ಸಾವು
ಸಾವಿರದ ಮನೆಯ ಸಾಸುವೆ ಎಲ್ಲಿಂದ ತರಲೆಂದು
ಗೌತಮನ ಮುಂದೆ ಗೊಗೆರದು ಕಣ್ಣೇರು ಇಟ್ಟ ಹೆಣ್ಣು ಮಗಳಿಗೆ
ಕಣ್ಣು ತೆರೆಸಿ, ದುಃಖ ಮರೆಸಿ, ಸಾವು ಸಹಜ ಬಾಳಿನಷ್ಟೇ!
ಎನ್ದೊರಲಿ ಚಿತೆಯ ಕಡೆಗೆ ಕೈ ತೋರಿದ ಬುದ್ಧ.
ಹುಟ್ಟಿನ ಹಿಂದೆಯೇ ನೆರಳಿನಾ ಹಾಗೆ ಸಾವು ಹಿಂಬಾಲಕ.
ಎಂದು ಕರಿನೆರಳು ಭೂತಾಕಾರವಾಗಿ ದೇಹವನು ನುಂಗಿ
ತಾನು ಬಂದ ಕೆಲಸ ಮುಗಿಸಿ ಕೈಕೊಡವಿ ಹೊರಡುವುದೋ?
ಅವನ ಬಿಟ್ಟು ಯಾರೂ ಅರಿಯಲಾಗದ ಘೋರ ರಹಸ್ಯ!
ಯಮನಿಗೆ ಮತ್ತೊಂದು ಹೆಸರು ಕಾಲ, ಈ ಕಾಲವೇ ಎಲ್ಲ,
ಸುಖದ ತೀರದಿಂದ ಎಲ್ಲೆಂದರಲ್ಲಿಗೆ, ಹೇಗೆಂದರೆ ಹಾಗೆ
ದುಃಖದಲಿ ನಿಲ್ಲಿಸುವ ಕ್ರಮ ಕಾಲನಿಗೆ ಮಾತ್ರ ಅರಿವು
ಕೆಲ ಕಾಲ ಮೆರೆಸಿ ಅಳಿಸಿದಾ ಹಾಗೆ ಮರೆಸುವನು ಕೂಡ.
ಇರುವಷ್ಟು ದಿನ ಇಂದಿಗೆ ಬದುಕುತ್ತ, ಈ ಕ್ಷಣದ ಸವಿ ನೋವುಗಳ
ಇಂದಿಗೆ ಮುಗಿಸುತ್ತ ಕಹಿ, ರಾಗ ದ್ವೇಷಗಳ ಬದಲಿಗೆ
ಪ್ರೀತಿ ಪ್ರೇಮಗಳ ಆಲಂಗಿಸುತ್ತ ಸಾವಿನಾ ಸಾಲಿನಲ್ಲಿ ನಿಂತುಅನಾಯಾಸ ಮರಣಕ್ಕೆ ಅನನ್ಯ ಬೇಡುವ ಯಾತ್ರಿಕ ನಾನು .
( ನನ್ನ ಆತ್ಮೀಯರೊಬ್ಬರ ಮನೆಯಲ್ಲಿ ಆದ ಸಾವಿನ ಸಮಯದಲ್ಲಿ ಮನಸಿನಾಳದಿಂದ ಬಂದ ಕೆಲವು ಸಾಲುಗಳು )
25 01 2012
No comments:
Post a Comment