January 27, 2012

ಶ್ರೀ ರಮಣ ಮಹರ್ಷಿಗಳ ಪ್ರಾಣಿ ಪ್ರೇಮ

Courtesy: Mountain Path
ಶ್ರೀ ರಮಣ ಮಹರ್ಷಿಗಳ ಪ್ರಾಣಿ ಪ್ರೇಮ 
                 ಶ್ರೀ ಭಗವಾನರ ಆಶ್ರಯದಲ್ಲಿ ಹಲವಾರು ಪ್ರಾಣಿ, ಪಶು ಮತ್ತು ಪಕ್ಷಿಗಳು ಇದ್ದವು. ಇವುಗಳೆಲ್ಲ ಮಹರ್ಷಿಗಳ ಜೊತೆಯಲ್ಲಿ ಆನಂದದಿಂದ ವಿಹರಿಸುತ್ತಿದ್ದವು. ಹಸು,ನಾಯಿ, ಮಂಗ,ಇಣಚಿ ಮತ್ತು ನವಿಲು ಮುಂತಾದವುಗಳು ರಮಣ ಆಶ್ರಮದಲ್ಲಿ ಅತಿಥಿಗಳಂತೆ ಇದ್ದವು. ಶ್ರೀ ಭಗವಾನರು ಈ ಪ್ರಾಣಿಗಳನ್ನು ಮತ್ತು ಭಕ್ತರನ್ನು ಸಮಾನ ದೃಷ್ಟಿಯಿಂದ 
ನೋಡುತ್ತಿದ್ದರು.  ಪ್ರತಿನಿತ್ಯ ಮಹರ್ಷಿಗಳು ಊಟಕ್ಕೆ ಕೂರುವ ಮುನ್ನ " ಮಕ್ಕಳಿಗೆ ಆಹಾರ ಕೊಟ್ಟು ಆಗಿದೆಯೇ?" ಎಂದು ಆಶ್ರಮದ ನಾಯಿಯ ಬಗ್ಗೆ ವಿಚಾರಿಸುತ್ತಿದ್ದರು. " ಲಕ್ಷ್ಮಿಗೆ ಅವಳ ಅನ್ನ  ಕೊಟ್ಟರೆ?" ಎಂದು ಆಕಳವಿಚಾರದಲ್ಲಿ ಮಾತನಾಡುತ್ತಿದ್ದರು. ಭೋಜನದ ಸಮಯದಲ್ಲಿ ನಾಯಿಗಳಿಗೆ, ಹಸುಗಳಿಗೆ ಮತ್ತು ಅಲ್ಲಿ ನೆರೆದಿರುತ್ತಿದ್ದ ಭಿಕ್ಷುಕರಿಗೆ ಉಣಬಡಿಸಿದ ನಂತರ ಭಕ್ತರಿಗೆ ಊಟವಾಗುತ್ತಿತು. ಆ ಸಮಯದಲ್ಲಿ ಮಹರ್ಷಿಗಳು ಭಕ್ತರೆಲ್ಲರೊಡನೆ ಕೂತು ಊಟಮಾಡುತ್ತಿದ್ದರು. ಇದು ಅಲ್ಲಿಯ ಸಾಮಾನ್ಯ ನಿಯಮವಾಗಿತ್ತು. ಎಲ್ಲರಲ್ಲಿಯೂ ಸಮನಾಗಿ ಹಂಚಲಾಗದ ಯಾವುದನ್ನು ಮಹರ್ಷಿಗಳು ಸ್ವೀಕರಿಸದೆ ನಿರಾಕರಿಸುತ್ತಿದ್ದರು. ಭಗವಾನರಿಗೆ ನವಿಲುಗಳೆಂದರೆ  ಅಚ್ಚುಮೆಚ್ಚು,  ಅವುಗಳು ಕೇಕೆ ಹಾಕುವಂತೆ ಕೂಗಿ ಕರೆದು ಪ್ರೀತಿಯಿಂದ ಬೇಳೆ, ಕಾಳು,ಅಕ್ಕಿ ಮತ್ತು ಮಾವಿನಹಣ್ಣುಗಳನ್ನೂ ನೀಡುತ್ತಿದ್ದರು. ಇಣಚಿಗಳಿಗೆ  ಒಂದು ಪ್ರತ್ಯೇಕ ಕರಂಡಿಕೆ ಇಟ್ಟು ಅದರಲ್ಲಿ ಬೇಳೆ ಕಾಳುಗಳನ್ನೂ ತುಂಬಿ ಮಹರ್ಷಿಗಳ ಮಂಚದ ಸಮೀಪದಲ್ಲಿಯೇ ಇಡುತ್ತಿದ್ದರು. ಇಣಚಿಗಳು ಕಿಟಕಿಯೊಳಗಿಂದ ಬಂದು ಮಹರ್ಷಿಗಳ ಸಮೀಪದಲ್ಲಿ ಸಾವಕಾಶವಾಗಿ ತಿಂದು ಹೋಗುತ್ತಿದ್ದವು. ಶ್ರೀ ಭಗವಾನರ ಕೃಪೆಗೆ ಪಾತ್ರವಾದ ಎಲ್ಲ ಪಶು, ಪ್ರಾಣಿಗಳು ಸುಖವಾಗಿ ಸಂತೃಪ್ತವಾಗಿ ಕಾಲಕಳೆಯುತ್ತಿದ್ದವು.
                                 ಶ್ರೀ ಭಗವಾನರ ಜೀವನದಲ್ಲಿ ಒಂದು ಘಟನೆ ನಡೆಯಿತು. ಭಗವಾನರ ಬಳಿ ಬರುತ್ತಿದ್ದ ಇಣಚಿಯನ್ನು ರಕ್ಷಿಸುವ ಸಲುವಾಗಿ ತಮ್ಮ ಎಲುಬು ಮುರಿತ  ಅನುಭವಿಸಿದರು.  ಒಮ್ಮೆ ಗಿರಿಯ ಮೇಲಿಂದ ಆಶ್ರಮದ ಕಡೆಗೆ ಮೆಟ್ಟಿಲು ಇಳಿದು ಬರುವಾಗ ಇಣಚಿಯೊಂದು ಭಗವಾನರ ಪಾದದ ಕಡೆಯಿಂದ ನೆಗೆದು ಓಡಿತು. ಇದನ್ನು ಕಂಡ ನಾಯಿಯೊಂದು ಇಣಚಿಯನ್ನು ಹಿಡಿಯಲು ಬೆನ್ನಟ್ಟಿತು. ಇದನ್ನು ಕಂಡ ಮಹಷಿಗಳು ನಾಯಿಯನ್ನು ಕೂಗಿ ಕರೆದರೂ ಕೇಳಿಸಿಕೊಳ್ಳದೆ ಓಡಿತು. ಆಗ ಮಹರ್ಷಿಗಳು ತಮ್ಮ ಕೈಲಿದ್ದ ಕೋಲನ್ನು ಇಣಚಿ ಮತ್ತು ನಾಯಿಯ ಮಧ್ಯೆ ಬೀಸಿ ಒಗೆದರು. ಆಗ ನಾಯಿ ಬೆದರಿ ದೂರ ಓಡಿದ ಕಾರಣ, ಇಣಚಿ ಪ್ರಾಣ ಉಳಿಯಿತು . ಹೀಗೆ ಮಾಡುವ ಸಮಯದಲ್ಲಿ ಮಹರ್ಷಿಗಳು ಆಯ ತಪ್ಪಿ ಕೆಳಗೆ ಬಿದ್ದು ಬಿಟ್ಟರು. ಅವರು ಬಿದ್ದಾಗ ಕೊರಳ ಪಟ್ಟಿಯ ಎಲುಬು ಮುರಿದು ಹೋಯಿತು.  ನೋವಿನಿಂದ ಏಳಲಾಗದ್ದಿದ್ದರು ಇಣಚಿಯನ್ನು ನಾಯಿಯಿಂದ ರಕ್ಷಿಸಿದ್ದಕ್ಕೆ ತೃಪ್ತಿ ಪಟ್ಟರು. 
                                  ಇನ್ನೊಮ್ಮೆ  ಭಗವಾನರು  ಗುಡ್ಡದ  ಮೇಲೆ  ಕುಳಿತಿದ್ದರು.  ಅವರ ಜೊತೆ ನಾಲ್ಕಾರು ಜನ ಭಕ್ತರೂ  ಇದ್ದರು.  ಈ ಸಮಯದಲ್ಲಿ ಒಂದು ಹಾವು ಭಗವಾನರ ಕಾಲ ಮೇಲೆ ಏರಿತು. ಆಗ ಭಗವಾನರು ಅಲುಗಾಡಲು ಇಲ್ಲ, ಯಾವುದೇ ರೀತಿಯಲ್ಲಿ ಭಯಭೀತರಾಗಲು ಇಲ್ಲ. ಏರಿದ ಹಾವು ಒಂದೆರಡು ಕ್ಷಣದಲ್ಲಿ ಇಳಿದು ತನ್ನಷ್ಟಕ್ಕೆ ತಾನು ಹರಿದು ಹೋಯಿತು. ಆಗ ಹತ್ತಿರದಲ್ಲಿದ್ದ ಭಕ್ತರು ಭಯಭೀತರಾಗಿ ಹೆದರಿ ನಡುಗಿದರು. ಒಬ್ಬ ಭಕ್ತ " ಹಾವು ನಿಮ್ಮ ಮೇಲೆ ಹರಿದು ಹೋಗುವಾಗ ನಿಮಗೇನೂ ಅನಿಸಲಿಲ್ಲವೇ?" ಎಂದು ಪ್ರಶ್ನಿಸಿದ.  ಆಗ ಮಹರ್ಷಿಗಳು ನಸುನಕ್ಕು "ತಣ್ಣಗೆ, ಮೆತ್ತಗೆ" ಎಂದು ಉತ್ತರಿಸಿದರು.  ಮಹರ್ಷಿಗಳು ಎಂದಿಗೂ  ಹಾವುಗಳನ್ನು  ಕೊಲ್ಲಲು  ಬಿಡುತ್ತಿರಲಿಲ್ಲ . " ನಾವುಗಳು  ಅವುಗಳ ಜಾಗದಲ್ಲಿ ಮನೆ ಮಾಡಿಕೊಂಡಿದ್ದೇವೆ.  ಅವುಗಳಿಗೆ ಕಷ್ಟ ಕೊಡುವುದಕ್ಕೆ ನಮಗೇನು ಅಧಿಕಾರ ಇದೆ?  ಅವು ನಮಗೇನು ತೊಂದರೆ ಕೊಡಲು ಬರುವುದಿಲ್ಲ.  ನಮಗೆ ನಾವೇ ಹೆದರಿ ಅವುಗಳಿಗೆ ತೊಂದರೆ ಕೊಡುತ್ತೇವೆ."  ಎನ್ನುತ್ತಿದ್ದರು. 
                                
                                   ಭಗವಾನರ ಪ್ರಾಣಿಪ್ರೇಮ ಎಷ್ಟಿತ್ತೆಂದರೆ, ತಮ್ಮ ಕೊನೆಯ ದಿನಗಳಲ್ಲಿ ಭಯಾನಕ ನೋವಿನಿಂದ ನರಳುತಿದ್ದರೂ,  ಪ್ರಾಣಿ, ಪಶು, ಪಕ್ಷಿಗಳ ಮೇಲಿನ ವಿಚಾರಣೆಯನ್ನು ಬಿಡುತ್ತಿರಲಿಲ್ಲ. ಹತ್ತಿರದಲ್ಲಿ  ಶುಶ್ರೂಷೆ  ಮಾಡುತ್ತಿದ್ದ  ವೈದ್ಯರು ಹೇಳುವಂತೆ "ಅಂತಹ ನೋವಿನಲ್ಲೂ  ಭಗವಾನರು ಕೊಂಬೆಯ ಮೇಲೆ ಕುಳಿತ ನವಿಲಿನ ಕೇಕೆಯ ಶಬ್ದಕ್ಕೆ ಸ್ಪಂದಿಸಿ ಅದಕ್ಕೆ ಆಹಾರ ಕೊಡಲಾಯಿತೆ?"  ಎಂದು ವಿಚಾರಿಸುತ್ತಿದ್ದರು. ಆಶ್ರಮದಲ್ಲಿ ಇರುವ ಎಲ್ಲಾ ಪ್ರಾಣಿಗಳ ನೆನಪಿಗೆ   ಮಹರ್ಷಿಗಳು ಅಪರೂಪದ ಸ್ಮಾರಕಗಳನ್ನು ನಿರ್ಮಾಣ ಮಾಡಿಸಿದ್ದಾರೆ.  ಆಶ್ರಮದಲ್ಲಿದ್ದ ಒಂದು ಚಿಗರೆ, ಕಾಗೆ, ನಾಯಿ , ಮಂಗ, ಹಸು ಹೀಗೆ ತಮ್ಮೊಡನೆ ಇದ್ದ ಈ ಎಲ್ಲಾ ಜೀವಿಗಳಿಗೆ ಪ್ರತ್ಯೇಕ ಸಮಾಧಿಗಳಿವೆ.  ಅವುಗಳ ಮೇಲೆ ಮೃತ ಪ್ರಾಣಿಗಳ ಚಿತ್ರಗಳನ್ನು ಬಿಡಿಸಿ, ಅವುಗಳ ಮೇಲೆ ಶ್ರೀ ಭಗವಾನರಿಂದ ರಚಿತವಾದ ಮರಣ ಲೇಖನವನ್ನು ಕೆತ್ತಿಸಲಾಗಿದೆ. ಭಗವಾನರ ಪ್ರಕಾರ ಈ ಎಲ್ಲಾ ಜೀವಿಗಳಿಗೆ ಮುಕ್ತಿ ಲಭ್ಯವಾಗಿದೆ. ಇಂತಹ ಪ್ರಾಣಿ ಪ್ರೇಮವನ್ನು ಸಮನಾಗಿ ಭಕ್ತರೊಂದಿಗೆ ಹಂಚಿಕೊಂಡ ಅಪರೂಪದ ಸಾಧನೆಗೆ  ನಿದರ್ಶನ.

                                    "ಮನುಷ್ಯ   ತಾನು ಬದುಕಿದ್ದಷ್ಟು ಸಮಯದಲ್ಲಿ ಕೈಗೊಂಡ ಸತ್ಕರ್ಮ ಅಥವಾ ದುಷ್ಕರ್ಮ ಇವೆರಡರ ಜಮಾ ಬಾಕಿಗಳ ಅವಲಂಬಿಸಿ ಪುನಃ ಜನ್ಮ ತಾಳುತ್ತಾನೆ " ಎಂದು ಹಿಂದೂ ಧರ್ಮ ಪ್ರತಿಪಾದಿಸುತ್ತದೆ. ಇದನ್ನು ಶ್ರೀ ಶಂಕರಾಚಾರ್ಯರು " ಯಾರು ಆತ್ಮ ಸಾಕ್ಷಾತ್ಕಾರದಿಂದ ತನ್ನ ಭಿನ್ನ ವ್ಯಕ್ತಿತ್ವದ ಭ್ರಾಂತಿಯನ್ನು ಕಳೆದುಕೊಂಡಿರುವುದಿಲ್ಲವೋ ಅವನು  ಮರಣಾ ನಂತರ ತನ್ನ ಶೇಷ ಭಾಗದ ಕರ್ಮದ ತೀರಿಕೆಗಾಗಿ ಪುನಃ ಜನ್ಮ ತಾಳುತ್ತಾನೆ  " ಎಂದು ಹೇಳಿರುತ್ತಾರೆ.  ಇದನ್ನೇ ಭಗವಾನರು " ಪ್ರಗತಿಯನ್ನು ಸಾಧಿಸುವುದು  ಮತ್ತು ಕರ್ಮವನ್ನು ಆಚರಿಸುವುದು ಮನುಷ್ಯ ಜೀವನದಲ್ಲಿ ಮಾತ್ರವೇ ಶಕ್ಯವೆಂದು ಸಾಮಾನ್ಯವಾಗಿ ನಂಬಲಾಗುತ್ತದೆ.  ಆದರೆ, ತಮ್ಮ ತಮ್ಮ ಕರ್ಮಗಳನ್ನು ಕ್ಷಯಿಸಲು  ಮಾನವರಂತೆ  ಪ್ರಾಣಿಗಳಿಗೂ ಕೂಡಾ ಸಾಧ್ಯ."  ಎಂಬ ಅಭಿಪ್ರಾಯವನ್ನು ವ್ಯಕ್ತ ಮಾಡಿತ್ತಾ, ಭಗವಾನರು "ಪ್ರಾಣಿಗಳಿಗೂ  ಮುಕ್ತಿ  ಸಾಧ್ಯ" ಎಂದೇ  ಪ್ರತಿಪಾದಿಸುತ್ತಿದ್ದರು.       ಇನ್ನೊಂದು ಸಂಭಾಷಣೆಯಲ್ಲಿ ಭಗವಾನರು " ಯಾವ ಜೀವಾತ್ಮರುಗಳು ಈ  ದೇಹಗಳಲ್ಲಿ  ವಾಸಿಸುವರೆಂಬುದನ್ನು ಮತ್ತು ತಮ್ಮ ಅಪೂರ್ಣವಾದ ಕರ್ಮದ ಯಾವ ಭಾಗವನ್ನು ಪೂರ್ಣಗೊಳಿಸಲು ಅವರು ಯಾರ  ಸಹವಾಸವನ್ನು ಮಾಡುತ್ತಿದ್ದಾರೆಂಬುದನ್ನು  ನಾವು ಅರಿಯೆವು. ಇದಕ್ಕೆ ಈ ಪ್ರಾಣಿಗಳೇ ಸಾಕ್ಷಿ "  ಎಂದು ಹೇಳಿದ್ದರು. ಪ್ರಾಣಿಗಳೂ  ಮುಕ್ತಿಯನ್ನು ಪಡೆಯುತ್ತವೆಂದು ಶ್ರೀ ಶಂಕಾರಾಚಾರ್ಯರು ಕೂಡಾ ಖಚಿತ ಪಡಿಸಿದ್ದಾರೆ.  ಜಡಭರತ ಮುನಿಯು ತಾನು ಸಾಕಿದ ಚಿಗರೆಯ ಬಗ್ಗೆ ತನ್ನ ಮರಣ ಕಾಲದಲ್ಲಿ ಕ್ಷಣಿಕವಾದ ವಿಚಾರ ತರಂಗದ ಮೂಲಕ ಭಾಧೆಗೆ ಒಳಗಾದನೆಂದು ಮತ್ತು ತನ್ನ ಈ ಕೊನೆಯ ಅಭಿಲಾಷೆಯನ್ನು ಪೂರೈಸಲು ಆತನು ಪುನಃ ಚಿಗರೆಯಾಗಿ ಜನ್ಮ ತಾಳಬೇಕಾಯಿತೆಂದು ಪುರಾಣ ಕಥೆಯಲ್ಲಿ ಉಲ್ಲೇಖಿಸಲಾಗಿದೆ. 

  27 01 2012                         ಓಂ ನಮೋ ಭಗವತೇ ರಮಣಾಯ.
                                                                                                                

No comments:

Post a Comment