January 3, 2015

ಗುರು ಹಿರಿಯರ ಸೇವೆ 

ಒಮ್ಮೆ ಗುರುನಾಥರಲ್ಲಿ ಓರ್ವ ವೃದ್ಧರು ಬಂದು  ತಮ್ಮಅಳಲನ್ನು ತೋಡಿಕೊಳ್ಳುತ್ತ . "  ನನ್ನ  ಮಗ ಅಮೇರಿಕಾದಲ್ಲಿ ನೆಲೆಸಿರುವನೆಂದು, ವಯಸ್ಸಾದ ನಾವು ಇಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೇವೆ. ನನ್ನ ಹೆಂಡತಿಗಂತೂ  ಕೀಲು ಮತ್ತು ಮೂಳೆ ನೋವಿನಿಂದ ಓಡಾಡಲು ಕಷ್ಟವಾಗಿ ಹಾಸಿಗೆ ಹಿಡಿದಿದ್ದಾಳೆ, ನನ್ನ ಆರೋಗ್ಯವು ಅಷ್ಟೊಂದು  ಸರಿ ಇಲ್ಲ, ನಮ್ಮನ್ನು ನೋಡಿಕೊಳ್ಳುವವರಾರು ಸಧ್ಯಕ್ಕೆ ಇಲ್ಲಿ ಇಲ್ಲ.  ಹೀಗಾಗಿ ಈಗ ನಮ್ಮ ಮಗ ವಾಪಸ್ಸು ಬೆಂಗಳೊರಿಗೆ ಬಂದು ನಮ್ಮ ಜೊತೆ ಉಳಿದರೆ ವಯಸ್ಸಾದ ನಮಗೆ ಬಹಳ ಉಪಕಾರವಾದಂತಾಗುತ್ತದೆ. ಅವನು ಬೆಂಗಳೂರಿಗೆ  ಬರುವ ಹಾಗೆ ಏನಾದರು ತಾವು ಅವನಿಗೆ ಮನಸ್ಸು ಬರುವಂತೆ ಮಾಡಬೇಕು." ಎಂದು ವಿನಂತಿಸಿಕೊಂಡರು.  ಸುಮ್ಮನೆ ಆಲಿಸಿದ ಗುರುನಾಥರು " ಹೌದು, ಇದರಲ್ಲಿ ನಿಮ್ಮ ಮಗನದೇನೋ ತಪ್ಪಿಲ್ಲವಲ್ಲ, ನಿಮ್ಮ ಆಸೆಯಂತೆ ಆತ  ಅಲ್ಲಿ ಹೋಗಿ ನೆಲೆಸಿದ್ದಾನೆ . ನಿಮಗೆ ಇರಲು ಮನೆ,  ಹಣ ಎಲ್ಲವು ಇದೆಯಲ್ಲ, ಈಗ ಅವನು ಏಕೆ ಬೇಕು? " ಎಂದರು. ಸ್ವಲ್ಪ ಗಲಿಬಿಲಿಗೊಂಡ ಆ ವೃದ್ಧರು ಅರ್ಥವಾಗದವರಂತೆ ಸುಮ್ಮನೆ ಕಣ್ಣು ಕಣ್ಣು ಬಿಡುತ್ತ ನಿಂತರು. " ಅಲ್ಲಪ್ಪಾ, ನೀವು ನಿಮ್ಮ ಮಗನಿಗೆ  ನೀನು ಚೆನ್ನಾಗಿ ಓದಬೇಕು, ದೊಡ್ಡ ಕೆಲಸ ಹಿಡಿಯಬೇಕು, ಅಮೆರಿಕಾಕ್ಕೆ ಹೋಗಿ ಲಕ್ಷಾಂತರ ದುಡ್ಡು ಸಂಪಾದನೆ ಮಾಡಬೇಕು ಎಂದೆಲ್ಲ ಹೇಳಿದವರು ನೀವಲ್ಲವೇ? ಈಗ,  ಅವನು ನೀವು ಹೇಳಿದ್ದನ್ನು  ಚಾಚೂ ತಪ್ಪದೆ ಮಾಡುತ್ತಿದ್ದಾನೆ. ನಿಮ್ಮ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಾನೆ. ಅಮೆರಿಕಾದಲ್ಲಿ ನೆಲೆಸಿದ್ದಾನೆ, ಚೆನ್ನಾಗಿ ಓದಿದ್ದಾನೆ, ದೊಡ್ಡ ಕೆಲಸ ಹಿಡಿದಿದ್ದಾನೆ. ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾನೆ,ತಪ್ಪೇನಿದೆ?   ಆತನಿಗೆ, ನೀವು  ವಯಸ್ಸಾದ ತಂದೆ ತಾಯಿಯರನ್ನು ವೃದ್ದಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು, ಗುರು ಹಿರಿಯರ ಸೇವೆ ಮಾಡಬೇಕು ಎಂದು ಯಾವತ್ತು ಹೇಳಿಕೊಡಲಿಲ್ಲ ಅಥವಾ ಅದನ್ನು ನೀವು ಎಂದು ನಿಮ್ಮ ಹಿರಿಯರಿಗೆ ಮಾಡಿ ತೋರಿಸಲಿಲ್ಲ.  ವಾಸ್ತವ ಹೀಗಿರಬೇಕಾದರೆ ನಿಮ್ಮ ಮಗ ಕಲಿಯುವುದಾಗಲಿ ಅಥವಾ ಮಾಡುವುದಾಗಲಿ  ಹೇಗೆ? ಅಲ್ಲವೇ ಸಾರ್? ನೀವು ಏನು ಹೇಳಿ ಕೊಟ್ಟಿದ್ದೀರೋ ಅದನ್ನು ಅವನು ಮಾಡುತ್ತಿದ್ದಾನೆ. ಅವನು ನಿಮ್ಮ ಮಗ ಅಲ್ಲವೇ ಸಾರ್?  ಮಾಡಲಿ ಬಿಡಿ, ಈಗ ಯಾವ ಮಂತ್ರ ತಂತ್ರವೂ ಅವನನ್ನು ಬರುವ ಹಾಗೆ ಮನಸ್ಸು ಕೊಡಲು ಸಾಧ್ಯಾಗುವುದಿಲ್ಲ.  ಭಗವಂತನನ್ನು ಬೇಡಿಕೊಳ್ಳಿ.ಭಗವಂತ ಅವನಿಗೇ ಮನಸ್ಸು ಕೊಟ್ಟರೆ ಕೊಡಬಹುದು. " ಎಂದು ನಸುನಗುತ್ತ ಹೇಳಿ ಅವರನ್ನು ಕಹಿಸಿಕೊಟ್ಟರು.  
ಹೌದು, ಇಲ್ಲಿ ನಾವು ಚಿಂತನೆ ಮಾಡ ಬೇಕಾದುದನ್ನು ಗುರುನಾಥರು ಅವರ ಮೂಲಕ ನಮಗೆಲ್ಲಾ ಒಂದು ಪಾಠ ಹೇಳಿದ್ದಾರೆ. ನಾವು ನಮ್ಮ ಮಕ್ಕಳಿಗೆ ಯಾವುದನ್ನು ಹೇಳಬೇಕು?  ಯಾವುದರ  ಬಗ್ಗೆ ಸರಿಯಾದ ತಿಳುವಳಿಕೆ ನೀಡಬೇಕು? ಮತ್ತು ಹೇಗೆ ಹಿರಿಯರ ಸೇವೆ ಮಾಡಬೇಕು ಎನ್ನುವುದನ್ನು ನಾವೇ ಮಾಡಿ   ತೋರಿಸಬೇಕು. ಎಳವೆಯಲ್ಲೇ ನೋಡಿ ಕಲಿತ ಇಂತಹ ವಿಚಾರಗಳು ಮನಸಿನ ಆಳದಲ್ಲಿ ಗಟ್ಟಿಯಾಗಿ ಉಳಿಯುತ್ತದೆ. ಆ ನಂತರ ಹೆಚ್ಚಿನಂಶ ಮಕ್ಕಳು ಪಾಲನೆ ಮಾಡುತ್ತಾರೆ. ಇಷ್ಟರ ಮೇಲೂ  ಮಕ್ಕಳು ಅಪ್ಪ ಅಮ್ಮನ ಮತ್ತು ಗುರು ಹಿರಿಯರ  ಸೇವೆಯನ್ನು ವೃದ್ದಾಪ್ಯದಲ್ಲಿ ನಿರ್ವಹಿಸಲಿಲ್ಲ ಎಂದರೆ ಇದು ಅವರವರ ಪ್ರಾರಬ್ದ ಕರ್ಮವೆಂದೇ ಹೇಳಬೇಕಾಗುತ್ತದೆ. ಅಲ್ಲವೇ? 

No comments:

Post a Comment