February 2, 2016

ಮಾತು-ಮೌನ-ಧ್ಯಾನ

ಮಾತು-ಮೌನ-ಧ್ಯಾನ
ಧ್ಯಾನದಲ್ಲಿ ಹಲವಾರು ವಿಧಾನಗಳವೆ. ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸರಳ ವಿಧಾನವೂ ಕೂಡಾ ಧ್ಯಾನದಲ್ಲಿ ಒಂದು; ಪ್ರತಿಕ್ಷಣದಲ್ಲಿ ಸಂಭವಿಸುವ ಶಬ್ಧ ಸ್ಪೋಟಗಳು ನಮ್ಮ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. "ಮನಸ್ಸು ಶಬ್ಧಗಳ ಮತ್ತು ಪದಗಳ ಸಂತೆ. ಈ ಪ್ರಕ್ರಿಯೆಯು ದಿನವಿಡೀ ನಡೆಯುತ್ತಿರುತ್ತದೆ. ನಮ್ಮ ಮನಸ್ಸಿನೊಳಗೆ ಆಲೋಚನೆಗಳೇ ತುಂಬಿಕೊಂಡಿರುತ್ತದೆ. ಈ ಪದಗಳ ಭಾರದಿಂದ ಮನಸ್ಸು ನಿತ್ರಾಣಗೊಳ್ಳುತ್ತದೆ. ಆಗ ಸ್ವ-ಜ್ಞಾನದ ಅನುಭವವೇ ಆಗುವುದಿಲ್ಲ. ಏಕೆಂದರೆ, ಈ ಸ್ವಜ್ಞಾನ ಇರುವುದು (sub conscious)ಶಬ್ದ ಮತ್ತು ಪದಗಳ ಆಚೆಗೆ"

ವಿಜ್ಞಾನ ಭೈರವ ತಂತ್ರದ 24ನೇ ಅಧ್ಯಾಯದಲ್ಲಿ  " ಮೊದಲು ಅಕ್ಷರಗಳಾಗಿ,ನಂತರ ಶಬ್ಧಗಳಾಗಿ,ಆಮೇಲೆ ಭಾವವಾಗಿ.... ಕೊನೆಗೆ ಎಲ್ಲವನ್ನೂ ಪಕ್ಕಕ್ಕೆ ಇರಿಸಿ ಸ್ವತಂತ್ರವಾಗಿ ಕೇಳಿಸಿಕೊ. ಪ್ರತಿ ಶಬ್ಧದ ಶಬ್ಧಗಳನ್ನು ಕೇಳಿಸಿಕೋ."  ಈ ರೀತಿಯ ಧ್ಯಾನಕ್ಕೊ೦ದು ವಿಧಾನವನ್ನು ಸೂಚಿಸುತ್ತಾರೆ. ಬೆನ್ನು ನೇರವಾಗಿ, ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ತೋಳುಗಳನ್ನು ಅಗಲಿಸಿ ಕುಳಿತುಕೊಳ್ಳಬೇಕು. ಇಡೀ ದೇಹ ಸಡಿಲವಾಗಿರಬೇಕು. ಮುಖದಲ್ಲಿ ಮ೦ದಹಾಸವಿರಬೇಕು. ಕಿವಿಯ ಮೇಲೆ ಬೀಳುತ್ತಿರುವ ಎಲ್ಲಾ ಶಬ್ಧಗಳನ್ನು ಕೇಳಿಸಿಕೊಳ್ಳುತ್ತಾ ಕುಳಿತುಕೊಳ್ಳಬೇಕು. ಯಾವುದೇ ಶಬ್ಧಕ್ಕೆ ಪ್ರತಿಕ್ರಿಯೆ ನೀಡುವುದು ಬೇಡ. ಎಲ್ಲವೂ ಕೇಳಿಸಲಿ. ನಾವಾಗಿಯೇ ಕೇಳಿಸಿಕೊಳ್ಳುವ ಪ್ರಯತ್ನ ಬೇಡ. ತ೦ತಾನೆಕೇಳುವೂದು ಕೇಳಲಿ. ಯಾವುದೇ ಶಬ್ಧಗಳ ವಿಮಶೆ೯ಬೇಡ. ಎಲ್ಲಿ೦ದಲಾದರೂ ಬರಲಿ, ಸುಮನೆ ಕೇಳಿಸಿಕೊಳ್ಳಿ. ಇದು ಅದರ ಪಾಡಿಗೆ ಅದು ನಡೆಯಲಿ; ಕೇಳುವಿಕೆಯಲ್ಲಿ ಸ್ವತಂತ್ರ ನಿರಂತರತೆ, ಇರಲಿ. ಅದರಲ್ಲೇ ಇನ್ನಷ್ಟು ಆಳವಾಗಿ..... ಮತ್ತಷ್ಟು ಆಳವಾಗಿ..... ಆಳಕ್ಕೆ ಹೋದಷ್ಟೂ ಶಬ್ಧದೊಳಗಣ ನಿಶ್ಯಬ್ಧಗೋಚರವಾಗುತ್ತದೆ...... ಆಳವಾಗಿ ಅನುಭವಿಸುತ್ತಾ ಹೋದ೦ತೆ.... ತಿಳಿಯಾದ ಮೌನ.... ನಿಶ್ಯಬ್ಧ.... ಈ ನಿಶ್ಯಬ್ಧದ ಆಲಿಸುವಿಕೆಯೂ ತಂತಾನೆ ಆಗುತ್ತಿರುತ್ತದೆ....... ಹಾಗೆಯೇ ಆಗಲಿ.
   
ಈ ದಿವ್ಯ ಮೌನದ ಸ್ಪಶ೯ ಕೆಲವೇ ಕ್ಷಣಕ್ಕಾದರೂ ನಮ್ಮದಾಗುತ್ತದೆ. ನಮ್ಮನ್ನು ನಾವು ಧ್ಯಾನಕ್ಕೆ ಅಪಿ೯ಸಿಕೊಂಡಷ್ಟು ಮೌನದ ಸ್ಪಶ೯ ದಿನದಿಂದ ದಿನಕ್ಕೆ ನಮ್ಮೊಳಗೆ ಈಜಲು  ಪ್ರಾರಂಭ ಮಾಡುತ್ತದೆ. ಆಗ ಧ್ಯಾನಸ್ಥ ಸ್ಥಿತಿ ಮೀನಿನಂತೆ ಸಹಜವಾಗಿ, ಹಗುರವಾಗಿ ನಮ್ಮೊಳಗೆ ತೇಲುತ್ತದೆ. ನಾವು ಶಬ್ಧಗಳನ್ನು ಆಲಿಸುತ್ತಾ ಸಾಗಿದೆವು; ನಂತರದಲ್ಲಿ ಶಬ್ಧ ಮಾಯವಾಗಿ ಮೌನದ ಸ್ಪರ್ಶವಾಯಿತು. ನಾವು ಶಬ್ಧಗಳನ್ನು ತಡೆಯಲು ಪ್ರಯತ್ನಿಸಲಿಲ್ಲ; ಶಬ್ಧ ಮಾಯವಾಗಿ ಮೌನದ ಸ್ಪರ್ಶವಾಯಿತು. ನಾವು ಶಬ್ಧಗಳನ್ನು ತಡೆಯಲಿಲ್ಲ; ಅಳಿಸಲಿಲ್ಲ, ಶಬ್ಧಗಳು ಎಲ್ಲೂ ಹೋಗಿರಲಿಲ್ಲ; ಅವು ಇದ್ದಲ್ಲೇ ಇದ್ದವು; ಆದರೆ, ನಮ್ಮ ಸ್ಥಿತಿ ಮಾತ್ರ ಬದಲಾಯಿತು. ನಿತ್ಯ ಜೀವನದಲ್ಲೂ ಕೂಡಾ ನಾವು ಸುಮ್ಮನೆ ಕೇಳಿಸಿ ಕೊಳ್ಳುವುದರಲ್ಲೇ, ನೂರಾರು ಸಮಸ್ಸೆಗಳಿಗೆ  ಪರಿಹಾರ ದೊರೆಯುತ್ತದೆ. ಧ್ಯಾನಸ್ಥ ಸ್ಥಿತಿಗೆ ತಲುಪಿದ ಮೇಲೆ ಕಛೇರಿಯಲ್ಲೇ ಇರಲಿ, ಟ್ರಾಫಿಕ್ ನ ಮಧ್ಯೆಯೇ  ಇರಲಿ, ನಮ್ಮೊಳಗೊಂದು ರೀತಿಯ ಬದಲಾವಣೆ  ಕಂಡುಬರುತ್ತದೆ. 

ಈ ಬದಲಾವಣೆಯನ್ನು ನಾವು ಪ್ರತಿಕ್ಷಣ ಗಮನಿಸಬಹುದು. ನಮ್ಮೊಳಗಿನ ಮುಖ್ಯ ಬದಲಾವಣೆಯೆಂದರೆ, ನಮ್ಮ ಮಾತಿನ ದುಂದುವೆಚ್ಚ ಕಡಿಮೆ ಆಗಿರುತ್ತದೆ. ವಿಪರೀತವಾದ ಮಾತು, ಅನಗತ್ಯ ಶಬ್ಧಗಳ ಬಳಕೆ, ವಾದವಿವಾದಗಳು ನಶಿಸುತ್ತಾ,ನಾವಾಡುವ ಪ್ರತಿ ಮಾತಿಗೂ ಮೌಲ್ಯ ಬರಲು ಪ್ರಾರಂಭವಾಗುತ್ತದೆ. ಆಗ ನಾವು ಮಾಡುವ ಪ್ರತಿ ಕ್ರಿಯೆಯು ಹಗುರವಾಗಿರುತ್ತದೆ. ಇದರಿಂದ ನಮ್ಮ ಸುತ್ತಲಿನ ಜಗತ್ತೇನೂ ಬದಲಾಗುವುದಿಲ್ಲ; ಅದು ಇದ್ದಂತೆಯೇ ಇರುತ್ತದೆ. ಆದರೆ ನಮ್ಮ ಸ್ಥಿತಿಯು ಮಾತ್ರ ಸಾಕಷ್ಟು ಬದಲಾಗಿರುತ್ತದೆ.