March 29, 2012

ಸ್ಮರಣೆ

                               ಸ್ಮರಣೆ 

                 ಸ್ಮರಿಸು ...........
                 ಆ ದಿವ್ಯ ಚೈತನ್ಯದ  ಶಕ್ತಿಯ .....ಒಮ್ಮೆ ಸ್ಮರಿಸು.

                ಭೂಮಿಗಿಳಿದ ಆ ದಿನದಿಂದ ಈ  ತನಕ
                ಸಲಹುತಿರುವ ಆ ದಿವ್ಯ ಚೇತನವ
                ದೃಡದಲಿ ನಂಬಿ  .......ಒಮ್ಮೆ ಸ್ಮರಿಸು.

                ಅಡಗಿರುವ ಸೃಜನಶೀಲ ನವೀನ ಚಿಂತನೆಯ ಹೊರಗೆಳೆದು
                ನಿತ್ಯಕರ್ಮದಲಿ  ವಿವೇಕ ಬೆರೆಸು.
                ಕಷ್ಟ ಇದೆನ್ನುವ  ನೂರು ಕಾರಣವ ಗಾಳಿಗೆ ತೂರಿ
                ಸಾಧ್ಯಮಾಡುವ  ಸಾವಿರಾರು ಅವಕಾಶಗಳ ಹೆಕ್ಕಿ ತೆಗಿ,
                ಪ್ರೀತಿ ಪ್ರೇಮ, ಶ್ರದ್ಧೆ ವಿಶ್ವಾಸದಲಿ ಈ  ದಿನದ
                ಬದುಕಿಗೆ ವಿದಾಯ ಹೇಳಿ ಶುಭ್ರ  ನಾಳೆಯ
                ಎದುರುಗೊಳ್ಳುವ ಮುನ್ನ........ ಒಮ್ಮೆ ಸ್ಮರಿಸು.

                ನಿನ್ನೆಯ ಕಹಿ ಸಿಹಿ ನೆನಪು ನಿನ್ನೆಗೆ  ಕೊನೆ.
                ನಾಳೆ,  ಅರಿವಿರದ ರಹಸ್ಯದ  ಗಂಟು,
                ಇಂದು ಮಾತ್ರ ನಿನ್ನ ಕೈಯೊಳು ಸಿದ್ದವಿಹುದು
                ನಿನ್ನೊಳಗಿನ ಶಕ್ತಿಯ ನಂಬು, ಶಂಕೆಯ ಜಾಡಿಸು
                ಬಾಳು ರಹಸ್ಯವಲ್ಲ ತೆರೆದ ಪುಸ್ತಕ
                ಸಾಲುಗಳು ಕಠಿಣವಿರೆ ಅರ್ಥ ತಿಳಿಯಲು ......ಒಮ್ಮೆ ಸ್ಮರಿಸು.

                ಉದಯವಾದರೆ  ರವಿ, ನಿನ್ನಾಯುಷ್ಯದ ಒಂದು ದಿನವ  ಕಳೆವ
                ಹೋದ ಮಾನ , ಬಿಟ್ಟ ಬಾಣ,ಕೊಟ್ಟ ಮಾತು
                ಹಿಂದೆ ಪಡೆವ   ವ್ಯರ್ಥಸಾಹಸಕೆ ಮನಸು ಬೇಡ.
                ಇಂದಿನಾ ದಿನದ ಬಾಳಿನಲಿ ಅಂಟು ಇರದ ಕರ್ಮದಲಿ
                ಧನ್ಯತೆಯ ಸವಿ ಬೆರೆಸಿ ಸಂತೃಪ್ತಿಯ ಭಾವದಲಿ
                ನಿದ್ದೆಗೆ ಜಾರುವ ಮುನ್ನ ..........ಒಮ್ಮೆ .ಸ್ಮರಿಸು.

                ಹೆಚ್  ಏನ್  ಪ್ರಕಾಶ್
                29 03 2012

2 comments:

  1. ಖಂಡಿತಾ ಸ್ಮರಿಸಬೇಕು...
    ಅವನಿರುವ.., ನೆನೆದಂಗೆ ಬರುವ:

    ವಿಧಿತನ್ನಾಟ ತೋರಿದಾಗ, ನಿನ್ನಾಟ ನೆಡೆಯದಲ್ಲಿ..
    ಚಕ್ಷು ಇಳಿಸು ಕೊಂಚ, ಕಣ್ಮುಚ್ಚಿ ನೆನೆ ಕ್ಷಣಾರ್ಧ...,
    ತೋರುವನು ಅವನೇ, ನಿನ್ನ ದಾರಿ,
    ದೆಸೆಯ ಬದಲಿಸೋ, ಪಕ್ವತೆಯ ಮೀರಿ..,
    ನಿನ್ನ ಹೆಜ್ಜೆಗುರುತು, ಅವನ ದಾರಿ ಸೇರಿ ..!
    ನೀ ಅರಿಯೆ, ಅವನಿರುವ.., ನೆನೆದಂಗೆ ಬರುವ.

    ನಿನ್ನ ಬಿಂಬಕೆ ಒಮ್ಮೆ ನೋಟವ ಬೆಳೆಸು
    ಪೂರ್ವದ ಸೋಲು, ನೋವುಗಳ ನಗುತಲಿ ಅಳಿಸು ..,
    ಹಣೆಬರಹವ ತಿರುಚುವ ಸ್ತೈರ್ಯವ ಉಳಿಸು
    ನಿನ್ನ ಕನಸಿನ ಬಣ್ಣವ ನಿನ್ನ ಕಲೆಯಂಗಳಕೆ ಹಚ್ಚು
    ಕತ್ತಲ ಗವಿಯಲು ಸಿಗುವುದು ಗೆಲುವಿನ ಕಿಚ್ಚು
    ನೀ ಅರಿಯೆ, ಅವನಿರುವ.., ನೆನೆದಂಗೆ ಬರುವ.

    ಅಳಿವುದೆಲ್ಲರ ಜೀವದ ಕರ್ಮ ಶೇಷ
    ಉಳಿವುದೊಂದೇ ನಿನ್ನ ಸ್ಫೂರ್ತಿ ವಿಶೇಷ
    ಕಾರ್ಪಣ್ಯದ ಬೇಲಿಯಿದು ನಿನಗೆಲ್ಲವೆಂದು
    ಸಾಗು ನೀ ಧೈರ್ಯದಿ ಸುಲಭವೆಂದು
    ಜಗದೆಲ್ಲ ಸುಖ ನಿನಗೆ ಅವ ತರುವ
    ನೀ ಅರಿಯೆ, ಅವನಿರುವ.., ನೆನೆದಂಗೆ ಬರುವ.

    ReplyDelete
  2. ವೇದಸುಧೆ ಬ್ಲಾಗಿನಲ್ಲಿಯೇ ಓದಿದೆ. ಸ್ಮರಿಸಬೇಕಾದ ಸಾಲುಗಳಿವು.
    -ನಾಗರಾಜ್.

    ReplyDelete