August 2, 2012

ಗೃಹಪ್ರವೇಶ


ಒಂದು ಭಾನುವಾರ ನನ್ನ ಗುರುನಾಥರ ಬಳಿಗೆ ಹೋಗಿದ್ದೆವು. ಅಲ್ಲಿ ನಮ್ಮಂತೆಯೇ ಹಲವಾರು ಬಂಧುಗಳು ಬಂದಿದ್ದರು.ಆ ಸಮಯದಲ್ಲಿ ಬೆಂಗಳೂರಿನಿಂದ   ಬಂದ ಗುರು ಬಂಧು ಒಬ್ಬರು ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಒಂದು ಒಳ್ಳೆ ದಿನವನ್ನು ನಿಗಧಿ ಮಾಡಿ ಹೋಗಲು ಬಂದಿದ್ದರು.  ಆ ಸಮಯದಲ್ಲಿ ನಡೆದ ಸಂಭಾಷಣೆಯ ಸಾರವಿದು.

ಗುರುನಾಥರು : ಏನ್ಸಾರ್, ಬಂದಿದ್ದು?

ಗುರುಬಂಧು : "ಏನಿಲ್ಲ, ಮನೆಯೆಲ್ಲ ಮುಗಿಯಿತು, ಇನ್ನು ಗೃಹ ಪ್ರವೇಶ ಮಾಡಿದರಾಯಿತು. ಅದಕ್ಕಾಗಿ ತಮ್ಮಲ್ಲಿ ಒಂದು ಒಳ್ಳೆ ದಿನ ನಿಷ್ಕರ್ಷೆ ಮಾಡಿಕೊಂಡು ಹೋಗೋಣ ಎಂದು ಬಂದೆವು." ಎಂದು ಹೇಳಿ ಗಂಡ ಹೆಂಡತಿ ಇಬ್ಬರು ಗುರುನಾಥರ ಪಾದಕ್ಕೆ ನಮಸ್ಕರಿಸಿದರು.

ಗುರುನಾಥರು: " ಗೃಹಪ್ರವೇಶವೇ? ಅದನ್ನು ಈಗಾಗಲೇ ಹಲವಾರು ಜನ ಮಾಡಿದ್ದಾರಲ್ಲ?  ಅಲ್ಲವೇ? " ಎಂದು ನಮ್ಮ ಕಡೆ ನೋಡಿ ಕಣ್ಣು ಮಿಟುಕಿಸಿ ನಸುನಕ್ಕರು.

ಗುರುಬಂಧು   ಪತ್ನಿ : "ಇಲ್ಲ ಗುರುಗಳೇ, ಗೃಹಪ್ರವೇಶ ಇನ್ನು ಆಗಿಲ್ಲಾ." ಎಂದರು ಆತುರದಲ್ಲಿ.

ಗುರುನಾಥರು : " ಏನಮ್ಮಾ ಹೀಗೆ ಹೇಳುತ್ತಾ ಇದ್ದಿಯಾ?  ಗಾರೆ ಕೆಲಸದವನು, ಲೈಟ್   ಕೆಲಸದವನು, ನಲ್ಲಿ ಕೆಲಸದವನು, ಬಣ್ಣ ಬಳಿಯುವವನು, ಇನ್ನು ಪ್ರತಿ ದಿನಾ, ನೀವು ನಿಮ್ಮ ಸ್ನೇಹಿತರು ಎಲ್ಲರು ಆ ಗೃಹದ ಪ್ರವೇಶ ಮಾಡಿದಿರಲ್ಲಾ!  ಇನ್ನ್ಯಾವ ಗೃಹಪ್ರವೇಶನಮ್ಮಾ? " ಎಂದು ಸ್ವಲ್ಪ ನಗೆಯಾಡುತ್ತಲೇ  ಪ್ರಶ್ನೆ ಮಾಡಿದರು.

ಗುರು ಬಂಧು ಮತ್ತು ಪತ್ನಿ : ಏನೂ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ನಿಂತು " ಅವರೆಲ್ಲ ಬರದೆ ಇದ್ದರೆ ಕೆಲಸ ಹೇಗಾಗುತ್ತೆ?"ಎಂದು ನಗುತಂದುಕೊಂಡು  ನಕ್ಕರು.

ಗುರುನಾಥರು : " ಮತ್ತೆ ಇನ್ನು ಯಾರಿಗೆ ಗೃಹಪ್ರವೇಶ? ಎಲ್ಲರು ಬಂದ ಹಾಗೆ ಆಗಿದೆಯಲ್ಲ?" 

ಗುರುಬಂಧು ಪತ್ನಿ : " ನೆಂಟರು ಇಷ್ಟರು, ಬಂಧು ಬಳಗ ಎಲ್ಲರನ್ನು ಒಳ್ಳೆ ದಿನ ಕರೆದು ಊಟ ಹಾಕಬೇಡವೆ?" ಎಂದರು ಆಕೆ.

ಗುರುನಾಥರು  : " ಎಲ್ಲರನ್ನು ಕರೆದು ಊಟ ಹಾಕಬೇಕು!  ಮನೆ ಎಷ್ಟು ದೊಡ್ಡದಾಗಿದೆ, ಎಷ್ಟು ಚಂದವಾಗಿದೆ, ಎಂದು ಎಲ್ಲರಿಗು ತೋರಿಸಿ ಅವರ ಮೆಚ್ಚುಗೆ ಗಳಿಸಬೇಕು. ಅಲ್ಲವೇ ?" ಎಂದು ನಮ್ಮ ಕಡೆ ತಿರುಗಿ ನಗುತ್ತ " ನಿಮ್ಮ ಅತ್ತೆಯವರನ್ನ ಏನು ಮಾಡುತ್ತೀರಿ? " ಎಂದರು. 

ಗುರುಬಂಧು  ಪತ್ನಿ.: " ಅವರನ್ನೂ ಕರೆದುಕೊಂಡು ಬರುತ್ತೇವೆ."

ಗುರುನಾಥರು  " ಅಂದರೆ,  ಅವರು ಈಗ ನಿಮ್ಮ ಜೊತೇಲಿ ಇಲ್ಲವೇ ? " ಎಂದು ಆಶ್ಚರ್ಯ ವ್ಯಕ್ತ ಪಡಿಸಿದರು.

ಗುರುಬಂಧು ಪತ್ನಿ : ಈ ವಿಷಯ ಇವರಿಗೆ ಹೇಗೆ ಗೊತ್ತಾಯಿತು ಎಂದು ಅನುಮಾನಿಸುತ್ತ,   ಸ್ವಲ್ಪ ಮೌನದ ನಂತರ " ಇಲ್ಲ" ಎಂದರು.

ಗುರುನಾಥರು: " ಅಲ್ಲಮ್ಮಾ, ಮನೆದೇವರನ್ನು ಹೊರಗಡೆ ಇಟ್ಟು ಕಲ್ಲಿಗೆ  ಪೂಜೆ ಮಾಡಿದರೆ ಏನು ಭಾಗ್ಯ ಬರುತ್ತಮ್ಮ?  ನಿಮ್ಮ ಅತ್ತೇನ ವೃದ್ಧಾಶ್ರಮಕ್ಕೆ ಸೇರಿಸಿ ನೀವು ತುಂಬಾ ದೊಡ್ಡ ಮನೆ ಗೃಹ ಪ್ರವೇಶ ಮಾಡ್ತೀರಾ? ಹಸು ನಿಮ್ಮ ಮನೆಗೆ ಬಂದರೆ ಒಳ್ಳೇದು, ಆದರೆ ನಿಮ್ಮ ಅತ್ತೆ ?  ಏನು ಅನ್ಯಾಯ? ಮೊದಲು ನಿಮ್ಮ ಅತ್ತೆಯವರನ್ನ ಮನೆಗೆ ಕರೆದುಕೊಂಡು ಬನ್ನಿ. ಅವರಲ್ಲಿ ಕ್ಷಮಾಪಣೆ ಕೇಳಿ ಜೊತೆಯಲ್ಲಿ ಇಟ್ಟು ಕೊಳ್ಳಿ.  ಅವರ ಆಶೀರ್ವಾದ ಮೊದಲು ಪಡೆಯಿರಿ. ಅವರು ನಿಮ್ಮ ಮನಗೆ ಬಂದರೆ ಗೃಹಪ್ರವೇಶ ಆದಂತೆ. ಅದು ಬಿಟ್ಟು ನೀವು ಸಾವಿರ ಜನನ್ನ ಕರೆದು ಊಟ ಹಾಕಿ,ಉಡುಗೊರೆ   ಕೊಟ್ಟರು ಏನೂ ಪ್ರಯೋಜನವಿಲ್ಲ. ನಡೀರಿ, ನಡೀರಿ. " ಎಂದು ಕಟುವಾಗಿ ಹೇಳಿ ಮುಖ ತಿರುಗಿಸಿಬಿಟ್ಟರು.

ಅಲ್ಲಿದ್ದವರಿಗೆಲ್ಲ ಪರಮಾಶ್ಚರ್ಯ ಆಯಿತು.  ಗುರುಬಂಧು ಮತ್ತು ಅವರ ಪತ್ನಿಗೆ ತುಂಬಾ ಅವಮಾನವಾದಂತೆ ಆಯಿತು. ತಲೆ ತಗ್ಗಿಸಿ ನಿಂತು ಬಿಟ್ಟರು.  ಮತ್ತೇನಾದರೂ ಹೇಳಬಹುದೆಂದು ಅವರು ಸ್ವಲ್ಪ ಸಮಯ ಕಾದರು. ಗುರುನಾಥರು ಅವರಕಡೆ ನೋಡಲೇ ಇಲ್ಲ.  ಸ್ವಲ್ಪ ಸಮಯದ ನಂತರ " ಇನ್ನು ಯಾಕೆ ಇಲ್ಲೇ ಇದ್ದೀರಾ? ಹೋಗಿ ಮೊದಲು ಆಕೆಯನ್ನ ಮನೆಗೆ ಕರೆದು ತನ್ನಿ, ಆಮೇಲೆ ಬನ್ನಿ." ಎಂದು ಕಡ್ಡಿ ಎರಡು ತುಂಡು ಮಾಡಿದವರಂತೆ ಹೇಳಿಬಿಟ್ಟರು. ಅವರು ತಲೆ ತಗ್ಗಿಸಿ ಅಲ್ಲಿಂದ  ಹೊರಟರು.

 "ತಂದೆ ತಾಯಿಯ ಸೇವೆ ಮಾಡದೆ, ಏನು ಮಾಡಿದರು ಅದು ಕೇವಲ ಜನ ಮೆಚ್ಚಿಸಲು ಮಾತ್ರ. ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ , ದೇವರನ್ನು ಮೆಚ್ಚಿಸಬಹುದು.  ಅಲ್ಲವೇ ಸಾರ್? " ಎಂದರು ಗುರುನಾಥರು.

ಈಗ್ಗೆ ನಾಲ್ಕಾರು ವರ್ಷಗಳ ಹಿಂದೆ ಹೇಳಿದ ಆ ಮಾತು ಇಂದಿಗೂ ನನ್ನನ್ನು ಯಾವಾಗಲು ಎಚ್ಚರಿಸುತ್ತಲೇ ಇರುತ್ತದೆ.  ಯಾರಾದರು ಗೃಹಪ್ರವೇಶದ ಆಮಂತ್ರಣ ನೀಡಲು ಬಂದಾಗ ಈ ಘಟನೆ ತಟ್ಟನೆ ಜ್ಞಾಪಕಕ್ಕೆ ಬರುತ್ತದೆ.

8 comments:

  1. ಮನವಿಲ್ಲದೆ ಮನೆ ಮಾಡಿದರೆ ಅದು ಮನೆಯಾಗುತ್ತದೆ ಹೊರತು..ಗೃಹವಲ್ಲ...ಸಾಮಾನ್ಯ ಮನೆಕಟ್ಟುತಾರೆ...ಗೃಹ ಪ್ರವೇಶ ಮಾಡುತ್ತೇನೆ ಅನ್ನುತ್ತಾರೆ..ಯಾರು ಇದರಲ್ಲಿ ವಾಸ ಮಾಡುತ್ತೀರಾ ಅಂದ್ರೆ..ನಾನು ಹೆಂಡತಿ..ಮತ್ತು ಮಗು..ಅಂತ..ಮನೆ ವಿಸ್ತಾರ ೧೦೦೦ ಅಡಿಗಳ ಮೇಲಿರುತ್ತೆ..ಮೂರ್ಖತನದ ಪರಮಾವಧಿ ಅದು...ಮನೆ ಕಟ್ಟಿ..ಒಬ್ಬರೇ ಇದ್ದು ಸಾಯುತ್ತಾರೆ..ದೇವರೇ ಕಾಪಾಡಬೇಕು...ತಾವು ಮಾಡಿದನ್ನೇ ತಮ್ಮ ಮಕ್ಕಳು ಮಾಡುತ್ತಾರೆ ಎನ್ನುವುದನ್ನು ಮರೆಯುವ ಮಹಾನುಭಾವರು...ಜಿಂದಾಬಾದ್ !!!!

    ಸುಂದರ ಕಥಾನಕ...ಚಿಕ್ಕಪ್ಪ..

    ReplyDelete
  2. ಸುಂದರವಾದ ಮನೆ ಸುಂದರವಾದ ಬದುಕನ್ನು ಕೊಡಲಾರದು. ಸುಂದರವಾದ ಗುಣ ಮಾತ್ರ ಎಂತಹ ಮನೆಯಲ್ಲೂ ಸುಂದರವಾದ ಮತ್ತು ತೃಪ್ತಿದಾಯಕ ಬದುಕನ್ನು ನೀಡಬಲ್ಲುದು. ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.

    ReplyDelete
  3. k manjunath kmanjunathmce@rediffmail.com
    8:17 AM (7 hours ago)

    to me
    Dear Prakash,

    What Sri Guru's All pervading Spirit can not observe? A moving narration.
    KM

    ReplyDelete
  4. ಗುರುನಾಥರ ಹಾಗೂ ಗುರು ಬ೦ಧುಗಳ ಕಥೆ ಕೇಳುತ್ತಿದ್ದರೆ ಕಣ್ಣುಗಳು ಹನಿಗೂಡುತ್ತವೆ!
    ದಗಲ್ಬಾಜಿಗಳು .. ಅಮ್ಮ ಬೇಡ.. ಅಮ್ಮನಿ೦ದಲೇ ಸಾಕ್ಷಾತ್ಕಾರಗೊ೦ಡ ಆ ಗೃಹ ಬೇಕು!!
    ಷಿಟ್... ನಿಜಕ್ಕೂ ಸಮಾಜ ಎತ್ತ ಸಾಗುತ್ತಿದೆ ಎ೦ಬುದರ ದ್ಯೋತಕ ಜೊತೆಗೆ ಗುರುನಾಥರ೦ಥ ಮಾರ್ಗದರ್ಶಿಗಳು ಇನ್ನೂ ಸಾಧ್ಯವಿರುವಷ್ಟು ಜನರ ಕಣ್ತೆರೆಸುತ್ತಿದ್ದಾರಲ್ಲ ಎ೦ಬುದೇ ಸ೦ತಸ..
    ಮಾರ್ಮಿಕವಾದ ಗೃಹಪ್ರವೇಶ..
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
    Replies
    1. ಆತ್ಮೀಯ ನಾವಡ ರವರೆ
      ನಮ್ಮ ಗುರುನಾಥರೆ ಹಾಗೆ! ಸರಿಯಾದ ಸಮಯದಲ್ಲಿ ,ಸರಿಯಾಗಿ ತಿಳಿ ಹೇಳಿ, ತಮ್ಮ ಬಂಧುಗಳನ್ನು ಸನ್ಮಾರ್ಗಕ್ಕೆ ತರುವ ನಿಶ್ಚಲ ಮನೋಭಾವ ಅವರದ್ದಾಗಿತ್ತು.
      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  5. ಹರಟೆಯ ನಡುವೆ "ಗುರು-ಪ್ರವೇಶ" ಮಾಡಿಸಿದ್ದು ಚೆನ್ನಾಯ್ತು.

    ಜನ-ಗೆಲ್ಲೋದು ಸುಲಭ, ಮನ-ಗೆಲ್ಲೋದು ಪ್ರಾಮಾಣಿಕಯಿಂದ ಮಾತ್ರ!

    ReplyDelete
    Replies
    1. ಆತ್ಮೀಯ ರಜನೀಶ,
      " ಜನ-ಗೆಲ್ಲೋದು ಸುಲಭ, ಮನ-ಗೆಲ್ಲೋದು ಪ್ರಾಮಾಣಿಕಯಿಂದ ಮಾತ್ರ! " ಈ ಮಾತು ಸತ್ಯ. ಇನ್ನೊಂದು ಇದಕ್ಕೆ ಸೇರಿಸಬಹುದು. ಮೊದಲು ಮನೆ ಗೆದ್ದು ಆಮೇಲೆ ಜನ ಗೆಲ್ಲು.
      ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.

      Delete