July 10, 2012

ನನ್ನ ಅಪ್ಪ ಮತ್ತು ಪುಸ್ತಕನನ್ನ ಅಪ್ಪ ಮತ್ತು ಪುಸ್ತಕ  " ಅಣ್ಣಾ, ಈ ತಿಂಗಳ ಸಂಬಳ ನನಗೆ ರೂ.112 .50  ಬಂದಿದೆ. ಅದನ್ನು ನಿಮ್ಮ ಕೈಯಲ್ಲಿಟ್ಟು ಆಶೀರ್ವಾದ ಪಡೆಯೋಣ ಅಂತ ಬಂದೆ." ಎಂದು ನನ್ನ ಮೊದಲ ತಿಂಗಳ ಸಂಬಳವನ್ನು ನನ್ನ ತಂದೆ ತಾಯಿಯ ಕೈಯಲ್ಲಿಟ್ಟು  ಅವರ ಪಾದಗಳಿಗೆ ಎರಗಿದೆ. ತುಂಬು ಸಂತೋಷದಿಂದ ತಂದೆತಾಯಿ ಇಬ್ಬರು ಬೆನ್ನುಸವರಿದರು.  " ಈ ಹಣದಲ್ಲಿ ಏನು ಮಾಡಬೇಕೆಂದು ಅಂದುಕೊಂಡಿರುವೆ?" ಎಂದು ಅಪ್ಪ ಕೇಳಿದರು.  ನಿಶ್ಚಯವಾಗಿ ನಾನು ಏನು ಅಂದುಕೊಂಡಿರಲಿಲ್ಲ. ನೇರ ಹೋಗಿ ಹಣವನ್ನು ಅಪ್ಪ ಅಮ್ಮನ ಕೈಲಿರಿಸಿ ಆಶೀರ್ವಾದ ಪಡೆಯುವುದು ಅಷ್ಟೇ ನನ್ನ ಮನಸಿನಲ್ಲಿ ಇದ್ದದ್ದು. ಇದನ್ನೇ ನೇರವಾಗಿ ಅಪ್ಪನಿಗೆ ಹೇಳಿದೆ. " ಅದು ಸರಿ.  ಈಗ ಆಶೀರ್ವಾದ ಸಿಕ್ಕಿತಲ್ಲ," ಎಂದು ಅಪ್ಪ ಮರು ಪ್ರಶ್ನೆ ಹಾಕಿದರು.ಏನೂ ಹೇಳಲು ತೋಚಲಿಲ್ಲ. ಅಮ್ಮ ನನ್ನ ಸಹಾಯಕ್ಕೆ ಬಂದರು " ಅದ್ಯಾಕೆ ಸುತ್ತಿಬಳಸಿ ಹೇಳುತ್ತಿರಿ?   ಅದೇನು ಮಾಡಬೇಕು?ಅದನ್ನ ಹೇಳಿ." ಎಂದು ನನ್ನ ಪಕ್ಷವಹಿಸಿ ಮಾತನಾಡಿದರು.  ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡು " ಈ ಹಣದಲ್ಲಿ ಯಾವುದಾದರು ಒಳ್ಳೆಯ ಪುಸ್ತಕ ತಂದು ಓದು. ಜೀವಮಾನದಲ್ಲಿ ನಿನ್ನ ಜೊತೆ ಸದಾ ಕಾಲ ಇರಬಹುದಾದ  ಪುಸ್ತಕ ತಂದು ಓದು.  ಪುಸ್ತಕವೇ ನಿನ್ನ ಒಳ್ಳೆಯ ಸ್ನೇಹಿತನಾಗಬೇಕು." ಎಂದರು. 

ನಾನು ಪುಸ್ತಕ ಓದುವ ಹವ್ಯಾಸ ನನಗೇನು ಅಷ್ಟು ಇರಲಿಲ್ಲ. ಜೊತೆಗೆ ಯಾವ ರೀತಿಯ ಪುಸ್ತಕಗಳನ್ನು ಓದಬೇಕೆಂಬ ತಿಳುವಳಿಕೆಯು ಇರಲಿಲ್ಲ.  1977 ನೆ ಮಾರ್ಚ್ ಮೊದಲನೇ ಭಾನುವಾರ ನಡೆದ ಈ ಮಾತು ನನಗೆ ಇನ್ನು ಸ್ಪಷ್ಟವಾಗಿ ನೆನಪಿದೆ.  ಏನೂ ಸರಿಯಾಗಿ ತಿಳಿಯದಿದ್ದರಿಂದ ನಾನು ಬೆಪ್ಪನ ಹಾಗೆ ಅಪ್ಪನ ಮುಖ ನೋಡುತ್ತಾ ಕುಳಿತೆ.  " ನೋಡು ಮಗು, ಪ್ರಪಂಚಜ್ಞಾನ ತಿಳಿಬೇಕು ಅಂದರೆ, ತುಂಬಾ ತಿರುಗಬೇಕು ಇಲ್ಲ ತುಂಬಾ ಪುಸ್ತಕ ಓದಬೇಕು.   ನಿನಗೆ ತುಂಬಾ ತಿರುಗಲು ಆಗದು, ಹಾಗಂತ ನೀನು ಸುಮ್ಮನೆ ಕೂರಬಾರದು. ಚನ್ನಾಗಿ ಓದಿ ಚನ್ನಾಗಿ ಪ್ರಪ್ರಂಚ ಜ್ಞಾನ ಸಂಪಾದನೆ ಮಾಡಬೇಕು. ಪುಸ್ತಕಗಳನ್ನು ಓದು. ಕೊಂಡು ಓದು, ಎರವಲು ಪಡೆದು ಓಡಬೇಡ.  ಯಾವಾಗಲು ನಿನ್ನ ಸಂಗಾತಿ ಪುಸ್ತಕವೇ ಆಗಿರಲಿ. ತಿಂಗಳಿಗೆ ಒಂದು ಪುಸ್ತಕ ಸಾಕು. ಅದನ್ನು ಓದಲಾಗಲಿಲ್ಲವೆಂದು ಪುಸ್ತಕ ಕೊಳ್ಳುವುದನ್ನು ಬಿಡಬೇಡ.  ಪುಸ್ತಕ ನಿನ್ನಲ್ಲಿ ಇದ್ದರೆ ಅದು ನಿನ್ನನ್ನು ಓದಲು ಸೆಳೆಯುತ್ತದೆ." ಎಂದು ಹೇಳಿದರು. ನನಗೆ ಅಪ್ಪನ ಮಾತು ಸರಿಯೆನಿಸಿತು. " ಹಾಗಾದರೆ ಈ ಹಣದಲ್ಲಿ ಯಾವ ಪುಸ್ತಕ ಕೊಂಡುಕೊಳ್ಳಲಿ? " ಎಂದು ಕೇಳಿದೆ. " ನಿನ್ನ ಮೊದಲನೇ ಸಂಪಾದನೆಯಲ್ಲಿ  complete works of Swami Vivekananda"  ಕೊಂಡು ಓದಲು ಪ್ರಾರಂಭಿಸು." ಎಂದು ಸಲಹೆ ಇತ್ತರು.

ಆ ದಿನವೇ ನಾನು ನನ್ನ ಅಣ್ಣನ ಜೊತೆ ಹೋಗಿ ಮೈಸೂರಿನ ರಾಮಕೃಷ್ಣ ಆಶ್ರಮದಿಂದ ಪುಸ್ತಕಗಳನ್ನು ತಂದೆ. ಎಲ್ಲರಿಗೂ ಸಂತೋಷವಾಯಿತು. ನನ್ನ ತಂದೆಗೆ ಹೆಚ್ಚು ಸಂತೋಷವಾಯಿತು. ಅಂದು ಪ್ರಾರಂಭವಾದ ನನ್ನ ಪುಸ್ತಕ ಕೊಳ್ಳುವ ಮತ್ತು ಓದುವ ಹವ್ಯಾಸ ಇಂದಿಗೂ ಜಾರಿಯಲ್ಲಿದೆ. ನನ್ನ ಬಳಿ ಈಗ ಒಂದು ಚಿಕ್ಕ ಗ್ರಂಥಾಲಯವಿದೆ. ಸುಮಾರು  ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ. ನಾನು ಎಲ್ಲ ಪುಸ್ತಕಗಳನ್ನು ಕೊಂಡೇ   ಓದುವ ಅಭ್ಯಾಸ ಮಾಡಿಕೊಂಡಿದ್ದೇನೆ. ಅಂದು ನನ್ನ ತಂದೆ ನನಗೆ  ಹೇಳಿದ ಆ ಮಾತು  ನನ್ನ ಜೀವನದ ಗತಿಯನ್ನೇ ಬದಲಿಸಿತು. ನಾನು ಪ್ರತಿತಿಂಗಳು ಹೊಸ ಪುಸ್ತಕ ಕೊಂಡಾಗ ನನ್ನ ಅಪ್ಪನಲ್ಲಿ ಹೋಗಿ ತೋರಿಸುತ್ತಿದ್ದೆ.  ಅವರು ಕೆಲವೊಮ್ಮೆ ಪುಸ್ತಕ ಯಾವರೀತಿ ಆರಿಸಬೇಕೆಂದು ಸಲಹೆ ನೀಡಿ ತಿದ್ದುತ್ತಿದ್ದರು. ಅವರು ದೈವಾಧೀನರಾಗುವ ಹೊತ್ತಿಗೆ ನನ್ನ ಬಳಿ ೫೦ ಪುಸ್ತಕಗಳು ಇದ್ದವು. 

ಇಂದಿಗೆ ಅವರು ಇದ್ದಿದ್ದರೆ? ಎಂದು ಅನ್ನಿಸಿದಾಗಲೆಲ್ಲ ಅವರೆಲ್ಲಿ ಹೋಗಿದ್ದಾರೆ? ನನ್ನ ಎಲ್ಲ ಪುಸ್ತಕದ ಪ್ರತಿ ಹಾಳೆಯಲ್ಲಿ ನನ್ನ ಅಪ್ಪ ಇದ್ದಾರೆ ಎಂದು ಭಾಸವಾಗುತ್ತದೆ.   ಪೂರ್ವಜನ್ಮದ ಸುಕೃತದಿಂದ ನನಗೆ ಇಂತಹ ಅಪ್ಪ ಅಮ್ಮನನ್ನು  ಭಗವಂತ ಕರುಣಿಸಿದ.  

ಇಂತಹ ತಂದೆತಾಯಿಯನ್ನು ಪಡೆದ ನಾನು ಪುಣ್ಯಶಾಲಿಯಲ್ಲವೇ?

ಹೆಚ್ ಏನ್ ಪ್ರಕಾಶ್ 

4 comments:

  1. ಗೆಳೆಯರು ಹಾಗೂ ಪುಸ್ತಕಗಳು ಇವೆರಡನ್ನೂ ಸರಿಯಾಗಿ ಆರಿಸಿದಾಗ ನಮ್ಮ ಬಾಳು ಸುಂದರ...
    ಪುಸ್ತಕಗಳನ್ನೇ ಗೆಳೆಯರನ್ನಾಗಿ ಮಾಡಿಕೊಂಡು..ದೇಶ ಸುತ್ತುವ ಬದಲು..ಪುಟ ತಿರುಗಿಸಿ ಕೋಶವನ್ನೇ ಸುತ್ತುವ ಸಲಹೆ ಕೊಟ್ಟ ಮಾತಾ ಪಿತೃಗಳಿಗೆ ವಂದನೆಗಳು...ಒಳ್ಳೆಯ ಆತ್ಮ ಕಥನ..ಹಂಚಿಕೊಂದದಕ್ಕೆ ಧನ್ಯವಾದಗಳು ಚಿಕ್ಕಪ್ಪ..

    ReplyDelete
    Replies
    1. ಆತ್ಮೀಯ ಶ್ರೀಕಾಂತನಿಗೆ,
      "ಗೆಳೆಯರು ಹಾಗೂ ಪುಸ್ತಕಗಳು ಇವೆರಡನ್ನೂ ಸರಿಯಾಗಿ ಆರಿಸಿದಾಗ ನಮ್ಮ ಬಾಳು ಸುಂದರ" ಈ ಮಾತು ಅಕ್ಷರಶಃ ನಿಜ. ನಿನ್ನ ಅನುಭವದ ಮಾತು ಹೇಳಿದ್ದಿಯ. ಧನ್ಯವಾದಗಳು.
      ಪ್ರಕಾಶ್

      Delete
  2. ಮಾವ ನಿಮ್ಮ ಜ್ಞಾಪಕಚಿತ್ರಶಾಲೆಯಿಂದ ಒಂದೊಂದೇ ಚಿತ್ರಗಳನ್ನ ನಮಗೂ ಕಾಣಿಸುತ್ತಿದ್ದೀರಿ. ಬಹಳ ಸಂತೋಷವಾಯಿತು.

    ಪುಸ್ತಕಗಳು ಅದರೊಳಗಿರುವುದಕ್ಕಿಂತಲೂ ಎಷ್ಟೋ ಹೆಚ್ಚಿನದನ್ನು ಹೇಳುತ್ತವೆ.

    ದೊರೆತ ಸ್ನೇಹವಿರಬಹುದು... ನುರಿತ ಸಲಹೆಯಿರಬಹುದು...
    ಪ್ರೇರಿಸಿದ, ನಮಗಿಷ್ಟವಾದ ಯಾವುದೋ ಒಂದು ಸಾಲಿರಬಹುದು...
    ಒಂದನ್ನು ಕುರಿತು ಹರಟಿ ಸುತ್ತಾಡಿದ ಹಲವು ಪುಸ್ತಕಳಿರಬಹುದು...

    ಹುಲ್ಲೊಳಿಟ್ಟ ಮಾವು ಮಾಗುವಂತೆ...

    ಪುಸ್ತಕಗಳು ನಮ್ಮನ್ನು ಮಾಗಿಸಬಲ್ಲವು.

    ಧನ್ಯವಾದಗಳು
    ರಜನೀಶ

    ReplyDelete
    Replies
    1. ಆತ್ಮೀಯ ರಜನೀಶ,
      "ಹುಲ್ಲೊಳಿಟ್ಟ ಮಾವು ಮಾಗುವಂತೆ...ಪುಸ್ತಕಗಳು ನಮ್ಮನ್ನು ಮಾಗಿಸಬಲ್ಲವು." ನನ್ನ ನಿನ್ನ ಅನುಭವ. ತುಂಬಾ ಒಳ್ಳೆಯ ಮತ್ತು ಸಂದರ್ಬೋಚಿತ ಮಾತು. ಧನ್ಯವಾದಗಳು.
      ಪ್ರಕಾಶ್

      Delete