September 28, 2012

ಜೀವನದ ಸೂತ್ರ


ಗುಂಡಪ್ಪನವರು ಹೇಳುತ್ತಾರೆ 
                 ಗೌರವಿಸು ಜೀವನವ , ಗೌರವಿಸು ಚೇತನವ |
                 ಆರದೋ ಜಗವೆಂದು ಬೇಧವೆಣಿಸದಿರು|
                 ಹೋರುವುದೆ  ಜೀವನ ಸಮೃದ್ಧಿಗೋಸುಗ  ನಿನಗೆ|
                 ದಾರಿಯಾತ್ಮೊನ್ನತಿಗೆ --------ಮಂಕುತಿಮ್ಮ || 475 ||


                ಜೀವನವನ್ನು ಗೌರವಿಸು, ಇತರರನ್ನು ಗೌರವಿಸು, ಹಾಗೆಯೇ ನಿನ್ನೊಳಗಿರುವ ಚೇತನವನ್ನು ಗೌರವಿಸು.  ಬಾಡಿಗೆ ಮನೆಯೆಂದು  ಬೇಕಾಬಿಟ್ಟಿ ಜೀವಿಸಬೇಡ, ಮನೆಯನ್ನು ಹಾಳುಮಾಡಬೇಡ. ಇರುವ ತನಕವಾದರೂ ಈ ಮನೆ ನಿನ್ನ ತಲೆ ಕಾಯಬೇಡವೇ ?  ಇರುವಷ್ಟು ದಿನ ಜೀವನ ತಳ್ಳಿ ಒಂದು ದಿನ ಒಗೆದರಾಯಿತು ಎನ್ನುವ ಶುಷ್ಕ ವೇದಾಂತ ಬೇಡ. ಇರುವಷ್ಟು ದಿನ ಹೇಗಿರಬೇಕೋ ಹಾಗೆ ಇದ್ದು ಎಷ್ಟು ಗೌರವಯುತ ಜೀವನ ನಡೆಸಬೇಕೋ ಹಾಗೆ ನಡೆಸಿ, ತನ್ನಂತೆ ಇತರ ಜೊತೆಗಾರರನ್ನು ಗೌರವದಿಂದ ನಡೆಸಿಕೊಂಡು ಸಮೃದ್ಧ ಜೀವನ ನಡೆಸಿ ಕೊನೆಗೊಂದು ದಿನ ಎಲ್ಲರಲ್ಲೂ ಸೈ ಎನಿಸಿಕೊಂಡು  ಕಂತೆ ಒಗೆಯುವುದೇ ಈ ಬಾಳಿನ ಉದ್ದೇಶ. ಈ ಘನ ಉದ್ದೇಶ ತಲುಪಲು ಕ್ರಮಿಸುವ ಹಾದಿಯಿಂದ ನಮ್ಮ ಆತ್ಮೋನ್ನತಿ ಆಗಲಿ, ಜೀವನ ಸಮೃದ್ಧಿಯಾಗಲಿ, ನಮ್ಮ ಬಾಳು ಬೆಳಗಲಿ.  ಈ ಜಗಕೆ ಬಂದ ಪಾತ್ರಧಾರಿಗಳು ನಾವಾದರು ಆಡುವ ನಾಟಕ ಮಾತ್ರ ಚನಾಗಿಯೇ ಇರಬೇಕು. ನಟಿಸುವ ನಟನೆಯು ಅಷ್ಟೇ ಪರಿನಾಮಕಾರಿಯಾಗಿರಬೇಕು. ಇದೆ ಜೀವನದ ಸೂತ್ರ , ದಿವ್ಯ ಮಂತ್ರ  ಎನ್ನುವುದು ಗುಂಡಪ್ಪನವರ ಆಶಯ.

September 26, 2012

ಜೀವನದ ಪರೀಕ್ಷೆ

ಜೀವನದ ಪರೀಕ್ಷೆ

ನಮಗೆ ಜೀವನದಲ್ಲಿ ಅದೆಷ್ಟೋ ಪರೀಕ್ಷೆಗಳು ಎದುರಾಗುತ್ತವೆ.  ಇವುಗಳನ್ನು ಎದುರಿಸಲು ಎಷ್ಟೋ ತರಹದ ಪ್ರಯತ್ನ ಮಾಡುತ್ತೇವೆ. ಕೆಲವಲ್ಲಿ ಜಯವಾದರೆ, ಮತ್ತೆ ಕೆಲವಲ್ಲಿ ಸೋಲು ಅನುಭವಿಸುತ್ತೇವೆ.  ಈ ಸೋಲನ್ನು ನಾವು ನಮಗಾದ ಶಿಕ್ಷೆಯೆಂದು ಗೋಳಾಡುತ್ತೇವೆ.  ಆದರೆ, ನಾವು ಇದನ್ನು ಬೇರೆ ರೀತಿಯಲ್ಲೂ ನೋಡ ಬಹುದು.  ಪ್ರತಿನಿತ್ಯ ಮಾಡುವ ದೈಹಿಕ ಅಭ್ಯಾಸದಿಂದ ನಮ್ಮ ದೇಹ  ಸದೃಡವಾದದ್ದು ಮುಖ್ಯವೇ ಹೊರತು, ಆಟದಲ್ಲಿ ಸೋತದ್ದು ಮುಖ್ಯವಲ್ಲ.  ಹಾಗೆಯೇ, ಸೋಲು ಗೆಲುವುಗಳು ನಮ್ಮ ಮನಸ್ಸಿಗೆ ಒಂದು ಸಂಸ್ಕಾರವಾಗಬೇಕು.  ನಮ್ಮ ಮನಸ್ಸು ಜಡ್ಡು ಕಟ್ಟಿದ್ದೆ ಇಲ್ಲಿ ಆಗುವ ಪರಿಣಾಮ. ಇದನ್ನು ಅರ್ಥ ಮಾಡಿಕೊಂಡರೆ ಸೋಲು ನಮಗೆ ಗೆಲುವಿನ ಮೆಟ್ಟಿಲಾಗುತ್ತದೆ.  ಒಂದು ಮೊಗ್ಗು ಬಿರಿದರೆ, ಅರಳಿದರೆ ಅದುಮುಂದೆ ಹೀಚಾಗಿ, ಕಾಯಾಗಿ, ಹಣ್ಣಾಗುವ ಸೂಚನೆ.  ಪ್ರಮಾದವಶಾತ್  ಗಾಳಿಗೆ ಬಿದ್ದುಹೋದರೆ ಇನ್ನೊಂದು ಮೊಗ್ಗು ಬಿರಿಯಲೇ ಬೇಕು. ಸ್ವಲ್ಪ ಕಾಯಬೇಕು ಅಷ್ಟೇ.  ಹೀಗೆ ನಮ್ಮ ಮನಸ್ಸು ಸೋಲಿಗೆ ಅಂಜದೆ, ಇನ್ನೊಮ್ಮೆ ಗೆಲುವಿನ ಪ್ರಯತ್ನ ಮಾಡಿದಾಗ, ಮನದೊಳಗೆ ಹುಟ್ಟಿದ ಮೊಗ್ಗು ಅರಳಿ, ಮಾಗಿ ಸಫಲತೆಯ ದಾರಿ ಕಾಣಲು ಸಾಧ್ಯವಾಗುತ್ತದೆ.  ಆಗಲೇ ಪ್ರತಿ ಅವಕಾಶವು ಸವಾಲಾಗುತ್ತದೆ, ಪ್ರತಿ ಸವಾಲು ಅವಕಾಶವಾಗುತ್ತದೆ.

September 23, 2012

ದೊಡ್ಡವರ ದಾರಿ .......2


              ಒಮ್ಮೆ ಬಿಲ್ ಗೇಟ್ಸ್ ಊಟಕೆಂದು ಒಂದು ಸುಪ್ರಸಿದ್ದ ಹೋಟೆಲ್ಲಿಗೆ ಹೋಗಿದ್ದ.  ಊಟ ಮುಗಿಸಿದ ನಂತರ ಹಣ ಪಾವತಿಸುವ ಮುನ್ನ ವೆಟೆರಿಗೆ ಐದು ಡಾಲರ್ ಟಿಪ್ಸ್ ಕೊಟ್ಟ.  ವೇಟರ್ ಗೇಟ್ಸ್ ನನ್ನು ಆಶ್ಚರ್ಯದಿಂದ ನೋಡಿದ. 
             ಗೇಟ್ಸ್ ಆತನನ್ನು ನೋಡಿ " ಏಕೆ ? ಹೀಗೆ ಆಶ್ಚರ್ಯದಿಂದ ನೋಡುವೆ ? " ಎಂದು ವಿಚಾರಿಸಿದ. 
             " ಏನಿಲ್ಲ, ನಿನ್ನೆ ನಿಮ್ಮ ಮಗ ಈ ಹೋಟೆಲ್ಲಿಗೆ ಬಂದಿದ್ದರು. ಅವರೂ ಊಟದ ನಂತರ ನನಗೆ ಐದುನೂರು ಡಾಲರ್ ಟಿಪ್ಸ್ ಕೊಟ್ಟರು.  ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯ ಮಗನೆ ನನಗೆ ಐದುನೂರು ಡಾಲರ್ ಕೊಟ್ಟಿರಬೇಕಾದರೆ, ಇನ್ನು ಈ ಜಗತ್ತಿನ  ಶ್ರೀಮಂತ ವ್ಯಕ್ತಿಯೇ ಇಲ್ಲಿ ಬಂದು ಕೇವಲ ಐದು ಡಾಲರ್ ಟಿಪ್ಸ್ ಕೊಟ್ಟರೆ ಆಶ್ಚರ್ಯವಾಗುವುದಿಲ್ಲವೇ?"  ಎಂದು ಸಮಾಧಾನಗಾಗಿ ಹೇಳಿದ.
             ಅಷ್ಟೇ ಸಮಾಧಾನವಾಗಿ ಕೇಳಿಸಿಕೊಂಡ ಗೇಟ್ಸ್ " ನನ್ನ ಮಗ ಈ ಜಗತ್ತಿನ ಅತ್ಯಂತ ಶ್ರೀಮಂತನ ಮಗ. ಅವನಿಗೆ ಐದುನೂರು ಡಾಲರ್ ಕೊಡಲು ಆಗುತ್ತದೆ.  ಆದರೆ ನಾನು ಒಬ್ಬ ಬಡ ಸೌದೆ ಒಡೆಯುವವನ ಮಗ.  ನನ್ನ ಕೈಲಿ ಅಷ್ಟೊಂದು ಟಿಪ್ಸ್ ಕೊಡಲು ಹೇಗೆ ಸಾಧ್ಯ? "  ಎಂದು ಉತ್ತರಿಸಿದ.


September 14, 2012

ದೊಡ್ಡವರ ದಾರಿ.


ಮನೆ ದಾರಿ ಮರೆತದ್ದು!!!

Albert Einstein ರವರು ಪ್ರಿನ್ಸ್ಟನ್  ವಿಶ್ವವಿದ್ಯಾಲಯದಲ್ಲಿ ಕೆಲಸಮಾಡುತ್ತಿದ್ದಾಗ, ಒಂದು ದಿನ ಬಹಳ ಹೊತ್ತಿನವರೆಗೆ  ಅಧ್ಯಯನದಲ್ಲಿ ಮುಳುಗಿಬಿಟ್ಟಿದ್ದರು.  Albert Einstein ರವರಿಗೆ ಮನೆಯ ಜ್ಞಾಪಕ ಬಂತು.  ವೇಳೆ ನೋಡಿ ಹೊರಟು ರಸ್ತೆಗೆ ಬಂದರೆ,  ಅವರ ಮನೆ ದಾರಿಯೇ ಮರೆತು ಹೋಗಿತ್ತು.  ಒಂದು ನಿಮಿಷ ಸುಮ್ಮನೆ ನಿಂತು ಟಾಕ್ಸಿಯವನನ್ನು  ಕರೆದು " ನಿಮಗೆ Einstein ರವರ ಮನೆ ಗೊತ್ತಾ ? " ಎಂದು ಪ್ರಶ್ನಿಸಿದರು.  " ಓಹೋ, ಬನ್ನಿ ಕುಳಿತು ಕೊಳ್ಳಿ, ಕರೆದುಕೊಂಡು ಹೋಗುತ್ತೇನೆ." ಎಂದು ಬಾಗಿಲು ತೆರೆದ. ನಿರಾಳವಾಗಿ ಕಾರಿನಲ್ಲಿ ಕುಳಿತರು.  ಡ್ರೈವರ್  " ಇಷ್ಟು ಹೊತ್ತಿನಲ್ಲಿ ನೀವು Einstein ನೋಡಲು ಹೋಗುತ್ತಿದ್ದಿರಲ್ಲ, ಅವರು ನಿಮ್ಮ ನೆಂಟರೆ ? " ಎಂದ.   " ಹಾಗೇನಿಲ್ಲ,  ನಾನೇ Einstein, ನನಗೆ ಮನೆ ದಾರಿ ಮರೆತು ಹೋಗಿದೆ ಅದಕ್ಕೆ ನಿಮ್ಮ ಸಹಾಯ ಪಡೆದೆ! " ಎಂದರಂತೆ.  ಪಾಪ,  ಆ ಡ್ರೈವರ್ ದಂಗಾಗಿ ಹೋದ. ಮೊದಲ ಬಾರಿಗೆ Einstein ರನ್ನು ನೋಡಿದ ಸಂತೋಷ ಮತ್ತು  ಅವರನ್ನು ಮನೆಗೆ ಕರೆದು ಕೊಂಡು ಹೋದ ಸಂತೋಷಕ್ಕೆ  ಟಾಕ್ಸಿ ಚಾರ್ಜನ್ನು  ಪಡೆಯದೇ ಹಾಗೆ ಹೋದನಂತೆ! 


ಸಾಪೇಕ್ಷ ಸಿದ್ದಾಂತ!

            Albert Einstein ರವರು ತಮ್ಮ ಸಾಪೇಕ್ಷ ಸಿದ್ದಾಂತವನ್ನು ಒಂದು ಸುಂದರ ಉದಾಹರಣೆಯೊಂದಿಗೆ ವಿವರಿಸುತ್ತಿದ್ದರು.
            " ನೀವು ನಿಮ್ಮ ಕೈಯನ್ನು ಕಾಯುತ್ತಿರುವ ಒಲೆಯ ಮೇಲೆ ಒಂದು ನಿಮಿಷದ ತನಕ ಇಡಿ.  ಆಗ ನಿಮಗೆ ಒಂದು ನಿಮಿಷ ಮುಗಿಯುವ ಹೊತ್ತಿಗೆ ಒಂದು ಘಂಟೆಯ ಅನುಭವವಾಗುತ್ತದೆ.  ಅದೇ ನೀವು ಒಂದು ಸುಂದರವಾದ ಹುಡುಗಿಯ ಜೊತೆ ಮಾತಿಗೆ ಕೂತು ಒಂದು ಗಂಟೆ ಕಳೆದರೂ  ನಿಮಗೆ ಅದು ಕೇವಲ ಒಂದು ನಿಮಿಷದಂತೆ ಅನುಭವವಾಗುತ್ತದೆ.  ಇದೆ ಸಾಪೇಕ್ಷ ಸಿದ್ದಾಂತ.
                                                                 *************

September 7, 2012

ನಕ್ಕು ಬಿಡಿ ...........6


ಎಲ್ಲಿ ಬರೆಯಲಿ?

" ಪ್ರಿಯೆ,  ನಿನ್ನ ಹೆಸರನ್ನ ಕೈಯಿನ ಮೇಲೆ ಹಚ್ಚೆ ಹಾಕಿಸಲೋ, ಎದೆಯಮೇಲೆ ಹಚ್ಚೆ ಹಾಕಿಸಲೋ? "
" ಪ್ರಿಯಾ! ಅಲ್ಲಿ ಇಲ್ಲಿ ಹಚ್ಚೆ ಹಾಕಿಸಿಕೊಂಡು ನೀನು ನೋವು ಯಾಕೆ ತಿನ್ನಬೇಕು? ನಿನ್ನ ಆಸ್ತಿ ಪತ್ರದ ಮೇಲೆ ಸಿಂಪಲ್ಲಾಗಿ ಪೆನ್ನಲ್ಲಿ ನನ್ನ ಹೆಸರು ಹಾಕಿಸು, ಸಾಕು!"

ಖರ್ಚು  ಎಷ್ಟು?



" ಅಪ್ಪಾ,  ನಿಮ್ಮ ಮದುವೆಗೆ ಎಷ್ಟು ಖರ್ಚಾಗಿರಬಹುದು? "

"  ಇನ್ನು ಫೈನಲ್ಲಾಗಿ ಸೆಟ್ಲ್ ಆಗಿಲ್ಲ."
"  ಅಂದ್ರೆ,  ಮದುವೆ ಸಾಲ ಇನ್ನು ಇದೆಯಾ? "
"  ಇಲ್ಲಾ,  ಮದುವೆ ಮಾಡಿಕೊಂಡಿದ್ದಕ್ಕೆ ಲೆಕ್ಕ ಇಲ್ಲದ ಸಾಲಾನ ಇನ್ನು ನಾನು ತೀರಿಸ್ತಾನೆ  ಇದ್ದೀನಿ."

ಖಂಡಿತ ಹೋಗೋಲ್ಲ 

" ಇವತ್ತು ಪೋಸ್ಟ್ ಮಾಡಿದರೆ ನಾಳೆ  ಮೈಸೂರಿಗೆ ಹೋಗುತ್ತಾ? " ಎಂದು ಪೋಸ್ಟ್ ಮಾಸ್ತ್ರನ್ನ ಕೇಳಿದ.  ಅಂಚೆ ಕವರ್ ನೋಡಿದ ಪೋಸ್ಟ್ ಮಾಸ್ಟರ್ " ಖಂಡಿತಾ ಇಲ್ಲ" ಎಂದು ಖಡಾ ಖಂಡಿತವಾಗಿ ಹೇಳಿದರು.
" ಏಕೆ ಹೋಗೋಲ್ಲ? ನಾಳೆ ಈ ಪತ್ರ ಮೈಸೂರಿಗೆ ಸೇರಲೇ ಬೇಕು." ಎಂದು ಜಬರದಸ್ತಿನಲ್ಲಿ ಅಂದ
" ಹೇಳಿದೆನಲ್ಲ, ಖಂಡಿತಾ ಹೋಗೋಲ್ಲ " ಎಂದ ನಿರಾಳವಾಗಿ.
" ಯಾಕ್ರೀ ಹೋಗೋಲ್ಲ? " ಎಂದ ಸಿಟ್ಟಾಗಿ.
" ಯಾಕಂದ್ರೆ, ನೀವು ಬರೆದಿರೋ ವಿಳಾಸ ಧಾರವಾಡದ್ದು!!!!!!"

ನರಕಕ್ಕೆ!!!!



" ನೀನು ಸ್ವರ್ಗಕ್ಕೆ ಹೋಗ್ತಿಯೋ ನರಕಕ್ಕೆ ಹೋಗ್ತಿಯೋ? " ಎಂದು ಯಮ ಭಟರು ಗುಂಡನ್ನ  ಕೇಳಿದರು.

"  ನನ್ನ ಹೆಂಡ್ತಿ ಎಲ್ಲಿದಾಳೆ ಅಂತ ಸ್ವಲ್ಪ ಹೇಳ್ತೀರಾ? " ಎಂದು ತುಂಬಾ ಉತ್ಸುಕನಾಗಿ ಕೇಳಿದ.
"  ಆಕೆ ಸ್ವರ್ಗದಲ್ಲಿ ಇದ್ದಾಳೆ " ಎಂದರು ಯಮ ಭಟರು
"  ಹಾಗಾದರೆ ನನ್ನನ್ನ ನರಕಕ್ಕೆ ಕಳುಹಿಸಿಬಿಡಿ." ಎಂದು ಗುಂಡ ಅಂಗಲಾಚಿದ .



September 3, 2012

ಲಕ್ಷಾರ್ಚನೆ


             
               ಗುರುನಾಥರು ದೇವಸನ್ನಿಧಿಯಲ್ಲಿ ಉಪಸ್ಥಿತರಿದ್ದಾಗ ಈಶ್ವರನಿಗೆ ಲಕ್ಷ ಬಿಲ್ವಾರ್ಚನೆಯ ಮಾತು ಬಂತು.   ಈಶ್ವರನಿಗೆ   ಲಕ್ಷ ಬಿಲ್ವಾರ್ಚನೆಯನ್ನು  ಮಾಡಿಸುವ ಹೊಣೆ ಹೊತ್ತ ಮಹಾನುಭಾವರು  ಈ ವಿಚಾರವನ್ನು ಗುರುನಾಥರಲ್ಲಿ ಪ್ರಸ್ತಾಪಿಸಿದರು.
              " ಈ ಬಾರಿ ನಮ್ಮ ಈಶ್ವರನಿಗೆ,  ಲಕ್ಷ ಬಿಲ್ವಾರ್ಚನೆ ಮಾಡುವ ಉದ್ದೇಶ ಹೊಂದಿದ್ದೇವೆ." ಎಂದು ಹೇಳಿದರು.
              " ಬಹಳ ಸಂತೋಷ , ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿರಾ?  ಸರಿ, ಲಕ್ಷಾರ್ಚನೆ  ಎಂದರೇನು? ಸಾರ್." ಎಂದು ಮರು ಪ್ರಶ್ನೆ ಹಾಕಿದರು.
              "  ಲಕ್ಷಾರ್ಚನೆ   ಎಂದರೆ ಒಂದು ಲಕ್ಷ ಬಿಲ್ವದ ಕುಡಿ ಎಸಳುಗಳನ್ನು,  ಈಶ್ವರನಿಗೆ ಸಮರ್ಪಣೆ ಮಾಡುವುದು." ಎಂದರು.
              " ಒಂದು ಲಕ್ಷ ಬಿಲ್ವದ ಕುಡಿಗಳೇ !!(?)  ಅಂದರೆ , ಇಷ್ಟು ಸಂಗ್ರಹ ಮಾಡಲು ಸಾಕಷ್ಟು ಮರಗಳಿಂದ ಕುಯ್ಯಬೇಕು. ಸಾಕಷ್ಟು ಚಿಗುರು ಬಿಲ್ವಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಚಿಗುರುಗಳನ್ನೇ ಕುಯ್ಯುವುದು?  ಹೌದೆ? " ಎಂದರು ಸ್ವಲ್ಪ ಆತಂಕ ಮಿಶ್ರಿತ ದ್ವನಿಯಲ್ಲಿ.
              " ಹೌದು, ಈ ಎಲ್ಲ ಬಿಲ್ವ ಕುಡಿ ಎಸಳುಗಳು ಈಶ್ವರನಿಗೆ ಸಮರ್ಪಣೆಯಾಗುತ್ತದೆ. " ಎಂದು ಬೀಗುತ್ತಾ ಹೇಳಿದರು.
              " ಈ ಲಕ್ಷ ಕುಡಿಗಳನ್ನು ಕೊಯ್ಯುವ ಮೊದಲು ಆ ಬಿಲ್ವ ಗಿಡಕ್ಕೆ ಒಂದಷ್ಟಾದರೂ ನೀರನ್ನು ಯಾರೋ ಹಾಕಿರಬೇಕಲ್ಲವೇ?  ಹಾಕಿ ಸಾಕಿರಬೇಕಲ್ಲವೇ?  ಹೀಗೆ ಪೋಷಣೆ ಯಾದರೆ  ಗಿಡದಲ್ಲಿ ಚಿಗುರು ಕಾಣಿಸಿಕೊಳ್ಳುತ್ತದೆ. ಆ ಚಿಗುರನ್ನು ಗಿಡ  ಕಳೆದು ಕೊಂಡರು ಮತ್ತೆ ನೀರು ಗೊಬ್ಬರ ಬಿದ್ದರೆ ಮತ್ತೆ ಚಿಗುರು ಒಡೆಯಬಹುದು. ಅಲ್ಲವೇ ಸಾರ್!? " ಎಂದು ಪ್ರಶ್ನಿಸಿದರು ಗುರುನಾಥರು.
              " ಹೌದು........ ಹೌದು.." ಎಂದು ತಲೆ ತೂಗಿದರು.
              " ಈಗ..... ನೀವು ಯಾರೋ ಬೆಳೆಸಿದ ಗಿಡ ಅಥವಾ ಮರದಿಂದ ಕುಡಿ ಎಸಳುಗಳನ್ನು ತಂದು ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿದ್ದಿರ.   ನೀವು ಆ ಗಿಡಗಳಿಗೆ ಈ ಮುಂಚೆ ಎಷ್ಟು ಕೊಡ ನೀರು ಹಾಕಿದ್ದೀರಾ?  ಎಷ್ಟು ಗೊಬ್ಬರ ಹಾಕಿದ್ದೀರ? ಏನೂ ಮಾಡದೆ ಯಾರೋ ಬೆಳೆಸಿದ ಮರದಿಂದ ಅದರಲ್ಲೂ ಕುಡಿ ಎಸಳು ಕುಯ್ಯ್ದು,   ಚಿಗುರನ್ನು ಹಾಳುಮಾಡಿ ಈಶ್ವರನ ತಲೆಯಮೇಲೆ ಹಾಕಿದರೆ ಈಶ್ವರ ಮೆಚ್ಚುತಾನೆಯೇ ............ಸಾರ್?" ಎಂದು ಸರಳವಾದ ಸಿದ್ದಾಂತವನ್ನು ಅವರ ಮುಂದೆ ನಿರ್ಲಿಪ್ತರಾಗಿ ಇಟ್ಟುಬಿಟ್ಟರು.
              ಈ  ತರಹದ ಚಿಂತನೆಯಾಗಲಿ,   ವಿಚಾರವಾಗಲಿ ಅವರ ಕನಸಿನಲ್ಲೂ ಬಂದಿರಲಿಕ್ಕೆ ಸಾಧ್ಯವಿಲ್ಲ.  ಮಿಂಚಿನಂತೆ ಬಂದ ಈ ಪ್ರಶ್ನೆ ಆ ಮಹಾನುಭಾವರನ್ನು ತಬ್ಬಿಬ್ಬು ಮಾಡಿತು. ಏನು ಹೇಳಲು ತೋಚದೆ  ಕುಬ್ಜರಾದರು.  
              " ಇದೆಲ್ಲ ಕಕ್ಕುಲಾತಿ ಸಾರ್......ಬರಿ ಕಕ್ಕುಲಾತಿ. " ಎಂದು ತಲೆ ಅಲ್ಲಾಡಿಸಿದರು.
              ಸಾವರಿಸಿಕೊಂಡು " ಹಾಗಾದರೆ ಲಕ್ಷ ಬಿಲ್ವಾರ್ಚನೆ ಮಾಡುವುದು ಬೇಡವೇ? " ಎಂದು ಅತ್ಯಂತ ನಿರಾಸೆಯಿಂದ ಕೇಳಿದರು.
               " ನಾನೆಲ್ಲಿ ಹಾಗೆ  ಹೇಳಿದೆ?" ಎಂದು ಸುಮ್ಮನಾದರು 
               " ಹಾಗಾದರೆ, ಲಕ್ಷಾರ್ಚನೆ ಮಾಡುವ ಬಗೆಯಾದರೂ ಹೇಗೆ? " ಎಂದು ವಿನೀತರಾಗಿ ಪ್ರಶ್ನಿಸಿದರು.
               " ಲಕ್ಷ್ಯದಿಂದ ಒಂದು ಬಿಲ್ವದ ಎಸಳನ್ನ ಪರಮ ಭಕ್ತಿಯಿಂದ ಈಶ್ವರನ ತಲೆಯ ಮೇಲೆ ಇರಿಸಿ ಧನ್ಯತೆಯನ್ನ ಹೊಂದುವುದು.  ಭಕ್ತಿ, ಪ್ರೇಮ, ಶ್ರದ್ಧೆ  ಇಲ್ಲದೇ ಒಂದು ಲಕ್ಷ ಹಾಕಿದರು ಅಷ್ಟೇ, ಒಂದು ಕೋಟಿ  ಹಾಕಿದರು ಅಷ್ಟೇ! ಬರಿ ತೋರಿಕೆಯಾಗುತ್ತೆ ,ಆಡಂಬರವಾಗುತ್ತೆ " ಎಂದು ತಮ್ಮ ಮಾತನ್ನು ಮುಗಿಸಿದರು.
                ಇಂದಿಗೂ ಗುರುನಾಥರ  ಈ ಮಾತು ನಮ್ಮನ್ನ ಭಾವ ಪರವಶರನ್ನಾಗಿ ಮಾಡುತ್ತದೆ.  ಭಗವಂತನ ಮುಂದೆ ನಿಂತಾಗ ಲಕ್ಷ್ಯವಿಡಬೇಕೆಂಬ ಮಾತು ಪ್ರತಿಸಾರಿಯೂ ಎಚ್ಚರಿಸುತ್ತದೆ.  ಇಂತಹ ಗುರುನಾಥರನ್ನು ಪಡೆದ ನಾವೇ ಧನ್ಯರು.

(ನನ್ನ ಆತ್ಮೀಯರೊಬ್ಬರು ಗುರುನಾಥರ ಬಳಿ ಹೋದಾಗ ಈ ಘಟನೆ ನಡೆದದ್ದು. ಅವರು ನೀಡಿದ ವಿವರಣೆ ಆಧರಿಸಿ  ಆ ಘಟನೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ)