ಅವಿಚ್ಛಿನ್ನ ಪ್ರೇಮ
ಒಬ್ಬ ಸುಂದರ ಯುವಕ. ಅವಿವಾಹಿತ, ತನ್ನ ತಾಯಿಯ ಪ್ರೀತಿಯ ಮಗ. ದೇವರ ಮೇಲೆ ಪರಮ
ಭಕ್ತಿ. ಹೇಗಾದರೂ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆಯಲೇ ಬೇಕೆಂಬ ಅತ್ಯುಗ್ರ ಹಂಬಲ.
ಆದರೆ ತನ್ನ ತಾಯಿಯನ್ನು ಒಂಟಿಯಾಗಿ ಬಿಟ್ಟು ಹೋಗಬೇಕಲ್ಲ ಎಂಬ ಚಿಂತೆ. ಒಂದು ದಿನ ದೈರ್ಯ ಮಾಡಿ
ತನ್ನ ಬಯಕೆಯನ್ನುತಾಯಿಯ ಮುಂದೆ ಇಟ್ಟ. ತಾಯಿಯ ಸಮ್ಮತಿಗಾಗಿ ಬೇಡಿದ. ತಾಯಿ
ಈ ಮಾತು ಕೇಳಿ “ ನನ್ನಿಂದ ದೂರವಾಗಲು ನಿನಗೆ ಮನಸ್ಸು ಹೇಗೆ ಬರುತ್ತದೆ ಮಗನೆ? ನನ್ನ
ಪ್ರೇಮಕ್ಕಿಂತ ನಿನಗೆ ಮಹತ್ವ ಬೇರೆ ಏನಿದೆ? ನನ್ನ ಪ್ರೇಮಕ್ಕಿಂತ ನಿನ್ನ ಬಯಕೆ ಪವಿತ್ರ ಮತ್ತು
ಮಹತ್ವ ಎಂದು ನಿನಗನಿಸಿದರೆ ನೀನು ಖಂಡಿತಾ ಹೋಗು. ಭಗವಂತನನ್ನು ಕಾಣು. ಆದರೆ
ಭಗವಂತನ ದರ್ಶನ ಪಡೆದು ಪುನೀತವಾದ ನಿನ್ನ ಪ್ರಸನ್ನವಾದ ಮುಖವನ್ನು ನಾನು ಸಾಯುವುದರೊಳಗೆ
ನೋಡಬೇಕು. ಈ ಆಸೆಯನ್ನು ನೆರವೇರಿಸಿಕೊಡುವೆಯಾ? ಅದೇ ನನ್ನ ಬಾಳಿನ
ಕೃತಾರ್ಥತೆ. ನಾನು ನಿನಗಾಗಿ ದಾರಿ ಕಾಯುತ್ತಿರುತ್ತೇನೆ. ನೀನು ಬೇಗ
ಬರುವಂತಾಗಲಿ. ನನಗಿನ್ನೇನೂ ಬೇಡ, ನಿನ್ನ ಧನ್ಯತೆಯಲ್ಲೇ ನನ್ನ ಧನ್ಯತೆ.
ಹೋಗಿ ಬಾ ಮಗನೇ ನಿನ್ನ ಮನೋಭಿಷ್ಟ ನೆರವೇರಲಿ “ ಎಂದು ತುಂಬು ಹೃದಯದಿಂದ ಹಾರೈಸಿ ಮಗನನ್ನು
ಬೀಳ್ಕೊಟ್ಟಳು.
ಆ ಯುವಕ ಭಗವಂತನ ಸಾಕ್ಷಾತ್ಕಾರಕ್ಕಾಗಿ ಕಂಡ ಕಂಡ ಕಡೆ ಅಲೆದ. ಹಲವಾರು ಸಂತ, ಗುರು,
ಸನ್ಯಾಸಿಗಳಲ್ಲಿ ಸಾಧನೆ ಮಾಡಿದ. ಹಿಮಾಲಯಕ್ಕೆ ಹೋದ. ಧ್ಯಾನ ಮಾಡಿದ, ಉಪವಾಸದ ಜೊತೆಗೆ ಹಟ ಸಾಧನೆ
ಮಾಡಿದ. ದಶಕಗಳೇ ಕಳೆದವು. ದೇವನ ದರ್ಶನ ಭಾಗ್ಯ ಮಾತ್ರ ಲಭ್ಯವಾಗಲಿಲ್ಲ. ಭಗವಂತನ
ಸಾಕ್ಷಾತ್ಕಾರಕ್ಕಾಗಿ ಮಾಡಿದ ಸಾಧನೆಗಳೆಲ್ಲಾ ವ್ಯರ್ಥವೆನಿಸಿತು. ಬಹಳ ನಿರಾಸೆಯಾಗಲು
ಪ್ರಾರಂಭವಾಯಿತು. ವ್ಯಥೆ ದಿನ ನಿತ್ಯದ ಬದುಕಾಯಿತು. ಒಂದು ದಿನ ಇದ್ದಕ್ಕೆ ಇದ್ದ
ಹಾಗೆ ತನ್ನ ತಾಯಿಯ ನೆನಪಾಯಿತು. ಆ ನನ್ನ ವೃದ್ಧತಾಯಿ ನನ್ನ ಬರುವಿಕೆಯನ್ನು
ಅದೆಷ್ಟು ಕಾತುರದಿಂದ ಕಾಯುತ್ತಾ ಇರಬೇಕು? ನಾನು ಆಕೆಗೆ ಹೇಗೆ ಈ ಮುಖವನ್ನು ತೋರಿಸಲಿ?
ನನ್ನ ಪ್ರತೀಕ್ಷೆಯಲ್ಲಿರುವ ಆ ನನ್ನ ತಾಯಿಗೆ ಈ ನಿನ್ನ ಮಗನಿಗೆ ಸಾಕ್ಷಾತ್ಕಾರವಾಗಲಿಲ್ಲವೆಂಬ
ವಾರ್ತೆಯನ್ನು ಹೇಗೆ ಹೇಳಲಿ? ಈ ವಾರ್ತೆ ಕೇಳಿ ಆ ನನ್ನ ತಾಯಿ ಹೇಗೆ ತಡೆದುಕೊಂಡಾಳು? ಹೀಗೆ
ಹಲವಾರು ಯೋಚನೆಗಳು ತಲೆಯಲ್ಲಿ ಹೊಕ್ಕವು. ಏನಾದರಾಗಲಿ ಇಷ್ಟು ದೀರ್ಘಕಾಲದ ಸಾಧನೆಯಲ್ಲಿ
ಭಗವಂತನ ದರ್ಶನವಂತು ಆಗಲಿಲ್ಲ, ಕನಿಷ್ಠ ಸಾಯುವುದರೊಳಗೆ ನನ್ನ ತಾಯಿಯನ್ನಾದರು ದರ್ಶನ
ಮಾಡಿಬಿಡಬೇಕು. ತಾಯಿಯನ್ನು ನೋಡಿದ ಧನ್ಯತೆಯಾದರು ನನಗೆ ಉಳಿದೀತು ಎಂದು ಯೋಚಿಸಿ ತನ್ನ
ಊರಿನ ಕಡೆಗೆ ಹೊರಟ.
ಆತ ಬರುವಾಗ ರಾತ್ರಿಯಾಗಿತ್ತು. ತಾನಿದ್ದ ಮನೆಯಲ್ಲಿ ಏನೂ ಬದಲಾವಣೆ ಇಲ್ಲ. ಹೊರಗೆ
ಕತ್ತಲೆ, ಬಾಗಿಲ ಕಿಂಡಿಯಿಂದ ಇಣುಕಿ ನೋಡಿದ. ತಾಯಿ ಅತ್ಯಂತ ಮುಪ್ಪಾಗಿದ್ದಾಳೆ.
ಪಡಸಾಲೆಯಲ್ಲಿ ದೀಪದ ಎದುರು ಕೂತು ಅತ್ಯಂತ ಏಕಾಗ್ರತೆಯಿಂದ ಭಗವಂತನನ್ನು
ಪ್ರಾರ್ಥಿಸುತ್ತಿದ್ದಾಳೆ. ಸ್ವಲ್ಪ ಸಮಯದ ನಂತರ ವೃದ್ಧಳಾದ ತಾಯಿ ಭಗವಂತನಿಗೆ ಕೈ ಮುಗಿಯುತ್ತಾ “
ದೇವನೇ, ನನ್ನ ಮಗ ನಿನ್ನ ನೋಡಲು ಹೋಗಿ ಮುವ್ವತ್ತು ವರ್ಷಗಳೇ ಕಳೆದಿವೆ. ನಿನಗಾಗಿ ಅವನು
ಕಾತರಿಸುತ್ತ ಜೀವನ ತಳ್ಳುತ್ತಿರಬೇಕು, ತಳಮಳಿಸುತ್ತಿರಬೇಕು. ಬೇಗ ಅವನಿಗೆ ದರ್ಶನ
ಕರುಣಿಸು ದೇವಾ! ಅವನಿಗೆ ಅನುಗ್ರಹಿಸು! ಅವನ ಯಶವೇ ನನ್ನ ಯಶ. ಅವನ
ಸಿದ್ಧಿಯೇ ನನ್ನ ಸಿದ್ಧಿ. ಅವನ ಕೃತಾರ್ಥತೆಯೇ ನನ್ನ ಕೃತಾರ್ಥತೆ! ದೇವನೇ ನನಗಾಗಿ
ಏನೂ ಬೇಡ. ನಿನ್ನೆಲ್ಲ ಕಾರುಣ್ಯವನ್ನು ನನ್ನ ಮಗನಿಗೆ ಕರುಣಿಸು ದೇವ ದೇವ “. ಎಂದು
ಕಣ್ಣೀರು ಸುರಿಸುತ್ತಾ ಅನನ್ಯವಾಗಿ ಬೇಡುತ್ತಿದ್ದಳು. ಈ ಮಾತುಗಳನ್ನು ಕೇಳುತ್ತಿದ್ದ ಮಗನ
ಕಣ್ಣಲ್ಲಿ ನೀರಾಡಲು ಪ್ರಾರಂಭವಾಯಿತು. “ ತಾನೆಂತಹ ಸ್ವಾರ್ಥಿಯಾಗಿ ಬಿಟ್ಟೆ. ನನ್ನ
ಹಿತ ಸಾಧನೆಯ ಮುವ್ವತ್ತು ವರ್ಷಗಳಲ್ಲಿ ಒಮ್ಮೆಯೂ ನಾನು ತಾಯಿಯನ್ನು ನೆನಪಿಸಿಕೊಳ್ಳಲಿಲ್ಲ.
ಆದರೆ, ಈ ನನ್ನ ತಾಯಿ ನನಗಾಗಿ ಸತತ ಮುವ್ವತ್ತು ವರ್ಷದಿಂದ ನನಗಾಗಿ
ಪ್ರಾರ್ಥಿಸುತ್ತಿದ್ದಾಳೆ. ಎಂತಹ ತ್ಯಾಗ! ಎಂತಹ ಅವಿಚ್ಛಿನ್ನ ಪ್ರೇಮ! ಇಂತಹ
ಪ್ರೇಮರೂಪ ದೇವತೆಯನ್ನು ತ್ಯಜಿಸಿ ಕಾಣದ ದೇವರನ್ನು ಅರಸುತ್ತಾ ಹೋದೆನಲ್ಲಾ ನಾನೆಂತಹ
ಮೂರ್ಖ?” ಎನ್ನುತ್ತಾ ತಾಯಿಯ ಕಾಲಿಗೆ ಬಿದ್ದ. ಕಣ್ಣೀರು ಸುರಿಯುತ್ತಿತ್ತು, ಒಂದು ಕಡೆ
ಪಶ್ಚಾತ್ತಾಪ, ಇನ್ನೊಂದು ಕಡೆ ತಾಯಿಯ ರೂಪದಲ್ಲಿ ದೇವದರ್ಶನವಾದ ಅನುಭವ. ಅದೆಂತಹ
ದಿವ್ಯಭಾವ ಆ ತಾಯಿಯದು. ಅದೇ ನೈಜ ಅಂತಃಸಂಪದ. ಅದೇ ದೇವನ ಹೃದಯ ರೂಪ.
ಇಷ್ಟು ಬರೆದ ಮೇಲೆ ಬೇರೇನೂ ಬರೆಯಲು
ಮನಸಾಗುತ್ತಿಲ್ಲ. ಮಾತೃದೇವೋ ಭವ...... ಮಾತೃದೇವೋ ಭವ...... ಮಾತೃದೇವೋ ಭವ......
ಮನ್ಮಥ ನಾಮ ಸಂವತ್ಸರ ಎಲ್ಲಾ ಸೋಮವಾರ ಪತ್ರ ಓದುಗರಿಗೆ ಮತ್ತು ಕುಟುಂಬ ವರ್ಗದವರಿಗೆ
ಶುಭ ಫಲಗಳನು ತರಲಿ. ನೆಮ್ಮದಿಯನು ತರಲಿ. ಸಂತೃಪ್ತಿಯನು ತರಲಿ. ಪ್ರೀತಿ
ಪ್ರೇಮಗಳು ಸದಾ ಬಾಳಲಿ ನಗುನಗುತಾ ಇರಲಿ.
ನಿಮ್ಮ ಆತ್ಮೀಯ
ಪ್ರಕಾಶ್ ಮತ್ತು ಕುಟುಂಬ
No comments:
Post a Comment