ನಂಬಿಕೆ
ನಂಬಿಕೆಯೆನ್ನುವುದು ಅತಿ ಅದ್ಭುತವಾದ ವಿಚಾರ. " ನಂಬಿ ಕೆಟ್ಟವರು ಇಲ್ಲವೋ. ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ" ಎನ್ನುತ್ತಾರೆ ಪುರಂದರ ದಾಸರು. ನಂಬಿಕೆಯೆನ್ನುವುದು ಒಂದು ಬಗೆಯ ದಿವ್ಯವಾದ ಔಷಧಿ. ನಂಬಿದವನ ಬಾಳು ಸುಸೂತ್ರ. ನಂಬದೇ ಬದುಕುವುವವನ ಬಾಳು ಘೋರ ಎಂದರೆ ತಪ್ಪೇನೂ ಇಲ್ಲ. ಏಕೆಂದರೆ, ನಂಬದೆ ಹೋದವರು ಜೀವನದ ಪ್ರತಿಕ್ಷಣವೂ ಒಂದಲ್ಲಾ ಒಂದು ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ. ಕಷ್ಟ ನಷ್ಟಗಳಿಗೆ ಕೊರಗುತ್ತಲೇ ಇರುತ್ತಾರೆ. ನಂಬಿದವನಿಗೆ ಕಷ್ಟ ನಷ್ಟ ಇಲ್ಲವೆಂದೇನೂ ಅಲ್ಲ, ಆದರೆ ಕಷ್ಟ ನಷ್ಟಗಳು ಹೆಚ್ಚು ಬಾಧಿಸುವುದಿಲ್ಲ.
ನಾವೊಂದು ವಾಹನದಲ್ಲಿ ಹೋಗುವಾಗ ಆ ಚಾಲಕನ ಮೇಲೆ ನಂಬಿಕೆ ಇಡಬೇಕಾಗುತ್ತದೆ. ಆ ಚಾಲಕ ನಮಗೆ ಅಪರಿಚಿತನೆ ಆದರೂ ತಾತ್ಕಾಲಿಕವಾಗಿಯಾದರೂ ನಂಬಬೇಕಾಗುತ್ತದೆ. ಎಲ್ಲೋ ಇದ್ದ ಹೆಣ್ಣಿಗೆ ಎಲ್ಲೋ ಇರುವ ಗಂಡಿಗೆ ಮದುವೆ. ಈ ದಂಪತಿಗಳು ಬಂಧನದಲ್ಲಿ ಬಂಧಿಯಾಗುವಾಗ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಬದುಕಬೇಕಾಗುತ್ತದೆ. ಇಲ್ಲಿ ಕೂಡಾ ಈ ದಂಪತಿಗಳ ನಂಬಿಕೆಯೇ ಮುಖ್ಯವಾಗುತ್ತದೆ. ನಾವು ತಿನ್ನುವ ಆಹಾರವನ್ನು ಯಾವುದೇ ಭಯವಿಲ್ಲದೆ ಸೇವಿಸುವುದು ಆರೋಗ್ಯಪೂರ್ಣವಾಗಬೇಕಾದರೆ ನಂಬಿಕೆ ಮುಖ್ಯವಾಗುತ್ತದೆ. ದಾರಿಯಲ್ಲಿ ನಡೆಯಬೇಕಾದರೂ ಸುರಕ್ಷಿತವಾಗಿ ಸೇರಬೇಕಾದ ಸ್ಥಳವನ್ನು ತಲಪುತ್ತೇನೆ ಎಂಬ ಭರವಸೆ ಮತ್ತು ನಂಬಿಕೆಯಿಂದಲೇ ನಡೆಯುತ್ತೇವೆ. ಹಬ್ಬ ಹರಿದಿನಗಳಲ್ಲಿ ಮನೆಯ ಬಾಗಿಲಿಗೆ ತೋರಣಗಳಿಂದ ಸಿಂಗರಿಸುವುದರಿಂದ ಒಳ್ಳೆಯ ಭಾವನೆಗಳು ಜಾಗೃತವಾಗುತ್ತವೆಂದು ಭರವಸೆಯಿಂದ ನಂಬುತ್ತೇವೆ. ನಮ್ಮೆದುರು ಹಿರಿಯರು ಕಂಡಾಗ ನಾವು ಶಿರಬಾಗಿ ನಮಸ್ಕರಿಸುವುದರಿಂದ ನಮಗೆ ಒಳ್ಳೆಯ ಆಶೀರ್ವಾದ ದೊರೆತು ನಮಗೆ ಒಳ್ಳೆಯದಾಗುತ್ತೆಂದು ನಂಬುತೇವೆ. ನಮ್ಮ ಕಾಲು ಸೊಟ್ಟಗಾಗಿ, ಶಕ್ತಿ ಕಳೆದುಕೊಂಡು , ಕಣ್ಣು ಮಂಜಾಗಿದ್ದರೂ ನಮ್ಮ ಕೈಯಲ್ಲಿರುವ ಊರುಗೋಲಿನ ಮೇಲೆ ನಾವು ಭರವಸೆ ಇಡುತ್ತೇವೆ, ನಂಬುತ್ತೇವೆ.
ಭಗವಂತನ ನಾಮಸ್ಮರಣೆಯಲ್ಲಿ ಭರವಸೆ ಇಡುತ್ತಾ ಪ್ರತಿಕ್ಷಣ ಭಗವಂತನನ್ನು ನೆನೆಯುತ್ತಾ ಇರುವಾಗ ನಮ್ಮೆಲ್ಲಾ ಕಷ್ಟ ನಿಷ್ಟೂರಗಳು ದೂರವಾಗುವುದಿಲ್ಲವೇ? ಎಂದು ನಂಬುತ್ತೇವೆ. ನಮಗೆ ನಂಬಿಕೆ ಇಡಲು ಒಂದಲ್ಲ ಎರಡಲ್ಲ ಸಾವಿರಾರು ದಾರಿಗಳಿವೆ. ಈ ಎಲ್ಲಾ ದಾರಿಗಳಲ್ಲಿ ಸಂಪೂರ್ಣ ವಿಶ್ವಾಸದಿಂದ, ಶರಣಾಗತಿಯ ಭಾವದಲ್ಲಿ ಮುನ್ನೆಡೆದಾಗ ನಮ್ಮ ನಂಬಿಕೆ ಸುಳ್ಳಾಗುವುದೇ ಇಲ್ಲ. ನಂಬಿದವರಿಗೆ ಒಂದೇ ದಾರಿ, ನಂಬದೆ ಇರುವವರಿಗೆ ಸಾವಿರಾರು ದಾರಿ ಕಾಣುತ್ತವೆ. ನಂಬಿಕೆ ಇರುವವರಿಗೆ ಜೀವನ ಸುಖಕರ, ನಂಬಿಕೆ ಇಲ್ಲದವನಿಗೆ ಪ್ರತಿಕ್ಷಣವೂ ಆತಂಕ.
--
No comments:
Post a Comment