ಒಮ್ಮೆ ಭಾರತದ ರಾಷ್ಟ್ರಪತಿಗಳಾದ ಡಾ.ಎ ಪಿ ಜೆ ಅಬ್ದುಲ್ ಕಲಾಂರವರನ್ನು ಒಂದು ಪ್ರಶ್ನೆಯನ್ನು ಕೇಳಲಾಯಿತು. " ಸಾರ್, ನಿಮಗೆ ಬದುಕಿನಲ್ಲಿ ಅತ್ಯಂತ ಸಂತಸ ನೀಡಿದ ಮತ್ತು ಸಾರ್ಥಕ ಎಣಿಸಿದ ಕ್ಷಣ ಯಾವುದು? "
ಕಲಾಮ್ ರವರು ಗಂಟಲು ಸರಿಮಾಡಿಕೊಂಡು ತಮ್ಮ ಅನುಭವದ ಗಂಟನ್ನು ಬಿಚ್ಚಿ ಎಲ್ಲರ ಮುಂದೆ ಇಟ್ಟ " ಒಮ್ಮೆ ನಾನು ಹೈದರಾಬಾದಿನ ನಿಜಾಂ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಪೋಲಿಯೋಪೀಡಿತ ಮಕ್ಕಳ ವಿಭಾಗಕ್ಕೂ ಹೋದೆ. ಆ ಮಕ್ಕಳು ತಮ್ಮ ನಿರ್ಬಲವಾದ ಕಾಲುಗಳಿಗೆ ಹಾಕಲಾಗಿದ್ದ ಲೋಹದ ಕ್ಯಾಲಿಪರ್ಸ್ ಸಹಾಯದಿಂದ ನಡೆಯುವುದಕ್ಕೆ ಬಹಳ ಕಷ್ಟ ಪಡುತ್ತಿದ್ದರು. ಈ ಕ್ಯಾಲಿಪರ್ಸ್ 3 ಕೆ ಜಿ ತೂಕದ್ದಾಗಿದ್ದು ಈ ಮಕ್ಕಳ ಕಾಲಿಗೆ ಹೆಚ್ಚು ಭಾರದ್ದಾಗಿತ್ತು. ಮಕ್ಕಳು ತಮ್ಮ ಕಾಲುಗಳನ್ನು ಎಳೆಯಲು ವಿಶೇಷ ಬಲ ಹಾಕಬೇಕಾಗಿತ್ತು. ಇದು ಮಕ್ಕಳಿಗೆ ಕಷ್ಟವಾಗಿತ್ತು. ಅಲ್ಲಿನ ವೈದ್ಯಾದಿಕಾರಿಗಳು ಈ ವಿಚಾರವನ್ನು ಪ್ರಸ್ತಾಪಿಸುತ್ತಾ, ಈ ವಿಚಾರದಲ್ಲಿ ಮಕ್ಕಳ ನೋವನ್ನು ಮತ್ತು ಕಷ್ಟವನ್ನು ಕಡಿಮೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು."
" ನನಗೆ ಈ ವಿಚಾರ ಕೊರೆಯಲು ಪ್ರಾರಂಭವಾಯಿತು. ನಾನು ನೇರವಾಗಿ ಇಸ್ರೋದ ಪ್ರಯೋಗಾಲಯಕ್ಕೆ ಬಂದು ನನ್ನ ಸಹ ತಂತ್ರಜ್ಞರಿಗೆ ಈ ಸಮಸ್ಯೆಯನ್ನು ವಿವರಿಸಿ, ಇದಕ್ಕೆ ಏನಾದರು ಮಾಡಲು ಸಾಧ್ಯವೇ? ಎಂದು ಸಮಾಲೋಚನೆ ಮಾಡಿದೆ.ನಮ್ಮ ತಂಡ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡು ರಾಕೆಟ್ ತಯಾರಿಸಲು ಉಪಯೋಗಿಸುವ ಒಂದು ವಿಶಿಷ್ಟ ಪದಾರ್ಥದಿಂದ ಮಕ್ಕಳಿಗೆ ಕಾಲಿಪರ್ಸ್ ತಯಾರು ಮಾಡಿತು . ಈ ಕ್ಯಾಲಿಪರ್ಸ್ ಲೋಹಕ್ಕಿಂತ ಹೆಚ್ಚು ಬಲಿಷ್ಠ ವಾಗಿತ್ತು. ಆದರೆ ತೂಕ ಮಾತ್ರ ಹತ್ತು ಪಟ್ಟು ಕಡಿಮೆ ಇತ್ತು, ಅಂದರೆ ಕೇವಲ 300 ಗ್ರಾಂ ತೂಗುತ್ತಿತ್ತು."
" ಈ ಕ್ಯಾಲಿಪರ್ಸ್ ಗಳನ್ನು ಮಕ್ಕಳ ಕಾಲಿಗೆ ತೊಡಿಸಲಾಯಿತು. ಮೂರು ಕೆ ಜಿ ತೂಕದ ಕ್ಯಾಲಿಪರ್ಸ್ ಜಾಗದಲ್ಲಿ 300 ಗ್ರಾಂ ತೂಕದ ಕ್ಯಾಲಿಪರ್ಸ್ ಹಾಕಿಕೊಂಡ ಮಕ್ಕಳ ಸಂತೋಷ ವಿವರಿಸಲಾರೆ. ಆ ಮಕ್ಕಳಿಗೆ ಆನಂದವೋ ಆನಂದ. ಈ ಆನಂದ ಕಂಡ ಮಕ್ಕಳ ತಂದೆತಾಯಿಯರಿಗೆ, ವೈದ್ಯಾದಿಕಾರಿಗಳಿಗೆ ಹೇಳಲು ಏನೂ ಇಲ್ಲದೆ ಕಣ್ಣೀರು ಸುರಿಸಿದರು. ನಾವೆಲ್ಲರೂ ಆನಂದ ಭಾಷ್ಪ ಸುರಿಸಿದೆವು. ನನಗೆ ಇದಕ್ಕಿಂತ ಸಂತಸದ ಕ್ಷಣ ಇನ್ನ್ಯಾವುದು ಇಲ್ಲ. ನನ್ನ ಬದುಕಿನಲ್ಲಿ ದೊಡ್ಡ ಸಾರ್ಥಕದ ಕ್ಷಣ ಇದೊಂದೇ ಎಂದು ಭಾವಿಸುತ್ತೇನೆ."
ಹೌದು! ಇಂತಹ ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಿದಾಗ ಬದುಕು ಸಾರ್ಥಕ ಎನಿಸುತ್ತದೆ.