August 22, 2012

ಸೇವೆ............................... ಒಂದಷ್ಟು ಹರಟೆ

                                              ಸೇವೆ 

ಗಾಂಧಿಜಿಯವರಿಗೆ ಸರ್ಕಾರದಲ್ಲಿ ಯಾವ ಉನ್ನತ ಅಧಿಕಾರವಿರಲಿಲ್ಲ. ಹೇಳಿಕೊಳ್ಳುವಂತಹ ಹಣ, ಆಸ್ತಿ ಏನೂ ಇರಲಿಲ್ಲ.  ಒಳ್ಳೆಯ ಸೌಂದರ್ಯ ಅಥವಾ ಆಕರ್ಷಣೆ ಯಾವುದು ಇರಲಿಲ್ಲ. ತನ್ನದೇ ಆದ ಗುಂಪಿಗಾಗಲಿ , ಸೈನ್ಯಕ್ಕಾಗಲಿ  ನಾಯಕರು ಇವರಾಗಿರಲಿಲ್ಲ.  ಆದರೂ, ಗಾಂಧೀಜಿಯವರಿಗೆ ಲಕ್ಷಾಂತರ ಜನರ ಬೆಂಬಲವಿತ್ತು.  ಹಿಂಬಾಲಕರಿದ್ದರು, ಗಾಂಧೀಜಿಯವರು ಒಮ್ಮೆ ಹೇಳಿದರೆ ಸಾಕು,  ಒಮ್ಮೆಲೇ ಆ ಕಾರ್ಯ ಮಾಡಲು ಮುನ್ನುಗ್ಗುತ್ತಿದ್ದರು. ಸೇವೆಗೆ ಸದಾ ಸಿದ್ದರಿರುತ್ತಿದ್ದರು. ಇದಕ್ಕೆ ಮುಖ್ಯ ಕಾರಣವೆಂದರೆ, ಗಾಂಧೀಜಿಯವರು ತಮ್ಮ ಜೀವನವನ್ನು ಸೇವೆಗೆ ಮುಡುಪಾಗಿ ಇಟ್ಟದ್ದು ಮತ್ತು ನಿಸ್ವಾರ್ಥ ಸೇವೆ ಮಾಡುತ್ತಿದ್ದದ್ದು ಮಾತ್ರ ಇವರ ಜನ ಬೆಂಬಲಕ್ಕೆ ಕಾರಣವಾಗಿತ್ತು.

ಸಾಮಾನ್ಯವಾಗಿ ನಾಯಕತ್ವ ಮತ್ತು ಅಧಿಕಾರವಿದ್ದಾಗ ಮಾತ್ರ ಸೇವೆ ಮಾಡಲು ಸಾಧ್ಯ ಎಂಬ ತಪ್ಪು ಕಲ್ಪನೆ ಹೆಚ್ಚಿನ ಜನರಲ್ಲಿದೆ. ವಾಸ್ತವದಲ್ಲಿ ಎಲ್ಲಿಯತನಕ ಅಧಿಕಾರಕ್ಕಾಗಿ  ಹೋರಾಡುತ್ತಾರೋ ಅಲ್ಲಿಯತನಕ ನಾಯಕತ್ವ ಸಿಗಲಾರದು.  ಶ್ರೀ ರಾಮಕೃಷ್ಣರು ಹೇಳುತ್ತಾರೆ " ಎಲ್ಲಿಯತನಕ ನೀನು ಕಷ್ಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿಯೋ ಅಲ್ಲಿಯತನಕ ನಿನಗೆ ಕಷ್ಟಗಳು ಒಂದಾದನಂತರ ಮತ್ತೊಂದರಂತೆ ಬಂದು ಎರಗುತ್ತಲೇ ಇರುತ್ತವೆ. ದೈಯವಾಗಿ    ನಿಂತು   ಎದುರಿಸಿದಾಗ    ಕಷ್ಟಗಳು ಪಲಾಯನ  ಮಾಡುತ್ತವೆ.  ಆದ್ದರಿಂದ ಸುಖದ ಬೆನ್ನೇರಿ    ಓಡಬೇಡ,  ಕಷ್ಟಕ್ಕೆ ಬೆನ್ನು ತೋರಿಸಬೇಡ." ಇದೆ ರೀತಿ ಅಧಿಕಾರ ಕೂಡಾ .  ಅಧಿಕಾರಕ್ಕಾಗಿ ಹಪಹಪಿಸಿದರೆ,ಒಂದು ಪಕ್ಷ ಅಧಿಕಾರ ದೊರೆತರೂ  ನಾಯಕತ್ವದ ನೈಪುಣ್ಯತೆ ದೊರೆಯುವುದಿಲ್ಲ.  ಸೇವೆಯನ್ನು ನಿಸ್ವಾರ್ಥ ಭಾವದಿಂದ, ಶ್ರದ್ಧೆಯಿಂದ ಮಾಡಲು ಪ್ರಾರಂಭ ಮಾಡಿದರೆ ಸಾಕು,  ನಾಯಕತ್ವದ ಗುಣಗಳು ತನ್ನಷ್ಟಕ್ಕೆ ತಾನೇ ಮೈತುಂಬಿಕೊಳ್ಳುತ್ತದೆ.  ಇದಕ್ಕೆ ನಮ್ಮ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ.  ನಮ್ಮ ಇತಿಹಾಸ ಸಾಕಷ್ಟು ರಾಜ ಮಹಾರಾಜರ, ಸಾಧು ಸಂತರ, ಸಮಾಜ ಸೇವಾಸಕ್ತರ, ಅಧಿಕಾರಿಗಳ  ಗಣನೀಯ ಸೇವೆಯನ್ನು ದಾಖಲು ಮಾಡಿದೆ.   ಅವರು ಅಂದು ಮಾಡಿದ ಸೇವಾ ಕೆಲಸಗಳು ಇಂದಿಗೂ ಸಮಾಜದಲ್ಲಿ ಚಿರಸ್ಥಾಯಿಯಾಗಿ ನಿಂತಿದೆ.   ಕಟ್ಟಡಗಳಿರಲಿ , ಕೆರೆ ಕಾಲುವೆಗಳಿರಲಿ, ಸಾಲುಮರಗಳಿರಲಿ, ಆಸ್ಪತ್ರೆ , ಆಣೆಕಟ್ಟು,  ಸೇತುವೆಗಳೇ  ಆಗಿರಲಿ, ಕಟ್ಟಿ ಬೆಳೆಸಿದ ವಿದ್ಯಾಸಂಸ್ತೆಗಳಾಗಿರಲಿ, ಗುಡಿ ಗೋಪುರಗಳಾಗಿರಲಿ, ದೇವಸ್ತಾನ, ಚರ್ಚು, ಮಸೀದಿಗಳೇ ಆಗಿರಲಿ ಇನ್ನ್ಯಾವುದೇ ಸಮಾಜಮುಖಿ ಕೆಲಸವಿರಲಿ ಅದು ಅವರ ನಿಸ್ವಾರ್ಥ ಸೇವೆ ಯನ್ನು ಸದಾ ಕಾಲ ಜ್ಞಾಪಿಸುತ್ತದೆ.  

ಆದರೆ, ಇಂದು ಸಮಾಜ ಸೇವೆಯ ಹೆಸರಿನಲ್ಲಿ ಆಗುತ್ತಿರುವ ಮೋಸ,  ವಂಚನೆ ಇವು ಅಸಹ್ಯ ತರಿಸುತ್ತಿದೆ.  ಸಮಾಜದ ಒಳಿತಿಗಾಗಿ  ಕೆಲಸ ಮಾಡಬೇಕಾದವರು ಕೋಟಿಗಟ್ಟಲೆ ಲಂಚದ ಪ್ರಕರಣಗಳಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ.  ತಮ್ಮ ಮಾನ ಉಳಿಸಿಕೊಳ್ಳಲು ಇಲ್ಲದ ನಾಟಕ, ಶಕ್ತಿ ಪ್ರದರ್ಶನ ಮಾಡುತ್ತಾ  , ಹವನ ಹೊಮಾದಿಗಳನ್ನು ನಡೆಸಿ ದೇವರಿಗೂ ಆಮಿಷ ಒಡ್ಡುತ್ತಿದ್ದಾರೆ.  'ಸರ್ಕಾರಿ ಕೆಲಸ ದೇವರ ಕೆಲಸ' ಎಂಬುದು ಬೋರ್ಡುಗಲ್ಲಿ  ಚನ್ನಾಗಿ ಕಾಣುತ್ತಿದೆ. ಜನನಾಯಕ ಎನಿಸಿಕೊಂಡವನು ಸಮಾಜ ಘಾತುಕ ಕೆಲಸದಲ್ಲಿ, ಕಳಂಕಿತ ಕೆಲಸಗಳಲ್ಲಿ ಭಾಗಿಯಾಗಿ ಸಮಾಜಕ್ಕೆ ಮಾರಕನಾಗಿದ್ದಾನೆ.  ಇಂತಹ ನಾಯಕರು ಆಲಸಿಗಳಿಗೆ, ಸ್ವಾರ್ಥಿಗಳಿಗೆ ಮತ್ತು ಲಂಪಟರಿಗೆ  ಶ್ರೇಷ್ಠ ನಾಯಕರಾಗಿ ಬಿಂಬಿತವಾಗುತ್ತಿದ್ದಾರೆ .   ಇಂತಹವರಲ್ಲಿ   ಸೇವಾ ಮನೋಭಾವವನ್ನು    ಹುಡುಕಲು ಸಾಧ್ಯವೇ?

ಸೇವೆಯ ಪದದ ಅರ್ಥವೇ ನಿಸ್ವಾರ್ಥ.  ಯಾರಿಂದ ಏನನ್ನು ಬಯಸದೆ ನಿರ್ವಂಚನೆಯಿಂದ, ನಿಷ್ಪಕ್ಷಪಾತವಾಗಿ, ನಿಸ್ವಾರ್ಥದಿಂದ ಇನ್ನೊಬ್ಬರ ಒಳಿತಿಗಾಗಿ ಮಾಡುವ ಕೆಲಸವನ್ನೇ   ಸೇವೆ ಎನ್ನುವುದು.   ಚುನಾಯಿತ  ಪ್ರತಿನಿಧಿಯು ಕ್ಷೇತ್ರದ-ಮತದಾರನ ಜೊತೆ, ಶಿಕ್ಷಣ ಕ್ಷೇತ್ರದಲ್ಲಿ ಗುರು-ವಿದ್ಯಾರ್ಥಿಗಳ ಜೊತೆ, ಧರ್ಮದಲ್ಲಿ ಧರ್ಮಾಧಿಕಾರಿಗಳು  (ಮಠದ  ಅಧಿಪತಿಗಳು )  ಭಕ್ತರುಗಳ ಜೊತೆ, ಕುಟುಂಬದಲ್ಲಿ ಗಂಡ ಹೆಂಡಿರ, ತಂದೆ, ತಾಯಿ, ಮಕ್ಕಳ, ಸೋದರ ಸೋದರಿಯರ, ಅಜ್ಜಿತಾತನ ಜೊತೆ, ಹೀಗೆ ಎಲ್ಲದರಲ್ಲೂ ಉತ್ತಮ ಸಂಬಂಧ ಬೆಳೆಸಿ ಸೇವೆ ಮಾಡಬಹುದಾಗಿದೆ.    ಎಲ್ಲೂ ಸೇವೆಗೆ ನಾಯಕತ್ವವೇ ಬೇಕಾಗಿಲ್ಲ.  ತನಗಿರುವ  ವ್ಯಾಪ್ತಿಯಲ್ಲೇ ಬೇಕಾದಷ್ಟು ಸೇವೆ ಮಾಡಿ, ತನ್ನ ಇರುವನ್ನ ಸಾರ್ಥಕ ಮಾಡಿಕೊಳ್ಳಬಹುದು.  ಸೇವೆಯನ್ನು  ಕರ್ತವ್ಯವೆಂದೆ ಮಾಡಿದರೆ ಅದರಲ್ಲಿ ಸಿಗುವ ಆನಂದವೇ ಬೇರೆ.    ಈ ಕರ್ತವ್ಯವನ್ನು  ನಿಸ್ವಾರ್ಥವಾಗಿ  ಮಾಡಿದಾಗ, ಸೇವೆ  ದೈವತ್ವದ ಮಟ್ಟಕ್ಕೆ ಏರುತ್ತದೆ. ಇದೆ ನಿಜವಾದ ಸುಲಭ ಪೂಜೆಯಾಗುತ್ತದೆ. ಭಗವಂತನನ್ನು ಕಾಣಲು ಬೇರೆ ಇನ್ಯಾವ ಮಾರ್ಗಕ್ಕಾಗಿ ಹುಡುಕಾಡಬೇಕಾಗಿಲ್ಲ .

ನೀವೇನು ಹೇಳುತ್ತೀರಿ ?4 comments:

 1. ಚೆನ್ನಾಗಿದೆ..ಸೇವಾ ಮನೋಭಾವ ದೃಢವಾಗಿರಬೇಕು...ತೋರಿಕೆಗಾಗಿ ಮಾಡಿದಾಗ..ಅಧಿಕಾರವಿದ್ದರು, ಇಲ್ಲದಿದ್ದರೂ ಉಪಯೋಗವಿಲ್ಲ..ಸುಂದರ ಲೇಖನ..(ಲೇಖನದ ಆರಂಭದಲ್ಲಿ ಬೇರೆಯವರ ಉದಾಹರಣೆ ಇದ್ದಿದ್ದರೆ ಇನ್ನು ಚೆನ್ನಾಗಿರುತಿತ್ತು...ನನ್ನ ಅನಿಸಿಕೆ...)

  ReplyDelete
  Replies
  1. ಆತ್ಮೀಯ ಶ್ರೀಕಾಂತ್,
   ಧನ್ಯವಾದಗಳು

   Delete
 2. ಸೇವೆಯಂಬುದು ಕರ್ತವ್ಯ ಎನ್ನುವ ಮಾತನ್ನು ಒಪ್ಪುತ್ತೇನೆ.
  ಅದು ನಿಃಸ್ವಾರ್ಥವಾಗಿರಬೇಕು ಎಂದೂ; ಹಾಗಿರುವ ಒಂದು ಸೇವೆ ಇದೆ ಎಂಬುದನ್ನು ಮನುಷ್ಯರ ಮಟ್ಟಿಗೆ ಒಪ್ಪುವುದು ಕಷ್ಟ. "ಪ್ರಕೃತಿ"ಯಾದರೆ ಆಗಬಹುದು.

  ನಾವು ಮತ್ತು ಸುತ್ತಲಿರುವ ಎಲ್ಲರೂ ಏಕಕಾಲಕ್ಕೇ ಸೇವಿತರು ಹಾಗೂ ಸೇವಕರು ಆಗಿಲ್ಲವೇ?

  ಸೇವೆಯೆಂಬುದು ನಿಃರ್ಸ್ವಾಥದ್ದಾಗಿದ್ದರೆ ಅದು ನಿಷ್ಪ್ರಯೋಜಕವೂ ಕೂಡ! ಸೇವೆಯ ಫಲವಾಗಿ
  ೧) ಅಶನ-ವಸನಗಳು ಹಲವರಿಗಾದರೆ; ೨) ಕೀರ್ತಿ-ಪ್ರತಿಷ್ಠೆಯ ಆತ್ಮರತಿ ಹೆಚ್ಚಿನವರದು; ೩) ಶಾಂತಿ-ಪ್ರೀತಿ-ನೆಮ್ಮದಿಗಳು ಕೆಲವರದು.

  ಉದಾ:
  ೧) ಜಾಡುಮಾಲಿ,ನೇಕಾರ-ಚಮ್ಮಾರ-ಕಮ್ಮಾರ,ಕ್ಷೌರಿಕ,ದರ್ಜಿ,ಗಾರೆಯವ,ಗುಮಾಸ್ತ,ನರ್ಸ್,ಪೊಲೀಸ್,ಡ್ರೈವರ್‍, ಮೆಕ್ಯಾನಿಕ್,ಹೆಣಕಾಯುವವ ಇನ್ನು ಎಷ್ಷೆಷ್ಟೋ... ಈ ಸೇವೆಗಳಲ್ಲಿ ಹೆಚ್ಚಿನವನ್ನು ಮೇಲಿನ ಮೂರರಲ್ಲಿ ಯಾವ ರೀತಿಯ ಪ್ರತಿಫಲಕ್ಕಾಗಿಯೂ ಎಲ್ಲರಿಂದ ಮಾಡಲೂ ಸಾಧ್ಯವಿಲ್ಲವಲ್ಲ!

  ೨) ಅನ್ನದಾನ,ವಸ್ತ್ರದಾನ,ದೇವಾಲಯ,ಅನಾಥಾಶ್ರಮ-ವೃದ್ಧಾಶ್ರಮಗಳ ನಿರ್ಮಾಣ... ಇವೆಲ್ಲವಂತೂ ಸೇವೆಯ ಪಟ್ಟಿಸೇರಿ ವಾಕರಿಕೆ ತರಿಸುವಷ್ಟು ಸಾಗಿವೆ.

  ೩) ನಮ್ಮ ಇತಿಮಿತಿಗಳನ್ನು ಅವಶ್ಯಕತೆಗಳನ್ನು ಅರಿತು ಮಾಡುವ ಪ್ರಾಮಾಣಿಕ-ಶ್ರದ್ಧೆಯಿರುವ ಯಾವುದೇ ಕೆಲಸ... ಅಲ್ಲಲ್ಲಿ ಕಂಡುಬರುವಂಥದು.

  ಒಬ್ಬ ಭಿಕ್ಷುಕನೂ ಸೇವಕನೇ. ಅವನಿಂದ ನಮಗಾದ ಸೇವೆಯೆಂದರೆ, ‘ನಾನು ಕೊಟ್ಟೆ’ಎಂಬ ನಮ್ಮ ಅಹಂಕಾರದ ತಣಿವು.

  "Unconditional service is rendered only by Mother and Mother alone."

  ***

  ನೀವು ಸೇವೆಯೆನ್ನು ಕರ್ತವ್ಯವೆನ್ನುವ ದೃಷ್ಟಿಯಿಂದ ಕಂಡಿರುವುದೇ ನನಗಿಷ್ಟವಾದದ್ದು.

  ReplyDelete
  Replies
  1. ಆತ್ಮೀಯ ರಜನೀಶ,
   ಇಂದು ಸೇವೆ ಎನ್ನುವುದು ತನ್ನ ಅರ್ಥ ಕಳೆದುಕೊಂಡಿರುವ ಸಂಧರ್ಭದಲ್ಲಿ ಸೇವೆಗೆ ಕರ್ತವ್ಯ ಎಂದರೆ ಸರಿಯಾದೀತೆಂಬ ಅರ್ಥದಲ್ಲಿ ಚಿಂತಿಸಿದ್ದೇನೆ. ನಿನ್ನ ಮಾತು ಒಪ್ಪುತ್ತೇನೆ. ಸೇವೆಯ ವಿಸ್ತಾರ ದೊಡ್ಡದು.ಆದ್ದರಿಂದ ಇಂದಿನ ಸೇವೆ ಎಂಬುದನ್ನು ಒಪ್ಪುವುದು ಕಷ್ಟ ಎನಿಸಬಹುದು. ಆದರೆ, ಸೇವೆಯನ್ನು ನಿಜವಾದ ಅರ್ಥದಲ್ಲಿ ಮಾಡುತ್ತಿರುವ ಮಹನೀಯರು ಇಂದಿಗೂ ಕಾರ್ಯೋನ್ಮುಖರಾಗಿದ್ದಾರೆ. ಇಂತಹವರ ಬಗ್ಗೆ ಸಧ್ಯದಲ್ಲೇ ಬರೆಯುತ್ತೇನೆ.
   ಧನ್ಯವಾದಗಳು.

   Delete