June 16, 2012

ಮರೆಯಲಾಗದ ಮಹಾ ಶಿವರಾತ್ರಿ

ಮರೆಯಲಾಗದ ಮಹಾ ಶಿವರಾತ್ರಿ


ಅಂದು ಮಹಾಶಿವರಾತ್ರಿ. ಮನೆಯಲ್ಲಿ ಒಂದು ರೀತಿಯ ಸಂಭ್ರಮ. ನಾನು ಹೇಳ ಹೊರಟಿರುವುದು ಈಗ್ಗೆ 47 ವರ್ಷಗಳ ಹಿಂದಿನ ಮಾತು.  ಆಗೆಲ್ಲ ಪ್ರತಿ ಹಬ್ಬವು ಒಂದು ರೀತಿಯಲ್ಲಿ ಸಡಗರವೆ!  ಅದರಲ್ಲೂ  ಶಿವರಾತ್ರಿ ಎಂದರೆ ಈಶ್ವರನಿಗೆ ನಾಲ್ಕುಜಾವದ ಪೂಜೆ ನೆರವೇರಿಸುತ್ತ ಅಲ್ಪ ಆಹಾರದೊಂದಿಗೆ ರಾತ್ರಿಯಿಡಿ   ಜಾಗರಣೆ ಮಾಡುತ್ತಾ ಶಿವನ ಆರಾಧನೆಯಲ್ಲಿ ತಮ್ಮನ್ನು ತಾವು ಸಂಭ್ರಮದಿಂದ ತೊಡಗಿಸಿಕೊಳ್ಳುವ ವಿಶೇಷ ದಿನ. ಇಂತಹ ವಿಶೇಷ ದಿನದಂದು ನಡೆದ ಒಂದು ಸತ್ಯ ಘಟನೆ.

ಮನೆ ಯಜಮಾನರು ಅಂದು ಬೆಳಗಿನಿಂದಲೇ ಶಿವನ ಪೂಜೆಯ ಕೈಂಕರ್ಯಕ್ಕೆ  ತೊಡಗಿಕೊಂಡವರು.  ನಿತ್ಯ ಪೂಜೆಯ ಜೊತೆಗೆ ರುದ್ರನಿಗೆ ಅಭಿಷೇಕ ಮುಗಿಸಿ,  ಮಕ್ಕಳನ್ನು ಕೂರಿಸಿಕೊಂಡು ಸತ್ಯ ಹರಿಶ್ಚಂದ್ರನ ಕಥೆಯನ್ನು ಹೇಳಿದರು.  ಕಾರಣ, ಅಂದು ರಾತ್ರಿ ಮನೆಯ ಎದುರಿನ ಬಯಲಿನಲ್ಲಿ ರಾಜ ಹರಿಶ್ಚಂದ್ರನ ನಾಟಕ ನಡೆಯುವುದ್ದಿತ್ತು.   ಹೀಗಾಗಿ ಮಕ್ಕಳು ಈ ಕಥೆ ಗಾಗಿ ಅಪ್ಪನಲ್ಲಿ ಪೀಡಿಸುತ್ತಿದ್ದರು.  ಮಕ್ಕಳಿಗೆ ಒಂದು ರೀತಿಯ ಸಂಭ್ರಮ.  ಎದುರಿನ ಬಯಲಿನಲ್ಲಿ ನಾಟಕದ ರಂಗಸಜ್ಜಿಕೆ ಕೆಲಸ ನಡೆಯುತ್ತಿತ್ತು. ಅದನ್ನ  ನೋಡುವುದೇ ಒಂದು ಖುಷಿ.   ನಾಟಕ ಪ್ರಾರಂಭವಾಗುವುದು ರಾತ್ರಿ 10ರ ನಂತರವೇ.  ಮಕ್ಕಳು ಕಾಯುತ್ತಾ ಇರುವಾಗ ಮನೆ ಯಜಮಾನರು ಮಕ್ಕಳಿಗೆ " ಈಗ ಮಲಗಿ ನಿದ್ದೆ ಮಾಡಿ,  ನಾಟಕ ಪ್ರಾರಂಭ ಆದಕೂಡಲೇ ಎಬ್ಬಿಸುತ್ತೇನೆ, ಅಲ್ಲಿಯವರೆಗೆ ನಿದ್ದೆ ಮಾಡಿ.  ಈಗ ಜಾಸ್ತಿ ಹೊತ್ತು ನಿದ್ರೆ ಮಾಡಿದರೆ ಹೆಚ್ಚು ಹೊತ್ತು ನಾಟಕ ನೋಡಬಹುದು "  ಎಂದು ಒಪ್ಪಿಸಿ ಮೂರೂ  ಮಕ್ಕಳನ್ನು ಮಲಗಿಸಿಯೇ ಬಿಟ್ಟರು.

ಮಾರನೆ ಬೆಳಿಗ್ಗೆ ಮಕ್ಕಳು ಎದ್ದವರೇ " ನಾಟಕ ನೋಡಲು ಎಬ್ಬಿಸಲೇ ಇಲ್ಲ " ಎಂದು ಇಬ್ಬರು ಅಳಲು ಪ್ರಾರಂಭ.  ಆದರೆ ಒಂದು ಮಗು ಮಾತ್ರ ಎದ್ದಿರಲೇ ಇಲ್ಲ.  ಬಹಳ ಚೂಟಿಯಾಗಿದ್ದ ಮಗು ಯಾಕೆ ಇನ್ನು ಎದ್ದಿಲ್ಲ ಎಂದು ಮನೆ ಯಜಮಾನರು ಅಂದುಕೊಳ್ಳುತ್ತಿರುವಾಗಲೇ " ರಾತ್ರಿ ಮಗು ನಿದ್ದೆ ಮಾಡಿತ್ತೋ ಇಲ್ಲವೋ"  ಎಂದು ಮನೆಯೊಡತಿ ಸಮಜಾಯಿಷಿ ನೀಡಿದರೂ ಮಗು ಎಬ್ಬಿಸಲು ಮುಂದಾದರು.  " ಏಳಪ್ಪಾ , ಬೆಳಕಾಗಿ ಎಷ್ಟು ಹೊತ್ತಾಯಿತು?  ಏಳು," ಎಂದು  ಹೊದ್ದಿಕೆ ತೆಗೆದರೆ ಶಾಖ ಹೊರಗೆ ತಟ್ಟುವಷ್ಟು ಬಿಸಿ.  ಮಗು ಮೈ ಮುಟ್ಟಿದರೆ ಕಾದ ಕಬ್ಬಿಣ ಮುಟ್ಟಿದ ಅನುಭವ.   ಜ್ವರದ ತಾಪದಲ್ಲಿ ಬೆಂದ ಮಗು ಏಳಲು ಇರಲಿ ನರಳಲೂ  ಸಾಧ್ಯವಾಗದೆ ನಿಸ್ತೆಜವಾಗಿ ಹಾಸಿಗೆಯ ಮೇಲೆ ಬಿದ್ದುಕೊಂಡಿತ್ತು.  ಏನು ಮಾಡಲು ತೋಚದೆ ಮಗುವನ್ನು ಬಾಚಿ ತಬ್ಬಿಕೊಂಡರು.  ಅಷ್ಟರಲ್ಲಿ ಬಂದ ಮಗುವಿನ ತಾಯಿಗೆ ಗಾಬರಿ.  ಅಳಲು ಪ್ರಾರಂಭ  ಮಾಡಿಯೇ ಬಿಟ್ಟರು.  8 ವರ್ಷದ ಗಂಡು ಮಗು ಅಷ್ಟು ಚನ್ನಾಗಿ ಆಟವಾಡಿಕೊಂಡಿದ್ದ ಮಗುವಿಗೆ ಅದೇನು ಶಾಪವೋ ಏನೋ ಈ ರೀತಿಯ ಸ್ಥಿತಿ ತಲುಪಿದೆ ಎಂದು  ಕಣ್ಣಿರು ಇಡುತ್ತ ಕೂತರು.  " ಏನೂ ಆಗಿಲ್ಲ ಜ್ವರದ ತಾಪಕ್ಕೆ ಮಗು ಸುಸ್ತಾಗಿದೆ, ಅಷ್ಟೇ " ಎಂದು ಹೆಗಲಮೇಲೆ ಮಗುವನ್ನು ಹಾಕಿಕೊಂಡು ಆಸ್ಪತ್ರೆಯ ಕಡೆಗೆ ಧಾವಿಸಿದರು.

ಡಾಕ್ಟರ್ ಪರೀಕ್ಷೆಮಾಡಿ  " ಸಧ್ಯಕ್ಕೆ ಔಷದಿ ಕೊಡುತ್ತೇನೆ, ನೀವು ತಕ್ಷಣ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ " ಎಂದು ಸಲಹೆ ಇತ್ತರು.   ತಕ್ಷಣ ಟಾಂಗಾ  ಗಾಡಿಯಲ್ಲಿ ದೊಡ್ಡ ಆಸ್ಪತ್ರೆಗೆ ಹೋದರು.  ಆಸ್ಪತ್ರೆಗೆ ಧಾಖಲು ಮಾಡಿಕೊಂಡ ವೈದ್ಯರು ಎರಡು ಮೂರು ದಿನ ನೀಡಿದ ಔಷದಿಗಳು ಮಗುವಿನ ಜ್ವರವನ್ನು ಕಡಿಮೆಮಾಡಲಿಲ್ಲ.  ಮಗುವಿನ ಸ್ಥಿತಿ ಚಿಂತಾಜನಕವಾಯಿತು.  ಮಗುವಿಗೆ ಮಗ್ಗುಲು ಬದಲಾಯಿಸಲಾಗದೆ  ಸಂಪೂರ್ಣ ನಿತ್ರಾಣವಾಯಿತು.  ಕೈ ಕಾಲು ನಿತ್ರಾಣವಾಯಿತು.  ರಕ್ತ ಪರೀಕ್ಷೆ ಮಾಡಿಸಿ ಈಗ ಬಂದಿರುವ ಹೊಸ ಖಾಯಿಲೆ ಇರಬಹುದೆಂದು ವೈದ್ಯರು ಹಲವು ಹಿರಿಯ ವೈದ್ಯರೊಂದಿಗೆ ಚರ್ಚಿಸಿ ನಂತರ ಮಗುವಿನ ತಂದೆಯನ್ನು ಕರೆದು " ಈ ಮಗುವಿಗೆ ಪೋಲಿಯೋ ಆಗಿದೆ " ಎಂದರು.            ಏನೂ                       ಅರ್ಥವಾಗದೇ " ಹಾಗೆಂದರೇನು?" ಎಂದು ಬೆರಗಾಗಿ ಕೇಳಿದರು.  ವೈದ್ಯರು ಸಮಾಧಾನಚಿತ್ತದಿಂದ " ನೋಡಿ, ಈ ಜ್ವರ ಈಗ ಮಕ್ಕಳಿಗೆ ಕಾಣಿಸಿಕೊಳ್ಳುತ್ತಿದೆ.  ವೈರಾಣುಗಳ  ಸೋಂಕಿನಿಂದ ಬರುವ ಈ ಜ್ವರ ಮಕ್ಕಳನ್ನು ನಿಸ್ತೇಜವನ್ನಾಗಿ ಮಾಡಿಬಿಡುತ್ತದೆ. ಇಂತಹ ಸಂಧರ್ಭದಲ್ಲಿ ಮಕ್ಕಳ  ಕೈ, ಕಾಲು, ಕಣ್ಣು ಹೀಗೆ ಏನಾದರೊಂದು ತನ್ನ ಶಕ್ತಿ ಕಳೆದುಕೊಂಡು ವಿಕಲಾಂಗರಾಗುತ್ತಾರೆ.  ದೈರ್ಯ ತಂದುಕೊಳ್ಳಿ.  ನಮ್ಮ ಪ್ರಯತ್ನ ಸಂಪೂರ್ಣವಾಗಿ ನಾವು ಮಾಡುತ್ತೇವೆ. ಮಿಕ್ಕದ್ದು ಭಗವಂತನ ಕೈಯಲ್ಲಿದೆ."  ಎಂದು ಯಜಮಾನರನ್ನು ಸಂತೈಸಿದರು.   ದಂಪತಿಗಳಿಗಿಬ್ಬರಿಗೂ  ಭೂಮಿ ಬಾಯಿಬಿಟ್ಟ ಹಾಗೆ ಆಯಿತು.  " ಇಷ್ಟು ಚಂದದ ಮಗುವಿಗೆ ಇಷ್ಟೊಂದು ಭೀಕರ ಶಾಪವೇ? " ಎಂದು ಆ ತಾಯಿ ಗೊಳಾಡಲು  ಪ್ರಾರಂಭಿಸಿದರು.   ಈ ಮಾತು ಕೇಳಿದ ತಂದೆ ಮಾತ್ರ ದಿವ್ಯ ಮೌನಕ್ಕೆ ಶರಣಾದರು.   ತಮಗೇ ತಾವು ಸಮಾಧಾನ ಮಾಡಿಕೊಂಡು  ಪುನಃ  ವೈದ್ಯರಲ್ಲಿ ಹೋಗಿ "  ಮುಂದೇನು ಮಾಡಬೇಕು?  ಯಾವ ರೀತಿಯಲ್ಲಿ ಚಿಕಿತ್ಸೆ ಕೊಡಿಸಬೇಕು?  ಎಷ್ಟು ಹಣ ಖರ್ಚಾಗಬಹುದು?  ಎಷ್ಟೇ ಖಚಾದರು ಈ ಮಗುವನ್ನು ಪರಾಧೀನ ಮಾಡಲಾಗದು.   ದಯಮಾಡಿ ನನಗೆ ಸಹಾಯ ಮಾಡಿ." ಎಂದು ಅಂಗಲಾಚಿದರು.  ಸ್ವಲ್ಪ ಹೊತ್ತು ಸುಮ್ಮನಿದ್ದು ವೈದ್ಯರು " ನೋಡಿ, ಈ ಖಾಯಿಲೆಗೆ ಯಾವ ಔಷಧಿಗಳು ಈಗ ಸಧ್ಯಕ್ಕೆ ದೊರೆಯುತ್ತಿಲ್ಲ.  ಪೋಲಿಯೋ ರೋಗವು ಇತ್ತೀಚಿಗೆ ಕಾಣಿಸಿಕೊಂಡಿರುವ ಭೀಕರ ರೋಗ.  ಹತ್ತಾರು ಸಂಶೋಧನೆಗಳು ನಡೆಯುತ್ತಾ ಇವೆ.  ಈಗಿನ ಪರಿಸ್ಥಿತಿಯಲ್ಲಿ ಈ ಮಗುವಿನ ಜ್ವರ ಇಳಿಸದೆ ಮುಂದಿನ ಕ್ರಮ ತೆಗೆದು ಕೊಳ್ಳುವುದು  ಕಷ್ಟ.  ಆದರೂ,  ನೀವು ಯಾವುದೇ ಕಾರಣಕ್ಕೂ ದೈರ್ಯಗೆಡಬೇಡಿ.  ಸಾತ್ವಿಕರಾಗಿ ಕಾಣುವ ನೀವು ಸತ್ಯವನ್ನು ಅರ್ಥ ಮಾಡಿಕೊಳ್ಳಬಲ್ಲಿರಿ.  ಈ ಮಗುವಿಗೆ ಏನು ಅಗತ್ಯವಿದೆಯೋ ಅದನ್ನು ಮಾಡೋಣ.  ಚಿಂತೆ ಮಾಡಬೇಡಿ"  ಎಂದು ತಂದೆಯ ಭುಜವನ್ನು ತಟ್ಟುತ್ತಾ ಸಮಾಧಾನ ಪಡಿಸಿದರು.  ತಂದೆಯ ಕಣ್ಣುಗಳಲ್ಲಿ ಧಾರಾಕಾರ ನೀರು ಹರಿಯಿತು.  ಸಾವರಿಸಿಕೊಂಡು ಎರಡೂ ಕೈಗಳನ್ನು ಜೋಡಿಸುತ್ತ ದುಃಖದಿಂದ " ಈ ಮಗುವನ್ನು ಉಳಿಸಿಕೊಡಿ .  ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಚೈತನ್ಯ ಪೂರ್ಣನನ್ನಾಗಿ  ಮಾಡಿಕೊಡಿ.  ಎದ್ದು ಓಡಾಡಲು ಸಾಧ್ಯವಾಗದೆ ಇದ್ದರೂ ಪರವಾಗಿಲ್ಲ.  ಎದ್ದು ಕೂರಲಿ.  ತನ್ನ ಕೆಲಸ ತಾನು ಮಾಡಿಕೊಳ್ಳುವಷ್ಟು ಚೈತನ್ಯ ಭಗವಂತ ದಯಪಾಲಿಸಿದರೆ ಸಾಕು."  ಎಂದು ಬೇಡಿದರು.

ವೈದ್ಯರ ಪ್ರಯತ್ನ ಶಕ್ತಿಮೀರಿ ಸಾಗಿತ್ತು. ನಾಲ್ಕಾರು ತಿಂಗಳು ಆಸ್ಪತ್ರೆಯ ಜೀವನದ ನಂತರ ಮಗು ಮನೆಗೆ ವಾಪಸಾಯಿತು.ಎದ್ದು ಕೂರುವ ಸ್ಥಿತಿ ತಲುಪಿತ್ತು.  ಎದ್ದು ನಿಲ್ಲಲಾಗಲಿ ಓಡಾಡುವ ಪರಿಸ್ಥಿತಿಯಲ್ಲಿ ಮಗು ಇರಲಿಲ್ಲ.  " ಮುದ್ದಾದ ಮಗುವಿಗೆ  ಹೀಗಾಯಿತಲ್ಲ " ಎಂದು ತಾಯಿ ಅತ್ತರೆ,  " ಭಗವಂತ ಇಷ್ಟಾದರೂ ಮಾಡಿದನಲ್ಲ"  ಎಂದು ಸಮಾಧಾನ ಮಾಡುತ್ತಿದ್ದರು.  " ಇವನ ಕಾಲ ಮೇಲೆ ಇವನನ್ನು ನಿಲ್ಲಿಸಲು ನಮಗೆ ಸಾಧ್ಯವಾಗದೆ ಇರಬಹುದು, ಆದರೆ ಇವನ ಬುದ್ಧಿ ಬಲದಲ್ಲಿ ಇವನು  ಸ್ವತಂತ್ರವಾಗಿ ನಿಲ್ಲುವಂತೆ ಮಾಡುವುದೇ ನಮ್ಮಿಬ್ಬರ ಜೀವನ, ಸಾಧನೆ ಮತ್ತು ಬದುಕು."  ಎನ್ನುತ್ತಾ ತಮ್ಮ ಸಂಪೂರ್ಣ ಜೀವನವನ್ನು ಮೀಸಲಿಟ್ಟರು.

ಇಂದಿಗೆ ಈ ಪೋಲಿಯೋ ಪೀಡಿತನಿಗೆ 56 ವರ್ಷಗಳೇ ಆಗಿವೆ.  ತಂದೆ ತಾಯಿ ಮಾಡಿದ ಜೀವನ ಸಾಧನೆಯ ಫಲವಾಗಿ ತನ್ನ ಕಾಲಮೇಲೆ ತಾನು ನಿಂತಿದ್ದಾನೆ .  ಪ್ರತಿ ಕ್ಷಣದಲ್ಲೂ ಆತ್ಮಸ್ಥೈರ್ಯ ತುಂಬುತ್ತ, ವಿಶ್ವಾಸ ಕರಗದಂತೆ, ಬದುಕಿನ ಪ್ರತಿ ಕ್ಷಣವನ್ನು ಹೇಗೆ ಎದುರಿಸಬೇಕೆಂಬುದನ್ನು  ಉದಾಹರಣೆ ಮೂಲಕ  ದೈರ್ಯ ತುಂಬುತ್ತ ಬೆಳೆಸಿದರು.   ಯಾವುದೇ ಕಾರಣಕ್ಕೂ  ತಾನು ನಿಷ್ಪ್ರಯೋಜಕ ಎಂಬ ಭಾವ ಬಾರದ ಹಾಗೆ ರಕ್ಷಿಸಿ ಬೆಳೆಸಿದರು.  ತಮ್ಮ ಶಕ್ತಿ ಮತ್ತು ಅವಕಾಶಗಳಿಗೆ ಅನುಸಾರ  ವಿದ್ಯೆ ಕೊಡಿಸಿದರು.  ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬ ಬುದ್ಧಿ ಕಲಿಸಿದರು.

ಇಂದಿಗೆ ಆ ತಂದೆ ತಾಯಿಯರು ಇಲ್ಲವಾದರೂ ಅವರ ಸಾಧನೆಯ ಪ್ರತೀಕ ಜೀವಂತವಾಗಿದೆ. ಪ್ರತಿ ಕ್ಷಣ ಆ ಸಾಧಕರನ್ನು ನೆನೆಯುತ್ತ ಅವರ ಆಶೀರ್ವಾದದ ಬಲ ಹಾಗೂ ಕೊಟ್ಟ ಸಂಸ್ಕಾರದ ನೆರಳಲ್ಲಿ ಇಂದು ಯಶಸ್ವಿ ವ್ಯಕ್ತಿಯಾಗಿ ತುಂಬು ಜೀವನ ನಡೆಸುತ್ತಿದ್ದಾನೆ. " ಪ್ರತಿ ಸವಾಲು ಅವಕಾಶವೇ, ಪ್ರತಿ ಅವಕಾಶವು ಸವಾಲೇ " ಎಂಬ ತಂದೆಯ ಮಾತನ್ನು ಅಕ್ಷರಶಃ ಪಾಲಿಸುತ್ತಾ  ಜೇವನದಲ್ಲಿ ಸಂತಸ ಮತ್ತು ತೃಪ್ತಿ ಕಂಡುಕೊಂಡ ಪೋಲಿಯೋ ಪೀಡಿತ " ನಾನೇ ". ಇಂತಹ ತಂದೆ ತಾಯಿ ಪಡೆದ ನಾನೇ  ಧನ್ಯ.  ಅವರ ಬಗ್ಗೆ ಎಷ್ಟು ಹೇಳಿದರು ಅದು ಕಡಿಮೆಯೇ.  ಅವರು ಬದುಕಿನಲ್ಲಿ ನನಗೆ ಕಲಿಸಿದ ಪಾಟಗಳು ಇಂದು ನನ್ನನ್ನು  ಕಾಪಾಡುತ್ತಿವೆ.

ಪ್ರತಿ ಶಿವರಾತ್ರಿ ಬಂದಾಗಲು ನನ್ನ ತಂದೆ ವಿಸ್ತಾರವಾಗಿ ನನಗೆ ಹೇಳಿದ ಈ ಘಟನೆ ನೆನಪಾಗುತ್ತದೆ.  ನನ್ನ ಅರಿವಿರದಂತೆ ಕಣ್ಣಲ್ಲಿ  ನೀರು ತುಂಬುತ್ತದೆ. ದುಖದಿಂದಲ್ಲ, ನನ್ನ ತಂದೆ ತಾಯಿಯಲ್ಲಿದ್ದ  ಅದಮ್ಯ ವಿಶ್ವಾಸದ ಸಂತೋಷದಿಂದ.  ಈಗ ಹೇಳಿ ಹೇಗೆ ಮರೆಯಲಿ ಈ ಮಹಾ ಶಿವರಾತ್ರಿಯನ್ನು?

ಹೆಚ್ ಎನ್ ಪ್ರಕಾಶ್
16 06 201211 comments:

 1. ದೇವರು ಜಗತ್ತನ್ನು ಸೃಷ್ಟಿಸುವಾಗ ಸ್ವಲ್ಪ ಯೋಚನೆ ಆಯಿತು..ಎಲ್ಲ ಕಾಲವು ನಾನು ಈ ಭೂಮಿಯಲ್ಲಿ ಇರಲು ಆಗುವುದಿಲ್ಲ ಏನು ಮಾಡಲಿ ಅಂತ..ಆಗ ಸೃಷ್ಟಿಯಾಗಿದ್ದೆ ತಾಯಿ ಜೀವ..ಮತ್ತೆ ದೇವರನ್ನು ಕಾಡಲು ಶುರುವಾಯಿತು..ತಾಯಿ ಜೀವಕ್ಕೆ ಒಂದು ರಕ್ಷಣೆ, ಒಂದು ರಕ್ಷಾ ಕವಚ ಬೇಕು ಅಂತ..ಆಗ ಬಂದಿದ್ದು ತಂದೆಯ ಪಾತ್ರ...ತಂದೆ ತಾಯಿ ಇಬ್ಬರು ಕಾಣುವ, ಜೊತೆಯಲ್ಲೇ ನಡೆದಾಡುವ ದೇವರುಗಳು..ನಾವೆಲ್ಲಾ ಭಾಗ್ಯವಂತರು ಅಂತ ಸಾನಿಧ್ಯ ನಮಗೆ ದೊರಕಿರುವುದು..
  ಮಾತಾ ಪಿತೃಗಳು ತಮ್ಮ ಬದುಕನ್ನು ಧಾರೆಯೆರೆದು ನಮ್ಮ ಜೀವನವನ್ನು ರೂಪಿಸುತ್ತಾರೆ..ಅವರಿಗೆ ನಾವು ಕೊಂಚ ಯೋಚಿಸಿದರೆ ಸಾಕು ಅದೇ ತೃಪ್ತಿ ತರುವ ಕಾಯಕ..ಮಕ್ಕಳ ಕರ್ತವ್ಯ, ಋಣ ಇವೆಲ್ಲ ಸವಕಲಾದ ಪದಗಳು...ಇದು ಯಾವುದು ಅಲ್ಲ ಇದು ಸಮಾನ ಸಮರ್ಪಣ ಭಾವ..ನೀವು ನಮ್ಮೊಂದಿಗಿದ್ದೀರ...ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಭಾವ...
  ಯಾವಾಗ ಅರ್ಪಣ ಭಾವ ಬರುತ್ತಾದೆಯೋ ಅಲ್ಲಿ ಶಿವನ ಸಾನಿಧ್ಯ, ಮಾತಾ-ಪಿತೃಗಳ ಹಾರೈಕೆ ಯಾವಾಗಲು ಇದೆ ಇರುತ್ತದೆ...ನಿಮಲ್ಲಿ ಆ ಸದ್ಭಾವನೆ ಬೆಳೆಸಿದ, ಉಳಿಸಿದ ಮಹನೀಯರಿಗೆ ವಂದನೆಗಳು..ಹಾಗು ಯಾವಾಗಲು ಪ್ರಾತಸ್ಮರಣೀಯರು
  ಚಿಕ್ಕಪ್ಪ..ದೇವರು ನಮಗೆ ಕೊಟ್ಟ ಸಾಧ್ಯಾಸಾಧ್ಯತೆಗಳನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವ ಗುಣ ಲಕ್ಷಣಗಳನ್ನು ಕಳಿಸಿದ ದೇವತಾ ಸಮಾನರಾದ ಮಾತಾ ಪಿತೃಗಳಿಗೆ ಒಂದು ನಮನಗಳು..
  ಲೇಖನ ಅರ್ಥಪೂರ್ಣ, ಸದಾ ಮನನೀಯ..ನಿಮ್ಮ ಗೆಲ್ಲುವ ಮನೋಭಾವಕ್ಕೆ ಒಂದು ಚಿಕ್ಕ ಸಲ್ಯೂಟ್...

  ReplyDelete
 2. ಅಂಗವೈಕಲ್ಯವೆನ್ನುವುದಕ್ಕಿಂಥ ಸೃಷ್ಟಿವೈವಿಧ್ಯವೆನ್ನುವುದು ಸೂಕ್ತವೇನೋ!
  ವೈಕಲ್ಯವೆಂಬುದು ದೇಹಕ್ಕೆ ಸಂಬಂಧಿಸಿದ್ದಲ್ಲ; ಮನಸ್ಸಿಗೆ ಸಂಬಂಧಿಸಿದ್ದು ಎಂಬುದು ನನ್ನ ಭಾವನೆ.

  ಸುತ್ತಮುತ್ತಲು ಕಾಣುವಂಥ ವೈಚಿತ್ರ್ಯವನ್ನು; ನಮಗೆ ತೋಚಿದಂಥ ಆಕಾರಗಳನ್ನು ಭಗವಂತನಿಗೆ ಆರೋಪಿಸಿ
  ಹಲವು ರೀತಿಯಲ್ಲಿ ಹೆಸರಿಸಿ ಹತ್ತು ಹಲವು ಬಗೆಯಲ್ಲಿ ವ್ಯಾಖ್ಯಾನಿಸುತ್ತೇವೆ...
  ಹೀಗಿರುವಾಗ, ಜಗತ್ತನ್ನೇ ಸೃಷ್ಟಿಸಿದ ಭಗವಂತ ನಮಗೆ ಹಲವನ್ನು ಕೊಟ್ಟು ಕೆಲವನ್ನು ಹಿಂಪಡೆವಾಟದಲ್ಲಿ ನಿಸ್ಸೀಮ.

  ಸಹಸ್ರಬಾಹುಗಳಿದ್ದ ಕಾರ್ತವೀರ್ಯನಿಂದ... ಎದುರಾಳಿಯ ಅರ್ಧಶಕ್ತಿಯನ್ನೇ ಹೀರಬಲ್ಲ ವಾಲಿಯಿಂದ... ಪರಶಿವನ ಆತ್ಮಲಿಂಗವನ್ನೇ ಪಡೆದ ದಶಕಂಠನಿಂದ
  ಸಹಸ್ರಾಕ್ಷನೆನಿಸಿದ ದೇವೇಂದ್ರನಿಂದ... ಸಾಧಿತವಾದದ್ದಾದರೂ ಏನು?

  ತಂದೆ ತಾಯಿರಿಗೆ ಪ್ರದಕ್ಷಿಣೆಯಿತ್ತು ವಿಶ್ವವನ್ನರಿತ ಡೊಳ್ಳು ಗಣಪ,
  ಕಾರ್ಯಸಾಧಕ ರಾಮಭಕ್ತ ಮರೆಗುಳಿ ಹನುಮ...

  ಕಾಮಾತುರನಾಗಿದ್ದವ ರಾಮಾತುರನಾದ ತುಲಸೀದಾಸ...
  ಹಾಡುತ್ತಲೇ ರಾಮನನ್ನು ಕಂಡ ಕುರುಡ ಸೂರದಾಸ...

  ತನ್ನ ಬಾಚಿ ಹಲ್ಲುಗಳಿಂದಲೇ ನಗುವನ್ನು ಮೊಗೆದಿತ್ತ ನರಸಿಂಹರಾಜು...
  ಕಿವುಡ ಬಾಲಣ್ಣ...

  ಕುಳಿತಲ್ಲೇ ವಿಶ್ವವನ್ನು ಅರಿಯಬಲ್ಲ...
  ಮಾಂಸದ ಮುದ್ದೆಯಂತಿರುವ ಸ್ಟೀಫನ್ ಹಾಕಿಂಗ್ಸ್...
  ಕುರುಡು-ಕಿವುಡಿ-ಮೂಗಿಯಾಗಿದ್ದ ಹೆಲನ್ ಕೆಲರ್...
  ಕಿವುಡನಾಗಿದ್ದ ಎಡಿಸನ್, ಬಿಥೋವನ್...

  ಇವರೆಲ್ಲರನ್ನೂ ‘ವಿಕಲಾಂಗ’ರೆಂದು ಯಾರು ಹೇಳಿಯಾರು?

  ಎಷ್ಟು ಕೈ ಎಷ್ಟು ಕಾಲು ಎಂಬುದಕ್ಕಿಂಥ?
  ಎಂಥ ಬಾಳು! ಎಂಬುದಷ್ಟೇ ಮುಖ್ಯ ಮತ್ತು ಅವಶ್ಯಕ.

  “ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಸ್ಸಹಸ್ರಪಾತ್" ಎಂದು ವೇದೋಕ್ತಿಯಿರುವಾಗ...
  ಭಗವಂತನ ಭಾಗವಾಗಿರುವ ನಾವೆಲ್ಲರೂ ಏನಿದ್ದರೂ, ಎಷ್ಟಿದ್ದರೂ ಅಪರಿಪೂರ್ಣರೇ... ವಿಕಲಾಂಗರೇ.

  ಅಷ್ಟಕ್ಕೂ ಈ ಮಾನವದೇಹವೆಂಬ ವಟವೃಕ್ಷಕ್ಕೆ ‘ಆಕಾರ’ಸಂಹಿತೆಯಾದರೂ ಎಲ್ಲಿದೆ?

  ReplyDelete
  Replies
  1. ಆತ್ಮೀಯ ರಜನೀಶನಿಗೆ,
   ಬಹಳ ದಿನಗಳ ನಂತರ ನೀನು ಬರೆದ ಪತ್ರ ಮನಸ್ಸಿಗೆ ಬಹಳ ಮುದ ನೀಡಿತು. ನಿನ್ನ ಮಾತು ಖಂಡಿತ ಒಪ್ಪಬೇಕು. ಆದರೆ ಒಬ್ಬ ವಿಕಲಾಂಗನನ್ನು ಜಗತ್ತು ನೋಡುವ ಪರಿಯಲ್ಲಿ ನಿನ್ನಂತಹವರು ಬಹಳ ವಿರಳ. ಕೆಲವೊಂದು ಪರಿಸ್ಥಿತಿಯಲ್ಲಿ ಅಸಹಾಯಕತೆ ಅನಿವಾರ್ಯವಾದಾಗ ಅಂತಹ ಸಂಧರ್ಭದಲ್ಲಿ ಮನಸ್ಸು ಮುದುಡುತ್ತದೆ.
   ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು. ಹೀಗೆಯೇ ನಿನ್ನ ಅಭಿಪ್ರಾಯಗಳ ನಿರೀಕ್ಷೆಯಲ್ಲಿ,
   ನಿನ್ನ ಆತ್ಮೀಯ,
   ಪ್ರಕಾಶ್

   Delete
 3. This comment has been removed by the author.

  ReplyDelete
 4. ಆತ್ಮೀಯ ಶ್ರೀಕಾಂತನಿಗೆ,
  ನಿನ್ನ ಮಾತು ಸರಿ, "ನನ್ನ ಜೊತೆ ಅಪ್ಪ ಅಮ್ಮ ಇದ್ದಾರೆ ಎನ್ನುವುದು ಅಹಂಕಾರದ ಮಾತು, ಅಪ್ಪ ಅಮ್ಮನ ಜೊತೆ ನಾನಿದ್ದೇನೆ ಎನ್ನುವುದು ವಿನಯದ ಮಾತು" ಎಂದು ಒಮ್ಮೆ ನನ್ನ ಗುರುಗಳು ಹೇಳಿದ್ದು ಜ್ಞಾಪಕಕ್ಕೆ ಬಂತು. ನಿನ್ನ ವಿಚಾರಕ್ಕೆ ಧನ್ಯವಾದಗಳು.
  ನಿನ್ನ ಆತ್ಮೀಯ,
  ಪ್ರಕಾಶ್

  ReplyDelete
 5. Umesha KP kpumesha@yahoo.com
  12:41 PM (8 hours ago)

  to me
  ಆತ್ಮೀಯ ಪ್ರಕಾಶ್
  ಈ ಲೇಖನದ ಶಿರೋನಾಮೆ ನೋಡಿ ಇದೊಂದು ಪವಾಡಗಳ ಬಗ್ಗೆ ಬರೆದ ಲೇಖನ ಎಂದುಕೊಂಡೆ. ಆದರೂ ನೀವು ಬರೆದ ಹರಟೆ ಆಗಿದ್ದರಿಂದ ಓದುವುದು ಮುಂದುವರೆಸಿದೆ. ಓದಿದಂತೆ ಇನ್ನೊಂದು ಸಂದಿಗ್ಧ – ನನಗೆ ಗೋಳಿನಿಂದ ಕೂಡಿದ ಲೇಖನಗಳನ್ನು ಓದುವುದು ಕಷ್ಠವಾಗುತ್ತದೆ. ಅಂತಹ ಜೀವನಕ್ಕೆ ಹೊಕ್ಕು ನನೇ ಅವುಗಳನ್ನು ಅನುಭವಿಸಿದಂತಾಗಿ ತಳಮಳ ಆಗುತ್ತದೆ. ಈ ರೀತಿ ಫೋಬಿಯಾದಿಂದ ದೂರವಿರಲು ಹಾಸ್ಯಮಯ ಸುಖಾಂತ್ಯ ಲೇಖನಗಳನ್ನು ಓದುತ್ತಾ ಅದು ಧನಾತ್ಮಕ ನಿಲವು ಎಂದು ನನಗೆ ನಾನೇ ಸಮರ್ಥಿಸಿಕೊಳ್ಳುತ್ತೇನೆ!
  ಕಷ್ಠಮಯ ಜೀವನವೊಂದನ್ನು ನೋಡಿದಾಗ ಅದನ್ನು ಸುಧಾರಿಲು ನನ್ನಿಂದ ಏನೂ ಮಾಡಲಾಗಲಿಲ್ಲ ಅನ್ನುವ ಹತಾಶೆ ಒಂದುಕಡೆ ಆದರೆ ಆ ಪರಿಸ್ಥಿತಿಗೆ ನಾನು ಕಾರಣನಲ್ಲ, ಅಂತಹವರು ಅಸಂಖ್ಯಾತರಿರುವಾಗ ನನ್ನಿಂದ ಏನು ತಾನೆ ಮಾಡಲು ಸಾಧ್ಯ ಎನ್ನುವ ಪಲಯನ ವಾದ ಇನ್ನೊಂದುಕಡೆ. ಶ್ರೀಮಂತ ಬಡವರೇ ಇರಲಿ, ವಿದ್ಯಾವಿದ್ಯಾವಂತರಿರಲಿ, ಸುರೂಪಿ ವಿರೂಪಿಗಳಿರಲಿ, ಹೆಚ್ಚಿನವರು ಅಸಂತೊಷಿಗಳೇ ಆದ್ದರಿಂದ ನಮಗೇನು ಮಡಲು ಸಾಧ್ಯ ಎನ್ನುವುದು ಇನ್ನೊಂದು ತರ್ಕ. ಬೇರೆಯವರ ಕಷ್ಠಗಳ ಬಗ್ಗೆ ಬೂಟಾಟಿಕೆಯ ಕನಿಕರ ತೋರಿಸುವುದರಿಂದ ಅವರ ವ್ಯಕ್ತಿತ್ವಕ್ಕೆ ಲಾಭಕ್ಕಿಂತ ನಷ್ಠವೇ ಜಾಸ್ತಿ. ಆದರೂ ಧಾರ್ಮಿಕರಿಗೆ ಪಾಪ ಪ್ರಜ್ಞೆ ಕಾಡಿದರೆ ಇತರಿರಿಗೆ ಮಾನವೀಯತೆಯ ಪ್ರಶ್ನೆ ಕಾಡುತ್ತದೆ. ಇಂತಹ ಉಭಯಸಂಕಟಕ್ಕೆ ಸಿಕ್ಕಿ ತೊಳಲಾಡಿದ ಆಸ್ತಿಕ ಪೂರ್ವಜರು ಕರ್ಮ ಸಿದ್ದಾಂತವನ್ನು ಹುಟ್ಟುಹಾಕಿದ್ದಾರೆ ಎನ್ನುವುದು ನನ್ನ ನಂಬಿಕೆ.
  ನಿಮ್ಮ ಜೀವನದ ವೃತ್ತಾಂತಕ್ಕೆ ನಿಮ್ಮ ಪಾಲಕರ ವಿಷೇಷ ಆಸ್ಥೆಯ ಜೊತೆಗೆ ನಿಮ್ಮ ಸ್ವಂತ ಮನೋಬಲ, ಛಲ, ವೃತ್ತಿ, ಪ್ರವೃತ್ತಿಗಳೂ ಕಾರಣ ಅನ್ನುವುದು ನನ್ನ ಭಾವನೆ. ಆ ಶಿವರಾತ್ರಿ ನೆನಪಿನ ದಿನವಾಗಿ ಮಾತ್ರ ಇದ್ದು ಬೇರೇನು ಪ್ರಮುಖ್ಯತೆ ಇರದಿದ್ದರೂ ನಿಮ್ಮ ಜೀವನವೇ ಪವಾಡ ಸದೃಷ ಅನ್ನುವುದು ನನ್ನ ಅನಿಸಿಕೆ.
  ಇಂತಿ
  ನಿಮ್ಮವ
  ಉಮೇಶ ಕೆ. ಪಿ.

  ReplyDelete
 6. ಆತ್ಮೀಯ ಉಮೇಶರಿಗೆ ನಮಸ್ಕಾರಗಳು,
  ನಿಮ್ಮ ಆತ್ಮೀಯ ಪ್ರತಿಸ್ಪಂದನೆಗೆ ಧನ್ಯವಾದಗಳು. " ನೋವಿನ ಸಂಧರ್ಭದಲ್ಲಿ ನನಗೇನೂ ಮಾಡಲಾಗುವುದಿಲ್ಲವಲ್ಲ " ಎಂಬ ಹತಾಶೆ ನಿಮಗೆ ಬರಲೇಬಾರದು. ಏಕೆಂದರೆ, ನೀವು ನನಗೆ ಮಾಡಿರುವ ಉಪಕಾರವನ್ನು ನನ್ನ ಈ ಜನ್ಮದಲ್ಲಿ ನಾನು ಮರೆಯಲು ಸಾಧ್ಯವೇ ಇಲ್ಲ. ಪ್ರತಿ ಬಾರಿ ನಾನು ಸ್ಕೂಟರ್ ಹತ್ತುವಾಗಲು ನಿಮ್ಮನ್ನು ನೆನಪಿಸಿಕೊಂಡೆ ಹತ್ತುತ್ತೇನೆ. ಅಂದು ನೀವು ತೋರಿದ ಔದಾರ್ಯಕ್ಕೆ ನಾನು ನಿಮಗೆ ಏನು ತಾನೇ ನೀಡಲು ಸಾಧ್ಯ ತುಂಬು ಮನಸ್ಸಿನ ಕೃತಜ್ಞತೆ ಮತ್ತು ಪ್ರಾರ್ಥನೆ ಬಿಟ್ಟು? ನಿಮ್ಮಂತಹ ಸ್ನೇಹಿತರನ್ನು ಪಡೆದ ನಾನು ಅದೆಷ್ಟು ಧನ್ಯ! ಈ ಮಾತುಗಳು ನಿಮ್ಮ ಮನಸ್ಸಿಗೆ ಕಿರಿಕಿರಿ ಖಂಡಿತ ಉಂಟುಮಾಡುತ್ತದೆ, ದಯಮಾಡಿ ಕ್ಷಮಿಸಿ. ನನ್ನ ಮನಸಿನಾಳದ ಮಾತುಗಳನ್ನು ಹೇಗೆ ಹೊರಹಾಕಲಿ?
  ನಿಮ್ಮ ಸ್ಪಷ್ಟ ನೇರ ಅಭಿಪ್ರಾಯಗಳಿಗೆ ಧನ್ಯವಾದಗಳು.
  ಪ್ರಕಾಶ್

  ReplyDelete
 7. Prakash KG kurudiprakash@yahoo.com

  Hai Prakashanna,

  Gone through "Harate" and Shivarathri Jagarane....

  I smelt half way when you mentioned the word of 'Polio' 47 years back,,, this is nothing but "autobiography" of you only..,, my assumption was right at the end..

  We too are lucky to have such a "Great Personality" as our good friend, family-member, great guide..remembering you itself fill in-us a lot of Positivism...what more to explain..

  Hats of to you.. Of course your parents..and Smt.Sharada ( mathe)..your two sons and d-i-l ( daughter in laws).

  Please come to Davangere at your convienience with full family.

  Regards,

  KG.PRAKASH.

  ReplyDelete
 8. Dear Prakash,
  Thanks for your heartfelt love and affection. It is my strength always. I am so lucky to have friends like you.
  Thanks for your comments.
  Prakash

  ReplyDelete
 9. ಆತ್ಮೀಯ ಪ್ರಕಾಶ್, ನಿಮ್ಮ ಅನುಭವದ ಬುತ್ತಿಯಿಂದ ಬಂದ ಅನಿಸಿಕೆ ಹೃದಯಸ್ಪರ್ಶಿಯಾಗಿದೆ. ಶಿವರಾತ್ರಿಯ ಜಾಗರಣೆಯ ಉದ್ದೇಶ ಜಾಗೃತರಾಗಿರುವುದು, 'ಎಚ್ಚರ'ವಿರುವುದು!! ಅದು ಆ ಒಂದು ದಿನಕ್ಕೆ ಸೀಮಿತವಾಗಬಾರದು. ಜೀವನದಲ್ಲಿ ತಾವು 'ಎಚ್ಚರ'ವಿದ್ದೀರಿ. ದನ್ಯವಾದಗಳು.

  ReplyDelete
 10. ಧನ್ಯವಾದಗಳು ನಾಗರಾಜರವರೆ,
  ಪ್ರಕಾಶ್

  ReplyDelete