September 3, 2012

ಲಕ್ಷಾರ್ಚನೆ


             
               ಗುರುನಾಥರು ದೇವಸನ್ನಿಧಿಯಲ್ಲಿ ಉಪಸ್ಥಿತರಿದ್ದಾಗ ಈಶ್ವರನಿಗೆ ಲಕ್ಷ ಬಿಲ್ವಾರ್ಚನೆಯ ಮಾತು ಬಂತು.   ಈಶ್ವರನಿಗೆ   ಲಕ್ಷ ಬಿಲ್ವಾರ್ಚನೆಯನ್ನು  ಮಾಡಿಸುವ ಹೊಣೆ ಹೊತ್ತ ಮಹಾನುಭಾವರು  ಈ ವಿಚಾರವನ್ನು ಗುರುನಾಥರಲ್ಲಿ ಪ್ರಸ್ತಾಪಿಸಿದರು.
              " ಈ ಬಾರಿ ನಮ್ಮ ಈಶ್ವರನಿಗೆ,  ಲಕ್ಷ ಬಿಲ್ವಾರ್ಚನೆ ಮಾಡುವ ಉದ್ದೇಶ ಹೊಂದಿದ್ದೇವೆ." ಎಂದು ಹೇಳಿದರು.
              " ಬಹಳ ಸಂತೋಷ , ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿರಾ?  ಸರಿ, ಲಕ್ಷಾರ್ಚನೆ  ಎಂದರೇನು? ಸಾರ್." ಎಂದು ಮರು ಪ್ರಶ್ನೆ ಹಾಕಿದರು.
              "  ಲಕ್ಷಾರ್ಚನೆ   ಎಂದರೆ ಒಂದು ಲಕ್ಷ ಬಿಲ್ವದ ಕುಡಿ ಎಸಳುಗಳನ್ನು,  ಈಶ್ವರನಿಗೆ ಸಮರ್ಪಣೆ ಮಾಡುವುದು." ಎಂದರು.
              " ಒಂದು ಲಕ್ಷ ಬಿಲ್ವದ ಕುಡಿಗಳೇ !!(?)  ಅಂದರೆ , ಇಷ್ಟು ಸಂಗ್ರಹ ಮಾಡಲು ಸಾಕಷ್ಟು ಮರಗಳಿಂದ ಕುಯ್ಯಬೇಕು. ಸಾಕಷ್ಟು ಚಿಗುರು ಬಿಲ್ವಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಚಿಗುರುಗಳನ್ನೇ ಕುಯ್ಯುವುದು?  ಹೌದೆ? " ಎಂದರು ಸ್ವಲ್ಪ ಆತಂಕ ಮಿಶ್ರಿತ ದ್ವನಿಯಲ್ಲಿ.
              " ಹೌದು, ಈ ಎಲ್ಲ ಬಿಲ್ವ ಕುಡಿ ಎಸಳುಗಳು ಈಶ್ವರನಿಗೆ ಸಮರ್ಪಣೆಯಾಗುತ್ತದೆ. " ಎಂದು ಬೀಗುತ್ತಾ ಹೇಳಿದರು.
              " ಈ ಲಕ್ಷ ಕುಡಿಗಳನ್ನು ಕೊಯ್ಯುವ ಮೊದಲು ಆ ಬಿಲ್ವ ಗಿಡಕ್ಕೆ ಒಂದಷ್ಟಾದರೂ ನೀರನ್ನು ಯಾರೋ ಹಾಕಿರಬೇಕಲ್ಲವೇ?  ಹಾಕಿ ಸಾಕಿರಬೇಕಲ್ಲವೇ?  ಹೀಗೆ ಪೋಷಣೆ ಯಾದರೆ  ಗಿಡದಲ್ಲಿ ಚಿಗುರು ಕಾಣಿಸಿಕೊಳ್ಳುತ್ತದೆ. ಆ ಚಿಗುರನ್ನು ಗಿಡ  ಕಳೆದು ಕೊಂಡರು ಮತ್ತೆ ನೀರು ಗೊಬ್ಬರ ಬಿದ್ದರೆ ಮತ್ತೆ ಚಿಗುರು ಒಡೆಯಬಹುದು. ಅಲ್ಲವೇ ಸಾರ್!? " ಎಂದು ಪ್ರಶ್ನಿಸಿದರು ಗುರುನಾಥರು.
              " ಹೌದು........ ಹೌದು.." ಎಂದು ತಲೆ ತೂಗಿದರು.
              " ಈಗ..... ನೀವು ಯಾರೋ ಬೆಳೆಸಿದ ಗಿಡ ಅಥವಾ ಮರದಿಂದ ಕುಡಿ ಎಸಳುಗಳನ್ನು ತಂದು ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿದ್ದಿರ.   ನೀವು ಆ ಗಿಡಗಳಿಗೆ ಈ ಮುಂಚೆ ಎಷ್ಟು ಕೊಡ ನೀರು ಹಾಕಿದ್ದೀರಾ?  ಎಷ್ಟು ಗೊಬ್ಬರ ಹಾಕಿದ್ದೀರ? ಏನೂ ಮಾಡದೆ ಯಾರೋ ಬೆಳೆಸಿದ ಮರದಿಂದ ಅದರಲ್ಲೂ ಕುಡಿ ಎಸಳು ಕುಯ್ಯ್ದು,   ಚಿಗುರನ್ನು ಹಾಳುಮಾಡಿ ಈಶ್ವರನ ತಲೆಯಮೇಲೆ ಹಾಕಿದರೆ ಈಶ್ವರ ಮೆಚ್ಚುತಾನೆಯೇ ............ಸಾರ್?" ಎಂದು ಸರಳವಾದ ಸಿದ್ದಾಂತವನ್ನು ಅವರ ಮುಂದೆ ನಿರ್ಲಿಪ್ತರಾಗಿ ಇಟ್ಟುಬಿಟ್ಟರು.
              ಈ  ತರಹದ ಚಿಂತನೆಯಾಗಲಿ,   ವಿಚಾರವಾಗಲಿ ಅವರ ಕನಸಿನಲ್ಲೂ ಬಂದಿರಲಿಕ್ಕೆ ಸಾಧ್ಯವಿಲ್ಲ.  ಮಿಂಚಿನಂತೆ ಬಂದ ಈ ಪ್ರಶ್ನೆ ಆ ಮಹಾನುಭಾವರನ್ನು ತಬ್ಬಿಬ್ಬು ಮಾಡಿತು. ಏನು ಹೇಳಲು ತೋಚದೆ  ಕುಬ್ಜರಾದರು.  
              " ಇದೆಲ್ಲ ಕಕ್ಕುಲಾತಿ ಸಾರ್......ಬರಿ ಕಕ್ಕುಲಾತಿ. " ಎಂದು ತಲೆ ಅಲ್ಲಾಡಿಸಿದರು.
              ಸಾವರಿಸಿಕೊಂಡು " ಹಾಗಾದರೆ ಲಕ್ಷ ಬಿಲ್ವಾರ್ಚನೆ ಮಾಡುವುದು ಬೇಡವೇ? " ಎಂದು ಅತ್ಯಂತ ನಿರಾಸೆಯಿಂದ ಕೇಳಿದರು.
               " ನಾನೆಲ್ಲಿ ಹಾಗೆ  ಹೇಳಿದೆ?" ಎಂದು ಸುಮ್ಮನಾದರು 
               " ಹಾಗಾದರೆ, ಲಕ್ಷಾರ್ಚನೆ ಮಾಡುವ ಬಗೆಯಾದರೂ ಹೇಗೆ? " ಎಂದು ವಿನೀತರಾಗಿ ಪ್ರಶ್ನಿಸಿದರು.
               " ಲಕ್ಷ್ಯದಿಂದ ಒಂದು ಬಿಲ್ವದ ಎಸಳನ್ನ ಪರಮ ಭಕ್ತಿಯಿಂದ ಈಶ್ವರನ ತಲೆಯ ಮೇಲೆ ಇರಿಸಿ ಧನ್ಯತೆಯನ್ನ ಹೊಂದುವುದು.  ಭಕ್ತಿ, ಪ್ರೇಮ, ಶ್ರದ್ಧೆ  ಇಲ್ಲದೇ ಒಂದು ಲಕ್ಷ ಹಾಕಿದರು ಅಷ್ಟೇ, ಒಂದು ಕೋಟಿ  ಹಾಕಿದರು ಅಷ್ಟೇ! ಬರಿ ತೋರಿಕೆಯಾಗುತ್ತೆ ,ಆಡಂಬರವಾಗುತ್ತೆ " ಎಂದು ತಮ್ಮ ಮಾತನ್ನು ಮುಗಿಸಿದರು.
                ಇಂದಿಗೂ ಗುರುನಾಥರ  ಈ ಮಾತು ನಮ್ಮನ್ನ ಭಾವ ಪರವಶರನ್ನಾಗಿ ಮಾಡುತ್ತದೆ.  ಭಗವಂತನ ಮುಂದೆ ನಿಂತಾಗ ಲಕ್ಷ್ಯವಿಡಬೇಕೆಂಬ ಮಾತು ಪ್ರತಿಸಾರಿಯೂ ಎಚ್ಚರಿಸುತ್ತದೆ.  ಇಂತಹ ಗುರುನಾಥರನ್ನು ಪಡೆದ ನಾವೇ ಧನ್ಯರು.

(ನನ್ನ ಆತ್ಮೀಯರೊಬ್ಬರು ಗುರುನಾಥರ ಬಳಿ ಹೋದಾಗ ಈ ಘಟನೆ ನಡೆದದ್ದು. ಅವರು ನೀಡಿದ ವಿವರಣೆ ಆಧರಿಸಿ  ಆ ಘಟನೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ)





6 comments:

  1. ಯಾವುದೇ ಆಡಂಬರವನ್ನೂ ‘ಒಂದೇ ಬಿಲ್ವಪತ್ರ’ದಿಂದ ಗುಡಿಸಿಬಿಟ್ಟಿರಲ್ಲಾ! ಒಬ್ಬನನ್ನ ಎಚ್ಚರಿಸುವುದುಕ್ಕೆ ಕೂಗುಹಾಕಬೇಕಿಲ್ಲ, ಸಮಯವರಿತು ಪಿಸುನುಡಿದರೂ ಸಾಕು. ಅದನ್ನೇ ಅಲ್ಲವೇ ಒಬ್ಬ ಗುರು ಮಾಡುವುದು.

    ನಮ್ಮನ್ನ ಲಕ್ಷ ಬಿಲ್ವಾರ್ಚನೆಯಂಥದಕ್ಕೆ ಪ್ರೇರಿಸುವುದು ನಮಗೆ ದಕ್ಕಿರುವ "ಸಮೃದ್ಧಿ"ಯೇ!

    ಬೇಂದ್ರೆಯವರು ಯಾವುದೋ ಸಂದರ್ಭದಲ್ಲಿ "ಕಷ್ಟ ಅನುಭವಿಸಬಹುದು ತಮ್ಮಾ, ಸುಖ ತಡಕೊಳ್ಳೋದು ಕಷ್ಟ" ಎಂದು ಹೇಳಿದ್ದ ಮಾತು ನೆನಪಾಯಿತು.

    ಮಾವ, ಘಟನೆ-ಸ್ಮರಣೆ ಬಹಳ ಆತ್ಮೀಯವಾಗಿದೆ.

    ReplyDelete
  2. ಆತ್ಮೀಯ ರಜನೀಶ,
    "ಕಷ್ಟ ಅನುಭವಿಸಬಹುದು ತಮ್ಮಾ, ಸುಖ ತಡಕೊಳ್ಳೋದು ಕಷ್ಟ" ಈ ಮಾತು ಎಷ್ಟು ಗಹನವಾಗಿದೆಯೆಂದರೆ ಅರಿತವರಿಗೆ ಮಾತ್ರ ಗೊತ್ತಾಗುತ್ತದೆ. ಬೇಂದ್ರೆ ಯವರ ಮಾತೆ ಹಾಗೆ! ನಿನ್ನ ಸಮಯೋಚಿತ ಮಾತಿಗೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು

    ReplyDelete
  3. ಗುರಿ ಇರಬೇಕು...ಕುರಿಯ ತರಹ...ಕುರಿಗೆ ತಾನು ಹೋಗುವ ಮಾರ್ಗ ಮುಖ್ಯವಾಗುತ್ತದೆ...
    ಸುತ್ತ ಮುಟ್ಟಲು ಗೋಜಲು ಗಳಿದ್ದರು ತನ್ನ ಪಾಡಿಗೆ ತಾನು ಸಾಗುತ್ತದೆ..ಹಾಗೆ ಲಕ್ಷ್ಯವಿಲ್ಲದಿದ್ದರೆ ಕುರಿಗಿಂತ ಕಡೆಯಾಗುತ್ತದೆ..ಸುಂದರ "ಅನುಭಾವ"...

    ReplyDelete
  4. ಆತ್ಮೀಯ ಶ್ರೀಕಾಂತ,
    ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು

    ReplyDelete
  5. Umesha KP kpumesha@gmail.com
    12:54 PM (8 hours ago)

    to me
    ಲಕ್ಷ ಬಿಲ್ವಾರ್ಚನೆ ಲೇಖನದಲ್ಲಿ ಗುರುನಾಥರು ಲಕ್ಷ ಬಿಲ್ವ ಬಳಸದೆ ಒಂದೇ ಬಿಲ್ವದ ಚಿಗುರು ಭಕ್ತಿಯಿಂದ ಅರ್ಚನೆ ಮಾಡಿರೆ ಸಾಕು ಎಂದು ಸರಳ-ತರ್ಕಬದ್ಧ ವಾಗಿ ತಿಳಿಸಿದ್ದಾರೆ. ಆದರೆ " ಲಕ್ಷ್ಯದಿಂದ ಒಂದು ಬಿಲ್ವದ ಎಸಳನ್ನ ಪರಮ ಭಕ್ತಿಯಿಂದ ಈಶ್ವರನ ತಲೆಯ ಮೇಲೆ ಇರಿಸಿ ಧನ್ಯತೆಯನ್ನ ಹೊಂದುವುದು. ಭಕ್ತಿ, ಪ್ರೇಮ, ಶ್ರದ್ಧೆ ಇಲ್ಲದೇ ಒಂದು ಲಕ್ಷ ಹಾಕಿದರು ಅಷ್ಟೇ, ಒಂದು ಕೋಟಿ ಹಾಕಿದರು ಅಷ್ಟೇ! ಬರಿ ತೋರಿಕೆಯಾಗುತ್ತೆ ,ಆಡಂಬರವಾಗುತ್ತೆ " ಎನ್ನುವಲ್ಲಿ ಭಕ್ತಿ, ಪ್ರೇಮ, ಶ್ರದ್ಧೆ (ತರ್ಕಾತೀತ) ಇವುಗಳ ಇರುವಿಕೆ ಮತ್ತು ಆಚರಣೆಯ ಅವಶ್ಯಕತೆಗಳ ಬಗ್ಗೆ ಯಾವ ತರ್ಕವನ್ನು ಉಪಯೋಗಿಸಿಲ್ಲ. ಹಾಗೆ ಉಪಯೋಗಿಸಿದ್ದರೆ ಒಂದು ಬಿಲ್ವದಿಂದಲೂ ಏಕೆ ಅರ್ಚಿಸುವ ಅವಶ್ಯಕತೆ ಇದೆ/ಇಲ್ಲ ಎನ್ನುವುದು ತಿಳಿಯುತ್ತಿತ್ತು! ಇದೀಗ ಗೋಕರ್ಣದಲ್ಲಿ ಕೋಟಿ ರುದ್ರ ಯಾಗ ನಡೆಯುತ್ತಿದೆ, ಲಕ್ಷ ದೀಪೋತ್ಸವ, ಲಕ್ಷ ತಾರಕ ಹವನ ಇತ್ಯಾದಿ ಲಕ್ಷಗಳಲ್ಲಿ ಕೆಲವರು ದ್ರವ್ಯ,ಶಕ್ತಿ, ಸಮಯ ಹಾಳುಮಾಡುವಲ್ಲಿ ಯಾವ ನಂಬಿಕೆ/ತರ್ಕ ಇದೆಯೋ ಆದೇ ನಂಬಿಕೆ/ತರ್ಕದಿಂದಲೇ ದಶಕೋಟಿ ಜನ ದಿನಾಲೂ ಒಂದು ಬಿಲ್ವ ಅಥವಾ ಇತರೆ ವಸ್ತುಗಳನ್ನು (ಕಡಿಮೆ ಪ್ರಮಾಣದಲ್ಲೇ ಇರಬಹುದು) ನಿರರ್ಥಕವಾಗಿ ಹಾಳು ಮಾಡುತ್ತಾರೆ! ದೇವರು ಮನುಷ್ಯನನ್ನು ಏಕೆ ಹೀಗೆ ಸೃಷ್ಠಿಸಿದನೋ ಏನೋ! ಮನುಷ್ಯ ದೇವರಿಗೆ ಏಕೆ ಏನನ್ನದರೂ ಸಮರ್ಪಿಸಬೇಕೋ ಏನೋ! ಅವನೇ ಸೃಷ್ಠಿಸಿದ ಬಹುತೇಕ ಮನುಷ್ಯನಲ್ಲಿ ದೇವರು “ನಿಜ” ಭಕ್ತಿಯನ್ನು ಏಕೆ ತುಂಬಲಿಲ್ಲವೋ ಏನೋ!

    ReplyDelete
    Replies
    1. ಆತ್ಮೀಯ ಉಮೇಶರೇ,
      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಜ, ಎಲ್ಲವನ್ನು ಭಗವಂತನಿಂದಲೇ ಪಡೆದು ಅವನಿಗೆ ಸಮರ್ಪಣೆ ಮಾಡುವ ಈ ಪರಿಯ ಬಗ್ಗೆ ನಿಮ್ಮ ಕಳಕಳಿಯೇ ನಮ್ಮ ಗುರುನಾಥರದ್ದು ಆಗಿತ್ತು. ನೀವು ಒಮ್ಮೆ ನನ್ನಲ್ಲಿ ಮಾತನಾಡುತ್ತ ಹಾಸ್ಯವಾಗಿ ಹೇಳಿದ್ದನ್ನ ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ. " ಭಟ್ಟರ ಹಣ್ಣು ಭಟ್ಟರ ಕಾಯಿ ಭಟ್ಟರಿಗೆ ಸಮರ್ಪಣೆ " ಹೀಗಾಗಿದೆ.

      Delete