December 6, 2011

ಸಾವು.............ಒಂದಷ್ಟು ಹರಟೆ........3

                 
  ಸಾವು.............ಒಂದಷ್ಟು ಹರಟೆ........3



                        ಮೊನ್ನೆ ನಮ್ಮ ಕಾಲೇಜಿನ ವಿಧ್ಯಾರ್ಥಿ ಸತ್ತನೆಂಬ ಸುದ್ದಿ ಬಂತು. 2  ನೆ ವರ್ಷದ ಎಂಜಿನೀರಿಂಗ್ ವ್ಯಾಸಂಗ ಮಾಡುತ್ತಿದ್ದ ಈ ಹುಡುಗ ತನ್ನ ಗೆಳೆಯ ಗೆಳತಿಯರ ಜೊತೆಯಲ್ಲಿ ನಿಸರ್ಗ ಧಾಮಕ್ಕೆ ಪ್ರಕೃತಿ ಸೌಂದರ್ಯ ಸವಿದು ಭಾನುವಾರವನ್ನು ಸಾರ್ಥಕ ಪ್ರವಾಸವನ್ನಾಗಿ ಮಾಡಿ ಬರಲೆಂದು ಹೋಗಿದ್ದ. ನಿಸರ್ಗವನ್ನು ಸವಿಯುವಾಗ ನೀರಿನಲ್ಲಿ ಅಕಸ್ಮಾತ್ತಾಗಿ ಬಿದ್ದು ಹೃದಯಾಘಾತದಿಂದ ಅಸು ನೀಗಿದ. 19 -20 ರ ನಡುವಿನ ಪ್ರಾಯದ ಹುಡುಗ ಅನಿರೀಕ್ಷಿತವಾಗಿ ಎಲ್ಲರಿಂದ ಕಾಣದ ಲೋಕಕ್ಕೆ ಪ್ರಯಾಣ ಬೆಳೆಸಿದ ಎಂದರೆ ಯಾರಿಗೆ ಆದರು ಆಘಾತವೇ! ಚುರುಕು ಬುದ್ದಿಯ, ಬುದ್ದಿವಂತ,ಸ್ನೇಹಮಯಿಯಾಗಿದ್ದನೆಂದು ಅವನನ್ನು ಸಮೀಪದಿಂದ ಬಲ್ಲ ಅವನ ಸ್ನೇಹಿತ ಹೇಳಿಕೊಂಡು ದುಃಖಪಡುತ್ತಿದ್ದ. ಈ ಹುಡುಗನ ಸ್ನೇಹಿತನಿಗೆ ಇಷ್ಟೊಂದು ದುಃಖ ಆಗಿರಬೇಕಾದರೆ ಈ ಹುಡುಗನ ಹೆತ್ತವರ ದುಃಖ ಊಹಿಸಲು ಅಸಾಧ್ಯ.
                        ಇಂತಹ ಒಂದು ಸಂದರ್ಭದಲ್ಲಿ ಅಲ್ಲಿ ನೆರೆದವರ ಮಾತು ಬೇರೆಯಾಗಿಯೇ ಸಾಗಿತ್ತು. " ದೇವರು ಅದೆಂತ ಕಟುಕ ರೀ, ಇಷ್ಟು ಚೆಂದದ ಹುಡುಗನೇ ಬೇಕಿತ್ತಾ? ಅದೆಷ್ಟು ಜನ ಸಾಯಲು ಹಾತೊರೆಯುತ್ತಿರುವಾಗ ಆ ಕಾಯಿಲೆಯವರನ್ನು, ಮುದುಕರನ್ನು ಬಿಟ್ಟು ಈ ಮುದ್ದಾದ ಹುಡುಗನನ್ನು ಕರೆದುಕೊಂಡು ಬಿಟ್ಟನಲ್ಲ?" ಎಂದು ಸಂತಾಪ ವ್ಯಕ್ತ ಮಾಡಿದರೆ, ಮತ್ತೊಬ್ಬರು " ಈ ಹುಡುಗರಿಗೆ ಬುದ್ದಿ ಇದೆಯೇ? ಅಲ್ಲಾರಿ, ನೀರಿನ ಹತ್ತಿರ ಯಾಕೆ ಹೋಗಬೇಕಾಗಿತ್ತು? ಹುಡುಗಾಟದ ವಯಸ್ಸು ನೋಡಿ ಹೀಗೆಲ್ಲ ಆಡಿಸುತ್ತೆ." "ಇವರು ಟೂರ್ ಹೋಗಲಿಲ್ಲಂತ ಯಾರು ಅಳುತ್ತಿದ್ರು ಹೇಳಿ, ಮಕ್ಕಳು ಏನೋ ಮಾಡಿಕೊಂಡು ಬಿಡ್ತಾರೆ. ಆದರೆ, ಅನುಭವಿಸೋರಿಗೆ ತಾನೇ ತಿಳಿಯೋದು" ಎಂದರು ಮಗದೊಬ್ಬರು. " ಅದೆಷ್ಟು ಕಷ್ಟ ಬಿದ್ದು ಓದಿಸ್ತಾ ಇದ್ರು, ನೋಡಿ ಹೀಗೆ ಆಗೋಯ್ತು". ಎಂದರು ಇನ್ನೊಬ್ಬರು. ಹೀಗೆ ಸಾಗಿತ್ತು ಮಾತಿನ ಲಹರಿ.
                        ಜನರ ಮಾತಿಗೆ ಕೊನೆ ಮೊದಲಿಲ್ಲದೆ  ಹಿಡಿತವಿರದೆ ಸಾಗಿತ್ತು. ಇದನ್ನೆಲ್ಲಾ ದೂರದಲ್ಲಿ ನಿಂತು ಗಮನಿಸುವಾಗ ನನ್ನ ವಿಚಾರ ಲಹರಿ ಓಡಿದ್ದೆ ಬೇರೆ ದಿಕ್ಕಿನಲ್ಲಿ. ಸಾವು ಯಾರನ್ನು ಹೇಳಿ ಕೇಳಿ ಬರುತ್ತೆ? ಯಾವಾಗ ಬರುತ್ತೆ ಎಂಬುದು ಯಾರಿಗೆ ತಾನೆ ಗೊತ್ತು? ಹುಟ್ಟು ಎಂಬುದು ಬಂದ ಕೂಡಲೇ ಸಾವು ನಮ್ಮ ಹಿಂದೆಯೇ ಇರುತ್ತದೆ. ನಾವು ಹುಟ್ಟುವ ಮೊದಲು ಒಂದು unconditional  agreement ಮಾಡಿಕೊಂಡೆ ಬಂದಿರುತ್ತೇವೆ. ಯಾವಾಗ ಕರೆದರೂ ಯಾವ ಸಬೂಬು ಹೇಳದೆ ಸುಮ್ಮನೆ ಹೊರಡುತ್ತೇವೆ  ಎಂದು. ಸಾವು ಯಾವ ಕ್ಷಣದಲ್ಲಿ ಎಂದು  ಯಾರಿಗೂ ಗೊತ್ತಾಗದ ಹಾಗೆ ಯಮ ಕರೆಸುತ್ತಾನೆ. ಸಾವಿಗೊಂದು ಕಾರಣ ಮಾತ್ರ ನೀಡೆ ಕರೆದುಕೊಂಡು ಹೋಗುತ್ತಾನೆ. ಹುಟ್ಟಿನಷ್ಟೇ ಸಾವು ಕೂಡ ನಿಗೂಡ. ಕೆಲವರು ಮುಂದೆ ಹೋಗುತ್ತಾರೆ ಮತ್ತೆ ಕೆಲವರು ಹಿಂದೆ, ಆದರೆ ಎಲ್ಲರು ಹೋಗಲೇ ಬೇಕಾದ ಜಾಗ ಇದು. ಪ್ರತಿ ಸಾವು ಕೂಡ ನಮಗೊಂದು ಎಚ್ಚರಿಕೆ ನೀಡುತ್ತಿರುತ್ತದೆ. "ನೀನು ಸಾವಿನ ಸಾಲಿನಲ್ಲಿ ನಿಂತಿದ್ದಿಯ".
                        ಉಳಿದಷ್ಟು  ದಿನದಲ್ಲಿ  ನನ್ನ  ಬದುಕನ್ನು  ಹೇಗೆ ಸಾರ್ಥಕ ಮಾಡಿಕೊಳ್ಳಬಹುದು? ಇರುವಷ್ಟು ಸಮಯದಲ್ಲಿ  ನಾವೇನು ಒಳ್ಳೆಯದು ಮಾಡಬಹುದು?   ಮತ್ತೊಬ್ಬರಿಗೆ ಸಾಧ್ಯವಾದಷ್ಟು ಮಟ್ಟಿಗೆ ತೊಂದರೆ ಕೊಡದೆ ಹೇಗೆ ಬದುಕಬಹುದು? ನಮ್ಮ ನಮ್ಮ ಕರ್ತವ್ಯವನ್ನ ಎಷ್ಟು ಪ್ರಾಮಾಣಿಕರಾಗಿ ಮಾಡಬಹುದು? ನಾವೆಷ್ಟು ಹೃದಯವನ್ತರಾಗಿ ಬಾಳಬಹುದು? ಹೇಗೆ ಉತ್ಸಾಹದಿಂದ ಜಗತ್ತನ್ನು ನೋಡಬಹುದು? ಪ್ರೀತಿ ಪ್ರೇಮದಿಂದ ಎಷ್ಟು ಕಾಲ ಸ್ವತಂತ್ರರಾಗಿ ಬಾಳುವೆ ನಡೆಸಬಹುದು? ಇತ್ಯಾದಿಗಳನ್ನು ಸಕಾರಾತ್ಮಕವಾಗಿ ಚಿಂತನೆ ನಡೆಸಿ,ಅದರಂತೆ ಬಾಳುವೆ ನಡೆಸಿದರೆ  ಸಾವಿನಲ್ಲೂ ಧನ್ಯತೆ ಸಿಗಬಹುದೇನೋ ಎಂದೆನಿಸುತ್ತದೆ.
                         ಇದಕ್ಕೆ ನಿಮ್ಮ ಚಿಂತನೆ ಏನು?

6 comments:

  1. happy to read your blogs uncle. Specially this one(being a part of the content:P). It is easy and has a good flow. As i cannot reply in kannada, this is all I can say for now. Looking forward for some more 'harates'.

    ReplyDelete
  2. ನಾನು ಇಷ್ಟು ದಿನ ಹರಟೆ ಓದಿರಲಿಲ್ಲ.. ನಿಮ್ಮ ಚಿ೦ತನೆಗಳ ಅಳ ಗಮನೀಯ.. ಮಡೆ ಸ್ನಾನದ ಬಗ್ಗೆಗಿನ ನಿಮ್ಮ ನಿಲುವು ಹಾಗೂ ಈ ಲೇಖನದಲ್ಲಿನ ನಿಮ್ಮ ನಿಲುವು ಸಮರ್ಥನೀಯ.. ಸಾಕಷ್ಟು ಓದಬೇಕಿದೆ. ಸಮಯ ಸಿಕ್ಕಿದಾಗಲೆಲ್ಲಾ ಬರುವೆ.. ಆಶೀರ್ವಾದವಿರಲಿ..
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ಶ್ರೀ ನಾವಡರವರೆ,

    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ಹೆಚ್ ಏನ್ ಪ್ರಕಾಶ್

    ReplyDelete
  4. ಸಾವು ದೇಹಕ್ಕೆ ಹೊರತು ಆತ್ಮಕ್ಕಲ್ಲ ಅಣ್ಣಾವ್ರು ಭಕ್ತ ಪ್ರಹ್ಲಾದದಲ್ಲಿ ಹೇಳಿರುವ ಸಂಭಾಷಣೆ...
    ಹೌದು ಅಪರಿಚಿತರ ಸಾವಿಗೆ ಸಂತಾಪ, ಬುದ್ದಿವಾದ ಹೇಳುವ ಮನಸು, ಪರಿಚಿತರು ಹೋದಾಗ ಮನಸು ಕುಬ್ಜವಾಗುತ್ತದೆ...
    ನಮಗೆಲ್ಲ ಗೊತ್ತು ಸಾವು ನಿರಿಕ್ಷೀತ ಅಂತ...ಆದ್ರೆ ಸ್ಮಶಾನ ವೈರಾಗ್ಯ ಮೀರಿ ಹೋಗಲು ಸಾಧ್ಯವಿಲ್ಲ...
    ನಿಮ್ಮ ಲೇಖನ ಚಿಂತನೆಗೆ ಆರ್ಹ...ಧನ್ಯವಾದಗಳು

    ReplyDelete
  5. ನಿಮ್ಮ ಅಭಿಪ್ರಾಯ ಸಾರ್ವಕಾಲಿಕ ಸತ್ಯ ಗುರುಗಳೇ

    ReplyDelete