November 25, 2012

ನಾರದ ಭಕ್ತಿ ಸೂತ್ರ.


    ನಾರದ   ಭಕ್ತಿ ಸೂತ್ರ.

                       ಜ್ಞಾನವೇ ಆಗಲಿ ಭಕ್ತಿಯೇ ಆಗಲಿ,  ಒಂದು ಬಿಟ್ಟು ಇನ್ನೊಂದು ಇಲ್ಲ.  ಕೆಲವು ಕಡೆ ಭಕ್ತಿ ಮುಂದಾದರೆ,            ಕೆಲವು ಕಡೆ ಜ್ಞಾನ ಮುಂದಾಗಬಹುದು.  ಒಂದರ ಹಿಂದೆ ಇನ್ನೊಂದು ಇದ್ದೇ  ಇರುತ್ತದೆ. ಒಂದರಲ್ಲಿ ನಾವು ಮುಂದುವರೆದರೆ ಇನ್ನೊಂದು ನಮ್ಮ ಅರಿವಿಗೆ ಬಾರದಂತೆ ಹಿಂಬಾಲಿಸಿರುತ್ತದೆ.  ಅದ್ವೈತವಾದಿಗಳು ಸಗುಣ ಉಪಾಸನೆಯನ್ನು ಮಾಡದಿದ್ದರೂ ಎಲ್ಲಿಯವರೆಗೆ ಜೀವ - ಜಗತ್ತನ್ನು ನೋಡುತ್ತಾರೋ ಅಲ್ಲಿಯವರೆಗೆ ಈಶ್ವರನನ್ನು ಒಪ್ಪುತ್ತಾರೆ.  ಇನ್ನು ಅದ್ವೈತ ವೇದಾಂತಿಗಳು ಗುರುವಿನ ಮೇಲೆ ಶ್ರದ್ಧಾ ಭಕ್ತಿ ಇರಿಸುವುದು ಅವಶ್ಯಕ ಎನ್ನುತ್ತಾರೆ.
                    ಭಕ್ತಿಯ ಮಾರ್ಗದಲ್ಲಿ ಸಾಗಬೇಕಾದರೆ ಜ್ಞಾನದ ಗಿಡಕ್ಕೆ  ಗೊಬ್ಬರ ಹಾಕಬೇಕು.  ದೇವನೊಬ್ಬನಿರುವನೆಂಬ ಅರಿವು ಬೇಕಾದರೆ ಜ್ಞಾನದ ಕೃಷಿ ಆಗಲೇಬೇಕು. ಭಗವಂತನ ಅನನ್ಯ ಪ್ರಾರ್ಥನೆಗೆ ಜ್ಞಾನ ಮತ್ತು ಭಕ್ತಿ ಅನ್ಯೋನ್ಯವಾಗಿ ಆಶ್ರಯ ಪಡದೆ ಇರುತ್ತವೆ.   ( ಸೂತ್ರ 29 )

               ಭಕ್ತಿಪರಮ ಪ್ರೇಮ ಸ್ವರೂಪವೇ! ಭಕ್ತ ಭಗವಂತನಿಗಾಗಿ, ಭಗವಂತನಿಗೊಸ್ಕರ ತನ್ನ ಭಕ್ತಿಯನ್ನು ಸಮರ್ಪಿಸುತ್ತಾನೆಯೇ ಹೊರತು ಯಾವ ಬೇಡಿಕೆಯನ್ನು ಇಡಲಾರ. ಭಗವಂತ ಭಕ್ತ ಪರಾದೀನ. ಭಗವಂತ,  ಭಕ್ತ ಬೇಡದೆಯೇ ಜ್ಞಾನ,  ಮುಕ್ತಿಯನ್ನು ದಯಪಾಲಿಸುತ್ತಾನೆ. ಆದರೆ, ಭಕ್ತನಿಗೆ ಅದ್ಯಾವುದು ಬೇಡ. ಹೇಗೆಂದರೆ,ತನ್ನ ತಾಯಿಯನ್ನು ಬಿಟ್ಟು ಮಗುವಿಗೆ ಬೇರೇನೂ ಆಮಿಷ ಒಡ್ಡಿದರೂ  ಅದನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ.  ತಾತ್ಕಾಲಿಕವಾಗಿ ಮಗು ಬೇರೆಬೇರೆ ಆಟದ ಸಾಮಾನುಗಳಿಗೆ, ಸಿಹಿತಿಂಡಿಗೆ, ಹೊರಗಿನ ವಾತಾವರಣಕ್ಕೆ ಒಗ್ಗಿಕೊಂಡರೂ, ತಾಯಿಯನ್ನು ಕಂಡಕೂಡಲೇ ಎಲ್ಲವನ್ನು ಬಿಸಾಕಿ ತಾಯಿಯ ಮಡಿಲು ಸೇರುವಂತೆ,  ಭಕ್ತ ಭಗವಂತನಲ್ಲಿ  ಸೇರುತ್ತಾನೆ.
                       ಭಗವಂತನು ಸಹ ಭಕ್ತನಿಗೆ ಆಸ್ತಿ, ಅಂತಸ್ತು, ಯಶಸ್ಸು, ಪದವಿ, ಇತ್ಯಾದಿಗಳನ್ನು ನೀಡಿ,  ಪ್ರಾಪಂಚಿಕ ವಸ್ತುಗಳ  ಮೇಲಿನ ವ್ಯಾಮೋಹವನ್ನು ಕೊಟ್ಟು,  ಭ್ರಮೆಯಲ್ಲಿ ಮುಳುಗುವಂತೆ ಮಾಡಿಬಿಡುತ್ತಾನೆ. ಇವುಗಳೇ ಶಾಶ್ವತ ಎನ್ನುವಂತೆ ಭಕ್ತನು ಭ್ರಮೆಯಲ್ಲಿ ತೇಲಾಡಲು ಪ್ರಾರಂಭ ಮಾಡಿದರೆ,  ಲೌಕಿಕದ ಸಾಗರ ದಲ್ಲಿ ಕೊಚ್ಚಿಕೊಂಡು ಹೋಗಿಬಿಡುತ್ತಾನೆ .  ಆದರೆ, ನಿಜ ಭಕ್ತನಾದವನಿಗೆ ಇದು ತಾತ್ಕಾಲಿಕ, ಶಾಶ್ವತವೆಂದರೆ ಕೇವಲ ಭಗವಂತ   ಮಾತ್ರ ಎಂದು ಅರಿವಾಗಿ, ಭ್ರಮೆಗೆ ಒಳಗಾಗದೆ ಕಮಲದ ಎಲೆಯ ಮೇಲಿನ  ನೀರಿನಂತೆ ಇರುತ್ತಾನೆ. ಆಗಲೇ ಅವನಿಗೆ ಪರಭಕ್ತಿಯು ಪ್ರಾಪ್ತವಾಗುತ್ತದೆ.
               ಈ ಪರಭಕ್ತಿಯು ಪ್ರಾಪ್ತವಾದ ಮೇಲೆ ಭಕ್ತನು ಮುಂಚಿನ ಹಾಗೆಯೇ  ಇರುತ್ತಾನೆ. ಆದರೆ, ಇವನ ದೃಷ್ಟಿಕೋನ ಮಾತ್ರ  ಬದಲಾಗಿಬಿಡುತ್ತದೆ. ಜಗತ್ತನ್ನು ಇತರರಿಗಿಂತ ಬೇರೆಯಾಗಿಯೇ     ನೋಡುತ್ತಾನೆ. ಇವನಿಗಿದ್ದ ಆತಂಕ, ಭಯ, ಸಂಶಯ ಎಲ್ಲವು ದೂರಾಗಿ ಎಲ್ಲರಲ್ಲೂ, ಎಲ್ಲರದರಲ್ಲೂ ಪ್ರೀತಿ, ಪ್ರೇಮ ಹುಟ್ಟುತ್ತದೆ.  ಇದು ಇವನಿಗೆ ಹೊಸತಾಗಿ ಬಂದುದಲ್ಲ. ಇವನೊಳಗೆ ಇದ್ದದ್ದು ಪ್ರಕಟವಾಯಿತು ಅಷ್ಟೇ. ಇದಕ್ಕೆ ನಾರದರು ಹಲವು ದೃಷ್ಟಾಂತಗಳನ್ನು ಕೊಡುತ್ತಾರೆ.
               ಒಬ್ಬ ರಾಜನ ಮಗ, ಚಿಕ್ಕ ಮಗುವಾಗಿದ್ದಾಗಲೇ ತಪ್ಪಿಸಿಕೊಂಡು ಬಿಡುತ್ತಾನೆ. ಆ ಮಗುವು ಕಾಡಿನಲ್ಲಿ ಬೇಡರ ಆಶ್ರಯದಲ್ಲಿ ಬೆಳೆದು ದೊಡ್ಡವನಾಗುತ್ತಾನೆ. ನಂತರ ಅವನು ಬೇಡರ ಮಗನಲ್ಲ, ಮಹಾರಾಜನ  ಮಗ ಎಂದು ತಿಳಿಯುತ್ತದೆ.  ಅವನು ರಾಜ್ಯಕ್ಕೆ ಮರಳಿ ಬರುತ್ತಾನೆ. ಸಿಂಹಾಸನಾರೂಡನಾಗುತ್ತಾನೆ.  ಇಲ್ಲಿ ರಾಜಕುಮಾರನಿಗೆ ಹೊಸತೇನೂ ದೊರೆಯಲಿಲ್ಲ. ಅವನಿಗೆ ನಿಜವಾಗಿ ದೊರೆಯಬೇಕಾದದ್ದು ದೊರೆಯಿತು. ಸ್ವಲ್ಪ ನಿಧಾನವಾಗಿ ದೊರೆಯಿತು ಅಷ್ಟೇ. 
               ಸೂರ್ಯ ಪ್ರಖರವಾಗಿ ಬೆಳಗುವ   ಸಮಯದಲ್ಲಿ ಒಂದು ಕಪ್ಪನೆಯ ಮೋಡ ಅಡ್ಡ ಬಂದಂತೆ.  ಆ ಕೆಲವು ನಿಮಿಷಗಳ ಕಾಲ ಸೂರ್ಯ ಮರೆಯಾಗುತ್ತಾನೆ. ನಿಜ. ಆದರೆ, ಮೋಡ ಕರಗಿದ ಕೂಡಲೇ ಮತ್ತೆ ಸೂರ್ಯನ ಪ್ರಖರ ಕಿರಣಗಳು ಭೂಮಿಗೆ ಬೀಳುತ್ತವೆ. ಇಲ್ಲಿ ಹೊಸತನವೇನು ಇಲ್ಲ. ಅದೇ ಸೂರ್ಯ, ಅದೇ ಕಿರಣ.
              ಹೀಗೆ ಭಗವಂತನನ್ನು ಅರಿಯುವ ಮುಂಚೆ ಭಕ್ತ,  ನಾನು ಬೇರೆ,  ಭಗವಂತ ಬೇರೆ ಎಂದು ತಿಳಿದಿರುತ್ತಾನೆ. ಆದರೆ ಪರಭಕ್ತಿಯು ಪ್ರಾಪ್ತವಾದ ಮೇಲೆ, ಭಗವಂತನ ಮೇಲಿನ ಪ್ರೇಮವು ಅಪಾರವಾದ ಮೇಲೆ,  ನಾನು ಭಗವಂತನಿಗೆ ಸೇರಿದವನು.  ನಾನು ಬೇರೆ ಅಲ್ಲ ಭಗವಂತ ಬೇರೆ ಅಲ್ಲ ಎನ್ನುವ ಭಾವ ಬರುತ್ತದೆ. ಇದು ಎಲ್ಲಿಂದಲೋ ಬಂದುದಲ್ಲ ಅದು ಈ ಸಮಯದಲ್ಲಿ ಪ್ರಕಟವಾದದ್ದು.    (ಸೂತ್ರ 30 31 32 33 )
               ಹೀಗೆ ಇನ್ನು ಹಲವಾರು ಉದಾಹರೆಣೆಗಳನ್ನು ನಾರದರು ಕೊಡುತ್ತಾರೆ.
               ಒಟ್ಟು ಸಾರಂಶವೆಂದರೆ.......... ನಾವು ಭಗವಂತನ ಮೇಲಿನ ಭಕ್ತಿಯನ್ನು ಮರೆತು ಪ್ರಾಪಂಚಿಕ ಸುಖಗಳ ಭೋಗಗಳಲ್ಲಿ ಮೈಮರೆತು ಭ್ರಾಂತಿಗೊಳಗಾಗಿದ್ದೇವೆ. ಆದರೆ, ನಮ್ಮ ನಿಜ ಸ್ತಿತಿ ನಮಗೆ ತಿಳಿಯಲೇ ಇಲ್ಲ. ಒಂದು ದಿನ ತಿಳಿಯಿತು, ನಾವೆಲ್ಲಾ ಈ ಪ್ರಪಂಚದ ನಾಟಕರಂಗದ ಪಾತ್ರಧಾರಿಗಳು.  ನಮ್ಮ ನಮ್ಮ ಪಾತ್ರ ಮುಗಿದ ನಂತರ ನಾವು ನಮ್ಮ ಮನೆಗೆ ಹೋಗಲೇ ಬೇಕು. ಆದ್ದರಿಂದಲೇ ದಾಸರು ಹಾಡಿರುವುದು " ಅಲ್ಲಿದೆ ನಮ್ಮನೆ , ಇಲ್ಲಿ ಬಂದೆ ಸುಮ್ಮನೆ." ನಮ್ಮ ಪಾತ್ರಧಾರಣೆ, ಪೋಷಾಕು, ಸೇವಕರು, ಸಿಂಹಾಸನ, ರಥ ಇತ್ಯಾದಿಗಳು ಕೇವಲ ನಾಟಕ ಮುಗಿಯುವತನಕ ಮಾತ್ರ .  ಈ ವೇಷ ತಾತ್ಕಾಲಿಕ,ಅವಸ್ತೆ. ಸೂತ್ರಧಾರನ ನಿರ್ದೇಶನದಂತೆ ಆಡುವವರು. ಈ ಜ್ಞಾನ ಪ್ರಾಪ್ತಿಯೇ ಪರಭಕ್ತಿ. ಈ ಜ್ಞಾನ ಸಂಪಾದನೆಯಾದ ಕ್ಷಣವೇ ಭಗವಂತ ಮುಕ್ತ ಸ್ತಿತಿಯನ್ನು ನೀಡುತ್ತಾನೆ. ಆದರೆ ಭಕ್ತನ ಮನಸ್ತಿತಿಯು ಮುಕ್ತಿಯ ಕಡೆಗಲ್ಲ.....ಭಗವಂತನ ಕಡೆಗೆ,  ಕೇವಲ ಭಗವಂತನ ಪ್ರೇಮದ ಕಡೆಗೆ.
               ಓಂ ತತ್ಸತ್ .......................  .                                      
ಹೆಚ್ ಏನ್ ಪ್ರಕಾಶ್ 
೨೫ ೧೧ ೨೦೧೨              

2 comments:

  1. ನಿಜವಾಗಿಯು ಸುಂದರವಾಗಿದೆ. ಇದನ್ನು ಮುಂದುವರೆಸಿದರೆ ಒಂದು ಸತ್ಸಂಗವಾಗುತ್ತದೆ

    ಸುಬ್ರಹ್ಮಣ್ಯ

    ReplyDelete
  2. ಅಭಿಮಾನದ ಮಾತುಗಳಿಗೆ ಧನ್ಯವಾದಗಳು.

    ReplyDelete