March 25, 2015

ಅವಿಚ್ಛಿನ್ನ ಪ್ರೇಮ
               ಒಬ್ಬ ಸುಂದರ ಯುವಕ. ಅವಿವಾಹಿತ, ತನ್ನ ತಾಯಿಯ ಪ್ರೀತಿಯ ಮಗ.  ದೇವರ ಮೇಲೆ ಪರಮ ಭಕ್ತಿ.  ಹೇಗಾದರೂ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆಯಲೇ ಬೇಕೆಂಬ ಅತ್ಯುಗ್ರ ಹಂಬಲ.  ಆದರೆ ತನ್ನ ತಾಯಿಯನ್ನು ಒಂಟಿಯಾಗಿ ಬಿಟ್ಟು ಹೋಗಬೇಕಲ್ಲ ಎಂಬ ಚಿಂತೆ. ಒಂದು ದಿನ ದೈರ್ಯ ಮಾಡಿ ತನ್ನ ಬಯಕೆಯನ್ನುತಾಯಿಯ ಮುಂದೆ ಇಟ್ಟ. ತಾಯಿಯ ಸಮ್ಮತಿಗಾಗಿ  ಬೇಡಿದ.  ತಾಯಿ  ಈ ಮಾತು ಕೇಳಿ “ ನನ್ನಿಂದ ದೂರವಾಗಲು ನಿನಗೆ ಮನಸ್ಸು ಹೇಗೆ ಬರುತ್ತದೆ ಮಗನೆ? ನನ್ನ ಪ್ರೇಮಕ್ಕಿಂತ ನಿನಗೆ ಮಹತ್ವ ಬೇರೆ ಏನಿದೆ? ನನ್ನ ಪ್ರೇಮಕ್ಕಿಂತ ನಿನ್ನ ಬಯಕೆ ಪವಿತ್ರ ಮತ್ತು ಮಹತ್ವ ಎಂದು ನಿನಗನಿಸಿದರೆ ನೀನು ಖಂಡಿತಾ ಹೋಗು.  ಭಗವಂತನನ್ನು ಕಾಣು.  ಆದರೆ ಭಗವಂತನ ದರ್ಶನ ಪಡೆದು ಪುನೀತವಾದ ನಿನ್ನ ಪ್ರಸನ್ನವಾದ ಮುಖವನ್ನು ನಾನು ಸಾಯುವುದರೊಳಗೆ ನೋಡಬೇಕು.  ಈ ಆಸೆಯನ್ನು ನೆರವೇರಿಸಿಕೊಡುವೆಯಾ?  ಅದೇ ನನ್ನ ಬಾಳಿನ ಕೃತಾರ್ಥತೆ.  ನಾನು ನಿನಗಾಗಿ ದಾರಿ ಕಾಯುತ್ತಿರುತ್ತೇನೆ.  ನೀನು ಬೇಗ ಬರುವಂತಾಗಲಿ.  ನನಗಿನ್ನೇನೂ ಬೇಡ, ನಿನ್ನ  ಧನ್ಯತೆಯಲ್ಲೇ ನನ್ನ ಧನ್ಯತೆ.  ಹೋಗಿ ಬಾ ಮಗನೇ ನಿನ್ನ ಮನೋಭಿಷ್ಟ ನೆರವೇರಲಿ “ ಎಂದು ತುಂಬು ಹೃದಯದಿಂದ ಹಾರೈಸಿ ಮಗನನ್ನು  ಬೀಳ್ಕೊಟ್ಟಳು.
              ಆ ಯುವಕ ಭಗವಂತನ ಸಾಕ್ಷಾತ್ಕಾರಕ್ಕಾಗಿ ಕಂಡ ಕಂಡ ಕಡೆ ಅಲೆದ.   ಹಲವಾರು ಸಂತ, ಗುರು, ಸನ್ಯಾಸಿಗಳಲ್ಲಿ ಸಾಧನೆ ಮಾಡಿದ. ಹಿಮಾಲಯಕ್ಕೆ ಹೋದ. ಧ್ಯಾನ ಮಾಡಿದ, ಉಪವಾಸದ ಜೊತೆಗೆ ಹಟ ಸಾಧನೆ ಮಾಡಿದ. ದಶಕಗಳೇ ಕಳೆದವು. ದೇವನ ದರ್ಶನ ಭಾಗ್ಯ ಮಾತ್ರ ಲಭ್ಯವಾಗಲಿಲ್ಲ.  ಭಗವಂತನ ಸಾಕ್ಷಾತ್ಕಾರಕ್ಕಾಗಿ ಮಾಡಿದ ಸಾಧನೆಗಳೆಲ್ಲಾ ವ್ಯರ್ಥವೆನಿಸಿತು. ಬಹಳ ನಿರಾಸೆಯಾಗಲು  ಪ್ರಾರಂಭವಾಯಿತು.  ವ್ಯಥೆ ದಿನ ನಿತ್ಯದ ಬದುಕಾಯಿತು.  ಒಂದು ದಿನ ಇದ್ದಕ್ಕೆ ಇದ್ದ ಹಾಗೆ ತನ್ನ ತಾಯಿಯ ನೆನಪಾಯಿತು.  ಆ ನನ್ನ ವೃದ್ಧತಾಯಿ  ನನ್ನ ಬರುವಿಕೆಯನ್ನು ಅದೆಷ್ಟು ಕಾತುರದಿಂದ ಕಾಯುತ್ತಾ ಇರಬೇಕು?  ನಾನು ಆಕೆಗೆ ಹೇಗೆ ಈ ಮುಖವನ್ನು ತೋರಿಸಲಿ? ನನ್ನ ಪ್ರತೀಕ್ಷೆಯಲ್ಲಿರುವ ಆ ನನ್ನ ತಾಯಿಗೆ ಈ ನಿನ್ನ ಮಗನಿಗೆ ಸಾಕ್ಷಾತ್ಕಾರವಾಗಲಿಲ್ಲವೆಂಬ ವಾರ್ತೆಯನ್ನು ಹೇಗೆ ಹೇಳಲಿ? ಈ ವಾರ್ತೆ ಕೇಳಿ  ಆ ನನ್ನ ತಾಯಿ ಹೇಗೆ ತಡೆದುಕೊಂಡಾಳು? ಹೀಗೆ ಹಲವಾರು ಯೋಚನೆಗಳು ತಲೆಯಲ್ಲಿ ಹೊಕ್ಕವು.  ಏನಾದರಾಗಲಿ ಇಷ್ಟು ದೀರ್ಘಕಾಲದ ಸಾಧನೆಯಲ್ಲಿ ಭಗವಂತನ ದರ್ಶನವಂತು ಆಗಲಿಲ್ಲ, ಕನಿಷ್ಠ ಸಾಯುವುದರೊಳಗೆ ನನ್ನ ತಾಯಿಯನ್ನಾದರು ದರ್ಶನ ಮಾಡಿಬಿಡಬೇಕು.  ತಾಯಿಯನ್ನು ನೋಡಿದ ಧನ್ಯತೆಯಾದರು ನನಗೆ ಉಳಿದೀತು ಎಂದು ಯೋಚಿಸಿ ತನ್ನ ಊರಿನ ಕಡೆಗೆ ಹೊರಟ.
             ಆತ  ಬರುವಾಗ ರಾತ್ರಿಯಾಗಿತ್ತು. ತಾನಿದ್ದ ಮನೆಯಲ್ಲಿ ಏನೂ ಬದಲಾವಣೆ ಇಲ್ಲ. ಹೊರಗೆ ಕತ್ತಲೆ, ಬಾಗಿಲ ಕಿಂಡಿಯಿಂದ ಇಣುಕಿ ನೋಡಿದ. ತಾಯಿ ಅತ್ಯಂತ ಮುಪ್ಪಾಗಿದ್ದಾಳೆ.  ಪಡಸಾಲೆಯಲ್ಲಿ ದೀಪದ ಎದುರು ಕೂತು ಅತ್ಯಂತ ಏಕಾಗ್ರತೆಯಿಂದ ಭಗವಂತನನ್ನು ಪ್ರಾರ್ಥಿಸುತ್ತಿದ್ದಾಳೆ. ಸ್ವಲ್ಪ ಸಮಯದ ನಂತರ ವೃದ್ಧಳಾದ ತಾಯಿ ಭಗವಂತನಿಗೆ ಕೈ ಮುಗಿಯುತ್ತಾ “ ದೇವನೇ, ನನ್ನ ಮಗ ನಿನ್ನ ನೋಡಲು ಹೋಗಿ ಮುವ್ವತ್ತು ವರ್ಷಗಳೇ ಕಳೆದಿವೆ.  ನಿನಗಾಗಿ ಅವನು ಕಾತರಿಸುತ್ತ ಜೀವನ ತಳ್ಳುತ್ತಿರಬೇಕು, ತಳಮಳಿಸುತ್ತಿರಬೇಕು.  ಬೇಗ ಅವನಿಗೆ ದರ್ಶನ ಕರುಣಿಸು ದೇವಾ!  ಅವನಿಗೆ  ಅನುಗ್ರಹಿಸು!  ಅವನ ಯಶವೇ ನನ್ನ ಯಶ.  ಅವನ ಸಿದ್ಧಿಯೇ ನನ್ನ ಸಿದ್ಧಿ.  ಅವನ ಕೃತಾರ್ಥತೆಯೇ ನನ್ನ ಕೃತಾರ್ಥತೆ!  ದೇವನೇ ನನಗಾಗಿ ಏನೂ ಬೇಡ.  ನಿನ್ನೆಲ್ಲ ಕಾರುಣ್ಯವನ್ನು ನನ್ನ ಮಗನಿಗೆ ಕರುಣಿಸು ದೇವ ದೇವ “. ಎಂದು ಕಣ್ಣೀರು ಸುರಿಸುತ್ತಾ ಅನನ್ಯವಾಗಿ ಬೇಡುತ್ತಿದ್ದಳು.  ಈ ಮಾತುಗಳನ್ನು ಕೇಳುತ್ತಿದ್ದ ಮಗನ ಕಣ್ಣಲ್ಲಿ ನೀರಾಡಲು ಪ್ರಾರಂಭವಾಯಿತು.  “ ತಾನೆಂತಹ ಸ್ವಾರ್ಥಿಯಾಗಿ ಬಿಟ್ಟೆ.  ನನ್ನ ಹಿತ ಸಾಧನೆಯ ಮುವ್ವತ್ತು ವರ್ಷಗಳಲ್ಲಿ ಒಮ್ಮೆಯೂ ನಾನು ತಾಯಿಯನ್ನು ನೆನಪಿಸಿಕೊಳ್ಳಲಿಲ್ಲ.  ಆದರೆ,  ಈ ನನ್ನ ತಾಯಿ ನನಗಾಗಿ ಸತತ ಮುವ್ವತ್ತು ವರ್ಷದಿಂದ ನನಗಾಗಿ ಪ್ರಾರ್ಥಿಸುತ್ತಿದ್ದಾಳೆ.  ಎಂತಹ ತ್ಯಾಗ!  ಎಂತಹ ಅವಿಚ್ಛಿನ್ನ ಪ್ರೇಮ! ಇಂತಹ ಪ್ರೇಮರೂಪ ದೇವತೆಯನ್ನು ತ್ಯಜಿಸಿ  ಕಾಣದ ದೇವರನ್ನು ಅರಸುತ್ತಾ ಹೋದೆನಲ್ಲಾ ನಾನೆಂತಹ ಮೂರ್ಖ?” ಎನ್ನುತ್ತಾ ತಾಯಿಯ ಕಾಲಿಗೆ ಬಿದ್ದ.  ಕಣ್ಣೀರು ಸುರಿಯುತ್ತಿತ್ತು, ಒಂದು ಕಡೆ ಪಶ್ಚಾತ್ತಾಪ, ಇನ್ನೊಂದು  ಕಡೆ ತಾಯಿಯ ರೂಪದಲ್ಲಿ ದೇವದರ್ಶನವಾದ ಅನುಭವ.  ಅದೆಂತಹ ದಿವ್ಯಭಾವ ಆ ತಾಯಿಯದು.   ಅದೇ ನೈಜ ಅಂತಃಸಂಪದ. ಅದೇ ದೇವನ ಹೃದಯ ರೂಪ.
             ಇಷ್ಟು ಬರೆದ ಮೇಲೆ ಬೇರೇನೂ ಬರೆಯಲು ಮನಸಾಗುತ್ತಿಲ್ಲ.  ಮಾತೃದೇವೋ ಭವ...... ಮಾತೃದೇವೋ ಭವ...... ಮಾತೃದೇವೋ ಭವ......

ಮನ್ಮಥ ನಾಮ ಸಂವತ್ಸರ ಎಲ್ಲಾ ಸೋಮವಾರ ಪತ್ರ ಓದುಗರಿಗೆ ಮತ್ತು ಕುಟುಂಬ ವರ್ಗದವರಿಗೆ  ಶುಭ ಫಲಗಳನು ತರಲಿ.  ನೆಮ್ಮದಿಯನು ತರಲಿ. ಸಂತೃಪ್ತಿಯನು ತರಲಿ.  ಪ್ರೀತಿ ಪ್ರೇಮಗಳು ಸದಾ ಬಾಳಲಿ ನಗುನಗುತಾ ಇರಲಿ.
ನಿಮ್ಮ ಆತ್ಮೀಯ

ಪ್ರಕಾಶ್ ಮತ್ತು ಕುಟುಂಬ  

February 16, 2015

ಸ್ಥಿತಪ್ರಜ್ಞರು

                            ಲೋಕದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಯಾವಾಗಲೂ ಇದ್ದೆ ಇರುತ್ತದೆ.  ಒಳ್ಳೆಯದು ಬಂದಾಗ ಸರಿಯೆಂದು ಸಂತೋಷದಿಂದ ಉಬ್ಬಿ ಬಿಡುವುದು, ಕೆಟ್ಟದ್ದು ಆದಾಗ ದುಃಖದಿಂದ ಛೀ! ಇದು ನಮಗೇ ಏಕೆ ಆಯಿತು? ಎಂದು ಗೋಳಿಡುವುದು- ಇದು ಸಾಮಾನ್ಯರಾದ ನಮ್ಮ ಎಲ್ಲರ ಸ್ವಭಾವ. ಆದರೆ ಸ್ಥಿತಪ್ರಜ್ಞರು ಇಂತಹ ಸಮಯದಲ್ಲಿ ಬಹಳ ಸಂಯಮದಿಂದ ಇರುತ್ತಾರೆ.  ಅವರಿಗೆ ಕೆಟ್ಟದ್ದು ಒಳ್ಳೆಯದು ಎಂಬ ವಿಭಾಗವೇ ಕಾಣಿಸುವುದಿಲ್ಲ. ಏಕೆಂದರೆ, ಅವರ ದೃಷ್ಟಿಯಲ್ಲಿ ಎರಡೂ ಭಗವಂತನ ಸೃಷ್ಟಿಯೇ!  ಎಲ್ಲವನ್ನೂ ಪರಮಾತ್ಮನ ಸೃಷ್ಟಿಯೆಂದೆ ಭಾವಿಸುವವರಿಗೆ ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು? ಹಿಗ್ಗು ಯಾವುದು ? ಕುಗ್ಗು ಯಾವುದು ? ಒಳ್ಳೆಯದು ಮತ್ತು ಕೆಟ್ಟದ್ದು ಎಂದು  ಎಲ್ಲವೂ  ಆಗುವುದು ಮನಸ್ಸಿಗೆ ಎಂದು ಅವರು ಚೆನ್ನಾಗಿ ತಿಳಿದಿರುತ್ತಾರೆ.  ಇದನ್ನು ಹೇಳುವುದು ಸುಲಭ, ಆದರೆ ನಿಜ ಜೀವನದಲ್ಲಿ ಇಂತಹ ಸಂಧರ್ಭಗಳು ಬಂದಾಗ ನಾವು ಇದನ್ನು ಪಾಲಿಸಲು ಸಾಧ್ಯವೇ? ಎಂಬ ಪ್ರಶ್ನೆ ಸಹಜವಾಗಿ ನಮ್ಮೊಳಗೆ ಬರುತ್ತದೆ.  

                            ಇದನ್ನು ಸಾಧ್ಯಮಾಡಿ ತೊರಿಸಿದ್ದನ್ನು ನಾನು   ನನ್ನ ಆತ್ಮೀಯ ಮಿತ್ರರಾಗಿದ್ದ ಶ್ರೀ ಶರ್ಫುದ್ದೀನ್ ಸಾಹೇಬರಲ್ಲಿ ಕಂಡಿದ್ದೇನೆ .  ನಮ್ಮ ವಿದ್ಯಾಲಯದ ಇಂಡಸ್ಟ್ರಿಯಲ್ ಪ್ರೊಡಕ್ಷನ್ ವಿಭಾಗದ ಮುಖ್ಯಸ್ಥರಾಗಿದ್ದ ಇವರು ಅತ್ಯಂತ ಸಂಭಾವಿತರು, ಸರಳ ಮತ್ತು ಸಜ್ಜನರು.  ಮುಸ್ಲಿಂ ಸಂಪ್ರದಾಯಕ್ಕೆ ಸೇರಿದ ಇವರು ತಮ್ಮ  ಧರ್ಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಿದ್ದರು ಮಾತ್ರವಲ್ಲದೆ ಇತರ ಧರ್ಮವನ್ನು ಅಷ್ಟೇ ಗೌರವ ಭಾವದಿಂದ ಕಾಣುತ್ತಿದ್ದ ಅಪರೂಪದ ಧರ್ಮ ಸಹಿಷ್ಣು.  ನನ್ನ ಮತ್ತು ಸಾಹೇಬರ  ಭಾಂದವ್ಯ ಹೆಚ್ಚು ಹತ್ತಿರವಾಗಲು ಇದೂ ಒಂದು ಮುಖ್ಯ ಕಾರಣವಾಗಿತ್ತು.  ನಾನು ಮತ್ತು ಶರ್ಫುದ್ದೀನ್ ಸಾಹೇಬರು ಅದೆಷ್ಟೋ ಬಾರಿ ಧರ್ಮದ ಮತ್ತು ಸಂಪ್ರದಾಯದ ವಿಚಾರವಾಗಿ ಮಾತನಾಡುತ್ತಿದ್ದೆವು. ಒಮ್ಮೆಯೂ ಅವರು ಇತರ ಧರ್ಮ ಸಂಪ್ರದಾಯಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದನ್ನು ನಾನು ಕಾಣೆ.  ಅವರಿಗೆ ಇತರ ಧರ್ಮಗಳ ವಿಷಯದಲ್ಲಿ ಬಂದ ಸಂಶಯಗಳನ್ನು ಕೂತು ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ದರು. ತಮ್ಮ ಧರ್ಮಕ್ಕೂ ಇತರ ಧರ್ಮಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸವನ್ನು ಅವರು ಮೂಲ ಗ್ರಂಥದಲ್ಲಿ ಅಭ್ಯಾಸ ಮಾಡುತ್ತಿದ್ದರು.  ಇಸ್ಲಾಂ ಮತ್ತು ಅದ್ವೈತ ಎರಡೂ ಒಂದನ್ನೇ ಪ್ರತಿಪಾದಿಸುತ್ತದೆ ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಿದ್ದ ರಸ ಘಳಿಗೆಗಳನ್ನು ನಾನು ಎಂದೂ  ಮರೆಯಲಾರೆ. ಅವರು ವಿಚಾರದಲ್ಲಿ ಆಕಾಶವಾಣಿಯಲ್ಲಿ ನೀಡಿರುವ ಚಿಂತನೆಗಳೇ ಇದಕ್ಕೆ ಸಾಕ್ಷಿ
                             ಇವರ ಜೀವನದಲ್ಲಿ ಒಂದು ಸಂಕಟದ ಸಮಯ ಬಂದಿತು.   ಸಮಯದಲ್ಲಿ ಶರ್ಫುದ್ದೀನ್ ಸಾಹೇಬರು ತೋರಿಸಿದ ಸ್ಥಿತಪ್ರಜ್ಞತೆ ಮನನೀಯ.  ಸಾಹೇಬರ ಅತ್ಯಂತ ಪ್ರೀತಿಯ ಒಬ್ಬನೇ ಮಗ ದೈವಾದೀನನಾದ.    ಸುದ್ದಿ ಕೇಳಿ ನಮ್ಮೆಲ್ಲರಿಗೂ ಅತ್ಯಂತ ದುಃಖವಾಯಿತು. ಅವರನ್ನು ಸಮಯದಲ್ಲಿ ನೋಡಿ ಮಾತನಾಡಿಸಿ ಸಂತಾಪ ಸೂಚಿಸಿ ಬರಲು  ಅವರ ಮನೆಗೆ ಹೋಗಿದ್ದೆ.  ಆಗ ಮನೆಯಲ್ಲಿ ದುಃಖದ ವಾತಾವರಣ.  ಸಾಹೇಬರು ಮನೆ ಬಾಗಿಲಲ್ಲೇ ನಿಂತು ಬಂದವರಿಗೆ ಹೇಗೆ ಸಾವು ಸಂಭವಿಸಿತು ಎಂದು ವಿವರಿಸುತ್ತಿದ್ದರು.   ಸಮಯದಲ್ಲಿ  ಸಾಹೇಬರ ಸಂಬಂಧಿಕರೊಬ್ಬರು ಬಂದು, ಉರ್ದುವಿನಲ್ಲಿ " ಹೂವು ಅರಳುವ ಮುಂಚೆಯೇ ಬಾಡಿಹೊಯಿತಲ್ಲ ಎಂದು ಅತೀವ ದುಃಖ ಆಗುತ್ತಿದೆ. ದೇವರು ಅದೆಷ್ಟು ಕಠಿಣ, ಅಲ್ಲವೇ?" ಎಂದರು.  ತಕ್ಷಣ ಹಾವಿನ ಮೇಲೆ ಕಾಲಿಟ್ಟವರಂತೆ " ಇಲ್ಲಾ !  ತಪ್ಪು ಮಾತಾಡುತ್ತಿದ್ದಿರಿ.  ದೇವರು ಅಪಾರ ದಯಾಮಯ. ಇಷ್ಟು ಸಮಯ ಮಗುವನ್ನು ನಮ್ಮೊಂದಿಗೆ ಇರಲು ಆಜ್ಞೆ ಮಾಡಿ ನಮಗೆ ಅತೀವ ಸಂತೋಷ ನೀಡಿರುತ್ತಾರೆ.  ನಾವು  ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ಸಂತೋಷವಾಗಿ   ಕಂದನೊಂದಿಗೆ ಕಾಲಕಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಈಗ ಅವರು ತಮ್ಮ ಆಸ್ತಿಯನ್ನು ವಾಪಸ್ಸು ಪಡೆದಿದ್ದಾರೆ, ಇದಕ್ಕೆ ಅಲ್ಲಾಹುವನ್ನ ನಿಂದಿಸಬಾರದು. ತಪ್ಪು ತಪ್ಪು". ಎಂದು ಅತ್ಯಂತ ವಿನಯಭಾವದಿಂದ  ನುಡಿದರು.   ಮಾತು ಕೇಳಿ ನನ್ನ ಅರಿವಿಗೆ ಬಾರದಂತೆ ಕಣ್ಣಲ್ಲಿ ನೀರಾಡಿತು.  ಶ್ರೀ ಕೃಷ್ಣ ಅರ್ಜುನನಿಗೆ " ಪಂಡಿತರು ಸತ್ತವರಿಗಾಗಿ ಶೋಕಿಸುವುದಿಲ್ಲ " ಎಂದು ಗೀತೆಯಲ್ಲಿ ಹೇಳಿದ ಮಾತು ತಕ್ಷಣಕ್ಕೆ ಜ್ಞಾಪಕಕ್ಕೆ ಬಂತು.
    
                             ಸ್ವಲ್ಪ ಸಮಯದ ನಂತರ ಶರ್ಫುದ್ದೀನ್ ಸಾಹೇಬರು ತಮ್ಮ ಚಪ್ಪಲಿ ಧರಿಸಿಕೊಂಡು ಹೊರಡಲು ಅನುವಾಗುತ್ತಿದ್ದಂತೆ ಅವರ ಸಂಬಂಧಿಕರೊಬ್ಬರು ಎಲ್ಲಿಗೆಂದು ಪ್ರಶ್ನಿಸಿದರು.  ಅವರು " ನಮಾಜ್ ಸಮಯ ಆಯಿತು, ಪ್ರಾರ್ಥನೆ ಮಾಡಲು ಮಸೀದಿಗೆ ಹೋಗುತ್ತಿದ್ದೇನೆ." ಎಂದು ಸಹಜವಾಗಿ ಹೇಳಿದರು.   ಸಮಯದಲ್ಲಿಯೂ ಹೋಗಬೇಕಾ? ಎನ್ನುವಂತೆ ಪ್ರಶ್ನಾರ್ಥಕವಾಗಿ ಎಲ್ಲರೂ ಅವರನ್ನೇ ನೋಡುವಾಗ ಅವರೇ ಮುಂದುವರೆದು " ನಾವು ಯಾವುದನ್ನು ಬಿಡುತ್ತೇವೆ? ಊಟ, ತಿಂಡಿ, ನಿದ್ದೆ ಯಾವುದನ್ನು ಬಿಡದ ನಾವು ದೇವರ ಪ್ರಾರ್ಥನೆ ಯಾಕೆ ಬಿಡಬೇಕು? " ಎಂದು ಹೇಳುತ್ತಾ ಯಾರ ಉತ್ತರಕ್ಕೂ ಕಾಯದೇ ಮಸೀದಿಯತ್ತ ಹೆಜ್ಜೆ ಹಾಕಿದರು.  ಅಲ್ಲಿದ್ದವರಿಗೆ     ನಡವಳಿಕೆ ಅಷ್ಟು ಇಷ್ಟವಾಗದೇ,ಇದು  ಅತಿಯಾಯಿತೆಂದು ಅಂದುಕೊಂಡವರಿದ್ದಾರೆ.  ಆದರೆ, ಅವರು ಜನ ಮೆಚ್ಚಿಸಲು ಏನನ್ನೂ ಹೇಳದೆ, ಮಾಡದೆ ತಮ್ಮ  ಪ್ರಾಮಾಣಿಕ ಸಾಧನೆಯನ್ನು ಬಿಡದೆ ಅಂದು ಮುಂದುವರಿಸಿದರು. ಒಂದು ಪ್ರಸಂಗ ಮಾತ್ರವಲ್ಲ, ಹಲವಾರು ಸಂಧರ್ಭಗಳಲ್ಲಿ ಸಾಹೇಬರು ನ್ಯಾಯ ಮತ್ತು ಧರ್ಮ ಪ್ರವರ್ತಕರೆ ಆಗಿದ್ದರು


                             ಇಂದಿಗೆ ಸಾಹೇಬರು ನಮ್ಮೊಂದಿಗೆ ಇಲ್ಲದಿರಬಹುದು.   ಆದರೆ,  ಇಂತಹವರು ನಮಗೆ ಎಂದಿಗೂ ಆದರ್ಶವಲ್ಲವೇ.....