ದೃಢ ನಂಬಿಕೆ ಮತ್ತು ವಿಶ್ವಾಸ
ಡಾ . ಬೆನ್ಸನ್, ಬಾಸ್ಟನ್ ನಗರದ ಪ್ರಖ್ಯಾತ ವೈದ್ಯರು. ತಮ್ಮ ನಲವತ್ತು ವರ್ಷದ ಸಂಶೋಧನೆಯ ಸಾರಾಂಶವನ್ನು ೨೬ ನೇ ಜೂನ್ ೧೯೭೯ ರ " ದಿ ಹಿಂದೂ " ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಡಾಕ್ಟರ್ ಗಳ ವ್ಯಕ್ತಿತ್ವ, ಅವರು ನೀಡುವ ಸಲಹೆ ಸೂಚನೆಗಳ ಪ್ರಭಾವ, ರೋಗಿಗಳು ಡಾಕ್ಟರ್ ಗಳಲ್ಲಿ ಇರಿಸುವ ವಿಶ್ವಾಸ, ಯಾವ ಔಷಧೀಯ ದ್ರವ್ಯ ಗುಣವಿಲ್ಲದ ಔಷಧಿಗಳನ್ನೂ ಸೇವಿಸಿಯೂ " ಈ ಮಾತ್ರೆ ಬಹಳ ಒಳ್ಳೆಯ ಗುಣ ಹೊಂದಿದೆ. ಒಳ್ಳೆ ಕೆಲಸ ಮಾಡುತ್ತದೆ." ಎಂದು ನಂಬಿ ಎದೆನೋವು, ಹೃದಯರೋಗಗಳಂತಹ ಖಾಯಿಲೆಯಿಂದ ಪಾರಾದ ಸತ್ಯ ಘಟನೆಗಳ ಬಗ್ಗೆ ಡಾಕ್ಟರ್ ವಿವರಿಸುತ್ತಾರೆ. ಇಂತಹ ಅನೇಕ ಘಟನೆಗಳಲ್ಲಿ ಇದೊಂದು.
ದೆಹಲಿ ಸಮೀಪದ ಒಂದು ಹಳ್ಳಿಯಲ್ಲಿ ಹೊಲದ ಕೆಲಸಗಾರನಾಗಿ ದುಡಿಯುತ್ತಿದ್ದ ಒಬ್ಬಾತ ಆಸ್ತಮಾ ರೋಗದಿಂದ ನರಳುತ್ತಿದ್ದ. ರೋಗ ಉಲ್ಬಣಿಸಿದಾಗ ನಗರಕ್ಕೆ ಹೋಗಿ ಡಾಕ್ಟರ್ ಬಳಿ ತನ್ನ ಸಮಸ್ಯೆ ಹೇಳಿಕೊಂಡು ಔಷಧ ನೀಡುವಂತೆ ಬೇಡಿದ. ಈತನ ಪರಿಸ್ಥಿಯನ್ನು ನೋಡಿದ ಡಾಕ್ಟರ್ ಸಂಯಮದಿಂದ ಪರೀಕ್ಷಿಸಿ, ತಮ್ಮ ಕ್ಲಿನಿಕ್ ಚೀಟಿಯಲ್ಲಿ ಔಷಧವನ್ನು ಬರೆದು " ಈ ಚೀಟಿಯಲ್ಲಿರುವ ಔಷಧವನ್ನು ಹದಿನಾಲ್ಕು ಭಾಗವಾಗಿ ಮಾಡಿ ಬೆಳಿಗ್ಗೆ ಸಂಜೆ ಬಿಡದಂತೆ ಸೇವನೆ ಮಾಡು. ಒಂದು ವಾರ ಕಳೆದುಕೊಂಡು ಬಾ. ನಿನ್ನ ಆರೋಗ್ಯ ಖಂಡಿತಾ ಸುಧಾರಣೆ ಆಗಿರುತ್ತದೆ. " ಎಂದು ವಿಶ್ವಾಸ ತುಂಬಿ ಕಳುಹಿಸಿದರು. ಆತ ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ, ಒಂದು ವಾರದ ನಂತರ ಡಾಕ್ಟರ್ ಬಳಿಗೆ ಬಂದು ಸಂತಸದಿಂದ " ನೀವು ಕೊಟ್ಟ ಚೀಟಿ ಔಷಧಿ ರಾಮಬಾಣದಂತೆ ಕೆಲಸಮಾಡಿದೆ. " ಎಂದ. ಡಾಕ್ಟರ್ ಸಂತೋಷದಿಂದ " ಹೌದೇ! ಆ ಚೀಟಿಕೊಡು ನೋಡೋಣ. " ಎಂದರು. ಆದರೆ, ಅವರಿಗೊಂದು ಆಶ್ಚರ್ಯ ಕಾಡಿತ್ತು. ಆ ರೋಗಿಯು ಡಾಕ್ಟರ್ ಕೊಟ್ಟ ಆ ಚೀಟಿಯನ್ನೇ ಹದಿನಾಲ್ಕು ಸಮಭಾಗ ಮಾಡಿ ದಿನಕ್ಕೆ ಎರಡು ಬಾರಿಯಂತೆ ಸೇವಿಸಿಬಿಟ್ಟಿದ್ದ. ಡಾಕ್ಟರ್ ಕ್ಷಣಕಾಲ ಚಕಿತರಾಗಿ ಪರೀಕ್ಷೆಗೆ ಮುಂದಾಗಿ , ವಿವರವಾಗಿ ಪರೀಕ್ಷಿಸಿದರು. ಆತನ ರೋಗ ತಕ್ಕಮಟ್ಟಿಗೆ ಗುಣವೂ ಆಗಿತ್ತು. ಆ ಡಾಕ್ಟರ್ ಕ್ಷಣಕಾಲ ಚಿಂತಿಸಿ " ಈಗ ನೀನು ಗುಣಮುಖನಾಗಿದ್ದೀಯ, ಆಹಾರದಲ್ಲಿ ಕ್ರಮವಾಗಿರು " ಎಂದು ಹೇಳಿ ಕಳುಹಿಸಿದರು.
" ರೋಗಿ ಇರಿಸುವ ನಂಬಿಕೆಗೆ ಆಘಾತ ಉಂಟುಮಾಡದೇ ಇದ್ದರೆ ಸಾಕು " ಎನ್ನುವುದು ಡಾಕ್ಟರ್ ಅಭಿಪ್ರಾಯವಾಗಿದೆ. ಇಂತಹ ಘಟನೆಗಳ ಹಿನ್ನೆಲೆಯಲ್ಲಿ ಕೆಲಸಮಾಡಿದ ಶಕ್ತಿ ಅಥವಾ ನಿಯಮ ಎಂದರೆ ದೃಢ ನಂಬಿಕೆ ಮತ್ತು ವಿಶ್ವಾಸ. ಈ ದೃಢವಾದ ನಂಬಿಕೆಯು ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಉತ್ಪಾದನೆ ಮಾಡುತ್ತದೆ ಎಂದು ಡಾ. ಬೆನ್ಸನ್ ಖಚಿತವಾಗಿ ಅಭಿಪ್ರಾಯ ಪಡುತ್ತಾರೆ.
No comments:
Post a Comment