" ನನಗೆ ಧರ್ಮ ಎಂದರೇನು ಗೊತ್ತು . ಆದರೂ ನಾನೇನು ಮಾಡಲಿ? ನನಗೆ ಪಾಲಿಸಲು ಆಗುತ್ತಿಲ್ಲ, ನನಗೆ ಅಧರ್ಮ ಯಾವುದೆಂದೂ ಗೊತ್ತು. ಆದರೆ, ಅದನ್ನು ಬಿಡಲಾಗುತ್ತಿಲ್ಲ. ಇದು ನನ್ನ ಅನಿವಾರ್ಯ " ಎಂದು ಶ್ರೀ ಕೃಷ್ಣನಿಗೆ ದುರ್ಯೋದನ ದೈರ್ಯದಿಂದ ಹೇಳುತ್ತಾನೆ.
ಈ ಮಾತು ಕೇಳಿದ ನಂತರ ಶ್ರೀ ಕೃಷ್ಣ ಹೇಳುತ್ತಾನೆ. " ಮನುಷ್ಯ, ತನ್ನ ಅರಿವಿಗೆ ಬಾರದಂತೆ ತಪ್ಪು ಘಟಿಸಿದರೆ, ಅದಕ್ಕೆ ಕ್ಷಮೆಯುಂಟು. ತಾನು ಮಾಡುತ್ತಿರುವುದು ತಪ್ಪೆಂದು ತಿಳಿದೂ ಮಾಡುವುದು ಪಾಪ."
ಹೌದು, ನಾವು ದಿನನಿತ್ಯದಲ್ಲಿ ಮಾಡುವ ಅನೇಕ ಕೆಲಸಗಳಲ್ಲಿ ಈ ರೀತಿಯ ತಪ್ಪುಗಳನ್ನು ಮಾಡುತ್ತಲೇ ಇರುತ್ತವೆ. ಎಲ್ಲರೂ ತಪ್ಪು ಮಾಡುತ್ತಾರೆ, ತಪ್ಪು ಆಗುವುದು ಸಹಜ ಎಂದು ಎನಿಸಿದರು ತಪ್ಪು ಹೇಗಾಯಿತು? ಎಂಬುದು ಮುಖ್ಯವಾಗುತ್ತದೆ. ನಾವು ಮಾಡುವ ಕೆಲಸದಲ್ಲಿ ತಪ್ಪಾದರೆ, ಅದು ನಮ್ಮ ಅಜಾಗರೂಕತೆಯಿಂದ ಆದದ್ದೋ? ಅಥವಾ ನಮ್ಮ ಅರಿವಿಗೆ ಬಾರದ ರೀತಿಯಲ್ಲಿ ಸಂಭವಿಸಿದ್ದೋ? ಅಥವಾ ನಮ್ಮ ಅರಿವಿಗೆ ಬಂದೂ ಬೇಕಂತಲೇ ಮಾಡಿದ್ದೋ? ಹೀಗೆ, ನಾವು ಮಾಡಿದ ಕೆಲಸ, ಅದರ ಹಿಂದೆ ಇರುವ ಉದ್ದೇಶ ಮತ್ತು ಪರಿಣಾಮಗಳಲ್ಲಿ ಅಡಗಿರುತ್ತದೆ. ನಾವು ಈ ಅಂಶಗಳನ್ನು ಗಮನಿಸಬೇಕಾಗುತ್ತದೆ. ಗೊತ್ತಾಗದೆ ಆದ ತಪ್ಪು ಸಹಜವೆಂದು ಅನ್ನಿಸಿಕೊಂಡರೆ, ಗೊತ್ತಿದ್ದೂ ಮಾಡುವ ಅಸಹಜ ತಪ್ಪು ಪಾಪವಾಗುತ್ತದೆ.
ಹಲವಾರು ದಿನನಿತ್ಯದ ನಮ್ಮಿಂದ ಕೆಲಸಗಳು ನಡೆಯುತ್ತದೆ. ಕೆಲವೊಂದು ಕೆಲಸ ನಮ್ಮ ಅನುಭವದಲ್ಲಿ, ಕೆಲವೊಂದು ಅಭ್ಯಾಸದಲ್ಲಿ, ಕೆಲವೊಂದು ಯಾಂತ್ರಿಕವಾಗಿ ನಡೆಯುತ್ತದೆ. ಯಾವುದೇ ಕೆಲಸವಾಗ ಬೇಕಾದರೂ ನಮ್ಮ ಒಳ ಮನಸ್ಸು ಮೊದಲು ಕೆಲಸ ಮಾಡುತ್ತದೆ. ನಮ್ಮ ಒಳ ಮನಸ್ಸು ಪ್ರತಿ ತಪ್ಪು ಹೆಜ್ಜೆ ಇಡುವಾಗಲು ಎಚ್ಚರಿಸುತ್ತದೆ. ವಿರೋಧ ಒಡ್ಡುತ್ತದೆ. ಆದರೆ, ನಾವು ಒಳ ಮನಸ್ಸಿನ ಮಾತು ಕೇಳುವುದೇ ಇಲ್ಲ. ಯಾರು ಒಳ ಮನಸ್ಸು ಹೇಳಿದ ಮಾತನ್ನು ಕೇಳುತ್ತಾರೋ, ಅಥವಾ ಮತ್ತೊಮ್ಮೆ ಈ ಮಾತನ್ನು ಪರಾಮರ್ಶೆ ಮಾಡುತ್ತಾರೋ ಅಂತಹವರಿಂದ ತಪ್ಪುಗಳು ಕಡಿಮೆ ಸಂಭವಿಸುತ್ತದೆ. " Unimplemented knowledge is a burden" ಎನ್ನುತ್ತಾನೆ ಒಬ್ಬ ಸಾಹಿತಿ. ನಿಜ, ಪಾಲಿಸಲು ಸಾಧ್ಯವಾಗದ ಜ್ಞಾನ, ಕೆಲಸಕ್ಕೆ ಬಾರದ ಒಂದು ಹೊರೆಯೇ ಸರಿ.
ಆದರೆ, ಸಾಮಾನ್ಯರು ಇದನ್ನು ಒಪ್ಪುವುದಿಲ್ಲ. ಅವರ ವಾದವೇ ಬೇರೆ. " ಎಲ್ಲವನ್ನು ಎಲ್ಲಿ ಪಾಲಿಸಲು ಸಾಧ್ಯವಾಗುತ್ತದೆ? ಅದೆಲ್ಲ ಪುಸ್ತಕದಲ್ಲಿ ಓದಲು, ಉಪನ್ಯಾಸದಲ್ಲಿ ಕೇಳಲು ಚನ್ನಾಗಿರುತ್ತದೆ. ಮಾಡಲು ಸಾಧ್ಯವಾಗೋಲ್ಲ." ಎಂದು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. "ಈ ಸಮಾಜದಲ್ಲಿ ಎಲ್ಲರು ಬದುಕುವ ಹಾಗೆ ಬದುಕಬೇಕು, ನಮ್ಮದೇನು ವಿಶೇಷ. ಇಲ್ಲದ್ದಿಕ್ಕೆಲ್ಲ ತಲೆ ಸುಮ್ಮನೆ ಕೆಡಿಸಿಕೊಳ್ಳಬಾರದು." ಎನ್ನುತ್ತಾರೆ ಮತ್ತೆ ಕೆಲವರು. " ನೋಡಿ, ಅವರು ಅದೆಷ್ಟೋ ಜನರಿಗೆ ಮೋಸ ಮಾಡಿದರು ಅವರು ಚನ್ನಾಗೇ ಇದಾರೆ. ಅವರಿಗೆ ಯಾವ ಪಾಪನೂ ಸುತ್ತಿಕೊಂಡಿಲ್ಲ. ನಮಗೆ ಮಾತ್ರ ಪಾಪನಾ?" ಎಂದೂ ಪ್ರಶ್ನಿಸುತ್ತಾರೆ. ಹೀಗೆ ತಮ್ಮಿಂದಾಗದ, ಮತ್ತು ಮಾಡಲಾಗದುದಕ್ಕೆ ಒಂದು ನೆಪ ಹೇಳುತ್ತಾರೆ,
ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ, ಎಲ್ಲರ ದೇಹವೂ ಆರೋಗ್ಯದ ವಿಚಾರದಲ್ಲಿ ಬಂದೇ ಸಮನಾಗಿರಲು ಸಾಧ್ಯವಿಲ್ಲ. ವಂಶವಾಹಿನಿಯಲ್ಲಿ ಬಂದಿರುವ ಹಲವಾರು ಕೊರತೆಗಳು ಮತ್ತು ಪುಷ್ಟಿಗಳು ನಮ್ಮ ದೇಹದಲ್ಲಿ ಅಡಕವಾಗಿದೆ. ಯಾರೂ ನಾನು perfect ಅಂತ ಹೇಳಲು ಸಾಧ್ಯವಿಲ್ಲ. ಕಾರಣ, ಭಗವಂತನ ಸೃಷ್ಟಿಯೇ ವೈವಿಧ್ಯಮಯ. ಆದರೆ ಇಲ್ಲಿ ತಪ್ಪಾಗುವುದು ಏನು? ಅಂದರೆ, ನಮ್ಮ ದೇಹ ವನ್ನು ಅಗತ್ಯಕಿಂತ ಹೆಚ್ಚು ದುಡಿಸಿಕೊಂಡು, ದೇಹದ ಕಡೆಗೆ ಗಮನವನ್ನೇ ಕೊಡದೆ , ಆರೋಗ್ಯವನ್ನು ಕಡೆಗಣಿಸುವುದು. ನಾವು ಹೆಚ್ಚು ದುಡಿಸಿ ಕೊಳ್ಳುವುದನ್ನು ದೇಹ ಎಂದಿಗೂ ಬೇಡ ಅನ್ನದು, ದುಡಿಮೆಗೆ ತನ್ನನ್ನು ತಾನು ಒಗ್ಗಿಸಿಕೊಳ್ಳತ್ತದೆ. ಆದರೆ, ದುಡಿಸಿಕೊಂಡಿದ್ದಕ್ಕೆ ಸರಿಯಾಗಿ ವಿಶ್ರಾಂತಿ, ಆಹಾರ ಮತ್ತು ವಿಹಾರವನ್ನು ಬಯಸುತ್ತದೆ.
ನಾವು ನಮ್ಮ ಕಾರನ್ನು ಅತ್ಯಂತ ಜಾಗರೂಕತೆಯಿಂದ ಬಳಸುತ್ತೇವೆ. ನಮ್ಮ ಆಭರಣಗಳನ್ನು ಜೋಪಾನ ಮಾಡುತ್ತೇವೆ. ನಮ್ಮ ಕಂಪ್ಯೂಟರ್ ಗಳಿಗೆ ವೈರಸ್ ಬಾರದಂತೆ ಏನೆಲ್ಲಾ software ಅಳವಡಿಸುತ್ತೇವೆ. ಒಂದು ಸೈಟು, ಮನೆ ಖರೀದಿ ಮಾಡುವ ಸಮಯದಲ್ಲಿ ಅದೆಷ್ಟು ಜಾಗ್ರತೆ ವಹಿಸಿ ವಿಚಾರಮಾಡಿ ಖರೀದಿ ಸುತ್ತೇವೆ. ಆರೋಗ್ಯದ ವಿಚಾರದಲ್ಲಿ ಮಾತ್ರ ಸ್ವಲ್ಪ ಮಂದಗತಿ ವಹಿಸುತ್ತೇವೆ. ಯಾವುದೇ ದೇಹದ ಸಮಸ್ಯೆಯಾದರೂ ಅದು ಮುನ್ಸೂಚನೆ ಕೊಟ್ಟೆ ಕೊಡುತ್ತದೆ. ನಮ್ಮ ಒಳಮನಸ್ಸು ಇಲ್ಲೂ ಎಚ್ಚರಿಸುತ್ತದೆ. ಆದರೆ ನಾವು ಕಡೆಗಣಿಸುತ್ತೇವೆ.ಈ ವಿಚಾರದಲ್ಲಿ ಕಡೆಗಣಿಸಿದರೆ ಆಗ ದೇಹ ಹೆಚ್ಚು ದಣಿಯುತ್ತದೆ. ದಣಿದ ದೇಹ ತನ್ನ ಕಾರ್ಯ ಕ್ಷಮತೆಯನ್ನು ಕಡಿಮೆಗೊಳಿಸುತ್ತ ಸಾಗಿ ಒಂದು ಸಲ ನನ್ನಿಂದಾಗದು ಎಂದು ನಿಂತು ಬಿಡುತ್ತದೆ. ನಾವು ಒಂದು ವಿಚಾರವನ್ನು ಗಮನಿಸಬೇಕು, ನಾವು ಆರೋಗ್ಯವಾಗಿ ಇರಬಹುದೇ ವಿನಃ ಆರೋಗ್ಯವನ್ನು ಖರೀದಿಸಲಾಗುವುದಿಲ್ಲ. ನಿಯಮಿತ ಅಭ್ಯಾಸಗಳಿಂದ ಆರೋಗ್ಯವನ್ನು ಹೊಂದಬಹುದು.
ಧೂಮಪಾನ, ಮಧ್ಯಪಾನ, ಜರದಾ, ಹೊಗೆ ಸೋಪ್ಪು ಸೇವನೆ, ಇತ್ಯಾದಿ ಇತ್ಯಾದಿಗಳು ಆರೋಗ್ಯಕ್ಕೆ ಹಾನಿ ಕಾರಕ ಎಂದು ನಮಗೆ ಗೊತ್ತಿದ್ದರು, ನಾವು ಅದಕ್ಕೆ ಅಂಟಿಕೊಂಡು ದಾಸರಾಗಿದ್ದೇವೆ. ಸಿಟ್ಟು, ಸೆಡವು, ಅಹಂಕಾರ, ಮತ್ಸರ ಇತ್ಯಾದಿಗಳು ನಮ್ಮನ್ನು ಸುಡುತ್ತವೆ ಎಂಬ ಅರಿವು ನಮಗೆ ಇದ್ದರೂ ನಾವು ಈ ಬಗ್ಗೆ ತಲೆಕೆದಸಿಕೊಂಡಿಲ್ಲ. ವಿನಾ ಕಾರಣ ನಮ್ಮ ದೇಹವನ್ನು ಹಿಂಸಿಸುತ್ತಲೇ ಬಂದಿರುತ್ತೇವೆ. ನಮ್ಮ ದೇಹದ ರಚನೆಯನ್ನು ಭಗವಂತ ಅದೆಷ್ಟು ಚನ್ನಾಗಿ ಮಾಡಿದ್ದಾನೆಂದರೆ, ಏನೆಲ್ಲವನ್ನು ಸುಮ್ಮನೆ ಸಹಿಸುತ್ತಲೇ ಇರುತ್ತದೆ. ಇನ್ನು ಸಾಧ್ಯವೇ ಇಲ್ಲ ಎಂದಾಗ ದೇಹ ಪ್ರತಿರೋಧ ಮಾಡುತ್ತದೆ. ಅಲ್ಲಿಯತನಕ ನಾವು ನಮ್ಮ ದೇಹದ ಬಗ್ಗೆ ತಲೆ ಕೆಡೆಸಿಕೊಳ್ಳುವುದಿಲ್ಲ. ಇದು ಖಂಡಿತಾ ತಪ್ಪಲ್ಲವೇ?
ಗುಜರಿಗೆ ಹಾಕುವ ತನಕ ವಾಹನ ಓಡಿಸಬಾರದು. ಆಗ್ಗಿಂದ್ದಾಗ್ಗೆ over-oil ಮಾಡಿಸುತ್ತ ವಾಹನವನ್ನು ಸುಸ್ಥಿತಿಯಲ್ಲಿ ಇಟ್ಟರೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಹೀಗೆಯೇ ನಮ್ಮ ದೇಹ ಕೊಡ!. ಇದನ್ನು ಸರಿಯಾಗಿ ಗಮನಿಸಿ, ಬೇಕಾದ ಉಪಚಾರ ಮತ್ತು ವಿಶ್ರಾಂತಿ ಕೊಟ್ಟಲ್ಲಿ ಈ ದೇಹವೂ ಹೆಚ್ಚು ಕಾಲ ಆರೋಗ್ಯದಿಂದ ಇರಬಲ್ಲದು. " ಜೀವೇಮ ಶರದಃ ಶತಮ್ ಶ್ರುನ್ಯಾಮ ಶರದಃ ಶತಂ ಪ್ರಬ್ರವಾಮ ಶರದಃ ಶತಮ್ " ನೂರು ಕಾಲ ಆರೋಗ್ಯದಿಂದ, ಸಂತೋಷದಿಂದ, ಸೇವೆಯಿಂದ ಬಾಳಬೇಕಾದರೆ ನಮ್ಮ ದೇಹ ಸುಸ್ಥಿಯಲ್ಲಿ ಇದ್ದಾಗ ಮಾತ್ರ ಸಾಧ್ಯ. ಇದಕ್ಕೆ ನಮ್ಮ ದೇಹವನ್ನು ಕಾಪಾಡಬೇಕಲ್ಲವೇ ?
--
ನೀವು ಏನಂತೀರಿ?
--