ಪೂರ್ವಾಗ್ರಹ ಪೀಡಿತ ಮನಸ್ಸು
ನಮ್ಮ ದಿನನಿತ್ಯದ ಅಭ್ಯಾಸದ ಅನುಸಾರವಾಗಿ ನಮ್ಮ ಅನುಭವಗಳಾಗುತ್ತವೆ. ನಮ್ಮ ಯೋಚನೆ, ನಮ್ಮ ಅರಿವಿಗೆ ಬಾರದೇ ಇರುವ ಕೆಲವೊಂದು ಸುಪ್ತ ಮನಸಿನ ಚಿಂತನೆಗಳು ನಮ್ಮ ಭಾವನೆಗಳನ್ನು ಬೆಳೆಸುತ್ತವೆ. ಈ ಭಾವನೆಗಳ ಆಧಾರದ ಮೇಲೆ ನಾವು ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತೇವೆ ಮತ್ತು ಇತರರ ವ್ಯಕ್ತಿತ್ವವನ್ನು ಅಳೆಯುತ್ತೇವೆ. ನಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಪರಿಸ್ಥಿತಿಯನ್ನು ನಿರ್ಧರಿಸಿ ನಮ್ಮ ಅಭಿಪ್ರಾಯಗಳನ್ನು ಹೇಳುತ್ತೇವೆ. ಅಭಿಪ್ರಾಯಗಳು ನಮ್ಮ ಮೂಗಿನ ನೇರಕ್ಕೆ ಸರಿಯಾಗಿ ಇರುತ್ತವೆ.
ಉದಾಹರಣೆಗೆ ನಾವು ಒಂದು ಸಂಕಷ್ಟದ ಪರಿಸ್ಥಿತಿಗೆ ಸಿಕ್ಕಿಕೊಂಡಾಗ , ನಮಗೆ ಏನೂ ಮಾಡಲು ತೋಚದೆ ಇದ್ದಾಗ ನಾವು ಸಿಟ್ಟು ಮಾಡಿಕೊಳ್ಳುತ್ತೇವೆ, ಮನಸ್ಸು ಅಶಾಂತಿಯಿಂದ ನಲಗುತ್ತದೆ. ನಮಗೆ ಆ ಪರಿಸ್ಥಿತಿ ಕೆಟ್ಟದೆಂದು ತೋರುತ್ತದೆ, ಈ ಸಂಧರ್ಭವನ್ನು ನಾವು ಕೆಟ್ಟ ಸಂಧರ್ಭವೆನ್ನುವಂತೆ ಅರ್ಥ ಮಾಡಿಕೊಳ್ಳುತ್ತೇವೆ. ಈ ಸಂಧರ್ಭದಲ್ಲಿ ನಮಗೆ ಉಂಟಾಗುವ ಭಾವನೆಯನ್ನಾಗಲಿ, ಪ್ರತಿಕ್ರಿಯೆಯನ್ನಾಗಲಿ ಬದಲು ಮಾಡಿಕೊಳ್ಳಲು ಅವಕಾಶ ಇದ್ದೇ ಇರುತ್ತದೆ. ಆದರೆ, ನಾವು ನಮ್ಮ ಅಭ್ಯಾಸಗಳ ಕಾರಣದಿಂದ ಪೂರ್ವಾಗ್ರಹ ಪೀಡಿತರಾಗಿ ಬಿಟ್ಟಿರುತ್ತೇವೆ. ನಮ್ಮ ಮನಸ್ಸು ಪೂರ್ವಾಗ್ರಹದ ಚೌಕಟ್ಟಿನಲ್ಲೇ ಸುತ್ತುತ್ತಿರುತ್ತದೆ. ಈ ಪೂರ್ವಾಗ್ರಹ ಚಿಂತನೆಯೇ ದಿಕ್ಕು, ಹಾದಿ ಮತ್ತು ಗುರಿಗಳನ್ನು ನಿರ್ದೇಶಿಸುತ್ತದೆ. ಹೀಗಾಗಿ, ನಾವು ರೀತಿ ನಿರ್ದೇಶಿತ ಹಾದಿ, ದಿಕ್ಕು ಮತ್ತು ಗುರಿಗಳತ್ತ ಸಾಗುವ ಕಾರಣ ಈ ರೀತಿಯ ಪ್ರತಿ ಚಿಂತನೆಗಳಿಗೆ ಅವಕಾಶವನ್ನೇ ಕೊಡುವುದಿಲ್ಲ. ನಮ್ಮ ಮನಸ್ಸು ಬೇರೆ ಚಿಂತನೆಯ ಕಡೆಗೆ ಸಿದ್ದಗೊಳ್ಳದ ಕಾರಣ , ಮುಕ್ತ ಚಿಂತನೆಗೆ ಅವಕಾಶವೇ ಇರುವುದಿಲ್ಲ.
ಮುಕ್ತ ಚಿಂತನೆಗೆ ಈ ಸಮಯದಲ್ಲಿ ನಾವು ಮನಸ್ಸು ಮಾಡಲಿಲ್ಲವಾದರೆ, ನಮ್ಮ ಚಿಂತನೆಯ ಹಾದಿ ಅಭ್ಯಾಸದ ಬಲದಲ್ಲಿ ಸಾಗುತ್ತದೆ. ಸಿಟ್ಟು, ದುಃಖ, ಪ್ರಚೋದನಾತ್ಮಕ ಮತ್ತು ಅಸಹಾಯಕ ಚಿಂತನೆಗಳು ನಮ್ಮೊಳಗೇ ಹಟಮಾರಿಗಳಂತೆ ನೆಲೆಸಿಬಿಡುತ್ತವೆ. ಅಭ್ಯಾಸದ ಬಂಧನಕ್ಕೆ ಬಲಿಯಾದ ನಮ್ಮ ಮನಸ್ಸು ಬೇರೆಯದನ್ನು ಚಿಂತಿಸಲು ಹೋಗದೆ ತನ್ನದೇ ಆದ ಹಳತಾದ ವಿಚಾರಕ್ಕೆ ಅಂಟಿಕೊಂಡು ಬಿಡುತ್ತದೆ. ಹಳೆಯ ಗ್ರಾಮೊಫೋನ್ ರೆಕಾರ್ಡ್ ತರಹ ಹೇಳಿದ್ದನ್ನೇ ಹೇಳುವಂತೆ ಪೂರ್ವಾಗ್ರಹ ಪೀಡಿತ ಮನಸ್ಸು ಹಳೆಯದನ್ನೇ ಚಿಂತಿಸುತ್ತದೆ. ಹೊಸ ಚಿಂತನೆಗಳಾಗಲಿ, ವಿಚಾರಗಲಾಗಲಿ ಮನದಲ್ಲಿ ಮೂಡಲು ಹಳೆಯ ಅಭ್ಯಾಸಗಳು ಆಸ್ಪದ ಕೊಡುವುದೇ ಇಲ್ಲ. ಇದರಿಂದ ನಮ್ಮ ಆಂತರಿಕ ಶಾಂತಿ ಕನಸಿನ ಮಾತಾಗಿಬಿಡುತ್ತದೆ. ಪೂರ್ವಾಗ್ರಹ ನಮ್ಮನ್ನು ಪೂರ್ತಿಯಾಗಿ ಆಳುತ್ತದೆ. ಈ ರೀತಿಯಾದ ನಮ್ಮ ನಡವಳಿಕೆ ಮತ್ತು ದಿನಚರಿಯೂ ತನ್ನದೇ ಆದ ಚೌಕಟ್ಟಿಗೆ ಒಳಪಡಿಸುತ್ತದೆ. ನಮ್ಮಂತೆ ಇತರರೂ ಏಕೆ ಯೋಚಿಸುತ್ತಿಲ್ಲ? ಎಂದು ನಮ್ಮ ಮನಸ್ಸು ಚಿಂತಿಸುತ್ತದೆ . ಕೆಲವೊಮ್ಮೆ ಇತರರು ನಮ್ಮ ಚಿಂತನೆಗೆ ಬೆಲೆ ಕೊಡದೇ ಹೋದರೆ, ಆಗ ಅಂತಹವರನ್ನು ದೂರ ಮಾಡುತ್ತೇವೆ, ಕೆಲವು ಸಂದರ್ಭಗಳಲ್ಲಿ ಅವರ ಮೇಲೆ ಸಿಟ್ಟು ತೋರಿಸುತ್ತೇವೆ . ನಮ್ಮ ನಿಲುವನ್ನು ಸಾಬೀತು ಮಾಡಲು ಪ್ರಯತ್ನಿಸುತ್ತೆವೆ. ವಿನಾಕಾರಣ ಅನ್ಯ ಮನಸ್ಕರಾಗಿಬಿಡುತ್ತೇವೆ, ಅಶಾಂತರಾಗುತ್ತೇವೆ.
ವಾಸ್ತವದಲ್ಲಿ ಮುಕ್ತ ಮನಸ್ಸಿನಲ್ಲಿ ಮೂಡುವ ಪ್ರತಿ ಭಾವನೆಯು ಸ್ವತಂತ್ರವಾಗಿರುತ್ತದೆ. ಪ್ರತಿ ಯೋಚನೆಯೂ ವಿಧವಿಧವಾಗಿರುತ್ತದೆ, ಕ್ಷಣ ಕ್ಷಣಕ್ಕೆ ಹೊಸ ಹೊಸ ಯೋಚನೆ ಬರುತ್ತಾ ನಮ್ಮ ಮುಂದೆ ಹಲವಾರು ಆಯ್ಕೆಗಳನ್ನು ಇರಿಸುತ್ತಾ, ಅಗಾಧವಾದ ಮತ್ತು ಅಸಂಖ್ಯಾತ ಯೋಚನಾಲಹರಿ ಹರಿದು ಬರುತ್ತದೆ. ಹಾದಿ, ಗುರಿ, ದಿಕ್ಕು ಇವುಗಳ ನಿರ್ಧಾರವು ಕೂಡಾ ಮುಕ್ತವಾಗಿಯೇ ಇರುತ್ತದೆ. ಇಲ್ಲಿ ಯಾವ ಚಿಂತನೆಯು ಒಂದೇ ದಿಕ್ಕಿನಲ್ಲಾಗಲಿ ಅಥವಾ ನಿಯಮಿತ ರೂಪಿನಲ್ಲಾಗಲಿ ಇರುವುದಿಲ್ಲ. ಹಲವಾರು ಅಭಿಪ್ರಾಯಗಳ ಮತ್ತು ಹಲವರ ಅನುಭವಗಳ ಆಧಾರದಲ್ಲಿ ಚಿಂತಿಸಿಸಲು ಮುಕ್ತ ಚರ್ಚೆಗೆ ಅವಕಾಶಗಳನ್ನು ತೆರೆದುಕೊಂಡಿರುತ್ತವೆ. ಜಗತ್ತು ವಿಶಾಲವಾಗಿದೆ, ಚಿಂತನೆಯ ಹರಿವು ಅಗಾಧವಾಗಿದೆ, ಹೊಸ ಹೊಸತು ಹರಿದಾಡುತ್ತಿದೆ, ದಿನ ನಿತ್ಯದ ಬದುಕು ನಿತ್ಯ ನೂತನವಾಗಿದೆ, ಈ ಬದುಕು ಸುಂದರವಾಗಿದೆ, ಹಲವು ಬಣ್ಣ, ರೂಪಗಳಲ್ಲಿ ,ಬಗೆಬಗೆಗಳಲ್ಲಿ ಪ್ರಕೃತಿ ನಿರೂಪಿತವಾಗಿದೆ ಎಂದು ಮುಕ್ತ ಮನಸ್ಸು ಕೂಗಿ ಕರೆಯುತ್ತಿರುತ್ತದೆ. ಒಬ್ಬ ಕವಿ ಹೇಳುತ್ತಾನೆ " ತೆರದ ಪುಸ್ತಕ, ಬಿಚ್ಚಿದ ಮನಸು ಎರಡು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸುಲಭ. "
ಪೂರ್ವಾಗ್ರಹಪೀಡಿತ ಮನಸ್ಸಿಗೆ ಈ ಸೊಬಗೇ ಕಾಣುವುದಿಲ್ಲ. ಕೇವಲ ಕಿಟಕಿಯ ಮರೆಯಿಂದ ಆಕಾಶ ನೋಡಿದಂತೆ ಜಗತ್ತನ್ನು ನೋಡಬೇಕಾಗುತ್ತದೆ. ಬಂಧನದಿಂದ ಹೊರಬರಲು, ಈ ಜಗತ್ತಿನ ಸೌಂದರ್ಯವನ್ನ ಸವಿಯಲು ಮೊದಲು, ನಾವು ಮನಬಿಚ್ಚಿ ನಗುವುದನ್ನು ಕಲಿಯಬೇಕಾಗುತ್ತದೆ. ಬಂದುದನ್ನು ಯಥಾಮತಿಯಾಗಿ ಸ್ವೀಕರಿಸುವ ಕಡೆಗೆ ಮನಸು ಮಾಡಬೇಕಾಗುತ್ತದೆ. ಪ್ರತಿ ಕ್ಷಣವನ್ನು ಅನುಭವಿಸುವ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ. ನಗುವಾಗ ನಕ್ಕು, ಅಳುವಾಗ ಆತ್ತು, ಖುಶಿ ಪಡುವಾಗ ಖುಷಿಪಟ್ಟು, ಸಂತೋಷ ಸವಿಯುವಾಗ ತುಂಬು ಮನಸಿನಿಂದ ಸವಿದು ಆಯಾಯ ಕ್ಷಣವನ್ನು ಅನುಭವಿಸಬೇಕಾಗುತ್ತದೆ. ಜೀವನ ಗೋಳಿನ ಕೂಪವಲ್ಲ, ನಿತ್ಯ ನೂತನ. .
೨೦೧೫ ರ ಹೊಸ ವರ್ಷ ನಮ್ಮನ್ನು ಕತ್ತಲೆಯ ಪೂರ್ವಾಗ್ರಹದಿಂದ, ಮುಕ್ತ ಬೆಳಕಿನೆಡೆಗೆ ಕರೆದೊಯ್ಯಲಿ, ಜಗದ ಸೌಂದರ್ಯ ಅರಿಯುವ ಮುಕ್ತಮನಸು ನಮ್ಮದಾಗಲಿ ಎಂದೇ ಆಶಿಸುವ.