February 1, 2014

ಉಪನಿಷತ್ತಿನ ಸಂದೇಶ

ಉಪನಿಷತ್ತಿನ ಸಂದೇಶ 


                        'ಜಾಗೃತಾ' ಎನ್ನುವ ಪದವನ್ನು ಉಪನಿಷತ್ತಿನಲ್ಲಿ ಬಳಸಲಾಗಿದೆ.  ಈ ಪದದ ಅರ್ಥ ಬಹಳ ಗಂಭೀರ ಮತ್ತು ಗಹನ.  " ನೀನು ಈ ಜಗತ್ತಿನಲ್ಲಿ ಬದುಕಿರುವೆ; ನಿನ್ನ ಬದುಕಿಗೆ ಪ್ರಾರಂಭ ವಿರುವಂತೆ ಅಂತ್ಯವೂ ಇದ್ದೆ ಇದೆ."  ಇದೇ ಜಾಗೃತಾ ಎನ್ನುವ ಪದದ ಅರ್ಥ. ( ಜಗತ್ ಎಂದರೆ ಪ್ರಾರಂಭ, ಇರುವುಕೆ ಅಥವಾ ಬದುಕಿರುವುದು ಮತ್ತು ಅಂತ್ಯ )   " ನೀನು ಈ ಜಗತ್ತಿಗೆ ಶಾಶ್ವತವೇನಲ್ಲ " ಎಂಬುವ ಕಟೋರ ಸತ್ಯವನ್ನು ' ಜಾಗೃತ ' ಎನ್ನುವ ಪದ ತಿಳಿಸುತ್ತದೆ.  ನೀನು,ನಿನ್ನ ಮನೆ, ನಿನ್ನ ಕಚೇರಿ, ನೀನಿರುವ ಜಾಗ , ನಿನ್ನ ದೇಶ ಯಾವುದೂ ಶಾಶ್ವತವಲ್ಲ.  ಈ ಜಗತ್ತಿನಲ್ಲಿ ಹುಟ್ಟು ಎಂಬುದರ ಜೊತೆಗೆ ಸಾವು ಬಂದಿದೆ.  ಈ ದಿನದ ಹಿಂದಿನ ಶತಮಾನದಲ್ಲಿ ನೀನು ಇರಲಿಲ್ಲ, ಮುಂದಿನ ಶತಮಾನದ ಈ ದಿನ ನೀನು ಇರುವುದಿಲ್ಲ.  ಈ ಜಗತ್ತಿಗೆ ಎಲ್ಲಿಂದ ಬಂದಿರುವೆಯೋ ಅಲ್ಲಿಗೊಂದು ದಿನ ಹೊರಡಲೇ ಬೇಕು.  ನಿನ್ನ ದೇಹ ಭೂಮಿಗೋ, ನೀರಿಗೋ, ಬೆಂಕಿಗೋ, ಗಾಳಿಗೋ, ಸೇರಿ ಅಲ್ಲಿ ಲೀನವಾಗಿಬಿಡುತ್ತದೆ. ನಿನ್ನ ಆತ್ಮ ಮತ್ತೊಂದು ದೇಹದ ಹುಡುಕಾಟದ ಯಾತ್ರೆಯಲ್ಲಿ ತೊಡಗುತ್ತದೆ. ನಿನಗೆ ಸಂಬಂಧಿಸಿದ ಯಾವುದೇ ಆಗಲಿ ಅದು ಪ್ರಾರಂಭ ವಾದರೆ ಅದೂ ಕೂಡಾ ಕೊನೆಯಾಗುತ್ತದೆ."ತಸ್ಮಾತ್ ಜಾಗೃತಾ'"-- ಸದಾ ಎಚ್ಚರದಿಂದಿರು, ಈ ಜಗತ್ತಿಗೆ ನೀನು ಶಾಶ್ವತವಲ್ಲ, ಧ್ಯಾನದಿಂದಿರು ನೀನು ಇಲ್ಲಿ ಶಾಶ್ವತನಲ್ಲ.  ಇದನ್ನು ತಿಳಿ, ಸದಾ ದೈರ್ಯದಿಂದ ಇರು. 
                         ನೀನು ನಿನ್ನ ತಂದೆ ತಾಯಿಯಿಂದ ಈ ಜಗತ್ತಿಗೆ ಬಂದಿರುವೆ. ಬಹಳ ಕಾಲ ಬದುಕಿ ಬಾಳುವೆ. ನೀನು ಹೊರಡುವ ಕಾಲ ಬಂದಾಗ ನಿನ್ನ  ಎಲ್ಲವನ್ನು ಇಲ್ಲಿಯೇ ಬಿಟ್ಟು ತೆರಳಬೇಕು . ನಿನ್ನ ದೇಹ ಕೂಡ ನಿನ್ನೊಡನೆ ಬಾರದು.  ಇರುವತನಕ ನೀನು ಮಾಡಿದ ಒಳ್ಳೆಯದು ಕೆಟ್ಟದ್ದು ಮಾತ್ರ ಈ ಜಗತ್ತಿನಲ್ಲಿ ಉಳಿಯುತ್ತದೆ. ಉತ್ತಮವಾದ  ಕೆಲಸವನ್ನು ಮಾದು. ಈ ಜಗತ್ತಿನಲ್ಲಿರುವ ತನಕ ಬಡವರಿಗೆ, ಹಸಿದವರಿಗೆ, ವಯೋವೃದ್ಧರಿಗೆ, ಅಬಲರಿಗೆ ಮತ್ತೆಲ್ಲಾ ಸಹಭಾಗಿಗಳಿಗೆ ಸಾಧ್ಯವಾದಷ್ಟು, ಏನನ್ನೂ ನಿರೀಕ್ಷಿಸದೇ ಸಹಾಯ ಮಾದು. ಪ್ರತೀ ಉಸಿರಿನಲ್ಲೂ ಸರ್ವರಿಗೂ ಒಳಿತನ್ನು ಬಯಸು.  ನೀನು ಜೀವದಿಂದ ಇರುವಷ್ಟು ಸಮಯ ಸಂತೋಷದಿಂದ ಬದುಕು, ಅದೇ ರೀತಿ ಬೇರೆಯವರನ್ನು ಸಂತೋಷದಿಂದ ಬದುಕಲು ಬಿಡು.  ಇದೆ ಉಪನಿಷತ್ತಿನ ಸಂದೇಶ.