ನನ್ನ ಸ್ನೇಹಿತರ ವೃದ್ಧ ತಂದೆ ತಾಯಿ ೯೦ ಮತ್ತು ೮೫ ರ ಆಸು ಪಾಸಿನವರು. ತಾತ ಅಜ್ಜಿ ಅಂದ್ರೆ ಮೊಮ್ಮಕ್ಕಳಿಗೆ ಪ್ರಾಣ. ಅಪ್ಪ ಅಮ್ಮ ಅಂದ್ರೆ ನನ್ನ ಸ್ನೇಹಿತರ ಕುಟುಂಬಕ್ಕೂ ಅಷ್ಟೇ ಗೌರವ.
ಒಮ್ಮೆ ಕಾಲು ಜಾರಿ ಬಿದ್ದ ತಾತ ಹಾಸಿಗೆ ಹಿಡಿದರು. ಅಜ್ಜಿ ಯಾರಿಗೂ ಬಿಡದೆ ತಾತನ ಸೇವೆಯನ್ನು ಮಾಡುತ್ತಿದ್ದರು. ತಾತ ಒಮ್ಮೆಯೂ ನರಳದೆ, ಬಂದವರ ಜೊತೆ ಮಾತನಾಡಿಕೊಂಡು ಎಲ್ಲರನ್ನು ವಿಚಾರಿಸುತ್ತಿದ್ದರು. ಹಾಸ್ಯ ಮಾಡುತ್ತಿದ್ದರು. ಮನೆ ತುಂಬಾ ನೆಂಟರು ಇದ್ದ ಒಂದು ದಿನ ಇದ್ದಕ್ಕೆ ಇದ್ದಹಾಗೆ ಗಟ್ಟಿಮುಟ್ಟ ಆಗಿದ್ದ ಅಜ್ಜಿ ಬೆಳಗ್ಗೆ ಹಾಸಿಗೆಯಿಂದ ಏಳಲೇ ಇಲ್ಲ. ಸುಖವಾಗಿ ನಿದ್ದೆಯಲ್ಲೇ ಸಾವನಪ್ಪಿತ್ತು. ಮನೆಯವರಿಗೆಲ್ಲ ಆಘಾತ. ಏನು ಮಾಡಲು ತಿಳಿಯದ ಸ್ನೇಹಿತ ಇರುವ ವಿಚಾರ ತೋಡಿಕೊಂಡು ಗದ್ಗದಿತನಾದ. ಪಾಪ ತಾತನಿಗೆ ಈ ವಿಚಾರ ಗೊತ್ತಿಲ್ಲ. ಮಲಗಿದ ಜಾಗದಿಂದಲೇ ಅಜ್ಜಿಯ ಬರುವಿಕೆಗಾಗಿ ಕಾಯುತ್ತಿತ್ತು. ಸುಮಾರು ಹೊತ್ತಾದರೂ ಅಜ್ಜಿ ಬರದಿರುವುದ ಕಂಡು ಮಗನಲ್ಲಿ ವಿಚಾರಿಸಿತು " ನನ್ನ ಬಿಟ್ಟು ಎಲ್ಲಿ ಹೋದಳು? ಬೆಳಗ್ಗೆಯಿಂದ ಮುಖವೇ ತೋರಿಸಿಲ್ಲ ! "ಅಂತ ಹಲುಬಿದರು. ಮಗನಿಗೆ ಹೇಗೆ ಅಮ್ಮನ ಸಾವಿನ ಸುದ್ದಿ ತಿಳಿಸುವುದು ಅಂತ ಹಿಂಜರಿಕೆಯಾಗಿ ಹಾರಿಕೆ ಉತ್ತರ ಕೊಟ್ಟು ರೂಮಿನಿಂದ ಹೊರಕ್ಕೆ ಬಂದ.
ಇರುವ ವಿಚಾರ ತಾತನಿಗೆ ತಿಳಿಸುವ ಬಗ್ಗೆ ಎಲ್ಲ ಯೋಚಿಸಿ ನಾವು ತಾತನ ಹತ್ತಿರ ಹೋಗಿ " ತಾತ, ನಿಮಗೊಂದು ವಿಚಾರ ಹೇಳಬೇಕೆಂದು ಬಂದೆ " ಎಂದು ಪೀಠಿಕೆ ಹಾಕಿದೆ. ಬೆಳಗಿನ ಇಷ್ಟು ಮುಂಚೆ ಬಂದಿರುವ ಬಗ್ಗೆ ವಿಚಾರಿಸಿದರು. ನಿಧಾನವಾಗಿ ಅವರ ಮೊಮ್ಮೊಕ್ಕಳು ಬಂದು ಕೂಡಿಕೊಂಡರು. ಎಲ್ಲರ ಮನಸ್ಸು ಬಾಡಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ತಾತ " ಏನೋ ಹೇಳಬೇಕೂನ್ದೆ?' ಎಂದು ಪ್ರಶ್ನಿಸಿದರು. ಗಂಟಲು ಸರಿಮಾಡಿಕೊಂಡು ಅಜ್ಜಿ ವಿಧಿವಶರಾದ ವಿಚಾರ ತಿಳಿಸಿದೆ. " ಅಯ್ಯೋ ನನ್ನನ್ನು ಬಿಟ್ಟು ಹೊರತು ಹೋದಳೆ? " ಎಂದು ಅವರ ಕಣ್ಣಲ್ಲಿ ಎರಡು ಹನಿ ನೀರು ಉದುರಿತು. ಒಂದೆರಡು ಕ್ಷಣದಲ್ಲಿ ಸಾವರಿಸಿಕೊಂಡು " ಇನ್ನೇನು ಮಾಡೋಕ್ಕೆ ಆಗುತ್ತೆ? ಅವಳ ಭಾಗ್ಯ ಅವಳು ತಗೊಂಡು ಹೋದಳು. ನೀವು ನನಗೆ ಬೇರೊಂದು ಹೆಣ್ಣು ನೋಡಿ, ಮದುವೆಗೆ!!!!!!! " ಎಂದರು, ಅಲ್ಲಿದ್ದವರಿಗೆ ಆಶ್ಚರ್ಯ. ಸಹಜವಾಗಿ ಸಾವನ್ನು ತೆಗೆದುಕೊಂಡ ತಾತ ಮುಖವನ್ನು ಗೋಡೆ ಕಡೆಗೆ ತಿರುಗಿಸಿದರು.
ಮಧ್ಯಾನ್ಹದ ಹೊತಿಗೆ ಅಜ್ಜಿಯ ಪಾರ್ಥಿವ ಶರೀರವನ್ನು ತೆಗೆಲಾಯಿತು. ತಾತ ಮೌನವಾಗಿ ಕಣ್ಣೇರು ಹಾಕಿ ವಿದಾಯ ಹೇಳಿದರು. ಸ್ಮಶಾನದಲ್ಲಿ ಅಜ್ಜಿಯ ಅಂತ್ಯ ಸಂಸ್ಕಾರಕ್ಕೆ ವಿಧಿ ನಡೆಸುತ್ತಿರುವಾಗಲೇ, ಮನೆಯಿಂದ ಒಬ್ಬ ಹಿರಿಯರು ಬಂದು ತಾತ ಕೊನೆಯುಸಿರೆಳೆದರೆಂದು ತಿಳಿಸಿದರು. ನಮಗೆಲ್ಲ ಆಶ್ಚರ್ಯ. ಅಜ್ಜಿಯ ಪಾರ್ಥಿವ ಶರೀರ ತೆಗೆದುಕೊಂಡು ಹೋರಟ ಐದು ಹತ್ತು ನಿಮಿಷದಲ್ಲೇ ತಾತ ಬಿಕ್ಕಳಿಸಲು ಪ್ರಾರಂಭ ಮಾಡಿ, ಈಗ ಅರ್ಧ ಗಂಟೆಯ ಹಿಂದೆ ಜೀವ ಬಿಟ್ಟರು ಎಂದು ಆ ಹಿರಿಯರು ಹೇಳಿದರು. ಎಂತಹ ಸುಖವಾದ ಸಾವು!
ಇದ್ದಾಗಲೂ ಒಂದು ಕ್ಷಣವೂ ಅಜ್ಜಿಯನ್ನು ಬಿಡದ ತಾತ ಸಾವಿನಲ್ಲೂ ಬಿಡಲು ತಯಾರಿರಲಿಲ್ಲ. ಅಜ್ಜಿಯ ಜೊತೆ ಸಾವಿನಲ್ಲೂ ಒಂದಾದರು. ನಂತರದಲ್ಲಿ ಇಬ್ಬರ ಪಾರ್ಥಿವ ಶರೀರಗಳನ್ನು ಒಟ್ಟಿಗೆ ಸಂಸ್ಕಾರ ಮಾಡಲಾಯಿತು. ಇಂದಿಗೆ ಹತ್ತಾರು ವರ್ಷಗಳೇ ಕಳೆದಿದ್ದರು ಇವರ ಆದರ್ಶ ಜೀವನ ಎಂದಿಗೂ ನಮಗೆ ಮಾದರಿಯೇ!
"ಶರಣಾದವರ ಜೀವನ ಮರಣದಲ್ಲಿ ನೋಡು"
ReplyDeleteಎನ್ನುವ ಹಾಗೆ..ಪ್ರೀತಿ ಪ್ರೇಮದಿಂದ ಕೂಡಿದ ದಾಂಪತ್ಯಕ್ಕೆ ಶರಣಾದ ದಂಪತಿಗಳು..ಮರಣದಲ್ಲೂ ಕೂಡಿಯೇ ಸಾಗಿದ್ದು ..ಅಚ್ಚರಿ ಎನಿಸಿದರು..ಒಬ್ಬರ ಅಗಲಿಕೆಯ ನೋವು..ಅಸಹನೀಯವಾಗುತ್ತದೆ..ಎನ್ನುವುದು ಸೂರ್ಯ ಚಂದ್ರರಷ್ಟೇ ನಿಜ...
ಆ ದಂಪತಿಗಳ ಆಶೀರ್ವಾದ ಸದಾ ಮನುಕುಲದ ಮೇಲೆ ಇರಲಿ ಎಂದು ಆಶಿಸೋಣ..ಸುಂದರ ಅನುಭವದ ಕಥಾನಕ..ಚಿಕ್ಕಪ್ಪ..
ಧನ್ಯವಾದಗಳು ಶ್ರೀಕಾಂತ
Deleteಬದುಕನ್ನು ಸರಳ ಸುಂದರವಾಗಿಸಿಕೊಂಡೊಡನೆಯೇ ನಮ್ಮ ಸಾವು ನಿರ್ಮಲ-ನಿರಾಳವಾಗಿಬಿಡುತ್ತದೆ.
ReplyDelete"೯೦ರ ಅಜ್ಜನ ಮತ್ತೊಂದು ಹುಡುಗಿ ಹುಡುಕಿ" ಎನ್ನುವಾಗಿನ ಜೀವನೋತ್ಸಾಹವೇ, ಕೈ-ಹಿಡಿದಾಕೆಯನ್ನು ಸೇರಲು ಸಾಕಾಯಿತು.
ನಿನ್ನ ಮಾತು ನಿಜ. ಜೀವನೋತ್ಸಾಹವೇ ಇಲ್ಲದ ಈ ದಿನಗಳಲ್ಲಿ ಇವರು ನಮಗೆ ಮಾದರಿಯೇ. ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.
Delete