July 26, 2012


ರಾಗ ಮತ್ತು ದ್ವೇಷ .................ಒಂದಷ್ಟು ಚಿಂತನೆ 

ಶ್ರೀ ರಾಮಕೃಷ್ಣರು ಹೇಳುತ್ತಾರೆ " ಯಾರನ್ನೂ, ಯಾವುದನ್ನೂ ದ್ವೇಷಿಸಬೇಡ.  ಏಕೆಂದರೆ ಪ್ರೀತಿಸುವುದಕಿಂತ ಬೇಗನೆ ದ್ವೇಷಿಸುವುದರ ಬಲೆಗೆ ಬೀಳುತ್ತಿಯ.  ಜೋಕೆ."

ನಮಗೆ ಪ್ರಿಯವಾದುದನ್ನು ಪ್ರೀತಿಸುತ್ತೇವೆ, ಅಪ್ರಿಯವಾದುದನ್ನು ಕಂಡರೆ ಆಗುವುದಿಲ್ಲ, ಆದರೆ, ಅಪ್ರಿಯವಾದದ್ದು  ಪುನಃ ನಮ್ಮಲ್ಲಿ ಬಂದಾಗ ದ್ವೇಷಿಸುತ್ತೇವೆ.  ಒಂದು ರಾಗ, ಮತ್ತೊಂದು ದ್ವೇಷ.  ಇವೆರಡೂ ನಮ್ಮನ್ನು ಕಟ್ಟಿಹಾಕುತ್ತವೆ..  ನಾವು ದ್ವೇಷಿಸುವ ವಸ್ತು ಅಥವಾ ವಿಚಾರ, ನಮ್ಮ ಮನಸಿನ ಮುಂದೆ ಬೇಡ ಬೇಡ ಎಂದುಕೊಂಡರು ಹಾಜರಾಗಿಬಿಡುತ್ತದೆ.  ಆಗ ನಾವು ಅಪ್ರಿಯವಾದ ಭಾವನೆಯಿಂದಲೇ ಚಿಂತಿಸುತ್ತೇವೆ. ಇದು ನಮ್ಮ ಮನಸ್ಸಿನ ಮೇಲೆ ಗಾಢವಾದ   ಕೆಟ್ಟ  ಪ್ರಭಾವನ್ನೇ   ಬೀರುತ್ತದೆ.  ಇದು ನಮಗೆ ವಾಸ್ತವದಲ್ಲಿ ಬೇಡ. ಆದರೂ ನಮ್ಮನ್ನು ಅದು ಬಿಡುವುದೇ ಇಲ್ಲ. ಇದು ನಮ್ಮ ಮನಸನ್ನು ಕಲುಷಿತಗೊಳಿಸಿ ಬಿಡುತ್ತದೆ.    ಬಿಡಲಾಗದೆ, ಕಟ್ಟಿ ಕೊಳ್ಳಲಾಗದೆ ಒದ್ದಾಡುತ್ತೇವೆ.  ಆಗಲೇ ಮನಸ್ಥಿತಿ ಮತ್ತು ದೇಹಸ್ಥಿತಿ ಎರಡೂ ಹಾಳಾಗುತ್ತದೆ. 

ಪ್ರೀತಿಯ ವಿಚಾರ ಇನ್ನೊಂದು ರೀತಿ. ಸಾಧಾರಣವಾಗಿ ನಾವು ಅಂದುಕೊಂಡಿರುವ ಪ್ರೀತಿ ಸ್ವಾರ್ಥವಿಲ್ಲದೆ  ಇರಲು ಸಾಧ್ಯವಿಲ್ಲ.  ಈ ಪ್ರೀತಿಯು ಹತ್ತಿರ ಇದ್ದಾಗ ಏನೋ ಒಂದು ರೀತಿಯ ಸುಖದ ಅನುಭವ. ಏನೋ ಒಂದು ರೀತಿಯ ಸಮಾಧಾನ.  ಇದು ಸ್ವಲ್ಪ ದೂರಾದರೆ ಅಥವಾ ಇದು  ಬೇರೆಯವರಲ್ಲಿ ಹಂಚಿಕೊಳ್ಳುವ ಪ್ರಸಂಗ ಏನಾದರು ಬಂದರೆ ಮನಸ್ಸು ಚಂಚಲವಾಗುತ್ತದೆ . ಇಲ್ಲ ಸಲ್ಲದ ಯೋಚನೆಗಳು ಮುತ್ತಿಕೊಂಡುಬಿದುತ್ತದೆ .    ಆಗ ಈ ಪ್ರೀತಿಯೇ   ಸಂಕಟವಾಗುತ್ತದೆ .   ಪ್ರೀತಿಯೇ  ಒಂದು ರೀತಿ ಚಿಂತೆಯಾಗುತ್ತದೆ.   ಆಗ ಅತ್ಯಂತ ಪ್ರಿಯವೆನಿಸಿದ್ದು ಈಗ ಕಾಟ ಕೊಡಲು ಪ್ರಾರಂಭಿಸುತ್ತದೆ.  ಆರೋಗ್ಯದಲ್ಲಿ ಏರುಪೇರು ಆಗುತ್ತದೆ.

ಪ್ರೀತಿ ಮತ್ತು ದ್ವೇಷ ಇವೆರಡೂ ಬಂಧನಗಳೇ.  ಒಂದು ಪ್ರಿಯವಾದ ಬಂಧನ, ಮತ್ತೊಂದು ಅಪ್ರಿಯವಾದ ಬಂಧನ. ಪ್ರೀತಿಸಿದರೆ, ನಾವು ಪ್ರೀತಿಸುವ ವಸ್ತು ಅಥವಾ ವ್ಯಕ್ತಿಗೆ  ದಾಸರಾಗುತ್ತೇವೆ.   ದ್ವೇಷಿಸಿದರೆ, ಅಪ್ರಿಯವಾದ ಆ ವಸ್ತು ಅಥವಾ ವ್ಯಕ್ತಿ ಯ ವಿಚಾರ ಪಿಶಾಚಿಯಂತೆ ಬೇಡವೆಂದರೂ ನಮ್ಮನ್ನು ಕಾಡುತ್ತವೆ.  ನಾವು ಇವುಗಳಿಂದ ಓಡಿಹೋಗಲು ಆಗುವುದಿಲ್ಲ. ಎಲ್ಲಿಗೆ ಹೋದರು ಅದು ನೆರಳಿನಂತೆ ಬೆನ್ನು ಬೀಳುತ್ತವೆ. ಮತ್ತೇನು ಮಾಡಬೇಕು?      

 ಶ್ರೀ ರಾಮಕೃಷ್ಣರು ಹೇಳುತ್ತಾರೆ " ಇಂತಹ ಸ್ಥಿತಿಯಿಂದ ಪಾರಾಗಬೇಕಾದರೆ ಅತ್ತ ಕಡೆ ಗಮನ ಹರಿಸುವುದನ್ನು ಬಿಡು. ಅದರ ಮೇಲೆ ಅನಾದರವನ್ನು ಉಂಟು ಮಾಡಿಕೊ."       ಹೌದು,   ನಾವು ಇವೆರಡರ ಕಡೆ ಗಮನ ಕೊಡುವುದನ್ನು ಕಡಿಮೆ ಮಾಡಲು ಅಭ್ಯಾಸ ಮಾಡಬೇಕು. ಮನಸ್ಸನ್ನು ಉತ್ತಮ ವಿಚಾರದ ಕಡೆಗೆ ತಿರುಗಿಸಬೇಕು.  ಸಾಹಿತ್ಯ, ಸಂಗೀತ, ಸತ್ಸಂಗ, ಅಧ್ಯಾತ್ಮ ಮತ್ತು ಧ್ಯಾನದ ಕಡೆಗೆ ಮನಸ್ಸು ಕೊಟ್ಟರೆ ರಾಗ ಮತ್ತು ದ್ವೇಷಗಳ ಕಾಟ ಕಡಿಮೆಯಾಗುತ್ತದೆ.   

ಇಂತಹ ಸಮಯದಲ್ಲಿ ತಿಮ್ಮ ಗುರು ಅಪ್ಪಣೆ ಕೊಡುತ್ತಾರೆ 
              ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ |
              ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ||  
              ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ |
              ಬ್ರಹ್ಮಾನುಭವಿಯಾಗೋ.......ಮಂಕುತಿಮ್ಮ||


ಹೆಚ್ ಏನ್ ಪ್ರಕಾಶ್ 
26 07 2012
.   



8 comments:

  1. ಪ್ರೀತಿಸಿದರೆ..ಪ್ರೇಮ..
    ಪ್ರೇಮಿಸಿದರೆ..ಪ್ರೀತಿ..
    ಪ್ರೀತಿಸಿ ಪ್ರೇಮಿಸಿದರೆ...ಭಾಂದವ್ಯ..
    ಇದರ ಗೈರು ಹಾಜರಿ ದ್ವೇಷ
    ದ್ವೇಷ ತರುವದು ಆವೇಶ..
    ಆವೇಶ ಹೊರುವುದು ಬಗೆಬಗೆಯ ವೇಷ...
    ವೇಷ ಬದಿಗಿಟ್ಟು ನೋಡಿದಾಗ ಕರಗುವುದು ಭಾವಾವೇಶ..
    ಇದೆ ಜೀವನ ಸಿದ್ದಿ..ಇದೆ ನೆಮ್ಮದಿಗೆ ಸುದ್ದಿ

    ReplyDelete
    Replies
    1. ಆತ್ಮೀಯ ಶ್ರೀಕಾಂತ್
      ನಿನ್ನ ಕಾವ್ಯಮಯ ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  2. ಕೆಲ ದಿನಗಳ ಹಿಂದೆ ಪ್ರೀತಿ ಬಂಧನ ಎಂದಾಗ ನೀವು ಒಪ್ಪಿರಲಿಲ್ಲ.. ಸಂಸಾರದಲ್ಲಿ ಅದು ಕಷ್ಟ ಅದನ್ನು ಬಂಧನ ಎಂದು ಭಾವಿಸಲು ಸಾಧ್ಯವಿಲ್ಲ ಎಂಬುದು ನಿಮ್ಮ ವಿಚಾರವಾಗಿತ್ತು ....! ಆದರೆ ಈಗ ನಿಮ್ಮ ವಿಚಾರ ಸೂಕ್ತ ಎನ್ನಿಸಿತು.. ನಾನು ಮುಂಚೆಯೇ ಹೇಳಿದಂತೆ ಗುಂಡಪ್ಪನವರ ಕೆಳಗಿನ ಕಗ್ಗ ಸರ್ವ ಕಾಲಕ್ಕೂ ಸಮಂಜಸ

    ಮನೆಯಸುಡು ಬೆಂಕಿಯನಾರಿಸೆ ನುಗ್ಗು
    ಮನವ ಸುಡುಬೆಂಕಿಯಿಂದ ದೂರ ನೀ ನಿಲ್ಲು
    ಮನಕೆ ಸೋಬಗೆನಿಸಿದಾ ಪ್ರೀತಿ ಹಾರಮುಮೊರ್ಮೆ
    ಉರುಳಪ್ಪುದಾತ್ಮಕ್ಕೆ ಮಂಕುತಿಮ್ಮ..!
    I differ with,
    "ಸಾಧಾರಣವಾಗಿ ನಾವು ಅಂದುಕೊಂಡಿರುವ ಪ್ರೀತಿ ಸ್ವಾರ್ಥವಿಲ್ಲದೆ ಇರಲು ಸಾಧ್ಯವಿಲ್ಲ" : ನನ್ನ ಭಾವನೆಯಲ್ಲಿ ಸ್ವಾರ್ಥ ಇರುವ ಪ್ರೀತಿ, ಪ್ರೀತಿಯೇ ಅಲ್ಲ... ಅದು ವ್ಯವಹಾರವಾಗುತ್ತದೆ..! ಅದ್ದರಿಂದ ಅದನ್ನು ಒಪ್ಪುವುದು ನನಗೆ ಸ್ವಲ್ಪ ಕಷ್ಟ.... ! ಮತ್ತು ಪ್ರೀತಿಯನ್ನು ಹಂಚಿಕೊಳ್ಳುವ ಪ್ರಮೇಯವೇ ಬರುವುದಿಲ್ಲ ಏಕೆಂದರೆ ನಿಮ್ಮ ಭಾವನೆಯಲ್ಲಿ ಅಡಗಿರುವ ಒಂದು ವಿಚಾರ ಮಾತ್ರ "ಪ್ರೀತಿ".., ಮತ್ತೊಬ್ಬರಿಗೆ ಆ ಭಾವನೆ ಇನ್ನೊಬ್ಬರ ಮೇಲೆ ಬರಬಹುದು ....ಅಥವಾ ನಿಮಗೆ ಬೇರೆಯವರ ಮೇಲೆ ಬರಬಹುದು ಅದಕ್ಕೆ ನಾನು ನನ್ನ ಪ್ರೀತಿ ಹಂಚುವುದಿಲ್ಲ ಎಂದರೆ ಮೂಡತನವಾಗುತ್ತದೆ..
    ಪ್ರೀತಿಯ ಅರ್ಥವೇ ನಿಸ್ವಾರ್ಥ, ನಿಷ್ಕಲ್ಮಶ ಒಲವು ಎಂದು ಅದ್ದರಿಂದ ಅದಕ್ಕೆ ಸ್ವಾರ್ಥದ ನೆರಳು ಸೋಕಿದರೂ ಪ್ರೀತಿಯೆಂಬ ಪದ ಅರ್ಥಹೀನವಾಗುತ್ತದೆ..!(only my opinion)

    ReplyDelete
    Replies
    1. ಆತ್ಮೀಯ ವಿನ್ನು,
      ಪ್ರೀತಿ ಯಾವಾಗಲು ಬಂಧನವೇ! ಇದನ್ನು ಸಂಸಾರದಲ್ಲಿ ಬಂಧನವಾಗುತ್ತದೆ ಎಂದು ಚಿಂತಿಸಿದಾಗ ಪ್ರೀತಿ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಆ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟ. ತಾಯಿ ಮಗುವನ್ನು ಪ್ರೀತಿಸುವಾಗ ಇದು ಬಂಧನ ಎಂದು ಚಿಂತಿಸಲಾಗದು. ಬಂಧವೆಂದು ಗೊತ್ತಿದ್ದ ಪಕ್ಷದಲ್ಲೂ ತಾಯಿ ಪ್ರೀತಿಯನ್ನು ಧಾರೆ ಎರೆಯುತ್ತಾಳೆ. ಪ್ರೀತಿಯ ವ್ಯಾಪ್ತಿಯಲ್ಲಿ ಇದ್ದು ಇರದಂತೆ ಇರಲು ಸಾಧ್ಯವಾಗುವುದೇ ಆದರೆ, ಅದೇ ಮುಕ್ತಿಯ ಕಡೆಗೆ ಕರೆದೊಯ್ಯುತ್ತದೆ.
      ಇನ್ನು "ಸಾಧಾರಣವಾಗಿ ನಾವು ಅಂದುಕೊಂಡಿರುವ ಪ್ರೀತಿ ಸ್ವಾರ್ಥವಿಲ್ಲದೆ ಇರಲು ಸಾಧ್ಯವಿಲ್ಲ" ಎಂಬುರದ ಬಗ್ಗೆ ಸಂಶಯವೇ ಬೇಡ. ಕಾರ್ಯ ಕಾರಣ ಸಂಬಂಧಗಳಲ್ಲಿ ಪ್ರೀತಿ ದೊಡ್ಡ ಪಾತ್ರ ವಹಿಸುತ್ತದೆ. ಭಗವಂತನಲ್ಲಿ ತೋರುವ ಪರಮ ಪ್ರೇಮ, ಪ್ರೀತಿ ಹೊರತು ಪಡಿಸಿ ಮಿಕ್ಕೆಲ್ಲವೂಗಳಲ್ಲಿ ಸ್ವಾರ್ಥದ ಲೇಪ ಸ್ವಲ್ಪವಾದರೂ ಇದ್ದೆ ಇರುತ್ತದೆ. ಆದ್ದರಿಂದ ದಾರ್ಶನಿಕರೆಲ್ಲರು ಹೇಳುವುದೆಲ್ಲ ಒಂದೇ " ತೋರುವ ಪ್ರೀತಿ ನಿಷ್ಕಲ್ಮಶವಾಗಿರಲಿ. ಶುದ್ದವಾಗಿರಲಿ, ಸ್ವಾರ್ಥದ ಲೇಪ ಕಡಿಮೆ ಇರಲಿ. ದಿನನಿತ್ಯ ಸ್ವಾರ್ಥರಹಿತ ಪ್ರೇಮದ ಭಕ್ತಿಯ ಕಡೆಗೆ ಹೋದಾಗ, ಎಂದು ನಮ್ಮ ಪ್ರೇಮ ಪರಮ ಪ್ರೇಮವಾಗುವುದೋ ಅಂದೇ ಮುಕ್ತಿ "
      ನೀನು ಹೇಳಿದಂತೆ ಸ್ವಾರ್ಥವಿದ್ದರೆ ಪ್ರೇಮ ವ್ಯವಹಾರವಾಗುತ್ತದೆ, ಅದು ಸರಿ. ಅದೇ ರೀತಿ ಪ್ರೀತಿ ಅಹಂಕಾರದ ಜೊತೆ ಬೆರೆತರೂ ಸ್ವಾರ್ಥದ ಲೇಪವಾಗುತ್ತದೆ. ಇಷ್ಟು ಸಾಕು.
      ನಿನ್ನ ವಿಚಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  3. ಯಾವುದನ್ನೇ ಆಗಲೀ, ನಮ್ಮಿಂದ ಸಾಧ್ಯವಾದರೆ
    ಪ್ರಹ್ಲಾದನಷ್ಟು ಪ್ರೀತಿಸಬೇಕು... ಇಲ್ಲ, ಅವರಪ್ಪನಷ್ಟು ದ್ವೇಷಿಸಬೇಕು !

    ರಾಗವೋ... ದ್ವೇಷವೋ... result ಒಂದೇ!

    ReplyDelete
    Replies
    1. ಆತ್ಮೀಯ ರಜನೀಶ,
      ಪ್ರಹ್ಲಾದನಷ್ಟು ಪ್ರೀತಿಸಲು ಗೊತ್ತಿಲ್ಲ, ಅವರಪ್ಪನಷ್ಟು ದ್ವೇಷಿಸಲೂ ಗೊತ್ತಿಲ್ಲ. ನಾವು ಇಬ್ಬಂದಿಗಳು. ಹೀಗಾಗಿ ನಮಗೆ ಈ ರಾಗ ದ್ವೇಷಗಳ ಕಾಟ.
      ನಿನ್ನ ಸಮಂಜಸ ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
    2. ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ
      ನಂಬಿಯೂ ನಂಬದಿರುವಿಬ್ಬಂದಿ ನೀನ್
      ಕಂಬದಿನೋ ಬಿಂಬದಿನೋ ಮೋಕ್ಷ ವವರಿಂಗಾಯ್ತು
      ಸಿಮ್ಬಳದಿ ನೊಣ ನೀನು ಮಂಕುತಿಮ್ಮ..!

      Delete
    3. ಸಂಧರ್ಬೋಚಿತವಾದ ಪದ್ಯ

      Delete