October 17, 2012

ದೊಡ್ಡವರ ದಾರಿ ..............................8

      

                  ಡಿ .ವಿ .ಗುಂಡಪ್ಪನವರ ಅನುಭವದ ಕಂತೆ ಬಲು ದೊಡ್ಡದು. ಅವರ ಕಂತೆಯಲ್ಲಿ ಅದೆಷ್ಟು ಅನುಭವದ ವಿಚಾರಗಳು ಹುದುಗಿತ್ತೋ ಆ ಭಗವಂತನಿಗೆ ಗೊತ್ತು.  ಎಷ್ಟೊಂದನ್ನು ಬರೆದು ನಮ್ಮಂತಹ ಪಾಮರರಿಗೆ ತಿಳಿಸಿಹೊಗಿದ್ದಾರೆ.  ಅರಿತು ಬಾಳುವುದಷ್ಟೇ ನಮ್ಮ ಪಾಲಿಗೆ ಉಳಿದಿರುವುದು. ಒಂದು ಅಪರೂಪದ ಪ್ರಸಂಗ ಡಿ.ವಿ.ಜಿ ಮಾತುಗಳಲ್ಲೇ ತಿಳಿಸಿದ್ದೇನೆ.
                     " ನಂಗೆ ಪರಿಚಿತನಾದ ಮುತ್ತ ಎಂಬಾತನಿದ್ದ. ಆತ ನಾವು ಈಗ ಹರಿಜನವೆಂದು ಗೌರವಿಸುವ ಜನಾಂಗಕ್ಕೆ ಸೇರಿದವನು.  ಆತ  ಅಕ್ಷರ ಗಂಧ ಕಾಣದವನು.  ಅವನಿಗಿದ್ದ ಹುದ್ದೆ ಒಂದು ಸಣ್ಣ ಹಳ್ಳಿಯ ತಳವಾರಿಕೆ. ಆದರೆ ಅವನು ಗ್ರಾಮಕ್ಕೆಲ್ಲ ಇಷ್ಟವಾಗಿದ್ದವನು.  ಅವನದು ಯಾವಾಗಲು ನಗುತ್ತಾ ನಗಿಸುತ್ತಿರುವ ಸ್ವಭಾವ.  ಮಧುಸೇವನೆಯಿಂದ ಅವನ ಮಾತಿನಲ್ಲಿ ಮತ್ತಷ್ಟು ಹಾಸ್ಯ ತೋರುತ್ತಿತ್ತು.  ಒಂದು ದಿನ ಆತ  ನನ್ನಲ್ಲಿಗೆ ಬಂದು ನಾಲ್ಕು ರೂಪಾಯಿ ಬೇಡಿದ.  ನಾನು ಅವನನ್ನು  " ಏನು ನಾಲ್ಕಾಣೆಯಿಂದ ನಾಲ್ಕು ರೂಪಾಯಿಗೆ ಬಡ್ತಿ ಮಾಡಿಕೊಂಡಿದ್ದಿ ?  ಇನ್ನು ಮೇಲೆ ವಿಲಾಯಿತಿ ಪಾನಕವೋ? " ಎಂದು ಕೇಳಿದೆ.  ಅವನು  " ಇಲ್ಲಾ ಬುದ್ಧಿ.  ಒಂದು ಧರ್ಮ ಮಾಡೋಕೆ ಹಣಬೇಕು .  ಆ ಪುಣ್ಯ ನಿಮಗೆ ಬರತೈತಿ." ಎಂದು ಹೇಳಿದ.  ನಾನು " ಹಿಡಿ ಇದನ್ನು, ಆ ಪುಣ್ಯ ನಿನಗೆ ಇರಲಿ " ಎಂದು ಹೇಳಿ ಕಳುಹಿಸಿದೆ.
                      ಒಂದುವಾರ ಕಳೆದ ಮೇಲೆ ಮತ್ತೆ ತಿರುಗಿ ಬಂದು " ಜಮೀನ್ತಾವಿಗೆ ನೀವು ಬರಬೇಕು ಬುದ್ಧಿ " ಎಂದು ಕರೆದ. ಒಂದು ದಿವಸ ನಾನು ಅಲ್ಲಿಗೆ ಹೋದಾಗ ಕಂಡದ್ದೇನು ? ಒಂದು ಆನುಗಲ್ಲು ಕಟ್ಟಡ.  ಆಳೆತ್ತರದ ಮೂರು ನಿಲುಗಲ್ಲುಗಳನ್ನು ನೆಲದಲ್ಲಿ ನೆಟ್ಟು ನಿಲ್ಲಿಸಿದ್ದಾನೆ. ಅವುಗಳ ಮೇಲೆ ಒಂದು ಉದ್ದವಾದ ಕಲ್ಲಿನ ಅಡ್ಡದೂಲವನ್ನು ಹಾಸಿದ್ದಾನೆ !  ಅದೇನೆಂದು ನಾನು ಕೇಳಲು " ಇದೆ ಬುದ್ಧಿ ನಿಮ್ಮ ಧರ್ಮ. ಈ ಜಾಗ ತಿಟ್ಟು. ಈ ಕಡೆಯಿಂದ ಹಳ್ಳಿಗಳವರು ಸೌದೆ ಹೊರೆಹೊತ್ತು ಹತ್ತಿ ಬರ್ತಾರೆ. ಇಲ್ಲಿಗೆ ಬರೋಹೊತ್ಗೆ ಸುಸ್ತುಬಿದ್ದು ಹೋಗಿರ್ತಾರೆ.  ಇನ್ನುಮೇಲೆ ಈ ಅನುಗಲ್ಲಿಗೆ ಸೌದೆ ಒರಗಿಸಿ, ಧಣಿವಾರಿಸಿಕೊಂಡು, ಒಂದು ಚಣ ಇಲ್ಲಿ ಕೂತು ಬಾವಿಯಿಂದ ಒಂದು ಗುಟುಕು ನೀರು ಕುಡಿದು, ತಿರುಗಿ ಹೊರೆ ಹೊತ್ತುಕೊಂಡು ಪೇಟೆಗೆ ಹೋಯ್ತಾರೆ." 
                   ಇದು ಮುತ್ತನ  ಪಾರಮಾರ್ಥಿಕತೆ.  ಅವನು ನಿರಕ್ಷರಕುಕ್ಷಿ, ಹೆಂಡಕುಡುಕ, ಹೊಟ್ಟೆಗಿಲ್ಲದ ಬಡವ, ಮುದುಕ.  ಆದರೆ ಅವನ ಹೃದಯಸಂಪತ್ತು! ಮೈಮುರಿದುಕೊಂಡು ಹಳ್ಳಗಳೆನ್ನದೆ ಕಲ್ಲುಗಳನ್ನು  ಎತ್ತಿ ನೆಟ್ಟ.  ಆ ಕಲ್ಲು  ಸಾಗಿಸುವುದು ತನ್ನ ಕೈಯಿಂದಾಗದ ಕೆಲಸವಾದ ಕಾರಣ ಬಾಡಿಗೆಗೆ ಹಣ ಬೇಡಿದ.  ಅವನ ಶ್ರದ್ಧೆ ಪರಿಶ್ರಮಗಳ ಪಕ್ಕದಲ್ಲಿ ಆ ಹಣ ತರಗೆಲೆ.  ಅವನಿಗೆ ಬಂದ ಲಾಭವೇನು?  ಹಳ್ಳಿಯ ಜನ ಅಲ್ಲಿ ಹೊರೆಯಿಳಿಸಿ ಉಸ್ಸಪ್ಪಾ! ಎಂದು ಆಯಾಸ ಕಳೆದಾಗ, ಮುತ್ತನ  ಮುಖ ಆತ್ಮತೃಪ್ತಿಯ ಪ್ರತಿಬಿಂಬವಾಗುತ್ತದೆ.  ಮುತ್ತನು ಈ ತೃಪ್ತಿಗಾಗಿ ಬಹು ವರ್ಷಗಳ ಕಾಲ ಚಿಂತಿಸಿ ತಾಳ್ಮೆಯಿಂದ ದುಡಿದ.
                      ಇದು ಮಹನೀಯ ಗುಣ.
ಹೆಚ್ ಏನ್ ಪ್ರಕಾಶ್ 17 10 2012

4 comments:

 1. ದುಡ್ಡಿಲ್ಲದೆ ಇರುವವ ಬಡವನಲ್ಲ..ಹೃದಯದಲ್ಲಿ ಬೇರೊಬ್ಬರಿಗೆ ಒಳ್ಳೆಯದನ್ನು ಬಯಸದವ ಬಡವ...ಒಳ್ಳೆಯ ಅನುಭವದ ಲೇಖನ..ಧನ್ಯವಾದಗಳು ಚಿಕ್ಕಪ್ಪ.

  ReplyDelete
  Replies
  1. ಆತ್ಮೀಯ ಶ್ರೀಕಾಂತ,
   ಸಮಯೋಚಿತವಾದ ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು,

   Delete
 2. ಜೀವನ "ಅತಿಚಿಕ್ಕ"ದರಲ್ಲಿರೋ ಸ್ವಾರಸ್ಯ "ದೊಡ್ಡ"ದರಲ್ಲಿರೋದಿಲ್ಲವೆಂದೇ ಇರಬೇಕು, ಡಿ.ವಿ.ಜಿ. ಮತ್ತು ಅವರಂಥ ಹಲವರು ಜೀವದುದ್ದಕ್ಕೂ ಬಡತನವನ್ನೇ ಸಂಪಾದಿಸಿ ನಲಿದರು.

  ReplyDelete
  Replies
  1. ಆತ್ಮೀಯ ರಜನೀಶ,
   ಗುಂಡಪ್ಪನವರಿಗೆ ಜೀವನೋತ್ಸಾಹದಲ್ಲಿ ಬಡತನ ಇರಲಿಲ್ಲ. ಹೀಗಾಗಿ ಅವರೆಂದು ಬಡವರಲ್ಲ. ಬಡತನ ಸಾಪೆಕ್ಷವಲ್ಲವೇ!!
   ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು

   Delete