February 16, 2015

ಸ್ಥಿತಪ್ರಜ್ಞರು

                            ಈ ಲೋಕದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಯಾವಾಗಲೂ ಇದ್ದೆ ಇರುತ್ತದೆ.  ಒಳ್ಳೆಯದು ಬಂದಾಗ ಸರಿಯೆಂದು ಸಂತೋಷದಿಂದ ಉಬ್ಬಿ ಬಿಡುವುದು, ಕೆಟ್ಟದ್ದು ಆದಾಗ ದುಃಖದಿಂದ ಛೀ! ಇದು ನಮಗೇ ಏಕೆ ಆಯಿತು? ಎಂದು ಗೋಳಿಡುವುದು- ಇದು ಸಾಮಾನ್ಯರಾದ ನಮ್ಮ ಎಲ್ಲರ ಸ್ವಭಾವ. ಆದರೆ ಸ್ಥಿತಪ್ರಜ್ಞರು ಇಂತಹ ಸಮಯದಲ್ಲಿ ಬಹಳ ಸಂಯಮದಿಂದ ಇರುತ್ತಾರೆ.  ಅವರಿಗೆ ಕೆಟ್ಟದ್ದು ಒಳ್ಳೆಯದು ಎಂಬ ವಿಭಾಗವೇ ಕಾಣಿಸುವುದಿಲ್ಲ. ಏಕೆಂದರೆ, ಅವರ ದೃಷ್ಟಿಯಲ್ಲಿ ಎರಡೂ ಭಗವಂತನ ಸೃಷ್ಟಿಯೇ!  ಎಲ್ಲವನ್ನೂ ಪರಮಾತ್ಮನ ಸೃಷ್ಟಿಯೆಂದೆ ಭಾವಿಸುವವರಿಗೆ ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು? ಹಿಗ್ಗು ಯಾವುದು ? ಕುಗ್ಗು ಯಾವುದು ? ಒಳ್ಳೆಯದು ಮತ್ತು ಕೆಟ್ಟದ್ದು ಎಂದು  ಎಲ್ಲವೂ  ಆಗುವುದು ಮನಸ್ಸಿಗೆ ಎಂದು ಅವರು ಚೆನ್ನಾಗಿ ತಿಳಿದಿರುತ್ತಾರೆ.  ಇದನ್ನು ಹೇಳುವುದು ಸುಲಭ, ಆದರೆ ನಿಜ ಜೀವನದಲ್ಲಿ ಇಂತಹ ಸಂಧರ್ಭಗಳು ಬಂದಾಗ ನಾವು ಇದನ್ನು ಪಾಲಿಸಲು ಸಾಧ್ಯವೇ? ಎಂಬ ಪ್ರಶ್ನೆ ಸಹಜವಾಗಿ ನಮ್ಮೊಳಗೆ ಬರುತ್ತದೆ.  

                            ಇದನ್ನು ಸಾಧ್ಯಮಾಡಿ ತೊರಿಸಿದ್ದನ್ನು ನಾನು   ನನ್ನ ಆತ್ಮೀಯ ಮಿತ್ರರಾಗಿದ್ದ ಶ್ರೀ ಶರ್ಫುದ್ದೀನ್ ಸಾಹೇಬರಲ್ಲಿ ಕಂಡಿದ್ದೇನೆ .  ನಮ್ಮ ವಿದ್ಯಾಲಯದ ಇಂಡಸ್ಟ್ರಿಯಲ್ ಪ್ರೊಡಕ್ಷನ್ ವಿಭಾಗದ ಮುಖ್ಯಸ್ಥರಾಗಿದ್ದ ಇವರು ಅತ್ಯಂತ ಸಂಭಾವಿತರು, ಸರಳ ಮತ್ತು ಸಜ್ಜನರು.  ಮುಸ್ಲಿಂ ಸಂಪ್ರದಾಯಕ್ಕೆ ಸೇರಿದ ಇವರು ತಮ್ಮ  ಧರ್ಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಿದ್ದರು ಮಾತ್ರವಲ್ಲದೆ ಇತರ ಧರ್ಮವನ್ನು ಅಷ್ಟೇ ಗೌರವ ಭಾವದಿಂದ ಕಾಣುತ್ತಿದ್ದ ಅಪರೂಪದ ಧರ್ಮ ಸಹಿಷ್ಣು.  ನನ್ನ ಮತ್ತು ಸಾಹೇಬರ  ಭಾಂದವ್ಯ ಹೆಚ್ಚು ಹತ್ತಿರವಾಗಲು ಇದೂ ಒಂದು ಮುಖ್ಯ ಕಾರಣವಾಗಿತ್ತು.  ನಾನು ಮತ್ತು ಶರ್ಫುದ್ದೀನ್ ಸಾಹೇಬರು ಅದೆಷ್ಟೋ ಬಾರಿ ಧರ್ಮದ ಮತ್ತು ಸಂಪ್ರದಾಯದ ವಿಚಾರವಾಗಿ ಮಾತನಾಡುತ್ತಿದ್ದೆವು. ಒಮ್ಮೆಯೂ ಅವರು ಇತರ ಧರ್ಮ ಸಂಪ್ರದಾಯಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದನ್ನು ನಾನು ಕಾಣೆ.  ಅವರಿಗೆ ಇತರ ಧರ್ಮಗಳ ವಿಷಯದಲ್ಲಿ ಬಂದ ಸಂಶಯಗಳನ್ನು ಕೂತು ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ದರು. ತಮ್ಮ ಧರ್ಮಕ್ಕೂ ಇತರ ಧರ್ಮಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸವನ್ನು ಅವರು ಮೂಲ ಗ್ರಂಥದಲ್ಲಿ ಅಭ್ಯಾಸ ಮಾಡುತ್ತಿದ್ದರು.  ಇಸ್ಲಾಂ ಮತ್ತು ಅದ್ವೈತ ಈ ಎರಡೂ ಒಂದನ್ನೇ ಪ್ರತಿಪಾದಿಸುತ್ತದೆ ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಿದ್ದ ಆ ರಸ ಘಳಿಗೆಗಳನ್ನು ನಾನು ಎಂದೂ  ಮರೆಯಲಾರೆ. ಅವರು ಈ ವಿಚಾರದಲ್ಲಿ ಆಕಾಶವಾಣಿಯಲ್ಲಿ ನೀಡಿರುವ ಚಿಂತನೆಗಳೇ ಇದಕ್ಕೆ ಸಾಕ್ಷಿ. 
                             ಇವರ ಜೀವನದಲ್ಲಿ ಒಂದು ಸಂಕಟದ ಸಮಯ ಬಂದಿತು.  ಆ ಸಮಯದಲ್ಲಿ ಶರ್ಫುದ್ದೀನ್ ಸಾಹೇಬರು ತೋರಿಸಿದ ಸ್ಥಿತಪ್ರಜ್ಞತೆ ಮನನೀಯ.  ಸಾಹೇಬರ ಅತ್ಯಂತ ಪ್ರೀತಿಯ ಒಬ್ಬನೇ ಮಗ ದೈವಾದೀನನಾದ.  ಈ  ಸುದ್ದಿ ಕೇಳಿ ನಮ್ಮೆಲ್ಲರಿಗೂ ಅತ್ಯಂತ ದುಃಖವಾಯಿತು. ಅವರನ್ನು ಈ ಸಮಯದಲ್ಲಿ ನೋಡಿ ಮಾತನಾಡಿಸಿ ಸಂತಾಪ ಸೂಚಿಸಿ ಬರಲು  ಅವರ ಮನೆಗೆ ಹೋಗಿದ್ದೆ.  ಆಗ ಮನೆಯಲ್ಲಿ ದುಃಖದ ವಾತಾವರಣ.  ಸಾಹೇಬರು ಮನೆ ಬಾಗಿಲಲ್ಲೇ ನಿಂತು ಬಂದವರಿಗೆ ಹೇಗೆ ಈ ಸಾವು ಸಂಭವಿಸಿತು ಎಂದು ವಿವರಿಸುತ್ತಿದ್ದರು.  ಅ ಸಮಯದಲ್ಲಿ  ಸಾಹೇಬರ ಸಂಬಂಧಿಕರೊಬ್ಬರು ಬಂದು, ಉರ್ದುವಿನಲ್ಲಿ " ಈ ಹೂವು ಅರಳುವ ಮುಂಚೆಯೇ ಬಾಡಿಹೊಯಿತಲ್ಲ ಎಂದು ಅತೀವ ದುಃಖ ಆಗುತ್ತಿದೆ. ದೇವರು ಅದೆಷ್ಟು ಕಠಿಣ, ಅಲ್ಲವೇ?" ಎಂದರು.  ತಕ್ಷಣ ಹಾವಿನ ಮೇಲೆ ಕಾಲಿಟ್ಟವರಂತೆ " ಇಲ್ಲಾ !  ತಪ್ಪು ಮಾತಾಡುತ್ತಿದ್ದಿರಿ.  ದೇವರು ಅಪಾರ ದಯಾಮಯ. ಇಷ್ಟು ಸಮಯ ಈ ಮಗುವನ್ನು ನಮ್ಮೊಂದಿಗೆ ಇರಲು ಆಜ್ಞೆ ಮಾಡಿ ನಮಗೆ ಅತೀವ ಸಂತೋಷ ನೀಡಿರುತ್ತಾರೆ.  ನಾವು ಈ ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ಸಂತೋಷವಾಗಿ  ಈ ಕಂದನೊಂದಿಗೆ ಕಾಲಕಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಈಗ ಅವರು ತಮ್ಮ ಆಸ್ತಿಯನ್ನು ವಾಪಸ್ಸು ಪಡೆದಿದ್ದಾರೆ, ಇದಕ್ಕೆ ಅಲ್ಲಾಹುವನ್ನ ನಿಂದಿಸಬಾರದು. ತಪ್ಪು ತಪ್ಪು". ಎಂದು ಅತ್ಯಂತ ವಿನಯಭಾವದಿಂದ  ನುಡಿದರು.  ಈ ಮಾತು ಕೇಳಿ ನನ್ನ ಅರಿವಿಗೆ ಬಾರದಂತೆ ಕಣ್ಣಲ್ಲಿ ನೀರಾಡಿತು.  ಶ್ರೀ ಕೃಷ್ಣ ಅರ್ಜುನನಿಗೆ " ಪಂಡಿತರು ಸತ್ತವರಿಗಾಗಿ ಶೋಕಿಸುವುದಿಲ್ಲ " ಎಂದು ಗೀತೆಯಲ್ಲಿ ಹೇಳಿದ ಮಾತು ತಕ್ಷಣಕ್ಕೆ ಜ್ಞಾಪಕಕ್ಕೆ ಬಂತು.
    
                             ಸ್ವಲ್ಪ ಸಮಯದ ನಂತರ ಶರ್ಫುದ್ದೀನ್ ಸಾಹೇಬರು ತಮ್ಮ ಚಪ್ಪಲಿ ಧರಿಸಿಕೊಂಡು ಹೊರಡಲು ಅನುವಾಗುತ್ತಿದ್ದಂತೆ ಅವರ ಸಂಬಂಧಿಕರೊಬ್ಬರು ಎಲ್ಲಿಗೆಂದು ಪ್ರಶ್ನಿಸಿದರು.  ಅವರು " ನಮಾಜ್ ಸಮಯ ಆಯಿತು, ಪ್ರಾರ್ಥನೆ ಮಾಡಲು ಮಸೀದಿಗೆ ಹೋಗುತ್ತಿದ್ದೇನೆ." ಎಂದು ಸಹಜವಾಗಿ ಹೇಳಿದರು.  ಈ ಸಮಯದಲ್ಲಿಯೂ ಹೋಗಬೇಕಾ? ಎನ್ನುವಂತೆ ಪ್ರಶ್ನಾರ್ಥಕವಾಗಿ ಎಲ್ಲರೂ ಅವರನ್ನೇ ನೋಡುವಾಗ ಅವರೇ ಮುಂದುವರೆದು " ನಾವು ಯಾವುದನ್ನು ಬಿಡುತ್ತೇವೆ? ಊಟ, ತಿಂಡಿ, ನಿದ್ದೆ ಯಾವುದನ್ನು ಬಿಡದ ನಾವು ದೇವರ ಪ್ರಾರ್ಥನೆ ಯಾಕೆ ಬಿಡಬೇಕು? " ಎಂದು ಹೇಳುತ್ತಾ ಯಾರ ಉತ್ತರಕ್ಕೂ ಕಾಯದೇ ಮಸೀದಿಯತ್ತ ಹೆಜ್ಜೆ ಹಾಕಿದರು.  ಅಲ್ಲಿದ್ದವರಿಗೆ    ಈ ನಡವಳಿಕೆ ಅಷ್ಟು ಇಷ್ಟವಾಗದೇ,ಇದು  ಅತಿಯಾಯಿತೆಂದು ಅಂದುಕೊಂಡವರಿದ್ದಾರೆ.  ಆದರೆ, ಅವರು ಜನ ಮೆಚ್ಚಿಸಲು ಏನನ್ನೂ ಹೇಳದೆ, ಮಾಡದೆ ತಮ್ಮ  ಪ್ರಾಮಾಣಿಕ ಸಾಧನೆಯನ್ನು ಬಿಡದೆ ಅಂದು ಮುಂದುವರಿಸಿದರು. ಈ ಒಂದು ಪ್ರಸಂಗ ಮಾತ್ರವಲ್ಲ, ಹಲವಾರು ಸಂಧರ್ಭಗಳಲ್ಲಿ ಸಾಹೇಬರು ನ್ಯಾಯ ಮತ್ತು ಧರ್ಮ ಪ್ರವರ್ತಕರೆ ಆಗಿದ್ದರು. 


                             ಇಂದಿಗೆ ಸಾಹೇಬರು ನಮ್ಮೊಂದಿಗೆ ಇಲ್ಲದಿರಬಹುದು.   ಆದರೆ,  ಇಂತಹವರು ನಮಗೆ ಎಂದಿಗೂ ಆದರ್ಶವಲ್ಲವೇ..... 

January 3, 2015

ಪೂರ್ವಾಗ್ರಹ ಪೀಡಿತ ಮನಸ್ಸು                                  

                                   ನಮ್ಮ ದಿನನಿತ್ಯದ ಅಭ್ಯಾಸದ ಅನುಸಾರವಾಗಿ ನಮ್ಮ ಅನುಭವಗಳಾಗುತ್ತವೆ.  ನಮ್ಮ ಯೋಚನೆ, ನಮ್ಮ ಅರಿವಿಗೆ ಬಾರದೇ ಇರುವ ಕೆಲವೊಂದು ಸುಪ್ತ ಮನಸಿನ ಚಿಂತನೆಗಳು  ನಮ್ಮ ಭಾವನೆಗಳನ್ನು ಬೆಳೆಸುತ್ತವೆ.  ಈ ಭಾವನೆಗಳ ಆಧಾರದ ಮೇಲೆ ನಾವು ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತೇವೆ ಮತ್ತು ಇತರರ ವ್ಯಕ್ತಿತ್ವವನ್ನು ಅಳೆಯುತ್ತೇವೆ.  ನಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ  ಪರಿಸ್ಥಿತಿಯನ್ನು ನಿರ್ಧರಿಸಿ   ನಮ್ಮ ಅಭಿಪ್ರಾಯಗಳನ್ನು  ಹೇಳುತ್ತೇವೆ.   ಅಭಿಪ್ರಾಯಗಳು ನಮ್ಮ ಮೂಗಿನ ನೇರಕ್ಕೆ ಸರಿಯಾಗಿ ಇರುತ್ತವೆ.    
                                  ಉದಾಹರಣೆಗೆ ನಾವು ಒಂದು ಸಂಕಷ್ಟದ  ಪರಿಸ್ಥಿತಿಗೆ  ಸಿಕ್ಕಿಕೊಂಡಾಗ , ನಮಗೆ  ಏನೂ ಮಾಡಲು ತೋಚದೆ ಇದ್ದಾಗ ನಾವು ಸಿಟ್ಟು ಮಾಡಿಕೊಳ್ಳುತ್ತೇವೆ, ಮನಸ್ಸು ಅಶಾಂತಿಯಿಂದ ನಲಗುತ್ತದೆ.     ನಮಗೆ  ಆ  ಪರಿಸ್ಥಿತಿ ಕೆಟ್ಟದೆಂದು ತೋರುತ್ತದೆ,  ಈ ಸಂಧರ್ಭವನ್ನು ನಾವು ಕೆಟ್ಟ ಸಂಧರ್ಭವೆನ್ನುವಂತೆ ಅರ್ಥ ಮಾಡಿಕೊಳ್ಳುತ್ತೇವೆ.   ಈ ಸಂಧರ್ಭದಲ್ಲಿ ನಮಗೆ ಉಂಟಾಗುವ  ಭಾವನೆಯನ್ನಾಗಲಿ, ಪ್ರತಿಕ್ರಿಯೆಯನ್ನಾಗಲಿ ಬದಲು ಮಾಡಿಕೊಳ್ಳಲು ಅವಕಾಶ ಇದ್ದೇ ಇರುತ್ತದೆ. ಆದರೆ,  ನಾವು ನಮ್ಮ ಅಭ್ಯಾಸಗಳ ಕಾರಣದಿಂದ ಪೂರ್ವಾಗ್ರಹ ಪೀಡಿತರಾಗಿ ಬಿಟ್ಟಿರುತ್ತೇವೆ.  ನಮ್ಮ ಮನಸ್ಸು ಪೂರ್ವಾಗ್ರಹದ ಚೌಕಟ್ಟಿನಲ್ಲೇ ಸುತ್ತುತ್ತಿರುತ್ತದೆ. ಈ ಪೂರ್ವಾಗ್ರಹ ಚಿಂತನೆಯೇ ದಿಕ್ಕು, ಹಾದಿ ಮತ್ತು ಗುರಿಗಳನ್ನು ನಿರ್ದೇಶಿಸುತ್ತದೆ. ಹೀಗಾಗಿ, ನಾವು  ರೀತಿ  ನಿರ್ದೇಶಿತ  ಹಾದಿ, ದಿಕ್ಕು ಮತ್ತು ಗುರಿಗಳತ್ತ ಸಾಗುವ ಕಾರಣ  ಈ ರೀತಿಯ ಪ್ರತಿ ಚಿಂತನೆಗಳಿಗೆ ಅವಕಾಶವನ್ನೇ ಕೊಡುವುದಿಲ್ಲ.   ನಮ್ಮ ಮನಸ್ಸು ಬೇರೆ ಚಿಂತನೆಯ ಕಡೆಗೆ  ಸಿದ್ದಗೊಳ್ಳದ   ಕಾರಣ , ಮುಕ್ತ ಚಿಂತನೆಗೆ ಅವಕಾಶವೇ ಇರುವುದಿಲ್ಲ. 
                                  ಮುಕ್ತ ಚಿಂತನೆಗೆ ಈ ಸಮಯದಲ್ಲಿ  ನಾವು ಮನಸ್ಸು ಮಾಡಲಿಲ್ಲವಾದರೆ, ನಮ್ಮ ಚಿಂತನೆಯ ಹಾದಿ ಅಭ್ಯಾಸದ ಬಲದಲ್ಲಿ ಸಾಗುತ್ತದೆ. ಸಿಟ್ಟು, ದುಃಖ, ಪ್ರಚೋದನಾತ್ಮಕ ಮತ್ತು ಅಸಹಾಯಕ ಚಿಂತನೆಗಳು ನಮ್ಮೊಳಗೇ ಹಟಮಾರಿಗಳಂತೆ ನೆಲೆಸಿಬಿಡುತ್ತವೆ. ಅಭ್ಯಾಸದ ಬಂಧನಕ್ಕೆ ಬಲಿಯಾದ ನಮ್ಮ ಮನಸ್ಸು ಬೇರೆಯದನ್ನು ಚಿಂತಿಸಲು ಹೋಗದೆ ತನ್ನದೇ ಆದ ಹಳತಾದ ವಿಚಾರಕ್ಕೆ ಅಂಟಿಕೊಂಡು ಬಿಡುತ್ತದೆ. ಹಳೆಯ ಗ್ರಾಮೊಫೋನ್ ರೆಕಾರ್ಡ್ ತರಹ  ಹೇಳಿದ್ದನ್ನೇ ಹೇಳುವಂತೆ ಪೂರ್ವಾಗ್ರಹ ಪೀಡಿತ ಮನಸ್ಸು ಹಳೆಯದನ್ನೇ ಚಿಂತಿಸುತ್ತದೆ.  ಹೊಸ ಚಿಂತನೆಗಳಾಗಲಿ, ವಿಚಾರಗಲಾಗಲಿ ಮನದಲ್ಲಿ ಮೂಡಲು ಹಳೆಯ ಅಭ್ಯಾಸಗಳು ಆಸ್ಪದ ಕೊಡುವುದೇ ಇಲ್ಲ. ಇದರಿಂದ ನಮ್ಮ ಆಂತರಿಕ ಶಾಂತಿ ಕನಸಿನ ಮಾತಾಗಿಬಿಡುತ್ತದೆ. ಪೂರ್ವಾಗ್ರಹ ನಮ್ಮನ್ನು ಪೂರ್ತಿಯಾಗಿ ಆಳುತ್ತದೆ. ಈ ರೀತಿಯಾದ  ನಮ್ಮ ನಡವಳಿಕೆ ಮತ್ತು ದಿನಚರಿಯೂ  ತನ್ನದೇ ಆದ  ಚೌಕಟ್ಟಿಗೆ ಒಳಪಡಿಸುತ್ತದೆ.  ನಮ್ಮಂತೆ ಇತರರೂ ಏಕೆ ಯೋಚಿಸುತ್ತಿಲ್ಲ?  ಎಂದು  ನಮ್ಮ ಮನಸ್ಸು ಚಿಂತಿಸುತ್ತದೆ . ಕೆಲವೊಮ್ಮೆ ಇತರರು ನಮ್ಮ  ಚಿಂತನೆಗೆ  ಬೆಲೆ ಕೊಡದೇ ಹೋದರೆ, ಆಗ  ಅಂತಹವರನ್ನು ದೂರ ಮಾಡುತ್ತೇವೆ, ಕೆಲವು ಸಂದರ್ಭಗಳಲ್ಲಿ ಅವರ  ಮೇಲೆ ಸಿಟ್ಟು  ತೋರಿಸುತ್ತೇವೆ .   ನಮ್ಮ ನಿಲುವನ್ನು ಸಾಬೀತು ಮಾಡಲು ಪ್ರಯತ್ನಿಸುತ್ತೆವೆ. ವಿನಾಕಾರಣ ಅನ್ಯ ಮನಸ್ಕರಾಗಿಬಿಡುತ್ತೇವೆ, ಅಶಾಂತರಾಗುತ್ತೇವೆ. 
                                ವಾಸ್ತವದಲ್ಲಿ ಮುಕ್ತ ಮನಸ್ಸಿನಲ್ಲಿ ಮೂಡುವ ಪ್ರತಿ ಭಾವನೆಯು ಸ್ವತಂತ್ರವಾಗಿರುತ್ತದೆ.  ಪ್ರತಿ ಯೋಚನೆಯೂ ವಿಧವಿಧವಾಗಿರುತ್ತದೆ, ಕ್ಷಣ ಕ್ಷಣಕ್ಕೆ ಹೊಸ ಹೊಸ ಯೋಚನೆ ಬರುತ್ತಾ ನಮ್ಮ ಮುಂದೆ ಹಲವಾರು ಆಯ್ಕೆಗಳನ್ನು ಇರಿಸುತ್ತಾ, ಅಗಾಧವಾದ ಮತ್ತು ಅಸಂಖ್ಯಾತ ಯೋಚನಾಲಹರಿ  ಹರಿದು ಬರುತ್ತದೆ. ಹಾದಿ, ಗುರಿ, ದಿಕ್ಕು ಇವುಗಳ ನಿರ್ಧಾರವು ಕೂಡಾ ಮುಕ್ತವಾಗಿಯೇ ಇರುತ್ತದೆ.  ಇಲ್ಲಿ ಯಾವ ಚಿಂತನೆಯು ಒಂದೇ ದಿಕ್ಕಿನಲ್ಲಾಗಲಿ ಅಥವಾ ನಿಯಮಿತ ರೂಪಿನಲ್ಲಾಗಲಿ ಇರುವುದಿಲ್ಲ.   ಹಲವಾರು ಅಭಿಪ್ರಾಯಗಳ ಮತ್ತು ಹಲವರ ಅನುಭವಗಳ  ಆಧಾರದಲ್ಲಿ ಚಿಂತಿಸಿಸಲು ಮುಕ್ತ ಚರ್ಚೆಗೆ ಅವಕಾಶಗಳನ್ನು  ತೆರೆದುಕೊಂಡಿರುತ್ತವೆ. ಜಗತ್ತು ವಿಶಾಲವಾಗಿದೆ, ಚಿಂತನೆಯ ಹರಿವು ಅಗಾಧವಾಗಿದೆ, ಹೊಸ ಹೊಸತು ಹರಿದಾಡುತ್ತಿದೆ, ದಿನ ನಿತ್ಯದ ಬದುಕು ನಿತ್ಯ ನೂತನವಾಗಿದೆ, ಈ ಬದುಕು ಸುಂದರವಾಗಿದೆ, ಹಲವು ಬಣ್ಣ, ರೂಪಗಳಲ್ಲಿ ,ಬಗೆಬಗೆಗಳಲ್ಲಿ ಪ್ರಕೃತಿ ನಿರೂಪಿತವಾಗಿದೆ ಎಂದು ಮುಕ್ತ ಮನಸ್ಸು ಕೂಗಿ ಕರೆಯುತ್ತಿರುತ್ತದೆ.  ಒಬ್ಬ ಕವಿ ಹೇಳುತ್ತಾನೆ " ತೆರದ ಪುಸ್ತಕ, ಬಿಚ್ಚಿದ ಮನಸು ಎರಡು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸುಲಭ. "   
                                ಪೂರ್ವಾಗ್ರಹಪೀಡಿತ ಮನಸ್ಸಿಗೆ ಈ ಸೊಬಗೇ ಕಾಣುವುದಿಲ್ಲ.  ಕೇವಲ ಕಿಟಕಿಯ ಮರೆಯಿಂದ ಆಕಾಶ ನೋಡಿದಂತೆ ಜಗತ್ತನ್ನು ನೋಡಬೇಕಾಗುತ್ತದೆ.  ಬಂಧನದಿಂದ ಹೊರಬರಲು, ಈ ಜಗತ್ತಿನ ಸೌಂದರ್ಯವನ್ನ ಸವಿಯಲು  ಮೊದಲು, ನಾವು ಮನಬಿಚ್ಚಿ ನಗುವುದನ್ನು ಕಲಿಯಬೇಕಾಗುತ್ತದೆ.  ಬಂದುದನ್ನು ಯಥಾಮತಿಯಾಗಿ ಸ್ವೀಕರಿಸುವ ಕಡೆಗೆ ಮನಸು ಮಾಡಬೇಕಾಗುತ್ತದೆ.  ಪ್ರತಿ ಕ್ಷಣವನ್ನು ಅನುಭವಿಸುವ ಬಗ್ಗೆ ಚಿಂತನೆ  ಮಾಡಬೇಕಾಗುತ್ತದೆ.  ನಗುವಾಗ ನಕ್ಕು, ಅಳುವಾಗ ಆತ್ತು,  ಖುಶಿ ಪಡುವಾಗ ಖುಷಿಪಟ್ಟು, ಸಂತೋಷ ಸವಿಯುವಾಗ ತುಂಬು ಮನಸಿನಿಂದ ಸವಿದು ಆಯಾಯ ಕ್ಷಣವನ್ನು ಅನುಭವಿಸಬೇಕಾಗುತ್ತದೆ.  ಜೀವನ ಗೋಳಿನ ಕೂಪವಲ್ಲ, ನಿತ್ಯ ನೂತನ.   .  
                                 ೨೦೧೫ ರ ಹೊಸ ವರ್ಷ ನಮ್ಮನ್ನು ಕತ್ತಲೆಯ ಪೂರ್ವಾಗ್ರಹದಿಂದ, ಮುಕ್ತ ಬೆಳಕಿನೆಡೆಗೆ ಕರೆದೊಯ್ಯಲಿ, ಜಗದ ಸೌಂದರ್ಯ ಅರಿಯುವ ಮುಕ್ತಮನಸು ನಮ್ಮದಾಗಲಿ ಎಂದೇ ಆಶಿಸುವ. 
ಗುರು ಹಿರಿಯರ ಸೇವೆ 

ಒಮ್ಮೆ ಗುರುನಾಥರಲ್ಲಿ ಓರ್ವ ವೃದ್ಧರು ಬಂದು  ತಮ್ಮಅಳಲನ್ನು ತೋಡಿಕೊಳ್ಳುತ್ತ . "  ನನ್ನ  ಮಗ ಅಮೇರಿಕಾದಲ್ಲಿ ನೆಲೆಸಿರುವನೆಂದು, ವಯಸ್ಸಾದ ನಾವು ಇಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೇವೆ. ನನ್ನ ಹೆಂಡತಿಗಂತೂ  ಕೀಲು ಮತ್ತು ಮೂಳೆ ನೋವಿನಿಂದ ಓಡಾಡಲು ಕಷ್ಟವಾಗಿ ಹಾಸಿಗೆ ಹಿಡಿದಿದ್ದಾಳೆ, ನನ್ನ ಆರೋಗ್ಯವು ಅಷ್ಟೊಂದು  ಸರಿ ಇಲ್ಲ, ನಮ್ಮನ್ನು ನೋಡಿಕೊಳ್ಳುವವರಾರು ಸಧ್ಯಕ್ಕೆ ಇಲ್ಲಿ ಇಲ್ಲ.  ಹೀಗಾಗಿ ಈಗ ನಮ್ಮ ಮಗ ವಾಪಸ್ಸು ಬೆಂಗಳೊರಿಗೆ ಬಂದು ನಮ್ಮ ಜೊತೆ ಉಳಿದರೆ ವಯಸ್ಸಾದ ನಮಗೆ ಬಹಳ ಉಪಕಾರವಾದಂತಾಗುತ್ತದೆ. ಅವನು ಬೆಂಗಳೂರಿಗೆ  ಬರುವ ಹಾಗೆ ಏನಾದರು ತಾವು ಅವನಿಗೆ ಮನಸ್ಸು ಬರುವಂತೆ ಮಾಡಬೇಕು." ಎಂದು ವಿನಂತಿಸಿಕೊಂಡರು.  ಸುಮ್ಮನೆ ಆಲಿಸಿದ ಗುರುನಾಥರು " ಹೌದು, ಇದರಲ್ಲಿ ನಿಮ್ಮ ಮಗನದೇನೋ ತಪ್ಪಿಲ್ಲವಲ್ಲ, ನಿಮ್ಮ ಆಸೆಯಂತೆ ಆತ  ಅಲ್ಲಿ ಹೋಗಿ ನೆಲೆಸಿದ್ದಾನೆ . ನಿಮಗೆ ಇರಲು ಮನೆ,  ಹಣ ಎಲ್ಲವು ಇದೆಯಲ್ಲ, ಈಗ ಅವನು ಏಕೆ ಬೇಕು? " ಎಂದರು. ಸ್ವಲ್ಪ ಗಲಿಬಿಲಿಗೊಂಡ ಆ ವೃದ್ಧರು ಅರ್ಥವಾಗದವರಂತೆ ಸುಮ್ಮನೆ ಕಣ್ಣು ಕಣ್ಣು ಬಿಡುತ್ತ ನಿಂತರು. " ಅಲ್ಲಪ್ಪಾ, ನೀವು ನಿಮ್ಮ ಮಗನಿಗೆ  ನೀನು ಚೆನ್ನಾಗಿ ಓದಬೇಕು, ದೊಡ್ಡ ಕೆಲಸ ಹಿಡಿಯಬೇಕು, ಅಮೆರಿಕಾಕ್ಕೆ ಹೋಗಿ ಲಕ್ಷಾಂತರ ದುಡ್ಡು ಸಂಪಾದನೆ ಮಾಡಬೇಕು ಎಂದೆಲ್ಲ ಹೇಳಿದವರು ನೀವಲ್ಲವೇ? ಈಗ,  ಅವನು ನೀವು ಹೇಳಿದ್ದನ್ನು  ಚಾಚೂ ತಪ್ಪದೆ ಮಾಡುತ್ತಿದ್ದಾನೆ. ನಿಮ್ಮ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಾನೆ. ಅಮೆರಿಕಾದಲ್ಲಿ ನೆಲೆಸಿದ್ದಾನೆ, ಚೆನ್ನಾಗಿ ಓದಿದ್ದಾನೆ, ದೊಡ್ಡ ಕೆಲಸ ಹಿಡಿದಿದ್ದಾನೆ. ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾನೆ,ತಪ್ಪೇನಿದೆ?   ಆತನಿಗೆ, ನೀವು  ವಯಸ್ಸಾದ ತಂದೆ ತಾಯಿಯರನ್ನು ವೃದ್ದಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು, ಗುರು ಹಿರಿಯರ ಸೇವೆ ಮಾಡಬೇಕು ಎಂದು ಯಾವತ್ತು ಹೇಳಿಕೊಡಲಿಲ್ಲ ಅಥವಾ ಅದನ್ನು ನೀವು ಎಂದು ನಿಮ್ಮ ಹಿರಿಯರಿಗೆ ಮಾಡಿ ತೋರಿಸಲಿಲ್ಲ.  ವಾಸ್ತವ ಹೀಗಿರಬೇಕಾದರೆ ನಿಮ್ಮ ಮಗ ಕಲಿಯುವುದಾಗಲಿ ಅಥವಾ ಮಾಡುವುದಾಗಲಿ  ಹೇಗೆ? ಅಲ್ಲವೇ ಸಾರ್? ನೀವು ಏನು ಹೇಳಿ ಕೊಟ್ಟಿದ್ದೀರೋ ಅದನ್ನು ಅವನು ಮಾಡುತ್ತಿದ್ದಾನೆ. ಅವನು ನಿಮ್ಮ ಮಗ ಅಲ್ಲವೇ ಸಾರ್?  ಮಾಡಲಿ ಬಿಡಿ, ಈಗ ಯಾವ ಮಂತ್ರ ತಂತ್ರವೂ ಅವನನ್ನು ಬರುವ ಹಾಗೆ ಮನಸ್ಸು ಕೊಡಲು ಸಾಧ್ಯಾಗುವುದಿಲ್ಲ.  ಭಗವಂತನನ್ನು ಬೇಡಿಕೊಳ್ಳಿ.ಭಗವಂತ ಅವನಿಗೇ ಮನಸ್ಸು ಕೊಟ್ಟರೆ ಕೊಡಬಹುದು. " ಎಂದು ನಸುನಗುತ್ತ ಹೇಳಿ ಅವರನ್ನು ಕಹಿಸಿಕೊಟ್ಟರು.  
ಹೌದು, ಇಲ್ಲಿ ನಾವು ಚಿಂತನೆ ಮಾಡ ಬೇಕಾದುದನ್ನು ಗುರುನಾಥರು ಅವರ ಮೂಲಕ ನಮಗೆಲ್ಲಾ ಒಂದು ಪಾಠ ಹೇಳಿದ್ದಾರೆ. ನಾವು ನಮ್ಮ ಮಕ್ಕಳಿಗೆ ಯಾವುದನ್ನು ಹೇಳಬೇಕು?  ಯಾವುದರ  ಬಗ್ಗೆ ಸರಿಯಾದ ತಿಳುವಳಿಕೆ ನೀಡಬೇಕು? ಮತ್ತು ಹೇಗೆ ಹಿರಿಯರ ಸೇವೆ ಮಾಡಬೇಕು ಎನ್ನುವುದನ್ನು ನಾವೇ ಮಾಡಿ   ತೋರಿಸಬೇಕು. ಎಳವೆಯಲ್ಲೇ ನೋಡಿ ಕಲಿತ ಇಂತಹ ವಿಚಾರಗಳು ಮನಸಿನ ಆಳದಲ್ಲಿ ಗಟ್ಟಿಯಾಗಿ ಉಳಿಯುತ್ತದೆ. ಆ ನಂತರ ಹೆಚ್ಚಿನಂಶ ಮಕ್ಕಳು ಪಾಲನೆ ಮಾಡುತ್ತಾರೆ. ಇಷ್ಟರ ಮೇಲೂ  ಮಕ್ಕಳು ಅಪ್ಪ ಅಮ್ಮನ ಮತ್ತು ಗುರು ಹಿರಿಯರ  ಸೇವೆಯನ್ನು ವೃದ್ದಾಪ್ಯದಲ್ಲಿ ನಿರ್ವಹಿಸಲಿಲ್ಲ ಎಂದರೆ ಇದು ಅವರವರ ಪ್ರಾರಬ್ದ ಕರ್ಮವೆಂದೇ ಹೇಳಬೇಕಾಗುತ್ತದೆ. ಅಲ್ಲವೇ? 

December 13, 2014

ಜಗದ ಚಿಂತೆ 


                       ಈ ಜಗತ್ತಿನಲ್ಲಿ ಎಲ್ಲರಿಗೂ ಅನ್ನ ಬಟ್ಟೆ ಸಿಗಲಿ, ಎಲ್ಲರು ವಿದ್ಯಾವಂತರಾಗಲಿ, ಎಲ್ಲರು ಆರೋಗ್ಯದಿಂದ ಚೆನ್ನಾಗಿ ಬದುಕಲಿ ಎಂದು ನಾವು ಇಚ್ಚಿಸುವುದು ಸರಿಯಾದ ಚಿಂತನೆಯೇ.  ಅದಕ್ಕಾಗಿ ನಾವು  ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು ಖಂಡಿತ ತಪ್ಪಲ್ಲ.  ಆದರೆ, ಅದರ ಪರಿಣಾಮ ಹೀಗೆ ಇರಬೇಕೆಂದು ನಿರೀಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ. ಅದು ವಿಶ್ವದ ನಿಯಾಮಕನಿಗೆ ಸೇರಿದ ವಿಷಯ. ನಮ್ಮ ಬಯಕೆ ಸಹಜ ಸುಂದರ ಸರಿ. ಅದು ನಮ್ಮನ್ನು ಬಂಧಿಸಬಾರದು. ನಾವು  ಸುಂದರವಾದ ಹೂವನ್ನು ನೋಡುತ್ತೇವೆ, ಅದರ ಸೌಂದರ್ಯವನ್ನು ಅಸ್ವಾದಿಸುತ್ತೇವೆ, ಮನತುಂಬಿಕೊಳ್ಳುತ್ತೇವೆ...ಇದೊಂದು ಅಧ್ಬುತ ಅನುಭವ, ತನ್ಮಯತೆಯ ಪ್ರತೀಕ! ಅ ಕ್ಷಣದಲ್ಲಿ ನಾವು ಅನುಭವಿಸಿದ ಆ ದಿವ್ಯ ಆನಂದ ಸದಾ ಕಾಲ ನನಗೆ  ಸಿಗುತ್ತಿರಬೇಕೆಂಬ ಹಠ ಬೇಡ. ಹಾಗೆ ಒಂದು ಪಕ್ಷ ಆಶಿಸಿದರೆ ಅದು ಸಾಧ್ಯವೂ ಇಲ್ಲ. ಏಕೆಂದರೆ ಕಾಲದ ನಿಯತಿಗೆ ಒಳಗಾದ ಯಾವುದೂ ಈ ಜಗತ್ತಿನಲ್ಲಿ ಒಂದೇ ಸಮನೆ ಇರಲು ಸಾಧ್ಯವಿಲ್ಲ.
                     ಒಮ್ಮೆ ಒಬ್ಬ ವಯೋವೃದ್ಧ ಸಂತರು ತೀವ್ರವಾಗಿ ಯೋಚಿಸುತ್ತಿದ್ದರು.  ತಮ್ಮ ಗುಡಿಸಿಲಿನ ಹೊರಗಿನ ಬೆಳದಿಂಗಳ ಸೌಂದರ್ಯವು ಅವರಿಗೆ ಬೇಡವೆನಿಸುವಷ್ಟು ನೀರಸದಿಂದ  ಗಾಡವಾದ ಚಿಂತನೆಯಲ್ಲಿ   ಮುಳುಗಿ ಹೋಗಿದ್ದರು. ಏಕಾಂತದಲ್ಲಿದ್ದ ಅವರೆದುರು ಪರಮಾತ್ಮ ಪ್ರತ್ಯಕ್ಷವಾಗಿ “ ಏನು  ಚಿಂತಿಸುತ್ತಿರುವೆ? ಯಾವುದು ನಿನ್ನನ್ನು ಚಿಂತೆಗೆ ಈಡುಮಾಡಿದೆ? “ ಎಂದು ಕೇಳಿದ. ಆಗ ಎಚ್ಚೆತ್ತ ಸಂತರು “ ನಿನಗೆ ತಿಳಿಯದ್ದು ಈ ಜಗತ್ತಿನಲ್ಲಿ ಏನಿದೆ ಪರಮಾತ್ಮ? ಎಲ್ಲವನ್ನು ಅರಿತಿರುವ ಪರಮೇಶ್ವರ ನಿನ್ನಲ್ಲಿ ಒಂದು ಬಿನ್ನಹ? ನನ್ನ ಮನಸ್ಸು ಬಹಳ ನೊಂದಿದೆ. ಈ ಜಗತ್ತಿನಲ್ಲಿ ಕೋಟಿ ಕೋಟಿ ಜನರು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ, ವಂಚನೆ ಮತ್ತು ವ್ಯಸನಕ್ಕೆ ಒಳಗಾಗುತ್ತಿದ್ದಾರೆ, ಇದು ಒಂದು ವರ್ಗದವರಾದರೆ, ಇನ್ನೊಂದು ವರ್ಗದ ಜನರು ಎಷ್ಟು ಗಳಿಸಿದರು ಸಾಲದೆಂಬಂತೆ ಬಡವರ,  ಅಸಹಾಯಕರ ಶೋಷಣೆ ಮಾಡುತ್ತಾ ಬೇಕಾದಷ್ಟು ಅನ್ಯಾಯ ವಂಚನೆಗಳನ್ನು ಮಾಡುತ್ತಿದ್ದಾರೆ. ಇಷ್ಟೆಲ್ಲಾ ಅಪರಾಧಗಳು ನಡೆಯುತ್ತಿದ್ದರೂ ಅಂತಹವರಿಗೆನು ಶಿಕ್ಷೆಯಾಗುತ್ತಿಲ್ಲ.  ಇದರಿಂದ ನನ್ನ ಮನಸ್ಸು ಬಹಳ ನೊಂದಿದೆ. ಇದಕ್ಕೆಲ್ಲ  ಯಾವಾಗ ಮುಕ್ತಿ ?  ಎಲ್ಲರು ಸುಖ ಶಾಂತಿಯಿಂದ ಬದುಕುವುದು ಯಾವಾಗ?” ಎಂದು ತಮ್ಮ ದುಃಖವನ್ನು ಪರಮಾತ್ಮನಲ್ಲಿ ವಿನಂತಿಸಿಕೊಂಡರು.  ಪರಮಾತ್ಮ ನಸುನಕ್ಕು “ ಇದನ್ನೆಲ್ಲಾ ನಿನ್ನ ತಲೆಗೆ ಏಕೆ ಹಾಕಿಕೊಂಡೆ? ಇದು ನಿನ್ನ ಕೆಲಸವೇ? ಈ ಜಗತ್ತನ್ನು ಸೃಷ್ಟಿ ಮಾಡಿದವನಿಗೆ ಅದು ಹೇಗಿರಬೇಕೆಂಬ ಪರಿಕಲ್ಪನೆ ಇರುವುದಿಲ್ಲವೇ? ಯಾವಾಗ ಯಾರಿಗೆ ಬಡತನ ನೀಗಿಸಬೇಕು? ಯಾರಿಗೆ ಯಾವ ಶಿಕ್ಷೆ ನೀಡಬೇಕು?  ಇವೆಲ್ಲಾ ನಿನ್ನ ಬಯಕೆಯಂತೆ ಆಗುವ ಕೆಲಸವಲ್ಲ. ಅದು ಕೂಡಾ ನನ್ನ ಕೆಲಸವೇ! ನಿನ್ನ ಕೆಲಸವೇನೆಂದರೆ,  ಈ  ಜಗಕ್ಕೆ ನಿನ್ನ ಕೈಲಿ ಸಾಧ್ಯವಾದಷ್ಟು ಒಳ್ಳೆಯದನ್ನು ನಿರ್ವಂಚನೆಯಿಂದ ಮಾಡುವುದು, ಸರ್ವ ಜನರಿಗೂ ಒಳಿತನ್ನು ಬಯಸುವುದು, ಆದರೆ ಕೊನೆಯಲ್ಲಿ ನಿಶ್ಚಿಂತನಾಗಿರುವುದು, ಇದನ್ನು ರೂಡಿಸಿಕೋ. ಜಗತ್ತು ಹೇಗಿರಬೇಕೆಂದು ಬಯಸುವುದು  ತಪ್ಪಲ್ಲ, ಆದರೆ,  ಜಗತ್ತು ಹೀಗೇ ಇರಬೇಕೆಂದು ಬಯಸುವುದು ಖಂಡಿತಾ ತಪ್ಪು. ನೀನು ಶಾಂತಿಯಿಂದ ಇರುವುದನ್ನು ಕಲಿತರೆ ನಿನ್ನ  ಬದುಕು ಮತ್ತು ಸಾಧನೆ ಎರಡು ಸುಗಮವಾಗುತ್ತದೆ!” ಎಂದು ಸಂತನನ್ನು ಸಂತೈಸಿದ.
              ಹೌದು,  ಈ ಜಗತ್ತು ನಮಗೆ ಏನೇನೆಲ್ಲಾ ಕೊಟ್ಟಿದೆ, ಅದನ್ನು ನಾವು ಸಂತೋಷದಿಂದ ನೋಡಿ ಆನಂದಿಸಲು ಕಲಿಯದಿದ್ದರೆ ಸುಂದರ ಕ್ಷಣಗಳು ಮರೆಯಾಗಿಬಿಡುತ್ತವೆ. ಸಂತೋಷದಿಂದ ನೋಡಬೇಕು,ಕೇಳಬೇಕು,ಮಾಡಬೇಕು, ಅನುಭವಿಸಬೇಕು. ಹಾಗೆಯೇ ದುಃಖದ ಕ್ಷಣಗಳನ್ನು ಕೂಡಾ ಅನುಭವಿಸಬೇಕು. ನಾವು ಯಾವುದರಿಂದಲೂ ಹೊರತಾಗಬಾರದು. ಚಿಂತೆ ನಮ್ಮ ಈ ಕ್ಷಣಗಳನ್ನು ನಾಶಮಾಡಬಾರದು. ನಡೆದುಹೋದ ಸಿಹಿ ಕಹಿ ಘಟನೆಗಳನ್ನು ಆಯಾ ಕ್ಷಣದಲ್ಲಿ ಬಂದಂತೆ ಅನುಭವಿಸಿ ಮರೆತುಬಿಡುವ ಸಾಧನೆ ಅನಿವಾರ್ಯವೆಂದು ಭಾವಿಸಬೇಕು. ಆಗಲೇ ಬದುಕಿನ ಪ್ರತಿಕ್ಷಣವೂ ಸುಂದರ .  ಇದನ್ನೇ ಬಸವಣ್ಣನವರು ಹೇಳಿರುವುದು   
                 
                            ಪರಚಿಂತೆ ಎಮಗೇಕಯ್ಯ? ನಮ್ಮ ಚಿಂತೆ ನಮಗೆ ಸಾಲದೇ?
                            ಕೂಡಲಸಂಗಮ ಒಲಿದಾನೋ ಒಲಿಯನೋ ಎಂಬ ಚಿಂತೆ
                            ಹಾಸಲುಂಟು ಹೊದೆಯಲುಂಟು.....

December 7, 2014

ಸಿಟ್ಟು ಮತ್ತು ವಿವೇಕ

ಸಿಟ್ಟು ಮತ್ತು ವಿವೇಕ   

                   ಸಿಟ್ಟು ಯಾರಿಗೆ ಬರುವುದಿಲ್ಲ ಹೇಳಿ! ಸಿಟ್ಟು ಬಂದರೆ ಮುಗಿಯಿತು, ಆ ಸಮಯದಲ್ಲಿ ಏನು ಮಾಡುತ್ತಾರೆಂಬುದೇ ಕೆಲವರಿಗೆ ತಿಳಿಯುವುದಿಲ್ಲ. ಒಂದು ನಿಮಿಷದ ಸಿಟ್ಟಿಗೆ ಆಹುತಿಯಾಗಿ, ಅದರಿಂದಾಗುವ  ಪರಿಣಾಮದಿಂದ ಹಲವಾರು ತೊಂದರೆಗಳಿಗೆ ಈಡಾಗುತ್ತಾರೆ, ನಂತರ ಪಶ್ಯಾತ್ತಾಪ ಪಡುತ್ತಾರೆ.  ಆದರೇನು ಅಷ್ಟು ಹೊತ್ತಿಗೆ ಆಗಬಾರದ   ಅನಾಹುತ ಆಗಿಹೋಗಿರುತ್ತದೆ.   ಈ ಸಿಟ್ಟು ಒಳ್ಳೆಯದಲ್ಲ, ಇದರಿಂದ ಆಗುವಂತಹ ವಿಪರೀತ ಪರಿಣಾಮದ ಬಗ್ಗೆಯೂ   ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ತಟ್ಟನೆ ಬರುವ ಸಿಟ್ಟನ್ನು ತಡೆಯುವ ಬಗೆ ಹೇಗೆ? ಎನ್ನುವುದನ್ನು ಅರಿಯದೇ, ಒಂದು ಪಕ್ಷ ಅರಿತರೂ,  ಅದನ್ನು ಆ ಸಮಯದಲ್ಲಿ ಮಾಡಲು ತಿಳಿಯದೇ ತೊಂದರೆಯನ್ನು ಮೈ ಮೇಲೆ ಹಾಕಿಕೊಳ್ಳುತ್ತಾರೆ.
                      ಈ  ಸಿಟ್ಟಿನಿಂದ ಆಗುವ ಅನಾಹುತದ ಕಾರಣ ಮತ್ತು ಪರಿಣಾಮಗಳ  ಬಗ್ಗೆ ಬೇಸತ್ತು,  ಒಬ್ಬ ಭಕ್ತರು,   ಈ ಸಿಟ್ಟಿನಿಂದ ಮುಕ್ತಿ ಪಡೆಯುವ  ಒಂದು ಪರಿಹಾರ ಮತ್ತು ಉಪಾಯವನ್ನು ಕೋರಿಕೊಂಡು ಒಬ್ಬ ಸಂತನಲ್ಲಿ ಹೋದರು. ಅವರಲ್ಲಿ ವಿಷದವಾಗಿ  ತಮಗೆ ಶೀಘ್ರವಾಗಿ ಬರುತ್ತಿರುವ ಸಿಟ್ಟು, ಅದರಿಂದಾಗುವ ಪರಿಣಾಮ ಇವುಗಳ ಬಗ್ಗೆ ವಿಸ್ತಾರವಾಗಿ ತಿಳಿಸುತ್ತಾ, ತನಗೊಂದು ಪರಿಹಾರ ಸೂಚಿಸಬೇಕೆಂದು ವಿನಂತಿಸಿಕೊಂಡರು. ಸಮಾಧಾನವಾಗಿ ಆಲಿಸಿದ ನಂತರ ನಸುನಗುತ್ತಾ ಭಕ್ತರ  ಕಡೆಗೆ ನೋಡುತ್ತಾ, ತಮ್ಮ ಇನ್ನೊಂದು ಕೊಣೆಯ ಕಡೆಗೆ ನಡೆದರು. ಒಂದೈದು ನಿಮಿಷಗಳು ಕಳೆದ ನಂತರ  ಈಚೆಗೆ ಬಂದ ಸಂತರು, ತಮ್ಮೊಂದಿಗೆ ಬಂದು ಅಗಲವಾದ ಭಾರವಾದ ಹಲಗೆ, ಒಂದು ಸುತ್ತಿಗೆ  ಮತ್ತು ಒಂದು ಚಿಕ್ಕ ಚೀಲದ  ಭರ್ತಿ  ಮೊಳೆಯನ್ನು ತಂದು ಆ ಭಕ್ತರ  ಮುಂದೆ ಇಟ್ಟರು. ಭಕ್ತರಿಗೆ  ಏನೂ ಅರ್ಥವಾಗಲಿಲ್ಲ.  ಪರಿಸ್ಥಿಯನ್ನು ಅರ್ಥಮಾಡಿಕೊಂಡ ಸಂತರು ತಾವೇ ಮಾತಿಗೆ ಪ್ರಾರಂಭ ಮಾಡಿದರು. 
                     "ಸಿಟ್ಟು ಒಂದು ಸಾಧಾರಣವಾದ ಕ್ರಿಯೆ. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಕೆಲವರಲ್ಲಿ ಸಿಟ್ಟು ನಿಯಂತ್ರಣದಲ್ಲಿರುತ್ತದೆ, ಮತ್ತೆ ಕೆಲವರಲ್ಲಿ ಸಿಟ್ಟಿನ ನಿಯಂತ್ರಣದಲ್ಲಿ ಅವರಿರುತ್ತಾರೆ. ಯಾರಿಗೆ ನಿಯಂತ್ರಣದಲ್ಲಿ ಸಿಟ್ಟು ಇರುತ್ತದೋ, ಅವರಿಗೆ ಸಿಟ್ಟು ಹೆಚ್ಚು ತೊಂದರೆ ಕೊಡುವುದಿಲ್ಲ. ಆದರೆ, ಎರಡನೇ ವರ್ಗದವರಿಗೆ ತೊಂದರೆ ಜಾಸ್ತಿ . ಈ  ವರ್ಗಕ್ಕೆ ನೀವು ಸೇರುತ್ತೀರಿ.  ನಿಮಗಾಗಿ ಈ ಉಪಕರಣ.  ನಿಮಗೆ,  ನಿಜವಾಗಿ ಸಿಟ್ಟು ನಿಯಂತ್ರಣಕ್ಕೆ ತಂದು ಕೊಳ್ಳಬೇಕೆಂದು ಆಶಯ ಇದ್ದರೆ , ನೀವು ನಾನು ಈಗ ಹೇಳುವ ಕೆಲಸವನ್ನು ತಪ್ಪದೇ  ಮಾಡಬೇಕಾಗುತ್ತದೆ. ಒಂದು ತಿಂಗಳ ನಿಮ್ಮ ಈ ಪ್ರಯತ್ನದಲ್ಲಿ ಗರಿಷ್ಟ ಪಲಿತಾಂಶ ಒಂದೇ ಬರುತ್ತದೆ. ಆದರೆ, ನಿಮ್ಮ ಪ್ರಯತ್ನ ಮಾತ್ರ ಪ್ರಾಮಾಣಿಕವಾಗಿರಬೇಕು" ಎಂದರು.   "ನಿಮಗೆ ಸಿಟ್ಟು ಬಂದ ತಕ್ಷಣ,  ನಿಮಗೆ ಈಗ ಕೊಟ್ಟಿರುವ  ಈ ಮರದ ಹಲಗೆಯ ಮೇಲೆ ಒಂದು ಮೊಳೆಯನ್ನು ಈ ಚೀಲದಿಂದ  ತೆಗೆದುಕೊಂಡು, ಈ ಸುತ್ತಿಗೆಯನ್ನು ಬಳಸಿ ಮೊಳೆಯು  ಪೂರ್ಣ ಮರದ ಒಳಗೆ  ಹೋಗುವತನಕ ಬಡಿಯಬೇಕು. ನಿಮಗೆ ಎಷ್ಟು ಸಲ ಸಿಟ್ಟು ಬಂದರೂ ಸರಿ, ಈ ಮೊಳೆ ಮರದ ಹಲಗೆಯನ್ನು ಸೇರಲೇ ಬೇಕು. ಸಾಧ್ಯವಾದರೆ ಒಂದು ದಿನದಲ್ಲಿ ಎಷ್ಟು, ಸಲ ಸಿಟ್ಟು ಮಾಡಿಕೊಂಡಿರಿ ಎಂಬುದನ್ನು ತಿಳಿಯುವ ಹಾಗೆ ಗಮನಮಾಡಿ. ಹೀಗೆ, ನೀವು ಒಂದು ತಿಂಗಳು ನಿಮ್ಮ ಪ್ರಯೋಗವನ್ನು ಪ್ರಾಮಾಣಿಕವಾಗಿ ಮಾಡಿ.  ಮೊಳೆಗಳು ಸಾಲದೇ ಹೋದರೆ ನನ್ನಲ್ಲಿ ಬಂದು ಪುನ: ಮತ್ತೊಂದು ಚೀಲ  ಪಡೆಯಿರಿ. ನಿಮಗೆನಾದರೂ ಸಂಶಯವಿದ್ದರೆ ಕೇಳಿ" ಎಂದರು. 
                     ಆ ಭಕ್ತರಿಗೆ  ಎಲ್ಲವೂ ಅರ್ಥವಾದವರಂತೆ ಎದ್ದು ಈ ಸಾಮಾನುಗಳನ್ನು ಪಡೆದುಕೊಂಡು, ಸಂತರಿಗೆ ನಮಸ್ಕರಿಸಿ  ಹೊರ ನಡೆದರು. ಒಂದು ತಿಂಗಳ ನಂತರ ಈ ಭಕ್ತರು ಪುನ: ಸಂತರಲ್ಲಿ ಬಂದರು. ಭಕ್ತರ ಮುಖದಲ್ಲಿ ಮುಂಚಿನ ವಿಷಾದ ಕಾಣಿಸಲಿಲ್ಲ. ಹೆಚ್ಚು ತೃಪ್ತಿ ಭಾವದ ಜೊತೆಗೆ ಸಂತಸ ಇತ್ತು.   ಸಂತರು " ಈ ಒಂದು ತಿಂಗಳ ನಿಮ್ಮ ಅನುಭವ ಹೇಗಿತ್ತು? ಎಷ್ಟು ಮೊಳೆಗಳನ್ನು ಬಡಿದಿರಿ? ಎಷ್ಟು ಮೊಳೆಗಳು ಉಳಿಯಿತು?" ಎಂಬ ಬಗ್ಗೆ ವಿಚಾರಿಸಿದರು.  ಆ ಭಕ್ತರು ತಮ್ಮ ಅನುಭವ ಹೇಳಿಕೊಂಡರು         " ಮೊದಮೊದಲು ದಿನಕ್ಕೆ ಹತ್ತಾರು ಮೊಳೆಗಳು ಬೇಕಾಯಿತು. ನಂತರದ ದಿನಗಳಲ್ಲಿ ನಾಲ್ಕಾರಕ್ಕೆ ಇಳಿಯಿತು, ಹದಿನೈದು ದಿನಗಳ ನಂತರ ಕ್ರಮೇಣ ಒಂದು ಎರಡು ಇತ್ತು. ಆದರೆ ಈಗ ಒಂದು ವಾರದಿಂದ ಈಚೆಗೆ ಒಂದು ಮೊಳೆಯು  ಖರ್ಚಾಗಿಲ್ಲ."    ಸಮಸ್ಥಿತಿಯಲ್ಲಿದ್ದ ಸಂತರು " ಈ ರೀತಿ ಬದಲಾವಣೆಯಾಗಲು ಏನು ಕಾರಣವಿರಬಹುದೆಂದು ಗುರುತಿಸಿದಿರಿ?" ಎಂದು ಭಕ್ತರನ್ನು ಕೇಳಿದರು.
                   " ನನಗೆ ಸಿಟ್ಟು ಬಂದಾಗ ಈ ಮೊಳೆಯನ್ನು ಮರದ ಹಲಗೆಗೆ ಬಡಿಯುವ ಕೆಲಸ ಹೆಚ್ಚು ಶ್ರಮವೆನಿಸುತ್ತಿತ್ತು. ಕಾರಣ ನನ್ನ ಸಿಟ್ಟಿನ ಕಾರಣದಿಂದ ಹಲಗೆಗೆ  ಮೊಳೆಯನ್ನು ಸರಿಯಾಗಿ ಬಡಿಯಲಾರದೆ ಇನ್ನು ಹೆಚ್ಚು ಸಿಟ್ಟು ಬರುತ್ತಿತ್ತು. ಆಗ ಮೊಳೆಯ ಮೇಲೆ, ನಿಮ್ಮ ಮೇಲೆಯೂ ಸಿಟ್ಟು ಅಧಿಕವಾಗುತ್ತಿತ್ತು.  ಮೊಳೆ ಬಡಿದು ಮುಗಿಸುವಷ್ಟರಲ್ಲಿ ನನಗೆ  ಬೆವರು ಹರಿಯುತ್ತಿತ್ತು. ಸುಸ್ತಾಗಿ ಬಿಡುತ್ತಿದ್ದೆ. ಕೆಲವು ದಿನಗಳ ನಂತರ ಸಿಟ್ಟಿಗಿಂತ ಮೊಳೆ ಬಡಿಯುವ ಕೆಲಸವೇ ಹೆಚ್ಚು ಶ್ರಮವೆನಿಸತೊಡಗಿತು.  ಹೇಗಾದರೂ ಮಾಡಿ ಈ ಕೆಲಸ ಬಿಡಬೇಕೆಂದು ಅನಿಸಿದರು ಸಿಟ್ಟು ಬಿಡದೆ, ಮೊಳೆ ಬಡಿಯುವುದನ್ನು ಬಿಡಲಾರೆ ಎಂದು ಗಟ್ಟಿ ಮನಸ್ಸು ಮಾಡಿದ್ದೆ.  ಮೊಳೆ ಬಡಿಯುವುದರಿಂದ ತಪ್ಪಿಸಿಕೊಳ್ಳಲು ಸಿಟ್ಟು ಕಡಿಮೆ ಮಾಡಲು ತೀರ್ಮಾನಿಸಿದೆ. ಮುಂದೆಯೂ ಮೊಳೆ ಬಡಿಯುವ ಕೆಲಸ  ಇರಲಿ ಇಲ್ಲದಿರಲಿ ಸಿಟ್ಟು ಬೇಡವೆಂದು ತೀರ್ಮಾನ ಮಾಡಿರುವೆ. " ಎಂದು ಸಮಾಧಾನದಿಂದ ಹೇಳಿದರು. 
                    ಸಂತರು,  ಭಕ್ತರ ಪ್ರಾಮಾಣಿಕ ಪ್ರಯತ್ನವನ್ನು ಮೆಚ್ಚುತ್ತಾ " ಈಗ ನಿಮಗೊಂದು ಕೆಲಸ ಬಾಕಿ ಇದೆ, ಅದನ್ನು ಮುಗಿಸಿಬಿಡಿ " ಎಂದು ಹೇಳುತ್ತಾ ಆ ಮರದ ಹಲಗೆಯನ್ನು ಭಕ್ತರ ಮುಂದಿಟ್ಟು " ಈಗ ನೀವು ಬಡಿದಿರುವ ಈ ಮೊಳೆಗಳನ್ನು ಈಚೆ ತೆಗೆದು ಬಿಡಿ. ನೇರವಾದ ಮೊಳೆಗಳನ್ನು ಈ ಚೀಲಕ್ಕೆ ಹಾಕಿ,  ಅಂಕ ಡೊಂಕ ಮೊಳೆಗಳನ್ನು ಇತ್ತ ಇಡಿ. ಇನ್ನರ್ಧ ಘಂಟೆ  ಬರುತ್ತೇನೆ. " ಎಂದು ತಮ್ಮ ಕೆಲಸಕ್ಕೆ ಸಂತರು ಹೊರಟು ಹೋದರು. ಭಕ್ತರು ಶ್ರಮವಹಿಸಿ ಮೊಳೆಗಳನ್ನು ಕಿತ್ತರು. ಅದರಲ್ಲಿ ಮುಕ್ಕಾಲು ಭಾಗದಷ್ಟು ಮೊಳೆ ಅಂಕು ಡೊಂಕಾಗಿ ಕೆಲಸಕ್ಕೆ ಬಾರದಂತೆ ಆಗಿದ್ದವು.  ಅಷ್ಟರಲ್ಲಿ ಸಂತರು ಬಂದು ನೇರವಾಗಿ " ಈಗ ಹೇಳಿ ನಿಮ್ಮ ಅಭಿಪ್ರಾಯವನ್ನು" ಎಂದು  ಭಕ್ತರ ಮುಖ  ನೋಡಿದರು.           "ಇಲ್ಲಿನ ಮುಕ್ಕಾಲು ಪಾಲು ಮೊಳೆಗಳು ಕೆಲಸಕ್ಕೆ ಬಾರದಂತೆ ಆಗಿಬಿಟ್ಟಿತು, ಹಲಗೆಗೆ  ತೂತುಗಳಾದವು, ಇಷ್ಟು ಬಿಟ್ಟರೆ ನನಗೇನು ತಿಳಿಯುತ್ತಿಲ್ಲ. "  ಎಂದು ಬೇಸರದಿಂದ ಭಕ್ತರು ಹೇಳಿದರು. 
                     ನಸುನಗುತ್ತಾ ಸಂತರು " ಈಗ ಹೇಳಿ ಒಂದು ಘಂಟೆಯ  ಶ್ರಮದಿಂದ ಮೊಳೆಯನ್ನೇನೋ ಈಚೆ ತೆಗಿದಿರಿ, ಆದರೆ ಈ ಮರದ ಹಲಗೆಯ ಮೇಲೆ ಮೂಡಿರುವ ಗುರುತು ತೆಗೆಯಲು ಸಾಧ್ಯವೇ? ಯೋಚಿಸಿ " ಎಂದರು. ಅವಕ್ಕಾದ ಭಕ್ತರು  ಏನೊಂದು ಹೇಳದೆ ಸುಮ್ಮನೆ ನಿಂತರು. ಪರಿಸ್ಥಿತಿಯನ್ನು ವಿವರಿಸುತ್ತಾ ಸಂತರು " ನಮಗೆ ಸಿಟ್ಟು ಬಂದ ಪರಿಸ್ಥಿತಿಯಲ್ಲಿ ನಮ್ಮ ಸಿಟ್ಟು ಮರದ ಹಲಗೆಯ ಮೇಲೆ ಬಡಿಯುವ ಮೊಳೆಯ ಮೂಲಕ ಪ್ರಕಟಗೊಳ್ಳುತ್ತದೆ. ನಂತರದಲ್ಲಿ ಸಿಟ್ಟು ಶಾಂತವಾದ ಬಳಿಕ, ನಮ್ಮಲ್ಲಿ ಮೂಡುವ ಬೇಸರ, ಅಶಾಂತಿ , ಪಶ್ಚಾತ್ತಾಪ ಇತ್ಯಾದಿಗಳು ಮರದಿಂದ ತೆಗೆದ ಮೊಳೆಗಳ ಮೂಲಕ ಪ್ರಕಟಗೊಳ್ಳುತ್ತವೆ. ಆದರೆ, ಸಿಟ್ಟಿನಲ್ಲಿ ನಾವು ಮಾಡಿದ ಅನಾಹುತ, ವಿಕೃತಿ ಮತ್ತು ಇತರರಿಗೆ ಉಂಟುಮಾಡಿದ ನೋವು  ಇವೆಲ್ಲ ಮರದ ಹಲಗೆಯ ಮೇಲೆ ಮೂಡಿದ್ದ ಅಳಿಸಲಾಗದ ತೂತುಗಳು.  ಈಗ ಹೇಳಿ, ಇದನ್ನು ಏನು ಮಾಡಿದರೆ ತೆಗೆಯಬಹುದು? ನಾವು ಎಷ್ಟು ಪಶ್ಚಾತ್ತಾಪ ಪಟ್ಟರೂ, ಎಷ್ಟು ಬಾರಿ ಕ್ಷಮಿಸಿ ಎಂದು ಕೇಳಿದರೂ ಈ ಮರದ ಹಲಗೆಯ ಮೇಲೆ ಮೂಡಿರುವ ಗುರುತು ಹೋಗಲು ಸಾಧ್ಯವೇ? ಅಳಿಸಲಾಗದ ಗುರುತು ನಮ್ಮ ಕ್ಷಣ ಮಾತ್ರದ ಸಿಟ್ಟು ಮಾಡಿಬಿಟ್ಟಿತು."
                     " ಸಿಟ್ಟು ಬರದಿರುವ ವ್ಯಕ್ತಿ ಯಾರಿದ್ದಾರೆ,  ಹೇಳಿ? ಸಿಟ್ಟು ಬರುವುದು ತಪ್ಪೆಂದು ಹೇಳಲಾಗದು. ಆದರೆ, ಈ ಸಿಟ್ಟು ಎಲ್ಲೂ ಗುರುತು ಮೂಡಿಸಬಾರದು ಅಷ್ಟೇ.  ಈ ಸಿಟ್ಟು ಬೇರೆಯವರಿಗೆ ಅಳಿಸಲಾಗದ ಗುರುತು ಮೂಡಿಸದಂತೆ ವಿವೇಕ ವಹಿಸುವುದೇ ನಿಜವಾದ ಸಾಧನೆ. ಸಮಾಧಾನ ಎಂತಹ ಸಿಟ್ಟನ್ನು ಗೆಲ್ಲಬಲ್ಲದು. ಸಮಾಧಾನ ಎಂತಹ ಪರಿಸ್ಥಿತಿಯನ್ನು ಎದುರಿಸಬಲ್ಲದು. ತಾಳಿದವನೇ ಬಾಳಲು ಅರ್ಹನಾಗುತ್ತಾನೆ.  ತಾಳುವಿಕೆಗಿಂತ ತಪವು ಇಲ್ಲ. ಸುಂದರ ಬಾಳಿಗೆ ಸಹನೆ ಕಳಶಪ್ರಾಯ." ಎಂದು ಆತ್ಮೀಯವಾಗಿ ಭಕ್ತರನ್ನು ಬೀಳ್ಕೊಟ್ಟರು. 

November 27, 2014

ಗೆಲುವಿನ ದಾರಿ

ಗೆಲುವಿನ ದಾರಿ 
              ನಾವು ಕಷ್ಟ  ದುಃಖಗಳನ್ನು ಗೆಲ್ಲಬೇಕೆಂದು ಹೊರಟರೆ, ಅದಕ್ಕೆ ಬೇರೆ ಮಾರ್ಗವಿಲ್ಲ. ಅವುಗಳನ್ನು ಅನುಭವಿಸುವುದೇ ಉತ್ತಮ ಮಾರ್ಗ; ಅವುಗಳಿಂದ ದೂರ ಓಡಬೇಕೆಂದು  ಬಯಸಿ ಪಲಾಯನ ವಾದಿಗಳಾದರೆ, ಅವುಗಳು ನಮ್ಮನ್ನು ಬಿಡುವುದಿಲ್ಲ. ಒಂದಕ್ಕೆ ನಾಲ್ಕರಂತೆ ಕಷ್ಟಗಳು ಬಂದು ಮುತ್ತುತ್ತವೆ. ಜೊತೆಗೆ ನಮ್ಮ ಹಿತೈಷಿಗಳಿಂದ, ಶತ್ರುಗಳಿಂದ ಮತ್ತು ಮಿತ್ರರಿಂದ ಅವಮಾನಿತರಾಗುತ್ತೇವೆ.    ಸ್ವಾಮಿ ವಿವೇಕಾನಂದರು ಹೇಳುತ್ತಾರೆ" ಸ್ವರ್ಗಕ್ಕೆ ಏನಾದರು ದಾರಿ ಅಂತ ಇರುವುದಾದರೆ, ನರಕದ ಮೂಲಕವೇ ಹೋಗಬೇಕಾಗುತ್ತದೆ". 
              ನಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು  ಹೆದರಿ  ನಾವು ದೂರವಾದಂತೆ,  ಕಷ್ಟಗಳು   ಹೆಚ್ಚು ಹೆಚ್ಚು ಬಲಿಷ್ಠವಾಗುತ್ತವೆ. ನಾವು ಕಷ್ಟ ಎದುರಿಸಲು ಸಿದ್ಧರಾದಾಗ ಅವು ನಮ್ಮ ಕಾಲು ಹಿಡಿಯುತ್ತವೆ; ಹೆದರಿ ಓಡಲು ತಯಾರಾದರೆ ನಮ್ಮ ಜುಟ್ಟು  ಹಿಡಿದು ನಿಲ್ಲಿಸುತ್ತವೆ. ಇದಕ್ಕೆ ಶ್ರೀ ರಾಮ ಕೃಷ್ಣರು ಹೇಳುತ್ತಾರೆ  "ಸುಖದ ಹಿಂದೆ ಓಡಿ ಓಡಿ ದಣಿಯ ಬೇಡ; ಕಷ್ಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ  ವೃಥಾ ಕಾಲಹರಣ ಮಾಡಬೇಡ. ಸುಖವನ್ನು ನಿರ್ಲಕ್ಷಿಸು; ಕಷ್ಟವನ್ನು ಎದುರಿಸು; ಆಗ ಸುಖ ನಿನ್ನ ಕಾಲ ಕೆಳಗೆ ಬೀಳುತ್ತದೆ. ಕಷ್ಟ ನಿನ್ನ ಕಂಡು ಹೆದರಿ ಓಡುತ್ತದೆ."
              ಇದನ್ನೇ  ಶ್ರೀ ಕೃಷ್ಣ ಹೇಳುತ್ತಾನೆ "ದೈರ್ಯದ ಹೋರಾಟ, ಅಸಂಗತ್ಯ ಮತ್ತು ಅನಾಸಕ್ತಿ".   ನಾವು  ನಾಟಕದಲ್ಲಿ ಪಾತ್ರವಹಿಸುವ ಕಲಾವಿದರು ; ನಾನು ರಾಜನೇ ಆಗಿರಬೇಕು, ಮಂತ್ರಿಯೇ ಆಗಬೇಕು, ಸೇವಕ ಬೇಡ ಎನ್ನುವಂತಿಲ್ಲ. ಆಯಾಯ ಸಂದರ್ಭಕ್ಕೆ ಬಂದ ಪಾತ್ರವನ್ನು ನಾವು  ಆಡಿ ಮುಗಿಸಲೇಬೇಕು. ನಾವು  ಕೇವಲ ಪಾತ್ರಧಾರಿಗಳು , ಪಾತ್ರವೇ ನಾವಾಗಬಾರದು. ನಾವು  ಯಾವಾಗ ಪಾತ್ರಕ್ಕೆ ನಾವೇ  ಎಂದು ಭಾವಿಸುತ್ತೇವೋ , ಆ ಕ್ಷಣದಿಂದ ನಾವು  ಸಂಕಷ್ಟಕ್ಕೆ ಸಿಕ್ಕಿ ಬೀಳುತ್ತೇವೆ.   ನಾವು ಕೇವಲ ಭಗವಂತನ ನಿರ್ದೇಶನದಂತೆ ಆಡುವ ಪಾತ್ರಧಾರಿಗಳು . 
             ಹೊರಗಿನಶತ್ರುಗಳಿಗಿಂತ ನಮ್ಮ ಒಳಗಿನ ಶತ್ರುಗಳೇ ಹೆಚ್ಚುಬಲಶಾಲಿಗಳು. ಈ  ಒಳಗಿನ ಶತ್ರುಗಳ ಜೊತೆ ಹೋರಾಡುವ ಶಕ್ತಿ ಬರಬೇಕಾದರೆ, ಮಾನಸಿಕ ಶಕ್ತಿ ಮತ್ತು ದೃಢತೆಯ ಅವಶ್ಯಕತೆ ಹೆಚ್ಚು ಬೇಕು. ಅವುಗಳಿಂದ ದೂರ ಓಡಿ ಹೋಗಲು ಬೇಕಾಗುವ  ಶಕ್ತಿಗಿಂತ, ಅವುಗಳ ಜೊತೆ ಹೋರಾಡಲು ಅಧಿಕಶಕ್ತಿ ಬೇಕು.  ನಿಜ,  ಆದರೆ, ಓಡಿ ಹೋದರೆ ಶ್ರಮ ಜಾಸ್ತಿ ಆಗುತ್ತದೆ, ಹೋರಾಡಿದರೆ ಶಕ್ತಿ ಜಾಸ್ತಿ ಲಭಿಸುತ್ತದೆ. 
             ನಮ್ಮಲ್ಲಿ  ಕಷ್ಟಕ್ಕೆ, ಹೂರಾಟಕ್ಕೆ ಮತ್ತು ದುಃಖಕ್ಕೆ  ಕಾರಣವೆ ಆಸೆ.    ಈ ಆಸೆಯನ್ನು ಗೆದ್ದವನು ಲೋಕವನ್ನೇ  ಗೆಲ್ಲುತ್ತಾನೆ. ಆಸೆ ತಪ್ಪಲ್ಲ; ಆದರೆ, ದುರಾಸೆ  ಖಂಡಿತಾ ತಪ್ಪು, ಭಗವಂತ ನಮಗೇನು   ಸಲ್ಲಬೇಕೋ ಅದನ್ನು ನಾವು ಕೇಳದೆಯೇ ನೀಡಿರುತ್ತಾನೆ; ನಾವು ದುರಾಸೆಯಿಂದ ಇನ್ನಷ್ಟು ಬೇಕೆಂದು ಗಳಿಸಲು ಹೂರಟಾಗಲೇ ಕಷ್ಟದ ಸಂಕೋಲೆಗೆ ಸಿಕ್ಕಿ ಬೀಳುತ್ತೇವೆ. ಅಸೆ ಎನ್ನುವುದು ಆದಿ  ಅಂತ್ಯವಿಲ್ಲದ ಚಕ್ರ. ಈ ಚಕ್ರಕ್ಕೆ ಸಿಕ್ಕದೇ  ಬದುಕಲು ಸಾಧ್ಯವಿಲ್ಲ.   ಆದರೆ, ಈ ಚಕ್ರದ ತಿರುವಿನಲ್ಲಿ ಕೇವಲ ಸ್ವಾರ್ಥ ಬೆರೆತರೆ ಬದುಕು ಗೊಜಲಾಗಲು ಪ್ರಾರಂಭವಾಗುತ್ತದೆ.  ಆಸೆಯು ಸಾರ್ವತ್ರಿಕವಾದಾಗ ಕಷ್ಟವಿಲ್ಲ , ಎಲ್ಲರಿಗಾಗಿ ಅಸೆ ಪಟ್ಟರೆ,  ನನಗೆ  ಎಂಬುದು ನಮಗೆ ಎಂದು ಬದಲಾಗುತ್ತದೆ.  ಆಗ  ನಮ್ಮ ಕಷ್ಟ - ನಷ್ಟ, ದುಃಖ  - ದುಮ್ಮಾನ, ಸ್ವಾರ್ಥ ಎಲ್ಲೂ ಕಾಣಿಸುವುದೆ ಇಲ್ಲ. ಆಗ ಜೀವನ ಒಂದು ಸವಾಲಾದರೂ,  ಅದು ಬಂಧನವಾಗುವುದಿಲ್ಲ, ಮುಕ್ತ ವಾತಾವರಣದಲ್ಲಿ   ಜೀವನವಿರುತ್ತದೆ.  ಆಗ  ದೊರೆಯುವ ಆನಂದವೇ ವಿಶಿಷ್ಟ.    

ಬೆಳಕು

ಬೆಳಕು 

ಜಗದಾಸೆಯ ಕೂಪದಲಿ ಬಿದ್ದು 
ಬೇಕುಬೇಡಗಳ ವ್ಯತ್ಯಾಸ ತಿಳಿಯದೆ 
ಕಂಡದ್ದೆಲ್ಲಾ ಬೇಕೇ ಬೇಕೆಂಬ ಹುಚ್ಚು ಮೋಹಕ್ಕೆ 
ಬಲಿಯಾಗಿ ಕಲೆಹಾಕುತ್ತಾ ಹಾಕುತ್ತಾ ಸಾಗುವಾಗ 
ದಿನದಿಂದ ದಿನಕ್ಕೆ ಎಲ್ಲವೂ ನೀರಸವೆನಿಸಲು 
ಅವ್ಯಕ್ತ ಭಯ ಎದೆಯಾಳದಲ್ಲಿ ಕಾಡಲು ಪ್ರಾರಂಭ. 

ರೋಗದ ಭಯ, ವೃದ್ದಾಪ್ಯದ ಭಯ, ಸಾವಿನ ಭಯ 
ವಿಚಲಿತ ಮನಸು ಕಾಣದಾ ನಾಳೆಗೆ ಹೆದರಿ 
ಸುಖದ ಇಂದಿನಾ ಕ್ಷಣಗಳನು ಬಲಿಕೊಟ್ಟು ಭಯದಿ  ಉಳಿಸಿ, 
ನಾಳಿನಾ ಕುಡಿಕೆಗೆ ಸುರಿದು ಚಾತಕ ಪಕ್ಷಿಯಂತೆ ಕಾದೆ. 
ಆ ನಾಳೆ ಇಂದಾದ ಬಳಿಕ ಎಂಬ ಪರಿಜ್ಞಾನಬಾರದೆ
ವಾತ್ತ್ಸವವನರಿಯದ ಭ್ರಾಮಿಕನಾಗಿ ಬಳಲಿದೆ. 

ನಾನು ನನದೆಂಬ ವಿಪರೀತ ಮೋಹದಲಿ ಅಲೆದಾಡಿ  
ನನ್ನೆಲ್ಲಾ ಭ್ರಾಂತಿಗಳ ಒಡೆತನದಿಂದ ಮೆರೆದಾಡಿ ದಣಿದು 
ಮಿಗಿಲಾದ ಕಾಣದಾ ಶಕ್ತಿಯೊಂದರ ನಿಯಂತ್ರಣ ಅರಿಯದೆ ಹುಚ್ಚನಾದೆ. 
ಹುಡುಕಾಟದಲಿ ಬಳಲಿ, ಸಂಪೂರ್ಣ ಶರಣಾಗಿ ಮೌನಿಯಾದೆ. 
ಅರಿವಾಗಿ, ಗುರುವಾಗಿ,ಶಕ್ತಿಯಾಗಿ  ಆಂತರ್ಯದಲಿ ಮೂಡಿದ್ದು 
 ನಾನಲ್ಲ,  ಕೇವಲ ನೀನೆಂಬ  ಸತ್ಯ.....  ದಿವ್ಯ ಚೈತನ್ಯದ  ಬೆಳಕು.