May 23, 2012

ಹಣ ...........................ಒಂದಷ್ಟು ಹರಟೆ

ಹಣ ...........................ಒಂದಷ್ಟು ಹರಟೆ 

ಒಮ್ಮೆ  ನನಗೆ ನಾನೇ ಒಂದು ಪ್ರಶ್ನೆಯನ್ನು ಹಾಕಿಕೊಂಡೆ.  ನನಗೆ ಎಷ್ಟು ಹಣ ಸಿಕ್ಕರೆ ನಾನು ಸಂತೋಷವಾಗಿ ಸುಖವಾಗಿ ಇರಬಹುದು? ಒಂದು ಲಕ್ಷ, ಹತ್ತು ಲಕ್ಷ, ಒಂದು ಕೋಟಿ, ಹತ್ತು ಕೋಟಿ, ಹೀಗೆ ಲೆಕ್ಖಚಾರ ಮುಂದುವರೆಯಿತು. ಆಯಿತು, ಇಷ್ಟು ಹಣ ಸಿಕ್ಕರೆ ನಾನು ಏನೇನು ಮಾಡಬೇಕು? ಎಂದು ನನ್ನ ಯೋಚನಾ ಲಹರಿಯನ್ನು ಹರಿಯಲು ಬಿಟ್ಟೆ.   ನಾನು ಸುಮ್ಮನೆ ಏನೂ ಕೆಲಸ ಮಾಡದೆ ಕೂಡಬಹುದೇ?  ಈ ಹಣವನ್ನು ಬೇರೆಲ್ಲೋ ಹೂಡಿಕೆಮಾಡಿ ಹೆಚ್ಚು ಹಣ ದುಡಿಯಲು ಪ್ರಯತ್ನಿಸಬಹುದೇ? ಇರುವ ಹಣದಲ್ಲಿ ಆಸ್ತಿ ಮಾಡಿ ಅದನ್ನು ನೋಡಿ ಸುಖ ಪಡಬಹುದೇ?  ಬ್ಯಾಂಕಿನಲ್ಲಿ ತೊಡಗಿಸಿ ಬರುವ ಬಡ್ಡಿಯಲ್ಲಿ ಸಂತೋಷಿಸಬಹುದೇ? ವ್ಯಾಪಾರ ಮಾಡಿ ಸುಖ ಕಾಣಬಹುದೇ?  ದಾನ ಧರ್ಮ ಮಾಡಬಹುದೇ? ಹೀಗೆ ಎಲ್ಲ ಯೋಚನೆಗಳು ನನ್ನನ್ನು ಕಾಡಲು ಪ್ರಾರಂಭವಾದಾಗ, ನನ್ನ  ಸುಖದ ಕನಸಿಗಿಂತ ಗೊಂದಲಗಳೇ ಜಾಸ್ತಿಯಾಯಿತು. ಇದು ಕೇವಲ ಯೋಚನೆ ಅಷ್ಟೇ!  ಆಗಲೇ ನನ್ನ ಸುಖದ ಒಂದೆರಡು ಕ್ಷಣಗಳು ಹಾರಿಹೋದವು.  ಹಣ ಇನ್ನು ಬಂದಿಲ್ಲ, ಯೋಚನೆಯ ಹಂತದಲ್ಲಿದೆ, ಆಗಲೇ ಅದೆಷ್ಟು ಗೊಂದಲ?  ಇನ್ನು ನನ್ನ ಕೈಗೆ ನಾನು ಅಂದುಕೊಂದಷ್ಟು               ಹಣವೇನಾದರೂ ಬಂದುಬಿಟ್ಟರೆ ನನ್ನ ಕಥೆ ಮುಗಿಯಿತು.  ನಾನು ಬಯಸುವ ಸುಖಕ್ಕಿಂತ ಕಷ್ಟ,  ಗೊಂದಲಗಳೇ ಜಾಸ್ತಿ ಎನಿಸಲು ಪ್ರಾರಂಭವಾಯಿತು.

ನಾನು ಕೆಲಸಕ್ಕೆ ಸೇರಿ ಸಂಪಾದನೆ ಮಾಡಲು ಪ್ರಾರಂಭಿಸಿದ ನಂತರ ಇಲ್ಲಿಯತನಕ ಅದೆಷ್ಟೋ ಸುಖದ ಕನಸನ್ನು ಕಂಡಿದ್ದೇನೆ.  ಅದನ್ನು ಪಡೆಯಲು ಸಾಹಸ ಮಾಡಿ ಪದೆದ್ದಿದ್ದೇನೆ.  ಆ ಕನಸು ನನಸಾದಾಗ ಒಂದೆರಡು ದಿನಗಳಷ್ಟು  ಸಮಯ ಸುಖದ ಭ್ರಮೆಯಲ್ಲಿದ್ದು  ನಂತರ ಇನ್ನೊಂದು ಸುಖದ ಕಡೆ ಮನಸ್ಸು ವಾಲಿಕೊಂಡಾಗ ಆ ಸುಖದ ಬೆನ್ನೆರಲು  ಪ್ರಾರಂಭ. ಹೀಗೆ ಎಷ್ಟೋ ಸಲ ಮಾಡಿ ಸೋತಿದ್ದೇನೆ. ಪ್ರತಿ ಸಾರಿಯಲ್ಲೂ ಏನಾದರೊಂದು ಆಸೆಯ ಭ್ರಮೆ.   ಇದೇನು ಹುಚ್ಚು?   ಎಂದು ನಾನೇ ಕೂತು ಯೋಚಿಸುವಾಗ.......... ಈಗೇನು  ಕಡಿಮೆಯಾಗಿದೆ?  ಕೈ ತುಂಬಾ ಸಂಬಳ, ಇರಲು ಸ್ವಂತ ಮನೆ , ಓಡಾಡಲು ವಾಹನ, ಇನ್ನೇನು ಬೇಕು?  ನೆಚ್ಚಿನ ಮಡದಿಯ ಜೊತೆ ಸುಖವಾಗಿರುವುದ ಬಿಟ್ಟು ಬೇರೇನೋ ಆಸೆ ಏಕೆ? ಇರುವಷ್ಟರಲ್ಲಿ ತೃಪ್ತಿಯಿಂದ ಇರಬಹುದಲ್ಲವೇ? ಎಂದು ಒಂದೆರಡು ಕ್ಷಣ ಯೋಚಿಸುತ್ತ ಕೂತಾಗ ಅನಿಸುವುದು ಇಷ್ಟೇ.   ಸಾಕು, ಇನ್ನು ಸಾಕು.  ಭಗವಂತ ಏನು ಕೊಟ್ಟಿದ್ದಾನೋ ಅಷ್ಟು ಸಾಕು, ಇದ್ದುದರಲ್ಲೇ ನೆಮ್ಮದಿ ಕಾಣದಿದ್ದರೆ, ಸುಖ ಬೇರೆ  ಎಲ್ಲಿ ಸಿಗಬೇಕು?  ಎಂದು ಪ್ರಶ್ನಿಸಿಕೊಂಡಾಗ ಮನಸ್ಸು ಹಗುರವಾಗುತ್ತದೆ, ತೃಪ್ತಿಯ ಭಾವ ಹೊರಸೂಸುತ್ತದೆ.

ನಮ್ಮಲ್ಲಿ ಎಷ್ಟೇ ಹಣವಿದ್ದರು, ಆಸ್ತಿ ಅಂತಸ್ತು ಇದ್ದರೂ ಅದು ಅಂದಿನ ಅವಶ್ಯಕತೆ ಪೂರೈಸುವಷ್ಟಾದರೆ ಸಾಕು.  ನಮ್ಮ ನಿತ್ಯದ ಅವಶ್ಯಕತೆಗೆ  ಎಷ್ಟು ಬೇಕು?  ಮಿಕ್ಕಿದ್ದು ಎಷ್ಟೇ ಇದ್ದರೂ ಅದು ಕೇವಲ ನಗದು ರೂಪದಲ್ಲೋ ಅಥವಾ ವಸ್ತು ರೂಪದಲ್ಲೋ ಇರಬಹುದು ಅದರಿಂದ ನಮಗೆ ಅಂದಿಗೆ ಏನೂ ಉಪಯೋಗಕ್ಕೆ ಬಾರದು.  ಮುಂದೆ ಯಾವತ್ತೋ ಉಪಯೋಗಕ್ಕೆ ಬರುತ್ತದೆ. ಆದರೆ, ಇಂದಿಗೆ ಅದು ನಿಷ್ಪ್ರಯೋಜಕ.  ಸುಖವನ್ನು ಈ ಕ್ಷಣದಲ್ಲೇ ಪಡೆಯಬೇಕೆ ವಿನಃ ಮುಂದಿನ ಕ್ಷಣಕ್ಕೇ ಕಾಯುವುದಲ್ಲ. ಏಕೆಂದರೆ, ಮುಂದಿನ ಕ್ಷಣವು ಏನೆಂದು ಯಾರಿಗೂ ಗೊತ್ತಿಲ್ಲದ ಚಿದಂಬರ ರಹಸ್ಯ.

ಒಬ್ಬ ಚೀನೀ ಸಂತ ಹೇಳುತ್ತಾನೆ  " ಯಾವ ಮನುಷ್ಯನಿಗೆ ಇಷ್ಟು ಸಾಕು ಎಂದು ಅನಿಸುವುದಿಲ್ಲವೋ,  ಆತನಿಗೆ ಎಷ್ಟು ಇದ್ದರೂ ಸಾಕಾಗುವುದಿಲ್ಲ.  ಯಾವಾತನಿಗೆ ಇದು ಸಾಕು ಎನಿಸುವುದೋ,ಆತನಿಗೆ ಎಲ್ಲವು ಸಾಕಾಗುತ್ತದೆ." ಇದು ಸತ್ಯ.  ಸಾಕು ಎನ್ನುವುದು ತೃಪ್ತಿ.  ಯಾವಾತನಿಗೆ  ತೃಪ್ತಿಯಾಗುತ್ತದೋ, ಅದೇ ಅವನ ನಿಜವಾದ ಸುಖ. ಈ ತೃಪ್ತಿಯನ್ನು ನಾವೇ ಕಂಡುಕೊಳ್ಳಬೇಕು.  ಇದನ್ನು ಹಣದಿಂದಾಗಲಿ, ಐಶಾರಮಿ  ವಸ್ತುವಿನಿಂದಾಗಲಿ ಪಡೆಯಲು ಸಾಧ್ಯವಿಲ್ಲ.  ಈ ತೃಪ್ತಿ ಬಿಕಾರಿಗೆ ಎಷ್ಟು ಸಾಧ್ಯವೋ ಅಷ್ಟೇ ಒಬ್ಬ ಅಗರ್ಭ    ಶ್ರೀಮಂತನಿಗೂ ಸಾಧ್ಯ.  ಒಂದು ರುಪಾಯಿ ಜೇಬಿನಲ್ಲಿ ಇಟ್ಟುಕೊಂಡು , ನಾನೇ ಅತ್ಯಂತ ಸುಖಿ ಎಂದು ರಸ್ತೆ ಬದಿಯಲ್ಲಿ ಸುಖವಾಗಿ ಮಲಗಿ ನಿದ್ರಿಸುವ ಬಿಕಾರಿಗೂ ಸುಖ ಸಿಕ್ಕುವುದು ಸಾಧ್ಯ. ಹತ್ತಾರು ಕೋಟಿ ಆಸ್ತಿ ಇರುವ ಶ್ರೀಮಂತ ನೂರಾರು ಕೋಟಿ ಇರುವ ಶ್ರೀಮಂತನ ನೆನೆ ನೆನೆದು ತನಗಿಲ್ಲವಲ್ಲ ಎಂದು ನಿದ್ದೆ ಹಾಳು ಮಾಡಿಕೊಂಡರೆ ಅದು ಶ್ರೀಮಂತನ ಅಸುಖ.   ಇಲ್ಲಿ ಹಣವಾಗಲಿ, ಆಸ್ತಿಯಾಗಲಿ ನಮ್ಮ ಸುಖಕ್ಕೆ ಕಾರಣವಲ್ಲ ಎಂದಾಯಿತು .  ಇದು ಕೇವಲ ನಮ್ಮ ನಮ್ಮ ಮಾನಸಿಕ ಸ್ತಿತಿ. ಈಗ ಹೇಳಿ ಯಾರು ಸುಖಿ? ಯಾವುದರಿಂದ ಸುಖ ?

ರಜನೀಷರು ಹೇಳುತ್ತಾರೆ........"ನಿನ್ನಲ್ಲಿ ಒಂದು ಕಾರು ಇದೆ. ಕಾರಿನಲ್ಲಿ ಪೆಟ್ರೋಲು ಇದೆ. ಪೆಟ್ರೋಲು ಮುಗಿಯುವ ತನಕ ನಿನ್ನ ಕಾರು ಓಡುತ್ತದೆ, ನಂತರ ನಿಲ್ಲುತ್ತದೆ.  ಇಂಧನ ಶಕ್ತಿ ಇರುವ ತನಕ ಕಾರಿಗೆ ಓಡಲು ತಾಕತ್ತು ಇದೆ. ನಂತರ....?  ಈ ಇಂಧನ ಶಕ್ತಿಯೇ ನಿನ್ನ ಹಣಬಲ.  ಈ ಕಾರೆ ನಿನ್ನ ಮನಸ್ಸು.   ಎಲ್ಲಿಯತನಕ ನಿನಗೆ ಕಾರಿನ ಓಟ ಸಾಕು ಎನಿಸುವುದಿಲ್ಲವೋ ಅಲ್ಲಿಯತನಕ ನಿನ್ನ ಕಾರನ್ನು ಓದಿಸುತ್ತಲೆ ಇರುವೆ.  ಇನ್ನು ಸಾಕು ಎನ್ನಿಸುವಾಗ ಕಾರು ನಿಲ್ಲುತ್ತದೆ.  ಇಲ್ಲಿ ಕಾರು ನಿಂತದ್ದು ಇಂದನ ಖಾಲಿಯಾಗಿದ್ದರಿಂದಲ್ಲ.  ನಿನ್ನ ಮನಸ್ಸಿಗೆ ಸಾಕು ಎನಿಸಿದ್ದರಿಂದ."
ಹೀಗೆ,  ನಮ್ಮ ಮನಸ್ಸು ಒಂದು ಹಂತದಲ್ಲಿ ಹಣದ ಹಿಂದೆ ಓಡುವುದು ಸಾಕು ಎನ್ನಿಸಬೇಕು.  ಹಣದ ಹಿಂದೆ ಇರುವ ದುಃಖವನ್ನು ಅರಿಯಬೇಕು.  ಇಲ್ಲವಾದರೆ ಹಣ ನಮ್ಮೊಡನೆ ಇದ್ದರೂ ಸುಖ ಮರೀಚಿಕೆಯಾಗುತ್ತದೆ.  ಸುಖ ಎನ್ನುವುದು ನಮ್ಮ ಕೈಯಲ್ಲೇ ಇದೆ. ನಮ್ಮ ಮನಸ್ಸಿನಲ್ಲಿ ಇದೆ.  ಯಾವ ವಸ್ತುವಿನಲ್ಲಿ ಆಗಲಿ, ಹಣದಲ್ಲಿ ಆಗಲಿ ಇಲ್ಲ.  ಹಾಗೆಂದು, ಇದ್ಯಾವುದು ಬೇಡವೆನ್ನುವುದು ಇಲ್ಲಿ ನನ್ನ  ಮಾತಿನ ಅರ್ಥವಲ್ಲ.  ಎಲ್ಲವು ಬೇಕು, ಆದರೆ  ಎಷ್ಟು ಬೇಕೋ ಅಷ್ಟೇ! ಆಮೇಲೆ ಸಾಕು ಎನಿಸಲೇ ಬೇಕು.  ಆಗ ಸಿಗುವ ತೃಪ್ತಿಯಲ್ಲಿ ಜೀವನಕ್ಕೆ ಅರ್ಥ ಸಿಗುತ್ತದೆ, ಆರೋಗ್ಯ ಸಿಗುತ್ತದೆ, ನೆಮ್ಮದಿ, ಸಂತೋಷ, ಸುಖ ಎಲ್ಲಕ್ಕಿಂತ ಹೆಚ್ಚಾಗಿ ಶಾಂತಿ ಸಿಗುತ್ತದೆ. ಜೀವನದಲ್ಲಿ ಇದಕ್ಕಿಂತ ಇನ್ನೇನು ಬೇಕು?

ಹೆಚ್ ಏನ್ ಪ್ರಕಾಶ್ 
23 05 2012 

May 16, 2012

ಮುಕ್ತಿ ........................ಒಂದಷ್ಟು ಹರಟೆ

ಮುಕ್ತಿ ........................ಒಂದಷ್ಟು ಹರಟೆ 


ಸಾಮಾನ್ಯವಾಗಿ ಹತ್ತಿರದವರು    ನಿಧನ ಹೊಂದಿದರೆ ಬಂಧುಮಿತ್ರರೆಲ್ಲರು ಒಂದೆಡೆ ಸೇರಿ ಎರಡು ನಿಮಿಷ ಮೌನದಿಂದ ಮೃತರ ಆತ್ಮಕ್ಕೆ ಶಾಂತಿ ಕೋರುವುದು ವಾಡಿಕೆಯಾಗಿದೆ. ಮೃತರ ಆತ್ಮಕ್ಕೆ ಮುಕ್ತಿ ಸಿಕ್ಕಲಿ, ಸದ್ಗತಿ ದೊರಕಲಿ ಎಂದು ಸಾಮೂಹಿಕವಾಗಿ ಎಲ್ಲರು ಪ್ರಾರ್ಥನೆ ಸಲ್ಲಿಸುತ್ತಾರೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂಬ ಸಲುವಾಗಿ ಮೃತರ ಮಕ್ಕಳು ಮತ್ತು ಸಂಬಂಧಿಗಳು  ಶ್ರಾದ್ದಾದಿ ಕರ್ಮಗಳನ್ನು ಮಾಡುತ್ತಾರೆ, ಮೃತರ ಹೆಸರಿನಲ್ಲಿ ದಾನ ಧರ್ಮಗಳನ್ನು ಮಾಡುತ್ತಾರೆ. ಯಥಾನುಶಕ್ತಿ ಅನ್ನದಾನ ಮಾಡುತ್ತಾರೆ. ಈ ಎಲ್ಲಾ ಪ್ರಾರ್ಥನೆ, ದಾನ- ಧರ್ಮ  ಇತ್ಯಾದಿಗಳು ಮೃತ ವ್ಯಕ್ತಿಗೆ ನಾವು ಸೂಚಿಸುವ ಗೌರವವೆ ಆಗಿರುತ್ತದೆ. ಹೀಗೆಲ್ಲ ಮಾಡಿದ ನಂತರ ಮೃತ ವ್ಯಕ್ತಿಗೆ ಸದ್ಗತಿ ದೊರೆಯಿತೆಂದು ನಾವು ಸಮಾಧಾನ ಹೊಂದುತ್ತೇವೆ.

ಇಲ್ಲಿ ಪ್ರಶ್ನೆ ಸಹಜವಾಗಿ ನನಗೆ ಬಂದದ್ದು  ಏನೆಂದರೆ, ಬರಿ ಇಷ್ಟರಿಂದಲೇ ಮೃತನಿಗೆ  ಸದ್ಗತಿ ಅಥವಾ ಮುಕ್ತಿ  ಪ್ರಾಪ್ತವಾಗಲು ಸಾಧ್ಯವೇ?  ಜೀವಂತ ಇದ್ದಾಗ ಸಂಘರ್ಷಗಳ ಒಡನಾಟದಲ್ಲಿದ್ದು   ಸಾಯುವವರೆಗೂ ಲೌಕಿಕದಲ್ಲಿ ಒಂದಲ್ಲ ಒಂದಕ್ಕೆ ಅಂಟಿಕೊಂಡು, ಮುಕ್ತಿಯ ಬಗ್ಗೆ ಸ್ವಲ್ಪವು ಪ್ರಯತ್ನ ಪಡದೆ ಇರುವ  ವ್ಯಕ್ತಿಗೆ , ಸತ್ತ ನಂತರ ಬಂಧು ಮಿತ್ರರು ಮಾಡುವ ಪ್ರಾರ್ಥನೆ ಅಥವಾ ನಡೆಸುವ ಉತ್ತರ ಕ್ರಿಯಾದಿಗಳಿಂದ  ಮುಕ್ತಿ ಸಿಗುವುದು ಇಷ್ಟು ಸುಲಭವಾಗಿ ಸಾಧ್ಯವೇ?  ಮುಕ್ತ ಜೀವನ ನಡೆಸದ, ಮುಕ್ತಿಗಾಗಿ ಶ್ರಮಿಸದ ಜೀವಿಗೆ ಮುಕ್ತಿ ದೊರೆಯುವುದು ಸಾಧ್ಯವಿಲ್ಲ, ಇದು ಕೇವಲ ಭ್ರಮೆ ಎಂಬುದು ಬಲ್ಲವರ, ಹಿರಿಯರ ಮತ್ತು ವೇದಾಂತದ ಮಾತು.

" ಯಾರಿಗೆ  ಬದುಕಿರುವಾಗ ಮುಕ್ತಜೀವನ ನಡೆಸಲು  ಸಾಧ್ಯವಾಗಿರುವುದಿಲ್ಲವೋ, ಅವರಿಗೆ ಸತ್ತ ಮೇಲೂ ಮುಕ್ತಿ ಸಿಗಲು ಸಾಧ್ಯವಿಲ್ಲ." ಎನ್ನುತ್ತಾರೆ ಶ್ರೀ ರಾಮಕೃಷ್ಣರು.   " ದ್ವಂದ್ವದಿಂದ ಮೊದಲು ಮುಕ್ತಿ ಪಡೆ "  ಎಂದು ನಮ್ಮನ್ನು ಎಚ್ಚರಿಸುತ್ತಾರೆ. ಇದನ್ನು  ಒಂದು ಚಿಕ್ಕ ಉದಾಹರಣೆಯಿಂದ ವಿವರಿಸುತ್ತಾರೆ.    " ಒಂದು ಗಿಡಕ್ಕೆ ಯಾವಾಗ ಏನು ಹಾಕಿದರು ಸ್ವೀಕರಿಸುತ್ತದೆ.  ಇಲ್ಲಿ ಯಾವ ಪ್ರತಿಭಟನೆ ಇರದು. ಸಂತಸ ಇರದು. ನಿರಾಶೆಯೂ ಇರದು. ಮಣ್ಣಿಗೆ ಬೆರೆತ ಎಲ್ಲವು ಕರಗುತ್ತದೆ. ಇದು ಭಗವಂತನ ನಿಯಮ ಎಂಬಂತೆ ಎಲ್ಲವನ್ನು ಸ್ವೀಕರಿಸಿ ಕರಗಿಸಿಕೊಂಡು ಬಿಡುತ್ತದೆ.    ಮುಕ್ತವಾಗಬೇಕೆಂದು ಬಯಸುವ  ನಮ್ಮ ಮನಸ್ಸು ಹೀಗೆಯೇ  ಇರಬೇಕಾಗುತ್ತದೆ.  ಸುಖ- ದುಃಖ, ಕಹಿ -ಸಿಹಿ, ನೋವು- ನಲಿವು, ಗೌರವ -ಅಗೌರವ, ಮಾನ- ಅವಮಾನ, ಇತ್ಯಾದಿ ಇತ್ಯಾದಿಗಳ ದ್ವಂದ್ವಗಳನ್ನು ಸಮವಾಗಿ ಅನುಭವಿಸುತ್ತ ಜೀರ್ಣಿಸಿ ಕೊಳ್ಳಬೇಕಾಗುತ್ತದೆ."  ಹೌದು, ಒಂದು ಬಂದ ನಂತರ ಇನ್ನೊಂದು ಬರಲೇ ಬೇಕು, ಇದು ಜಗತ್ತಿನ ನಿಯಮ. ಈ ಸತ್ಯವನ್ನು ಅರ್ಥ ಮಾಡಿಕೊಂಡಾಗ ನಮಗಿರುವ ದ್ವಂದ್ವಗಳು ಹೆಚ್ಚು ಪ್ರಾಮುಖ್ಯತೆ ಪಡೆಯುವುದಿಲ್ಲ.  ಮೋಹದ ಪೊರೆ ತನಗೆ ತಾನೇ ಕಳಚುತ್ತದೆ.  

ಮುಕ್ತಿ ಎಂದರೆ ಬಿಡುಗಡೆ.  ಜೀವನದಲ್ಲಿ ಮುಕ್ತಸ್ಥಿತಿ ಹೊಂದುವುದು ಎಂದರೆ ಪ್ರತಿಯೊಂದರಿಂದ ಬಿಡಿಸಿಕೊಳ್ಳುವುದು. ಒಂದೇ ಸಲಕ್ಕೆ  ಎಲ್ಲವನ್ನು ಬಿಡಿಸಿ ಕೊಳ್ಳಲು ಸಾಧ್ಯವಿಲ್ಲ.  ಸ್ವಲ್ಪ ಸ್ವಲ್ಪವಾಗಿ ನಿಧಾನವಾಗಿ ಗೋಜಲು ಮಾಡಿಕೊಳ್ಳದಂತೆ ಬಿಡಿಸಿ ಕೊಳ್ಳ ಬೇಕಾಗುತ್ತದೆ.   ಬೆಟ್ಟ ಹತ್ತಿದಂತೆ.  ಒಂದೊಂದೇ ಮೆಟ್ಟಿಲುಗಳಂತೆ ಮೇಲೇರಬೇಕು. ಮೇಲೆ ಏರುವಾಗ ನಾವು ಎಷ್ಟು ಮೋಹ ಕಳಚುತ್ತೆವೋ ಅಷ್ಟು ನಮ್ಮ ದೇಹ, ಮನಸ್ಸು ಹಗುರವಾಗುತ್ತ ಹೋಗುತ್ತದೆ. ಬೆನ್ನಿನ ಮೇಲಿನ ಹೊರೆಯನ್ನು ಕಡಿಮೆ ಮಾಡಿಕೊಂದಷ್ಟು  ಮುಕ್ತಿಯ ಬೆಟ್ಟ ಏರುವುದು ಸುಲಭ. ಮೇಲೆ ಏರುತ್ತ ಸಾಗಿದಷ್ಟು ದಾರಿ ಸುಗಮವಲ್ಲ. ಕಿರಿದಾದ ದಾರಿಯೇ.  ಸುಸ್ತು ಜಾಸ್ತಿಯಾದಾಗ ಅಲ್ಲೇ ಕೂತು, ಸ್ವಲ್ಪ ವಿಶ್ರಾಮ ಪಡೆದು ಸ್ವಲ್ಪ ನಮ್ಮ ಗಂಟನ್ನು ಕರಗಿಸಿ ಮುಂದಿನ ಪ್ರಯಾಣಕ್ಕೆ ಸಜ್ಜಾಗುವುದು.   ಹೀಗೆ ಎಷ್ಟು ನಮ್ಮ ಹೊರೆ ಕಡಿಮೆಯಾಗುವುದೋ ಅಷ್ಟು ನಾವು ಮುಕ್ತ ಪ್ರಪಂಚಕ್ಕೆ ಹತ್ತಿರವಾಗುತ್ತ ಹೋಗುತ್ತೇವೆ.  ಈ ಹೊರೆಯೇ ನಮ್ಮ ಪಾಪದ ಗಂಟು! ಈ ಗಂಟನ್ನು ಕರಗಿಸದೆ ವಿಧಿಯಿಲ್ಲ.  ಅದನ್ನು ಕರಗಿಸುವ ತನಕ ಅದು ನಮ್ಮ ಬೆನ್ನು  ಬಿಟ್ಟು ಬೇರೆ ಎಲ್ಲೂ ಹೋಗದು. ಇದನ್ನು ಬೇರೆ ಯಾರಿಂದಲೂ ಹೊರಲಾಗದು. ಏಕೆಂದರೆ ಇದನ್ನು ಬಹಳ ಇಷ್ಟ ಪಟ್ಟು ಹೊತ್ತುಕೊಂಡವರು  ನಾವೇ. ಈಗ ಬೇಡವೆನ್ನಲು ಅದು ಬಿಡುವುದೇ?


ಈ ಜಗತ್ತಿನಲ್ಲಿ ಪ್ರತಿ ಜೀವಿಯು ತನ್ನ ಮುಕ್ತಿಗೆ ತಾನೇ ಶ್ರಮಿಸ ಬೇಕೇ ವಿನಃ ಬೇರೆ ಯಾವ ಮಾರ್ಗವು ಇಲ್ಲ .  ತನ್ನ ಉದ್ದಾರ ತನ್ನಿಂದಲೇ ಸಾಧ್ಯವಾಗಬೇಕು.  ಇದಕ್ಕೆ ಒಂದು  ಸುಲಭ ಮಾರ್ಗವೆಂದರೆ,  ಶಾಂತಿ ಬೇಡುವವನು ಇತರರಿಗೆ ಶಾಂತಿ ನೀಡಬೇಕು.  ನೆಮ್ಮದಿ ಬೇಕೆಂದರೆ ಇತರರಿಗೆ ನೆಮ್ಮದಿ ನೀಡಬೇಕಾಗುತ್ತದೆ.  ಸುಖ ಬೇಕೆಂದಾಗ ಮತ್ತೊಬ್ಬರಿಗೆ ಸುಖ ಕೊಡಬೇಕಾಗುತ್ತದೆ.    ಹೀಗೆ ನಮಗೇನು ಬೇಕೋ ಅದನ್ನು ನೀಡಲು ಕಲಿತಾಗ ನಮಗೆ ಅನಾಯಾಸವಾಗಿ ಎಲ್ಲವು ಸಿಗುತ್ತದೆ. ಇದೆ ರೀತಿ ಮುಕ್ತಿ ಕೂಡ.   ನಾವು ಎಲ್ಲ ಬಂಧನಗಳಿಂದ   ಮುಕ್ತರಾದಾಗ, ಮುಕ್ತಿ ನಮಗೆ ಸಿಗಲೇಬೇಕು.  ಇದು ಬರೆದಷ್ಟು ಸುಲಭವಲ್ಲ. ಅಂದುಕೊಳ್ಳುವಷ್ಟು ಕಷ್ಟವು ಅಲ್ಲ. ಆದರೆ,ಕಷ್ಟಸಾಧ್ಯ.ನಿತ್ಯದಲ್ಲಿ ಸಾಧನೆ ಮಾಡುವ ಸಂಕಲ್ಪಮಾಡಿದರೆ, ನಿತ್ಯದಲ್ಲಿ ಅನುಷ್ಠಾನ ಮಾಡಿದರೆ ಖಂಡಿತ ಸಾಧ್ಯವಾಗುತ್ತದೆ. ನಾವು ಪ್ರಯತ್ನಶೀಲರಾಗಬೇಕಷ್ಟೇ.  ಇದಕ್ಕೆ ನೀವೇನು ಹೇಳುತ್ತಿರಾ?.............
ಹೆಚ್ ಏನ್ ಪ್ರಕಾಶ್ 
16 05 2012

May 10, 2012

ಆತುರ ...............ಒಂದಷ್ಟು ಹರಟೆ

ಆತುರ ...............ಒಂದಷ್ಟು ಹರಟೆ 




 ಆತುರದ ಸ್ವಭಾವವೆ ಒಂದು ಕಳಂಕ. ಆತುರದ ಸ್ವಭಾವದಿಂದ ಆಗಬಾರದ ಅನಾಹುತಗಳು ಘಟಿಸಿಬಿಡುತ್ತದೆ. ಒಂದೇ ಒಂದು ಕ್ಷಣ ನಿಧಾನ ಮಾಡಿದ್ದೆ ಆದರೆ, ಒಂದು ಕ್ಷಣ ತಮ್ಮ ನಿರ್ಧಾರವನ್ನು ಮುಂದೆ  ಹಾಕಿದರೆ ಸಾಕು,  ಆಗಬಹುದಾದ ಅನಾಹುತ ತಪ್ಪಿಸ ಬಹುದು.  ಇಲ್ಲವಾದರೆ, ಕೆಲವೊಂದು ಪ್ರಸಂಗದಲ್ಲಿ ಜೀವನ ಪರ್ಯಂತ ವಿಷಾದ ಪಡಬೇಕಾದ ಸಂಧರ್ಭ ಒದಗಿ ಬಿಡಬಹುದು.  "ಆತುರಗಾರನಿಗೆ ಬುದ್ಧಿ ಕಡಿಮೆ" ಯೆನ್ನುವ ವಿಚಾರ ಎಲ್ಲರಿಗೂ ತಿಳಿದಿದೆ.  ಆದರು,   ನಾವು ದಿನನಿತ್ಯದ ಬದುಕಿನಲ್ಲಿ ಕೆಲವೊಮ್ಮೆ ಆತುರದ ನಿರ್ಧಾರ ಮಾಡಿ ಅಥವಾ ಆಶ್ವಾಸನೆ ನೀಡಿ ಪರಿತಪಿಸುತ್ತೇವೆ. 

ರಾಮಾಯಣದ ಒಂದು ಪ್ರಸಂಗ ಇಲ್ಲಿ ಪ್ರಸ್ತುತ  ಎನಿಸುತ್ತದೆ .ಕಾಮಾತುರನಾದ  ದಶರಥ ಮಹಾರಾಜ ತನ್ನ ರಾಣಿಯಾದ ಕೈಕೇಯಿಗೆ ಆತುರದಲ್ಲಿ ಕೊಟ್ಟ ಮಾತಿನ ಫಲವಾಗಿ ಇಡಿ ರಾಮಾಯಣವೇ ನಡೆದುಹೋಯಿತು.  ದುಡಿಕಿನ ಸಮಯದಲ್ಲಿ ಈತನಿಗಿದ್ದ  ವಿದ್ಯೆ, ಪಾಂಡಿತ್ಯ ಎಲ್ಲವು ಮರೆಯಾಗಿ, ಮೂಢತನ ಪ್ರದರ್ಶಿಸಿದ. ಈತನಲ್ಲಿದ್ದ ಧಾರ್ಮಿಕ ಮನೋಭಾವ, ಆತ್ಮೊನ್ನತಿಯ ಸಂಸ್ಕಾರ ಎಲ್ಲವು ಆ ಕ್ಷಣದಲ್ಲಿ ಮರೆತು ಹೋಯಿತು. ಕ್ಷಣಮಾತ್ರದ ಸುಖದ ಚಪಲತೆಗಾಗಿ ಈತ ಎಂತಹ ಘೋರ ಅನ್ಯಾಯವೆಸಗಿದ ಎನ್ನುವುದು ಚರಿತ್ರಾರ್ಹ.  ಕೈಕೇಯಿಯ ಮನವೊಲಿಸುವ ಸಲುವಾಗಿ ಆತುರದಿಂದ ದಶರಥ ಹೇಳಿದ ಮಾತುಗಳು ಎಷ್ಟು ಅಸಹ್ಯ ತರಿಸುತ್ತದೆ ಎನ್ನುವುದಕ್ಕೆ  ಈ ಮಾತುಗಳೇ ಸಾಕ್ಷಿ. " ಯಾರನ್ನು ಬೇಕಾದರೂ, ಯಾವ ಅಪರಾಧವಿಲ್ಲದಿದ್ದರು ಕೊಲ್ಲಿಸುತ್ತೇನೆ. ಕೊಲ್ಲಿಸಬೇಕಾದ ಯಾವ ಕಡು ಅಪರಾಧಿಯನ್ನು ಕೈಕೇಯಿ ಸಲುವಾಗಿ ಬಿಡುಗಡೆ ಮಾಡುತ್ತೇನೆ." ಇತ್ಯಾದಿ  ಇತ್ಯಾದಿಯಾಗಿ ಅಸಂಬದ್ಧ ಮಾತುಗಳನ್ನು ಆಡುತ್ತಾನೆ. ಕೈಕೇಯಿಯ ಬೇಡಿಕೆ ಮುಂದಿಟ್ಟ   ಕೆಲವೇ ಕ್ಷಣಗಳಲ್ಲಿ ಘೋರವಾದ ದುಃಖವನ್ನು ಅನುಭವಿಸುತ್ತಾನೆ. ಕೈಕೇಯಿ ಕಾಲಿಗೆ ಬಿದ್ದು ತನ್ನ ಬೇಡಿಕೆಯನ್ನು ವಾಪಸ್ಸು ಪಡೆಯುವಂತೆ ಬೇಡಿಕೊಳ್ಳುತ್ತಾನೆ. ತನ್ನನ್ನು ತಾನೇ ದಂಡಿಸಿಕೊಳ್ಳುತ್ತ  ಪಶ್ಚಾತ್ತಾಪದಿಂದ ಕೊರಗುತ್ತಾನೆ, ಆಡಿದ ಮಾತಿನ ಸಲುವಾಗಿ ಭರಿಸಲಾರದ ದುಃಖದಿಂದ ಜೀವತ್ಯಾಗ ಮಾಡುತ್ತಾನೆ. ರಾಮಾಯಣದ ಕರ್ತ್ರುವಾಗುತ್ತಾನೆ 

ದಶರಥ ತಾನು  ಕೊಟ್ಟ ಆತುರದ  ಮಾತನ್ನು ಶ್ರೀ ರಾಮನಿಗಾಗಿ ತಪ್ಪಿಸಬಹುದಿತ್ತು. ಕೈಕೇಯಿಯನ್ನು ದಂಡಿಸಬಹುದಿತ್ತು. ಇಡಿ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸ ಹೊರಟ ರಾಣಿಯನ್ನು ದಂಡನೆ ಮಾಡಿದ್ದರೆ ಅದು ಧರ್ಮಸಮ್ಮತವು ಆಗುತ್ತಿತು.  ಆದರೆ ಇದನ್ನು ದಶರಥನಿಗೆ  ಮಾಡಲಾಗಲಿಲ್ಲ. ಆ ಕ್ಷಣದಲ್ಲಿ ಘಟಿಸಿದ ಘಟನೆಯೇ ಬೇರೆಯಾಯಿತು. " ಮಾತು ಆಡಿದರೆ ಹೇಗೆ ವಾಪಸ್ಸು ಬಾರದೋ ಹಾಗೆ,  ಮುತ್ತು ಒಡೆದರೆ ಹೇಗೆ ಜೋಡಿಸಲು ಸಾಧ್ಯವಾಗದೋ ಹಾಗೆ,  ಬಾಣ ಬಿಟ್ಟರೆ ಹೇಗೆ ಪುನಃ ಹಿಂದೆ ತರಲು ಸಾಧ್ಯವಿಲ್ಲವೋ ಹಾಗೆ " ಎಲ್ಲವು ನಡೆದು ಹೋಯಿತು.

ಇವೆಲ್ಲವೂ ವಿಧಿಯ ವಿಧಾನವೋ, ಪೂರ್ವ ನಿಯೋಜಿತವೋ ಅದು ನಂತರದ  ಮಾತು. ಆದರೆ ಒಂದಂತು ಸ್ಪಷ್ಟ.  ಮನುಷ್ಯ ಬೇಕಾದ ಸಮಯದಲ್ಲಿ ತಾಳ್ಮೆ ಕಳೆದುಕೊಂಡರೆ, ನಂತರದಲ್ಲಿ ಹೀಗಾಗಬೇಕಾಗಿತ್ತು ಎಂದು  ಸಾವಿರ ಸಲ  ಯೋಚನೆ ಮಾಡಿದರು ಪ್ರಯೋಜನಕ್ಕೆ ಬಾರದು. ಆತುರದ ಕೈಗೆ ಬುದ್ಧಿಯನ್ನು ಕೊಟ್ಟರೆ ಅದರಿಂದ ಆಗುವ ಅನಾಹುತ ಮಾತ್ರ ತಪ್ಪಿಸಲು ಸಾಧ್ಯವಿಲ್ಲ.  ಮಾಡುವ ಕೆಲಸವನ್ನು ಯೋಚಿಸಿ ಮಾಡುವ, ನೀಡುವ ಆಶ್ವಾಸನೆಯನ್ನು ಸ್ವಲ್ಪ ಚಿಂತಿಸಿ , ನಿರ್ಧಾರ ತೆಗೆದುಕೊಳ್ಳುವ  ಮುಂಚೆ ಪರಾಮರ್ಶೆ ಮಾಡುವ ಮನಸ್ಸು ಮಾಡುವಲ್ಲಿ ನಾವು ಸಫಲರಾದರೆ ಹೆಚ್ಚಿನ ನೆಮ್ಮದಿ ನಮ್ಮದಾಗಬಹುದು.  ಈ ಬಗ್ಗೆ ಚಿಂತನೆ ಮಾಡಿದರೆ ಚಿಂತೆ ಕಡಿಮೆಯಾಗಬಹುದು, ಇದಕ್ಕೆ ನೀವು ಏನು ಹೇಳುತ್ತೀರಾ?........

ಹೆಚ್ ಏನ್ ಪ್ರಕಾಶ್
10 05 2012