರೆ ಆಗ " ಬದುಕಿಗೊಂದು  ಅರ್ಥವಿದೆ, ಬದುಕಿಗೊಂದು ಅಂತ್ಯವಿದೆ " ಎಂಬ ಸತ್ಯದ ಅರಿವಾಗುತ್ತದೆ.  ಸಾತ್ವಿಕ ಬದುಕಿಗೆ ಪ್ರೇರಕ ಶಕ್ತಿ ಎಂಬುದು ಕೇವಲ ದೈವದಿಂದ ಮಾತ್ರ ಸಾಧ್ಯ ಎಂಬ ತಿಳಿವು ಮೂಡುತ್ತದೆ. " ಬಿಟ್ಟು ಹೋಗುವಾಗ ಹೊತ್ತು ಹೋಗಲಾಗದ ಸಂಪತ್ತು ನಮ್ಮದು ಹೇಗಾಗುತ್ತದೆ? " ಎಂಬ ಜ್ಞಾನಿಗಳ ನುಡಿ ನಮ್ಮನ್ನು ಎಚ್ಚರಿಸುತ್ತದೆ. ನಮ್ಮದಲ್ಲದ ಹಾಗು ಶಾಶ್ವತವಲ್ಲದ ಸಿರಿಸಂಪತ್ತುಗಳಿಗೆ ಅಂಟಿಕೊಂಡು ಅಂಟಿಕೊಳ್ಳದಂತೆ ಸದ್ಗುಣನಾಗಿ ಬಾಳುವುದು ಪರಮಾತ್ಮನಿಗೆ ಪ್ರಿಯವಾದ ಬದುಕು. ಬದುಕಿನ ಸದಾಶಯ ಸಾತ್ವಿಕವಾದ ನಿತ್ಯದ ಬದುಕೆ ಆಗಿದೆ. 

ವರ್ಷದಲ್ಲಿ 365  ದಿನ ಸುಖವಾಗಿ ಆನಂದದಿಂದ ಬದುಕಬೇಕೆಂದರೆ ನಾವು ಎರಡು ದಿನಗಳನ್ನು ತ್ಯಾಗ ಮಾಡಬೇಕಾಗುತ್ತದೆ.  ಆಗ 363 ದಿನಗಳು ಸುಖವಾಗಿ ಆನಂದದಿಂದ ಬದುಕಬಹುದುದೆಂದು ಒಬ್ಬ ದಾರ್ಶನಿಕರು ಹೇಳುತ್ತಾರೆ. " ಒಂದು ನಿನ್ನೆಯ ದಿನ, ಇನ್ನೊಂದು ನಾಳೆಯದಿನ.  ನಿನ್ನೆಯ ಬಗ್ಗೆ ಚಿಂತಿಸದೆ, ನಾಳೆಯ ಬಗ್ಗೆ ಯೋಚಿಸದೆ,  ಕೇವಲ ಇಂದಿನ ಬಗ್ಗೆ ಮಾತ್ರ ಬದುಕು."  

ಬಂದಿದ್ದನ್ನು ಯಥಾಮತಿ ಸ್ವೀಕಾರ ಮಾಡಿ ಆನಂದದಿಂದ, ಪ್ರೇಮದಿಂದ ಬದುಕಲು ಕಲಿತಾಗ ಜೀವನ ಸುಂದರ ಮತ್ತು ಸ್ವಾರಸ್ಯ ಎನ್ನುತ್ತಾರೆ ದಾರ್ಶನಿಕರು.    ನೀವೇನು ಹೇಳುತ್ತಿರಾ?   

March 30, 2015

ಕಾಫಿ ಕಲಿಸಿದ ಪಾಠ

ಕಾಫಿ ಕಲಿಸಿದ ಪಾಠ 

ಒಮ್ಮೆ ಕೆಲವು ಹಳೆಯ ವಿರ್ಧ್ಯಾರ್ಥಿಗಳ ಗುಂಪು ತಮ್ಮ ನೆಚ್ಚಿನ ಪ್ರಾಧ್ಯಾಪಕರನ್ನು  ಮಾತನಾಡಿಸಿಕೊಂಡು, ತಮ್ಮ  ಹಳೆಯ ಸಿಹಿ ಕಹಿ ನೆನಪನ್ನು ಮೆಲಕುಹಾಕಿಕೊಂಡು  ಬರಬೇಕೆಂದು ತೀರ್ಮಾನಿಸಿ  ತಮ್ಮ ಗುರುಗಳ ಸಮಯವನ್ನು ಕೋರಿದರು.  ತಮ್ಮ ಗುರುಗಳ  ಒಪ್ಪಿಗೆ ಪಡೆದು,  ನಿಶ್ಚಯವಾದ ದಿನ ಗುರುಗಳ ಮನೆಗೆ ಎಲ್ಲಾ ಹಳೆಯ ವಿಧ್ಯಾರ್ಥಿಗಳು ಬಂದರು.  ಗುರುಗಳಿಗೆ ಮತ್ತು ವಿಧ್ಯಾರ್ಥಿಗಳಿಗೆ ಸಂಭ್ರಮದ ಮತ್ತು ಸಂತೋಷದ ಕ್ಷಣ. ಎಲ್ಲರು ತಮ್ಮ ಉದ್ಯೋಗ ಮತ್ತು ವೈಯಕ್ತಿಕ ಜೀವನದ ಬಗ್ಗೆ ಪರಿಚಯ ಮಾಡಿಕೊಂಡು ಉಭಯ ಕುಶಲೋಪರಿ ಮಾತನಾಡುತ್ತಿದ್ದರು.  ಮಾತು ಮುಂದುವರೆದಂತೆ ತಮ್ಮ ಉದ್ಯೋಗದಲ್ಲಿನ ಅಸಹಾಯಕತೆ,  ಅತೃಪ್ತಿ , ಅಸಮಾಧಾನ ಮತ್ತು ಒತ್ತಡಗಳ ಬಗ್ಗೆ ಬದಲಾಯಿತು.  ಎಲ್ಲರ ಮಾತಿನಲ್ಲಿ ವಿಷಾದ, ನೋವು ಮತ್ತು ನಿರಾಸೆ ಕಾಣುತ್ತಿತ್ತು.  ಎಲ್ಲವನ್ನು ಸಮಾಧಾನಚಿತ್ತದಿಂದ ಕೇಳಿಸಿಕೊಂಡ ಗುರುಗಳು ಬಂದಿರುವ ಹಳೆಯ ವಿಧ್ಯಾರ್ಥಿ ಮಿತ್ರರಿಗೆ ಕಾಫಿ ಮಾಡಿಕೊಡಲು ಅಡುಗೆ ಮನೆಯತ್ತ ಸಾಗಿದರು.
  
ಸ್ವಲ್ಪ ಸಮಯದ ನಂತರ ಒಂದು ಪಾತ್ರೆಯಲ್ಲಿ ಬಿಸಿಬಿಸಿ ಕಾಫಿ ತೆಗೆದುಕೊಂಡು  ಬರುತ್ತಾ ತಮ್ಮ ಮಿತ್ರರಿಗೆ " ಅಡುಗೆ ಮನೆಯಲ್ಲಿ ಲೋಟಗಳಿವೆನೀವೆಲ್ಲಾ  ಲೋಟಗಳನ್ನು ತಂದರೆ ಒಟ್ಟಿಗೆ ಕಾಫಿ ಕುಡಿಯೋಣ " ಎಂದರು. ಎಲ್ಲರು ಅಡುಗೆಮನೆಯತ್ತ ಸಾಗಿದರು.  ಅಡುಗೆ ಮನೆಯಲ್ಲಿ ವಿಧವಿಧವಾದ ಲೋಟಗಳಿದ್ದವು.  ಕೆಲವು ದುಬಾರಿಯವು, ಕೆಲವು ಚಿತ್ತಾರ ಬಿಡಿಸಿದ ಪಿಂಗಾಣಿ ಲೋಟಗಳು, ಕೆಲವು ಸಾಧಾರಣ ಲೋಟಗಳು, ಕೆಲವು ಪ್ಲಾಸ್ಟಿಕ್ ಲೋಟಗಳು ಇದ್ದವು. ಒಳಗೆಹೋದ ವಿಧ್ಯಾರ್ಥಿಮಿತ್ರರು ತಮ್ಮ ಕೈಯಲ್ಲಿ ಒಂದೊಂದು ಲೋಟ ಹಿಡಿದು ಬಂದರು.  ಎಲ್ಲರ ಲೋಟಕ್ಕೆ ಕಾಫಿ ಹಾಕಿ ಕೊಡುತ್ತಾ ಲೋಟಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಲೋಕಾಭಿರಾಮವಾಗಿ ಮಾತನಾಡಲು ಆರಂಭಿಸಿದ ಗುರುಗಳು " ಎಲ್ಲರೂ ಚೆನ್ನಾಗಿರುವ ಲೋಟಗಳನ್ನೇ ಆರಿಸಿಕೊಂಡಿದ್ದೀರಿ. ಇಲ್ಲೊಂದು ವಿಶೇಷ ಗಮನಿಸಿ, ಯಾರಿಗೂ ಸಾಧಾರಣ ಲೋಟಗಳು ಬೇಡವಾಗಿರುವುದು ." ಎಂದು ಮಾತಿಗೆ ಪ್ರಾರಂಭ ಮಾಡಿದ ಗುರುಗಳುನಮ್ಮೆಲ್ಲರ ಸ್ವಭಾವವೇ ಅದಾಗಿದೆ.  ನಮ್ಮ ಆಯ್ಕೆ ಯಾವಾಗಲು  ಉತ್ಕೃಷ್ಟವಾದುದೆ ಆಗಿರುತ್ತದೆ.  ನಾವು ಯಾವಾಗಲು ಅದನ್ನೇ ಬಯಸುತ್ತೇವೆ.  ಇದೆ ನಮ್ಮೆಲ್ಲಾ ಅಸಹಾಯಕತೆಅತೃಪ್ತಿ , ಅಸಮಾಧಾನ ಮತ್ತು ಒತ್ತಡಗಳಿಗೆ ಕಾರಣ. "  ಎಂದು ಹೇಳಿ ಎಲ್ಲರ ಮುಖಗಳನ್ನು ಗಮನಿಸಿದರು.  ಎಲ್ಲರ ಮುಖದಲ್ಲಿ ಆಶ್ಚರ್ಯ.   ಗುರುಗಳು ಮಾತನ್ನು ಮುಂದುವರೆಸುತ್ತಾ " ಉತ್ಕೃಷ್ಟವಾಗಿ ಕಾಣುವ ಲೋಟಗಳು ಕಾಫಿಯ ರುಚಿಯನ್ನಾಗಲಿ, ಗುಣವನ್ನಾಗಲಿ ಬದಲಾಯಿಸಲಾರವು.  ಇದು ನಮಗೆಲ್ಲಾ ತಿಳಿದ ವಿಷಯವೇ! ಆದರೂ  ನಾವು ಉತ್ಕೃಷ್ಟವಾದ ಲೋಟವನ್ನೇ ಆರಿಸಿಕೊಳ್ಳುತ್ತೇವೆ.   ಲೋಟದಲ್ಲೇ ಕಾಫಿ ಕುಡಿಯಲು ಬಯಸುತ್ತೇವೆ.  ಆದರೆ, ವಾಸ್ತವದಲ್ಲಿ ನಮಗೆ ಬೇಕಾಗಿರುವುದು ಒಳ್ಳೆಯ ಕಾಫಿಯೇ ಹೊರತು ಲೋಟವಲ್ಲ.  ಜೊತೆಗೆ ನಾವು ಇತರರ ಕೈಯಲ್ಲಿರುವ ಲೋಟದ ಬಗ್ಗೆ ಒಂದು ಕಣ್ಣು ಇರಿಸುತ್ತೇವೆ.  ಅವರ ಲೋಟ ಹೇಗಿದೆ? ಎಷ್ಟು ಚೆನಾಗಿದೆಎಂಬ ಬಗ್ಗೆ ನೋಡುವ ಕುತೂಹಲ ತೋರುತ್ತೇವೆ. ಇದು ನಮ್ಮಲ್ಲಿರುವ  ಅಸಂತೃಪ್ತಿಯನ್ನು ಸೂಚಿಸುತ್ತದೆ." 

" ಈಗ ಹೀಗೆ ಯೋಚಿಸೋಣ.   ಜೀವನವೆಂದರೆ ಕಾಫಿ ಇದ್ದಹಾಗೆ.  ನಾವು ಮಾಡುವ ಕೆಲಸ, ನಮಗಿರುವ ಅಧಿಕಾರ, ಹಣ ಮತ್ತು ಸಮಾಜದ ಗೌರವ ಇವೆಲ್ಲಾ ನಮ್ಮ ಲೋಟವಿದ್ದಂತೆ. ಇವೆಲ್ಲವೂ ನಮ್ಮ ಜೀವನವನ್ನು ಹಿಡಿದಿಡುವ ಸಾಧನಗಳು ಮಾತ್ರ.   ಲೋಟಗಳು ನಮ್ಮ ಜೀವನದ ಗತಿಯನ್ನಾಗಲಿ,  ಗುಣವನ್ನಾಗಲಿ ಬದಲಿಸಲಾರವು.  ಬದಲಿಗೆ ಇವು ನಮ್ಮ ಅಹಂಕಾರ ಜಾಸ್ತಿ ಮಾಡಿ ನಿಜವಾದ ಜೀವನವನ್ನು ಅನುಭವಿಸಲು ಬಿಡುವುದೇ ಇಲ್ಲ.  ಅಹಂಕಾರವು ನಮ್ಮ ಜೀವನದ ಸುಖ ಕ್ಷಣಗಳನ್ನು ಹಾಳುಗೆಡವುತ್ತದೆ.  ಭಗವಂತ ನಮಗೆ ಕೊಟ್ಟ ಸುಂದರ ಜೀವನವನ್ನು ಆನಂದದಿಂದ ಕಳೆಯುವ ಬದಲು, ಸಮಯವನ್ನು  ವ್ಯರ್ಥವಾಗಿಸುತ್ತ  ಅಹಂಕಾರದ ಬೇಗೆಯಲ್ಲಿ ಬೇಯುತ್ತೇವೆ.   ಅಸಹಾಯಕತೆ,  ಅತೃಪ್ತಿ , ಅಸಮಾಧಾನ ಮತ್ತು ಒತ್ತಡಗಳ ಒಡನಾಟದಲ್ಲಿ ದಿನವನ್ನು  ದೂಡುತ್ತೇವೆ.  ಭಗವಂತನೇನೋ ನಮಗಾಗಿ ಒಳ್ಳೆಯ ಕಾಫಿಯನ್ನೇ ತಯಾರು ಮಾಡಿ ಕೊಟ್ಟಿದ್ದಾನೆ. ಆದರೆ, ಕಾಫಿ ಕುಡಿಯಲು ಬೇಕಾದ ಲೋಟದ ಆಯ್ಕೆಯಲ್ಲಿ ದಾರಿ ತಪ್ಪುತ್ತೇವೆ. ರುಚಿಯಾದ ಕಾಫಿಯಿಂದ ವಂಚಿತರಾಗಿಬಿಡುತ್ತೇವೆ.   ಜಗತ್ತಿನಲ್ಲಿ ಸಂತೋಷದಿಂದ ಇರುವ  ವ್ಯಕ್ತಿಗಳ ಜೀವನದಲ್ಲಿ ಎಲ್ಲವೂ ಉತ್ಕೃಷ್ಟವಾಗಿರುವುದಿಲ್ಲ.   ಆದರೆ,  ಅವರು ಎಲ್ಲದರಲ್ಲೂ  ಉತ್ಕೃಷ್ಟತೆಯನ್ನು ಕಾಣುತ್ತಾರೆ. " ಎಂದು ಮಾತು ಮುಗಿಸಿದರು.  ಎಲ್ಲಾ ವಿಧ್ಯಾರ್ಥಿ ಮಿತ್ರರು ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಕುಳಿತರು

ನಂತರ ಗುರುಗಳು ಪುನಃ " ಸರಳವಾಗಿ ಬದುಕಿ. ತುಂಬು ಹೃದಯದಿಂದ ಪ್ರೀತಿಸಿ.  ಆಳವಾಗಿ ಚಿಂತನೆ ಮಾಡಿ.  ಮಧುರವಾಗಿ ಮಾತನಾಡಿ.  ನಿಮಗಿರುವ ಕೆಲಸವನ್ನು ಶ್ರದ್ಧೆಯಿಂದ ಭಗವಂತನ ಕೆಲಸವೆಂದು ನಿರ್ವಹಿಸಿ. ಮಿಕ್ಕ ಎಲ್ಲವನ್ನು ಭಗವಂತನ ನಿರ್ಣಯಕ್ಕೆ ಬಿಡಿ. ನೆಮ್ಮದಿಯಾಗಿರಿ. "  ಎಂದು ಹುಸಿನಗೆ ಬೀರಿ ಎಲ್ಲಾ ವಿಧ್ಯಾರ್ಥಿ ಮಿತ್ರರನ್ನು ಆತ್ಮೀಯತೆಯಿಂದ ಬೀಳ್ಕೊಟ್ಟರು