October 16, 2012

ದೊಡ್ಡವರ ದಾರಿ..............7

      
              ನಮ್ಮೆಲ್ಲರ ಬದುಕಿನಲ್ಲಿ ತೊಂದರೆ ತಾಪತ್ರಯಗಳು ಕಾಡಿದಾಗ, ಎಲ್ಲ ಕಷ್ಟಗಳು ನಮ್ಮೊಬ್ಬರನ್ನೇ ಕಾಡುತ್ತವೆ ಎಂದುಕೊಳ್ಳುತ್ತೇವೆ.  ಬೇರೆಯರ ಕಷ್ಟಗಳು ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ.  ಎಲ್ಲರ ಕಷ್ಟಕ್ಕಿಂತ ನಮ್ಮ ಕಷ್ಟವೇ ದೊಡ್ಡದೆಂದು ಭಾವಿಸಿ ಗೊಣಗುತ್ತ, ಶಪಿಸುತ್ತ   ಬಂದಿರುವ ಕಷ್ಟವನ್ನು ನೀಸುತ್ತೇವೆ.  ಇಂತಹ ಕಷ್ಟದ ಸಮಯದಲ್ಲಿ ಸಮಾಧಾನ ಪರಿಹಾರ ಎಲ್ಲಿ ಸಿಗಬಹುದೆಂದು ಕೆಲವರು ಬೇರೆ ಬೇರೆ ದಾರಿ ಹುಡುಕಾಡುತ್ತಾ ತಮ್ಮ ಶಕ್ತಿ ಸಾಮರ್ಥ್ಯವನ್ನು ನಷ್ಟ ಮಾಡಿಕೊಳ್ಳುತ್ತಾ ಇನ್ನಷ್ಟು ಕಷ್ಟಗಳನ್ನು ತಲೆಯ ಮೇಲೆ ಎಳೆದುಕೊಳ್ಳುತ್ತಾರೆ.

                    ಇಂತಹ ಒಂದು ಸಂದರ್ಭದಲ್ಲಿ ಓರ್ವ,  ಭಕ್ತ ಭಗವಾನ್ ರಮಣ ಮಹರ್ಷಿಗಳಲ್ಲಿ ಹೋಗಿ ತನಗಿರುವ ಕಷ್ಟ, ಸಮಸ್ಯೆಗಳನ್ನೆಲ್ಲಾ ನಿವೇದಿಸಿಕೊಂಡು "ದೇವರಿಗೆ ನನ್ನ ಮೇಲೇಕೆ ಇಷ್ಟೊಂದು ಸಿಟ್ಟು ? " ಎಂದು ಪ್ರಶ್ನಿಸಿದ.  ಭಗವಾನರು ನಸುನಕ್ಕು " ನಿಮ್ಮ ಊರಿನಲ್ಲಿ ಮಡಿವಾಳರು ಇದ್ದಾರೆಯೇ? " ಎಂದು ಪ್ರಶ್ನಿಸಿದರು." ಖಂಡಿತ ಇದ್ದಾರೆ " ಎಂದು ಆ ಭಕ್ತ ಹೇಳಿದ. " ನೀವು ಎಂದಾದರು ಮಡಿವಾಳರು ಬಟ್ಟೆ ಶುಭ್ರ ಮಾಡುವುದನ್ನು ನೋಡಿದ್ದಿರಾ? "    ಎಂದು ಮರು ಪ್ರಶ್ನೆ ಹಾಕಿದರು. " ಖಂಡಿತ ನೋಡಿದ್ದೇನೆ " ಎಂದು ಉತ್ತರಿಸಿದ  " ಮಡಿವಾಳ ಬಟ್ಟೆಯನ್ನು ಶುಭ್ರ ಮಾಡಲು, ಬಂಡೆಯ ಮೇಲೆ ಎತ್ತಿ ಎತ್ತಿ ಬಡಿದು, ನೀರಿನಲ್ಲಿ ಅದ್ದಿ ಅದ್ದಿ, ಮತ್ತೆ ಬಡಿದು ಶುಭ್ರ ಮಾಡುತ್ತಾನೆ.  ಶುಭ್ರವಾಗಿಲ್ಲವೆಂದು ತಿಳಿದರೆ ಮತ್ತೆ ಬಂಡೆಯಮೇಲೆ ಬಡಿಯುತ್ತಾನೆ. ಹೌದಲ್ಲವೇ? " ಎಂದು ಮಹರ್ಷಿಗಳು ಪ್ರಶ್ನಿಸಿದರು.  " ಹೌದು , ಹೌದು " ಎಂದು    ಗೋಣು   ಆಡಿಸುತ್ತ ನಿಂತ. " ಮಡಿವಾಳನಿಗೆ ನಿಮ್ಮ ಬಟ್ಟೆಯ ಮೇಲೋ ಅಥವಾ ನಿಮ್ಮ ಮೇಲೋ ಇರುವ ಸಿಟ್ಟಿನಿಂದ ಬಡಿಯುತ್ತಾನೆಯೇ ? ಇಲ್ಲ ತಾನೇ? ಹಾಗೆ ಬಡಿಯದೇ ಹೋದರೆ ಬಟ್ಟೆ ಶುಭ್ರವಾಗದು. ಭಗವಂತನು ಹೀಗೆ ನಿಮಗೆ ಕಷ್ಟ ಕೊಟ್ಟಿರುವುದು ನಿಮ್ಮನ್ನು ಗಟ್ಟಿಗೊಳಿಸಲು ಮತ್ತು ನಿಮ್ಮನ್ನು ಪರಿಶುದ್ದರನ್ನಾಗಿ ಮಾಡಲುಮಾತ್ರ!! ಇದು ಭಗವಂತ  ನೀಡಿರುವ ತಾತ್ಕಾಲಿಕ ಕಷ್ಟವೇ ಹೊರತು ನಿಮ್ಮ ಮೇಲಿನ ಸಿಟ್ಟಿನಿಂದಲ್ಲ." ಎಂದು ಸಮಾಧಾನ ಮಾಡಿದರು.  

2 comments:

  1. ಲೇಖನ ಸೊಗಸಾಗಿದೆ ಚಿಕ್ಕಪ್ಪ..ಧನ್ಯವಾದಗಳು

    ReplyDelete