November 25, 2012

ನಾರದ ಭಕ್ತಿ ಸೂತ್ರ.


    ನಾರದ   ಭಕ್ತಿ ಸೂತ್ರ.

                       ಜ್ಞಾನವೇ ಆಗಲಿ ಭಕ್ತಿಯೇ ಆಗಲಿ,  ಒಂದು ಬಿಟ್ಟು ಇನ್ನೊಂದು ಇಲ್ಲ.  ಕೆಲವು ಕಡೆ ಭಕ್ತಿ ಮುಂದಾದರೆ,            ಕೆಲವು ಕಡೆ ಜ್ಞಾನ ಮುಂದಾಗಬಹುದು.  ಒಂದರ ಹಿಂದೆ ಇನ್ನೊಂದು ಇದ್ದೇ  ಇರುತ್ತದೆ. ಒಂದರಲ್ಲಿ ನಾವು ಮುಂದುವರೆದರೆ ಇನ್ನೊಂದು ನಮ್ಮ ಅರಿವಿಗೆ ಬಾರದಂತೆ ಹಿಂಬಾಲಿಸಿರುತ್ತದೆ.  ಅದ್ವೈತವಾದಿಗಳು ಸಗುಣ ಉಪಾಸನೆಯನ್ನು ಮಾಡದಿದ್ದರೂ ಎಲ್ಲಿಯವರೆಗೆ ಜೀವ - ಜಗತ್ತನ್ನು ನೋಡುತ್ತಾರೋ ಅಲ್ಲಿಯವರೆಗೆ ಈಶ್ವರನನ್ನು ಒಪ್ಪುತ್ತಾರೆ.  ಇನ್ನು ಅದ್ವೈತ ವೇದಾಂತಿಗಳು ಗುರುವಿನ ಮೇಲೆ ಶ್ರದ್ಧಾ ಭಕ್ತಿ ಇರಿಸುವುದು ಅವಶ್ಯಕ ಎನ್ನುತ್ತಾರೆ.
                    ಭಕ್ತಿಯ ಮಾರ್ಗದಲ್ಲಿ ಸಾಗಬೇಕಾದರೆ ಜ್ಞಾನದ ಗಿಡಕ್ಕೆ  ಗೊಬ್ಬರ ಹಾಕಬೇಕು.  ದೇವನೊಬ್ಬನಿರುವನೆಂಬ ಅರಿವು ಬೇಕಾದರೆ ಜ್ಞಾನದ ಕೃಷಿ ಆಗಲೇಬೇಕು. ಭಗವಂತನ ಅನನ್ಯ ಪ್ರಾರ್ಥನೆಗೆ ಜ್ಞಾನ ಮತ್ತು ಭಕ್ತಿ ಅನ್ಯೋನ್ಯವಾಗಿ ಆಶ್ರಯ ಪಡದೆ ಇರುತ್ತವೆ.   ( ಸೂತ್ರ 29 )

               ಭಕ್ತಿಪರಮ ಪ್ರೇಮ ಸ್ವರೂಪವೇ! ಭಕ್ತ ಭಗವಂತನಿಗಾಗಿ, ಭಗವಂತನಿಗೊಸ್ಕರ ತನ್ನ ಭಕ್ತಿಯನ್ನು ಸಮರ್ಪಿಸುತ್ತಾನೆಯೇ ಹೊರತು ಯಾವ ಬೇಡಿಕೆಯನ್ನು ಇಡಲಾರ. ಭಗವಂತ ಭಕ್ತ ಪರಾದೀನ. ಭಗವಂತ,  ಭಕ್ತ ಬೇಡದೆಯೇ ಜ್ಞಾನ,  ಮುಕ್ತಿಯನ್ನು ದಯಪಾಲಿಸುತ್ತಾನೆ. ಆದರೆ, ಭಕ್ತನಿಗೆ ಅದ್ಯಾವುದು ಬೇಡ. ಹೇಗೆಂದರೆ,ತನ್ನ ತಾಯಿಯನ್ನು ಬಿಟ್ಟು ಮಗುವಿಗೆ ಬೇರೇನೂ ಆಮಿಷ ಒಡ್ಡಿದರೂ  ಅದನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ.  ತಾತ್ಕಾಲಿಕವಾಗಿ ಮಗು ಬೇರೆಬೇರೆ ಆಟದ ಸಾಮಾನುಗಳಿಗೆ, ಸಿಹಿತಿಂಡಿಗೆ, ಹೊರಗಿನ ವಾತಾವರಣಕ್ಕೆ ಒಗ್ಗಿಕೊಂಡರೂ, ತಾಯಿಯನ್ನು ಕಂಡಕೂಡಲೇ ಎಲ್ಲವನ್ನು ಬಿಸಾಕಿ ತಾಯಿಯ ಮಡಿಲು ಸೇರುವಂತೆ,  ಭಕ್ತ ಭಗವಂತನಲ್ಲಿ  ಸೇರುತ್ತಾನೆ.
                       ಭಗವಂತನು ಸಹ ಭಕ್ತನಿಗೆ ಆಸ್ತಿ, ಅಂತಸ್ತು, ಯಶಸ್ಸು, ಪದವಿ, ಇತ್ಯಾದಿಗಳನ್ನು ನೀಡಿ,  ಪ್ರಾಪಂಚಿಕ ವಸ್ತುಗಳ  ಮೇಲಿನ ವ್ಯಾಮೋಹವನ್ನು ಕೊಟ್ಟು,  ಭ್ರಮೆಯಲ್ಲಿ ಮುಳುಗುವಂತೆ ಮಾಡಿಬಿಡುತ್ತಾನೆ. ಇವುಗಳೇ ಶಾಶ್ವತ ಎನ್ನುವಂತೆ ಭಕ್ತನು ಭ್ರಮೆಯಲ್ಲಿ ತೇಲಾಡಲು ಪ್ರಾರಂಭ ಮಾಡಿದರೆ,  ಲೌಕಿಕದ ಸಾಗರ ದಲ್ಲಿ ಕೊಚ್ಚಿಕೊಂಡು ಹೋಗಿಬಿಡುತ್ತಾನೆ .  ಆದರೆ, ನಿಜ ಭಕ್ತನಾದವನಿಗೆ ಇದು ತಾತ್ಕಾಲಿಕ, ಶಾಶ್ವತವೆಂದರೆ ಕೇವಲ ಭಗವಂತ   ಮಾತ್ರ ಎಂದು ಅರಿವಾಗಿ, ಭ್ರಮೆಗೆ ಒಳಗಾಗದೆ ಕಮಲದ ಎಲೆಯ ಮೇಲಿನ  ನೀರಿನಂತೆ ಇರುತ್ತಾನೆ. ಆಗಲೇ ಅವನಿಗೆ ಪರಭಕ್ತಿಯು ಪ್ರಾಪ್ತವಾಗುತ್ತದೆ.
               ಈ ಪರಭಕ್ತಿಯು ಪ್ರಾಪ್ತವಾದ ಮೇಲೆ ಭಕ್ತನು ಮುಂಚಿನ ಹಾಗೆಯೇ  ಇರುತ್ತಾನೆ. ಆದರೆ, ಇವನ ದೃಷ್ಟಿಕೋನ ಮಾತ್ರ  ಬದಲಾಗಿಬಿಡುತ್ತದೆ. ಜಗತ್ತನ್ನು ಇತರರಿಗಿಂತ ಬೇರೆಯಾಗಿಯೇ     ನೋಡುತ್ತಾನೆ. ಇವನಿಗಿದ್ದ ಆತಂಕ, ಭಯ, ಸಂಶಯ ಎಲ್ಲವು ದೂರಾಗಿ ಎಲ್ಲರಲ್ಲೂ, ಎಲ್ಲರದರಲ್ಲೂ ಪ್ರೀತಿ, ಪ್ರೇಮ ಹುಟ್ಟುತ್ತದೆ.  ಇದು ಇವನಿಗೆ ಹೊಸತಾಗಿ ಬಂದುದಲ್ಲ. ಇವನೊಳಗೆ ಇದ್ದದ್ದು ಪ್ರಕಟವಾಯಿತು ಅಷ್ಟೇ. ಇದಕ್ಕೆ ನಾರದರು ಹಲವು ದೃಷ್ಟಾಂತಗಳನ್ನು ಕೊಡುತ್ತಾರೆ.
               ಒಬ್ಬ ರಾಜನ ಮಗ, ಚಿಕ್ಕ ಮಗುವಾಗಿದ್ದಾಗಲೇ ತಪ್ಪಿಸಿಕೊಂಡು ಬಿಡುತ್ತಾನೆ. ಆ ಮಗುವು ಕಾಡಿನಲ್ಲಿ ಬೇಡರ ಆಶ್ರಯದಲ್ಲಿ ಬೆಳೆದು ದೊಡ್ಡವನಾಗುತ್ತಾನೆ. ನಂತರ ಅವನು ಬೇಡರ ಮಗನಲ್ಲ, ಮಹಾರಾಜನ  ಮಗ ಎಂದು ತಿಳಿಯುತ್ತದೆ.  ಅವನು ರಾಜ್ಯಕ್ಕೆ ಮರಳಿ ಬರುತ್ತಾನೆ. ಸಿಂಹಾಸನಾರೂಡನಾಗುತ್ತಾನೆ.  ಇಲ್ಲಿ ರಾಜಕುಮಾರನಿಗೆ ಹೊಸತೇನೂ ದೊರೆಯಲಿಲ್ಲ. ಅವನಿಗೆ ನಿಜವಾಗಿ ದೊರೆಯಬೇಕಾದದ್ದು ದೊರೆಯಿತು. ಸ್ವಲ್ಪ ನಿಧಾನವಾಗಿ ದೊರೆಯಿತು ಅಷ್ಟೇ. 
               ಸೂರ್ಯ ಪ್ರಖರವಾಗಿ ಬೆಳಗುವ   ಸಮಯದಲ್ಲಿ ಒಂದು ಕಪ್ಪನೆಯ ಮೋಡ ಅಡ್ಡ ಬಂದಂತೆ.  ಆ ಕೆಲವು ನಿಮಿಷಗಳ ಕಾಲ ಸೂರ್ಯ ಮರೆಯಾಗುತ್ತಾನೆ. ನಿಜ. ಆದರೆ, ಮೋಡ ಕರಗಿದ ಕೂಡಲೇ ಮತ್ತೆ ಸೂರ್ಯನ ಪ್ರಖರ ಕಿರಣಗಳು ಭೂಮಿಗೆ ಬೀಳುತ್ತವೆ. ಇಲ್ಲಿ ಹೊಸತನವೇನು ಇಲ್ಲ. ಅದೇ ಸೂರ್ಯ, ಅದೇ ಕಿರಣ.
              ಹೀಗೆ ಭಗವಂತನನ್ನು ಅರಿಯುವ ಮುಂಚೆ ಭಕ್ತ,  ನಾನು ಬೇರೆ,  ಭಗವಂತ ಬೇರೆ ಎಂದು ತಿಳಿದಿರುತ್ತಾನೆ. ಆದರೆ ಪರಭಕ್ತಿಯು ಪ್ರಾಪ್ತವಾದ ಮೇಲೆ, ಭಗವಂತನ ಮೇಲಿನ ಪ್ರೇಮವು ಅಪಾರವಾದ ಮೇಲೆ,  ನಾನು ಭಗವಂತನಿಗೆ ಸೇರಿದವನು.  ನಾನು ಬೇರೆ ಅಲ್ಲ ಭಗವಂತ ಬೇರೆ ಅಲ್ಲ ಎನ್ನುವ ಭಾವ ಬರುತ್ತದೆ. ಇದು ಎಲ್ಲಿಂದಲೋ ಬಂದುದಲ್ಲ ಅದು ಈ ಸಮಯದಲ್ಲಿ ಪ್ರಕಟವಾದದ್ದು.    (ಸೂತ್ರ 30 31 32 33 )
               ಹೀಗೆ ಇನ್ನು ಹಲವಾರು ಉದಾಹರೆಣೆಗಳನ್ನು ನಾರದರು ಕೊಡುತ್ತಾರೆ.
               ಒಟ್ಟು ಸಾರಂಶವೆಂದರೆ.......... ನಾವು ಭಗವಂತನ ಮೇಲಿನ ಭಕ್ತಿಯನ್ನು ಮರೆತು ಪ್ರಾಪಂಚಿಕ ಸುಖಗಳ ಭೋಗಗಳಲ್ಲಿ ಮೈಮರೆತು ಭ್ರಾಂತಿಗೊಳಗಾಗಿದ್ದೇವೆ. ಆದರೆ, ನಮ್ಮ ನಿಜ ಸ್ತಿತಿ ನಮಗೆ ತಿಳಿಯಲೇ ಇಲ್ಲ. ಒಂದು ದಿನ ತಿಳಿಯಿತು, ನಾವೆಲ್ಲಾ ಈ ಪ್ರಪಂಚದ ನಾಟಕರಂಗದ ಪಾತ್ರಧಾರಿಗಳು.  ನಮ್ಮ ನಮ್ಮ ಪಾತ್ರ ಮುಗಿದ ನಂತರ ನಾವು ನಮ್ಮ ಮನೆಗೆ ಹೋಗಲೇ ಬೇಕು. ಆದ್ದರಿಂದಲೇ ದಾಸರು ಹಾಡಿರುವುದು " ಅಲ್ಲಿದೆ ನಮ್ಮನೆ , ಇಲ್ಲಿ ಬಂದೆ ಸುಮ್ಮನೆ." ನಮ್ಮ ಪಾತ್ರಧಾರಣೆ, ಪೋಷಾಕು, ಸೇವಕರು, ಸಿಂಹಾಸನ, ರಥ ಇತ್ಯಾದಿಗಳು ಕೇವಲ ನಾಟಕ ಮುಗಿಯುವತನಕ ಮಾತ್ರ .  ಈ ವೇಷ ತಾತ್ಕಾಲಿಕ,ಅವಸ್ತೆ. ಸೂತ್ರಧಾರನ ನಿರ್ದೇಶನದಂತೆ ಆಡುವವರು. ಈ ಜ್ಞಾನ ಪ್ರಾಪ್ತಿಯೇ ಪರಭಕ್ತಿ. ಈ ಜ್ಞಾನ ಸಂಪಾದನೆಯಾದ ಕ್ಷಣವೇ ಭಗವಂತ ಮುಕ್ತ ಸ್ತಿತಿಯನ್ನು ನೀಡುತ್ತಾನೆ. ಆದರೆ ಭಕ್ತನ ಮನಸ್ತಿತಿಯು ಮುಕ್ತಿಯ ಕಡೆಗಲ್ಲ.....ಭಗವಂತನ ಕಡೆಗೆ,  ಕೇವಲ ಭಗವಂತನ ಪ್ರೇಮದ ಕಡೆಗೆ.
               ಓಂ ತತ್ಸತ್ .......................  .                                      
ಹೆಚ್ ಏನ್ ಪ್ರಕಾಶ್ 
೨೫ ೧೧ ೨೦೧೨              

November 22, 2012

ಉಗ್ರನಿಗೆ ಸಲ್ಲುವ ಗೌರವವಲ್ಲ


    

                   ಮುಂಬೈ ದಾಳಿಯಲ್ಲಿ 161 ಸಾವಿಗೆ ಕಾರಣನಾದವರಲ್ಲಿ ಒಬ್ಬನಾದ ಉಗ್ರವಾದಿ ಕಸಬನನ್ನು ಎಂದೋ ಸಾಯಿಸಬೇಕಾಗಿದ್ದು, ಅವನಿಗೆ   ನಿನ್ನೆ ಗಲ್ಲು ಶಿಕ್ಷೆ ನೀಡಿರುವ ವಿಚಾರವನ್ನು ನಮ್ಮ ನಾಡಿನ ಪ್ರಮುಖಪತ್ರಿಕೆಗಳು ಮುಖ್ಯಪುಟದಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ, ದೊಡ್ಡ ಫೋಟೋ ಸಮೇತ ಇಡೀ ಪುಟದಲ್ಲಿ ಹುತಾತ್ಮನೇನೋ ಎಂಬುವಂತೆ ಬಿಂಬಿಸಿದ್ದಾರೆ. ಪ್ರತಿಕ್ಷಣದ ನಡವಳಿಕೆಯನ್ನು ದಾಖಲಿಸಿದ್ದಾರೆ.   ಒಬ್ಬ ಉಗ್ರವಾದಿಯನ್ನು ಗಲ್ಲಿಗೇರಿಸಿದರ ಬಗ್ಗೆ ಇಷ್ಟೊಂದು ವೈಭವೀಕರಣ ಬೇಕೇ? ಗಲ್ಲಿಗೆರಿಸುದರ ಬಗ್ಗೆ ಒಂದು ಚಿಕ್ಕ ಸುದ್ದಿ ವಿಭಾಗದ ವರದಿ ಸಾಕೆನಿಸಿತಿತ್ತು. ಬೇಕಿದ್ದರೆ ಸಂಪಾದಕರ ಕಾಲಂನಲ್ಲಿ ಅವನ ಬಗ್ಗೆ ಎಷ್ಟು ವಿವರ ಬೇಕಾದರೂ ವರದಿ ಬರೆಯಲಿ.   ಅದು ಬಿಟ್ಟು ಇವನಿಗೆ  ಭಾರತರತ್ನ ಪ್ರಶಸ್ತಿ ಕೊಟ್ಟಂತೆ ವೈಭವಿಕರಿಸಲಾಗಿದೆ. ಇಷ್ಟೊಂದು ಪ್ರಚಾರದ ಅವಶ್ಯಕತೆ ಏನಿದೆ? 
                  ರಾಷ್ಟ್ರದ ಗೃಹ ಮಂತ್ರಿಗಳು ಪ್ರಧಾನಿಗೆ ಮತ್ತು ಸೋನಿಯಾ ಗಾಂಧಿಗೆ ಈ ವಿಚಾರ ತಿಳಿಸಿರಲಿಲ್ಲವೆಂದು ಹೇಳಿಕೆ ಕೊಟ್ಟಂತಹ ಸಂದರ್ಭದಲ್ಲಿ ಪ್ರಚಾರ ಮಾಧ್ಯಮದವರು ಇಷ್ಟೊಂದು ವೈಭವಿಕರಿಸಿದ್ದು ಸರಿಯೇ?
                   ಏನೇ ಆದರೂ ಒಬ್ಬ ಉಗನಿಗೆ ಸಲ್ಲಬೇಕಾದ ಗೌರವ ಇದಲ್ಲ. 
                   ನೀವೇನು ಹೇಳುತ್ತೀರಿ?

November 15, 2012

ದೊಡ್ಡವರ ದಾರಿ ......14



ದೊಡ್ಡವರ ದಾರಿ ......14 
          
             
        ನಮ್ಮ ಗುರುನಾಥರು ಯಾವಾಗಲು ಈ ಮಾತನ್ನು ಹೇಳುತ್ತಿದ್ದರು.  ಜೀವನದಲ್ಲಿ ಮೂರು                                               "ಮ"ಗಳನ್ನು  ಜ್ಞಾಪಕದಲ್ಲಿ ಇಟ್ಟುಕೊಂಡಿರಬೇಕು.  ಇದು ನಮಗೆ ಸರಿದಾರಿಯಲ್ಲಿ ನಡೆಯಲು ಮಾರ್ಗದರ್ಶಿಯಾಗುತ್ತದೆ.
                             ಆ ಮೂರು " ಮ "ಗಳೆಂದರೆ, " ಮರೆಯಬಾರದು ,ಮೆರೆಯಬಾರದು ಮತ್ತು ಮುರಿಯಬಾರದು. "
                         ನಮ್ಮ ಜೀವನವನ್ನು ಸುಗಮಗೊಳಿಸಲು ಶೈಶವದಿಂದ ನಮಗಾಗಿ ಅದೆಷ್ಟೋ ಜೀವಗಳು ಶ್ರಮಿಸುತ್ತವೆ. ಪ್ರತಿ ಕ್ಷಣದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ನಮಗೆ ಮತ್ತೊಬ್ಬರ ಸಹಾಯ ಸಹಕಾರ ಇದ್ದೆe  ಇರುತ್ತದೆ . ನಾವೇ ಎಲ್ಲವನ್ನು ಮಾಡಲಾಗುವುದಿಲ್ಲ.   ಎಲ್ಲರ ಪರಿಶ್ರಮದ ಸಹಕಾರದಿಂದ ನಾವು ನಮ್ಮ ಬದುಕನ್ನು ಸಾಗಿಸುತ್ತೇವೆ, ಸುಂದರವಾಗಿಸಿಕೊಂಡಿ ರುತ್ತೇವೆ.  ಆದರೆ ಈ ರೀತಿ ಸಹಾಯ ಮತ್ತು ಸಹಕಾರ ನೀಡಿದ ಮಹನೀಯರುಗಳನ್ನು  ನಮ್ಮ ಕೆಲಸವಾದ ನಂತರ ಮರೆತು ಬಿಡುತ್ತೇವೆ.  ಇಲ್ಲಿ ತಂದೆ, ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ, ಗುರುಜನ, ನೆರೆಹೊರೆಯವರು, ಸ್ನೇಹಿತರು, ಬಂಧುಗಳು , ಹಾಲು ತರಕಾರಿ ದಿನಸಿ ಮುಂತಾದವನ್ನು ಕೊಡುವ ಮಂದಿ ಮತ್ತು ಮನೆ ಕೆಲಸದವರನ್ನು ಸೇರಿಸಿಕೊಂಡು ಇನ್ನು ಹಲವು ಮಂದಿ  ಎಲ್ಲರೂ  ನಮ್ಮ ಜೀವನವನ್ನು ಸುಗಮಗೊಳಿಸಲು ಪರಿಶ್ರಮ ಹಾಕಿದವರೇ!  ಇವರ ಶ್ರಮವನ್ನು ಗೌರವಿಸು. ಇವರನ್ನು ಎಂದಿಗೂ ಮರೆಯಬಾರದು.

                    ಎಲ್ಲರ ಪರಿಶ್ರಮದ  ಜೊತೆಗೆ  ನಮ್ಮ  ಪರಿಶ್ರಮವೂ  ಸೇರಿಕೊಂಡು ನಾವು  ಸಮಾಜದಲ್ಲಿ   ಒಂದು ಜವಾಬ್ದಾರಿಯುತ ಸ್ಥಾನ ಅಲಂಕರಿಸಿದಾಗ ಹೆಸರು, ಐಶ್ವರ್ಯ, ಯಶಸ್ಸು ಇತ್ಯಾದಿಗಳು ಲಭ್ಯವಾಗುತ್ತದೆ.  ಇಂತಹ ಸಮಯದಲ್ಲಿ ಅಹಂಕಾರ, ಮದ ನಮ್ಮೊಳಗೇ ನಮ್ಮ ಅರಿವಿಗೆ ಬಾರದಂತೆ ನುಸುಳಿಬಿಡುತ್ತದೆ.  ಇದು ಅವನತಿಯ ಹಾದಿ ಎಂದು ತಿಳಿಯುವುದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಮದೋನ್ಮತ್ತ ರಾಗಬಾರದು.   ಈ  ಅವಕಾಶ ದೇವರು ನನಗೆ ದಯಪಾಲಿಸಿರುವ ಭಿಕ್ಷೆ.   ಇಲ್ಲಿ ನನ್ನಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಅವಶ್ಯಕತೆ ಇರುವವರಿಗೆ ಮಾಡುತ್ತೇನೆ ಎಂಬ ವಿನಮ್ರ ಭಾವನೆ ಹೊಂದಬೇಕೆ ವಿನಃ ಮೆರೆಯಬಾರದು.

                        ನಾವೆಲ್ಲರೂ ಭಾವನ ಜೀವಿಗಳು.  ನಮ್ಮೆಲ್ಲರಿಗೂ ಒಂದೊಂದು ರೀತಿಯಲ್ಲಿ ಬೇರೆ ಬೇರೆ ಭಾವನೆಗಳು ಇರುತ್ತವೆ.  ಎಲ್ಲವು ಒಂದೇ ರೀತಿ ಇರಲು ಸಾಧ್ಯವಿಲ್ಲ, ಒಂದೇ ರೀತಿಯಲ್ಲಿ ಇರಬೇಕಾಗಿಯು ಇಲ್ಲ. ನನಗೆ ಸರಿಯೆನಿಸಿದ ಭಾವನೆಗಳು ನಿಮಗೆ ಬೇಡವೆನಿಸಬಹುದು.  ಬೇಕು ಬೇಡಗಳಿಗೆ ಅವರದೇ ಆದ ಕಾರಣಗಳು ಇದ್ದೆ ಇರುತ್ತವೆ.  ಈ ಎಲ್ಲಾ  ಕಾರಣಗಳು ಅವರವರಿಗೆ ಸರಿಯೆಂದೇ ಅನಿಸಿರುತ್ತದೆ.   ಇಂತಹ ಸಮಯದಲ್ಲಿ ಪ್ರತಿಯೊಬ್ಬರ ಭಾವನೆಯನ್ನು ಗೌರವಿಸಬೇಕು.  ಸರಿ ತಪ್ಪು ನಿರ್ಣಯ ನಮಗೆ ಬೇಡ. ಸರಿ ಎನಿಸಿದ್ದನ್ನು ಮಾಡು, ತಪ್ಪೆಂದು ನಿನಗನಿಸಿದ್ದನ್ನು ಬಿಟ್ಟು ಬಿಡು. ಆದರೆ, ಇನ್ನೊಬ್ಬರ ಭಾವನೆಯನ್ನು ಘಾಸಿಗೊಳಿಸ ಬಾರದು . ಇನ್ನೊಬ್ಬರ ಭಾವನೆಯನ್ನು ಮುರಿಯಬಾರದು.

                             ಇಷ್ಟು ಸಾಕಲ್ಲವೇ ಉತ್ತಮ ಜೀವ ನಡೆಸಲು.  ಹೇಳಿದಂತೆ ಮಾಡಿ ತೋರಿದ ಗುರುವಿನ ಪಾದಾರವಿನ್ದಕ್ಕೆ ಶ್ರದ್ಧೆಯ ನಮನಗಳು.

ಹೆಚ್ ಏನ್ ಪ್ರಕಾಶ್
15 11 2012
                                   

                                                             

November 12, 2012

ಬೇಡಿಕೆ



                        ಭಗವಂತ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ   ಉಡುಗೊರೆಗಳನ್ನು ನೀಡುತ್ತಾನೆ.  ಕೆಲವು ಕಣ್ಣಿಗೆ                   ಕಾಣುವಂತದ್ದು,  ಮತ್ತೆ ಕೆಲವು ಕಣ್ಣಿಗೆ ಕಾಣದ್ದು.     ಕಾಣುವ ವಸ್ತುಗಳು ತಾತ್ಕಾಲಿಕ ಹಾಗೂ ಮತ್ತೂ ಮತ್ತೂ  ಬೇಕೆಂದು ಅನಿಸುವವು.   ಆದರೆ, ಕಣ್ಣಿಗೆ ಕಾಣದ್ದು ಮಾತ್ರ ಶಾಶ್ವತ.   ಇದನ್ನು ಅದೃಶ್ಯ ಉಡುಗೊರೆ ಎಂದು ಹೇಳುತ್ತಾರೆ.
                  ಲೌಕಿಕವಾಗಿ ಸಿಗುವ ಸಂಪತ್ತು, ಆಸ್ತಿ, ರೂಪ, ಇತ್ಯಾದಿಗಳು ಕಣ್ಣಿಗೆ ಕಾಣುವ ಉಡುಗೊರೆಗಳು.  ಒಳ್ಳೆಯಬುದ್ಧಿ, ನಡವಳಿಕೆ, ಆರೋಗ್ಯ , ಒಳ್ಳೆಯ ತಂದೆತಾಯಿ , ಒಳ್ಳೆಯ ಮಕ್ಕಳು, ಸಮಾಜದಲ್ಲಿ ಮಾನ್ಯತೆ ಮತ್ತೂ ಭಗವಂತನಲ್ಲಿ ಅನನ್ಯ ಭಕ್ತಿ ಮತ್ತು ಶ್ರದ್ಧೆ ಇವೆಲ್ಲವೂ ಕಣ್ಣಿಗೆ ಕಾಣದ ಶಾಶ್ವತ ಉಡುಗೊರೆಗಳು. 
                ಭಗವಂತ ನೀಡುವಾಗಲೂ ಬಹಳ ವಿಶೇಷತೆಯಿಂದ ನೀಡುತ್ತಾನೆ. ಅವನಿಗೊಂದು ಸೂತ್ರವಿದೆ. ಯಾವಯಾವ ಉಡುಗೊರೆಗಳನ್ನು ಯಾರು ಯಾರು ಬೇಡುತ್ತಾರೋ ಅವರಿಗೆ ಆಯಾಯ ಉಡುಗೊರೆಗಳನ್ನು ಸರಿಯಾದ ಸಮಯದಲ್ಲೇ ನೀಡುತ್ತಾನೆ.  ಬೇಡಿದ್ದನ್ನು ಮಾತ್ರ ನೀಡುವ ಸೂತ್ರಧಾರಿ.  ಎಂದೂ ನಾವು ಬೇಡದ್ದನ್ನು ಭಗವಂತ ನೀಡುವುದಿಲ್ಲ. ಸುಪ್ತಮನಸ್ಸಿನಲ್ಲೇ ಇರಬಹುದು, ಬಹಿರಂಗದಲ್ಲೇ ಇರಬಹುದು  ನಮ್ಮ ನಮ್ಮ ಬೇಡಿಕೆಗಳನ್ನು ನಮ್ಮ ಇಷ್ಟಾನುಸಾರ ಈಡೆರಿಸುತ್ತಾನೆ. ಯಾರು ಬೇಕಾದರೂ, ಯಾವಾಗ ,ಹೇಗೆ ಮತ್ತು ಏನು  ಬೇಕಾದರೂ ಬೇಡಿಕೆ ಸಲ್ಲಿಸಲಿ, ಆ ಬೇಡಿಕೆಗಳನ್ನು ಭಗವಂತ ನಿರಾಕರಿಸಲಾರ. ನಮ್ಮ ನಮ್ಮ ಸರದಿ ಬಂದಾಗ,  ನಮ್ಮ ನಮ್ಮ  ಅರ್ಹತೆಗೆ ತಕ್ಕಂತೆ ಭಗವಂತ ನೀಡುತ್ತಾ ಹೋಗುತ್ತಾನೆ. ತಕ್ಷಣಕ್ಕೆ ಸಿಗದಿದ್ದರೂ ಅರ್ಹತೆ ಬಂದಾಗ ಖಂಡಿತಾ ಸಿಕ್ಕೇ ಸಿಗುತ್ತದೆ.  ಇಲ್ಲಿ ನಿರಾಕರಣೆಯ ಪ್ರಶ್ನೆಯೇ ಇಲ್ಲ. ಆದರೆ, ಕಾರಣ ಪರಿಣಾಮಗಳ ಬಗ್ಗೆ ಭಗವಂತ ಜವಾಬ್ದಾರಿ ಹೊರುವುದಿಲ್ಲ. ಪರಿಣಾಮಗಳ ಬಗ್ಗೆ ಚಿಂತಿಸ ಬೇಕಾದ   ಜವಾಬ್ದಾರಿ ಮಾತ್ರ ನಮ್ಮದೇ .
                   ಆದ್ದರಿಂದ, ಭಗವಂತನಲ್ಲಿ ನಾವು ಬೇಡುವಾಗ ಸರಿಯಾದುದನ್ನೇ ಚಿಂತಿಸಿ ಬೇಡಬೇಕು. ಬೇಡಿದ್ದನ್ನು ಪಡೆಯುವ ಅರ್ಹತೆಯನ್ನು ಜೊತೆಜೊತೆಯಲ್ಲೇ ಗಳಿಸಿಕೊಳ್ಳಬೇಕು.
                          ಎಲ್ಲಾ ಓದುಗರಿಗೆ ದೀಪದ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.   

November 3, 2012

ದೊಡ್ಡವರ ದಾರಿ................13


ದೊಡ್ಡವರ ದಾರಿ................13 

            ಈಗ್ಗೆ 30 ವರ್ಷಗಳ ಹಿಂದಿನ ಮಾತು. ಆಗ ಇಂಜಿನೀಯರಿಂಗ್ ಮಾಡುತ್ತಿದ್ದ ಸಮಯ. ಮದರಾಸಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಹಿರಿಯ ವಿಧ್ಯಾರ್ಥಿ ನೆನಪಿನ ಗಂಟನ್ನು ಬಿಚ್ಚಿ ಹಂಚಿಕೊಂಡ ಸ್ವಾರಸ್ಯಕರ ಪ್ರಸಂಗ ಇದು. 

           ಆಗ ಮದರಾಸಿನಲ್ಲಿ ನೀರಿಗೆ ಬಹಳ ಪರದಾಡುತ್ತಿದ್ದ ಒಂದು ಬೇಸುಗೆಯ ತಿಂಗಳು. ಆ ದಿನಗಳಲ್ಲಿ ನಾವಿದ್ದ ಹಾಸ್ಟೆಲ್ಲಿನಲ್ಲಿ ನೀರಿನ ಸಮರ್ಪಕ ಸರಬರಾಜು ಇಲ್ಲದೆ ಕಷ್ಟವಾಗುತ್ತಿತ್ತು. ಇದಕ್ಕೆ ಬೇರೆ ಏನು ಉಪಾಯವಿರಲಿಲ್ಲ. ಪರ್ಯಾಯ ವ್ಯವಸ್ಥೆಯೊಂದೆ ಉಳಿದ ಮಾರ್ಗವಾಗಿತ್ತು.  ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯು ಚಿಂತನೆ ನಡೆಸಿತ್ತು. ಆದರೆ, ನಮ್ಮ ಯುವಕ ಮನಸ್ಸು ಇದನ್ನೆಲ್ಲಾ ಯೋಚಿಸುವ ಗೊಡವೆಗೆ ಹೋಗದೆ, " ನೀರು ಇಲ್ಲ, ಕೊಡಿ ಅಷ್ಟೇ" ಎನ್ನುವ ಧೋರಣೆಯಲ್ಲಿ ಮಾತನಾಡುತ್ತಿದ್ದೆವು.  ಆದರು ಹಾಸ್ಟೆಲ್ಲಿನವರು ಹೇಗೋ ನೀರನ್ನು ಒದಗಿಸುತ್ತಿದ್ದರು. 

           ಒಂದು ದಿನ ನೀರಿಗೆ ಬಹಳ ತಾಪತ್ರಯವಾಗಿ ಬೆಳಗಿನಿಂದಲೂ ನೀರು ಇಲ್ಲವಾಯಿತು.  ಹುಡುಗರಿಗೆ ನೀರಿಲ್ಲದೆ ಕಷ್ಟವಾಯಿತು.  ಎಲ್ಲ ಹುಡುಗರು ಒಂದು ಕಡೆ ಸೇರಿ ಎಲ್ಲರು ಟವೆಲ್ ಉಟ್ಟು ಬರಿ ಬನಿಯನ್ ತೊಟ್ಟು ಚಳುವಳಿ ಮಾಡಲು ಘೋಷಣೆ ಕೂಗುತ್ತಾ ಇಡೀ ಕಾಲೇಜಿನ ಆವರಣದಲ್ಲಿ " we want water........we want water......." ಎಂದು ಎಲ್ಲರು ಕೂಗುತ್ತಾ ಸಾಗಿದೆವು.   ನಮ್ಮ ಮೆರವಣಿಗೆ ಆ ಕಾಲೇಜಿನ ನಿರ್ದೇಶಕರ ಮನೆಯ ಮುಂದೆ ಬರುತ್ತಿದ್ದಂತೆ ಘೋಷಣೆ ಜೋರಾಯಿತು.  ಆ ಹುಡುಗರಲ್ಲಿ ಒಬ್ಬ " water......water.....or your daughter........" ಎಂದುಬಿಟ್ಟ. ಇದು ಆ ನಿರ್ದೇಶಕರ ಕಿವಿಗೂ ಬಿತ್ತು.  

          ಮನೆಯಿಂದ ಈಚೆ ಬಂದ ನಿರ್ದೇಶಕರು ಘೋಷಣೆ ಕೂಗುತ್ತಿದ್ದ ಹುಡುಗರ ಕಡೆಗೆ ಎರಡೂ ಕೈ ಎತ್ತಿ ಸ್ವಲ್ಪ ನಿಲ್ಲಿಸಿ ಎನ್ನುವಂತೆ ಸನ್ನೆ ಮಾಡಿದರು.  ಅಲ್ಲಿದ್ದ  ಹುಡುಗರು,  ಈಗ ಕೆಲ ಹುಡುಗರಿಗೆ ಏನೋ ಕಾದಿದೆ !ಅಂದುಕೊಂಡು ಘೋಷಣೆ ತಕ್ಷಣ ನಿಲ್ಲಿಸಿದರು.  ನಾವು ಓದುತ್ತಿದ್ದ ಕಾಲೇಜು ಸ್ವಾಯತ್ತೆ ಪಡೆದ ಕಾಲೇಜು.  ಆದದ್ದರಿಂದ ವಿಧ್ಯಾರ್ಥಿಗಳ ಸಮಸ್ತ ಭವಿಷ್ಯವೂ ಕಾಲೇಜಿನ ಕೈಯಲ್ಲೇ ಇರುತ್ತದೆ .  ಇವತ್ತು ಯಾವಯಾವ ಹುಡುಗರಿಗೆ ಏನೇನು ಕಾದಿದೆಯೋ, ಸಾಲದ್ದಕ್ಕೆ  daughter  ಎಂದು ಬೇರೆ ಕೂಗಿದ್ದು ಅವರ ಕಿವಿಗೆ ಬೇರೆ ಬಿದ್ದಿದೆ, ಮುಂದೇನು ಎಂದು ಯೋಚಿಸುವ ಹೊತ್ತಿಗೆ, ನಿರ್ದೇಶಕರು ಗಂಟಲು ಸರಿಮಾಡಿಕೊಂಡು " The first thing you have asked for,  is some what difficult, but the second one is O K for me. Who will come forward?"  ಎಂದು ಕೇಳಿದರು.  ನಿರ್ದೇಶಕರ ಮಾತಿನಲ್ಲಿ ಸಿಟ್ಟಾಗಲಿ, ದ್ವೇಷವಾಗಲಿ ಇರಲಿಲ್ಲ.  ಬಹಳ ಸಾಮಾನ್ಯವಾಗಿ ಮತ್ತು ಹಾಸ್ಯ ಮಿಶ್ರಿತ ದ್ವನಿಯಲ್ಲಿ ಈ ಮಾತು ಹೇಳಿದಾಗ ಅಲ್ಲಿ ನೆರದಿದ್ದ ಎಲ್ಲಾ   ಹುಡುಗರು ತಲೆ ತಗ್ಗಿಸಿ ನಿಂತುಬಿಟ್ಟರು. ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಆದರೂ, ಆ ಸ್ತಿತಿಯಲ್ಲಿ ಏನೂ ಮಾಡುವ ಹಾಗಿರಲಿಲ್ಲ. 

           ಒಂದೆರಡು ನಿಮಿಷದ ನಂತರ ನಿರ್ದೇಶಕರೇ ಮಾತನಾಡಿ " ನಿಮ್ಮ ತೊಂದರೆ ನಂಗೆ ಗೊತ್ತಿದೆ. ಇದಕ್ಕೆ ಒಂದು ಪರಿಹಾರ ಸಧ್ಯದಲ್ಲೇ ಮಾಡುತ್ತೇವೆ.  ದಯವಿಟ್ಟು ಸಹಕರಿಸಿ " ಎಂದು ನಗುಮೊಗದಿಂದ ನಮ್ಮನ್ನು ಕಳುಹಿಸಿದರು.  ಸಧ್ಯ " ಬದುಕಿದೆಯಾ ಬಡ ಜೀವ"  ಎನ್ನುವಂತೆ  ಎಲ್ಲರು ಜಾಗ ಖಾಲಿ ಮಾಡಿದೆವು. 

               ಉನ್ನತ ಹುದ್ದೆಯಲ್ಲಿದ್ದ ನಿರ್ದೇಶಕರು ಮನಸ್ಸು ಮಾಡಿದ್ದರೆ ನಮ್ಮಂತಹ ಹೆಚ್ಚಿನ ವಿಧ್ಯಾರ್ಥಿಗಳಿಗೆ, ಹೆಚ್ಚಿನ ಶಿಕ್ಷೆ ನೀಡಿ ಜೀವಮಾನವೆಲ್ಲ ನೆನಪಿಸಿಕೊಳ್ಳುವಂತೆ ಮಾಡಬಹುದಿತ್ತು.  ಆದರೆ, ಇವರು ಮಾತ್ರ ನಮ್ಮ ಹುಡುಗು ಬುದ್ಧಿಯನ್ನು ಕ್ಷಮಿಸಿಬಿಟ್ಟರು.  ಅಂದಿನ ಅವರ ಹಿರಿತನ ನಮಗೆ  ಜ್ಞಾಪಕಕ್ಕೆ ಬಂದಾಗ ಇಂದೂ ಅವರ ಬಗ್ಗೆ ಗೌರವ ಭಾವನೆ ಉಕ್ಕುತ್ತದೆ.

( ಆತ್ಮೀಯರೊಬ್ಬರು ಹೇಳಿದ ಪ್ರಸಂಗವನ್ನು  ಇಲ್ಲಿ  ಯಥಾವತ್ತಾಗಿ ಧಾಖಲಿಸಿದ್ದೇನೆ )


November 1, 2012

ಬೀ Chi ಯವರ ಅಂದನಾ ತಿಮ್ಮ...........5



           
               ಬತ್ತಲೆ ಬಂದರು ಬತ್ತಲೆ ಹೋದರು|
               ಬತ್ತಲೆ ಇರುವಾಗ ಎಲ್ಲರೂ ಒಂದೇ ||
               ಸುತ್ತ ಜಗ ಬೇಸತ್ತ ಜನ ಇವರ್ಗೆಲ್ಲೇ |
               ತ್ತೆತ್ತ ಏನಿದೆ ಹೇಳೋ ತಿಂಮ ||

ಶವ ಕಂಡ ಗೌತಮ ಬುದ್ಧನಾದ, ಕೇ |
ಶವಾಚಾರಿ ಹೆಣ ಹೊತ್ತೇ ಜಗಜಟ್ಟಿಯಾದ ||
ಅವನ ಕಸುಬೇ ಅದು, ಅದರಿಂದಲೇ ಅನ್ನ |
ಅವರವರ ಕರ್ಮಕ್ಕೆ ಅವರುಂಟು ತಿಂಮ ||

               ಕಾಯಕವೇ ಕೈಲಾಸ ಎಂದಂದ ಬಸವಣ್ಣ |
               ಬಾಯಿ ಮಾತಾಗಿಹುದು ಭಾಷಣಕಷ್ಟೇ ಚಂದ ||
               ಕಾಯ ಸಮಕಳೆ ಮಾಡಿ ಬಾಳುವರು ಬಹು ಕಡಿಮೆ |
               ಮೈಯ ಜಂಗು ಹಿಡಿಸಿ ಸತ್ತವರೇ ಹೆಚ್ಚೋ ತಿಂಮ ||

ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು |
ಚೆನ್ನೆಂದು ದೊಡ್ಡವರ ಅನುಕರಿಸಬೇಡ ||
ಏನಾಯ್ತು ಮರಿಕತ್ತೆ ?  ಚೆಲುವಿತ್ತು ಮುದ್ದಿತ್ತು |
ತನ್ನಪ್ಪ ನಂತಾಗಿ ಹಾಳಾಯ್ತು ತಿಂಮ ||

                                                                              ( ಮತ್ತಷ್ಟು ಮುಂದಿನ ದಿನಕ್ಕೆ )