ಪ್ರಾರ್ಥನೆ
ಪ್ರಾರ್ಥನೆ ಎಂದರೆ ನಿಜಕ್ಕೂ ಏನು?
" ನಾವು ಯಾವ ಮೂಲದಿಂದ ಬಂದಿದ್ದೇವೆಯೋ ಅದೇ ಮೂಲವನ್ನು ನಮ್ಮೊಳಗೇ ಮೌನದಲ್ಲಿ ಹುಡುಕುವ ಪ್ರಕ್ರಿಯೆಯೇ ಪ್ರಾರ್ಥನೆ " ಎನ್ನುತ್ತಾರೆ ಭಗವಾನ ರಮಣ ಮಹರ್ಷಿಗಳು.
" ಅತ್ಯುತ್ತಮವಾದ ಪ್ರಾರ್ಥನೆ ಎಂದರೆ, ದೇವರ ಇಚ್ಛೆಗೆ ಸಂಪೂರ್ಣವಾಗಿ ಶರಣಾಗುವುದು." ಎನ್ನುತ್ತಾರೆ ಸ್ವಾಮೀ ಶಿವಾನಂದರು.
" ಪ್ರಾರ್ಥನೆಯ ಸಾಲುಗಳಲ್ಲಿ ಪದಗಳ ನಡುವಿನ ಮೌನದ ಅಂತರಗಳಲ್ಲೇ ನಿಜವಾದ ಪ್ರಾರ್ಥನೆ ಇರುತ್ತದೆ." ಎನ್ನುತ್ತಾರೆ ಖಲೀಲ್ ಗಿಬ್ರಾನ್.
" ಮನುಷ್ಯರು ತಮ್ಮ ತಮ್ಮ ಸಣ್ಣ ಇಚ್ಛೆಗಳನ್ನು ಪರಮಾತ್ಮನ ಅನಂತವಾದ ಇಚ್ಚೆಯಲ್ಲಿ ಐಕ್ಯವಾಗಿಸುವ ಪ್ರಕ್ರಿಯೆಯೇ ಪ್ರಾರ್ಥನೆ." ಎನ್ನುತ್ತಾರೆ ಸ್ವಾಮೀ ವಿವೇಕಾನಂದರು.
ಹೀಗೆ ಪ್ರಾಜ್ಞರು ಅನೇಕ ರೀತಿಯಲ್ಲಿ ಪ್ರಾರ್ಥನೆಯನ್ನು ವಿಶ್ಲೇಷಿಸಿದರೂ ಗುರಿ ಒಂದೇ! ನಮ್ಮನ್ನು ನಾವು ಹೊರಗಡೆಯ ಜಡ ಜೀವನ ಜಗತ್ತಿನಿಂದ ಕಳಚಿಕೊಂಡು, ಕ್ಷಣಕಾಲವಾದರೂ ನಮ್ಮೊಳಗೇ ನಾವು ನೆಲೆ ನಿಲ್ಲಲು ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸುವ ಮನೋವೇದಿಕೆಯನ್ನೇ ಪ್ರಾರ್ಥನೆ ಅಥವಾ ಧ್ಯಾನ ಎನ್ನುತ್ತಾರೆ. ಧ್ಯಾನ ಅಥವಾ ಪ್ರಾರ್ಥನೆ ಮನುಷ್ಯನ ಆಂತರ್ಯದಲ್ಲಿ ಇರುವ ಅಪಾರ ಶಕ್ತಿಯನ್ನು ಉಜ್ಜೀವನಗೊಳಿಸುತ್ತದೆ. ಇದೊಂದು ರೀತಿಯಲ್ಲಿ ನಮ್ಮೊಳಗಿನ ಬ್ಯಾಟರಿ ಚಾರ್ಜ್ ಮಾಡಿದಂತೆ ಆಗುತ್ತದೆ. ಅಂತರ್ಮುಖವಾಗಿ ನಮ್ಮೊಳಗಿನ ಶಾಂತಿಯ ಶಕ್ತಿಯನ್ನು ನಾವು ಮರಳಿ ಪಡೆಯುವ ಒಂದು ದಿವ್ಯವಾದ ಸಾಧನೆಯೇ ಧ್ಯಾನ. ಪ್ರಾರ್ಥನೆಯು ಯಾವಾಗಲೂ ವೈಯುಕ್ತಿಕವೇ ಆಗಿರುತ್ತದೆ. ಶ್ರದ್ಧೆ ಮತ್ತು ನಂಬಿಕೆಯಿಂದ ಸಾಧಿಸಿ ಪಡೆಯುವಂತಹ ಜಾಗೃತ ಸ್ಥಿತಿ. ಶ್ರದ್ಧೆ ಎಂದರೆ ಕೇವಲ ದೃಢವಾದ ನಂಬಿಕೆ ಮಾತ್ರವಲ್ಲ, ಬದಲಿಗೆ ಶಕ್ತಿ, ವಿಶ್ವಾಸ, ಉತ್ಸಾಹ, ಉಲ್ಲಾಸ, ದೃಢತೆ, ಧೃತಿ, ಸ್ಮೃತಿ ಹಾಗೂ ಜ್ಞಾನಗಳನ್ನು ನಮ್ಮ ಅಂತರಂಗದಿಂದ ಉದ್ದೀಪನೆಗೊಳಿಸಿ ಊರ್ಧ್ವಮೂಲವಾಗಿ ಚಿಮ್ಮಿಸುವ ಮೂಲಗುಣವೇ ಈ ಶ್ರದ್ಧೆ. ಮನೋಬಲವನ್ನು ವೃದ್ಧಿಸುತ್ತಾ ಆತ್ಮನಿರೀಕ್ಷಣೆ ಹಾಗು ವಿವೇಕಗಳನ್ನು ಸಂಪಾದನೆ ಮಾಡುವಲ್ಲಿ ಪ್ರಾರ್ಥನೆಯು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ.
" ಶ್ರದ್ಧಾವಾನ್ ಲಭತೇ ಜ್ಞಾನಂ " ಎನ್ನುತ್ತದೆ ಗೀತೋಕ್ತಿ. ಶ್ರದ್ಧೆಯಿಂದ ಮಾಡಿದ ಪ್ರಾರ್ಥನೆಯಿಂದ ಎಲ್ಲವೂ ಸಾಧ್ಯವಾಗುತ್ತದೆ. " ಯಾವ ನಿನ್ನ ಪ್ರಾರ್ಥನೆಯು ವ್ಯರ್ಥವಲ್ಲ. ನಿನ್ನ ಎಲ್ಲಾ ಪ್ರಾರ್ಥನೆಯು ಸರಿಯಾದ ಕಾಲಕ್ಕೆ ಉತ್ತರಿಸಲ್ಪಡುತ್ತದೆ " ಎನ್ನುತ್ತದೆ ಬೈಬಲ್. ಧ್ಯಾನದ ಮೂಲಕ ಮಾಡುವ ಪ್ರಾರ್ಥನೆಯ ಅಭ್ಯಾಸವನ್ನು ನಮ್ಮ ಋಷಿಮುನಿಗಳು ಅನಾದಿ ಕಾಲದಿಂದಲೂ ಮಾಡಿಕೊಂಡು ಬಂದು ಪ್ರಾರ್ಥನೆಯ ಮಹತ್ವವನ್ನು ಈ ಜಗತ್ತಿಗೆ ಸಾರಿದ್ದಾರೆ. ನಾವು ದಿನನಿತ್ಯದಲ್ಲಿ ಭಗವಂತನ ಪ್ರಾರ್ಥನೆಯನ್ನು ನಿಯಮಿತವಾಗಿ ಮಾಡುವ ಅಭ್ಯಾಸವನ್ನು ರೂಡಿಸಿಕೊಂಡಾಗ , ತನ್ನೊಳಗೆ ತಾನು ಒಂದು ರೀತಿಯ ಅಪೂರ್ವವಾದ ಶಾಂತಿಯನ್ನು ಅನುಭವಿಸುತ್ತಾನೆ. ಆಗ ಸಾಧಕನು ಯಾವ ಆತಂಕ, ಆವೇಶ, ಆತುರ , ರಾಗ ದ್ವೇಷಗಳಿಗೆ ಮನಸ್ಸು ಕೊಡದೆ ನಿರ್ಮಲವಾಗಿ, ನಿರಾತಂಕವಾಗಿ ಬದುಕುತ್ತಾನೆ.