April 1, 2019

ಸಹನೆ 
                                
                                 ಸಹನೆ ಒಂದು ಅದ್ಭುತವಾದ ಆಂತರಿಕ ಶಕ್ತಿ.  ಸಹನೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಉತ್ತರವಾಗಿ  ಪರಿಹರಿಸಬಲ್ಲದು.  ನಮ್ಮ ಉದ್ವಿಗ್ನತೆಯ ಅಭಿವ್ಯಕ್ತಿಯೇ ಸಮಸ್ಯೆಗಳಿಗೆ ಮೂಲ.     ಇಂತಹವುಗಳಿಗೆ ಅವಕಾಶಮಾಡಿಕೊಡದೆ ಹೋದರೆ,  ಅದು ಅಲ್ಲೇ ಅಂತ್ಯ ಕಾಣುತ್ತದೆ.      ಉದ್ವಿಗ್ನತೆಯ ಸಂಧರ್ಭದಲ್ಲಿ   ಬಳಸುವಂತಹ   ಶಬ್ದ, ವಾಕ್ಯ, ಹಾವ ಭಾವಗಳು ಉದ್ರಿಕ್ತ ವ್ಯಕ್ತಿಯ ಮನಸ್ಸಿನ ಸ್ಥಿತಿಯನ್ನು ಬಿಂಬಿಸುತ್ತದೆ.  ಇವುಗಳನ್ನು ಕೇವಲ ಮಾತಿನಿಂದ, ಬಾಹ್ಯರೂಪದ ಸಿಟ್ಟಿನಿಂದ, ಸಿಡುಕು ಸ್ವಭಾವದಿಂದ ಎದುರಿಸಿದರೆ ಸಮಸ್ಯೆಯ ಜಟಿಲತೆ ನೂರುಪಟ್ಟು  ಜಾಸ್ತಿಯಾಗಿ ಸಮಸ್ಯೆಯ ಪರಿಹಾರ ದೂರದ ಮಾತಾಗುತ್ತದೆ.  ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡ ಹಾಗಾಗುತ್ತದೆ. ಯಾರೇ ಆಗಲಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ   ಸಹನೆ ಮತ್ತು  ಸಹಾನುಭೂತಿಯಿಂದ ಪರಿಶೀಲಿಸಿದಾಗ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸಬಹುದು.    ತರ್ಕದಿಂದ ಪರಿಸ್ಥಿತಿಯನ್ನು ಶೋಧಿಸಲು ಹೊರಟರೆ, ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತದೆ.  ಸಮಸ್ಯೆಯ ವಿವರವನ್ನು  ಕೇವಲ ಸಹನೆಯಿಂದ ಕೇಳಿಸಿಕೊಂಡರೆ ಸಾಕು, ಸಮಸ್ಯೆಯು ಅರ್ಧದಷ್ಟು ತೀವ್ರತೆಯನ್ನು ಕಳೆದುಕೊಂಡುಬಿಡುತ್ತದೆ. ಸಮಸ್ಯೆಯನ್ನು ಪರಿಶೀಲಿಸುವ ಭರವಸೆ ಸಿಕ್ಕಿದರೆ ಸಾಕು ತೀವ್ರತೆ ಮತ್ತಷ್ಟು ಕಡಿಮೆಯಾಗುತ್ತದೆ. 

                                ಆದರೆ, ಸಹನೆಗೊಂದು  ಮಿತಿಯಿರಬೇಕಾಗುತ್ತದೆ.  ಹಾಗಿಲ್ಲದೆ ಹೋದರೆ, ಅದೇ ಒಂದು ಬಗೆಯ ದೌರ್ಬಲ್ಯವಾಗಿ ಪರಿಣಮಿಸಿ, ಅನೇಕ ಸಮಸ್ಯೆಗಳನ್ನು ಸೃಷ್ಟಿಸಬಹುದು.  ಏನು ಹೇಳಿದರು ಈತ ಕೇಳಿಸಿಕೊಳ್ಳುತ್ತಾನೆ , ಈತ ಅಸಹಾಯಕ ಎಂಬ ಪರಿಸ್ಥಿತಿ ಬರಬಾರದು. ಹೀಗಾಗದಂತೆ ಇರಲು ಸ್ಪಷ್ಟವಾಗಿ ಕಾಣುವ, ದುರುದ್ದೇಶಪೂರ್ವಕ ವರ್ತನೆ, ದುಶ್ಚಟ, ಮತ್ತು ಮಿಥ್ಯಾರೋಪಗಳನ್ನು ದೃಢವಾಗಿ ಖಂಡಿಸಬೇಕಾಗುತ್ತದೆ. ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಬೇಕಾಗುತ್ತದೆ. ಸಹನೆ ಅರ್ಥಪೂರ್ಣವಾಗಬೇಕಾದರೆ,  ಸಹನೆ  ಸಕಾರಾತ್ಮಕವಾಗಿರ ಬೇಕಾಗುತ್ತದೆ. ಆಗ ಸಹನೆಯೇ  ಪರಿಣಾಮಕಾರಿಯಾದ  ಚಿಕಿತ್ಸೆಯಾಗಬಲ್ಲದು. ಆದರೆ, ಇದು ಕೊನೆ ಅಸ್ತ್ರವಾಗಬೇಕು. 

                               ಕೇವಲ ವಾಕ್ಚಾತುರ್ಯ, ತರ್ಕಶಕ್ತಿ, ವಾದ ಮುಂತಾದವುಗಳು ಸಹನೆಗೆ ವಿರೋಧಗಳೇ. ವಾದದಲ್ಲಿ ನಾವು ಗೆಲ್ಲಬಹುದು, ಆದರೆ ಮನಸ್ಸನ್ನು ಗೆಲ್ಲಲಾಗುವುದಿಲ್ಲ.  ಇದೂ ಕೂಡಾ ಸಹನಾಶಕ್ತಿಗೆ ದೊಡ್ಡ ಸವಾಲಾಗುತ್ತದೆ. ಇಲ್ಲಿ ಗೆದ್ದರೂ  ಗೆದ್ದಂತೆ, ಸೋತರೂ ಸೋತಂತೆ ಕಾಣಿಸಿಕೊಳ್ಳದ ಕಲೆಯೇ ಸಹನಾಶಕ್ತಿ.   ಇದು ಸಹಜವಾಗಿ ಬರಬೇಕು. ನಿರಂತರ ಅಭ್ಯಾಸದಿಂದ ಬರುವಂತಹ ಶಕ್ತಿ. ನಿಷ್ಪಲವಾಗಿ ಮಾಡುವ ಹಠಕ್ಕಿಂತ,  ಹೃದಯ ಪರಿವರ್ತನೆ ಮಾಡುವ ಸಹನೆ ಜೀವನದ ಮಾರ್ಗವನ್ನೇ ಬದಲಿಸಬಲ್ಲದು. ಜೀವನಾನುಭವದಿಂದ ಗಳಿಸುವ ಈ ಆತ್ಮವಿಶ್ವಾಸವು ಎಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನೂ ಕೂಡಾ ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ನೀಡುತ್ತದೆ. 

 

ಪ್ರಕಾಶ್ ಹೆಚ್ ಏನ್
9964827580