March 30, 2015

ಕಾಫಿ ಕಲಿಸಿದ ಪಾಠ

ಕಾಫಿ ಕಲಿಸಿದ ಪಾಠ 

ಒಮ್ಮೆ ಕೆಲವು ಹಳೆಯ ವಿರ್ಧ್ಯಾರ್ಥಿಗಳ ಗುಂಪು ತಮ್ಮ ನೆಚ್ಚಿನ ಪ್ರಾಧ್ಯಾಪಕರನ್ನು  ಮಾತನಾಡಿಸಿಕೊಂಡು, ತಮ್ಮ  ಹಳೆಯ ಸಿಹಿ ಕಹಿ ನೆನಪನ್ನು ಮೆಲಕುಹಾಕಿಕೊಂಡು  ಬರಬೇಕೆಂದು ತೀರ್ಮಾನಿಸಿ  ತಮ್ಮ ಗುರುಗಳ ಸಮಯವನ್ನು ಕೋರಿದರು.  ತಮ್ಮ ಗುರುಗಳ  ಒಪ್ಪಿಗೆ ಪಡೆದು,  ನಿಶ್ಚಯವಾದ ದಿನ ಗುರುಗಳ ಮನೆಗೆ ಎಲ್ಲಾ ಹಳೆಯ ವಿಧ್ಯಾರ್ಥಿಗಳು ಬಂದರು.  ಗುರುಗಳಿಗೆ ಮತ್ತು ವಿಧ್ಯಾರ್ಥಿಗಳಿಗೆ ಸಂಭ್ರಮದ ಮತ್ತು ಸಂತೋಷದ ಕ್ಷಣ. ಎಲ್ಲರು ತಮ್ಮ ಉದ್ಯೋಗ ಮತ್ತು ವೈಯಕ್ತಿಕ ಜೀವನದ ಬಗ್ಗೆ ಪರಿಚಯ ಮಾಡಿಕೊಂಡು ಉಭಯ ಕುಶಲೋಪರಿ ಮಾತನಾಡುತ್ತಿದ್ದರು.  ಮಾತು ಮುಂದುವರೆದಂತೆ ತಮ್ಮ ಉದ್ಯೋಗದಲ್ಲಿನ ಅಸಹಾಯಕತೆ,  ಅತೃಪ್ತಿ , ಅಸಮಾಧಾನ ಮತ್ತು ಒತ್ತಡಗಳ ಬಗ್ಗೆ ಬದಲಾಯಿತು.  ಎಲ್ಲರ ಮಾತಿನಲ್ಲಿ ವಿಷಾದ, ನೋವು ಮತ್ತು ನಿರಾಸೆ ಕಾಣುತ್ತಿತ್ತು.  ಎಲ್ಲವನ್ನು ಸಮಾಧಾನಚಿತ್ತದಿಂದ ಕೇಳಿಸಿಕೊಂಡ ಗುರುಗಳು ಬಂದಿರುವ ಹಳೆಯ ವಿಧ್ಯಾರ್ಥಿ ಮಿತ್ರರಿಗೆ ಕಾಫಿ ಮಾಡಿಕೊಡಲು ಅಡುಗೆ ಮನೆಯತ್ತ ಸಾಗಿದರು.
  
ಸ್ವಲ್ಪ ಸಮಯದ ನಂತರ ಒಂದು ಪಾತ್ರೆಯಲ್ಲಿ ಬಿಸಿಬಿಸಿ ಕಾಫಿ ತೆಗೆದುಕೊಂಡು  ಬರುತ್ತಾ ತಮ್ಮ ಮಿತ್ರರಿಗೆ " ಅಡುಗೆ ಮನೆಯಲ್ಲಿ ಲೋಟಗಳಿವೆನೀವೆಲ್ಲಾ  ಲೋಟಗಳನ್ನು ತಂದರೆ ಒಟ್ಟಿಗೆ ಕಾಫಿ ಕುಡಿಯೋಣ " ಎಂದರು. ಎಲ್ಲರು ಅಡುಗೆಮನೆಯತ್ತ ಸಾಗಿದರು.  ಅಡುಗೆ ಮನೆಯಲ್ಲಿ ವಿಧವಿಧವಾದ ಲೋಟಗಳಿದ್ದವು.  ಕೆಲವು ದುಬಾರಿಯವು, ಕೆಲವು ಚಿತ್ತಾರ ಬಿಡಿಸಿದ ಪಿಂಗಾಣಿ ಲೋಟಗಳು, ಕೆಲವು ಸಾಧಾರಣ ಲೋಟಗಳು, ಕೆಲವು ಪ್ಲಾಸ್ಟಿಕ್ ಲೋಟಗಳು ಇದ್ದವು. ಒಳಗೆಹೋದ ವಿಧ್ಯಾರ್ಥಿಮಿತ್ರರು ತಮ್ಮ ಕೈಯಲ್ಲಿ ಒಂದೊಂದು ಲೋಟ ಹಿಡಿದು ಬಂದರು.  ಎಲ್ಲರ ಲೋಟಕ್ಕೆ ಕಾಫಿ ಹಾಕಿ ಕೊಡುತ್ತಾ ಲೋಟಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಲೋಕಾಭಿರಾಮವಾಗಿ ಮಾತನಾಡಲು ಆರಂಭಿಸಿದ ಗುರುಗಳು " ಎಲ್ಲರೂ ಚೆನ್ನಾಗಿರುವ ಲೋಟಗಳನ್ನೇ ಆರಿಸಿಕೊಂಡಿದ್ದೀರಿ. ಇಲ್ಲೊಂದು ವಿಶೇಷ ಗಮನಿಸಿ, ಯಾರಿಗೂ ಸಾಧಾರಣ ಲೋಟಗಳು ಬೇಡವಾಗಿರುವುದು ." ಎಂದು ಮಾತಿಗೆ ಪ್ರಾರಂಭ ಮಾಡಿದ ಗುರುಗಳುನಮ್ಮೆಲ್ಲರ ಸ್ವಭಾವವೇ ಅದಾಗಿದೆ.  ನಮ್ಮ ಆಯ್ಕೆ ಯಾವಾಗಲು  ಉತ್ಕೃಷ್ಟವಾದುದೆ ಆಗಿರುತ್ತದೆ.  ನಾವು ಯಾವಾಗಲು ಅದನ್ನೇ ಬಯಸುತ್ತೇವೆ.  ಇದೆ ನಮ್ಮೆಲ್ಲಾ ಅಸಹಾಯಕತೆಅತೃಪ್ತಿ , ಅಸಮಾಧಾನ ಮತ್ತು ಒತ್ತಡಗಳಿಗೆ ಕಾರಣ. "  ಎಂದು ಹೇಳಿ ಎಲ್ಲರ ಮುಖಗಳನ್ನು ಗಮನಿಸಿದರು.  ಎಲ್ಲರ ಮುಖದಲ್ಲಿ ಆಶ್ಚರ್ಯ.   ಗುರುಗಳು ಮಾತನ್ನು ಮುಂದುವರೆಸುತ್ತಾ " ಉತ್ಕೃಷ್ಟವಾಗಿ ಕಾಣುವ ಲೋಟಗಳು ಕಾಫಿಯ ರುಚಿಯನ್ನಾಗಲಿ, ಗುಣವನ್ನಾಗಲಿ ಬದಲಾಯಿಸಲಾರವು.  ಇದು ನಮಗೆಲ್ಲಾ ತಿಳಿದ ವಿಷಯವೇ! ಆದರೂ  ನಾವು ಉತ್ಕೃಷ್ಟವಾದ ಲೋಟವನ್ನೇ ಆರಿಸಿಕೊಳ್ಳುತ್ತೇವೆ.   ಲೋಟದಲ್ಲೇ ಕಾಫಿ ಕುಡಿಯಲು ಬಯಸುತ್ತೇವೆ.  ಆದರೆ, ವಾಸ್ತವದಲ್ಲಿ ನಮಗೆ ಬೇಕಾಗಿರುವುದು ಒಳ್ಳೆಯ ಕಾಫಿಯೇ ಹೊರತು ಲೋಟವಲ್ಲ.  ಜೊತೆಗೆ ನಾವು ಇತರರ ಕೈಯಲ್ಲಿರುವ ಲೋಟದ ಬಗ್ಗೆ ಒಂದು ಕಣ್ಣು ಇರಿಸುತ್ತೇವೆ.  ಅವರ ಲೋಟ ಹೇಗಿದೆ? ಎಷ್ಟು ಚೆನಾಗಿದೆಎಂಬ ಬಗ್ಗೆ ನೋಡುವ ಕುತೂಹಲ ತೋರುತ್ತೇವೆ. ಇದು ನಮ್ಮಲ್ಲಿರುವ  ಅಸಂತೃಪ್ತಿಯನ್ನು ಸೂಚಿಸುತ್ತದೆ." 

" ಈಗ ಹೀಗೆ ಯೋಚಿಸೋಣ.   ಜೀವನವೆಂದರೆ ಕಾಫಿ ಇದ್ದಹಾಗೆ.  ನಾವು ಮಾಡುವ ಕೆಲಸ, ನಮಗಿರುವ ಅಧಿಕಾರ, ಹಣ ಮತ್ತು ಸಮಾಜದ ಗೌರವ ಇವೆಲ್ಲಾ ನಮ್ಮ ಲೋಟವಿದ್ದಂತೆ. ಇವೆಲ್ಲವೂ ನಮ್ಮ ಜೀವನವನ್ನು ಹಿಡಿದಿಡುವ ಸಾಧನಗಳು ಮಾತ್ರ.   ಲೋಟಗಳು ನಮ್ಮ ಜೀವನದ ಗತಿಯನ್ನಾಗಲಿ,  ಗುಣವನ್ನಾಗಲಿ ಬದಲಿಸಲಾರವು.  ಬದಲಿಗೆ ಇವು ನಮ್ಮ ಅಹಂಕಾರ ಜಾಸ್ತಿ ಮಾಡಿ ನಿಜವಾದ ಜೀವನವನ್ನು ಅನುಭವಿಸಲು ಬಿಡುವುದೇ ಇಲ್ಲ.  ಅಹಂಕಾರವು ನಮ್ಮ ಜೀವನದ ಸುಖ ಕ್ಷಣಗಳನ್ನು ಹಾಳುಗೆಡವುತ್ತದೆ.  ಭಗವಂತ ನಮಗೆ ಕೊಟ್ಟ ಸುಂದರ ಜೀವನವನ್ನು ಆನಂದದಿಂದ ಕಳೆಯುವ ಬದಲು, ಸಮಯವನ್ನು  ವ್ಯರ್ಥವಾಗಿಸುತ್ತ  ಅಹಂಕಾರದ ಬೇಗೆಯಲ್ಲಿ ಬೇಯುತ್ತೇವೆ.   ಅಸಹಾಯಕತೆ,  ಅತೃಪ್ತಿ , ಅಸಮಾಧಾನ ಮತ್ತು ಒತ್ತಡಗಳ ಒಡನಾಟದಲ್ಲಿ ದಿನವನ್ನು  ದೂಡುತ್ತೇವೆ.  ಭಗವಂತನೇನೋ ನಮಗಾಗಿ ಒಳ್ಳೆಯ ಕಾಫಿಯನ್ನೇ ತಯಾರು ಮಾಡಿ ಕೊಟ್ಟಿದ್ದಾನೆ. ಆದರೆ, ಕಾಫಿ ಕುಡಿಯಲು ಬೇಕಾದ ಲೋಟದ ಆಯ್ಕೆಯಲ್ಲಿ ದಾರಿ ತಪ್ಪುತ್ತೇವೆ. ರುಚಿಯಾದ ಕಾಫಿಯಿಂದ ವಂಚಿತರಾಗಿಬಿಡುತ್ತೇವೆ.   ಜಗತ್ತಿನಲ್ಲಿ ಸಂತೋಷದಿಂದ ಇರುವ  ವ್ಯಕ್ತಿಗಳ ಜೀವನದಲ್ಲಿ ಎಲ್ಲವೂ ಉತ್ಕೃಷ್ಟವಾಗಿರುವುದಿಲ್ಲ.   ಆದರೆ,  ಅವರು ಎಲ್ಲದರಲ್ಲೂ  ಉತ್ಕೃಷ್ಟತೆಯನ್ನು ಕಾಣುತ್ತಾರೆ. " ಎಂದು ಮಾತು ಮುಗಿಸಿದರು.  ಎಲ್ಲಾ ವಿಧ್ಯಾರ್ಥಿ ಮಿತ್ರರು ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಕುಳಿತರು

ನಂತರ ಗುರುಗಳು ಪುನಃ " ಸರಳವಾಗಿ ಬದುಕಿ. ತುಂಬು ಹೃದಯದಿಂದ ಪ್ರೀತಿಸಿ.  ಆಳವಾಗಿ ಚಿಂತನೆ ಮಾಡಿ.  ಮಧುರವಾಗಿ ಮಾತನಾಡಿ.  ನಿಮಗಿರುವ ಕೆಲಸವನ್ನು ಶ್ರದ್ಧೆಯಿಂದ ಭಗವಂತನ ಕೆಲಸವೆಂದು ನಿರ್ವಹಿಸಿ. ಮಿಕ್ಕ ಎಲ್ಲವನ್ನು ಭಗವಂತನ ನಿರ್ಣಯಕ್ಕೆ ಬಿಡಿ. ನೆಮ್ಮದಿಯಾಗಿರಿ. "  ಎಂದು ಹುಸಿನಗೆ ಬೀರಿ ಎಲ್ಲಾ ವಿಧ್ಯಾರ್ಥಿ ಮಿತ್ರರನ್ನು ಆತ್ಮೀಯತೆಯಿಂದ ಬೀಳ್ಕೊಟ್ಟರು