ಬೆಳಕು
ಬೇಕುಬೇಡಗಳ ವ್ಯತ್ಯಾಸ ತಿಳಿಯದೆ
ಕಂಡದ್ದೆಲ್ಲಾ ಬೇಕೇ ಬೇಕೆಂಬ ಹುಚ್ಚು ಮೋಹಕ್ಕೆ
ಬಲಿಯಾಗಿ ಕಲೆಹಾಕುತ್ತಾ ಹಾಕುತ್ತಾ ಸಾಗುವಾಗ
ದಿನದಿಂದ ದಿನಕ್ಕೆ ಎಲ್ಲವೂ ನೀರಸವೆನಿಸಲು
ಅವ್ಯಕ್ತ ಭಯ ಎದೆಯಾಳದಲ್ಲಿ ಕಾಡಲು ಪ್ರಾರಂಭ.
ರೋಗದ ಭಯ, ವೃದ್ದಾಪ್ಯದ ಭಯ, ಸಾವಿನ ಭಯ
ವಿಚಲಿತ ಮನಸು ಕಾಣದಾ ನಾಳೆಗೆ ಹೆದರಿ
ಸುಖದ ಇಂದಿನಾ ಕ್ಷಣಗಳನು ಬಲಿಕೊಟ್ಟು ಭಯದಿ ಉಳಿಸಿ,
ನಾಳಿನಾ ಕುಡಿಕೆಗೆ ಸುರಿದು ಚಾತಕ ಪಕ್ಷಿಯಂತೆ ಕಾದೆ.
ಆ ನಾಳೆ ಇಂದಾದ ಬಳಿಕ ಎಂಬ ಪರಿಜ್ಞಾನಬಾರದೆ
ವಾತ್ತ್ಸವವನರಿಯದ ಭ್ರಾಮಿಕನಾಗಿ ಬಳಲಿದೆ.
ನಾನು ನನದೆಂಬ ವಿಪರೀತ ಮೋಹದಲಿ ಅಲೆದಾಡಿ
ನನ್ನೆಲ್ಲಾ ಭ್ರಾಂತಿಗಳ ಒಡೆತನದಿಂದ ಮೆರೆದಾಡಿ ದಣಿದು
ಮಿಗಿಲಾದ ಕಾಣದಾ ಶಕ್ತಿಯೊಂದರ ನಿಯಂತ್ರಣ ಅರಿಯದೆ ಹುಚ್ಚನಾದೆ.
ಹುಡುಕಾಟದಲಿ ಬಳಲಿ, ಸಂಪೂರ್ಣ ಶರಣಾಗಿ ಮೌನಿಯಾದೆ.
ಅರಿವಾಗಿ, ಗುರುವಾಗಿ,ಶಕ್ತಿಯಾಗಿ ಆಂತರ್ಯದಲಿ ಮೂಡಿದ್ದು
ನಾನಲ್ಲ, ಕೇವಲ ನೀನೆಂಬ ಸತ್ಯ..... ದಿವ್ಯ ಚೈತನ್ಯದ ಬೆಳಕು.
No comments:
Post a Comment