August 6, 2012

ಸಿಗರೇಟು ಹೇಳಿದ ಬುದ್ಧಿ



ಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ  ಹಂಚಿಕೊಳ್ಳುತ್ತಿದ್ದೇನೆ. 

ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು.  ಗುರುನಾಥರು ಯಾವುದೊ ಹಾಸ್ಯ ಪ್ರಸಂಗದಲ್ಲಿ ಎಲ್ಲರನ್ನು ನಗೆಕಡಲಿನಲ್ಲಿ ಮುಳುಗಿಸಿದ್ದರು.  ನಂತರದ ಕೆಲವು ನಿಮಿಷದಲ್ಲಿ ಒಬ್ಬ ದಂಪತಿಗಳ ಕಡೆ ತಿರುಗಿ " ಏನು ಬಂದಿದ್ದು? " ಎಂದು ಪ್ರಶ್ನಿಸಿದರು.  ಅಲ್ಲಿದ್ದ ಎಲ್ಲ ಗುರುಬಂಧುಗಳ ಗಮನ ಅವರ ಕಡೆಗೆ ಹೊರಳಿತು. ಆ ದಂಪತಿಯಲ್ಲಿ ಒಬ್ಬರು ಮಧ್ಯ ವಯಸ್ಸಿನ ಹೆಂಗಸರು ಎದ್ದು ನಿಂತು " ನಮ್ಮ ಯಜಮಾನರು ತುಂಬಾ ಸಿಗರೇಟು ಸೇದುತ್ತಾರೆ. ಯಾರು ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ತಾವು ಅವರಿಗೆ ಸರಿಯಾಗಿ ಬುದ್ಧಿ   ಹೇಳಬೇಕು" ಎಂದು ಸ್ವಲ್ಪ ಅಹಂಕಾರ  ಮಿಶ್ರಿತ ದ್ವನಿಯಲ್ಲಿ ಹೇಳಿದರು. " ನಿಮ್ಮ ಯಜಮಾನರು ಸಿಗರೇಟು ಸೇದುತ್ತಾರೆ, ಯಾರು ಹೇಳಿದರು ಕೇಳಿಲ್ಲ. ಇನ್ನು ನಾನು ಹೇಳಿದರೆ ಕೇಳುತ್ತಾರೋ?   ಇರಲಿ.  ಈವರೆಗೆ ನೀವು ಹೇಳಿದ ಎಲ್ಲಾ ಮಾತನ್ನು ಕೇಳಿರುವ ನಿಮ್ಮ ಯೆಜಮಾನರು ಈ ಮಾತನ್ನು ಯಾಕೆ ಕೇಳಿಲ್ಲಾ?" ಎಂದು ಮರು ಪ್ರಶ್ನೆ ಹಾಕಿದರು. " ಯಾವಮಾತು ಕೇಳ್ತಾರೆ? " ಎಂದು ತನ್ನ ಯಜಮಾನರ ಕಡೆಗೆ ಒಮ್ಮೆ ನೋಡಿದರು.  ಆ ಯಜಮಾನರು ಅವಮಾನವಾದವರಂತೆ ತಲೆ ತಗ್ಗಿಸಿ ಬಿಟ್ಟರು.

" ಅಲ್ಲಮ್ಮಾ.....ನೀವು ಹೇಳಿದಿಕ್ಕೆ ತಾನೇ ಅವರ ಅಪ್ಪ ಅಮ್ಮನ್ನ ಊರಲ್ಲೇ ಬಿಟ್ಟು ಬಂದಿರುವುದು. ನೀವು ಹೇಳಿದ್ದಿಕ್ಕೆ ತಾನೇ ಇದ್ದೊಬ್ಬ ತಂಗಿ ಮದುವೆಗೂ ಏನೂ ಸಹಾಯ ಮಾಡದಲೆ ಎಲ್ಲರ ಹತ್ರ ಬೈಸಿಕೊಂಡರು. ನೀವು ಹೇಳಿದ್ದಕ್ಕೆ ತಾನೇ ಊರಿನ ಜಮೀನು  ಮಾರಿ, ನೀವು ಮನೆ ಕಟ್ಟಿಕೊಂಡು ನಿಮ್ಮ ಅತ್ತೆ ಮಾವನ್ನ ಅದೇ ಹಳೆ ಹಂಚಿನ ಮನೆಯಲ್ಲೇ ಉಳಿಸಿದ್ದು. ಇನ್ಯಾವ ಮಾತು ಕೇಳಬೇಕಮ್ಮ?  ಜೀವನ ಪೂರ್ತಿ ನೀವು ಹೇಳಿದ್ದನ್ನ ಚಾಚು ತಪ್ಪದ ಹಾಗೆ ಕೇಳಿಕೊಂಡೆ ಬಂದಿದ್ದಾರೆ........... ಈಗ ಸಿಗರೇಟು ಸೇದೊದುಕ್ಕೆ ನಿಮ್ಮ ಮಾತು ಕೇಳಲಿಲ್ಲ ಅಂತ ಬೇಜಾರೆ?  ಇದೊಂದಾದರೂ ಅವರ ಸ್ವಾತಂತ್ರದಲ್ಲಿ ಮಾಡಲಿ ಬಿಡಿ." ಎಂದು ಹಾಸ್ಯ ಮಿಶ್ರಿತ ದನಿಯಲ್ಲಿ ಹೇಳಿಬಿಟ್ಟರು.   ಆಕೆಗಂತೂ ದಿಕ್ಕೇ ತೋಚಲಿಲ್ಲ.  ಸೆರಗಿನಿಂದ ಬಾಯಿ ಮುಚ್ಚಿಕೊಂಡು ಎದ್ದು ಹೊರಗೆ ನಡೆದೇ ಬಿಟ್ಟರು.   ಆಕೆಯ ಯಜಮಾನರು ಹೊರಡಲು ಎದ್ದಾಗ " ಏನಪ್ಪಾ.......ಸಿಗರೇಟು ಸೇದೋದು ಒಳ್ಳೆದೆನಪ್ಪಾ?  ನಿನಗೆ ಗೊತ್ತಿಲ್ಲವೇ?  ಇರೋ ಅರೋಗ್ಯ ಕೆಡಸಿ ಕೊಂಡರೆ ನಿನ್ನ ಯಾರಯ್ಯ ನೋಡುತ್ತಾರೆ?  ಅವರೂ ಇಲ್ಲ , ಇವರೂ ಇಲ್ಲ ಅನ್ನೋಹಾಗೆ ಅಗ್ತಿಯಲ್ಲಪ್ಪ........ ಸಿಗರೇಟು ಬೇಡ....... ಬಿಟ್ಟುಬಿಡು."  ಎಂದು ತಂದೆ ಮಗನಿಗೆ ಹೇಳುವ ರೀತಿ ಬುದ್ಧಿವಾದ ಹೇಳಿದರು   ಆ ಯಜಮಾನರ ಕಣ್ಣು ತುಂಬಿ ಬಂತು.  ನೇರ ಬಂದು ಗುರುನಾಥರ ಪಾದಕ್ಕೆರಗಿ ಏನೋ ಹೇಳಬೇಕೆಂದು ಇರುವಾಗಲೇ ಗುರುನಾಥರು " ಏನೂ ಹೇಳಬೇಡ, ನಡಿ......." ಎಂದು ಬೆನ್ನು ತಟ್ಟಿದರು.

 ಅಲ್ಲಿ ನೆರೆದ ನಮಗೆಲ್ಲ ಒಂದು ರೀತಿಯ ಹೇಳಲಾಗದ ಸ್ಥಿತಿ.  ಒಂದೆರಡು ನಿಮಿಷದಲ್ಲಿ ಆದ ಈ ಘಟನೆ ಅದೆಷ್ಟು ಪರಿಣಾಮ ಬೀರಿತೆಂದರೆ ಅಲ್ಲಿದ್ದ ಕೆಲವರಿಗೆ ಚಳಿಯಲ್ಲೂ ಬೆವರಿನ ಅನುಭವ.  ಗುರುನಾಥರು ಇನ್ನು ಯಾರನ್ನು ಉದ್ದೇಶಿಸಿ ಏನು ಹೇಳುತ್ತಾರೋ ಎಂಬ ಆತಂಕ ಕೆಲವರಿಗಾದರೆ, ಮತ್ತೆ ಕೆಲವರು ನಮಗೇನೂ ಹೇಳದಿದ್ದರೆ ಸಾಕು  ಎನ್ನುವಂತೆ ಅಲ್ಲಿನ ಸನ್ನಿವೇಶ ಇತ್ತು. 

ಗುರುನಾಥರು ಈ ಘಟನೆಯಲ್ಲಿ ಇಬ್ಬರಿಗೂ ಬುದ್ಧಿವಾದವನ್ನು ಅವರವರ ಮಾತಿನಲ್ಲೇ ಹೇಳಿದ್ದರು.  ಅವರ ಗುಣದೋಷಗಳನ್ನು  ಸರಿಯಾದ ಸಮಯದಲ್ಲಿ  ಎತ್ತಿ ಹಿಡಿದಿದ್ದರು.  ಇದು ಕೇವಲ ಅವರಿಗೆ ಮಾತ್ರ ಹೇಳಿದ ಬುದ್ಧಿವಾದವಾಗಿರದೆ ಎಲ್ಲರಿಗು ನೀಡಿದ ಎಚ್ಚರಿಕೆ ಘಂಟೆಯಾಗಿತ್ತು.  ಇಲ್ಲಿ ಸಿಗರೇಟು ನೆಪಮಾತ್ರವಾಗಿತ್ತು.

6 comments:

  1. ಉಪದೇಶ ಅನ್ನುವುದು ಉಪಾಯವಾಗಿ ಆದೇಶ ನೀಡುವುದು..ಜೋರು ಜಬ್ಬರ್ದಸ್ತಿನಲ್ಲಿ ಮಾತು ನಡೆಯೋಲ್ಲ..ಅವರು ನಡೆದ ಸ್ವಲ್ಪ ಸೊಟ್ಟದಾದ ಹಾದಿಯನ್ನ ನೇರ ಮಾಡಿ ಹೇಳಿದಾಗ ಸಿಗುವ ಸಂದೇಶವೆ ಉಪದೇಶ...ಇಸ್ತ್ರಿ ಮಾಡುವಾಗ ಇಸ್ತ್ರಿ ಪೆಟ್ಟಿಗೆ ನಾನೇ ಬಟ್ಟೆಯನ್ನ ಗರಿ ಗರಿ ಮಾಡಿದ್ದು ಅನ್ನುವುದಲ್ಲ...ಬದಲಿಗೆ ಬಟ್ಟೆಯಲ್ಲಿರುವ ದಾರಗಳು ಸೊಟ್ಟಗಿಡ್ಡ ದಾರಗಳು ಪೆಟ್ಟಿಗೆಯ ಬಿಸಿಗೆ ಕರಗಿ ನೆಟ್ಟಗಾಗುತ್ತವೆ..ಇದೆ ಅಲ್ಲವೇ ಉಪದೇಶ ಮಾಡುವ/ಕೊಡುವ ಸಂದೇಶ..

    ಒಳ್ಳೆಯ ಅನುಭವದ ಕಥಾನಕ ಚಿಕ್ಕಪ್ಪ..ಸೊಗಸಾದ "ಉಪ"ದೇಶ...!!!

    ReplyDelete
    Replies
    1. ಆತ್ಮೀಯ ಶ್ರೀಕಾಂತನಿಗೆ,
      ಗುರುನಾಥರು ತುಂಬಾ ಸರಳವಾಡಿ ವಿನೋದವಾಗಿ ತಿಳಿ ಹೇಳಿದ್ದು ಇದೆ, ಅಷ್ಟೇ ಕಾಠಿಣ್ಯ ವಾಗಿ ಹೇಳಿದ್ದು ಇದೆ. ಯಾರುಯಾರಿಗೆ ಯಾವರೀತಿಯೋ ಹಾಗೆ ಹೇಳುತ್ತಿದ್ದರು. ನಿನ್ನ ಅಭಿಮತಕ್ಕೆ ಧನ್ಯವಾದಗಳು.

      Delete
  2. ಮನಸ್ಸನ್ನು ಬೆತ್ತಲು ಮಾಡಲು ಒಬ್ಬ ಗುರುವಿಂದಲ್ಲದೆ ಮತ್ತ್ಯಾರಿಂದ ಸಾಧ್ಯ!

    ಗುರುವಿನ ಮುಂದೆ ಒಮ್ಮೆ ಬೆತ್ತಲಾದರೆ ಮತ್ತೆಂದೂ ಯಾವ "ತೊಡಿಗೆಯೂ" ಬೇಕಾಗದು.

    ReplyDelete
    Replies
    1. ಆತ್ಮೀಯ ರಜನೀಶ,
      ನಿನ್ನ ಸುಂದರವಾದ ಮಾತುಗಳು ಉನ್ನತವಾದ ಆದರ್ಶಗಳನ್ನು ಹೇಳಿವೆ. ಧನ್ಯವಾದಗಳು.

      Delete
  3. k manjunath kmanjunathmce@rediffmail.com
    5:15 PM (2 hours ago)

    to me
    Dear Prakash

    You have a powerful way of telling things especially related to Sri Guru. Your narration

    carries that very thrill Sri Guru created when He said it. What escapes Him the All pervading?

    KM

    ReplyDelete
    Replies
    1. Dear K M,
      Thank you very much for the appreciation

      Delete