May 16, 2012

ಮುಕ್ತಿ ........................ಒಂದಷ್ಟು ಹರಟೆ

ಮುಕ್ತಿ ........................ಒಂದಷ್ಟು ಹರಟೆ 


ಸಾಮಾನ್ಯವಾಗಿ ಹತ್ತಿರದವರು    ನಿಧನ ಹೊಂದಿದರೆ ಬಂಧುಮಿತ್ರರೆಲ್ಲರು ಒಂದೆಡೆ ಸೇರಿ ಎರಡು ನಿಮಿಷ ಮೌನದಿಂದ ಮೃತರ ಆತ್ಮಕ್ಕೆ ಶಾಂತಿ ಕೋರುವುದು ವಾಡಿಕೆಯಾಗಿದೆ. ಮೃತರ ಆತ್ಮಕ್ಕೆ ಮುಕ್ತಿ ಸಿಕ್ಕಲಿ, ಸದ್ಗತಿ ದೊರಕಲಿ ಎಂದು ಸಾಮೂಹಿಕವಾಗಿ ಎಲ್ಲರು ಪ್ರಾರ್ಥನೆ ಸಲ್ಲಿಸುತ್ತಾರೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂಬ ಸಲುವಾಗಿ ಮೃತರ ಮಕ್ಕಳು ಮತ್ತು ಸಂಬಂಧಿಗಳು  ಶ್ರಾದ್ದಾದಿ ಕರ್ಮಗಳನ್ನು ಮಾಡುತ್ತಾರೆ, ಮೃತರ ಹೆಸರಿನಲ್ಲಿ ದಾನ ಧರ್ಮಗಳನ್ನು ಮಾಡುತ್ತಾರೆ. ಯಥಾನುಶಕ್ತಿ ಅನ್ನದಾನ ಮಾಡುತ್ತಾರೆ. ಈ ಎಲ್ಲಾ ಪ್ರಾರ್ಥನೆ, ದಾನ- ಧರ್ಮ  ಇತ್ಯಾದಿಗಳು ಮೃತ ವ್ಯಕ್ತಿಗೆ ನಾವು ಸೂಚಿಸುವ ಗೌರವವೆ ಆಗಿರುತ್ತದೆ. ಹೀಗೆಲ್ಲ ಮಾಡಿದ ನಂತರ ಮೃತ ವ್ಯಕ್ತಿಗೆ ಸದ್ಗತಿ ದೊರೆಯಿತೆಂದು ನಾವು ಸಮಾಧಾನ ಹೊಂದುತ್ತೇವೆ.

ಇಲ್ಲಿ ಪ್ರಶ್ನೆ ಸಹಜವಾಗಿ ನನಗೆ ಬಂದದ್ದು  ಏನೆಂದರೆ, ಬರಿ ಇಷ್ಟರಿಂದಲೇ ಮೃತನಿಗೆ  ಸದ್ಗತಿ ಅಥವಾ ಮುಕ್ತಿ  ಪ್ರಾಪ್ತವಾಗಲು ಸಾಧ್ಯವೇ?  ಜೀವಂತ ಇದ್ದಾಗ ಸಂಘರ್ಷಗಳ ಒಡನಾಟದಲ್ಲಿದ್ದು   ಸಾಯುವವರೆಗೂ ಲೌಕಿಕದಲ್ಲಿ ಒಂದಲ್ಲ ಒಂದಕ್ಕೆ ಅಂಟಿಕೊಂಡು, ಮುಕ್ತಿಯ ಬಗ್ಗೆ ಸ್ವಲ್ಪವು ಪ್ರಯತ್ನ ಪಡದೆ ಇರುವ  ವ್ಯಕ್ತಿಗೆ , ಸತ್ತ ನಂತರ ಬಂಧು ಮಿತ್ರರು ಮಾಡುವ ಪ್ರಾರ್ಥನೆ ಅಥವಾ ನಡೆಸುವ ಉತ್ತರ ಕ್ರಿಯಾದಿಗಳಿಂದ  ಮುಕ್ತಿ ಸಿಗುವುದು ಇಷ್ಟು ಸುಲಭವಾಗಿ ಸಾಧ್ಯವೇ?  ಮುಕ್ತ ಜೀವನ ನಡೆಸದ, ಮುಕ್ತಿಗಾಗಿ ಶ್ರಮಿಸದ ಜೀವಿಗೆ ಮುಕ್ತಿ ದೊರೆಯುವುದು ಸಾಧ್ಯವಿಲ್ಲ, ಇದು ಕೇವಲ ಭ್ರಮೆ ಎಂಬುದು ಬಲ್ಲವರ, ಹಿರಿಯರ ಮತ್ತು ವೇದಾಂತದ ಮಾತು.

" ಯಾರಿಗೆ  ಬದುಕಿರುವಾಗ ಮುಕ್ತಜೀವನ ನಡೆಸಲು  ಸಾಧ್ಯವಾಗಿರುವುದಿಲ್ಲವೋ, ಅವರಿಗೆ ಸತ್ತ ಮೇಲೂ ಮುಕ್ತಿ ಸಿಗಲು ಸಾಧ್ಯವಿಲ್ಲ." ಎನ್ನುತ್ತಾರೆ ಶ್ರೀ ರಾಮಕೃಷ್ಣರು.   " ದ್ವಂದ್ವದಿಂದ ಮೊದಲು ಮುಕ್ತಿ ಪಡೆ "  ಎಂದು ನಮ್ಮನ್ನು ಎಚ್ಚರಿಸುತ್ತಾರೆ. ಇದನ್ನು  ಒಂದು ಚಿಕ್ಕ ಉದಾಹರಣೆಯಿಂದ ವಿವರಿಸುತ್ತಾರೆ.    " ಒಂದು ಗಿಡಕ್ಕೆ ಯಾವಾಗ ಏನು ಹಾಕಿದರು ಸ್ವೀಕರಿಸುತ್ತದೆ.  ಇಲ್ಲಿ ಯಾವ ಪ್ರತಿಭಟನೆ ಇರದು. ಸಂತಸ ಇರದು. ನಿರಾಶೆಯೂ ಇರದು. ಮಣ್ಣಿಗೆ ಬೆರೆತ ಎಲ್ಲವು ಕರಗುತ್ತದೆ. ಇದು ಭಗವಂತನ ನಿಯಮ ಎಂಬಂತೆ ಎಲ್ಲವನ್ನು ಸ್ವೀಕರಿಸಿ ಕರಗಿಸಿಕೊಂಡು ಬಿಡುತ್ತದೆ.    ಮುಕ್ತವಾಗಬೇಕೆಂದು ಬಯಸುವ  ನಮ್ಮ ಮನಸ್ಸು ಹೀಗೆಯೇ  ಇರಬೇಕಾಗುತ್ತದೆ.  ಸುಖ- ದುಃಖ, ಕಹಿ -ಸಿಹಿ, ನೋವು- ನಲಿವು, ಗೌರವ -ಅಗೌರವ, ಮಾನ- ಅವಮಾನ, ಇತ್ಯಾದಿ ಇತ್ಯಾದಿಗಳ ದ್ವಂದ್ವಗಳನ್ನು ಸಮವಾಗಿ ಅನುಭವಿಸುತ್ತ ಜೀರ್ಣಿಸಿ ಕೊಳ್ಳಬೇಕಾಗುತ್ತದೆ."  ಹೌದು, ಒಂದು ಬಂದ ನಂತರ ಇನ್ನೊಂದು ಬರಲೇ ಬೇಕು, ಇದು ಜಗತ್ತಿನ ನಿಯಮ. ಈ ಸತ್ಯವನ್ನು ಅರ್ಥ ಮಾಡಿಕೊಂಡಾಗ ನಮಗಿರುವ ದ್ವಂದ್ವಗಳು ಹೆಚ್ಚು ಪ್ರಾಮುಖ್ಯತೆ ಪಡೆಯುವುದಿಲ್ಲ.  ಮೋಹದ ಪೊರೆ ತನಗೆ ತಾನೇ ಕಳಚುತ್ತದೆ.  

ಮುಕ್ತಿ ಎಂದರೆ ಬಿಡುಗಡೆ.  ಜೀವನದಲ್ಲಿ ಮುಕ್ತಸ್ಥಿತಿ ಹೊಂದುವುದು ಎಂದರೆ ಪ್ರತಿಯೊಂದರಿಂದ ಬಿಡಿಸಿಕೊಳ್ಳುವುದು. ಒಂದೇ ಸಲಕ್ಕೆ  ಎಲ್ಲವನ್ನು ಬಿಡಿಸಿ ಕೊಳ್ಳಲು ಸಾಧ್ಯವಿಲ್ಲ.  ಸ್ವಲ್ಪ ಸ್ವಲ್ಪವಾಗಿ ನಿಧಾನವಾಗಿ ಗೋಜಲು ಮಾಡಿಕೊಳ್ಳದಂತೆ ಬಿಡಿಸಿ ಕೊಳ್ಳ ಬೇಕಾಗುತ್ತದೆ.   ಬೆಟ್ಟ ಹತ್ತಿದಂತೆ.  ಒಂದೊಂದೇ ಮೆಟ್ಟಿಲುಗಳಂತೆ ಮೇಲೇರಬೇಕು. ಮೇಲೆ ಏರುವಾಗ ನಾವು ಎಷ್ಟು ಮೋಹ ಕಳಚುತ್ತೆವೋ ಅಷ್ಟು ನಮ್ಮ ದೇಹ, ಮನಸ್ಸು ಹಗುರವಾಗುತ್ತ ಹೋಗುತ್ತದೆ. ಬೆನ್ನಿನ ಮೇಲಿನ ಹೊರೆಯನ್ನು ಕಡಿಮೆ ಮಾಡಿಕೊಂದಷ್ಟು  ಮುಕ್ತಿಯ ಬೆಟ್ಟ ಏರುವುದು ಸುಲಭ. ಮೇಲೆ ಏರುತ್ತ ಸಾಗಿದಷ್ಟು ದಾರಿ ಸುಗಮವಲ್ಲ. ಕಿರಿದಾದ ದಾರಿಯೇ.  ಸುಸ್ತು ಜಾಸ್ತಿಯಾದಾಗ ಅಲ್ಲೇ ಕೂತು, ಸ್ವಲ್ಪ ವಿಶ್ರಾಮ ಪಡೆದು ಸ್ವಲ್ಪ ನಮ್ಮ ಗಂಟನ್ನು ಕರಗಿಸಿ ಮುಂದಿನ ಪ್ರಯಾಣಕ್ಕೆ ಸಜ್ಜಾಗುವುದು.   ಹೀಗೆ ಎಷ್ಟು ನಮ್ಮ ಹೊರೆ ಕಡಿಮೆಯಾಗುವುದೋ ಅಷ್ಟು ನಾವು ಮುಕ್ತ ಪ್ರಪಂಚಕ್ಕೆ ಹತ್ತಿರವಾಗುತ್ತ ಹೋಗುತ್ತೇವೆ.  ಈ ಹೊರೆಯೇ ನಮ್ಮ ಪಾಪದ ಗಂಟು! ಈ ಗಂಟನ್ನು ಕರಗಿಸದೆ ವಿಧಿಯಿಲ್ಲ.  ಅದನ್ನು ಕರಗಿಸುವ ತನಕ ಅದು ನಮ್ಮ ಬೆನ್ನು  ಬಿಟ್ಟು ಬೇರೆ ಎಲ್ಲೂ ಹೋಗದು. ಇದನ್ನು ಬೇರೆ ಯಾರಿಂದಲೂ ಹೊರಲಾಗದು. ಏಕೆಂದರೆ ಇದನ್ನು ಬಹಳ ಇಷ್ಟ ಪಟ್ಟು ಹೊತ್ತುಕೊಂಡವರು  ನಾವೇ. ಈಗ ಬೇಡವೆನ್ನಲು ಅದು ಬಿಡುವುದೇ?


ಈ ಜಗತ್ತಿನಲ್ಲಿ ಪ್ರತಿ ಜೀವಿಯು ತನ್ನ ಮುಕ್ತಿಗೆ ತಾನೇ ಶ್ರಮಿಸ ಬೇಕೇ ವಿನಃ ಬೇರೆ ಯಾವ ಮಾರ್ಗವು ಇಲ್ಲ .  ತನ್ನ ಉದ್ದಾರ ತನ್ನಿಂದಲೇ ಸಾಧ್ಯವಾಗಬೇಕು.  ಇದಕ್ಕೆ ಒಂದು  ಸುಲಭ ಮಾರ್ಗವೆಂದರೆ,  ಶಾಂತಿ ಬೇಡುವವನು ಇತರರಿಗೆ ಶಾಂತಿ ನೀಡಬೇಕು.  ನೆಮ್ಮದಿ ಬೇಕೆಂದರೆ ಇತರರಿಗೆ ನೆಮ್ಮದಿ ನೀಡಬೇಕಾಗುತ್ತದೆ.  ಸುಖ ಬೇಕೆಂದಾಗ ಮತ್ತೊಬ್ಬರಿಗೆ ಸುಖ ಕೊಡಬೇಕಾಗುತ್ತದೆ.    ಹೀಗೆ ನಮಗೇನು ಬೇಕೋ ಅದನ್ನು ನೀಡಲು ಕಲಿತಾಗ ನಮಗೆ ಅನಾಯಾಸವಾಗಿ ಎಲ್ಲವು ಸಿಗುತ್ತದೆ. ಇದೆ ರೀತಿ ಮುಕ್ತಿ ಕೂಡ.   ನಾವು ಎಲ್ಲ ಬಂಧನಗಳಿಂದ   ಮುಕ್ತರಾದಾಗ, ಮುಕ್ತಿ ನಮಗೆ ಸಿಗಲೇಬೇಕು.  ಇದು ಬರೆದಷ್ಟು ಸುಲಭವಲ್ಲ. ಅಂದುಕೊಳ್ಳುವಷ್ಟು ಕಷ್ಟವು ಅಲ್ಲ. ಆದರೆ,ಕಷ್ಟಸಾಧ್ಯ.ನಿತ್ಯದಲ್ಲಿ ಸಾಧನೆ ಮಾಡುವ ಸಂಕಲ್ಪಮಾಡಿದರೆ, ನಿತ್ಯದಲ್ಲಿ ಅನುಷ್ಠಾನ ಮಾಡಿದರೆ ಖಂಡಿತ ಸಾಧ್ಯವಾಗುತ್ತದೆ. ನಾವು ಪ್ರಯತ್ನಶೀಲರಾಗಬೇಕಷ್ಟೇ.  ಇದಕ್ಕೆ ನೀವೇನು ಹೇಳುತ್ತಿರಾ?.............
ಹೆಚ್ ಏನ್ ಪ್ರಕಾಶ್ 
16 05 2012

5 comments:

  1. ನಾನು ಎನ್ನುವುದು ಅಜ್ಞಾನ..ನನ್ನಿಂದಲೇ ಎನ್ನುವುದು ಅವಿವೇಕ..ನಾನೇ ಎನ್ನುವುದು ಅಹಂಕಾರ..ಪ್ರಪಂಚದಲ್ಲಿ ದೇವರೇ ಸತ್ಯ ನಿತ್ಯ..ಇದು ಅಣ್ಣಾವ್ರ ಭಕ್ತ ಪ್ರಹ್ಲಾದ ಸಿನಿಮಾದ ಸಂಭಾಷಣೆ..ಇದೆ ರೀತಿ..ಎಲ್ಲಿವರೆಗೆ ನಮ್ಮ ಬುತ್ತಿಯನ್ನ ನಾವೇ ಹೊತ್ತುಕೊಂಡು ಅಲೆಯುತ್ತೆವೆಯೋ..ಅಲ್ಲಿಯ ತನಕ ನೆರಳಿನ ಹಾಗೆ ಹಿಂದೆ ಬರುತ್ತಲೇ ಇರುತ್ತದೆ..
    ನಮ್ಮ ಪಾಪದ ಗಂಟನ್ನು ಚಾರಣದ ಊಟದ ಬುಟ್ಟಿಯ ಗಂತಿನಹಾಗೆ ಹೊರಬೇಕು..ಅದು ಕರಗುತ್ತಾ ಕರಗುತ್ತಾ..ನಮ್ಮ ಭಾವ, ಭಾವನೆ, ಮನಸು ಕೂಡ ಹಾಗೆ ಕರಗಿ ನೀರಾಗಿ..ಹಗುರವಾಗುತ್ತದೆ..
    ನಾವು ಎನ್ನುವುದು ಇದ್ದರೆ..ನಾನು ಎನ್ನುವುದು ದೇಹದ ಕದ ತೆಗೆದು ಹೊರಗೆ ಹೋಗುತ್ತದೆ...ಇದೆ ನಿತ್ಯ ಸತ್ಯ...ಅದೇ ಅಲ್ಲವೇ ಮುಕ್ತಿಗೆ ಸಾಧನೆ..

    ReplyDelete
    Replies
    1. ಆತ್ಮೀಯ ಶ್ರೀಕಾಂತ,
      ನಾನು ಎಂಬ ಅಹಂ ಎಲ್ಲಿಯವರೆಗೆ ನಮ್ಮ ಜೊತೆ ಇರುತ್ತದೋ ಅಲ್ಲಿಯ ತನಕ ಮುಕ್ತಿ ಕನಸಿನ ಗಂಟು. ಮುಕ್ತನ ಮನಸ್ಥಿತಿಯಲ್ಲಿ 'ನಾನು' ನೀನಾಗಿಬಿಟ್ಟಿರುತ್ತದೆ. ಅವನಲ್ಲಿ ದ್ವಂದ್ವಕ್ಕೆ ಅವಕಾಶವೇ ಇಲ್ಲ. ಏಕಾತ್ಮ ಭಾವದಲ್ಲಿ ಇರುತ್ತಾನೆ. ಹೀಗಾಗಿ ಎಲ್ಲದರಿಂದ ಅವನು ಮುಕ್ತ. ನಿನ್ನ ಅನಿಸಿಕೆಗೆ ಧನ್ಯವಾದಗಳು.

      Delete
  2. These are certain things that are known to everybody, but no one ever cares to follow. If we see some one following them if not we support him/her at least we should not demotivate...
    The first question that knocked my mind while reading this was how much we have these things in practice... If we can answer these questions to ourselves and put them in practice then we need not go anywhere else for mukti...

    ReplyDelete
  3. ಆತ್ಮೀಯ ಪ್ರಕಾಶರೇ,
    ಉತ್ತಮ ವಿಚಾರ ಪ್ರಸ್ತುತ ಪಡಿಸಿದ್ದೀರಿ. ಜೀವನದಲ್ಲಿ ಅನುಭವವೇ ದೊಡ್ಡ ಗುರು. ಅನುಭವದಿಂದ ನಮಗೆ ಅರಿವು ಉಂಟಾಗುವ ವೇಳೆಗೆ ಜೀವನದ ಬಹು ಅಮೂಲ್ಯ ಭಾಗ ಕಳೆದು ಹೋಗಿರುವುದು ಒಂದು ವಿಪರ್ಯಾಸ. ವಂದನೆಗಳು.
    -ನಾಗರಾಜ್.

    ಆತ್ಮೀಯ ನಾಗರಾಜ್,
    ನಿಮ್ಮ ಮಾತು ಸತ್ಯ. ಉಳಿದಿರುವಷ್ಟು ದಿನವನ್ನಾದರೂ ಅಮುಲ್ಯವನ್ನಾಗಿ ಮಾಡಿಕೊಳ್ಳಲು ಅಡ್ಡಿ ಇಲ್ಲ.
    ವಂದನೆಗಳು.
    ಪ್ರಕಾಶ್

    ReplyDelete