ಸುಖ - ದುಃಖ
" ಸುಖದಿಂದ ಸುಖವು ಎಂದಿಗೂ ಸಿಗುವುದಿಲ್ಲ." ಎನ್ನುತ್ತದೆ ವ್ಯಾಸ ಭಾರತ. ಅಂದರೆ, ಈ ಜೀವನದಲ್ಲಿ ಯಾವುದೂ ಶಾಶ್ವತವೆನ್ನುವ ಸುಖವಾಗಲಿ, ದುಃಖವಾಗಲಿ ಇಲ್ಲ. ಈ ಸುಖ ದುಃಖಗಳು ಬಂದು ಹೋಗುವಂತವುಗಳು. ಇದನ್ನು ತಿಳಿಯದೆ ನಾವುಗಳು ಸುಖ ಬಂದಾಗ ಹಿರಿ ಹಿರಿ ಹಿಗ್ಗಿ, ಕಷ್ಟ ಬಂದಾಗ ಕುಗ್ಗಿ ಹೋಗುತ್ತೇವೆ. ವ್ಯಾಸ ಮಹರ್ಷಿಗಳು ಸುಖವನ್ನು ಪಡೆಯುವ ವಿಧಾನವನ್ನು ತಿಳಿಸುತ್ತಾರೆ. " ಕಷ್ಟ ಪಟ್ಟ ನಂತರ ಸಿಗುವ ಸುಖವೇ ಸುಖ, ಯಾವ ರೀತಿ ಮರಳಿನಲ್ಲಿ ಎಣ್ಣೆ ತೆಗೆಯಲು ಸಾಧ್ಯವಿಲ್ಲವೋ, ಅದೇ ರೀತಿ ಸುಖದಿಂದ ಸುಖ ಪಡೆಯಲು ಸಾಧ್ಯವಿಲ್ಲ. " ಎನ್ನುತ್ತಾರೆ.
ಸುಖ ಎನ್ನುವುದು ಯಾವುದೇ ವಸ್ತುವಿನಲ್ಲಿಲ್ಲ. ಹಾಗೇನಾದರೂ ಸುಖವು ವಸ್ತುವಿನಲ್ಲಿ ಇರುವುದಾದರೆ, ಆ ವಸ್ತುವಿನಿಂದ ಎಲ್ಲರಿಗೂ, ಎಲ್ಲ ಕಾಲಕ್ಕೂ ಸುಖ ಸಿಗಬೇಕಲ್ಲವೇ? ಒಂದು ಕಾಲಕ್ಕೆ ಸುಖ ಎನಿಸಿದ್ದು ಇನ್ನೊಂದು ಕಾಲಕ್ಕೆ ಸುಖ ಎನಿಸದೆ ಕಷ್ಟ ಎನಿಸುತ್ತದೆ. ಚಳಿಗಾಲದಲ್ಲಿ ಸಿಗುವ ಬಿಸಿನೀರಿನ ಸುಖ , ಬೇಸಿಗೆಯಲ್ಲಿ ಸಿಗದು. ಈ ಸುಖ ದುಃಖ ಎನ್ನುವುದು ಒಂದು ಮನೋಧರ್ಮ. ಮನಸ್ಸು ಸುಖವಾಗಿದ್ದರೆ, ಈ ಜಗತ್ತೇ ಸುಂದರವಾಗಿ ಕಾಣುತ್ತದೆ.
ಸುಖಕ್ಕೂ ಒಂದು ಕಾರಣವಿರುತ್ತದೆ, ಅದೇ ರೀತಿ ದುಃಖಕ್ಕೂ ಒಂದು ಕಾರಣವಿರುತ್ತದೆ. ಈ ಕಾರಣ ನಮಗೆ ಹೆಚ್ಚಿನಪಾಲು ತಿಳಿದೇ ಇರುತ್ತದೆ. ಸುಖವನ್ನು ಪಡೆದ ಕಾರಣ ಕಷ್ಟದ ಜೀವನವಾಗಿದ್ದರೆ, ದುಃಖ ಬಂದಾಗ ಮನಸಿಗೆ ಹೆಚ್ಚು ನೋವಾಗುವುದಿಲ್ಲ. ಬಿಸಿಲಿನಲ್ಲಿ ನಡೆದವನಿಗೆ ಮರದ ನೆರಳು ದೊರೆತಾಗ ಅದೇ ಅವನ ಪರಮ ಸುಖ. ಇದೆ ರೀತಿ ಪ್ರಾಮಾಣಿಕ ಬದುಕು ನಡೆಸಿದವನಿಗೆ ಸುಖ ದುಃಖ ಇವೆರಡು ಸಮಾನ ಪ್ರಕಾರದ್ದಾಗಿರುತ್ತದೆ. ಭಗವಂತನಲ್ಲಿ ನಂಬಿಕೆ, ಶ್ರದ್ಧೆ ಇರುವವನಿಗೆ ದುಃಖ ಸುಖಗಳು ಭಗವಂತನ ವರಪ್ರಸಾದವಾಗುತ್ತದೆ. ಆಗ ಸುಖ ದುಃಖವಾಗಲಿ ಸಾಧಕನನ್ನು ಬಾಧಿಸುವುದಿಲ್ಲ.
No comments:
Post a Comment