March 29, 2019

ನಿತ್ಯ ಮುಕ್ತರು
ಈ ಬದುಕೇ ಒಂದು ನಾಟಕ ರಂಗ. ಇದರಲ್ಲಿ ನಾವೇ ಪಾತ್ರಧಾರಿಗಳು. ನಮ್ಮ ಸ್ವರೂಪ, ಬಣ್ಣ, ಮೇಕಪ್ ,ಉಡಿಗೆ ಮತ್ತು ತೊಡಿಗೆಗಳೆಲ್ಲವೂ ಸಂಧರ್ಭ ಮತ್ತು ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ. ನಾವು ಸಿರಿತನದಲ್ಲಿ ಒಂದು ಸ್ವರೂಪ, ಬಡತನದಲ್ಲಿ ಮತ್ತೊಂದು ರೂಪ, ಸೋತಾಗ ಒಂದು ವೇಷ, ಗೆದ್ದಾಗ ಮತ್ತೊಂದು ವೇಷ. ಹೀಗೆ ನಮ್ಮ ಸ್ವರೂಪ, ವೇಷಗಳನ್ನು ಬದಲಿಸುತ್ತಲೇ ಇರುತ್ತೇವೆ. ಆದರೆ, ಕೆಲವರು ಮಾತ್ರ ನಿತ್ಯ ಜೀವನದಲ್ಲಿ ಬರುವ ಸುಖ - ದುಃಖ, ಸಿರಿತನ - ಬಡತನ, ಸೋಲು - ಗೆಲುವುಗಳೆಲ್ಲವೂ ಇದ್ದೇ ಇರುತ್ತದೆ ಎಂದು ಭಾವಿಸುತ್ತಾ ಇಂತಹ ಸಮಯದಲ್ಲಿ ಏನೇ ಬಂದರೂ ಸ್ವಲ್ಪವೂ ವಿಚಲಿತರಾಗದೆ ತಮ್ಮ ಮನಸ್ಸನ್ನು ಏಕರೂಪದಲ್ಲಿ ಇಟ್ಟುಕೊಂಡಿರುತ್ತಾರೆ. ಶ್ರೀ ಕೃಷ್ಣ ಹೇಳಿದಂತೆ " ಸುಖ ದುಃಖ ಸಮೇಕೃತ್ವಾ ಲಾಭಾ ಲಾಭೌ ಜಯಾ ಜಯಃ " ಎನ್ನುವಂತೆ ಇರುತ್ತಾರೆ. ಇಂತಹವರನ್ನೇ ಮಹಾತ್ಮರು, ಮುಕ್ತಾತ್ಮರು ಎನ್ನುವುದು.
ಈ ದೇಹದ ದೃಷ್ಟಿಯಿಂದ ನಾವು ಸ್ತ್ರೀ - ಪುರುಷ, ಬಡವ - ಬಲ್ಲಿದ, ಸಶಕ್ತ - ಅಶಕ್ತ, ಹೀಗೆಲ್ಲಾ ವಿಂಗಡಿಸುತ್ತೇವೆ. ನಾವು ಎಲ್ಲರಲ್ಲೂ ಇಲ್ಲ , ಸಲ್ಲದ ಬೇಧ ಎಣಿಸುತ್ತೇವೆ. ಜಾತಿ ಪಂಗಡಗಳಾಗಿ ವಿಂಗಡಿಸುತ್ತೇವೆ. ಇದರ ಫಲವಾಗಿ ನಾವು ಸಮಾಜದಲ್ಲಿ ದುಃಖವನ್ನು ತಂದುಕೊಳ್ಳುತ್ತೇವೆ. ಜೀವನ ಪೂರ್ತಿ ಮಾನಸಿಕ ನೆಮ್ಮದಿ ಇಲ್ಲವೆಂದು, ಶಾಂತಿ ಬೇಕೆಂದು ಗೋಳಾಡುತ್ತೇವೆ. ಆದರೆ, ಪರಮಾತ್ಮನ ದೃಷ್ಟಿಯಿಂದ ನಾವೆಲ್ಲಾ ಒಂದೇ. ಇದನ್ನು ಅರಿಯದೆ ಸುಮ್ಮನೆ ಬಡಿದಾಡುತ್ತೇವೆ.
ದೀಪವು ಅರಮನೆಯಲ್ಲಿರಲಿ, ಗುಡಿಸಿನಲ್ಲಿ ಇರಲಿ ಅದು ಒಂದೇ ರೀತಿಯಲ್ಲಿ ಬೆಳಗುತ್ತಿರುತ್ತದೆ. ದೀಪದ ಅರಿವಿನಂತೆ ಪರಮಾತ್ಮನ ಅರಿವು ಯಾರಿಗಿದೆಯೋ, ಅವರು ಈ ಆಸೆ - ಆಮಿಷಗಳ ಸುಳಿಗೆ ಸಿಕ್ಕಿ ಬೀಳದೆ ಜೀವನವನ್ನು ಬಂದಂತೆ ಅನುಭವಿಸುತ್ತಾ ಶಾಂತಿ ಮತ್ತು ನೆಮ್ಮದಿಯಿಂದ ಬದುಕುತ್ತಾರೆ. ಇವರು ಕಷ್ಟಗಳಿಗೆ ಎದೆ ಗುಂದದೆ, ಸುಖಗಳಿಗೆ ಹಿಗ್ಗದೇ ಒಂದೇ ಸಮನೆ ಬಾಳಿ ಬದುಕುತ್ತಾರೆ. ಇಂತಹವರ ಬದುಕೇ ನಮಗೆ ಆದರ್ಶವಾಗಬೇಕು. ಇಂತಹವರ ಒಡನಾಟವೇ ನಮಗೆ ಮಾರ್ಗದರ್ಶನವಾಗಬೇಕು. ಇಂತಹವರ ಮಾತುಗಳೇ ನಿತ್ಯ ಸತ್ಸಂಗವಾಗಬೇಕು. ಇಂತಹ ಮಹಾತ್ಮರುಗಳೇ ನಿತ್ಯ ಮುಕ್ತರು.

No comments:

Post a Comment