January 25, 2012

ಸಾವು
                                          ಸಾವು

                           ಸಾವಿರದ ಮನೆಯ ಸಾಸುವೆ ಎಲ್ಲಿಂದ ತರಲೆಂದು
                           ಗೌತಮನ ಮುಂದೆ ಗೊಗೆರದು ಕಣ್ಣೇರು ಇಟ್ಟ ಹೆಣ್ಣು ಮಗಳಿಗೆ
                           ಕಣ್ಣು ತೆರೆಸಿ, ದುಃಖ ಮರೆಸಿ, ಸಾವು ಸಹಜ ಬಾಳಿನಷ್ಟೇ!
                           ಎನ್ದೊರಲಿ ಚಿತೆಯ ಕಡೆಗೆ ಕೈ ತೋರಿದ ಬುದ್ಧ.

                           ಹುಟ್ಟಿನ ಹಿಂದೆಯೇ  ನೆರಳಿನಾ ಹಾಗೆ ಸಾವು ಹಿಂಬಾಲಕ.
                           ಎಂದು ಕರಿನೆರಳು ಭೂತಾಕಾರವಾಗಿ ದೇಹವನು ನುಂಗಿ
                           ತಾನು ಬಂದ ಕೆಲಸ ಮುಗಿಸಿ ಕೈಕೊಡವಿ ಹೊರಡುವುದೋ?
                           ಅವನ ಬಿಟ್ಟು ಯಾರೂ ಅರಿಯಲಾಗದ ಘೋರ ರಹಸ್ಯ!

                           ಯಮನಿಗೆ ಮತ್ತೊಂದು ಹೆಸರು ಕಾಲ, ಈ ಕಾಲವೇ ಎಲ್ಲ,
                           ಸುಖದ ತೀರದಿಂದ ಎಲ್ಲೆಂದರಲ್ಲಿಗೆ, ಹೇಗೆಂದರೆ ಹಾಗೆ
                           ದುಃಖದಲಿ ನಿಲ್ಲಿಸುವ  ಕ್ರಮ ಕಾಲನಿಗೆ ಮಾತ್ರ ಅರಿವು
                           ಕೆಲ ಕಾಲ  ಮೆರೆಸಿ ಅಳಿಸಿದಾ ಹಾಗೆ ಮರೆಸುವನು ಕೂಡ.

                           ಇರುವಷ್ಟು  ದಿನ ಇಂದಿಗೆ ಬದುಕುತ್ತ, ಈ ಕ್ಷಣದ ಸವಿ ನೋವುಗಳ
                           ಇಂದಿಗೆ  ಮುಗಿಸುತ್ತ   ಕಹಿ, ರಾಗ ದ್ವೇಷಗಳ ಬದಲಿಗೆ
                           ಪ್ರೀತಿ ಪ್ರೇಮಗಳ ಆಲಂಗಿಸುತ್ತ   ಸಾವಿನಾ ಸಾಲಿನಲ್ಲಿ ನಿಂತು
                           ಅನಾಯಾಸ ಮರಣಕ್ಕೆ ಅನನ್ಯ ಬೇಡುವ ಯಾತ್ರಿಕ ನಾನು .


                           ( ನನ್ನ ಆತ್ಮೀಯರೊಬ್ಬರ ಮನೆಯಲ್ಲಿ ಆದ ಸಾವಿನ ಸಮಯದಲ್ಲಿ  ಮನಸಿನಾಳದಿಂದ ಬಂದ ಕೆಲವು ಸಾಲುಗಳು )
                                     25 01 2012

January 18, 2012

ಭಗವಾನ್ ರಮಣ ಮಹರ್ಷಿಗಳ ಸಂದೇಶ

Courtesy: MOUNTAIN PATH
---------------------------------------------------------------------------------------------------
ಭಗವಾನ್ ರಮಣ ಮಹರ್ಷಿಗಳ ಸಂದೇಶ - 2
              ತನ್ನ ತಾನು ಅರಿಯಲು ಬ್ರಹ್ಮಜ್ಞಾನ ಪ್ರಾಪ್ತಿಯಾಗಬೇಕೆ?. ಈ ಬ್ರಹ್ಮಜ್ಞಾನ ಪಡೆಯಲು ಸಾಮಾನ್ಯರಿಗೆ ಸಾಧ್ಯವೇ? ಈ ಪ್ರಶ್ನೆಯನ್ನು ಭಗವಾನ್ ರಮಣ ಮಹರ್ಷಿಗಳಲ್ಲಿ ಒಬ್ಬ ವಿದೇಶಿ ಭಕ್ತ ನಿವೇದಿಸಿಕೊಂಡ. 

              ಆಗ ಮಹಷಿಗಳು ಕೊಟ್ಟ ಸ್ಪಷ್ಟ ಉತ್ತರ ಏನೆಂದರೆ  "ಬ್ರಹ್ಮಜ್ಞಾನವೆಂಬುದು ಸಂಪಾದಿಸುವ ವಿದ್ಯೆಯಲ್ಲ;        ಬ್ರಹ್ಮಜ್ಞಾನ ಪಡೆಯುವುದರಿಂದ ಸಂತೋಷ ವಾಗಿರಬಹುದೆಂದು  ಆಶಿಸಿದರೆ ಇದೊಂದು ತಪ್ಪು ಗ್ರಹಿಕೆ. ನಿಮ್ಮೊಳಗಿರಬಹುದಾದ ಈ ತಪ್ಪುಗ್ರಹಿಕೆ  ಹೇಗಿದೆಯೆಂದರೆ ಹತ್ತು ಜನ ಧಡ್ಡರು ನದಿದಾಟಿದಂತಿದೆ."   ಎಂದು  ಒಂದು ಕಥೆಯನ್ನು ಹೇಳಲು ಪ್ರಾರಂಭಿಸಿದರು. " ಹತ್ತು ಜನ  ಧಡ್ಡರು ನದಿ ದಾಟಲು ಸಿದ್ದರಾದರು. ಎಲ್ಲರೂ ಈಜಿ  ದಡವನ್ನು ಸೇರಿದರು. ದಡ ಸೇರಿದ ನಂತರ ಎಲ್ಲರೂ ಬಂದು ತಲುಪಿರವರೆ, ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕೆಂದು ತಂಡದ ನಾಯಕನು ಎಲ್ಲರ ತಲೆಯನ್ನು ಎಣಿಸಿದ.    ಒಂಬತ್ತು ಜನ ಮಾತ್ರ ಲೆಕ್ಕಕ್ಕೆ ಸಿಕ್ಕಿದರು. ಪುನಃ ಎಣಿಸಿದ, ಆಗಲು ಅಷ್ಟೇ!  ಮತ್ತೊಬ್ಬನನ್ನು ಕರೆದು ಎಲ್ಲರನ್ನು ಸಾಲಾಗಿ  ನಿಲ್ಲಿಸಿ ಎಣಿಸಲು ಹೇಳಿದ. ಆಗಲೂ ಒಂಬತ್ತು ಜನರೇ!  ನಾಯಕನಿಗೆ ಗಾಭರಿ ಆಯ್ತು.  ಏನೂ ತೋಚದೆ ಎಲ್ಲರು ಅಳಲು ಪ್ರಾರಂಭಿಸಿದರು.  ಇವರ ಅಳುವನ್ನು ಕೇಳಿ ದಾರಿಯಲ್ಲಿ ಬರುತ್ತಿದ್ದ ದಾರಿಹೋಕ ಏನೆಂದು ವಿಚಾರಿಸಿದ.  ನಾಯಕ ಎಲ್ಲವನ್ನು ವಿಸ್ತಾರವಾಗಿ ವಿವರಿಸಿದ.  ದಾರಿಹೋಕ ಸುಮ್ಮನೆ ಎಣಿಸಿನೋಡುವಾಗ ಸರಿಯಾಗಿ ಹತ್ತು ಜನರಿದ್ದರು.  ಆಗ ಎಲ್ಲರನ್ನು ಸಾಲಾಗಿ ನಿಲ್ಲಿಸಿ ಎಲ್ಲರ ಬೆನ್ನು ಮೇಲೆ ಒಂದೊಂದು ಪೆಟ್ಟು ಕೊಡುತ್ತ ಎಣಿಸಿದ. ಎಲ್ಲರು ಸೇರಿ ಹತ್ತು ಜನರಾದರೆಂದು ತಿಳಿದಮೇಲೆ ಸಂತೋಷಗೊಂಡ ದಡ್ಡರು ದಾರಿಹೋಕನನ್ನು ಕೊಂಡಾಡಿದರು.  ಹತ್ತೂ ಜನರು ತಮ್ಮ ಪ್ರಯಾಣವನ್ನು ಮುದುವರೆಸಿದರು."  ಕಥೆಯನ್ನು ಮುಗಿಸಿ ಒಂದು ಕ್ಷಣ ಸುಮ್ಮನಾದರು.

              ನಂತರದಲ್ಲಿ "ಈಗ ಹೇಳಿ, ಈ ಹತ್ತನೆಯವನು ಎಲ್ಲಿಂದ ಬಂದ? ಅವನೆಲ್ಲಿಯಾದರು ಕಳೆದು ಹೋಗಿದ್ದನೇ?  ಅಲ್ಲಿಯೇ ಇದ್ದನಲ್ಲವೇ?. ಅವರುಗಳ ಜೊತೆಯಲ್ಲಿಯೇ ಅವನೂ ಇದ್ದನೆ ಹೊರತು ಹೊಸದಾಗಿ ಸೇರ್ಪಡೆಯಾಗಿಲ್ಲ, ಹೌದು ತಾನೇ?  ಈ ಹತ್ತೂ ಜನರು ದುಃಖಪಡಲು ಕಾರಣವೇ ಇರಲಿಲ್ಲ.  ಅವರ ಅಜ್ಞಾನದ ಕಾರಣದಿಂದ ಅವರೆಲ್ಲರೂ ದುಃಖಪಡುತ್ತಿದ್ದರು.  ಅವರೆಲ್ಲರ ಮನಸಿನಲ್ಲಿ ಒಬ್ಬ ಕಳೆದು ಹೊಗಿರಬಹುದೆಂಬ ಭ್ರಮೆ ದುಃಖಕ್ಕೆ ಕಾರಣವಾಗಿತ್ತು. ಈ ರೀತಿಯ ಕಥೆ ನಿಮ್ಮದಾಗಿದೆ. ನೀವು ಅಸಂತೋಷವಾಗಿರಲು ಮತ್ತು ಚಿಂತೆಪಡಲು ಕಾರಣಗಳೇ ಇಲ್ಲ. ನಿಮ್ಮೊಳಗೆ ಅಡಗಿರುವ ಅಪರಿಮಿತವಾದ ಶಕ್ತಿ ಅಥವಾ ಚೈತನ್ಯಕ್ಕೆ ನೀವೇ ಬೇಲಿ ಹಾಕಿಕೊಂಡು ಬಿಟ್ಟಿದ್ದೀರ.   ನಂತರದಲ್ಲಿ ನೀವೇ, ನನ್ನಲ್ಲೇನು ಶಕ್ತಿ ಇಲ್ಲವೆಂದು ರೋಧಿಸುತ್ತಿರುವ ಹಾಗಿದೆ. ನಿಮ್ಮೊಳಗೇ ಇರುವ ಚೈತನ್ಯದ ಅರಿವು ಇರದ ನೀವು, ಹಲವು ರೀತಿಯ ಅಧ್ಯಾತ್ಮಿಕ ಸಾಧನೆಗೆ ತೊಡಗಿ ಈ ಅಪರಿಮಿತವಾದ ಚೈತನ್ಯಕ್ಕಾಗಿ ಹಂಬಲಿಸುತ್ತಿದ್ದಿರ.  ಆದರೆ,  ಈ ಸಾಧನೆಗಳೇ  ಬೇಲಿಯ ಒಳಗೇ ಇದ್ದರೆ, ಈ ಅಪರಿಮಿತವಾದ ಶಕ್ತಿಯನ್ನು ಪಡೆಯುವ ಬಗೆ ಹೇಗೆ?"

               "ಆದ್ದರಿಂದ ನಾನು ಹೇಳುತ್ತೇನೆ,  ನೀವೇ ಹಾಕಿಕೊಂಡಿರುವ ಬೇಲಿಯಿಂದ ಹೊರಗೆ ಬನ್ನಿ. ನಿಮ್ಮಾತ್ಮದಲ್ಲಿ ಅಡಗಿರುವ  ಅಪರಿಮಿತವಾದ ಶಕ್ತಿಯನ್ನು ಅರ್ಥಮಾಡಿಕೊಳ್ಳಿ.   ಇದು ಹೊಸತಲ್ಲ.  ಇದು ಈಗಾಗಲೇ ಪ್ರತಿಯೊಬ್ಬರಲ್ಲೂ  ಇದೆ. ನಿಮ್ಮ ಸ್ವಸ್ವರೂಪವನ್ನು ಅರ್ಥ ಮಾಡಿಕೊಳ್ಳಿ. ಅದು ಕೇವಲ ಆತ್ಮವಸ್ತುವಲ್ಲದೆ  ಬೇರೇನೂ ಅಲ್ಲ. ಆದ್ದರಿಂದ ನೀವು ಆತ್ಮವಸ್ತುವಿನ ಬಗ್ಗೆ ಚಿಂತಿಸಿ.   ನಿಮ್ಮೊಳಗಿರುವ ಅಜ್ಞಾನವು ಕೇವಲ ಭ್ರಾಂತಿಯಿಂದ ಕೂಡಿದೆ. ಹೇಗೆಂದರೆ, ಹತ್ತೂ ಜನ ದಡ್ಡರ ಜ್ಞಾನದಂತೆ. ಈ ಅಜ್ಞಾನದ ಕಾರಣದಿಂದ ನಿಮಗೆ ದುಃಖ, ಅಸಂತೋಷ, ಚಿಂತೆ ಉಂಟಾಗುತ್ತಿದೆ. ಆದ್ದರಿಂದ, ಈಗಾಗಲೇ ನಿಮ್ಮೊಳಗಿರುವ  ಆತ್ಮವಸ್ತುವಿನ ಅಪರಿಮಿತವಾದ ಶಕ್ತಿಯನ್ನು ಅರ್ಥಮಾಡಿಕೊಂಡರೆ, ಆಗ  ನಿಮ್ಮೊಳಗೆ ಇರುವ ಅಜ್ಞಾನ ತನ್ನಷ್ಟಕ್ಕೆ ತಾನೇ ಮರೆಯಾಗಿ ಬಿಡುತ್ತದೆ. ನಿಮ್ಮಲ್ಲಿ ಆತ್ಮಾನಂದ ಮತ್ತು ಹೇಳಿಕೊಳ್ಳಲಾಗದೆ ಪರಮಸುಖದ ಅನುಭವ ನಿಮಗಾಗುತ್ತದೆ. ಇದೇ ನಿಮ್ಮ ನಿಜವಾದ ಸಹಜ  ಸ್ಥಿತಿ. ಈ ಸ್ಥಿತಿಯನ್ನು ಅರಿತಾಗ ಅನಂತವಾದ, ನಾಶವಿಲ್ಲದ, ಅಪರಿಮಿತ ಆನಂದದ  ಆತ್ಮಾನುಭವ ಆಗುತ್ತದೆ.  ನಿಮ್ಮ ಕಣ್ಣಿಗೆ ಕಾಣುವ ಬಾಹ್ಯವಸ್ತುಗಳಿಂದ ಸಿಗುವ ಆನಂದವೇ ಬೇರೆ, ಅಂತರಂಗದಲ್ಲಿ ಸಿಗುವ ಆನಂದಾನುಭಾವವೇ ಬೇರೆ. ಎಲ್ಲಿಯವರೆಗೆ ದೇಹಭಾವದ ಆನಂದ ನಿಮ್ಮದಾಗಿರುತ್ತದೋ ಅಲ್ಲಿಯವರೆಗೆ ಆತ್ಮಸುಖ ಕಾಣಲು ಸಾಧ್ಯವಿಲ್ಲ. ದೇಹಭಾವದಿಂದ ಆತ್ಮಭಾವಕ್ಕೆ ಹೋದಾಗ ಅಲ್ಲಿ ಸಿಗುವ ನಿರಂತರ ಆತ್ಮಾನಂದಕ್ಕೆ ಎಣೆಯೇ ಇಲ್ಲ."

              " ಒಂದು ಚಿಕ್ಕ ಮಗುವು ಹೇಳುತ್ತದೆ, 'ನಾನು ಇದ್ದೇನೆ, ಇದು ನನ್ನದು, ನಾನು ಮಾಡುತ್ತೇನೆ '. ಆದ್ದರಿಂದ ಪ್ರತಿಯೊಬ್ಬರಿಗೂ ಗೊತ್ತು ನಾನು ಎಂದರೆ ಏನು? ಎಂದು.  ಈ ನಾನು ಎಂಬುದು ಯಾವಾಗಲು ಇರುತ್ತದೆ.  ಈ ನಾನು ಎಂಬ ಭಾವ ದೇಹವಿರುವಷ್ಟು ಸಮಯವೂ ಇರುತ್ತದೆ. ಈ ದೇಹಕ್ಕೆ ರಾಮಣ್ಣ, ಭೀಮಣ್ಣ ಎಂಬೆಲ್ಲ ಹೆಸರುಗಳಿವೆ. ಈ ಹೆಸರಿನ ದೇಹವನ್ನು ನೋಡಲು  ಮೇಣದ ಬತ್ತಿ ಬೇಕೇ? ಅದೇ ರೀತಿ "ಆತ್ಮಸ್ವರೂಪ" ವನ್ನು ನೋಡಲು ಯಾವ ಸಹಾಯವೂ ಬೇಡ. ನಮ್ಮ ಸ್ವಸ್ವರೂಪವನ್ನು ಅಂದರೆ ಆತ್ಮಸ್ವರೂಪವನ್ನು ಅರಿಯಲು ಯಾವ ಗುರಿಯನ್ನು ಸಾಧಿಸಬೇಕಿಲ್ಲ. ನೀನೆ ಆತ್ಮ. ನೀನು ಯಾವಾಗಲು ಇದ್ದಿಯೇ. ದೇವರನ್ನು ನೋಡುವುದು ನಿನ್ನನ್ನು ನೀನು ನೋಡಿಕೊಳ್ಳುವುದು ಎರಡು ಒಂದೇ. ನೀನು ಏನು ನೋಡುತ್ತಿಯೋ ಅದು ನೀನೇ ಆಗಿದ್ದಿಯೇ.  ನೀವು  ರಮಣ ಆಶ್ರಮಕ್ಕೆ   ಬಂದು, ರಮಣ ಆಶ್ರಮಕ್ಕೆ ಯಾವದಾರಿಯಲ್ಲಿ ಬರಬೇಕೆಂದು ಕೇಳಿದ ಹಾಗೆ ಆಗುತ್ತದೆ. ಅದ್ದರಿಂದ ನೀವು  ಮಾಡಬೇಕಾಗಿರುವುದು ಏನೆಂದರೆ , ನೀವು  ದೇಹ ಎಂಬ  ಯೋಚನೆಯನ್ನು ಬಿಟ್ಟು ಬಿಡಿ  .    ಆತ್ಮದ ವಿಚಾರ ಬಿಟ್ಟು,  ಬಾಹ್ಯ ವಿಚಾರಗಳ ಯೋಚನೆ ಮಾಡದ್ದಿದ್ದರೆ ಸಾಕು. ಆಗ ಬ್ರಹ್ಮ ಜ್ಞಾನದ  ಅವಶ್ಯಕತೆ ಏನಿದೆ?' 

                   
                 " ಓಂ ನಮೋ ಭಗವತೇ ರಮಣಾಯ".

   -18 01 2012
                                                                                                                             Courtesy: MOUNTAIN PATH
January 15, 2012

ಶ್ರಾದ್ಧ ....................ಒಂದಷ್ಟು ಹರಟೆ.

                                
 ಶ್ರಾದ್ಧ ....................ಒಂದಷ್ಟು ಹರಟೆ.


                                ಹುಟ್ಟು ಅಂದಮೇಲೆ  ಸಾವು ನಿಶ್ಚಿತ. ಹುಟ್ಟಿನೊಂದಿಗೆ ಪ್ರಾರಂಭವಾಗುವ ಜೀವನ ಯಾತ್ರೆ  ಮರಣದೊಂದಿಗೆ  ಮುಗಿಯುತ್ತವೆ. ಅಂತ್ಯಸಂಸ್ಕಾರ ನಡೆಯುತ್ತವೆ . ನಂತರದಲ್ಲಿ  ಮೃತ ವ್ಯಕ್ತಿಗೆ ಹಲವಾರು ಸಂಸ್ಕಾರಗಳು ನಡೆಯುತ್ತವೆ. ಸತ್ತ ದಿನದಿಂದ ಹದಿನಾಲ್ಕು ದಿನಗಳವರೆಗೆ ಹಲವಾರು  ರೀತಿಯ ಕರ್ಮಗಳನ್ನು ಅವರವರ ಪದ್ದತಿಗನುಸಾರವಾಗಿ ಮತ್ತು ಸಂಪ್ರದಾಯದಂತೆ ಮಾಡುತ್ತಾರೆ. ಮೃತ ವ್ಯಕ್ತಿಯ ಮಕ್ಕಳು ಸಾಮಾನ್ಯವಾಗಿ ಈ ಕರ್ಮವನ್ನು ಮಾಡುತ್ತಾರೆ.ನಂತರದಲ್ಲಿ ಪ್ರತಿ ವರ್ಷ ಮೃತರ ನೆನಪಿನಲ್ಲಿ ಶ್ರಾದ್ಧ  ಕರ್ಮಅಥವಾ ತಿಥಿ ಎಂಬ  ಹೆಸರಿನಲ್ಲಿ  ಆಚರಣೆ ಮಾಡುವುದು ರೂಡಿಯಲ್ಲಿದೆ.

                                  ಈ ದೇಹಕ್ಕೆ ಅಂತ್ಯ ಸಂಸ್ಕಾರವಾದ ಮೇಲೆ ಶ್ರಾದ್ಧ  ಅಥವಾ ತಿಥಿ ಎನ್ನುವ ಕರ್ಮ ಬೇಕೇ? ಏಕೆ ಬೇಕು? ಅಂತ್ಯವಾದ ಮೇಲೆ ಶ್ರಾದ್ಧ  ಯಾರಿಗೆ? ಇದರ ಅವಶ್ಯಕತೆ ಏನು? ಎಂದು  ಹಲವರು  ಪ್ರಶ್ನೆ ಮಾಡುತ್ತಾರೆ . ಇನ್ನು ಹಲವರು "ವ್ಯಕ್ತಿ ಜೀವಂತ ಇದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳದೆ, ಗೊಳುಹಾಕಿ ಕೊಂಡು ಸತ್ತ ನಂತರ ನೂರಾರು ಜನರಿಗೆ ಊಟ ಹಾಕಿದರೇನು ಬಂತು?  ಇರುವಷ್ಟು ದಿನ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡು ಅವರ ಬೇಕುಬೇಡಗಳನ್ನು ಒದಗಿಸಿದರೆ ಸಾಕು. ಸತ್ತ ನಂತರ ತಿಥಿ ಮಾಡದಿದ್ದರೂ ಪರವಾಗಿಲ್ಲ." ಎನ್ನುತ್ತಾರೆ. ಮತ್ತೆ ಕೆಲವರು "ನಮ್ಮ ಹಿರಿಯರು ನಡೆಸಿಕೊಂಡು ಬಂದ ಆಚಾರ ವಿಚಾರ, ಸುಮ್ಮನೆ ಮಾಡಿರುವುದಿಲ್ಲ. ಇದನ್ನು ಏಕೆ ತಪ್ಪಿಸಬೇಕು? ಇಂತಹ ಒಂದು ಆಚರಣೆ ಶ್ರಾದ್ಧ .      ಹಿರಿಯರ  ನೆನಪಿನಲ್ಲಿ ಒಂದು ದಿನ ತಿಥಿ ಆಚರಣೆ ಅವಶ್ಯಕ." ಎಂದು ವಾದಿಸುತ್ತಾರೆ.        " ಸಮಾಜದಲ್ಲಿ ಬದುಕಿರುವಾಗ ಕೆಲವು ಆಚರಣೆಗಳು ಅನಿವಾರ್ಯ. ಎಲ್ಲರು ತಿಥಿ ಆಚರಣೆಯನ್ನು ಮಾಡುವಾಗ ನಾವೊಬ್ಬರು ಮಾಡುವುದಿಲ್ಲ ಎನ್ನಲು ಸಾಧ್ಯವೇ? ಆದ್ದರಿಂದ ನಾವು ಮಾಡುತ್ತವೆ." ಎಂದು ಕೆಲವರು ಸಮಜಾಯಿಷಿ ಕೊಡುತ್ತಾರೆ.   ಹೀಗೆ ಹಲವಾರು  ಅಭಿಪ್ರಾಯಗಳು ಇವೆ.

                              ಇನ್ನು ವಾರ್ಷಿಕವಾಗಿ ಮಾಡುವ ತಿಥಿಯ ಸಂದರ್ಭದಲ್ಲಿ ಹಲವಾರು ರೀತಿಯ  ಆಚಾರಗಳು ಇವೆ.  ಕೆಲವಕ್ಕೆ ಅರ್ಥವಿಲ್ಲ, ಕೆಲವು ಅತಿರೇಕ ಮತ್ತೆ ಕೆಲವು  ಸಂಬಂಧವಿಲ್ಲದ ರೀತಿಯಲ್ಲಿ ಇರುತ್ತವೆ.  ಇದಕ್ಕೆ ಯಾವುದೇ ರೀತಿಯ ವಿವರಣೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ  ಆದರೂ  ನಮ್ಮ ಹಿರಿಯರು ಮಾಡಿದರು ಎನ್ನುವ ಒಂದೇ ಕಾರಣಕ್ಕೆ ಇವರು ಮಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಮಾಡುವ ಕರ್ಮದಲ್ಲಿ ವಿಶ್ವಾಸ ಮತ್ತು  ಶ್ರದ್ಧೆಗಿಂತ ಭಯ ಜಾಸ್ತಿ ಇರುತ್ತದೆ.  ನಾನು ತಿಥಿ ಮಾಡದಿದ್ದರೆ ಏನೋ ಆಗಿಬಿಡಬಹುದೆಂಬ ಭಯ ಇವರನ್ನು ಕಾಡುತ್ತದೆ. ಒಂದು ಚಿಕ್ಕ ವ್ಯತ್ಯಾಸವನ್ನು ಇವರು ಸಹಿಸುವುದಿಲ್ಲ ಅಥವಾ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಇಂತಹ  ಕರ್ಮಗಳಲ್ಲಿ ಶ್ರದ್ಧೆಗಿಂತ ಹೆಚ್ಚು ಅಂಧ ವಿಶ್ವಾಸ ಜಾಸ್ತಿಯಾಗಿರುತ್ತದೆ. ಇಂತಹ ಹಿರಿಯರ ತಿಥಿಯ ದಿನವನ್ನು ಕೆಲವು ಸಂಪ್ರದಾಯದಲ್ಲಿ ಹಬ್ಬವನ್ನಾಗಿ ಆಚರಿಸುವುದಿಲ್ಲ  . ಉದಾಹರಣೆಗೆ,  ಅಂದು ಮನೆಯ ಮುಂದೆ ರಂಗೋಲಿ ಇಡದೆ, ಮನೆಯ ಹೆಂಗಸರು ಕುಂಕುಮ ಇಡದೆ ಶ್ರಾದ್ಧ  ಕಾರ್ಯ ಮುಗಿಯುವವರೆಗೂ ಕಾಯುತ್ತಾರೆ. ದೇವರಪೂಜ ಸಮಯದಲ್ಲಿ ಘಂಟಾನಾದವನ್ನು ಕೂಡ ಮಾಡುವುದಿಲ್ಲ.       ಇಂತಹ ಕ್ರಿಯೆಗಳಿಗೆ ಕೊಡುವ ಕಾರಣಗಳು ಅಸಂಬದ್ದವಾಗಿರುತ್ತವೆ.    ಇದು ಏನೇ ಇದ್ದರೂ ಹಿರಿಯರ ನೆನಪಿನಲ್ಲಿ ಮಾಡುವ ತಿಥಿ ಅಥವಾ ಶ್ರಾದ್ಧ  ಮಾತ್ರ ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ.

                            ಬದುಕಿರುವಾಗ ನಮ್ಮ ಹಿರಿಯರಿಗೆ ತೋರಿಸುವ ಗೌರವ, ನೀಡುವ ಸಹಕಾರ, ಮಾಡುವ ಉಪಚಾರ ಮತ್ತು ನಿರ್ವಹಿಸುವ ಕರ್ತವ್ಯ ಇವೆಲ್ಲವೂ ಬೌತಿಕ ಕ್ರಿಯೆಗಳು. ಈ ಕರ್ತವ್ಯದಿಂದ ನಮ್ಮ ಗುಣಗಳನ್ನು ದೃಢ ಗೊಳಿಸಿಕೊಂಡಾಗ  ವ್ಯಕ್ತಿಗತವಾಗಿ ನಮಗೆ ಸಂತೋಷ,ಸಂತೃಪ್ತಿ ಮತ್ತು  ಸಮಾಧಾನ ಸಿಗುತ್ತದೆ. ಆದರೆ, ಆ ವ್ಯಕ್ತಿ ಮೃತರಾದಾಗ ನಮ್ಮ ದುಃಖವನ್ನು ಸಮಾಧಾನ ಮಾಡಿಕೊಳ್ಳಲು, ಮೃತವ್ಯಕ್ತಿಯ ಸ್ಮರಣೆಯಲ್ಲಿ ಕೃತಜ್ಞತೆಯಿಂದ ಸ್ಮರಿಸುವ ಸಂಸ್ಕಾರಕ್ಕೆ ಶ್ರಾದ್ಧ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಮೃತ ವ್ಯಕ್ತಿಯ ಇಷ್ಟ  ಬಂಧು ಮಿತ್ರರನ್ನು , ಆಹ್ವಾನಿಸಿ ಭೋಜನ ಮತ್ತು ಯಥಾನುಶಕ್ತಿ ದಾನವನ್ನು ಮಾಡುತ್ತಾರೆ. ಈ ಸಂಸ್ಕಾರ ಮಾಡಲು ಸತ್ವಶುದ್ದಿ ಮತ್ತು ಚಿತ್ತಶುದ್ದಿ ಎರಡು ಬೇಕಾಗುತ್ತದೆ. ಈ ಎರಡು ಶುದ್ದಿ ಲಭ್ಯವಾಗಲು ರಜಸ್ತಮೂ ಗುಣದಿಂದ ಸಾತ್ವಿಕ ಗುಣದತ್ತ ಮನಸ್ಸು ಕೊಡಬೇಕಾಗುತ್ತದೆ. ಆಗ ಪ್ರೀತಿ,ಪ್ರೇಮ,ಸತ್ಯ, ಗೌರವ, ಕೃತಜ್ಞತಾ ಭಾವಗಳು ಹತ್ತಿರ ಸುಳಿಯುತ್ತವೆ. ಆಗ ಮನಸ್ಸು ಪುಟವಾಗುತ್ತದೆ. ಪುಟವಾದ ಮನಸ್ಸು ವಿಶಾಲವಾಗಿ ಜಗತ್ತನ್ನು ನೋಡುತ್ತದೆ.

                            "ಶ್ರದ್ಧಯಾ ಇದಂ ಕರ್ಮ ಅನುಷ್ಟೀಯತೆ ಇತಿ ಶ್ರಾದ್ಧಂ."ಅತ್ಯಂತ ಶ್ರದ್ಧೆಯಿಂದ ಆಚರಿಸುವ ಶ್ರಾದ್ಧ ಕರ್ಮವನ್ನು   ಕರ್ತವ್ಯ ಎಂದು ಹೇಳಲಾಗಿದೆ. ನಮ್ಮ ಜನ್ಮಕ್ಕೆ ಕಾರಣರಾದ, ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ನಮ್ಮ ಪುರೋಭಿವೃದ್ದಿಗೆ ಕಾರಣಕರ್ತರಾದ ನಮ್ಮ ತಂದೆ ತಾಯಿ,ಹಿರಿಯರು, ಗುರುಗಳು,ಕುಟುಂಬದ ಸದಸ್ಯರು, ಬಂಧು ಬಾಂಧವರು ಮತ್ತು ಸ್ನೇಹಿತರು ಇವರುಗಳನ್ನು ಮರೆಯದೆ ಕೃತಜ್ಞತೆಯಿಂದ ನೆನೆಯುತ್ತ ಪ್ರತಿವರ್ಷವು ಆಚರಿಸುವ ಸಾಂಕೇತಿಕ ಕರ್ಮವೆ ಶ್ರಾದ್ಧ  ಅಥವಾ ತಿಥಿ.  ಶ್ರದ್ಧೆ ಮತ್ತು ಅಚಲ ವಿಶ್ವಾಸ ಇಂತಹ  ಕರ್ಮಕ್ಕೆ ಬೇಕಾದ ಎರಡು ಮುಖ್ಯ ಅಂಶಗಳು. ಈ ಎರಡು ಭಾವನೆ  ಕ್ರಿಯೆಯಲ್ಲಿರಬೇಕಾಗುತ್ತದೆ. ನಮ್ಮ ಅಂತಃಕರಣ ಭಾವನೆಗಳಾದ ಭಕ್ತಿ, ಪ್ರೀತಿ, ಗೌರವ ಮತ್ತು ಕೃತಜ್ಞತೆಗಳನ್ನು  ವ್ಯಕ್ತ ಪಡಿಸುವ ಕ್ರಿಯೆಗಳು ಧನ್ಯತಾ ಭಾವದಿಂದ  ನಡೆಸಿದರೆ ಹೆಚ್ಚು ಪ್ರಯೋಜನ. ಈ ಭಾವನೆಗಳು ಹುಟ್ಟಬೇಕಾದರೆ ನಾವು ಮಾಡುವ ಪ್ರತಿ ಕಾರ್ಯಗಳ ಜೊತೆಗೆ ಹೇಳುವ ಮಾತುಗಳು, ಮಂತ್ರಗಳು, ನಡವಳಿಕೆಗಳು, ಆಚಾರಗಳು ಇತ್ಯಾದಿಗಳ ಅರ್ಥ ತಿಳಿದು ಮಾಡಿದರೆ ಹೆಚ್ಚು ಅರ್ಥಪೂರ್ಣವಾಗಿ ಇರುತ್ತದೆ. ಆಗ ನಮ್ಮ ಭಾವನೆಗಳು ಇನ್ನಷ್ಟು ದೃಢಗೊಳ್ಳುತ್ತವೆ. ಧನ್ಯತೆಯು ಪವಿತ್ರ ಭಾವನೆಗಳಾಗಿ ಕರ್ತೃವಿಗೆ ಅಪೂರ್ವವಾದ ದೈವಿಕಾನಂದ ಸಿಗುತ್ತದೆ.

                            "A well performed ritual is work of art by which even a sceptical spectator will get a kick. it will give a enduring and lingering satisfaction to  both"---Aldous Huxley.      

                             ನಾವು ಮಾಡುವ ಕರ್ಮಗಳ ಅರ್ಥ ತಿಳಿದು ಮಾಡೋಣ. ಹಿರಿಯರು ಕಂಡುಕೊಂಡ ಆದರ್ಶ ಮತ್ತು ಇರಿಸಿದ್ದ ವಿಶ್ವಾಸ ಇವೆರಡನ್ನೂ ಕಾಪಾಡುವ ಸಂಕಲ್ಪ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಇಂತಹ ಉದಾತ್ತ ವಿಚಾರಗಳನ್ನು ಉಳಿಸಿ ಬೆಳೆಸ ಬೇಕಾದ ಗುರುತರವಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ಇದು ನಮ್ಮ ಮನೆಯಿಂದಲೇ ಪ್ರಾರಂಭಗೊಳ್ಳಲಿ.

                               ಸಕಲ ಓದುಗರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

                            

                           January 1, 2012

2012 ರ ಶುಭ ವರ್ಷದ ಶುಭಾಶಯಗಳು 2012 ರ ಶುಭ ವರ್ಷದ ಶುಭಾಶಯಗಳು

                         ವರ್ಷ ಕಳೆದು ವರ್ಷ ಉರುಳುತ್ತಿದೆ. ಪ್ರತಿ ವರುಷ  ಬಂದಾಗಲೂ ಏನೋ ಒಂದು ನಿರೀಕ್ಷೆ ಸಹಜವಾಗಿ ಮನದಲ್ಲಿ ಮೂಡುತ್ತದೆ. ದಿನಕಳೆದಂತೆ ನಿರೀಕ್ಷೆ ಮಂದವಾಗುತ್ತ ಸಾಗುತ್ತದೆ . ಮತ್ತೆ, ಮುಂದಿನ ಹೊಸ ವರುಷ. ಇದು ಹೀಗೆ ವರ್ಷದಿಂದ ವರ್ಷಕ್ಕೆ ಸಾಗುತ್ತಲೇ ಇದೆ.  ಆದರೂ, ನಮ್ಮ ನಿರೀಕ್ಷೆ ಮಾತ್ರ ಕಡಿಮೆಯಾಗಿಲ್ಲ.  ಈಗ ಮತ್ತೊಂದು ವರ್ಷದ ಉದಯದ ಹೊಸ್ತಿಲಲ್ಲಿ ನಿಂತು ಮತ್ತೆ  ಏನನ್ನೋ ನಿರೀಕ್ಷೆ ಮಾಡುತ್ತಿದ್ದಿವಿ.
                       
                       2012 ರ ಈ ಶುಭ ವರ್ಷದಲ್ಲಿ ನಮ್ಮೆಲ್ಲ ಶುಭ ನಿರೀಕ್ಷೆಗಳು ಸಾಕಾರಗೊಳ್ಳಲಿ . ನಾವೇನು ಬಯಸುತ್ತೇವೋ ಅದೆಲ್ಲವೂ  ನಮ್ಮಿಂದ ಇತರರಿಗೂ ದೊರಕುವಂತಾಗಲಿ. ಸ್ನೇಹ, ಸೌಹಾರ್ದ, ಶಾಂತಿ, ನೆಮ್ಮದಿ, ಸಂತೋಷ ಮತ್ತು ತಾಳ್ಮೆ ನಮ್ಮಲ್ಲಿ ನೆಲೆಗೊಳ್ಳಲಿ. ಆಗ ಈ ಪ್ರಪಂಚ ಸುಂದರ, ಶಾಂತಿ ಮತ್ತು ನೆಮ್ಮದಿಯ ತಾಣ.
                      ಈ ಸದಾಶಯದೊಂದಿಗೆ ಎಲ್ಲಾ ಸದಭಿಲಾಷಿ ಮಿತ್ರರಿಗೆ 2012 ಶುಭವನ್ನು ಕೋರುತ್ತೇನೆ.
ಅಭಿಮಾನಪೂರ್ವಕವಾಗಿ,
ಹೆಚ್ ಏನ್ ಪ್ರಕಾಶ್