ಅನರ್ಘ್ಯ ರತ್ನಗಳು
ಸೂಫಿ ಸಾಧಕರಲ್ಲಿ ಹಲವಾರು ಮಹಿಳೆರದೂ ಪಾತ್ರವಿದೆ. ಅವರಲ್ಲಿ ಆರನೇ ಶತಮಾನದಲ್ಲಿ ಇದ್ದ ರಬಿಯಾ ಒಬ್ಬ ಮಹಾನ್ ಸಾಧಕಿ. ಆಕೆಗೆ ಭಗವಂತನಲ್ಲಿ ಅಪಾರವಾದ ನಂಬುಗೆ ಮತ್ತು ಶರಣಾಗತಿ. ಈಕೆಯ ಜೀವನದಲ್ಲಿ ನಡೆದ ಒಂದು ಘಟನೆ ಇವಳ ಸಂಪೂರ್ಣ ಶರಣಾಗತಿಯನ್ನು ಸಾದರ ಪಡಿಸುತ್ತದೆ.
ತನಗೆ ಇದ್ದ ಪ್ರಾಯದ ಅವಳಿ ಗಂಡು ಮಕ್ಕಳು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ಅಸು ನೀಗುತ್ತಾರೆ. ಇವರ ಪಾರ್ಥಿವ ಶರೀರವನ್ನು ಮನೆಗೆ ತಂದ ಸುತ್ತಮುತ್ತಲಿನವರು ರಬಿಯಾಗೆ ಎಲ್ಲವನ್ನು ವಿವರಿಸುತ್ತಾರೆ. ತನಗಾದ ದುಃಖವನ್ನು ಕ್ಷಣಮಾತ್ರದಲ್ಲಿ ಸಾವರಿಸಿಕೊಂಡು, ಆ ಮಕ್ಕಳ ಪಾರ್ಥಿವ ಶರೀರವನ್ನು ಒಂದು ಕೋಣೆಯಲ್ಲಿ ಇರಿಸಿಕೊಂಡಳು. ತನ್ನನ್ನು ಸಂತೈಸಲು ಬಂದವರಿಗೆ " ದಯಮಾಡಿ ನೀವೆಲ್ಲ ಈಗ ಇಲ್ಲಿಂದ ಹೋಗಿ. ನನ್ನ ಯಜಮಾನರು ಬರುವ ಸಮಯ. ಅವರಿಗೆ ಒಮ್ಮೆಲೇ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ. ಅವರನ್ನು ಸಂತೈಸಿ ನಂತರ ಹೇಳುತ್ತೇನೆ " ಎಂದು ಎಲ್ಲರನ್ನು ಬೀಳ್ಕೊಟ್ಟಳು.
ಸ್ವಲ್ಪ ಸಮಯದಲ್ಲೇ ಬಂದ ಗಂಡನಿಗೆ ಎಂದಿನಂತೆ ಉಣ್ಣಲು ಬಡಿಸಿ, ನಂತರದಲ್ಲಿ ನಿಧಾನವಾಗಿ ಮಾತಿಗೆ ಎಳೆಯುತ್ತ " ನಾನು ನಿಮ್ಮಲ್ಲಿ ಒಂದು ವಿಚಾರವನ್ನು ಹಲವಾರು ವರ್ಷಗಳಿಂದ ಹೇಳದೆ ರಹಸ್ಯವಾಗಿ ಇಟ್ಟಿರುವೆ. ಇದಕ್ಕಾಗಿ ನೀವು ನನ್ನನ್ನು ಕ್ಷಮಿಸಬೇಕು. ಇಂದು ಆ ವಿಚಾರವನ್ನು ಹೇಳಲೇ ಬೇಕಾದ ಸಮಯ ಬಂದಿದೆ. " ಎಂದು ಪೀಟಿಕೆ ಹಾಕಿದಳು. ರಬಿಯಾಲನ್ನು ಅಪಾರ ಗೌರವದಿಂದ ನೋಡುತ್ತಿದ್ದ ಗಂಡ ಕಾತರದಿಂದ "ಅದೇನು?" ಎಂದು ಕೇಳಿದ. " ಬಹಳ ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಒಬ್ಬ ಸಾಧು ಪುರುಷರು ನನ್ನಲ್ಲಿ ಎರಡು ಅನರ್ಘ್ಯ ರತ್ನಗಳನ್ನು ಕೊಟ್ಟು, ಇದನ್ನು ಜೋಪಾನವಾಗಿ ಕಾಪಾಡು, ನಾನು ಬೇಕಾದಾಗ ಬಂದು ವಾಪಾಸು ಪಡೆಯುತ್ತೇನೆ. ಎಂದು ಹೇಳಿ ಹೋದವರು ವರ್ಷಗಳು ಕಳೆದರು ಬರಲೇ ಇಲ್ಲ. ನಾನು ಆ ರತ್ನಗಳನ್ನು ನನ್ನವೇ ಎಂದು ಅದರ ಮೇಲೆ ಮೋಹ ಬೆಳೆಸಿಕೊಂಡು ಬಿಟ್ಟೆ. ಆದರೆ, ಅವರು ಈಗ ಬಂದು ಅವರ ರತ್ನಗಳನ್ನು ವಾಪಾಸು ಕೇಳುತ್ತಿದ್ದಾರೆ. ದಿಕ್ಕೇ ತೋಚದೆ ನಿಮ್ಮನ್ನು ಕೇಳಿ ಕೊಡುವೆನೆಂದು ಹೇಳಿ ಕಳುಹಿದೆ. ಈ ಗ ಹೇಳಿ ನಾನೇನು ಮಾಡಲಿ? " ಎಂದು ಖಿನ್ನಳಾಗಿ ಹೇಳಿದಳು. ಸಾವಕಾಶವಾಗಿ ಎಲ್ಲವನ್ನು ಕೇಳಿದ ಗಂಡ " ರಬಿಯ, ನಿನಗೆ ಹೇಳುವುದೇನಿದೆ? ಪರರ ವಸ್ತುವನ್ನು ಎಂದೂ ನೀನು ಇಟ್ಟುಕೊಂಡವಳಲ್ಲ. ಈಗ ಯಾಕೆ ಆ ಚಿಂತೆ? ಅವರ ರತ್ನಗಳನ್ನು ಅವರಿಗೆ ವಾಪಾಸು ಕೊಟ್ಟುಬಿಡು." ಎಂದು ಸ್ಪಷ್ಟವಾಗಿ ಹೇಳಿದ.
ಈ ಮಾತು ಕೇಳಿದ ನಂತರ ರಬಿಯ ತನ್ನ ಗಂಡನ ಕೈ ಹಿಡಿದುಕೊಂಡು ಮಕ್ಕಳ ಶವ ಇರಿಸಿದ್ದ ಕೋಣೆಗೆ ಕರೆದೊಯ್ದಳು. ಮಕ್ಕಳ ಶವ ನೋಡಿದ ಗಂಡ ಪ್ರಜ್ಞೆ ತಪ್ಪಿದ. ಸಾವರಿಸಿಕೊಂಡ ನಂತರ, ರಬಿಯ ಸಮಾಧಾನದಿಂದ ಹೇಳಿದಳು, " ಇವೆ, ಆ ಅನರ್ಘ್ಯ ರತ್ನಗಳು. ಭಗವಂತ ನಮ್ಮಲಿ ಜೋಪಾನವಾಗಿ ಇಡಬೇಕೆಂದು ಹೇಳಿ ಕಳುಹಿಸಿದ್ದ. ಇಂದು ಅವನು ವಾಪಾಸು ಕೇಳಿದ. ಆತನ ರತ್ನಗಳನ್ನು ಇಲ್ಲಿಯವರೆಗೆ ಜೋಪಾನ ಮಾಡಿದ್ದೇವೆ . ಈಗ ಕೊಡಬೇಕಲ್ಲವೇ? ಬನ್ನಿ ಅವನ ರತ್ನಗಳನ್ನು ಸಂತೋಷದಿಂದ ಹಿಂತಿರುಗಿಸೋಣ." ಎಂದು ಇಬ್ಬರು ಸೇರಿ ಶವ ಸಂಸ್ಕಾರ ನೆರೆವೇರಿಸಿದರು.
ರಬಿಯಾಲ ಜೀವನದಲ್ಲಿ ಇದೊಂದು ಬಹು ದೊಡ್ಡ ಪರೀಕ್ಷೆಯಾಗಿತ್ತು. ಆ ಸಮಯದಲ್ಲೂ ತನ್ನ ಚಿತ್ತವನ್ನು ಕಳೆದುಕೊಳ್ಳದೆ ಸಮಚಿತ್ತದಿಂದ ಸಂಪೂರ್ಣವಾಗಿ ಭಗವಂತನಲ್ಲಿ ಶರಣಾಗತಿ ಹೊಂದಿದಳು. ಇವಳ ಜೀವನದ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.
ಹೆಚ್ ಏನ್ ಪ್ರಕಾಶ್
22 07 2012
ಹೆಚ್ ಏನ್ ಪ್ರಕಾಶ್
22 07 2012
ಮನಸು ಒಂದು ನಿರ್ಮಲ ತಿಳಿ ಕೊಳದ ಹಾಗೆ...ಕೊಳದ ಮೇಲೆ ಕಲ್ಲು ಎಸೆಯುವರು, ಅಲೆಗಳನ್ನು ಸೃಷ್ಟಿ ಮಾಡುವವರು ಇದ್ದೆ ಇರುತ್ತಾರೆ...ಆದ್ರೆ ಅದು ಸ್ವಲ್ಪ ಕಾಲ ಮಾತ್ರ..ಮತ್ತೆ ಶಾಂತವಾಗುತ್ತದೆ..ಇದನ್ನೇ ಹತೋಟಿ ಅನ್ನುವುದು..ಆ ಕ್ಷಣದಲ್ಲಿ ಅದನ್ನು ಸ್ತಿಮಿತದಲ್ಲಿ ಇಟ್ಟುಕೊಂಡರೆ..ನಾವು ಸಮಸ್ಯೆಯನ್ನೇ ಗೆದ್ದಂತೆ..ಒಳ್ಳೆಯ ಲೇಖನ...ಚಿಕ್ಕಪ್ಪ..
ReplyDeleteಆತ್ಮೀಯ ಶ್ರೀಕಾಂತ್,
ReplyDeleteಕಷ್ಟದ ಸಮಯದಲ್ಲಿ ನಮ್ಮಲ್ಲಿ ಇರುವ ವಿವೇಕ ಸರಿಯಾಗಿ ಕೆಲಸ ಮಾಡದೆ ಇದ್ದರೆ, ಜೀವನಪೂರ್ತಿ ಮಾಡಿದ ಸಾಧನೆಯು ವಿಫಲವಾಗುತ್ತದೆ. ಯಾವಾಗ, ಯಾವುದನ್ನು, ಯಾವ ಕಾರಣಕ್ಕಾಗಿ ಭಗವಂತ ಏನನ್ನು ದಯಪಾಲಿಸುತ್ತನೋ ಇದನ್ನು ನಾವ್ಯಾರು ಅರಿಯೆವು. ಆದರೆ ಅಂತಹ ಸಮಯದಲ್ಲಿ ಸಹನೆ ಮತ್ತು ತಾಳ್ಮೆಯನ್ನು ಕಳೆದು ಕೊಳ್ಳದಂತಹ ವಿವೇಕವನ್ನು ದಯಪಾಲಿಸ ಬೇಕೆಂಬುದೇ ಪ್ರಾರ್ಥನೆ. ಈ ದ್ರುಷ್ಟಾಂತದಲ್ಲಿ ವಿವೇಕ ವೈರಾಗ್ಯ ಇವೆರಡು ಒಟ್ಟಿಗೆ ರಬಿಯಾಳಲ್ಲಿ ಕಂಡುಬರುತ್ತದೆ. ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.
ತಕ್ಷಣಕ್ಕೆ ಹೊಳೆದದ್ದು:
ReplyDelete೧. ಸ್ತ್ರೀಯೆಂಬ ಶಕ್ತಿತತ್ತ್ವವು ಕಾಲ-ದೇಶ-ಮತಗಳನ್ನು ಮೀರಿದ್ದು.
೨. ಈಶಾವಾಸ್ಯಮಿದಂ ಸರ್ವಂ... ಎಲ್ಲವೂ ಪರಮೇಶ್ವರನದೇ ನನ್ನದಲ್ಲ ಎಂಬ ಕೃತಜ್ಞತಾಭಾವದಿಂದ ಎಲ್ಲವನ್ನೂ ಅನುಭವಿಸಿದರೆ ನೋವಿರದು...
ವಂದನೆಗಳು,
ರಜನೀಶ
ಆತ್ಮೀಯ ರಜನೀಶ,
ReplyDeleteಈಷಾವಾಸ್ಯಮಿದಂ ಸರ್ವಂ..........ಎಂದು ಹೇಳುವುದಾದರೂ ಅದರಂತೆ ತಿಳಿದು ಬಾಳುವೆ ಮಾಡಲು ಲೌಕಿಕ ಬದುಕಿನಲ್ಲಿ ಸಾಧ್ಯವಿಲ್ಲದ ಮಾತು. ಆದರೂ, ಸಾಧ್ಯವಾದಮಟ್ಟಿಗೆ ಮಾಯಾ ಪೊರೆಯನ್ನು ಹರಿದುಕೊಂಡು ಜೀವನ ಸತ್ಯಗಳನ್ನು ಪಾರಮಾರ್ಥಿಕ ನೆಲೆಯಲ್ಲಿ ನೋಡುವ ಸಾಧನೆ ಮಾಡಿದರೆ, ತೇನ ತ್ಯಕ್ತೆನ.......... ಎಂಬುದನ್ನು ಸ್ವಲ್ಪ ಮಾತ್ರ ಪಾಲಿಸ ಬಹುದೇನೋ?..........
ಧನ್ಯವಾದಗಳು.
ಪ್ರಕಾಶ್
ಈಶಾವಾಸ್ಯಮಿದಂ...
ReplyDeleteಅದಕ್ಕಿಂತ ಸುಲಭವಾದುದ್ದು, ಹಿತವಾದದ್ದು ಮತ್ತೊಂದಿಲ್ಲವೆಂಬುದು ನನ್ನ ವಿಶ್ವಾಸ. ಅಷ್ಟಕ್ಕೂ ಎಲ್ಲವನ್ನೂ ಬಿಡಬೇಕೆಂದೇನು ಹೇಳಿಲ್ಲವಲ್ಲ... ಎಲ್ಲವನ್ನೂ ಅನುಭವಿಸಬೇಕು ಅದು ನನ್ನದಲ್ಲ ಭಗವಂತನದ್ದೆಂದು ಅನುಭವಿಸಬೇಕು ಎಂದು ತಾನೆ ಹೇಳಿರುವುದು!
ಭಗವಂತನ ಪ್ರಸಾದವನ್ನ ಹಿತವಾಗುಷ್ಟು ಮಾತ್ರ ಸೇವಿಸುತ್ತೇವಷ್ಟೇ!
ಇದನ್ನೇ ಶಂಕರರು " ವಿವೇಕ ಮತ್ತು ವೈರಾಗ್ಯ " ಎಂದು ಕರೆದಿದ್ದು. ಯಾವುದನ್ನು ಎಷ್ಟು , ಯಾವಾಗ ,ಹೇಗೆ ಮತ್ತು ಎಲ್ಲಿ ಎಂಬುದನ್ನು ನಿಷ್ಕರ್ಷೆ ಮಾಡಿ ನಂತರದಲ್ಲಿ ಯಾವುದಕ್ಕೂ ಅಂಟಿಯೂ ಅಂಟದಂತೆ ಕಾರ್ಯ ನಿರ್ವಹಣೆ ಮಾಡಬೇಕೆನ್ನುವುದನ್ನು ತಿಳಿಸುತ್ತಾರೆ.
ReplyDeleteಇದನ್ನೇ ದಾಸರು ಇರಬೇಕು ಇರದಿರಬೇಕು ಎಂದಿರುವುದು. ಆದರೆ ಪಾಲನೆಯ ವಿಚಾರಕ್ಕೆ ಬಂದಾಗ ನಿಜವಾದ ಕಷ್ಟ ಗೊತ್ತಾಗುವುದು.