March 8, 2012

ಪ್ರಾರ್ಥನೆ

ಪ್ರಾರ್ಥನೆ





                    ಈ ಜಗತ್ತಿನಲ್ಲಿ ಕಲ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಿನ  ಸಂಗತಿಗಳು ಪ್ರಾರ್ಥನೆಯಿಂದ ಸಾದ್ಯವಾಗುತ್ತದೆ."ನಮ್ಮ  ಯಾವ  ಪ್ರಾರ್ಥನೆಯು  ವ್ಯರ್ಥವಾಗುವುದಿಲ್ಲ,  ಅದು  ಫಲ  ನೀಡೆ  ನೀಡುತ್ತದೆ" ಎಂಬುದು  ದಾರ್ಶನಿಕರನೇಕರ  ಆಶ್ವಾಸನೆ . ಜಾನಪದದಲ್ಲಿ ಒಂದು ಹಾಡು ಹೀಗಿದೆ."  ನರ ಮಾನವ ಬೇಡಿದ್ದೆಲ್ಲ ಕೊಡೋದಿಲ್ಲ, ಆ ಮಹಾದೇವ ಕೊಡಬೇಕು ಮನಸ್ಸು ತಣಿಯಬೇಕು||   ಬೇಡೋದೇ  ಆದರೆ ಮಹಾದೇವನ್ನ ಬೇಡಿಕೊಂಡು ಪಡಕೊಬೇಕು."          " ಕೇಳಿ, ಕೊಡಲ್ಪಡುತ್ತದೆ. ಹುಡುಕಿ, ಸಿಗಲ್ಪಡುತ್ತದೆ. ಕದ ತಟ್ಟಿ, ತೆರೆದುಕೊಳ್ಳುತ್ತದೆ." ಇದು ಏಸು ಕ್ರಿಸ್ತನ ಆಶ್ವಾಸನೆ.
                     ಇಂದು ಬೇಡಿಕೆಯು ವ್ಯಾಪಾರೀ ದೃಷ್ಟಿಯಲ್ಲಿ ನಡೆಯುತ್ತಿದೆ.  ನನಗೆ ಇದನ್ನು ಕೊಟ್ಟರೆ ನಾನು ನಿನಗೆ ಈ ಸೇವೆ ಮಾಡಿಸುತ್ತೇನೆ, ಇಂತಹುದನ್ನು ಕೊಡುತ್ತೇನೆ ಎಂಬೆಲ್ಲ ಹರಕೆ ಬೇರೆ!    ಭಗವಂತನು ನಾವು  ಕೇಳಿದ್ದೆಲ್ಲವನ್ನು ನೀಡುವ ಯಂತ್ರವೆಂದು ಭಾವಿಸಿದಂತಿದೆ. ಲೌಕಿಕ ಲಾಭ, ದೈಹಿಕ ಶಕ್ತಿ, ಅಭಿಲಾಷೆಗಳ ಪೂರೈಕೆ ಇತ್ಯಾದಿಗಳು ದಿನನಿತ್ಯದ ಬೇಡಿಕೆಗಳು.      ಆದರೆ, ಅಲ್ಪವಾದುದನ್ನೇ ಬೇಡಿ, ಅಷ್ಟು ಬೇಡಿದರೂ  ಇಷ್ಟೇ ಸಿಕ್ಕಿದ್ದು. ಅವನಿಗಾದರೆ ಅಷ್ಟು ಕೊಟ್ಟ,  ನನಗಾದರೆ ಇಷ್ಟೇ  ಎಂದು ಪರಿತಾಪ.  ಅದು ಕೊಡು, ಇದು ಕೊಡು ಎಂಬ ನಮ್ಮ ಬೇಡಿಕೆಯ ಪಟ್ಟಿ ಮುಗಿಯುವುದೇ ಇಲ್ಲ. ಎಷ್ಟು ಕೊಟ್ಟರು ಸಾಲದು. ಇಷ್ಟಾದರೂ,  ನನಗೇನು ಸರಿಯಾಗಿ ಕೊಟ್ಟಿಲ್ಲವೆಂಬ  ಆಪಾದನೆ ಬೇರೆ!  ನಾವು ಎಂದಿಗೂ ನಮ್ಮ ಅರ್ಹತೆಯ ಬಗ್ಗೆ ಚಿಂತಿಸುವುದೇ ಇಲ್ಲ.  ಬೇಡುವವನಿಗೆ ಬೇಡಲು ಕನಿಷ್ಠ ಅರ್ಹತೆಯಾದರೂ  ಇರಬೇಕೆಂಬ ವಿಚಾರ ತಿಳಿದೇ ಇಲ್ಲ.
                    ಬೇಡುವುದೇ ಒಂದು ಕೆಲಸವಾದರೆ ಪ್ರಯತ್ನಕ್ಕೆ ಜಾಗ ಎಲ್ಲಿ? ಬೇಡಿಕೆಯ ಜೊತೆ ಜೊತೆಗೆ ನಿರಂತರ ಪ್ರಯತ್ನವು ಇದ್ದರೆ ಪೂರ್ಣ ಫಲಕಾರಿಯಾಗಿ ಈಡೇರುತ್ತದೆ.ನಾವು ಬೇಡುವುದೇ ಆದರೆ ಅತಿ ಉನ್ನತವಾದುದನ್ನೇ ಬೇಡಬಹುದು, ಹೌದು, ಈ ಜಗತ್ತಿನಲ್ಲಿ ಯಾವ ಪ್ರಾರ್ಥನೆಯು ನಿಷ್ಪ್ರಯೋಜಕವಾಗಿಲ್ಲ.  ಅದು ಫಲ ನೀಡೆ ನೀಡುತ್ತದೆ. ಆದರೆ ಬೇಡುವವನು ನಾನೇನು ಬೇಡಬೇಕೆಂದು, ಬೇಡುವ ಮುಂಚೆ ಸರಿಯಾದ ನಿರ್ಧಾರ ಮಾಡಬೇಕಾಗುತ್ತದೆ.  ಇಲ್ಲವಾದಲ್ಲಿ,   ಬೇಡಿದ್ದು   ದೊರೆತಾಗ ಅದರಿಂದ ಆಗಬಹುದಾದ ಪರಿಣಾಮದ ಬಗ್ಗೆ ನಮಗೆ  ಯಾವ ನಿಯಂತ್ರಣವು ಇರದು, ಒಮ್ಮೆ ಬಿಟ್ಟ ಬಾಣದ ಹಾಗೆ.
                      ಶ್ರೀ ರಾಮಕೃಷ್ಣರು ಹೇಳುತ್ತಾರೆ " ಪ್ರಾರ್ಥನೆ  ತೀವ್ರತರವಾದರೆ ತಪಸ್ಸು. ತಪಸ್ಸು ಎಲ್ಲರಿಗು ಸಾಧ್ಯವಾಗದು. ಪ್ರಾರ್ಥನೆಯೆಂದರೆ  ಪ್ರೀತಿಯಿಂದ ಹೃದಯದ ತುಡಿತವನ್ನು ಬಯಲುಗೊಳಿಸುವುದು. ನಿಜವಾಗಿಯೂ ಅದು ಭಗವಂತನೊಡನೆ ನಡೆಸುವ ಆಪ್ತ ಸಂವಾದ. ಇದು ವಾದವಾಗಬಾರದು, ವಿವಾದವಾಗಬಾರದು, ಸಂವಾದವಾಗಬೇಕು. ಆಗಲೇ ಭಗವಂತನ ಆಶೀರ್ವಾದ." 

ಹೆಚ್ ಏನ್ ಪ್ರಕಾಶ್ 


No comments:

Post a Comment