March 30, 2015

ಕಾಫಿ ಕಲಿಸಿದ ಪಾಠ

ಕಾಫಿ ಕಲಿಸಿದ ಪಾಠ 

ಒಮ್ಮೆ ಕೆಲವು ಹಳೆಯ ವಿರ್ಧ್ಯಾರ್ಥಿಗಳ ಗುಂಪು ತಮ್ಮ ನೆಚ್ಚಿನ ಪ್ರಾಧ್ಯಾಪಕರನ್ನು  ಮಾತನಾಡಿಸಿಕೊಂಡು, ತಮ್ಮ  ಹಳೆಯ ಸಿಹಿ ಕಹಿ ನೆನಪನ್ನು ಮೆಲಕುಹಾಕಿಕೊಂಡು  ಬರಬೇಕೆಂದು ತೀರ್ಮಾನಿಸಿ  ತಮ್ಮ ಗುರುಗಳ ಸಮಯವನ್ನು ಕೋರಿದರು.  ತಮ್ಮ ಗುರುಗಳ  ಒಪ್ಪಿಗೆ ಪಡೆದು,  ನಿಶ್ಚಯವಾದ ದಿನ ಗುರುಗಳ ಮನೆಗೆ ಎಲ್ಲಾ ಹಳೆಯ ವಿಧ್ಯಾರ್ಥಿಗಳು ಬಂದರು.  ಗುರುಗಳಿಗೆ ಮತ್ತು ವಿಧ್ಯಾರ್ಥಿಗಳಿಗೆ ಸಂಭ್ರಮದ ಮತ್ತು ಸಂತೋಷದ ಕ್ಷಣ. ಎಲ್ಲರು ತಮ್ಮ ಉದ್ಯೋಗ ಮತ್ತು ವೈಯಕ್ತಿಕ ಜೀವನದ ಬಗ್ಗೆ ಪರಿಚಯ ಮಾಡಿಕೊಂಡು ಉಭಯ ಕುಶಲೋಪರಿ ಮಾತನಾಡುತ್ತಿದ್ದರು.  ಮಾತು ಮುಂದುವರೆದಂತೆ ತಮ್ಮ ಉದ್ಯೋಗದಲ್ಲಿನ ಅಸಹಾಯಕತೆ,  ಅತೃಪ್ತಿ , ಅಸಮಾಧಾನ ಮತ್ತು ಒತ್ತಡಗಳ ಬಗ್ಗೆ ಬದಲಾಯಿತು.  ಎಲ್ಲರ ಮಾತಿನಲ್ಲಿ ವಿಷಾದ, ನೋವು ಮತ್ತು ನಿರಾಸೆ ಕಾಣುತ್ತಿತ್ತು.  ಎಲ್ಲವನ್ನು ಸಮಾಧಾನಚಿತ್ತದಿಂದ ಕೇಳಿಸಿಕೊಂಡ ಗುರುಗಳು ಬಂದಿರುವ ಹಳೆಯ ವಿಧ್ಯಾರ್ಥಿ ಮಿತ್ರರಿಗೆ ಕಾಫಿ ಮಾಡಿಕೊಡಲು ಅಡುಗೆ ಮನೆಯತ್ತ ಸಾಗಿದರು.
  
ಸ್ವಲ್ಪ ಸಮಯದ ನಂತರ ಒಂದು ಪಾತ್ರೆಯಲ್ಲಿ ಬಿಸಿಬಿಸಿ ಕಾಫಿ ತೆಗೆದುಕೊಂಡು  ಬರುತ್ತಾ ತಮ್ಮ ಮಿತ್ರರಿಗೆ " ಅಡುಗೆ ಮನೆಯಲ್ಲಿ ಲೋಟಗಳಿವೆನೀವೆಲ್ಲಾ  ಲೋಟಗಳನ್ನು ತಂದರೆ ಒಟ್ಟಿಗೆ ಕಾಫಿ ಕುಡಿಯೋಣ " ಎಂದರು. ಎಲ್ಲರು ಅಡುಗೆಮನೆಯತ್ತ ಸಾಗಿದರು.  ಅಡುಗೆ ಮನೆಯಲ್ಲಿ ವಿಧವಿಧವಾದ ಲೋಟಗಳಿದ್ದವು.  ಕೆಲವು ದುಬಾರಿಯವು, ಕೆಲವು ಚಿತ್ತಾರ ಬಿಡಿಸಿದ ಪಿಂಗಾಣಿ ಲೋಟಗಳು, ಕೆಲವು ಸಾಧಾರಣ ಲೋಟಗಳು, ಕೆಲವು ಪ್ಲಾಸ್ಟಿಕ್ ಲೋಟಗಳು ಇದ್ದವು. ಒಳಗೆಹೋದ ವಿಧ್ಯಾರ್ಥಿಮಿತ್ರರು ತಮ್ಮ ಕೈಯಲ್ಲಿ ಒಂದೊಂದು ಲೋಟ ಹಿಡಿದು ಬಂದರು.  ಎಲ್ಲರ ಲೋಟಕ್ಕೆ ಕಾಫಿ ಹಾಕಿ ಕೊಡುತ್ತಾ ಲೋಟಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಲೋಕಾಭಿರಾಮವಾಗಿ ಮಾತನಾಡಲು ಆರಂಭಿಸಿದ ಗುರುಗಳು " ಎಲ್ಲರೂ ಚೆನ್ನಾಗಿರುವ ಲೋಟಗಳನ್ನೇ ಆರಿಸಿಕೊಂಡಿದ್ದೀರಿ. ಇಲ್ಲೊಂದು ವಿಶೇಷ ಗಮನಿಸಿ, ಯಾರಿಗೂ ಸಾಧಾರಣ ಲೋಟಗಳು ಬೇಡವಾಗಿರುವುದು ." ಎಂದು ಮಾತಿಗೆ ಪ್ರಾರಂಭ ಮಾಡಿದ ಗುರುಗಳುನಮ್ಮೆಲ್ಲರ ಸ್ವಭಾವವೇ ಅದಾಗಿದೆ.  ನಮ್ಮ ಆಯ್ಕೆ ಯಾವಾಗಲು  ಉತ್ಕೃಷ್ಟವಾದುದೆ ಆಗಿರುತ್ತದೆ.  ನಾವು ಯಾವಾಗಲು ಅದನ್ನೇ ಬಯಸುತ್ತೇವೆ.  ಇದೆ ನಮ್ಮೆಲ್ಲಾ ಅಸಹಾಯಕತೆಅತೃಪ್ತಿ , ಅಸಮಾಧಾನ ಮತ್ತು ಒತ್ತಡಗಳಿಗೆ ಕಾರಣ. "  ಎಂದು ಹೇಳಿ ಎಲ್ಲರ ಮುಖಗಳನ್ನು ಗಮನಿಸಿದರು.  ಎಲ್ಲರ ಮುಖದಲ್ಲಿ ಆಶ್ಚರ್ಯ.   ಗುರುಗಳು ಮಾತನ್ನು ಮುಂದುವರೆಸುತ್ತಾ " ಉತ್ಕೃಷ್ಟವಾಗಿ ಕಾಣುವ ಲೋಟಗಳು ಕಾಫಿಯ ರುಚಿಯನ್ನಾಗಲಿ, ಗುಣವನ್ನಾಗಲಿ ಬದಲಾಯಿಸಲಾರವು.  ಇದು ನಮಗೆಲ್ಲಾ ತಿಳಿದ ವಿಷಯವೇ! ಆದರೂ  ನಾವು ಉತ್ಕೃಷ್ಟವಾದ ಲೋಟವನ್ನೇ ಆರಿಸಿಕೊಳ್ಳುತ್ತೇವೆ.   ಲೋಟದಲ್ಲೇ ಕಾಫಿ ಕುಡಿಯಲು ಬಯಸುತ್ತೇವೆ.  ಆದರೆ, ವಾಸ್ತವದಲ್ಲಿ ನಮಗೆ ಬೇಕಾಗಿರುವುದು ಒಳ್ಳೆಯ ಕಾಫಿಯೇ ಹೊರತು ಲೋಟವಲ್ಲ.  ಜೊತೆಗೆ ನಾವು ಇತರರ ಕೈಯಲ್ಲಿರುವ ಲೋಟದ ಬಗ್ಗೆ ಒಂದು ಕಣ್ಣು ಇರಿಸುತ್ತೇವೆ.  ಅವರ ಲೋಟ ಹೇಗಿದೆ? ಎಷ್ಟು ಚೆನಾಗಿದೆಎಂಬ ಬಗ್ಗೆ ನೋಡುವ ಕುತೂಹಲ ತೋರುತ್ತೇವೆ. ಇದು ನಮ್ಮಲ್ಲಿರುವ  ಅಸಂತೃಪ್ತಿಯನ್ನು ಸೂಚಿಸುತ್ತದೆ." 

" ಈಗ ಹೀಗೆ ಯೋಚಿಸೋಣ.   ಜೀವನವೆಂದರೆ ಕಾಫಿ ಇದ್ದಹಾಗೆ.  ನಾವು ಮಾಡುವ ಕೆಲಸ, ನಮಗಿರುವ ಅಧಿಕಾರ, ಹಣ ಮತ್ತು ಸಮಾಜದ ಗೌರವ ಇವೆಲ್ಲಾ ನಮ್ಮ ಲೋಟವಿದ್ದಂತೆ. ಇವೆಲ್ಲವೂ ನಮ್ಮ ಜೀವನವನ್ನು ಹಿಡಿದಿಡುವ ಸಾಧನಗಳು ಮಾತ್ರ.   ಲೋಟಗಳು ನಮ್ಮ ಜೀವನದ ಗತಿಯನ್ನಾಗಲಿ,  ಗುಣವನ್ನಾಗಲಿ ಬದಲಿಸಲಾರವು.  ಬದಲಿಗೆ ಇವು ನಮ್ಮ ಅಹಂಕಾರ ಜಾಸ್ತಿ ಮಾಡಿ ನಿಜವಾದ ಜೀವನವನ್ನು ಅನುಭವಿಸಲು ಬಿಡುವುದೇ ಇಲ್ಲ.  ಅಹಂಕಾರವು ನಮ್ಮ ಜೀವನದ ಸುಖ ಕ್ಷಣಗಳನ್ನು ಹಾಳುಗೆಡವುತ್ತದೆ.  ಭಗವಂತ ನಮಗೆ ಕೊಟ್ಟ ಸುಂದರ ಜೀವನವನ್ನು ಆನಂದದಿಂದ ಕಳೆಯುವ ಬದಲು, ಸಮಯವನ್ನು  ವ್ಯರ್ಥವಾಗಿಸುತ್ತ  ಅಹಂಕಾರದ ಬೇಗೆಯಲ್ಲಿ ಬೇಯುತ್ತೇವೆ.   ಅಸಹಾಯಕತೆ,  ಅತೃಪ್ತಿ , ಅಸಮಾಧಾನ ಮತ್ತು ಒತ್ತಡಗಳ ಒಡನಾಟದಲ್ಲಿ ದಿನವನ್ನು  ದೂಡುತ್ತೇವೆ.  ಭಗವಂತನೇನೋ ನಮಗಾಗಿ ಒಳ್ಳೆಯ ಕಾಫಿಯನ್ನೇ ತಯಾರು ಮಾಡಿ ಕೊಟ್ಟಿದ್ದಾನೆ. ಆದರೆ, ಕಾಫಿ ಕುಡಿಯಲು ಬೇಕಾದ ಲೋಟದ ಆಯ್ಕೆಯಲ್ಲಿ ದಾರಿ ತಪ್ಪುತ್ತೇವೆ. ರುಚಿಯಾದ ಕಾಫಿಯಿಂದ ವಂಚಿತರಾಗಿಬಿಡುತ್ತೇವೆ.   ಜಗತ್ತಿನಲ್ಲಿ ಸಂತೋಷದಿಂದ ಇರುವ  ವ್ಯಕ್ತಿಗಳ ಜೀವನದಲ್ಲಿ ಎಲ್ಲವೂ ಉತ್ಕೃಷ್ಟವಾಗಿರುವುದಿಲ್ಲ.   ಆದರೆ,  ಅವರು ಎಲ್ಲದರಲ್ಲೂ  ಉತ್ಕೃಷ್ಟತೆಯನ್ನು ಕಾಣುತ್ತಾರೆ. " ಎಂದು ಮಾತು ಮುಗಿಸಿದರು.  ಎಲ್ಲಾ ವಿಧ್ಯಾರ್ಥಿ ಮಿತ್ರರು ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಕುಳಿತರು

ನಂತರ ಗುರುಗಳು ಪುನಃ " ಸರಳವಾಗಿ ಬದುಕಿ. ತುಂಬು ಹೃದಯದಿಂದ ಪ್ರೀತಿಸಿ.  ಆಳವಾಗಿ ಚಿಂತನೆ ಮಾಡಿ.  ಮಧುರವಾಗಿ ಮಾತನಾಡಿ.  ನಿಮಗಿರುವ ಕೆಲಸವನ್ನು ಶ್ರದ್ಧೆಯಿಂದ ಭಗವಂತನ ಕೆಲಸವೆಂದು ನಿರ್ವಹಿಸಿ. ಮಿಕ್ಕ ಎಲ್ಲವನ್ನು ಭಗವಂತನ ನಿರ್ಣಯಕ್ಕೆ ಬಿಡಿ. ನೆಮ್ಮದಿಯಾಗಿರಿ. "  ಎಂದು ಹುಸಿನಗೆ ಬೀರಿ ಎಲ್ಲಾ ವಿಧ್ಯಾರ್ಥಿ ಮಿತ್ರರನ್ನು ಆತ್ಮೀಯತೆಯಿಂದ ಬೀಳ್ಕೊಟ್ಟರು



March 25, 2015

ಅವಿಚ್ಛಿನ್ನ ಪ್ರೇಮ
               ಒಬ್ಬ ಸುಂದರ ಯುವಕ. ಅವಿವಾಹಿತ, ತನ್ನ ತಾಯಿಯ ಪ್ರೀತಿಯ ಮಗ.  ದೇವರ ಮೇಲೆ ಪರಮ ಭಕ್ತಿ.  ಹೇಗಾದರೂ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆಯಲೇ ಬೇಕೆಂಬ ಅತ್ಯುಗ್ರ ಹಂಬಲ.  ಆದರೆ ತನ್ನ ತಾಯಿಯನ್ನು ಒಂಟಿಯಾಗಿ ಬಿಟ್ಟು ಹೋಗಬೇಕಲ್ಲ ಎಂಬ ಚಿಂತೆ. ಒಂದು ದಿನ ದೈರ್ಯ ಮಾಡಿ ತನ್ನ ಬಯಕೆಯನ್ನುತಾಯಿಯ ಮುಂದೆ ಇಟ್ಟ. ತಾಯಿಯ ಸಮ್ಮತಿಗಾಗಿ  ಬೇಡಿದ.  ತಾಯಿ  ಈ ಮಾತು ಕೇಳಿ “ ನನ್ನಿಂದ ದೂರವಾಗಲು ನಿನಗೆ ಮನಸ್ಸು ಹೇಗೆ ಬರುತ್ತದೆ ಮಗನೆ? ನನ್ನ ಪ್ರೇಮಕ್ಕಿಂತ ನಿನಗೆ ಮಹತ್ವ ಬೇರೆ ಏನಿದೆ? ನನ್ನ ಪ್ರೇಮಕ್ಕಿಂತ ನಿನ್ನ ಬಯಕೆ ಪವಿತ್ರ ಮತ್ತು ಮಹತ್ವ ಎಂದು ನಿನಗನಿಸಿದರೆ ನೀನು ಖಂಡಿತಾ ಹೋಗು.  ಭಗವಂತನನ್ನು ಕಾಣು.  ಆದರೆ ಭಗವಂತನ ದರ್ಶನ ಪಡೆದು ಪುನೀತವಾದ ನಿನ್ನ ಪ್ರಸನ್ನವಾದ ಮುಖವನ್ನು ನಾನು ಸಾಯುವುದರೊಳಗೆ ನೋಡಬೇಕು.  ಈ ಆಸೆಯನ್ನು ನೆರವೇರಿಸಿಕೊಡುವೆಯಾ?  ಅದೇ ನನ್ನ ಬಾಳಿನ ಕೃತಾರ್ಥತೆ.  ನಾನು ನಿನಗಾಗಿ ದಾರಿ ಕಾಯುತ್ತಿರುತ್ತೇನೆ.  ನೀನು ಬೇಗ ಬರುವಂತಾಗಲಿ.  ನನಗಿನ್ನೇನೂ ಬೇಡ, ನಿನ್ನ  ಧನ್ಯತೆಯಲ್ಲೇ ನನ್ನ ಧನ್ಯತೆ.  ಹೋಗಿ ಬಾ ಮಗನೇ ನಿನ್ನ ಮನೋಭಿಷ್ಟ ನೆರವೇರಲಿ “ ಎಂದು ತುಂಬು ಹೃದಯದಿಂದ ಹಾರೈಸಿ ಮಗನನ್ನು  ಬೀಳ್ಕೊಟ್ಟಳು.
              ಆ ಯುವಕ ಭಗವಂತನ ಸಾಕ್ಷಾತ್ಕಾರಕ್ಕಾಗಿ ಕಂಡ ಕಂಡ ಕಡೆ ಅಲೆದ.   ಹಲವಾರು ಸಂತ, ಗುರು, ಸನ್ಯಾಸಿಗಳಲ್ಲಿ ಸಾಧನೆ ಮಾಡಿದ. ಹಿಮಾಲಯಕ್ಕೆ ಹೋದ. ಧ್ಯಾನ ಮಾಡಿದ, ಉಪವಾಸದ ಜೊತೆಗೆ ಹಟ ಸಾಧನೆ ಮಾಡಿದ. ದಶಕಗಳೇ ಕಳೆದವು. ದೇವನ ದರ್ಶನ ಭಾಗ್ಯ ಮಾತ್ರ ಲಭ್ಯವಾಗಲಿಲ್ಲ.  ಭಗವಂತನ ಸಾಕ್ಷಾತ್ಕಾರಕ್ಕಾಗಿ ಮಾಡಿದ ಸಾಧನೆಗಳೆಲ್ಲಾ ವ್ಯರ್ಥವೆನಿಸಿತು. ಬಹಳ ನಿರಾಸೆಯಾಗಲು  ಪ್ರಾರಂಭವಾಯಿತು.  ವ್ಯಥೆ ದಿನ ನಿತ್ಯದ ಬದುಕಾಯಿತು.  ಒಂದು ದಿನ ಇದ್ದಕ್ಕೆ ಇದ್ದ ಹಾಗೆ ತನ್ನ ತಾಯಿಯ ನೆನಪಾಯಿತು.  ಆ ನನ್ನ ವೃದ್ಧತಾಯಿ  ನನ್ನ ಬರುವಿಕೆಯನ್ನು ಅದೆಷ್ಟು ಕಾತುರದಿಂದ ಕಾಯುತ್ತಾ ಇರಬೇಕು?  ನಾನು ಆಕೆಗೆ ಹೇಗೆ ಈ ಮುಖವನ್ನು ತೋರಿಸಲಿ? ನನ್ನ ಪ್ರತೀಕ್ಷೆಯಲ್ಲಿರುವ ಆ ನನ್ನ ತಾಯಿಗೆ ಈ ನಿನ್ನ ಮಗನಿಗೆ ಸಾಕ್ಷಾತ್ಕಾರವಾಗಲಿಲ್ಲವೆಂಬ ವಾರ್ತೆಯನ್ನು ಹೇಗೆ ಹೇಳಲಿ? ಈ ವಾರ್ತೆ ಕೇಳಿ  ಆ ನನ್ನ ತಾಯಿ ಹೇಗೆ ತಡೆದುಕೊಂಡಾಳು? ಹೀಗೆ ಹಲವಾರು ಯೋಚನೆಗಳು ತಲೆಯಲ್ಲಿ ಹೊಕ್ಕವು.  ಏನಾದರಾಗಲಿ ಇಷ್ಟು ದೀರ್ಘಕಾಲದ ಸಾಧನೆಯಲ್ಲಿ ಭಗವಂತನ ದರ್ಶನವಂತು ಆಗಲಿಲ್ಲ, ಕನಿಷ್ಠ ಸಾಯುವುದರೊಳಗೆ ನನ್ನ ತಾಯಿಯನ್ನಾದರು ದರ್ಶನ ಮಾಡಿಬಿಡಬೇಕು.  ತಾಯಿಯನ್ನು ನೋಡಿದ ಧನ್ಯತೆಯಾದರು ನನಗೆ ಉಳಿದೀತು ಎಂದು ಯೋಚಿಸಿ ತನ್ನ ಊರಿನ ಕಡೆಗೆ ಹೊರಟ.
             ಆತ  ಬರುವಾಗ ರಾತ್ರಿಯಾಗಿತ್ತು. ತಾನಿದ್ದ ಮನೆಯಲ್ಲಿ ಏನೂ ಬದಲಾವಣೆ ಇಲ್ಲ. ಹೊರಗೆ ಕತ್ತಲೆ, ಬಾಗಿಲ ಕಿಂಡಿಯಿಂದ ಇಣುಕಿ ನೋಡಿದ. ತಾಯಿ ಅತ್ಯಂತ ಮುಪ್ಪಾಗಿದ್ದಾಳೆ.  ಪಡಸಾಲೆಯಲ್ಲಿ ದೀಪದ ಎದುರು ಕೂತು ಅತ್ಯಂತ ಏಕಾಗ್ರತೆಯಿಂದ ಭಗವಂತನನ್ನು ಪ್ರಾರ್ಥಿಸುತ್ತಿದ್ದಾಳೆ. ಸ್ವಲ್ಪ ಸಮಯದ ನಂತರ ವೃದ್ಧಳಾದ ತಾಯಿ ಭಗವಂತನಿಗೆ ಕೈ ಮುಗಿಯುತ್ತಾ “ ದೇವನೇ, ನನ್ನ ಮಗ ನಿನ್ನ ನೋಡಲು ಹೋಗಿ ಮುವ್ವತ್ತು ವರ್ಷಗಳೇ ಕಳೆದಿವೆ.  ನಿನಗಾಗಿ ಅವನು ಕಾತರಿಸುತ್ತ ಜೀವನ ತಳ್ಳುತ್ತಿರಬೇಕು, ತಳಮಳಿಸುತ್ತಿರಬೇಕು.  ಬೇಗ ಅವನಿಗೆ ದರ್ಶನ ಕರುಣಿಸು ದೇವಾ!  ಅವನಿಗೆ  ಅನುಗ್ರಹಿಸು!  ಅವನ ಯಶವೇ ನನ್ನ ಯಶ.  ಅವನ ಸಿದ್ಧಿಯೇ ನನ್ನ ಸಿದ್ಧಿ.  ಅವನ ಕೃತಾರ್ಥತೆಯೇ ನನ್ನ ಕೃತಾರ್ಥತೆ!  ದೇವನೇ ನನಗಾಗಿ ಏನೂ ಬೇಡ.  ನಿನ್ನೆಲ್ಲ ಕಾರುಣ್ಯವನ್ನು ನನ್ನ ಮಗನಿಗೆ ಕರುಣಿಸು ದೇವ ದೇವ “. ಎಂದು ಕಣ್ಣೀರು ಸುರಿಸುತ್ತಾ ಅನನ್ಯವಾಗಿ ಬೇಡುತ್ತಿದ್ದಳು.  ಈ ಮಾತುಗಳನ್ನು ಕೇಳುತ್ತಿದ್ದ ಮಗನ ಕಣ್ಣಲ್ಲಿ ನೀರಾಡಲು ಪ್ರಾರಂಭವಾಯಿತು.  “ ತಾನೆಂತಹ ಸ್ವಾರ್ಥಿಯಾಗಿ ಬಿಟ್ಟೆ.  ನನ್ನ ಹಿತ ಸಾಧನೆಯ ಮುವ್ವತ್ತು ವರ್ಷಗಳಲ್ಲಿ ಒಮ್ಮೆಯೂ ನಾನು ತಾಯಿಯನ್ನು ನೆನಪಿಸಿಕೊಳ್ಳಲಿಲ್ಲ.  ಆದರೆ,  ಈ ನನ್ನ ತಾಯಿ ನನಗಾಗಿ ಸತತ ಮುವ್ವತ್ತು ವರ್ಷದಿಂದ ನನಗಾಗಿ ಪ್ರಾರ್ಥಿಸುತ್ತಿದ್ದಾಳೆ.  ಎಂತಹ ತ್ಯಾಗ!  ಎಂತಹ ಅವಿಚ್ಛಿನ್ನ ಪ್ರೇಮ! ಇಂತಹ ಪ್ರೇಮರೂಪ ದೇವತೆಯನ್ನು ತ್ಯಜಿಸಿ  ಕಾಣದ ದೇವರನ್ನು ಅರಸುತ್ತಾ ಹೋದೆನಲ್ಲಾ ನಾನೆಂತಹ ಮೂರ್ಖ?” ಎನ್ನುತ್ತಾ ತಾಯಿಯ ಕಾಲಿಗೆ ಬಿದ್ದ.  ಕಣ್ಣೀರು ಸುರಿಯುತ್ತಿತ್ತು, ಒಂದು ಕಡೆ ಪಶ್ಚಾತ್ತಾಪ, ಇನ್ನೊಂದು  ಕಡೆ ತಾಯಿಯ ರೂಪದಲ್ಲಿ ದೇವದರ್ಶನವಾದ ಅನುಭವ.  ಅದೆಂತಹ ದಿವ್ಯಭಾವ ಆ ತಾಯಿಯದು.   ಅದೇ ನೈಜ ಅಂತಃಸಂಪದ. ಅದೇ ದೇವನ ಹೃದಯ ರೂಪ.
             ಇಷ್ಟು ಬರೆದ ಮೇಲೆ ಬೇರೇನೂ ಬರೆಯಲು ಮನಸಾಗುತ್ತಿಲ್ಲ.  ಮಾತೃದೇವೋ ಭವ...... ಮಾತೃದೇವೋ ಭವ...... ಮಾತೃದೇವೋ ಭವ......

ಮನ್ಮಥ ನಾಮ ಸಂವತ್ಸರ ಎಲ್ಲಾ ಸೋಮವಾರ ಪತ್ರ ಓದುಗರಿಗೆ ಮತ್ತು ಕುಟುಂಬ ವರ್ಗದವರಿಗೆ  ಶುಭ ಫಲಗಳನು ತರಲಿ.  ನೆಮ್ಮದಿಯನು ತರಲಿ. ಸಂತೃಪ್ತಿಯನು ತರಲಿ.  ಪ್ರೀತಿ ಪ್ರೇಮಗಳು ಸದಾ ಬಾಳಲಿ ನಗುನಗುತಾ ಇರಲಿ.
ನಿಮ್ಮ ಆತ್ಮೀಯ

ಪ್ರಕಾಶ್ ಮತ್ತು ಕುಟುಂಬ