January 15, 2012

ಶ್ರಾದ್ಧ ....................ಒಂದಷ್ಟು ಹರಟೆ.

                                
 ಶ್ರಾದ್ಧ ....................ಒಂದಷ್ಟು ಹರಟೆ.


                                ಹುಟ್ಟು ಅಂದಮೇಲೆ  ಸಾವು ನಿಶ್ಚಿತ. ಹುಟ್ಟಿನೊಂದಿಗೆ ಪ್ರಾರಂಭವಾಗುವ ಜೀವನ ಯಾತ್ರೆ  ಮರಣದೊಂದಿಗೆ  ಮುಗಿಯುತ್ತವೆ. ಅಂತ್ಯಸಂಸ್ಕಾರ ನಡೆಯುತ್ತವೆ . ನಂತರದಲ್ಲಿ  ಮೃತ ವ್ಯಕ್ತಿಗೆ ಹಲವಾರು ಸಂಸ್ಕಾರಗಳು ನಡೆಯುತ್ತವೆ. ಸತ್ತ ದಿನದಿಂದ ಹದಿನಾಲ್ಕು ದಿನಗಳವರೆಗೆ ಹಲವಾರು  ರೀತಿಯ ಕರ್ಮಗಳನ್ನು ಅವರವರ ಪದ್ದತಿಗನುಸಾರವಾಗಿ ಮತ್ತು ಸಂಪ್ರದಾಯದಂತೆ ಮಾಡುತ್ತಾರೆ. ಮೃತ ವ್ಯಕ್ತಿಯ ಮಕ್ಕಳು ಸಾಮಾನ್ಯವಾಗಿ ಈ ಕರ್ಮವನ್ನು ಮಾಡುತ್ತಾರೆ.ನಂತರದಲ್ಲಿ ಪ್ರತಿ ವರ್ಷ ಮೃತರ ನೆನಪಿನಲ್ಲಿ ಶ್ರಾದ್ಧ  ಕರ್ಮಅಥವಾ ತಿಥಿ ಎಂಬ  ಹೆಸರಿನಲ್ಲಿ  ಆಚರಣೆ ಮಾಡುವುದು ರೂಡಿಯಲ್ಲಿದೆ.

                                  ಈ ದೇಹಕ್ಕೆ ಅಂತ್ಯ ಸಂಸ್ಕಾರವಾದ ಮೇಲೆ ಶ್ರಾದ್ಧ  ಅಥವಾ ತಿಥಿ ಎನ್ನುವ ಕರ್ಮ ಬೇಕೇ? ಏಕೆ ಬೇಕು? ಅಂತ್ಯವಾದ ಮೇಲೆ ಶ್ರಾದ್ಧ  ಯಾರಿಗೆ? ಇದರ ಅವಶ್ಯಕತೆ ಏನು? ಎಂದು  ಹಲವರು  ಪ್ರಶ್ನೆ ಮಾಡುತ್ತಾರೆ . ಇನ್ನು ಹಲವರು "ವ್ಯಕ್ತಿ ಜೀವಂತ ಇದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳದೆ, ಗೊಳುಹಾಕಿ ಕೊಂಡು ಸತ್ತ ನಂತರ ನೂರಾರು ಜನರಿಗೆ ಊಟ ಹಾಕಿದರೇನು ಬಂತು?  ಇರುವಷ್ಟು ದಿನ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡು ಅವರ ಬೇಕುಬೇಡಗಳನ್ನು ಒದಗಿಸಿದರೆ ಸಾಕು. ಸತ್ತ ನಂತರ ತಿಥಿ ಮಾಡದಿದ್ದರೂ ಪರವಾಗಿಲ್ಲ." ಎನ್ನುತ್ತಾರೆ. ಮತ್ತೆ ಕೆಲವರು "ನಮ್ಮ ಹಿರಿಯರು ನಡೆಸಿಕೊಂಡು ಬಂದ ಆಚಾರ ವಿಚಾರ, ಸುಮ್ಮನೆ ಮಾಡಿರುವುದಿಲ್ಲ. ಇದನ್ನು ಏಕೆ ತಪ್ಪಿಸಬೇಕು? ಇಂತಹ ಒಂದು ಆಚರಣೆ ಶ್ರಾದ್ಧ .      ಹಿರಿಯರ  ನೆನಪಿನಲ್ಲಿ ಒಂದು ದಿನ ತಿಥಿ ಆಚರಣೆ ಅವಶ್ಯಕ." ಎಂದು ವಾದಿಸುತ್ತಾರೆ.        " ಸಮಾಜದಲ್ಲಿ ಬದುಕಿರುವಾಗ ಕೆಲವು ಆಚರಣೆಗಳು ಅನಿವಾರ್ಯ. ಎಲ್ಲರು ತಿಥಿ ಆಚರಣೆಯನ್ನು ಮಾಡುವಾಗ ನಾವೊಬ್ಬರು ಮಾಡುವುದಿಲ್ಲ ಎನ್ನಲು ಸಾಧ್ಯವೇ? ಆದ್ದರಿಂದ ನಾವು ಮಾಡುತ್ತವೆ." ಎಂದು ಕೆಲವರು ಸಮಜಾಯಿಷಿ ಕೊಡುತ್ತಾರೆ.   ಹೀಗೆ ಹಲವಾರು  ಅಭಿಪ್ರಾಯಗಳು ಇವೆ.

                              ಇನ್ನು ವಾರ್ಷಿಕವಾಗಿ ಮಾಡುವ ತಿಥಿಯ ಸಂದರ್ಭದಲ್ಲಿ ಹಲವಾರು ರೀತಿಯ  ಆಚಾರಗಳು ಇವೆ.  ಕೆಲವಕ್ಕೆ ಅರ್ಥವಿಲ್ಲ, ಕೆಲವು ಅತಿರೇಕ ಮತ್ತೆ ಕೆಲವು  ಸಂಬಂಧವಿಲ್ಲದ ರೀತಿಯಲ್ಲಿ ಇರುತ್ತವೆ.  ಇದಕ್ಕೆ ಯಾವುದೇ ರೀತಿಯ ವಿವರಣೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ  ಆದರೂ  ನಮ್ಮ ಹಿರಿಯರು ಮಾಡಿದರು ಎನ್ನುವ ಒಂದೇ ಕಾರಣಕ್ಕೆ ಇವರು ಮಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಮಾಡುವ ಕರ್ಮದಲ್ಲಿ ವಿಶ್ವಾಸ ಮತ್ತು  ಶ್ರದ್ಧೆಗಿಂತ ಭಯ ಜಾಸ್ತಿ ಇರುತ್ತದೆ.  ನಾನು ತಿಥಿ ಮಾಡದಿದ್ದರೆ ಏನೋ ಆಗಿಬಿಡಬಹುದೆಂಬ ಭಯ ಇವರನ್ನು ಕಾಡುತ್ತದೆ. ಒಂದು ಚಿಕ್ಕ ವ್ಯತ್ಯಾಸವನ್ನು ಇವರು ಸಹಿಸುವುದಿಲ್ಲ ಅಥವಾ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಇಂತಹ  ಕರ್ಮಗಳಲ್ಲಿ ಶ್ರದ್ಧೆಗಿಂತ ಹೆಚ್ಚು ಅಂಧ ವಿಶ್ವಾಸ ಜಾಸ್ತಿಯಾಗಿರುತ್ತದೆ. ಇಂತಹ ಹಿರಿಯರ ತಿಥಿಯ ದಿನವನ್ನು ಕೆಲವು ಸಂಪ್ರದಾಯದಲ್ಲಿ ಹಬ್ಬವನ್ನಾಗಿ ಆಚರಿಸುವುದಿಲ್ಲ  . ಉದಾಹರಣೆಗೆ,  ಅಂದು ಮನೆಯ ಮುಂದೆ ರಂಗೋಲಿ ಇಡದೆ, ಮನೆಯ ಹೆಂಗಸರು ಕುಂಕುಮ ಇಡದೆ ಶ್ರಾದ್ಧ  ಕಾರ್ಯ ಮುಗಿಯುವವರೆಗೂ ಕಾಯುತ್ತಾರೆ. ದೇವರಪೂಜ ಸಮಯದಲ್ಲಿ ಘಂಟಾನಾದವನ್ನು ಕೂಡ ಮಾಡುವುದಿಲ್ಲ.       ಇಂತಹ ಕ್ರಿಯೆಗಳಿಗೆ ಕೊಡುವ ಕಾರಣಗಳು ಅಸಂಬದ್ದವಾಗಿರುತ್ತವೆ.    ಇದು ಏನೇ ಇದ್ದರೂ ಹಿರಿಯರ ನೆನಪಿನಲ್ಲಿ ಮಾಡುವ ತಿಥಿ ಅಥವಾ ಶ್ರಾದ್ಧ  ಮಾತ್ರ ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ.

                            ಬದುಕಿರುವಾಗ ನಮ್ಮ ಹಿರಿಯರಿಗೆ ತೋರಿಸುವ ಗೌರವ, ನೀಡುವ ಸಹಕಾರ, ಮಾಡುವ ಉಪಚಾರ ಮತ್ತು ನಿರ್ವಹಿಸುವ ಕರ್ತವ್ಯ ಇವೆಲ್ಲವೂ ಬೌತಿಕ ಕ್ರಿಯೆಗಳು. ಈ ಕರ್ತವ್ಯದಿಂದ ನಮ್ಮ ಗುಣಗಳನ್ನು ದೃಢ ಗೊಳಿಸಿಕೊಂಡಾಗ  ವ್ಯಕ್ತಿಗತವಾಗಿ ನಮಗೆ ಸಂತೋಷ,ಸಂತೃಪ್ತಿ ಮತ್ತು  ಸಮಾಧಾನ ಸಿಗುತ್ತದೆ. ಆದರೆ, ಆ ವ್ಯಕ್ತಿ ಮೃತರಾದಾಗ ನಮ್ಮ ದುಃಖವನ್ನು ಸಮಾಧಾನ ಮಾಡಿಕೊಳ್ಳಲು, ಮೃತವ್ಯಕ್ತಿಯ ಸ್ಮರಣೆಯಲ್ಲಿ ಕೃತಜ್ಞತೆಯಿಂದ ಸ್ಮರಿಸುವ ಸಂಸ್ಕಾರಕ್ಕೆ ಶ್ರಾದ್ಧ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಮೃತ ವ್ಯಕ್ತಿಯ ಇಷ್ಟ  ಬಂಧು ಮಿತ್ರರನ್ನು , ಆಹ್ವಾನಿಸಿ ಭೋಜನ ಮತ್ತು ಯಥಾನುಶಕ್ತಿ ದಾನವನ್ನು ಮಾಡುತ್ತಾರೆ. ಈ ಸಂಸ್ಕಾರ ಮಾಡಲು ಸತ್ವಶುದ್ದಿ ಮತ್ತು ಚಿತ್ತಶುದ್ದಿ ಎರಡು ಬೇಕಾಗುತ್ತದೆ. ಈ ಎರಡು ಶುದ್ದಿ ಲಭ್ಯವಾಗಲು ರಜಸ್ತಮೂ ಗುಣದಿಂದ ಸಾತ್ವಿಕ ಗುಣದತ್ತ ಮನಸ್ಸು ಕೊಡಬೇಕಾಗುತ್ತದೆ. ಆಗ ಪ್ರೀತಿ,ಪ್ರೇಮ,ಸತ್ಯ, ಗೌರವ, ಕೃತಜ್ಞತಾ ಭಾವಗಳು ಹತ್ತಿರ ಸುಳಿಯುತ್ತವೆ. ಆಗ ಮನಸ್ಸು ಪುಟವಾಗುತ್ತದೆ. ಪುಟವಾದ ಮನಸ್ಸು ವಿಶಾಲವಾಗಿ ಜಗತ್ತನ್ನು ನೋಡುತ್ತದೆ.

                            "ಶ್ರದ್ಧಯಾ ಇದಂ ಕರ್ಮ ಅನುಷ್ಟೀಯತೆ ಇತಿ ಶ್ರಾದ್ಧಂ."ಅತ್ಯಂತ ಶ್ರದ್ಧೆಯಿಂದ ಆಚರಿಸುವ ಶ್ರಾದ್ಧ ಕರ್ಮವನ್ನು   ಕರ್ತವ್ಯ ಎಂದು ಹೇಳಲಾಗಿದೆ. ನಮ್ಮ ಜನ್ಮಕ್ಕೆ ಕಾರಣರಾದ, ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ನಮ್ಮ ಪುರೋಭಿವೃದ್ದಿಗೆ ಕಾರಣಕರ್ತರಾದ ನಮ್ಮ ತಂದೆ ತಾಯಿ,ಹಿರಿಯರು, ಗುರುಗಳು,ಕುಟುಂಬದ ಸದಸ್ಯರು, ಬಂಧು ಬಾಂಧವರು ಮತ್ತು ಸ್ನೇಹಿತರು ಇವರುಗಳನ್ನು ಮರೆಯದೆ ಕೃತಜ್ಞತೆಯಿಂದ ನೆನೆಯುತ್ತ ಪ್ರತಿವರ್ಷವು ಆಚರಿಸುವ ಸಾಂಕೇತಿಕ ಕರ್ಮವೆ ಶ್ರಾದ್ಧ  ಅಥವಾ ತಿಥಿ.  ಶ್ರದ್ಧೆ ಮತ್ತು ಅಚಲ ವಿಶ್ವಾಸ ಇಂತಹ  ಕರ್ಮಕ್ಕೆ ಬೇಕಾದ ಎರಡು ಮುಖ್ಯ ಅಂಶಗಳು. ಈ ಎರಡು ಭಾವನೆ  ಕ್ರಿಯೆಯಲ್ಲಿರಬೇಕಾಗುತ್ತದೆ. ನಮ್ಮ ಅಂತಃಕರಣ ಭಾವನೆಗಳಾದ ಭಕ್ತಿ, ಪ್ರೀತಿ, ಗೌರವ ಮತ್ತು ಕೃತಜ್ಞತೆಗಳನ್ನು  ವ್ಯಕ್ತ ಪಡಿಸುವ ಕ್ರಿಯೆಗಳು ಧನ್ಯತಾ ಭಾವದಿಂದ  ನಡೆಸಿದರೆ ಹೆಚ್ಚು ಪ್ರಯೋಜನ. ಈ ಭಾವನೆಗಳು ಹುಟ್ಟಬೇಕಾದರೆ ನಾವು ಮಾಡುವ ಪ್ರತಿ ಕಾರ್ಯಗಳ ಜೊತೆಗೆ ಹೇಳುವ ಮಾತುಗಳು, ಮಂತ್ರಗಳು, ನಡವಳಿಕೆಗಳು, ಆಚಾರಗಳು ಇತ್ಯಾದಿಗಳ ಅರ್ಥ ತಿಳಿದು ಮಾಡಿದರೆ ಹೆಚ್ಚು ಅರ್ಥಪೂರ್ಣವಾಗಿ ಇರುತ್ತದೆ. ಆಗ ನಮ್ಮ ಭಾವನೆಗಳು ಇನ್ನಷ್ಟು ದೃಢಗೊಳ್ಳುತ್ತವೆ. ಧನ್ಯತೆಯು ಪವಿತ್ರ ಭಾವನೆಗಳಾಗಿ ಕರ್ತೃವಿಗೆ ಅಪೂರ್ವವಾದ ದೈವಿಕಾನಂದ ಸಿಗುತ್ತದೆ.

                            "A well performed ritual is work of art by which even a sceptical spectator will get a kick. it will give a enduring and lingering satisfaction to  both"---Aldous Huxley.      

                             ನಾವು ಮಾಡುವ ಕರ್ಮಗಳ ಅರ್ಥ ತಿಳಿದು ಮಾಡೋಣ. ಹಿರಿಯರು ಕಂಡುಕೊಂಡ ಆದರ್ಶ ಮತ್ತು ಇರಿಸಿದ್ದ ವಿಶ್ವಾಸ ಇವೆರಡನ್ನೂ ಕಾಪಾಡುವ ಸಂಕಲ್ಪ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಇಂತಹ ಉದಾತ್ತ ವಿಚಾರಗಳನ್ನು ಉಳಿಸಿ ಬೆಳೆಸ ಬೇಕಾದ ಗುರುತರವಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ಇದು ನಮ್ಮ ಮನೆಯಿಂದಲೇ ಪ್ರಾರಂಭಗೊಳ್ಳಲಿ.

                               ಸಕಲ ಓದುಗರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

                            

                           6 comments:

 1. ಶ್ರಾದ್ಧದ ವಿಚಾರದಲ್ಲಿ ಅಂಧಾನುಕರಣೆಯೇ ಹೆಚ್ಚು. ಶ್ರಾದ್ಧಕ್ಕೆ ತಿಥಿ,ವೈದೀಕ, ಎಂದೆಲ್ಲಾ ಅದು ಹೇಗೆ ಅರ್ಥೈಸಿದರೋ ಆ ದೇವರೇ ಬಲ್ಲ. ಸತ್ತಾಗ ಪಂಚಭೂತಗಳಲ್ಲಿ ಲೀನ ಮಾಡುವುದಕ್ಕೆ ಸುಡುವುದೇ ಹೆಚ್ಚು ಸೂಕ್ತ. ಕೆಲವರು ಭೂಮಿಯಲ್ಲಿ ಹೂಳುತ್ತಾರೆ. ಹೂಳುವುದರಿಂದ ಮೃತಶರೀರವು ಪಂಚಭೂತಗಳಲ್ಲಿ ಲೀನವಾಗಲು ಬಹುಕಾಲ ಹಿಡಿಯಬಹುದು. ಸತ್ತಾಗ ಮಾಡಬೇಕಾದ್ದು ಇಷ್ಟೆ. ಮೃತಶರೀರವನ್ನು ಸರಿಯಾಗಿ ಅಂತ್ಯ ಸಂಸ್ಕಾರ ಮಾಡದಿದ್ದರೆ ಮೃತಶರೀರವನ್ನು ನಾಯಿ ನರಿ ಕಿತ್ತು ತಿನ್ನುವ ದೃಶ್ಯವನ್ನು ಕೊನೆಯ ಕ್ಷಣದವರೆಗೂ ಜೊತೆಯಲ್ಲಿರುವ ಮಕ್ಕಳಿಗೆ ನೋಡಲು ಸಾಧ್ಯವಿಲ್ಲ. ಮೃತದೇಹವು ಅವರ ಕಣ್ಣೆದುರಿಗೆ ಉರಿದು ಬಸ್ಮ ವಾದರೆ ಸತ್ತ ವ್ಯಕ್ತಿಯ ಅಂತಿಮ ಕರ್ತವ್ಯ ನಿರ್ವಹಿಸಿದ ಸಮಾಧಾನ ಮಕ್ಕಳಿಗಿರುತ್ತದೆ. ಅಷ್ಟೆ. ಮುಂದಿನ ಕರ್ಮಗಳೆಲ್ಲಾ ಹಿಂದಿನವರು ಮಾಡಿದರು. ಇಂದಿನವರು ಮಾಡುತ್ತಿದ್ದಾರೆ. ಇದನ್ನು ನೋಡಿ ಮುಂದಿನವರೂ ಮಾಡುತ್ತಾರೆ. ಸತ್ತವರ ಸ್ಮರಣೆಗಾಗಿ ನಾಲ್ಕು ಜನರಿಗೆ ಊಟ ಹಾಕಬಹುದಷ್ಟೆ. ಉಳಿದದ್ದೆಲ್ಲಾ ಇವತ್ತಿನ ಹುಡುಗರ ಮಾತಿನಲ್ಲಿ ಹೇಳಬೇಕೆಂದರೆ ಬರೀ ವೋಳು.

  ReplyDelete
 2. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

  ಶ್ರಾದ್ಧ ಕರ್ಮ ಅಥವಾ ತಿಥಿ ಎಂಬ ಆಚರಣೆಯ ಬಗ್ಗೆ ತಿಳಿಸಿದ್ದಕಾಗಿ ದನ್ಯವಾದಗಳು.

  ReplyDelete
 3. ನಾವು ಮಾಡುವ ಕೆಲಸ ನಮಗೆ ತೃಪ್ತಿ ತರಬೇಕು. ನಮ್ಮ ಪೂರ್ವಜರು, ಋಷಿ ಮುನಿಗಳು ಬರೆದ, ತಿಳಿಸಿದ ಮಾತುಗಳು ಪುಸ್ತಕದ ಬದನೇಕಾಯಿ ಅಂತ ಅವಹೇಳನ ಮಾಡಿದರು ಬರೆಯುವವರು, ಹೇಳುವರು ಸುಮ್ಮನೆ ಬುರುಡೆ ಹೊಡೆಯಲಿಕ್ಕೆ ಸಾಧ್ಯವಿಲ್ಲ..ತೊಂದರೆ ಏನೆಂದರೆ ನಮಗೆ ಅದರ ಅರ್ಥ-ವೈಶಾಲ್ಯತೆ ತಿಳಿಯುವ ಆಸಕ್ತಿಯಾಗಲಿ ಇಚ್ಹೆಯಗಲಿ ಕಡಿಮೆ ಪ್ರಮಾಣದಲ್ಲಿರುವುದು. ಹಾಗು ಆ ವಿಚಾರಗಳನ್ನು ತಿಳಿಹೇಳುವ ಸಾಮಗ್ರಿಗಳಾಗಲಿ, ವೇದಿಕೆಯಾಗಲಿ ಸೂಕ್ತವಾಗಿ ಸರಿಯಾದ ಪ್ರಮಾಣದಲ್ಲಿ ನಿರ್ಮಾಣವಾಗದೆ ಇರುವುದು. ನಮ್ಮ ಮಕ್ಕಳು ಏನಾದರು ಆಚರ-ವಿಚಾರಗಳ ಬಗ್ಗೆ ಕೇಳಿದರೆ..ನಾವು ಹೇಳುವ ಮೊದಲ ಮಾತು "ಏಯ್ ತಲೆಹರಟೆ...ಸುಮ್ಮನೆ ಓದ್ಕೋ ಹೋಗು, ಹೊರಗೆ ಆಟ ಆಡ್ಕ ಹೋಗು ಅಂತ..ಯಾಕೆಂದರೆ ನಮಗೆ ಅರ್ಥ ತಿಳಿದಿರುವುದಿಲ್ಲ. ನಮ್ಮ ಅಪ್ಪ-ತಾತಂದಿರು ಹೇಳಿರುವ ಎಷ್ಟೋ ವಿಷಯಗಳು ನಮ್ಮ ಮುಂದಿನ ತಲೆಮಾರಿಗೆ ತಲುಪುವುದಿಲ್ಲ...ಇದೆ ಅಲ್ಲವೇ ಸಾಮಾನ್ಯ ಸಮಸ್ಯೆ

  ReplyDelete
  Replies
  1. ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು
   ಪ್ರಕಾಶ್

   Delete
  2. ಶ್ರಾದ್ಧದ ನಿಜವಾದ ಅರ್ಥ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

   http://vedasudhe.blogspot.com/2012/01/blog-post_3399.html

   Delete
 4. ವಿಚಾರಪೂರಿತ ಬರಹ. ಧನ್ಯವಾದಗಳು. ಈಗ ಆಚರಣೆಯಲ್ಲಿರುವ ಪದ್ಧತಿಯಂತೆ ಮುಂದೆ ನನ್ನ ಶ್ರಾದ್ಧ ಮಾಡಬಾರದೆಂದು ನನ್ನ ಬಂಧುಗಳಿಗೆ ತಿಳಿಸಿರುವೆ. ನನ್ನ ಈ ಬರಹ http://kavimana.blogspot.com/2011/10/blog-post_841.html ಅನ್ನು ಸಮಯವಿದ್ದಾಗ ಓದಬಹುದು.

  ReplyDelete