December 15, 2011

ಸೌಂದರ್ಯ.................ಒಂದಷ್ಟು ಹರಟೆ....5

ಸೌಂದರ್ಯ.................ಒಂದಷ್ಟು ಹರಟೆ....5

                     ಸಾಕ್ರೆಟಿಸ್ ನೋಡಲು ಅತ್ಯಂತ ಕುರೂಪವಾಗಿದ್ದರು.  ಗಿಡ್ಡನೆಯ ದೇಹ, ಚಪ್ಪಟ್ಟನೆಯ ನಾಸಿಕ, ಕಲೆಗಳಿಂದ ತುಂಬಿದ ಮುಖ, ಸದಾ ಕೆದರಿದ ತಲೆಕೂದಲು, ತೀಕ್ಷ್ಣವಾದ ನೋಟ, ಮಧುರವಾದ ಮಾತು. ಸದಾಕಾಲ ಇವರ ಸುತ್ತ ಯುವಕರು ಸುತ್ತುವರೆದಿರುತ್ತಿದ್ದರು. ನಗರದ ಮಧ್ಯಭಾಗದಲ್ಲಿ ಸುತ್ತುವರೆದು ನಿಂತ ಯುವಕರ ಗುಂಪು ಸದಾಕಾಲ ಕಾಡು ಹರಟೆ ಹೊಡೆಯುತ್ತಾರೆಂಬ  ಆಪಾದನೆ, ಇದರ ಮುಖ್ಯ ರೂವಾರಿ ಸಾಕ್ರೆಟಿಸ್ ಎಂಬುದು ಅಲ್ಲಿನ ಜನರ ಅಭಿಪ್ರಾಯವಾಗಿತ್ತು. ಸಾಕ್ರೆಟಿಸ್ ಎಂದು ಕಾಡು ಹರಟೆ ಹೊಡೆಯುತ್ತಿರಲಿಲ್ಲ, ಬದಲಿಗೆ ತನ್ನ ಬಳಿ ಬಂದವರ  ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಿ ಸಂತೈಸುತ್ತಿದ್ದರು. ವೇದಾಂತದಿಂದ  ಹಿಡಿದು ಸಾಮಾನ್ಯ ಸಮಸ್ಯೆಗಳವರೆಗೆ  ಇಲ್ಲಿ ಚರ್ಚೆ ನಡೆಯುತ್ತಿತ್ತು.ಇವರ ಶಿಷ್ಯರಲ್ಲಿ ಮುಖ್ಯವಾದವರು ಪ್ಲೇಟೋ ಕೂಡ ಒಬ್ಬರು.

                    ಸಾಕ್ರೆಟಿಸನ ಹೆಂಡತಿ ಬಹಳ  ವರಟು, ಛಲವಾದಿ,ಜಗಳ ಮಾಡುವುದರಲ್ಲಿ ಎತ್ತಿದ ಕೈ. ಅವರ ಹೆಂಡತಿ ಸದಾಕಾಲ ಸಾಕ್ರೆಟಿಸ್ನನ್ನು ಬೈಯುತ್ತಿದ್ದರು. ಆದರೂ ಸಾಕ್ರೆಟಿಸ್ ಮಾತ್ರ ಹೆಂಡತಿಯನ್ನ ಪ್ರೀತಿಸುತ್ತಿದ್ದರು. ಸ್ವಲ್ಪವು ತಲೆ ಕೆಡಿಸಿ ಕೊಳ್ಳದೇ ನೆಮ್ಮದಿಯಾಗಿ ತಮಗೆ ಬೇಕೆನಿಸಿದ  ಕೆಲಸವನ್ನು ತಾವು ಸುಮ್ಮನೆ ಮಾಡುತ್ತಿದ್ದರು. ಈ ಬಗ್ಗೆ ಇವರ ಶಿಷ್ಯರು ಅನೇಕ ಬಾರಿ ಪ್ರಶ್ನಿಸಿದ್ದು ಉಂಟು, ಆದರೆ ಒಂದು ಸಾರಿಯೂ ಸಾಕ್ರೆಟಿಸ್ ಅವರ ಹೆಂಡತಿಯ ಬಗ್ಗೆ ಒಂದು ಕೆಟ್ಟ ಮಾತನ್ನು ಆಡುತ್ತಿರಲಿಲ್ಲ. " ಅವಳ ಸಂತೋಷಕ್ಕೆ ನಾನೇಕೆ ಅಡ್ಡಿಬರಲಿ? ನನ್ನನ್ನು ಬೈಯುವುದರಿಂದ ಅವಳಿಗೆ ಸಂತೋಷ, ತೃಪ್ತಿ ಸಿಗುವುದಾದರೆ ಸಿಗಲಿ. ಗಂಡನಾಗಿ ಇಷ್ಟು ಮಾಡಬೇಡವೆ?" ಎಂದು ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದರು.  
              
              ಒಮ್ಮೆ ಸಾಕ್ರೆಟಿಸ್ ಹತ್ತಿರ ಒಬ್ಬ ಯುವಕ ಬಂದು  ಕೇಳಿದ "ಗುರುಗಳೇ  ನಾನು  ನಾಲ್ಕು ವರುಷದ ಹಿಂದೆ ಒಬ್ಬಳು ಯುವತಿಯನ್ನು ಪ್ರೇಮಿಸಿ ಲಗ್ನವಾದೆ . ಆದರೆ,   ನನ್ನ ಹೆಂಡತಿ ಕುರೂಪಿ ಎಂದು ಈಗ ಅನಿಸುತ್ತಿದೆ. ನಾನು ಇನ್ನು ಯುವಕ, ೪೦ -೫೦  ವರ್ಷ ಬಾಳಿ ಬದುಕ ಬೇಕು . ಈ ಕುರೂಪಿ ಹೆಂಡತಿಯೊಡನೆ ಹೇಗೆ ಬಾಳಲಿ?  ನನ್ನ  ಬದುಕೇ ಹಾಳಾಯಿತಲ್ಲ ಎಂಬ ಚಿಂತೆ ನನ್ನನ್ನು ಸದಾ ಕಾಡುತ್ತಿದೆ, ಏನಾದರು ಒಂದು ಉಪಾಯ ಹೇಳಿ" ಎಂದು ಅಂಗಲಾಚಿದ.
ಸಾಕ್ರೆಟಿಸ್ ನಸುನಗುತ್ತ " ಅದಕ್ಕೇಕೆ ಚಿಂತಿಸುವೆ? ಇದು ಸುಲಭವಾಗಿ ಬಿಡಿಸ ಬಹುದಾದ ಸಮಸ್ಯೆ. ಇದಕ್ಕೆಲ್ಲ ಕಾರಣ, ಹಾಳಾದ ನಿನ್ನ ದೃಷ್ಟಿ ದೋಷ . ಈ ನಿನ್ನ ದೃಷ್ಟಿ ದೋಷ ಸರಿಯಾದರೆ ಸಮಸ್ಯೆಗೆ ಪರಿಹಾರ ಸಿಕ್ಕಂತೆಯೇ." ಎಂದು ಹೇಳಿದರು.  ಯುವಕನಿಗೆ ಅರ್ಥವಾಗಲಿಲ್ಲ. ಸಾಕ್ರೆಟಿಸ್ ಮುಂದುವರೆದು " ನೀನು ಪ್ರೇಮಿಸುವಾಗ ಆ ಹುಡುಗಿಯನ್ನು ಯಾವ ದೃಷ್ಟಿಯಿಂದ ನೋಡಿದ್ದೆಯೋ ಅದೇ ದೃಷ್ಟಿಯಿಂದ ಈಗಲೂ ನೋಡು. ಅಂದು ಕಾಣದ ಕುರೂಪ ಇಂದು ಕಾಣಲು ಹೇಗೆ ಸಾದ್ಯ?  ಅಂದು ಅವಳ ಸೌಂದರ್ಯ ಕಂಡು ಹುಚ್ಚನಾದ ನಿನ್ನ ಆ ದೃಷ್ಟಿ ಇಂದು ಹಾಳಾಗಲು ಹೇಗೆ ತಾನೇ ಸಾದ್ಯ? ಅದೇ ಪ್ರೇಮ ದೃಷ್ಟಿಯಿಂದ ಮತ್ತೆ  ಆಕೆಯತ್ತ ನೋಡು. ಅದೇ ಸೌಂದರ್ಯವನ್ನು ಅನುಭವಿಸು. ಆಗ ಅದೇ ಹೆಂಡತಿ ನಿನಗೆ ಸುಂದರಳಾಗಿ, ಅಪ್ರತಿಮ  ರೂಪವತಿಯಾಗಿ ಕಾಣಿಸುತ್ತಾಳೆ. ಬದಲಾದ ನಿನ್ನ ದೃಷ್ಟಿಯನ್ನು ಸರಿಮಾಡಿಕೋ.  ಆ ಪ್ರಿಯಕರನ ದೃಷ್ಟಿಯನ್ನು ಹೊಂದು , ನಿನ್ನ ಬದುಕು ಸುಂದರವಾಗುತ್ತದೆ" ಎಂದು ಸಲಹೆ ಇತ್ತರು .

              "ಮಧುರತೆ ಹೃದಯದಲ್ಲಿ, ಸೌಂದರ್ಯ ನೋಟದಲ್ಲಿ ಇದ್ದರೆ ಜಗತ್ತು, ಜನಾಂಗ ಹೇಗಿದ್ದರೂ ಅದು ಅಂದವಾಗಿಯೇ ಕಾಣುತ್ತದೆ. ಆಗ ಒಂದು ತುಂಡು ಬ್ರೆಡ್ಡಿನ ತುಣುಕು ಮೃಷ್ಟಾನ್ನ, ಅನ್ನದ ಗಂಜಿ ಅಮೃತ, ಪುಟ್ಟ ಮನೆ ಮಹಲು, ಬಡತನ ಕಾಣುವುದೇ ಇಲ್ಲ" ಎನ್ನುವುದು ಸಾಕ್ರೆಟಿಸರ ಮಾತು.

                    ಸಾಕ್ರೆಟಿಸ್ ಕೇವಲ ವೇದಾಂತ ಬೋಧನೆ ಮಾಡುತ್ತಿರಲಿಲ್ಲ, ಅದನ್ನು ಯಥಾವತ್ತಾಗಿ ತಮ್ಮ ಜೀವನದಲ್ಲಿ ಪಾಲನೆ ಮಾಡುತ್ತಿದ್ದರು. ನೇರವಾದ ಮಾತಿನಲ್ಲಿ ಮೃದುವಾಗಿ, ಹೇಳಬೇಕೆನಿಸಿದ್ದನ್ನು ಹೇಳಿ ಮುಗಿಸುತ್ತಿದ್ದರು. ತಮ್ಮ ಜೀವನದಲ್ಲಿ ರಾಜದ್ರೋಹದ ಆಪಾದನೆ ಹೊತ್ತು ಮರಣ ದಂಡನೆಗೆ ಗುರಿಯಾದಾಗಲು ಇವರ ಚಹರೆಯ ಲಕ್ಷಣಗಳೇನು ಬದಲಾಗಲಿಲ್ಲ.  ಕಟೋರವಾದ ವಿಷಪ್ರಾಶನ ಮಾಡಿಸುವಾತನಲ್ಲು ಸ್ನೇಹಮಯವಾಗಿಯೇ ಇದ್ದರು, ಆಗಲೂ ಸ್ವಲ್ಪ ಕೂಡ  ವಿಚಲಿತರಾಗಿರಲಿಲ್ಲ. ವಿಷಪ್ರಾಶನ ಮಾಡಿ ಹತ್ತಾರು ಹೆಜ್ಜೆಗಳಷ್ಟು ನಡೆಯಬೇಕೆನ್ನುವ ನಿಯಮವನ್ನು ಚಾಚೂ ತಪ್ಪದೆ ನಗುನಗುತ್ತಲೇ ಪಾಲಿಸಿ, ಯಾರನ್ನು ದೂಷಿಸದೆ, ತಾವು ನಂಬಿಕೊಂಡ ಸತ್ಯವನ್ನು ಬಿಡದೆ, ನೆಮ್ಮದಿಯಿಂದ ಪ್ರಾಣತ್ಯಾಗ ಮಾಡಿದ ಅವದೂತ.

                      ಹೌದು,  ಸೌಂದರ್ಯ ಇರುವುದು ನೋಡುವವನ ಕಣ್ಣಲ್ಲಿ. ಈ ಜಗತ್ತಿನಲ್ಲಿ ಪರಮಾತ್ಮನು ಎಷ್ಟೊಂದನ್ನು ಸೃಷ್ಟಿ ಮಾಡಿದ್ದಾನೆ. ಮನುಷ್ಯ, ಪ್ರಾಣಿ, ಜಲ ಚರ ಎಲ್ಲವು ವಿಭಿನ್ನವೇ. ಒಂದು ಚಿಕ್ಕ ಕಾಡು ಪುಷ್ಪದಿಂದ ಹಿಡಿದು ಬೃಹದಾಕರವಾದ ಬೆಟ್ಟಗಳ ಸಾಲಿನವರೆಗೆ, ಇರುವೆಯಿಂದ ಆನೆಯವರೆಗೆ, ಚಿಕ್ಕ  ತೊರೆಯಿಂದ ಸಾಗರದವರಗೆ ಎಲ್ಲವು ವಿಭಿನ್ನವೇ.  ಎಲ್ಲವನ್ನು ಸುಂದರವಾಗಿಯೇ ಇದೆ ಎಂದು ಹೆಚ್ಚು ಜನ ಒಪ್ಪುವುದಿಲ್ಲ .   ಕಾರಣ ಪ್ರತಿಯೊಬ್ಬರ ದೃಷ್ಟಿಯು ಒಂದೇ ತರಹ ಇಲ್ಲ.  ಎಷ್ಟು ಜನರಿದ್ದಾರೋ ಅಷ್ಟು  ಅಭಿಪ್ರಾಯಗಳು ಬೇರೆಯೇ ಇವೆ . ಆದ್ದರಿಂದಲೇ  ಒಬ್ಬರಿಗೆ  ಸುಂದರವಾಗಿ ಕಂಡದ್ದು ಇನ್ನೊಬ್ಬರಿಗೆ ಸುಂದರವಾಗಿ ಕಾಣದು. ಒಬ್ಬರಿಗೆ ಪವಿತ್ರ ಎನಿಸಿದ್ದು ಮತ್ತೊಬ್ಬರಿಗೆ ಅಪವಿತ್ರ ಎಂದಾಗಬಹುದು. ಈ ಜಗತ್ತಿನಲ್ಲಿ ಎಲ್ಲವು ವೈವಿಧ್ಯಮಯ ಹಾಗು ಪ್ರಸ್ತುತವೇ.    ನಮ್ಮ ನಮ್ಮ ದೃಷ್ಟಿ ಬದಲಾದಂತೆ ನಮ್ಮ ಭಾವನೆಗಳು ಬದಲಾಗುತ್ತವೆ. ನಾವು ನೋಡುವ ದೃಷ್ಟಿಯಲ್ಲಿ ಎಲ್ಲ ಅಡಗಿದೆ. ಸೌಂದರ್ಯ ಕೇವಲ ರೂಪದಲ್ಲಿ ಇಲ್ಲ. ಶಬ್ದ, ಸ್ಪರ್ಶ, ರಸ, ಗಂಧ, ಇವುಗಳೆಲ್ಲದರಲ್ಲೂ ಇದೆ.       ವಿಶಾಲವಾದ ಹೃದಯದೊಳಗೆ ಮಧುರತೆಯನ್ನು, ನೋಟದಲ್ಲಿ ಸೌಂದರ್ಯತೆಯನ್ನು  ಹೊಂದಿದರೆ ಈ ಜಗತ್ತಿನಲ್ಲಿರುವುದು  ಹೆಚ್ಚು ಆಪ್ಯಾಯಮಾನವಾಗುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಉತ್ತಮ ಉದಾಹರಣೆಯಾಗಿ ಸಾಕ್ರೆಟಿಸ್ ನಿಲ್ಲುತ್ತಾರೆ.

                      ಇದಕ್ಕೆ ನೀವೇನು ಅಂತೀರಾ?

4 comments:

  1. ಸುಂದರವದದ್ದೆಲ್ಲ...ಸೌಂದರ್ಯದಿಂದ ಕೂಡಿರುವುದಿಲ್ಲ...ಗುಣ ಸುಂದರವಾಗಿದ್ದರೆ ಮಾತ್ರ ಇದು ಸಾಧ್ಯ
    ಈ ಮಾತುಗಳು ಸಾಕ್ರೆಟಿಸ್ ಜೀವನದಲ್ಲಿ ಗೋಚರವಾಗುತ್ತದೆ...
    ಯಾವಾಗ ನಮ್ಮ ತುಡಿತ ಗುಣದ ಕಡೆಗೆ ಹಾಗು ನಮ್ಮ ವ್ಯಕ್ತಿತ್ವದ ಕಡೆಗೆ ಇರುತ್ತದೆಯೋ..ಆಗ ಜಗವೆಲ್ಲ ಸುಂದರ..
    ಒಳ್ಳೆಯ ಲೇಖನ...ಹಂಚಿಕೊಂಡಿದಕ್ಕೆ ಧನ್ಯವಾದಗಳು

    ReplyDelete
  2. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ಪ್ರಕಾಶ್

    ReplyDelete
  3. 'ಹೆಂಡತಿ ಗಯ್ಯಾಳಿಯಾಗಿದ್ದರೆ ಗಂಡ ತತ್ವಜ್ಞಾನಿಯಾಗುತ್ತಾನೆ' - ಇದು ಸಾಕ್ರೆಟಿಸನ ಬಗ್ಗೆ ಉದ್ಗಾರವಿದೆ.
    ಒಳ್ಲೆಯ ವಿಚಾರ ಹಂಚಿಕೊಂಡಿದ್ದೀರಿ, ಧನ್ಯವಾದಗಳು. ನನ್ನ 'ಕವಿಮನ' ತಾಣದಲ್ಲಿನ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ನನ್ನನ್ನು ನಿಮ್ಮ ಈ ಸುಂದರ ತಾಣಕ್ಕೆಳೆತಂದಿದೆ.

    ReplyDelete
  4. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
    ಪ್ರಕಾಶ್

    ReplyDelete