August 24, 2012

ಸಾಧನೆ ............ಒಂದಷ್ಟು ಹರಟೆ.



ಜೀವನದಲ್ಲಿ ಪ್ರಗತಿ ಸಾಧಿಸುವುದು ಕೆಲವು ದಿನಗಳ ಪ್ರಯತ್ನಮಾತ್ರದಿಂದ ಸಾಧ್ಯವಿಲ್ಲ.    ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇರಬೇಕು. ಆಗ ಸಾಧನೆ  ಒಂದು ಹಂತಕ್ಕೆ ಮುಟ್ಟುತ್ತದೆ. ನಿತ್ಯದಲ್ಲಿ ನಾವು ಮಾಡುವ ಪ್ರತಿ ಕೆಲಸವೂ ಒಂದು ರೀತಿಯಲ್ಲಿ ಸಾಧನೆಯೇ!  ಪ್ರತಿ ದಿನವು ನಾವು ಶ್ರಮಿಸಲೇ ಬೇಕು. ಏಕೆಂದರೆ,  ಯಾವುದೇ  ಸಾಧನೆಯು   ನಮ್ಮಲ್ಲಿ ಪೂರ್ಣಕಾಲ ಹಾಗೆಯೇ ಉಳಿಯುವುದಿಲ್ಲ. ಉದಾಹರೆಣೆಗೆ, ನಿತ್ಯದ ಬದುಕಿನಲ್ಲಿ,   ಸ್ನಾನ ಮಾಡಿದ ಕೆಲವೇ ಗಂಟೆಗಳಲ್ಲಿ ನಮ್ಮ ದೇಹಕ್ಕೆ ಕೊಳೆ  ಬಂದು ಪುನಃ  ಸೇರುತ್ತದೆ, ಊಟದ ನಂತರ ಹಸಿವು ಕಾಣಿಸಿಕೊಳ್ಳುತ್ತದೆ. ಇನ್ನು ಜೀವನದಲ್ಲಿ  ಗಳಿಸಿದ ಹಣ ಕರಗಿ ಪುನಃ ಗಳಿಸಬೇಕಾದ ಅನಿವಾರ್ಯತೆ ಕಾಡುತ್ತದೆ.  ಅಂತೆಯೇ, ರೂಪ, ಯೌವನ, ಆಸ್ತಿ ಅಂತಸ್ತು, ಯಶಸ್ಸು,  ಇತ್ಯಾದಿ  ಎಲ್ಲವು ಬದಲಾಗುತ್ತಲೇ ಇರುತ್ತದೆ, ಇದು ಪ್ರಕೃತಿಯ ನಿಯಮವು ಹೌದು.   ಬದಲಾಗುವ ಪ್ರತಿಯೊಂದನ್ನು  ಆಯಾಯ ಸಮಯದಲ್ಲಿ  ಉಳಿಸಿ ಬೆಳೆಸಬೇಕಾದರೆ  ಶ್ರಮಸಾಧನೆ  ಅಗತ್ಯವಾಗುತ್ತದೆ.  ಈ ಪ್ರಗತಿಯೇ ಸಾಧನೆಯ ಯಶಸ್ಸು.


 ಹೀಗೆಯೇ, ಪ್ರಗತಿಯ ಸಾಧನೆಯ  ಹಿಂದೆ ಸೋಲಿನ  ಭಯ  ಇದೆ. ಪ್ರತಿ ಸೋಲನ್ನು ಗೆಲ್ಲಲು ಸಾಧನೆಯ ಪ್ರಯತ್ನ ಜಾರಿಯಲ್ಲಿ ಇಡಲೇಬೇಕು. ನಿರಂತರ ಹೋರಾಟ ಮಾಡಬೇಕಾಗುತ್ತದೆ. ತಾಳ್ಮೆ, ಸಂಯಮ ಅತ್ಯಂತ ಅಗತ್ಯ.  ನಾವು ಎಷ್ಟೇ ಲೆಕ್ಕಾಚಾರ ಹಾಕಿ, ಸಂಯಮದಿಂದ ಕಾರ್ಯವನ್ನು ನಿಭಾಯಿಸಿದರು,  ಇನ್ನು ಎಷ್ಟೋ ಭಾಗ ಸಂಪೂರ್ಣ ಆಗದೆ ಉಳಿದು ಹೋಗಿರುತ್ತದೆ.  ಸಾಧನೆಯಲ್ಲಿ ಪ್ರಗತಿಯ ಹಾದಿ ಸ್ವಲ್ಪ ದೂರವೇ ಉಳಿದಿದೆ ಎಂದು ಭಾಸವಾದರೂ, ಅದು ತುಂಬಾ ದೂರದಲ್ಲೇ ಇರುತ್ತದೆ.   ಸಾಧಕರು ನಿರಾಶರಾದರೆ ಪ್ರಗತಿ ಮತ್ತಷ್ಟು ಕುಂಟಿತವಾಗುತ್ತದೆ.  ಪೂರ್ಣ ಸಾಧನೆ ಅಷ್ಟು ಸುಲಭವಲ್ಲ.  

ಕೆಲವರು ಆರಂಭ ಶೂರತ್ವ ಮಾಡಿ,  ಹಲವು ದಿನ ಪ್ರಯತ್ನ ಮಾಡಿ ಗಳಿಸಿದ ಒಂದು ಚಿಕ್ಕ ಅಂಶವನ್ನೇ ಸಾಧನೆಯ ಪ್ರಗತಿಯೆಂದು ಕೊಚ್ಚಿಕೊಳ್ಳುವ ಮಂದಿಗೆ  ಸಾಧನೆ  ಎಂದರೆ ಏನೆಂದೇ ಗೊತ್ತಿರುವುದಿಲ್ಲ. ಇನ್ನು ಕೆಲವರು ಬದುಕಿನಲ್ಲಿ  ನಿರುತ್ಸಾಹದಿಂದ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಲ ವ್ಯಯ ಮಾಡುವವರಿಗೆ ಏನೂ  ಬೇಕಾಗಿಲ್ಲ.

ನಿತ್ಯದ ಬದುಕಿನಲ್ಲಿ ಬರುವ ಕಷ್ಟಗಳು ಸಾಧನೆಯ  ಹಾದಿಯಲ್ಲಿ ಒಡ್ಡುವ ಪರೀಕ್ಷೆಗಳು.  ಸಹನೆ ಸಂಯಮವನ್ನು ಕಳೆದು ಕೊಳ್ಳದೆ ನಿರಂತರ ಪ್ರಯತ್ನಶೀಲನಾಗಿರುವುದು ಒಂದು ನಿತ್ಯ ಕರ್ಮವೇ ಆಗಿರುತ್ತದೆ.   ಇಂತಹ ಪರೀಕ್ಷೆಗಳನ್ನು ದಿನ ನಿತ್ಯದ ಬದುಕಿನಲ್ಲಿ ಸೈರಿಸಿಕೊಂಡು, ಪ್ರಗತಿಯ ಹಾದಿಯಲ್ಲಿ ನಡೆಯುವುದು ಒಂದು ರೀತಿಯ ತಪಸ್ಸು. ನಿತ್ಯದ ಬದುಕನ್ನು ಸಂಬಾಳಿಸಿಕೊಂಡು, ಕಷ್ಟ ನಿಷ್ತೂರಗಳನ್ನು ಸಹಿಸಿಕೊಂಡು ಸಾಧನೆಗೆ ತೊಡಗಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗೆಂದು ಬಿಡಲಾಗುವುದೂ  ಇಲ್ಲ.

ಇದನ್ನೇ ತಿಮ್ಮ ಗುರು ಹೇಳುತ್ತಾರೆ " ಸಹನೆಯೆಂದರೆ ಕೈಕಟ್ಟಿ ಕೂರುವುದಲ್ಲ.  ಪ್ರಯತ್ನವೆಂದರೆ ಆವೇಶದ ಬಡಿದಾಟವಲ್ಲ.  ಮನಸ್ಸಿನೊಳಗಡೆ ದ್ವೇಷ ಉದ್ವೇಗಗಳು ಇರದಿರುವುದೇ ಸಹನೆ.  ಬುದ್ಧಿಯ ಒಳಗಡೆ ಉದಾಸೀನತೆ ಜಡತೆಗಳು ಸೇರದೆ, ವಿವೇಚನೆ ಪ್ರೇರಣೆಗಳು  ನಡೆಯುತ್ತಾ, ಹೊರಗಡೆ ಕಾರ್ಯ ಪರಂಪರೆಯಾಗುವುದೇ ಪ್ರಯತ್ನ. ಇಂತಹ ಪುರುಷ ಪ್ರಯತ್ನವೆಂಬುವುದು ಒಂದು ಬಗೆಯ ಆತ್ಮ ಶಿಕ್ಷಣ."

ದಿನ ನಿತ್ಯದ  ಬದುಕಿನಲ್ಲಿ  ಸಾಮಾನ್ಯವಾಗಿ ಇರುವ  ಅತಿಯಾಸೆ, ಉದ್ವೇಗ, ಆತುರ, ಆವೇಶ,  ಆಲಸ್ಯ ಇವುಗಳ  ಮಧ್ಯೆಯಲ್ಲೂ ಸಾಧಕನು    ತಾಳ್ಮೆ, ಸಂಯಮ, ಶಿಸ್ತು, ನಂಬಿಕೆ ಮತ್ತು ಪ್ರೀತಿ ವಿಶ್ವಾಸವನ್ನು   ರೂಡಿಸಿಕೊಂಡು ಪ್ರಯತ್ನಶೀಲನಾದರೆ, ಬದುಕಿನಲ್ಲಿ ಆತ್ಮಶಕ್ತಿ  ಸಾಧಕನ ಅರಿವಿಗೆ ಬಾರದಂತೆಯೇ  ಲಭ್ಯವಾಗಿಬಿಡುತ್ತದೆ. ಆಗ ಬದುಕಿನಲ್ಲಿ ಸಾಧಕ, ಶಾಂತಿ ಸಮಾಧಾನಗಳ  ಉನ್ನತ ಸ್ತಾನಕ್ಕೆ ಏರಿಬಿಟ್ಟಿರುತ್ತಾನೆ. ಇದು ಬದುಕಿನಲ್ಲಿ ಗಳಿಸಬಹುದಾದ ಉನ್ನತ ಸಾಧನೆ.

ನೀವೇನು ಹೇಳುತ್ತಿರಿ?  

4 comments:

  1. ...
    ಗಟ್ಟಿತನ ಗರಡಿಫಲ-ಮಂಕುತಿಮ್ಮ||

    ReplyDelete
    Replies
    1. ಸರಿಯಾದ ಉತ್ತರ ರಜನೀಶ

      Delete
  2. ಸಾಧನೆ : ಜೀವನವೇ ಒಂದು ಸಾಧನೆ. ಯಾರೋ ಹೇಳಿರುವಂತೆ ಜೀವನ ಒಂದು ಸುಂದರ ಚಿತ್ರ ಆದರೆ ಇದರಲ್ಲಿ ಅಳಿಸಲು ರಬ್ಬರ್ ಇಲ್ಲ. ಏನೇ ಮಾಡಿದರು ಅದು ಭಗವಂತನಿಗೆ ಸಮರ್ಪಣೆ ಮಾಡಿದಾಗ ಸಾಧನೆ ಇಲ್ಲವಾದಲ್ಲಿ ಕರ್ಮ (ಪ್ರಾರಬ್ಧ). ಇದು ನನ್ನ ಅಭಿಪ್ರಾಯ

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸುಬ್ರಮಣ್ಯ

      Delete