February 10, 2012

ಅಹಂಕಾರ.....................ಒಂದಷ್ಟು ಹರಟೆ.

ಅಹಂಕಾರ.....................ಒಂದಷ್ಟು ಹರಟೆ.


                   ಒಂದು ಬೆಟ್ಟದ ಮೇಲೆ ಪುರಾತನ ಕಾಲದ 3 ಆಶ್ರಮಗಳಿದ್ದವು.  ಇದನ್ನು  ಮಠಗಳೆಂದು ಕರೆಯುತ್ತಿದ್ದರು. ಈ ಮಠಗಳ  ಮುಖ್ಯಸ್ಥರುಗಳು ಯಾವಾಗಲಾದರೊಮ್ಮೆ ಒಟ್ಟಿಗೆ ಸೇರುತ್ತಿದ್ದರು. ಒಮ್ಮೆ ಹೀಗೆ ಸೇರಿದಾಗ ಉಭಯಕುಶಲೋಪರಿ ಆದನಂತರ ಪ್ರಾಸಂಗಿಕವಾಗಿ ತಮ್ಮ ತಮ್ಮ ಮಠಗಳ ಬಗ್ಗೆ ಮಾತನಾಡಲು ಆರಂಭಿಸಿದರು.  ಒಬ್ಬ   ಮಠಾಧಿಪತಿ  " ನಿಮ್ಮ ಮಠ ಸುಂದರವಾದ ಉತ್ತಮವಾದ ಮಠ. ಆದರೆ, ನಮ್ಮ ಮಠದ ವ್ರತ,ನಿಯಮ ಮತ್ತು ಕಠಿಣ ಬದ್ಧತೆಯಲ್ಲಿ ನೀವು ನಮ್ಮ ಮಠವನ್ನು ಸರಿಗಟ್ಟಲಾರಿರಿ." ಎಂದು ಸ್ವಯಂ ಪ್ರತಿಷ್ಠೆಯಲ್ಲಿ ಹೇಳಿದರು.  ಇದನ್ನು ಕೇಳಿಸಿಕೊಂಡ  ಮತ್ತೊಬ್ಬ  ಮಠಾಧಿಪತಿ         "ಹೌದು, ನೀವು ಹೇಳಿದ್ದು ಸರಿಯೇ. ನಿಮ್ಮ ಮಠದ ಬಗ್ಗೆ ನಮಗೆ ಚನ್ನಾಗಿ ಗೊತ್ತು. ನಿಮ್ಮ ವ್ರತ, ನಿಯಮ ಮತ್ತು ಕಠಿಣ ಬದ್ಧತೆಯ ವಿಚಾರ ಪ್ರಶಂಸನೀಯ ಮತ್ತು ಉತ್ಕೃಷ್ಟ.  ಆದರೂ, ಕಲಿಕೆಯ ವಿಚಾರ ಬಂದರೆ ನಮ್ಮ ಮಠಕ್ಕೆ ಯಾವ ಹೋಲಿಕೆಯನ್ನು ಮಾಡಲಾಗದು. ನಮ್ಮ ಮಠದಲ್ಲಿ ಇರುವಷ್ಟು ಶಾಸ್ತ್ರಾಧ್ಯಯನ ಆಚಾರ್ಯರು ಮತ್ತು ಪಂಡಿತರು ಬೇರೆ ಯಾವ ಮಠದಲ್ಲೂ ಇಲ್ಲವೆಂಬ ವಿಚಾರ ನಿಮಗೂ ತಿಳಿದಿರಬೇಕಲ್ಲ!" ಎಂದು ಹಮ್ಮಿನಿಂದ ಹೇಳಿಕೊಂಡರು.   ಈ ಎಲ್ಲ ಮಾತನ್ನು ಕೇಳಿಸಿಕೊಂಡ ಮತ್ತೊಬ್ಬ ಮಠಾಧಿಪತಿ " ನೀವಿಬ್ಬರು ಸರಿಯೇ. ನಿಮ್ಮ ಮಠದ  ವ್ರತ, ನಿಯಮ ಮತ್ತು ಇವರ ಮಠದ  ಶಾಸ್ತ್ರಾಧ್ಯಯನ ಆಚಾರ್ಯರುಗಳ ಬಗ್ಗೆ  ಯಾರೂ ಮಾತಾಡುವ ಹಾಗೆ ಇಲ್ಲ.  ಆದರೂ, ನಮ್ಮ ಮಠದಲ್ಲಿರುವ ಯಾರೊಬ್ಬರಲ್ಲೂ ಸ್ವಪ್ರತಿಷ್ಠೆ ಇಲ್ಲ. ನಮ್ರತೆ, ವಿನೀತ ಮತ್ತು ತಗ್ಗಿ ಬಗ್ಗಿ ನಡೆಯುವ ನಾವುಗಳು  ಉನ್ನತ ಸ್ತಾನದಲ್ಲಿ ಇದ್ದೇವೆ. ಈ ಗುಣಗಳನ್ನು ನಿಮ್ಮ ಮಠದಲ್ಲಿ ಕಾಣಸಿಗುವುದಿಲ್ಲ.  ಇದನ್ನು ನೀವು ಒಪ್ಪುತ್ತಿರ ಅಲ್ಲವೇ?"  ಎಂದು ಅಹಂನಿಂದ ಹೇಳಿದರು.ಮೊದಲು ಹೇಳಿದ ಇಬ್ಬರು ಮಠಾಧಿಪತಿಗಳ ಹೇಳಿಕೆಯಲ್ಲಿ ಅಹಂಕಾರದ ಛಾಯೆ ಇರುವುದು ಅವರ ಮಾತಿನಲ್ಲಿ  ಕಾಣುತ್ತದೆ . ಆದರೆ ಮುರನೆಯ ಮಠಾಧಿಪತಿಯ ಹೇಳಿಕೆಯು ಎಂತಹ ವಿರೋಧಾಭಾಸ. ಸಾತ್ವಿಕ ಗುಣ ಇದೆ ಎನ್ನುವ ವಿಚಾರ ಕೂಡ ಅಹಂಕಾರದಲ್ಲಿದೆ.

                  ಇದನ್ನು, ಕೆಲವರು ಸಾತ್ವಿಕ ಅಹಂಕಾರ ಎನ್ನುತ್ತಾರೆ. ಇಲ್ಲೇ ವಿಚಾರಬೇಧ ಇರುವುದು. ಅಹಂಕಾರದಲ್ಲಿ ಸಾತ್ವಿಕ ಮತ್ತು ಸಾಮಾನ್ಯ ಎಂಬುದಿಲ್ಲ.  ಅಹಂಕಾರ  ಅಹಂಕಾರವೇ! ಹಣವಿದೆ, ರಾಜಕೀಯದಲ್ಲಿ ಬಲವಿದೆ, ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳಿವೆ,  ಸೌಂದರ್ಯವಿದೆ, ವಿದ್ಯೆಬುದ್ಧಿ  ಇದೆ, ಉತ್ತಮ ದೇಹಧಾಡ್ಯತೆ  ಇದೆ, ಅಧ್ಯಾತ್ಮದಲ್ಲಿ ಉನ್ನತ ಸಾಧನೆ ಇದೆ, ದೊಡ್ಡ ಸಂತನಾಗಿದ್ದೇನೆ,  ಹೀಗೆ ಇನ್ನು ಹಲವಾರು ರೀತಿಯ  ವಿಂಗಡಣೆಗಳು  ಅಹಂಕಾರದ ಬೀಜಗಳು.  ಈ  'ನಾನು ನನ್ನದು ' ಎಂಬ ಹಮ್ಮು ಒಮ್ಮೆ ಮನದಾಳದಲ್ಲಿ ಹೊಕ್ಕಿದರೆ ಸಾಕು, ಒಂದು ಚಿಕ್ಕ ಬೀಜ ಹೆಮ್ಮರವಾಗಿ ಬೆಳೆದು ಬೇಕೆಂದ ಕಡೆಗೆಲ್ಲ ತನ್ನ ಬಾಹುಳ್ಯವನ್ನು ಚಾಚಿಕೊಂಡು ಬಿಡುತ್ತದೆ. ಇದೊಂದು ರೀತಿಯ ರಕ್ತಬೀಜಾಸುರನ ಹಾಗೆ!  ಈ ಅಹಂಕಾರವು ಯಾವುದೇ ದಿಕ್ಕಿನಿಂದ ಬಂದು ನಮ್ಮನ್ನು ಆವರಿಸಿಬಿಡಬಹುದು. ಅಹಂಕಾರಕ್ಕೆ ಇಂತಹುದೇ ಒಂದು ನಿರ್ಧಿಷ್ಟ ದಾರಿಯಿಲ್ಲ. ಇದು ಯಾವುದೇ ಸನ್ನಿವೇಶವನ್ನು ತನ್ನದಾಗಿಸಿಕೊಂಡು ಗಟ್ಟಿ ಬೇರುಗಳನ್ನು  ಬಿಡಬಲ್ಲದು.

                  ಸಾತ್ವಿಕತೆ ಉದಯವಾಗುವುದು ಅಹಂಕಾರದ ಮರಣದ ನಂತರ. ಆಚಾರ್ಯ ರಜನೀಷರು ಹೇಳುತ್ತಾರೆ. "ಸಾತ್ವಿಕತೆ ಇದ್ದಲ್ಲಿ ಅಹಂಕಾರ ಇರುವುದಿಲ್ಲ.  ಅಹಂಕಾರ ಇರುವಲ್ಲಿ ಸಾತ್ವಿಕತೆಗೆ ಜಾಗವೇ ಇಲ್ಲ. ಒಂದೇ ಜಾಗದಲ್ಲಿ ಎರಡು ಭಾವಗಳು ಇರಲು ಹೇಗೆ ತಾನೇ ಸಾಧ್ಯ?"    ತಮಸ್ಸು, ರಜಸ್ಸು ಮುಂತಾದ ಪರಿಕ್ರಮಗಳೆಲ್ಲ ಮುಗಿದನಂತರ ಸಾತ್ವಿಕತೆ ಕಾಣುತ್ತದೆ.  ಸಾತ್ವಿಕ ನಾಗಿ ಉಳಿಯಲು ಆಹಾರ ವಿಹಾರಗಳ ಜೊತೆಗೆ ನಡೆನುಡಿಗಳಲ್ಲಿ  ಕ್ಷಣ ಕ್ಷಣದಲ್ಲೂ ಎಚ್ಚರನಾಗಿರಬೇಕು. ಶ್ರೀ ಶಂಕರರು ಹೇಳುತ್ತಾರೆ " ಸಾಧಕನು, ಅಧ್ಯಾತ್ಮದಲ್ಲಿ  ಮೇಲೆ ಹೋದಂತ್ತೆಲ್ಲ ದಾರಿ ಕಿರಿದು ಮತ್ತು  ಜಾರಿಕೆಯದು. ಒಮ್ಮೆ ಎಚ್ಚರ ತಪ್ಪಿದರೆ ಸಾಕು ನೇರ ಪ್ರಪಾತವೆ!  ಆದ್ದರಿಂದ ಸಾಧಕನು ತನ್ನೆಲ್ಲ ಮೋಹಭಾವದ ಹೊರೆಯನ್ನು ಕಳಚುತ್ತ ಹೋದರೆ ಭಾರ ಕಡಿಮೆಯಾಗುತ್ತದೆ.  ಹಗುರವಾದಂತೆ ಮೇಲೇರುವುದು ಸುಲಭ".   ಇದನ್ನು ವಿವರಿಸಲು ಶಂಕರರು ಇನ್ನೊಂದು ಉದಾಹರಣೆ ಕೊಡುತ್ತಾರೆ "ಬೆಟ್ಟದ ಮೇಲೆ ನಿಂತು ಮಗು ಚಂಡಿನ  ಆಟ ಅಡುತ್ತಿರುತ್ತದೆ.  ಬಹಳ ಜಾಗರೂಕತೆಯಿಂದ ಆಡುತ್ತದೆ. ಏಕೆಂದರೆ, ಮಗುವಿಗೆ ಗೊತ್ತು,  ಒಮ್ಮೆ ತಪ್ಪು ಮಾಡಿದರೆ ಚಂಡು ಒಂದೇ ಕ್ಷಣದಲ್ಲಿ ಕೆಳಕ್ಕೆ ಬಿದ್ದು ಬಿಡುತ್ತದೆ."  ಹೌದು, ಸಾಧಕನು ಅಹಂಕಾರಕ್ಕೆ ವಶನಾದರೆ ಸತ್ವದ  ಬದಲಿಗೆ ಅಹಂಕಾರ ವೃದ್ಧಿಯಾಗುತ್ತದೆ. ಸತ್ವಗುಣ ಬೆಳೆದಿದೆಯೆಂಬ ಅಹಂಕಾರಕ್ಕೆ ಮೊದಲು ಬೀಳುತ್ತಾನೆ.    "ಅಹಂಕಾರ ಉದಯವಾಗಿದ್ದು ಎಲ್ಲಿಂದ   ಎಂಬುದನ್ನು ಮೊದಲು ಪ್ರಶ್ನೆ ಮಾಡು. ನಾನು ಎಂಬುದೇ ಅಹಂಕಾರದ ಬೀಜ. ಈ  'ನಾನು'  ದೇಹವೋ? ಆತ್ಮವೋ? ಎಂಬುದನ್ನು ವಿಚಾರಮಾಡು. " ಎನ್ನುತ್ತಾರೆ ಭಗವಾನ್ ರಮಣರು.

                  "ಅಹಂಕಾರದ ಮುಕ್ತಿಗಾಗಿ ಬಯಸುವವನು ವರ್ತಮಾನದಲ್ಲಿ ಬದುಕಲು ಪ್ರಾರಂಭಿಸಬೇಕು.  ಅವನಿಗೆ ನಿನ್ನೆಗಳು ಸತ್ತಿವೆ, ನಾಳೆಗಳು ಬೇಕಾಗಿಲ್ಲ.  ಇಂದಿಗೆ ಬದುಕುವವನಿಗೆ ಈ ನಾಳೆಗಳು ಅನಿವಾರ್ಯವಲ್ಲ.  ಇಂದಿಗೆ ಬದುಕಲು ಪ್ರಾರಂಭ ಮಾಡಿದಾಗ ಬೇಕುಗಳು ಕಡಿಮೆಯಾಗುತ್ತವೆ.  ಈ ಬೇಕುಗಳೇ ನಾಳೆಯನ್ನು ಸೃಷ್ಟಿ ಮಾಡುವುದು". ಎನುತ್ತಾರೆ ಡಿ ವಿ ಜಿ .
" ಅಹಂಕಾರ ಖಂಡಿತವಾಗಿಯೂ ನಿನ್ನ ಮಿತ್ರನಲ್ಲ,  ಎಂದಿಗೂ ಅವನು ನಿನ್ನ ಶತ್ರುವೇ! ಈ ಶತ್ರುವನ್ನು  ಬೇರು ಸಮೇತ ಕಿತ್ತುಬಿಡು. ಇದು ವಾಸಿಯಾಗುವ  ರೋಗವಲ್ಲ, ಇದಕ್ಕೆ ಯಾವ ಔಷಧಿಯು ಇಲ್ಲ.   ಶಸ್ತ್ರ ಚಿಕಿತ್ಸೆಯೇ ಆಗಬೇಕು. ಮನದಾಳದಿಂದ ಕಿತ್ತುಬಿಡು." ಎನ್ನುತ್ತಾರೆ ಆಚಾರ್ಯ ರಜನೀಷರು. 

           ತಿಮ್ಮಗುರು ಹೀಗೆ ಹೇಳುತ್ತಾರೆ.

            ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ|  ಭವಿಷಿಯವ ಚಿಂತಿಸದೆ ಬದುಕ ನೂಕುತಿರು||
            ವಿವರಗಳ ಜೋಡಿಸುವ ಯಜಮಾನ ಬೇರಿಹನು|    ಸವೆಸು ನೀಂ ಜನುಮವನು ಮಂಕುತಿಮ್ಮ||  ೬೮೨ ||

                  ಈ ಕ್ಷಣವೇ ಅತ್ಯಂತ ಮದುರ. ಭಗವಂತ ಈ ಕ್ಷಣದಲ್ಲಿ ಏನೇನು ಕರುಣಿಸಿದ್ದಾನೋ ಅದು ಮಾತ್ರ ನನ್ನ ಪಾಲಿನ ಭಿಕ್ಷೆ, ಇದನ್ನು ಸಂಪೂರ್ಣವಾಗಿ ಆನಂದದಿಂದ ಅನುಭವಿಸುವ, ಅಹಂಕಾರದಿಂದ ಮುಕ್ತನಾಗಿ ದಿನನಿತ್ಯದಲ್ಲಿ  ಬದುಕುವ ಮನಸು ನೀಡಿ ಕರುಣಿಸೋ ಎಂದು ಭಗವಂತನಲ್ಲಿ ಅನನ್ಯ ಪ್ರಾರ್ಥನೆ. 
                   
ಹೆಚ್ ಏನ್ ಪ್ರಕಾಶ್ 
10 02 2012

4 comments:

  1. ಕನಕದಾಸರು ಹೇಳಿದಂತೆ "ನಾನು ಹೋದರೆ ಹೋದೆನು"...ನಾನು ಎಂಬ ಭಾವ ಎಲ್ಲಿಯ ತನಕ ನಮ್ಮನ್ನು ನೆರಳಿನ ಹಾಗೆ ಕಾಡುತ್ತದೆಯೋ ಅಲ್ಲಿಯ ತನಕ ಅಹಂಕಾರದ ಬೆಳಕಿನ ಕಡೆಗೆ ನಡೆಯುತ್ತಲೇ ಇರುತ್ತೇವೆ..
    ನೆರಳು ಬೀಳುವುದು ಬೆಳಕಿದ್ದಾಗ ನಮ್ಮ ಹಿಂದೆ ಮುಂದೆ ಅಕ್ಕ ಪಕ್ಕ ಇದ್ದಾಗ ಮಾತ್ರ...ಅದೇ ಬೆಳಕು ನಮ್ಮ ತಲೆಯ ಮೇಲೆ ಇದ್ದಾರೆ ನೆರಳಿಗೆ ಜಾಗವಿಲ್ಲ..ಅಹಂ ಒಳ್ಳೆಯದು ಅದು ಯಾವಾಗ ನಮಗೆ ಗೋಚರವಾಗದ ಹಾಗೆ, ನಮ್ಮನ್ನು ಕಾಡದ ಹಾಗೆ ತಲೆಯ ಮೇಲೆ ನಿಂತು ಮಾರ್ಗದರ್ಶನ ಮಾಡಿದಾಗ ಮಾತ್ರ ಅಹಂ ಛಾಯೆ ನಮ್ಮಣ್ಣ ಆವರಿಸುವುದಿಲ್ಲ..

    ಒಳ್ಳೆಯ ಲೇಖನ ಧನ್ಯವಾದಗಳು ಚಿಕ್ಕಪ್ಪ

    ReplyDelete
  2. ಶ್ರೀಕಾಂತ,
    ಧನ್ಯವಾದಗಳು
    ಪ್ರಕಾಶ್

    ReplyDelete
  3. ಈ ಪತ್ರವನ್ನು ನನಗೆ ಈ ಮೇಲ್ ಮೂಲಕ ಬಂದಿದುದನ್ನು ಇಲ್ಲಿ ಓದುಗರಿಗಾಗಿ ಹಾಕಿದ್ದೇನೆ.

    ನಮಸ್ತೆ
    ವಿಚಾರ ಚೆನ್ನಾಗಿದೆ ಆದರೆ ನಾವು ಅದರಂತೆ ನಡೆದುಕೊಳ್ಳಲು ನಮ್ಮಲ್ಲಿರುವ ಅಹಂ ಬಿಡುತ್ತದೆಯೇ? ನಮಗೆ ಸಿಗುವ ಪ್ರಾಮುಖ್ಯತೆ ಸ್ವಲ್ಪ ಕಡಿಮೆಯಾದರೂ ನಮ್ಮ ಮನಸಿನಲ್ಲಾಗುವ ತಳಮಳಗಳನ್ನು ಹೇಳಲಾಗುತ್ತದೆಯೇ? ನಾವೇನಾದರೂ ಇದರಿಂದ ಹೊರತಾಗಿರುವುದು ಸಾಧ್ಯವಾದರೆ ಅದ್ಭುತವೇ ಸರಿ. ಮಹಾತ್ಮರೆಲ್ಲ ಹೇಳಿರುವುದು ಸರಿ ನಾವು ಓದುತ್ತೇವೆ ಉಪದೇಶ ಮಾಡುತ್ತೇವೆ ಮಾಡುವ ಉಪದೇಶ ಅಕಸ್ಮಾತ್ ಬೇರೆಯವರಿಗೆ ಒಪ್ಪಿಗೆಯಾಗದಿದ್ದರೆ ಅಥವಾ ನಮ್ಮ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದರೆ ಅದನ್ನು ತಡೆದುಕೊಳ್ಳುವ ಮನ ಸ್ಥಿತಿ ನಮ್ಮಲ್ಲಿದೆಯೇ? ವಿಚಾರ ಅದ್ಭುತ ನಾವೇನಾದರೂ ಒಮ್ಮೆ ನುಡಿದಂತೆ ನಡೆಯಲು ಪ್ರರಮ್ಬಿಸಿದರೆ ಅದರಿಂದಾಗುವ ಆನಂದವೇ ಬೇರೆಯಲ್ಲವೆ? ಅನೇಕ ಮನೆಗಳ ಬಗ್ಗೆ ಯೋಚಿಸಿದರೆ ತಿಳಿಯುತ್ತೆ ಅಲ್ಲಿ ಮನಸ್ತಾಪ ಮಾಡಿಕೊಳ್ಳಬಹುದಾದ ಯಾವುದೇ ವಿಚಾರವೂ ಇರುವುದಿಲ್ಲ ಅತ್ತೆಗೆ ತನ್ನ ಅಹಂ ಮುಖ್ಯ ಸೊಸೆಗೆ ಅವಳ ಅಹಂ ಮುಖ್ಯ. ಅಪ್ಪನಿಗೆ ತನ್ನ ವಿಚಾರವೇ ದೊಡ್ಡದು ಮಗನಿಗೆ ಅವನದೇ ಶ್ರೇಷ್ಠ . ಯಾರದರೊಬ್ಬರು ಬೀರೆಯವರದ್ದು ಸರಿ ಇರಬಹುದು ಎನ್ನುವ ಉದಾರತೆ ತೋರಿಸಿದರೆ ಅದೇ ಸ್ವರ್ಗ ಆದರೆ ನಮಗಾರಿಗೂ ಮನೆ ಸ್ವರ್ಗವಾಗಬೇಕಿಲ್ಲವಲ್ಲ ಸ್ವರ್ಗಕ್ಕಾಗಿ, ಅದನ್ನು ಪಡೆಯಲು ಸಾಯಬೇಕು. ಸತ್ತ ಮೇಲೆ ಸಿಗುವ ಆ ಸ್ವರ್ಗಕ್ಕಾಗಿ ಹಾತೊರೆಯುತ್ತ ಜೀವನವನ್ನು ನರಕ ಮಾಡಿಕೊಳ್ಳಲು ಹಪಹಪಿಸುತ್ತೇವೆ. ಎಲ್ಲ ಉಪನ್ಯಾಸಕರು ಅಹಂಕಾರವನ್ನು ಬಿದಬೇಕೆಂದೇ ಬೋಧಿಸುತ್ತಾರೆ ಆದರೆ ಅವರು ನಡೆದುಕೊಳ್ಳುವ ರೀತಿ ಯಾವುದು?
    ಬೆಂಗಳೂರಿನ ಗೋಖಲೆ ಸಭಾಂಗಣದಲ್ಲಿ ನಡೆದ ಒಂದು ಘಟನೆ : ಒಬ್ಬ ಮಹಾನುಭಾವರ ಉಪನ್ಯಾಸ ಸಂಗೀತದ ಮೇಲೆ (ಸಂಗೀತವನ್ನು ಬಹಳವಾಗಿ ಅಭ್ಯಾಸ ಮಾಡಿದವರಲ್ಲ ಎನ್ನುವುದು ಬೇರೆ ಮಾತು) ಸಭಿಕರಲ್ಲಿ ಒಬ್ಬರು (ಶಾಸ್ತ್ರೀಯವಾಗಿ ಅಭ್ಯಸಿಸಿದವರು) ಎದ್ದು ಕೇಳಿದರು ನೀವು ಹೇಳುತ್ತಿರುವ ವಿಷಯ ಸರಿಯಿಲ್ಲ ಅದು ಸತ್ಯಕ್ಕೆ ದೂರವಾಗಿದೆ, ಸಂಗಿತದಲ್ಲಿ ಇರುವುದೇ ಬೇರೆ ಎಂದಾಗ ಉಪನ್ಯಾಸಕರು ಕೊಟ್ಟ ಉತ್ತರ ಏನು ಗೊತ್ತ? ಇಲ್ಲಿ ಕಾರ್ಯಕ್ರಮ ಇರುವುದು ಯಾರಿಗೆ ಸಂಗೀತ ಗೊತ್ತಿಲ್ಲವೋ ಅವರಿಗಾಗಿ ನಿಮ್ಮಂತವರು ಈ ಕಾರ್ಯಕ್ರಮಕ್ಕೆ ಬರುವ ಅಗತ್ಯವಿಲ್ಲ! ತಮ್ಮ ದೋಷವನ್ನು ತಿದ್ದಿಕೊಳ್ಳುವ ಪ್ರಯತ್ನಕ್ಕೆ ಆತ್ಮ ಜ್ಞಾನದ ಬಗ್ಗೆ ಬೋಧನೆ ಮಾಡುವ ವ್ಯಕ್ತಿಯ ಅಹಂಗೆ ಅಡ್ಡಿಯಾಯಿತು ಅದರ ಪರಿಣಾಮ ಇದು. ಅಕಸ್ಮಾತ್ ಅವರು ನಿಜವಾದ ಜ್ನಾನಿಗಲಾಗಿದ್ದರೆ ದೋಷವನ್ನು ತಿದ್ದಿಕೊಳ್ಳಲು ತಿಳಿದವರ ಸಹಾಯ ಪಡೆಯಬಹುದಿತ್ತು ಅಲ್ಲವೇ?
    ಹಾಗಾಗಿ ನಾವು ಒಂದು ಒಳ್ಳೆಯ ವಿಷಯದ ಬಗ್ಗೆ ಚಿಂತನೆ ನಡೆಸುತ್ತಿರುವುದರಿಂದ ಕನಿಷ್ಠ ನಾವುಗಲಾದರು ಇದರಿಂದ ಹೊರ ಬರಬಹುದೇ? ಯೋಚಿಸೋಣ

    ಸತೀಶ

    ReplyDelete
  4. ಆತ್ಮೀಯ ಸತೀಶನಿಗೆ,
    ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು . ನನ್ನ ಉದ್ದೇಶವು ಅಷ್ಟೇ . ಸಾಧ್ಯವಾದಷ್ಟು ಒಳ್ಳೆಯ ವಿಚಾರಗಳನ್ನು ಚಿಂತಿಸಿ ಅದನ್ನು ನಮ್ಮ ಜೀವನದಲ್ಲಿ ಪಾಲನೆ ಮಾಡಿಕೊಳ್ಳುವ ಮನಸ್ಸು ಮತ್ತು ಸಂಕಲ್ಪ ಮಾಡಬೇಕೆನ್ನುವುದೇ ನನ್ನ ಉದ್ದೇಶ. ಇದು ನಮ್ಮ ಮನೆಯಿಂದಲೇ ಪ್ರಾರಂಭವಾಗಲಿ.
    ಹೀಗೆ ನಿನ್ನ ಅಭಿಪ್ರಾಯಗಳು ಬರುತ್ತಿರಲಿ.
    ನಿನ್ನ ಆತ್ಮೀಯ.
    ಪ್ರಕಾಶ್

    ReplyDelete