ಜೀವನ ಸುಂದರ ಮತ್ತು ಸ್ವಾರಸ್ಯ
ಈ ಜಗತ್ತಿನಲ್ಲಿರುವ ಅದೆಷ್ಟೋ ಅದ್ಭುತ ಎನಿಸುವ ಹಲವಾರು ಅನ್ವೇಷಣೆಗೆ ಮಾನವ ಕಾರಣನಾಗಿದ್ದಾನೆ. ಜೀವನದಲ್ಲಿ ಸುಖದ ನಿರಂತರ ಹುಡುಕಾಟದ ಸಲುವಾಗಿ ತನ್ನ ಅನುಕೂಲವನ್ನು ಆಶ್ರಯಿಸಿ ಹಲವಾರು ಸಾಧನ ಸಾಮಗ್ರಿಗಳನ್ನು ಕಂಡುಹಿಡಿದಿದ್ದಾನೆ. ಒಂದರ ನಂತರ ಮತ್ತೊಂದರಂತೆ ಇವನ ಸುಖದ ಅನ್ವೇಷಣೆ ನಿರಂತರವಾಗಿ ಸಾಗಿದೆ. ಆದರೂ, ಮಾನವನಿಗೆ ನಿಜವಾಗಿ ಬೇಕೆನಿಸಿದ ಸುಖ ಸಿಕ್ಕಿಲ್ಲದವನಂತೆ ಚಡಪಡಿಸುತ್ತಿದ್ದಾನೆ. ಅವನಿಗೆ ಏನು ಬೇಕು? ಎನ್ನುವುದರ ಬಗ್ಗೆಯೂ ಅವನಿಗೆ ಗೊಂದಲವಿದೆ. ಅವನಿಗೆ ಏನು ಸಿಕ್ಕರೆ ಸುಖ ಸಂಪೂರ್ಣವಾಗಿ ಸಿಗುತ್ತದೆ? ಎನ್ನುವ ಬಗ್ಗೆ ಹಲವಾರು ಸಂಶಯಗಳಿವೆ. " ಇಷ್ಟಾದರೆ ಮತ್ತಷ್ಟು ಬೇಕೆಂಬಾಸೆ, ಮತ್ತಷ್ಟಾದರೆ ಮಗದಷ್ಟು ಬೇಕೆಂಬಾಸೆ " ಹೀಗಾಗಿ ಅವನ ಹುಡುಕಾಟ ನಿರಂತರವಾಗಿ ಸಾಗುತ್ತಾ ಇದೆ. "ಹೊರಗಿನ ಪ್ರಪಂಚದಲ್ಲಿ ಎಷ್ಟೇ ಸುಖವೆನ್ನುವ ವಸ್ತುವಾಗಲಿ, ಭಾವನೆಯಾಗಲಿ ನಮಗೆ ಸಿಕ್ಕಂತೆ ಅನಿಸಿದರೂ ಅದು ಕೇವಲ ತಾತ್ಕಾಲಿಕವಾದದ್ದು, ಅದರಿಂದ ನಮಗೆ ನಿರಂತರ ಸುಖ ಸಿಗಲು ಸಾಧ್ಯವಿಲ್ಲ" ಎಂಬ ಸತ್ಯದ ಅರಿವು ಇಲ್ಲದಿರುವುದು ಮಾನವನ ದೌರ್ಬಲ್ಯಗಳಲ್ಲಿ ಒಂದಾಗುತ್ತದೆ ಎಂದು ಸಂತರು ಅಭಿಪ್ರಾಯಪಡುತ್ತಾರೆ. ಯಾವುದು ಲೌಕಿಕ ಪ್ರಪಂಚದಲ್ಲಿ ಸುಖವನ್ನು ನೀಡಬಲ್ಲದೋ ಅದು ದುಃಖವನ್ನು ತಪ್ಪದೆ ನೀಡುತ್ತದೆ. ಈ ದುಃಖದಿಂದ ತಪ್ಪಿಸಿಕೊಳ್ಳಲು ಮತ್ತೊಂದು ಸುಖದ ಅನ್ವೇಷಣೆ, ಮತ್ತೆ ದುಃಖ ಹೀಗೆ ಸಾಗಿದೆ ನಮ್ಮ ನಿತ್ಯದ ಬದುಕು. ಮಾನವ ಎಲ್ಲವನ್ನು ಗೆದ್ದೇ ಬಿಡುತ್ತೆನೆಂಬ ಹುಚ್ಚು ಸಾಹಸದಲ್ಲಿ ತನ್ನೆಲ್ಲ ಶ್ರಮ, ಬುದ್ಧಿವಂತಿಕೆವನ್ನು ವ್ಯಯಿಸಿ ನಿತ್ಯದ ಸುಖವನ್ನು ಬಲಿಕೊಟ್ಟು ನಿರಾಶನಾಗುತ್ತಿದ್ದಾನೆ. ಆದರೆ, ಮಾನವ ತನ್ನ ಇತಿಮಿತಿಗಳನ್ನು ಅರಿಯದಿರುವುದೂ ಒಂದು ದೋಷವಾಗಿದೆ. ಈ ಪ್ರಪಂಚದಲ್ಲಿ ಅದೆಷ್ಟು ವಿಸ್ಮಯಕಾರಕವಾದದ್ದು ಪ್ರಕೃತಿಯಲ್ಲಿ ಇದೆ ಎಂದು ಪಟ್ಟಿ ಮಾಡುತ್ತಾ ಹೋದರೆ, ಆಗ ಮಾನವ ಪ್ರಕೃತಿಯನ್ನು ಮೀರಿಸಲಾಗಲಿ, ಗೆಲ್ಲಲಾಗಲಿ ಸಾಧ್ಯವಿಲ್ಲ ಮತ್ತು ತನ್ನ ಸಾಧನೆಗೊಂದು ಮಿತಿ ಇದೆ ಎಂದು ಅರ್ಥವಾಗುತ್ತದೆ.
ಮಾನವ, ತನ್ನ ಇತಿಮಿತಿಯಲ್ಲಿ ದುಡಿಯುತ್ತಿರುವ ತಾನು ಎಲ್ಲಕ್ಕೂ ಕಾರಣ ಎಂದು ಎಷ್ಟು ಅಹಂಕಾರದಿಂದ ಕೊಚ್ಚಿಕೊಂಡರು ಕೆಲವು ಪ್ರಶ್ನೆಗಳಿಗೆ ನಿರುತ್ತರನಾಗಲೇ ಬೇಕಾಗುತ್ತದೆ. " ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರಾರು? ಕಲ್ಲಿನೊಳು ಕೂಗುವ ಕಪ್ಪೆಗಳಿಗೆ ಅಲ್ಲಲ್ಲಿ ಆಹಾರವಿತ್ತವರು ಯಾರು?" ಎಂದು ಪುರಂದರ ದಾಸರು ಕೇಳಿದರೆ, " ಇಳೆ ನಿಂಬು ಮಾಮರಕೆ ಹುಳಿನೀರೆದವರಾರು? ಕಬ್ಬು ಬಾಲೆ ಹಲಸು ನಾರಿಕೇಳಕ್ಕೆ ಸಿಹಿನೀರೆದವರಾರು? ಮರುಗ ಮಲ್ಲಿಗೆ ಪಚ್ಚೆಗೆ ಪರಿಮಳದ ನೀರೆದವರಾರು? " ಎಂದು ಅಕ್ಕಮಹಾದೇವಿ ಕೇಳುತ್ತಾಳೆ. ಈ ಪ್ರಶ್ನೆಗೆ ಮಾನವನ ಉತ್ತರ ಕೇವಲ " ನಾನಲ್ಲ ನಾನಲ್ಲ ..... " ಎನ್ನುವುದೇ ಆಗಿದೆ. ಹೀಗೆ ಹುಡುಕುತ್ತಾ ಹೋದರೆ ಈ ಅಚ್ಚರಿಗಳ ಸರಮಾಲೆ ಎಲ್ಲೆಲ್ಲೂ ಕಾಣುತ್ತದೆ. ಆದರೆ, ನಮಗೆ ನೋಡುವ ಕಣ್ಣಿರಬೇಕು ಅಷ್ಟೇ!
ಈ ಆಚ್ಚರಿ ಅರ್ಥವಾಗಬೇಕಾದರೆ ಬದುಕಿನ ಅರ್ಥವನ್ನು ತಿಳಿಯಬೇಕಾಗುತ್ತದೆ ಎಂದು ನಮ್ಮ ದಾರ್ಶನಿಕರು ಮಾರ್ಮಿಕವಾಗಿ ಹೇಳಿದರು. ಅಂತರಂಗದ ಅಂಧಕಾರವನ್ನು ತೊರೆದು ಸಾತ್ವಿಕ ಜೀವನದ ಕಡೆ ಮುಖ ಮಾಡಿದರೆ ಆಗ " ಬದುಕಿಗೊಂದು ಅರ್ಥವಿದೆ, ಬದುಕಿಗೊಂದು ಅಂತ್ಯವಿದೆ " ಎಂಬ ಸತ್ಯದ ಅರಿವಾಗುತ್ತದೆ. ಸಾತ್ವಿಕ ಬದುಕಿಗೆ ಪ್ರೇರಕ ಶಕ್ತಿ ಎಂಬುದು ಕೇವಲ ದೈವದಿಂದ ಮಾತ್ರ ಸಾಧ್ಯ ಎಂಬ ತಿಳಿವು ಮೂಡುತ್ತದೆ. " ಬಿಟ್ಟು ಹೋಗುವಾಗ ಹೊತ್ತು ಹೋಗಲಾಗದ ಸಂಪತ್ತು ನಮ್ಮದು ಹೇಗಾಗುತ್ತದೆ? " ಎಂಬ ಜ್ಞಾನಿಗಳ ನುಡಿ ನಮ್ಮನ್ನು ಎಚ್ಚರಿಸುತ್ತದೆ. ನಮ್ಮದಲ್ಲದ ಹಾಗು ಶಾಶ್ವತವಲ್ಲದ ಸಿರಿಸಂಪತ್ತುಗಳಿಗೆ ಅಂಟಿಕೊಂಡು ಅಂಟಿಕೊಳ್ಳದಂತೆ ಸದ್ಗುಣನಾಗಿ ಬಾಳುವುದು ಪರಮಾತ್ಮನಿಗೆ ಪ್ರಿಯವಾದ ಬದುಕು. ಬದುಕಿನ ಸದಾಶಯ ಸಾತ್ವಿಕವಾದ ನಿತ್ಯದ ಬದುಕೆ ಆಗಿದೆ.
ವರ್ಷದಲ್ಲಿ 365 ದಿನ ಸುಖವಾಗಿ ಆನಂದದಿಂದ ಬದುಕಬೇಕೆಂದರೆ ನಾವು ಎರಡು ದಿನಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಆಗ 363 ದಿನಗಳು ಸುಖವಾಗಿ ಆನಂದದಿಂದ ಬದುಕಬಹುದುದೆಂದು ಒಬ್ಬ ದಾರ್ಶನಿಕರು ಹೇಳುತ್ತಾರೆ. " ಒಂದು ನಿನ್ನೆಯ ದಿನ, ಇನ್ನೊಂದು ನಾಳೆಯದಿನ. ನಿನ್ನೆಯ ಬಗ್ಗೆ ಚಿಂತಿಸದೆ, ನಾಳೆಯ ಬಗ್ಗೆ ಯೋಚಿಸದೆ, ಕೇವಲ ಇಂದಿನ ಬಗ್ಗೆ ಮಾತ್ರ ಬದುಕು."
ಬಂದಿದ್ದನ್ನು ಯಥಾಮತಿ ಸ್ವೀಕಾರ ಮಾಡಿ ಆನಂದದಿಂದ, ಪ್ರೇಮದಿಂದ ಬದುಕಲು ಕಲಿತಾಗ ಜೀವನ ಸುಂದರ ಮತ್ತು ಸ್ವಾರಸ್ಯ ಎನ್ನುತ್ತಾರೆ ದಾರ್ಶನಿಕರು. ನೀವೇನು ಹೇಳುತ್ತಿರಾ?