June 30, 2012

CONSCIOUS MEDITATION



CONSCIOUS MEDITATION  


You are sitting, and when you sit for meditation many thoughts will come — uninvited guests. They never come ordinarily. When you meditate, only then do they become interested in you. They will come, they will crowd, they will encircle you. Do not fight with them. Just say, “I have decided not to be disturbed by you,” and remain still. A thought comes to you; just say to the thought, “Go away.” Do not fight! By fighting you acknowledge; by fighting you accept; by fighting you will prove weaker. Just say, “Go away!” and remain still. You will be surprised. Just by saying to a thought, “Go away!” it goes away.
But say it with a will. Your mind must not be divided. It must not be something like a feminine no. It must not be like that, because with a feminine no, the more forcefully it is said the more forcefully it means yes. It must not be a feminine no. If you say, “Go away,” then do not mean inside, “Come nearer.” Then let it be “Go away!” Mean it, and the thought will disappear. If you are angry and you have decided not to be angry, do not suppress it. Just say to the anger, “I am not going to be angry,” and the anger will disappear.
There is a mechanism. Your will is needed because anger needs energy. If you say no with full energy, there is no energy left for the anger. A thought moves because deep down a hidden yes is there. That is why a thought moves in your mind. If you say no, that yes is cut from the very root. The thought becomes uprooted. It cannot be in you. But then with the no or yes you must mean what you say. Then the no must mean no and the yes must mean yes. But we go on saying yes, meaning no; telling no, meaning yes. Then the whole life becomes confused. And your mind, your body, they do not know what you mean, what you are saying.
This conscious effort to decide, to act, to be, is now going to be the evolution for man. A Buddha is different from you because of this effort and nothing else. Potentially there is no difference. Only this conscious effort makes the difference. Between man and man, the real difference is only of conscious effort. All else is just superficial. Only your clothes are different, so to speak. But when you have something conscious in you, a growth, an inward growth which is not natural, but which goes beyond, then you have a distinct individuality.

Source – Osho Book “The Ultimate Alchemy, Vol2″

June 25, 2012

ಅಹಿಂಸಾ ...........................ಒಂದಷ್ಟು ಚಿಂತನೆ.


ಅಹಿಂಸಾ ...........................ಒಂದಷ್ಟು ಚಿಂತನೆ.


" ಅಹಿಂಸಾ, ಸತ್ಯ, ಆಸ್ತೆಯ, ಶೌಚ, ಇಂದ್ರೀಯನಿಗ್ರಹ " ಇವು ಪಂಚ ಮುಖ್ಯ ತತ್ವಗಳು ಎಂದು ಧರ್ಮ ಶಾಸ್ತ್ರಗಳು ಹೇಳುತ್ತವೆ. ಯಾರನ್ನು ಹಿಂಸೆಗೆ ಒಳಪಡಿಸದಿರುವುದು ;   ಸತ್ಯವನ್ನೇ ನುಡಿಯುವುದು ;  ಪರರ   ವಸ್ತುಗಳನ್ನು   ಕದಿಯದಿರುವುದು ;   ದೇಹ ,ಮನಸ್ಸು, ಮತ್ತು ನಾವಾಡುವ ಮಾತಿನಲ್ಲಿ ಪವಿತ್ರತೆಯನ್ನು ಸಾಧಿಸುವುದು ; ಮತ್ತು ಪಂಚೆಂದ್ರಿಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು.  ಇವೆ ಆ ಪಂಚ ಮಹಾ ತತ್ವಗಳು.  ಮಹಾಭಾರತದಲ್ಲಿ  ಇದರಲ್ಲಿ ಒಂದಾದ ಅಹಿಂಸೆಯ ಬಗ್ಗೆ ಹೇಳಿದೆ " ಅಹಿಂಸಾ ಪರಮೊಧರ್ಮಃ."  ಅಹಿಂಸೆ ಪರಮ ಪವಿತ್ರ ಧರ್ಮವಾಗಿದೆ. ಈ ತತ್ವವನ್ನು ಪ್ರಪಂಚದ ಎಲ್ಲ ಧರ್ಮಗಳು ಒಪ್ಪಿಕೊಂಡಿವೆ. ಬೌದ್ಧ ಮತ್ತು ಕ್ರೈಸ್ತ ಧರ್ಮಗಳು ತಮ್ಮ ಗ್ರಂಥಗಳಲ್ಲಿ ಈ ವಿಚಾರವನ್ನು ವಿಶೇಷವಾಗಿ ಪ್ರತಿಪಾದಿಸಿದೆ.

ಹಿಂಸೆ ಎಂದರೆ ಕೇವಲ ಒಂದು ಜೀವಕ್ಕೆ ಹಾನಿ ಮಾಡುವುದು ಮಾತ್ರವಾಗುವುದಿಲ್ಲ, ಯಾರೊಬ್ಬರ ಮನಸ್ಸಿಗೆ ನೋವುಂಟು ಮಾಡುವುದು, ಮತ್ತೊಬ್ಬರಿಗೆ ನಮ್ಮ ನಡವಳಿಕೆಯಿಂದ ಆಗಬಹುದಾದ ಮಾನಸಿಕ ಕಿರಿಕಿರಿಯು ಸೇರುತ್ತದೆ.  ಆದ್ದರಿಂದ, ಅಹಿಂಸೆ ಎಂದರೆ ಯಾರೊಬ್ಬರಿಗೂ ಯಾವ ರೀತಿಯಲ್ಲೂ ಹಿಂಸೆಯಾಗದಂತೆ ಬಾಳುವುದೇ ಆಗುತ್ತದೆ.  ಪ್ರಪಂಚದ ಎಲ್ಲಾ  ಧರ್ಮಗಳು ಅಹಿಂಸೆಯ ತತ್ವವನ್ನು  ಪಾಲಿಸಬೇಕೆಂದು ಮತ್ತು ಹಿಂಸಾ ಮಾರ್ಗವನ್ನು ತ್ಯಜಿಸಬೇಕೆಂದು ಹೇಳುತ್ತವೆ.  ಆದರೆ, ಯಾವುದೇ ರೀತಿಯಲ್ಲಿ ಹಿಂಸೆಗೆ ಆಸ್ಪದ ಕೊಡದ ಹಾಗೆ ಜೀವನವನ್ನು ನಡೆಸಲು ಸಾಧ್ಯವೇ? 

ಒಂದು ಉದಾಹರಣೆಯನ್ನು ನೋಡೋಣ.  ಒಬ್ಬ ಕೊಲೆಪಾತಕ ನಮ್ಮ ಮನೆಗೆ ನುಗ್ಗಿದ್ದ ಎಂದೇ ಅಂದುಕೊಳ್ಳೋಣ. ಅವನ ಕೈಯಲ್ಲಿ ಮಾರಕಾಸ್ತ್ರವಿದೆ.  ಅವನು ನಮ್ಮ ಮಗನನ್ನೂ , ಮಗಳನ್ನೂ ಹೊಡೆಯಲು ಅಥವಾ ಅತ್ಯಾಚಾರ ಮಾಡಲು ಮುಂದಾಗಬಹುದು.  ಹೆಂಡತಿ ಮಕ್ಕಳ  ಪ್ರಾಣ ತೆಗೆಯಲು ಮುನ್ನುಗ್ಗಬಹುದು.  ಕೊಲೆಯ ಬೆದರಿಕೆ ಒಡ್ಡಬಹುದು. ಮನೆಯಲ್ಲಿರುವ ಹಣ , ಒಡವೆ ದೋಚಲು ಪ್ರಯತ್ನಿಸಬಹುದು.  ಒಬ್ಬೊಬ್ಬರಾಗಿ ಹಿಂಸೆಗೆ ಒಳಗಾಗಬಹುದು.  ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ನಮ್ಮ ಕುಟುಂಬದ ಸದಸ್ಯರನ್ನು ರಕ್ಷಿಸಲು ಮುಂದಾಗಬೇಡವೇ ? ನಮ್ಮನ್ನು ರಕ್ಷಿಸಲು ಯಾರು ಇಲ್ಲವೆಂದು ಹೇಳುತ್ತಾ ಕೂರಬೇಕೆ?  ಅಹಿಂಸಾ ಪರಮೋ ಧರ್ಮಃ  ಎಂದು ಕಣ್ಣು ಮುಚ್ಚಿ ಕೂರಬೇಕೆ?  ಅಥವಾ ಅಹಿಂಸಾ ತತ್ವವನ್ನು ಮನೆಯವರಿಗೆಲ್ಲ ಹೇಳಿ ಸಮಾಧಾನ ಪಡಿಸಬೇಕೇ?  ಅಥವಾ ನಮ್ಮ ಕುಟುಂಬದ ಎಲ್ಲಾ ಸದಸ್ಯರೂ  ಒಗ್ಗಟ್ಟಾಗಿ ನಮ್ಮ ಕೈಲಾದ ಮಟ್ಟಿಗೆ ಆ ಪಾತಕಿಯನ್ನ ಎದುರಿಸಬೇಕೆ? ಅವನ ತಪ್ಪಿಗೆ ಶಿಕ್ಷೆಯನ್ನು ಕೊಡಿಸುವಲ್ಲಿ ಶ್ರಮಿಸಬೇಕೆ?  ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಆ ಪಾತಕಿಯನ್ನು ಸಾಯಿಸಬೇಕಾದ ಪರಿಸ್ಥಿತಿ ಬಂದಾಗ ಏನು ಮಾಡಬೇಕು?  ಈ ರೀತಿಯ ಹಲವಾರು ಪ್ರಶ್ನೆಗಳು ಸಹಜವಾಗಿ ನಮ್ಮೊಳಗೇ ಹುಟ್ಟಬಹುದು.

ಅಹಿಂಸೆಯನ್ನು ಭೋದಿಸುವ ನಮ್ಮ ಧರ್ಮ ಶಾಸ್ತ್ರಗಳು ಇಂಥ   ವಿಷಮ ಪರಿಸ್ಥಿತಿಯಲ್ಲಿ    ಏನು  ಮಾಡಬೇಕೆಂದು   ತಿಳಿಸಿವೆ.  " ಯಾವುದೇ ವಿಚಾರ ಮಾಡದೆ ಇಂತಹ ಪಾತಕಿಗಳನ್ನು ಶಿಕ್ಷಿಸಲು ಮುಂದಾಗಬೇಕೆಂದು , ದಂಡಿಸಬೇಕೆಂದು ಹೇಳುತ್ತದೆ."  ಮುಂದುವರೆದು  " ಇಂತಹ ದುಷ್ಕೃತ್ಯ ಎಸಗುವ ವ್ಯಕ್ತಿ ಗುರುವಾಗಿರಬಹುದು , ಹಿರಿಯನಾಗಿರಬಹುದು, ಯುವಕನಾಗಿರಬಹುದು, ಅಥವಾ ವಿದ್ಯಾಸಂಪನ್ನನೆ  ಆಗಿರಬಹುದು.  ಆದರೆ ಇಂತಹವರಿಗೆ ಯಾವುದೇ ಕರುಣೆಯನ್ನು ತೋರಿಸಬಾರದು " ಎಂದೇ ಹೇಳುತ್ತದೆ. " ಇಂತಹ ಅನಿವಾರ್ಯ ಸಂಧರ್ಭದಲ್ಲಿ ಪಾತಕಿಯನ್ನು ಕೊಂದರು , ಮಾಡಿದ ಪಾಪ ಕೃತ್ಯಕ್ಕೆ  ಯಾವ ಪಾಪದ ಲೇಶವು ಅಂಟುವುದಿಲ್ಲ "  ಎನ್ನುತ್ತದೆ ಧರ್ಮ ಶಾಸ್ತ್ರಗಳು.    ಇಂದಿನ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲೂ  " ವಿಶೇಷ ಸಂಧರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಅತ್ಯಾಚಾರಿ, ಕೊಲೆಗಡುಕರನ್ನು ಕೊಲ್ಲುವುದು  ಅಪರಾಧವಲ್ಲ " ಎನ್ನುವುದನ್ನು  ಹಲವಾರು ವಿಚಾರಣೆಯ ಸಂಧರ್ಭದಲ್ಲಿ ಸಮರ್ಥಿಸಿದೆ.

ಇಂತಹುದೇ ಸಂಧಿಗ್ದದಲ್ಲಿ ಅರ್ಜುನನು ಧರ್ಮರಾಯನನ್ನು ಅಹಿಂಸೆಯ ಬಗ್ಗೆ ಒಂದು ಪ್ರಶ್ನೆಯನ್ನು ಕೇಳುತ್ತಾನೆ.  " ಈ ಪ್ರಪಂಚದಲ್ಲಿ ನಮ್ಮ ಕಣ್ಣಿಗೆ ಕಾಣದ ಕೋಟ್ಯಾಂತರ ಜೀವಿಗಳು, ನಾವು ಊಹೆ ಕೂಡ ಮಾಡಿಕೊಳ್ಳಲಾಗದಂತೆ  ನಮ್ಮ ಕಣ್ಣ ರೆಪ್ಪೆಗೆ ಬಡಿತಕ್ಕೆ ಸಿಕ್ಕಿ ಸಾಯುವಾಗ  ಅಹಿಂಸಾ ತತ್ವ ಎಷ್ಟು ಸಮಂಜಸ? "   ಇಂತಹ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ಭಾಗವತ ಹೀಗೆ ಹೇಳುತ್ತದೆ " ಜೀವೋ, ಜೀವಸ್ಯ , ಜೀವನಂ."  ಉಪನಿಷತ್ತು ಹೇಳುತ್ತದೆ "ಜೀವನದಲ್ಲಿ  ಪ್ರತಿಯೊಂದು ಅವಶ್ಯವೇ."

ಈ ಜಗತ್ತಿನಲ್ಲಿ  ಅಹಿಂಸೆಯನ್ನು ಎಲ್ಲರು ಭೋಧಿಸುವವರೆ ಆದರೆ ದುಷ್ಟರನ್ನು ಶಿಕ್ಷಿಸುವವರು ಯಾರು?  ದುಷ್ಟರಿಂದ ಸಾಮಾನ್ಯರಿಗೆ ರಕ್ಷಣೆ  ಹೇಗೆ?  ದುಷ್ಕೃತ್ಯ ಎಸಗುವವರನ್ನು ನಿಗ್ರಹಿಸುವ ಜೊತೆಗೆ ಶಿಷ್ಟರನ್ನು ರಕ್ಷಿಸುವ ಕಾರ್ಯ ಕೂಡಾ ಅಹಿಂಸಾ ತತ್ವದಷ್ಟೇ ಪ್ರಮುಖವಲ್ಲವೇ?  ಈ ಬದುಕಿನಲ್ಲಿ ಕೇವಲ ಒಳ್ಳೆಯತನವಷ್ಟೇ ಮುಖ್ಯವಲ್ಲ , ಜೊತೆಗೆ ಒಳ್ಳೆಯದನ್ನು ಉಳಿಸಿಕೊಳ್ಳಲು  ಹೋರಾಟವನ್ನು ನಡೆಸಬೇಕಾಗುತ್ತದೆ. ಇಂತಹ ಹೋರಾಟದ ಸಂಧರ್ಭದಲ್ಲಿ ಪಲಾಯನವಾದ ಎಂದಿಗೂ ಕೂಡದು.  ಸಮರ್ಥವಾಗಿ ಎದುರಿಸುವ ಮನೋಸ್ತೈರ್ಯ ಹೊಂದಬೇಕಾಗುತ್ತದೆ.  ಕೇವಲ ನೀತಿ ಪಾಠದಿಂದ ಜೀವನ ಸಾಗುವುದಿಲ್ಲ.  ನೀತಿ, ಅನೀತಿಯ ವ್ಯತ್ಸ್ಯಾವನ್ನು ತಿಳಿದು ಯಾವ ಸಂಧರ್ಭಕ್ಕೆ ಯಾವುದು ಅವಶ್ಯಕ ಎಂಬುದರ ನಿರ್ಧಾರ ಮಾಡಬೇಕಾದ ವಿವೇಚನೆ ಮತ್ತು ವಿವೇಕ ಅವಶ್ಯಕ.        ಇದನ್ನೇ ಶ್ರೀ ಕೃಷ್ಣ ಪರಮಾತ್ಮ     ಭಗವಧ್ಗೀತೆಯಲ್ಲಿ   ಅರ್ಜುನನಿಗೆ " ಕರ್ಮದಲ್ಲಿ ಆಕರ್ಮವನ್ನು, ಆಕರ್ಮದಲ್ಲಿ ಕರ್ಮವನ್ನು ಯಾವನು ನೋಡುತ್ತಾನೋ ಅವನೇ ಬುದ್ಧಿವಂತನು, ಅವನೇ ಯುಕ್ತನು, ಮತ್ತು ಸಕಲ ಕರ್ಮಗಳನ್ನು ಮಾಡಿದವನಾಗುತ್ತಾನೆ " ಎಂದು ಬೋಧಿಸಿದ್ದು .

ಹೆಚ್ ಏನ್ ಪ್ರಕಾಶ್ 
25 06 2012

( ಈ ನನ್ನ ಚಿಂತನವು ಹಾಸನ ಆಕಾಶವಾಣಿ ಕೇಂದ್ರದಿಂದ ದಿನಾಂಕ 27 11 2009 ರಲ್ಲಿ ಬಿತ್ತರಗೊಂಡಿತ್ತು )  




June 20, 2012

ಅಧ್ಯಾತ್ಮ ಜೀವನ .............................ಒಂದಷ್ಟು ಚಿಂತನೆ

ಅಧ್ಯಾತ್ಮ ಜೀವನ .............................ಒಂದಷ್ಟು ಚಿಂತನೆ 


ನಮ್ಮ ದಿನನಿತ್ಯದ ಬದುಕಿನಲ್ಲಿ ಹಲವಾರು ದೋಷಗಳನ್ನು ನಾವು ಇತರರಲ್ಲಿ ಗುರುತಿಸುತ್ತೇವೆ.  ನಮ್ಮಲ್ಲೂ ಹಲವಾರು ದೋಷಗಳು ಇರುತ್ತವೆ.  ಆದರೆ,  ನಮ್ಮ ದೋಷಗಳು ನಮ್ಮ ಅರಿವಿಗೆ ಬಂದರು ಅದನ್ನು ಇತರರ ಜೊತೆ ಹೋಲಿಕೆ ಮಾಡಿಕೊಳ್ಳುತ್ತ ನಮ್ಮದೇನು ಪರವಾಗಿಲ್ಲ ಎಂದು ಸುಮ್ಮನಾಗಿ ಬಿಡುತ್ತೇವೆ.  ಸ್ನೇಹಿತರು, ಆಪ್ತರು ಗುರುತಿಸಿ ದೋಷ ಎತ್ತಿ ಹಿಡಿದಾಗ  ನಾವು ಸುಮ್ಮನೆ ಒಪ್ಪಿಕೊಳ್ಳುವುದಿಲ್ಲ,  ನಮ್ಮ ದೋಷಗಳನ್ನು,  ದೋಷವೇ ಅಲ್ಲವೆಂದು ಹಲವಾರು ರೀತಿಯಲ್ಲಿ  ಸಮಜಾಯಿಷಿ ಕೊಟ್ಟು ಸಾಬೀತು ಮಾಡಲು ಹವಣಿಸುತ್ತೇವೆ.  ತಾವು ನಂಬಿಕೊಂಡಿರುವ ಸತ್ಯ ಅದೆಂದು ವಾದಿಸುತ್ತೇವೆ,  ಕಾರಣಗಳನ್ನು ನೀಡಿ ಸರಿ ಇರಬಹುದೇನೋ ಎನ್ನುವಂತಹ ಭ್ರಮೆ ಹುಟ್ಟಿಸಲು ಪ್ರಯತ್ನಿಸುತ್ತೇವೆ. ಆದರೆ, ಈ ಯಾವ ಕಸರತ್ತುಗಳು ನಮ್ಮ ದೋಷವನ್ನು ಸರಿಪಡಿಸಲಾರವು.  ನಮ್ಮ ಅಹಂಕಾರದ ವಸ್ತ್ರ ಕಳಚಿಬಿದ್ದಾಗ, ಸತ್ಯದ ಎದುರು ಬೆತ್ತಲಾದಾಗ ಹೊಸ ಬೆಳಕು ದಾರಿ ತೋರುತ್ತವೆ. ಅಜ್ಞಾನದ ಅಂಧತ್ವ ಕಳೆದ ನಂತರವಷ್ಟೇ ಜ್ಞಾನದ ಕಣ್ಣು ತೆರೆಯುವುದು.

ಒಬ್ಬ ಪಂಡಿತ ಮಹಾಶಯ ಪ್ರತಿನಿತ್ಯ ಭಗವದ್ಗೀತೆಯ ಉಪನ್ಯಾಸ ಮಾಡುತ್ತಿದ್ದ .  ಈತನ  ಉಪನ್ಯಾಸ ಕೇಳಲು ಹತ್ತಿರದ ಹಳ್ಳಿಗಳಿಂದ ಜನ ಬರುತ್ತಿದ್ದರು.  ಈತನ ಉಪನ್ಯಾಸ ಕೇಳಿ ಭಕ್ತಿ ಭಾವದಿಂದ ಪಂಡಿತನ ಕಾಲಿಗೆರೆಗುತ್ತಿದ್ದರು.  ಉಪನ್ಯಾಸದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳುತ್ತಿದ್ದರು.  ಸರಸ್ವತಿಯೇ ನಿಮ್ಮ ಬಾಯಿಂದ ನುಡಿಸುತ್ತಿದ್ದಾಳೆ ಎಂದೆಲ್ಲ ಹೊಗಳುತ್ತಿದ್ದರು. ಇಂತಹ ಉಪನ್ಯಾಸ ಕೇಳಿದ ನಾವೇ ಧನ್ಯರು ಎಂದೆಲ್ಲ ಸಭಿಕರು ಮಾತನಾಡಿಕೊಳ್ಳುತಿದ್ದರು.  ದಿನಕಳೆದಂತೆ ಈ ಪಂಡಿತರ ಉಪನ್ಯಾಸದ ಜೊತೆಗೆ ಅಹಂಕಾರದ ಸ್ವಪ್ರಶಂಸೆ ನಿಧಾನವಾಗಿ ಸೇರ್ಪಡೆಯಾಯಿತು.   ಜನಗಳು ಮುಂಚಿನರೀತಿಯಲ್ಲಿ  ಬೆರೆಯಲು ಸ್ವಲ್ಪ ಹಿಂಜರಿಯಲು ಪ್ರಾರಂಭಿಸಿದರು.  ಒಂದೆರಡು ತಿಂಗಳುಗಳ ನಂತರದಲ್ಲಿ ಉಪನ್ಯಾಸಕ್ಕೆ ಬರುವವರ ಸಂಖ್ಯೆ ಇಳಿಮುಖವಾಯಿತು.  ಹೊಸ ವಿಚಾರಗಳೇನು ಇಲ್ಲ ಅದೇ ಹಳಸಲು ಮಾತು ಎಂದೆಲ್ಲ ಹೇಳಿಕೊಳ್ಳುವುದು ಪಂಡಿತ ಮಹಾಶಯರ ಕಿವಿಗೊ ಬಿತ್ತು.  ಈಗ ಪಂಡಿತರಿಗೆ ಚಿಂತೆ ಕಾಡಲು ಪ್ರಾರಂಭವಾಯಿತು.

ಇಂತಹ ಸಂದಿಗ್ದ ಸಮಯದಲ್ಲಿ ಪಂಡಿತನ ಆಪ್ತಸ್ನೇಹಿತನೊಬ್ಬ " ನಿನ್ನ ಉಪನ್ಯಾಸದಲ್ಲಿ ಹೊಸ ಹೊಸ ವಿಚಾರಗಳೇ ಇಲ್ಲವಾಗಿದೆ, ಅದೇ ಹಳೆಯ ವಿಚಾರಗಳು ಒಂದೇ ರೀತಿಯಲ್ಲಿ ಹೇಳಲಾಗುತ್ತಿದೆ. ನೀನು ನಿನ್ನ ಉಪನ್ಯಾಸದಲ್ಲಿ ಹೊಸ ವಿಚಾರಗಳ ಜೊತೆಗೆ  ಉಪನ್ಯಾಸದ  ಶೈಲಿಯನ್ನು ಬದಲಿಸಿಕೊ " ಎಂದು ಸಲಹೆಯನ್ನು ನೀಡಿದ.   ಈ ಸಲಹೆ ಕೇಳಿದ ಪಂಡಿತ ಹೌಹಾರಿದ. " ಇನ್ಯಾವ ರೀತಿ ಹೇಳಬೇಕು? ನನ್ನ ಉಪನ್ಯಾಸದಲ್ಲಿ ಅದೆಷ್ಟು ಉದಾಹರಣೆ ನೀಡಿದ್ದೇನೆ. ವಿಷಯದಲ್ಲಿ ನನ್ನ ಅನುಭವ ಕೂಡ ಹಂಚಿಕೊಂಡಿದ್ದೇನೆ.  ಇನ್ನೆನುಬೇಕು ಇವರಿಗೆ ? " ಎಂದು ತನ್ನ ಸಿಟ್ಟನ್ನು ಹೊರಹಾಕಿದ. ಇದನ್ನು ಗಮನಿಸಿದ ಸ್ನೇಹಿತ " ಅದೆಲ್ಲ ಸರಿ, ಆದರೂ ಏನೋ ಒಂದು ಕೊರತೆ ಇರಲೇಬೇಕಲ್ಲವೇ?  ಸ್ವಲ್ಪ ಯೋಚಿಸು.  ಒಂದು ಕೆಲಸ ಮಾಡೋಣ.  ನನ್ನ ಪರಿಚಯದ ಒಬ್ಬ ಮೇಧಾವಿ ಹತ್ತಿರದ ವನದಲ್ಲಿ ಇದ್ದಾರೆ.  ಅವರು ಗೀತಾರಹಸ್ಯ ತಿಳಿದಿರುವ ಮಹಾನ್ ಪಂಡಿತರು ಆಗಿದ್ದಾರೆ.   ಅವರಲ್ಲಿ ಏಕೆ ಹೋಗಿ ವಿಚಾರವಿನಿಮಯ ಮಾಡಬಾರದು? ನಿನ್ನ ವಿಚಾರಗಳ ಜೊತೆಗೆ ಅವರ ವಿಚಾರಗಳು ಬೆರೆತರೆ ನಿನ್ನ ಉಪನ್ಯಾಸದಲ್ಲಿ ಒಂದು ಹೊಸತನ ಬರಬಹುದಲ್ಲವೇ? " ಎಂದು ಮರುಸಲಹೆ ನೀಡಿದ.  ಈ ಮಾತು ಪ್ರಾರಂಭದಲ್ಲಿ ಇಷ್ಟವಾಗಲಿಲ್ಲ .  ಆದರೂ,  ಹೊಸ ವಿಚಾರ ನನಗಿಂತ ಆತನೇನು ಹೇಳಬಲ್ಲ? ಎಂಬುದನ್ನು ತಿಳಿದೆಬಿಡೋಣ ಎಂದು ಪರೀಕ್ಷಾರ್ಥವಾಗಿ ಸ್ನೇಹಿತನ ಜೊತೆ ಹೋಗಲು ಒಪ್ಪಿಕೊಂಡ.

ಇಬ್ಬರು ನಿಗಧಿಯಾದ ದಿನ ಆ ಮೇಧಾವಿಗಳಲ್ಲಿ ಹೋಗಿ ನಮಸ್ಕರಿಸಿ ಕುಶಲ ವಿಚಾರಿಸಿದರು.  ಬಂದ ವಿಷಯವನ್ನು ಹೇಳಿದರು.
ಆಗ ಪಂಡಿತ ಮಹಾಶಯರು " ಸ್ವಾಮೀ,  ನಾನು ತಮ್ಮ ಬಳಿ ಗೀತಾರಹಸ್ಯವನ್ನು ತಿಳಿಯಲು ಬಂದಿರುವೆ.  ಆದರೆ, ನನ್ನ ಬಳಿ ಬಹಳ ಕಡಿಮೆ ಸಮಯವಿದೆ.  ನನ್ನ ಕೆಲಸಗಳು ಬೇಕಾದಷ್ಟಿವೆ.   ಆದ ಕಾರಣ ತಾವು ದಯಮಾಡಿ ನನ್ನನ್ನು  ಬೇಗ ಕಳುಹಿಸುವ ಕೃಪೆ ಮಾಡಬೇಕು " ಎಂದು  ವಿನಂತಿಸಿದ.  ಮೇಧಾವಿಗಳು ಮುಗುಳುನಕ್ಕು " ತಮ್ಮಂತಹ ಪಂಡಿತರು ನಮ್ಮ ಕುಟೀರಕ್ಕೆ ದಯಮಾಡಿಸಿದ್ದೀರ,  ನಿಮಗೆ ಯಾವ  ಆತಿಥ್ಯವನ್ನು ನೀಡದೆ ಹೇಗೆ ಕಳುಹಿಸಲು ಸಾಧ್ಯ?  ಸ್ವಲ್ಪ ಟೀ ಕುಡಿದು ಹೋಗುವಿರಂತೆ."  ಎಂದು ಸ್ವಲ್ಪ ಸಮಯದ ನಂತರ ಟೀ ಡಿಕಾಕ್ಷನ್ ತುಂಬಿದ ಲೋಟವನ್ನು ಪಂಡಿತರ ಮುಂದೆ ಇರಿಸಿದರು. ಮುಖ ಕಿವುಚಿಕೊಂಡ ಪಂಡಿತ ಮಹಾಶಯರು  " ನನಗೆ ಕಪ್ಪು ಟೀ ಕುಡಿದು ಅಭ್ಯಾಸವಿಲ್ಲ, ಸ್ವಲ್ಪ ಹಾಲು ಕೊಟ್ಟರೆ ಬೆರೆಸಿ ಕುಡಿಯುತ್ತೇನೆ." ಎಂದರು.  ಆಗ ಮೇಧಾವಿಗಳು  ನಸುನಕ್ಕು  " ಹಾಲನ್ನು ಎಲ್ಲಿ ಹಾಕುತ್ತಿರಪ್ಪಾ?  ಈಗಾಗಲೇ ಲೋಟ ಭರ್ತಿಯಾಗಿದೆಯಲ್ಲ? " ಎಂದು ಛೇಡಿಸಿದರು.  " ಅದಕ್ಕೇನಂತೆ ಸ್ವಲ್ಪ ಟೀ ಖಾಲಿ ಮಾಡಿದರಾಯಿತು." ಎಂದು ಸಮಜಾಯಿಷಿ ಕೊಟ್ಟರು ಪಂಡಿತರು.   ಆಗ ಮೇಧಾವಿಗಳು ದೃಢತೆಯಿಂದ " ಈಗಿನ ನಿಮ್ಮ ಸ್ಥಿತಿಯೂ ಇದೆ ಆಗಿದೆ.ನಿಮ್ಮೊಳಗಿರುವ ವಿಚಾರವನ್ನು ಸ್ವಲ್ಪ ಖಾಲಿ ಮಾಡಿ ಹೊಸ ವಿಚಾರಗಳಿಗೆ ಜಾಗ ಕೊಡಿ,  ಆಗ ಹೊಸತು ತನ್ನಷ್ಟ್ತಕ್ಕೆ ತಾನೇ ಒಳಗೆ ಹೋಗುತ್ತದೆ.' ಎಂದು ಮುಗುಳುನಕ್ಕರು.

ಹೌದು, ಇದೆ ನಮ್ಮ ಸ್ಥಿತಿ ಕೂಡಾ!  ಬೇಡದ ವಿಚಾರಗಳು, ಸಿಟ್ಟು ಸೆಡವು, ಹೊಟ್ಟೆ ಕಿಚ್ಚು, ಬೇಡದ ನೆನಪುಗಳು, ದ್ವೇಷ ಇತ್ಯಾದಿಗಳು ನಮ್ಮೊಳಗೇ ಭರ್ತಿಯಾಗಿ ಕೂತುಬಿಟ್ಟಿದೆ.  ಅಗತ್ಯ ಅನಗತ್ಯ ವಿಚಾರಗಳು ನಮ್ಮ ತಲೆಯಲ್ಲಿ ತುಂಬಿಹೋಗಿವೆ. ಈ ಕಾರಣದಿಂದ ಹೊಸ ಚಿಂತನೆಗಳು ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ.  ನಮ್ಮ ತಂದೆ , ತಾಯಿ, ಗುರು ಹಿರಿಯರು ಕಲಿಸಿದ  ವಿದ್ಯೆ, ವಿಚಾರಗಳು, ಸಂಸ್ಕೃತಿಯ ಚಿಂತನೆಗಳು ಆಧುನಿಕತೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.  ಹೀಗಾಗಿ ನಮ್ಮ ಅಹಂಕಾರ ತಲೆಯೆತ್ತಿ ನಿಂತು ಯಾವುದೇ ಇತರ ವಿಚಾರಗಳನ್ನು ಒಳಗೆ ಬರಲು ಬಿಡುತ್ತಲೇ ಇಲ್ಲ.  ಅಹಂಕಾರವನ್ನು ಕಡಿಮೆ ಮಾಡಿಕೊಂಡರೆ ವಿನಯವಂತಿಕೆ ನಮ್ಮಲ್ಲಿ ಉದಯಿಸಿ ಹೃದಯವಂತಿಕೆಗೆ ಜಾಗ ಮಾಡಿಕೊಡುತ್ತದೆ. ಬಿರುಗಾಳಿ ಬಂದಾಗ ನೆಲಹುಲ್ಲು  ತಲೆಬಾಗಿ ನಮಿಸುತ್ತದೆ. ಗಾಳಿನಿಂತಮೇಲೆ  ತಲೆ ಎತ್ತಿ ನಿಲ್ಲುತ್ತದೆ.  ಹೀಗೆಯೇ ನಮ್ಮ ಬದುಕು ಕೂಡಾ ಆಗಬೇಕು. ಒಳ್ಳೆಯ ವಿಚಾರಕ್ಕೆ  ತಲೆ ಬಾಗುವುದನ್ನು ಕಲಿತಾಗ ತಲೆ ಎತ್ತಿ ಬದುಕಲು ಸಾಧ್ಯವಾಗುತ್ತದೆ.  ಈ ಮಾರ್ಗ ಸಾಧನೆಯಲ್ಲಿ ನಮ್ಮ ತಪ್ಪನ್ನು ತಿದ್ದಿಕೊಂಡು, ದೋಷವನ್ನು ಒಪ್ಪಿಕೊಂಡು, ಸರಿ ಮಾರ್ಗದಲ್ಲಿ ಮುನ್ನಡೆಯುವ ಮನಸ್ಸು ಮಾಡಿದರೆ ಸಾಕು, ಅದುವೆ ಅದ್ಯಾತ್ಮ ಜೀವನ.  

ಹೆಚ್ ಏನ್ ಪ್ರಕಾಶ್ 

( ಈ ಚಿಂತನವು 23 12 2009 ರಂದು ಆಕಾಶವಾಣಿ ಹಾಸನ ಕೇಂದ್ರದಿಂದ ಬಿತ್ತರಗೊಂಡಿತ್ತು )

June 16, 2012

ಮರೆಯಲಾಗದ ಮಹಾ ಶಿವರಾತ್ರಿ

ಮರೆಯಲಾಗದ ಮಹಾ ಶಿವರಾತ್ರಿ


ಅಂದು ಮಹಾಶಿವರಾತ್ರಿ. ಮನೆಯಲ್ಲಿ ಒಂದು ರೀತಿಯ ಸಂಭ್ರಮ. ನಾನು ಹೇಳ ಹೊರಟಿರುವುದು ಈಗ್ಗೆ 47 ವರ್ಷಗಳ ಹಿಂದಿನ ಮಾತು.  ಆಗೆಲ್ಲ ಪ್ರತಿ ಹಬ್ಬವು ಒಂದು ರೀತಿಯಲ್ಲಿ ಸಡಗರವೆ!  ಅದರಲ್ಲೂ  ಶಿವರಾತ್ರಿ ಎಂದರೆ ಈಶ್ವರನಿಗೆ ನಾಲ್ಕುಜಾವದ ಪೂಜೆ ನೆರವೇರಿಸುತ್ತ ಅಲ್ಪ ಆಹಾರದೊಂದಿಗೆ ರಾತ್ರಿಯಿಡಿ   ಜಾಗರಣೆ ಮಾಡುತ್ತಾ ಶಿವನ ಆರಾಧನೆಯಲ್ಲಿ ತಮ್ಮನ್ನು ತಾವು ಸಂಭ್ರಮದಿಂದ ತೊಡಗಿಸಿಕೊಳ್ಳುವ ವಿಶೇಷ ದಿನ. ಇಂತಹ ವಿಶೇಷ ದಿನದಂದು ನಡೆದ ಒಂದು ಸತ್ಯ ಘಟನೆ.

ಮನೆ ಯಜಮಾನರು ಅಂದು ಬೆಳಗಿನಿಂದಲೇ ಶಿವನ ಪೂಜೆಯ ಕೈಂಕರ್ಯಕ್ಕೆ  ತೊಡಗಿಕೊಂಡವರು.  ನಿತ್ಯ ಪೂಜೆಯ ಜೊತೆಗೆ ರುದ್ರನಿಗೆ ಅಭಿಷೇಕ ಮುಗಿಸಿ,  ಮಕ್ಕಳನ್ನು ಕೂರಿಸಿಕೊಂಡು ಸತ್ಯ ಹರಿಶ್ಚಂದ್ರನ ಕಥೆಯನ್ನು ಹೇಳಿದರು.  ಕಾರಣ, ಅಂದು ರಾತ್ರಿ ಮನೆಯ ಎದುರಿನ ಬಯಲಿನಲ್ಲಿ ರಾಜ ಹರಿಶ್ಚಂದ್ರನ ನಾಟಕ ನಡೆಯುವುದ್ದಿತ್ತು.   ಹೀಗಾಗಿ ಮಕ್ಕಳು ಈ ಕಥೆ ಗಾಗಿ ಅಪ್ಪನಲ್ಲಿ ಪೀಡಿಸುತ್ತಿದ್ದರು.  ಮಕ್ಕಳಿಗೆ ಒಂದು ರೀತಿಯ ಸಂಭ್ರಮ.  ಎದುರಿನ ಬಯಲಿನಲ್ಲಿ ನಾಟಕದ ರಂಗಸಜ್ಜಿಕೆ ಕೆಲಸ ನಡೆಯುತ್ತಿತ್ತು. ಅದನ್ನ  ನೋಡುವುದೇ ಒಂದು ಖುಷಿ.   ನಾಟಕ ಪ್ರಾರಂಭವಾಗುವುದು ರಾತ್ರಿ 10ರ ನಂತರವೇ.  ಮಕ್ಕಳು ಕಾಯುತ್ತಾ ಇರುವಾಗ ಮನೆ ಯಜಮಾನರು ಮಕ್ಕಳಿಗೆ " ಈಗ ಮಲಗಿ ನಿದ್ದೆ ಮಾಡಿ,  ನಾಟಕ ಪ್ರಾರಂಭ ಆದಕೂಡಲೇ ಎಬ್ಬಿಸುತ್ತೇನೆ, ಅಲ್ಲಿಯವರೆಗೆ ನಿದ್ದೆ ಮಾಡಿ.  ಈಗ ಜಾಸ್ತಿ ಹೊತ್ತು ನಿದ್ರೆ ಮಾಡಿದರೆ ಹೆಚ್ಚು ಹೊತ್ತು ನಾಟಕ ನೋಡಬಹುದು "  ಎಂದು ಒಪ್ಪಿಸಿ ಮೂರೂ  ಮಕ್ಕಳನ್ನು ಮಲಗಿಸಿಯೇ ಬಿಟ್ಟರು.

ಮಾರನೆ ಬೆಳಿಗ್ಗೆ ಮಕ್ಕಳು ಎದ್ದವರೇ " ನಾಟಕ ನೋಡಲು ಎಬ್ಬಿಸಲೇ ಇಲ್ಲ " ಎಂದು ಇಬ್ಬರು ಅಳಲು ಪ್ರಾರಂಭ.  ಆದರೆ ಒಂದು ಮಗು ಮಾತ್ರ ಎದ್ದಿರಲೇ ಇಲ್ಲ.  ಬಹಳ ಚೂಟಿಯಾಗಿದ್ದ ಮಗು ಯಾಕೆ ಇನ್ನು ಎದ್ದಿಲ್ಲ ಎಂದು ಮನೆ ಯಜಮಾನರು ಅಂದುಕೊಳ್ಳುತ್ತಿರುವಾಗಲೇ " ರಾತ್ರಿ ಮಗು ನಿದ್ದೆ ಮಾಡಿತ್ತೋ ಇಲ್ಲವೋ"  ಎಂದು ಮನೆಯೊಡತಿ ಸಮಜಾಯಿಷಿ ನೀಡಿದರೂ ಮಗು ಎಬ್ಬಿಸಲು ಮುಂದಾದರು.  " ಏಳಪ್ಪಾ , ಬೆಳಕಾಗಿ ಎಷ್ಟು ಹೊತ್ತಾಯಿತು?  ಏಳು," ಎಂದು  ಹೊದ್ದಿಕೆ ತೆಗೆದರೆ ಶಾಖ ಹೊರಗೆ ತಟ್ಟುವಷ್ಟು ಬಿಸಿ.  ಮಗು ಮೈ ಮುಟ್ಟಿದರೆ ಕಾದ ಕಬ್ಬಿಣ ಮುಟ್ಟಿದ ಅನುಭವ.   ಜ್ವರದ ತಾಪದಲ್ಲಿ ಬೆಂದ ಮಗು ಏಳಲು ಇರಲಿ ನರಳಲೂ  ಸಾಧ್ಯವಾಗದೆ ನಿಸ್ತೆಜವಾಗಿ ಹಾಸಿಗೆಯ ಮೇಲೆ ಬಿದ್ದುಕೊಂಡಿತ್ತು.  ಏನು ಮಾಡಲು ತೋಚದೆ ಮಗುವನ್ನು ಬಾಚಿ ತಬ್ಬಿಕೊಂಡರು.  ಅಷ್ಟರಲ್ಲಿ ಬಂದ ಮಗುವಿನ ತಾಯಿಗೆ ಗಾಬರಿ.  ಅಳಲು ಪ್ರಾರಂಭ  ಮಾಡಿಯೇ ಬಿಟ್ಟರು.  8 ವರ್ಷದ ಗಂಡು ಮಗು ಅಷ್ಟು ಚನ್ನಾಗಿ ಆಟವಾಡಿಕೊಂಡಿದ್ದ ಮಗುವಿಗೆ ಅದೇನು ಶಾಪವೋ ಏನೋ ಈ ರೀತಿಯ ಸ್ಥಿತಿ ತಲುಪಿದೆ ಎಂದು  ಕಣ್ಣಿರು ಇಡುತ್ತ ಕೂತರು.  " ಏನೂ ಆಗಿಲ್ಲ ಜ್ವರದ ತಾಪಕ್ಕೆ ಮಗು ಸುಸ್ತಾಗಿದೆ, ಅಷ್ಟೇ " ಎಂದು ಹೆಗಲಮೇಲೆ ಮಗುವನ್ನು ಹಾಕಿಕೊಂಡು ಆಸ್ಪತ್ರೆಯ ಕಡೆಗೆ ಧಾವಿಸಿದರು.

ಡಾಕ್ಟರ್ ಪರೀಕ್ಷೆಮಾಡಿ  " ಸಧ್ಯಕ್ಕೆ ಔಷದಿ ಕೊಡುತ್ತೇನೆ, ನೀವು ತಕ್ಷಣ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ " ಎಂದು ಸಲಹೆ ಇತ್ತರು.   ತಕ್ಷಣ ಟಾಂಗಾ  ಗಾಡಿಯಲ್ಲಿ ದೊಡ್ಡ ಆಸ್ಪತ್ರೆಗೆ ಹೋದರು.  ಆಸ್ಪತ್ರೆಗೆ ಧಾಖಲು ಮಾಡಿಕೊಂಡ ವೈದ್ಯರು ಎರಡು ಮೂರು ದಿನ ನೀಡಿದ ಔಷದಿಗಳು ಮಗುವಿನ ಜ್ವರವನ್ನು ಕಡಿಮೆಮಾಡಲಿಲ್ಲ.  ಮಗುವಿನ ಸ್ಥಿತಿ ಚಿಂತಾಜನಕವಾಯಿತು.  ಮಗುವಿಗೆ ಮಗ್ಗುಲು ಬದಲಾಯಿಸಲಾಗದೆ  ಸಂಪೂರ್ಣ ನಿತ್ರಾಣವಾಯಿತು.  ಕೈ ಕಾಲು ನಿತ್ರಾಣವಾಯಿತು.  ರಕ್ತ ಪರೀಕ್ಷೆ ಮಾಡಿಸಿ ಈಗ ಬಂದಿರುವ ಹೊಸ ಖಾಯಿಲೆ ಇರಬಹುದೆಂದು ವೈದ್ಯರು ಹಲವು ಹಿರಿಯ ವೈದ್ಯರೊಂದಿಗೆ ಚರ್ಚಿಸಿ ನಂತರ ಮಗುವಿನ ತಂದೆಯನ್ನು ಕರೆದು " ಈ ಮಗುವಿಗೆ ಪೋಲಿಯೋ ಆಗಿದೆ " ಎಂದರು.            ಏನೂ                       ಅರ್ಥವಾಗದೇ " ಹಾಗೆಂದರೇನು?" ಎಂದು ಬೆರಗಾಗಿ ಕೇಳಿದರು.  ವೈದ್ಯರು ಸಮಾಧಾನಚಿತ್ತದಿಂದ " ನೋಡಿ, ಈ ಜ್ವರ ಈಗ ಮಕ್ಕಳಿಗೆ ಕಾಣಿಸಿಕೊಳ್ಳುತ್ತಿದೆ.  ವೈರಾಣುಗಳ  ಸೋಂಕಿನಿಂದ ಬರುವ ಈ ಜ್ವರ ಮಕ್ಕಳನ್ನು ನಿಸ್ತೇಜವನ್ನಾಗಿ ಮಾಡಿಬಿಡುತ್ತದೆ. ಇಂತಹ ಸಂಧರ್ಭದಲ್ಲಿ ಮಕ್ಕಳ  ಕೈ, ಕಾಲು, ಕಣ್ಣು ಹೀಗೆ ಏನಾದರೊಂದು ತನ್ನ ಶಕ್ತಿ ಕಳೆದುಕೊಂಡು ವಿಕಲಾಂಗರಾಗುತ್ತಾರೆ.  ದೈರ್ಯ ತಂದುಕೊಳ್ಳಿ.  ನಮ್ಮ ಪ್ರಯತ್ನ ಸಂಪೂರ್ಣವಾಗಿ ನಾವು ಮಾಡುತ್ತೇವೆ. ಮಿಕ್ಕದ್ದು ಭಗವಂತನ ಕೈಯಲ್ಲಿದೆ."  ಎಂದು ಯಜಮಾನರನ್ನು ಸಂತೈಸಿದರು.   ದಂಪತಿಗಳಿಗಿಬ್ಬರಿಗೂ  ಭೂಮಿ ಬಾಯಿಬಿಟ್ಟ ಹಾಗೆ ಆಯಿತು.  " ಇಷ್ಟು ಚಂದದ ಮಗುವಿಗೆ ಇಷ್ಟೊಂದು ಭೀಕರ ಶಾಪವೇ? " ಎಂದು ಆ ತಾಯಿ ಗೊಳಾಡಲು  ಪ್ರಾರಂಭಿಸಿದರು.   ಈ ಮಾತು ಕೇಳಿದ ತಂದೆ ಮಾತ್ರ ದಿವ್ಯ ಮೌನಕ್ಕೆ ಶರಣಾದರು.   ತಮಗೇ ತಾವು ಸಮಾಧಾನ ಮಾಡಿಕೊಂಡು  ಪುನಃ  ವೈದ್ಯರಲ್ಲಿ ಹೋಗಿ "  ಮುಂದೇನು ಮಾಡಬೇಕು?  ಯಾವ ರೀತಿಯಲ್ಲಿ ಚಿಕಿತ್ಸೆ ಕೊಡಿಸಬೇಕು?  ಎಷ್ಟು ಹಣ ಖರ್ಚಾಗಬಹುದು?  ಎಷ್ಟೇ ಖಚಾದರು ಈ ಮಗುವನ್ನು ಪರಾಧೀನ ಮಾಡಲಾಗದು.   ದಯಮಾಡಿ ನನಗೆ ಸಹಾಯ ಮಾಡಿ." ಎಂದು ಅಂಗಲಾಚಿದರು.  ಸ್ವಲ್ಪ ಹೊತ್ತು ಸುಮ್ಮನಿದ್ದು ವೈದ್ಯರು " ನೋಡಿ, ಈ ಖಾಯಿಲೆಗೆ ಯಾವ ಔಷಧಿಗಳು ಈಗ ಸಧ್ಯಕ್ಕೆ ದೊರೆಯುತ್ತಿಲ್ಲ.  ಪೋಲಿಯೋ ರೋಗವು ಇತ್ತೀಚಿಗೆ ಕಾಣಿಸಿಕೊಂಡಿರುವ ಭೀಕರ ರೋಗ.  ಹತ್ತಾರು ಸಂಶೋಧನೆಗಳು ನಡೆಯುತ್ತಾ ಇವೆ.  ಈಗಿನ ಪರಿಸ್ಥಿತಿಯಲ್ಲಿ ಈ ಮಗುವಿನ ಜ್ವರ ಇಳಿಸದೆ ಮುಂದಿನ ಕ್ರಮ ತೆಗೆದು ಕೊಳ್ಳುವುದು  ಕಷ್ಟ.  ಆದರೂ,  ನೀವು ಯಾವುದೇ ಕಾರಣಕ್ಕೂ ದೈರ್ಯಗೆಡಬೇಡಿ.  ಸಾತ್ವಿಕರಾಗಿ ಕಾಣುವ ನೀವು ಸತ್ಯವನ್ನು ಅರ್ಥ ಮಾಡಿಕೊಳ್ಳಬಲ್ಲಿರಿ.  ಈ ಮಗುವಿಗೆ ಏನು ಅಗತ್ಯವಿದೆಯೋ ಅದನ್ನು ಮಾಡೋಣ.  ಚಿಂತೆ ಮಾಡಬೇಡಿ"  ಎಂದು ತಂದೆಯ ಭುಜವನ್ನು ತಟ್ಟುತ್ತಾ ಸಮಾಧಾನ ಪಡಿಸಿದರು.  ತಂದೆಯ ಕಣ್ಣುಗಳಲ್ಲಿ ಧಾರಾಕಾರ ನೀರು ಹರಿಯಿತು.  ಸಾವರಿಸಿಕೊಂಡು ಎರಡೂ ಕೈಗಳನ್ನು ಜೋಡಿಸುತ್ತ ದುಃಖದಿಂದ " ಈ ಮಗುವನ್ನು ಉಳಿಸಿಕೊಡಿ .  ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಚೈತನ್ಯ ಪೂರ್ಣನನ್ನಾಗಿ  ಮಾಡಿಕೊಡಿ.  ಎದ್ದು ಓಡಾಡಲು ಸಾಧ್ಯವಾಗದೆ ಇದ್ದರೂ ಪರವಾಗಿಲ್ಲ.  ಎದ್ದು ಕೂರಲಿ.  ತನ್ನ ಕೆಲಸ ತಾನು ಮಾಡಿಕೊಳ್ಳುವಷ್ಟು ಚೈತನ್ಯ ಭಗವಂತ ದಯಪಾಲಿಸಿದರೆ ಸಾಕು."  ಎಂದು ಬೇಡಿದರು.

ವೈದ್ಯರ ಪ್ರಯತ್ನ ಶಕ್ತಿಮೀರಿ ಸಾಗಿತ್ತು. ನಾಲ್ಕಾರು ತಿಂಗಳು ಆಸ್ಪತ್ರೆಯ ಜೀವನದ ನಂತರ ಮಗು ಮನೆಗೆ ವಾಪಸಾಯಿತು.ಎದ್ದು ಕೂರುವ ಸ್ಥಿತಿ ತಲುಪಿತ್ತು.  ಎದ್ದು ನಿಲ್ಲಲಾಗಲಿ ಓಡಾಡುವ ಪರಿಸ್ಥಿತಿಯಲ್ಲಿ ಮಗು ಇರಲಿಲ್ಲ.  " ಮುದ್ದಾದ ಮಗುವಿಗೆ  ಹೀಗಾಯಿತಲ್ಲ " ಎಂದು ತಾಯಿ ಅತ್ತರೆ,  " ಭಗವಂತ ಇಷ್ಟಾದರೂ ಮಾಡಿದನಲ್ಲ"  ಎಂದು ಸಮಾಧಾನ ಮಾಡುತ್ತಿದ್ದರು.  " ಇವನ ಕಾಲ ಮೇಲೆ ಇವನನ್ನು ನಿಲ್ಲಿಸಲು ನಮಗೆ ಸಾಧ್ಯವಾಗದೆ ಇರಬಹುದು, ಆದರೆ ಇವನ ಬುದ್ಧಿ ಬಲದಲ್ಲಿ ಇವನು  ಸ್ವತಂತ್ರವಾಗಿ ನಿಲ್ಲುವಂತೆ ಮಾಡುವುದೇ ನಮ್ಮಿಬ್ಬರ ಜೀವನ, ಸಾಧನೆ ಮತ್ತು ಬದುಕು."  ಎನ್ನುತ್ತಾ ತಮ್ಮ ಸಂಪೂರ್ಣ ಜೀವನವನ್ನು ಮೀಸಲಿಟ್ಟರು.

ಇಂದಿಗೆ ಈ ಪೋಲಿಯೋ ಪೀಡಿತನಿಗೆ 56 ವರ್ಷಗಳೇ ಆಗಿವೆ.  ತಂದೆ ತಾಯಿ ಮಾಡಿದ ಜೀವನ ಸಾಧನೆಯ ಫಲವಾಗಿ ತನ್ನ ಕಾಲಮೇಲೆ ತಾನು ನಿಂತಿದ್ದಾನೆ .  ಪ್ರತಿ ಕ್ಷಣದಲ್ಲೂ ಆತ್ಮಸ್ಥೈರ್ಯ ತುಂಬುತ್ತ, ವಿಶ್ವಾಸ ಕರಗದಂತೆ, ಬದುಕಿನ ಪ್ರತಿ ಕ್ಷಣವನ್ನು ಹೇಗೆ ಎದುರಿಸಬೇಕೆಂಬುದನ್ನು  ಉದಾಹರಣೆ ಮೂಲಕ  ದೈರ್ಯ ತುಂಬುತ್ತ ಬೆಳೆಸಿದರು.   ಯಾವುದೇ ಕಾರಣಕ್ಕೂ  ತಾನು ನಿಷ್ಪ್ರಯೋಜಕ ಎಂಬ ಭಾವ ಬಾರದ ಹಾಗೆ ರಕ್ಷಿಸಿ ಬೆಳೆಸಿದರು.  ತಮ್ಮ ಶಕ್ತಿ ಮತ್ತು ಅವಕಾಶಗಳಿಗೆ ಅನುಸಾರ  ವಿದ್ಯೆ ಕೊಡಿಸಿದರು.  ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬ ಬುದ್ಧಿ ಕಲಿಸಿದರು.

ಇಂದಿಗೆ ಆ ತಂದೆ ತಾಯಿಯರು ಇಲ್ಲವಾದರೂ ಅವರ ಸಾಧನೆಯ ಪ್ರತೀಕ ಜೀವಂತವಾಗಿದೆ. ಪ್ರತಿ ಕ್ಷಣ ಆ ಸಾಧಕರನ್ನು ನೆನೆಯುತ್ತ ಅವರ ಆಶೀರ್ವಾದದ ಬಲ ಹಾಗೂ ಕೊಟ್ಟ ಸಂಸ್ಕಾರದ ನೆರಳಲ್ಲಿ ಇಂದು ಯಶಸ್ವಿ ವ್ಯಕ್ತಿಯಾಗಿ ತುಂಬು ಜೀವನ ನಡೆಸುತ್ತಿದ್ದಾನೆ. " ಪ್ರತಿ ಸವಾಲು ಅವಕಾಶವೇ, ಪ್ರತಿ ಅವಕಾಶವು ಸವಾಲೇ " ಎಂಬ ತಂದೆಯ ಮಾತನ್ನು ಅಕ್ಷರಶಃ ಪಾಲಿಸುತ್ತಾ  ಜೇವನದಲ್ಲಿ ಸಂತಸ ಮತ್ತು ತೃಪ್ತಿ ಕಂಡುಕೊಂಡ ಪೋಲಿಯೋ ಪೀಡಿತ " ನಾನೇ ". ಇಂತಹ ತಂದೆ ತಾಯಿ ಪಡೆದ ನಾನೇ  ಧನ್ಯ.  ಅವರ ಬಗ್ಗೆ ಎಷ್ಟು ಹೇಳಿದರು ಅದು ಕಡಿಮೆಯೇ.  ಅವರು ಬದುಕಿನಲ್ಲಿ ನನಗೆ ಕಲಿಸಿದ ಪಾಟಗಳು ಇಂದು ನನ್ನನ್ನು  ಕಾಪಾಡುತ್ತಿವೆ.

ಪ್ರತಿ ಶಿವರಾತ್ರಿ ಬಂದಾಗಲು ನನ್ನ ತಂದೆ ವಿಸ್ತಾರವಾಗಿ ನನಗೆ ಹೇಳಿದ ಈ ಘಟನೆ ನೆನಪಾಗುತ್ತದೆ.  ನನ್ನ ಅರಿವಿರದಂತೆ ಕಣ್ಣಲ್ಲಿ  ನೀರು ತುಂಬುತ್ತದೆ. ದುಖದಿಂದಲ್ಲ, ನನ್ನ ತಂದೆ ತಾಯಿಯಲ್ಲಿದ್ದ  ಅದಮ್ಯ ವಿಶ್ವಾಸದ ಸಂತೋಷದಿಂದ.  ಈಗ ಹೇಳಿ ಹೇಗೆ ಮರೆಯಲಿ ಈ ಮಹಾ ಶಿವರಾತ್ರಿಯನ್ನು?

ಹೆಚ್ ಎನ್ ಪ್ರಕಾಶ್
16 06 2012



June 11, 2012

ಪ್ರಳಯ ............................ಒಂದಷ್ಟು ಚಿಂತನೆ.

ಪ್ರಳಯ ............................ಒಂದಷ್ಟು ಚಿಂತನೆ.


ಡಿಸೆಂಬರ್ 21, 2012 ರಂದು ಈ ಜಗತ್ತು ಮುಳುಗಲಿದೆ, ಎಲ್ಲಿ ನೋಡಿದರು ನೀರು, ಈ ಜಲಪ್ರಳಯದಲ್ಲಿ ಹಿಮಾಲಯದ ಮೌಂಟ್  ಎವೆರೆಸ್ಟ್ ಮೇಲೆ ಹರಿಯುವಷ್ಟು ಪ್ರಮಾಣದಲ್ಲಿ ನೀರು ಉಕ್ಕುತ್ತದೆ, ಎಂದು ಕೆಲವರ ಅಭಿಪ್ರಾಯ.  ಸೌರಮಂಡಲದಲ್ಲಿ ಭೂಮಿಯ ಗಾತ್ರಕ್ಕಿಂತ ಆರೆಂಟು ಪಟ್ಟು ದೊಡ್ಡದಿರುವ ದೈತ್ಯ ಗ್ರಹವೊಂದು ಭೂಮಿಯ ಮೇಲೆ ಅಪ್ಪಳಿಸಲಿದೆ ; ಭೂಮಿಯ ಗುರುತು ಸಿಗದ ಹಾಗೆ ಕಣ್ಮರೆಯಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ.   ದೇವರ ಮತ್ತು ಸೈತಾನನ ನಡುವೆ ಕಾಳಗ ಕೊನೆಗೊಳ್ಳಲಿದೆ ಎನ್ನುವುದು ಬೈಬಲ್ ನ ಅಭಿಮತ.  ಭೂಮಿಯು ತನ್ನ ಗುರುತ್ವಾಕರ್ಷಣೆ ಕಳೆದುಕೊಂಡು ಸೂರ್ಯನ ಚಲನೆ ಅಸ್ಥವಸ್ತ ವಾಗಿ  ಭೂಮಿಯ ವಿನಾಶ ಖಂಡಿತ ಎನ್ನುವುದು ಚೀನಿಯ ಸಿದ್ಧಾಂತ.  ಇನ್ನೂ ಹೀಗೆ ಹಲವು ಹದಿನೆಂಟು ರೀತಿಯಲ್ಲಿ ಪ್ರಳಯದ ವಿವರಣೆ ನಡೆಯುತ್ತಿದೆ.

ಈ ವಿಚಾರವನ್ನು ಬಂಡವಾಳ ಮಾಡಿಕೊಂಡು ಹಲವಾರು ಪ್ರಚಾರ ಮಾಧ್ಯಮ ಸಂಸ್ಥೆಗಳು ಪುಸ್ತಕ, ಸಿ ಡಿ, ಡಿ ವಿ ಡಿ ಗಳನ್ನೂ ಬಿಡುಗಡೆ ಮಾಡಿ ಜನರಿಗೆ ಮತ್ತಷ್ಟು ನಡುಕ ಹುಟ್ಟಿಸಿದ್ದಾರೆ.  ವೆಬ್ ಸೈಟ್ ಗಳು ಹಲವಾರು ವಿಚಾರಗಳನ್ನು ಕಲೆಹಾಕಿ ವರ್ಣರಂಜಿತವಾಗಿ ಬಿಂಬಿಸಿದೆ. " 2012 ರ ನಂತರ ಪ್ರಪಂಚದ ಕೊನೆ " ಎಂಬ ಸಿನಿಮಾ ಕೂಡ ಬಿಡುಗಡೆಯಾಗಿದೆ. ಇವೆಲ್ಲವನ್ನೂ ಓದಿ, ನೋಡಿದ ಮೇಲೆ ಯಾರಿಗೆ ಆದರು ಹೆದರಿಕೆ ಆಗುವುದು ಸಹಜ.  ಆದರೂ, ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಇದೆಲ್ಲ ಸತ್ಯವೇ?  ಇದನ್ನು ನಂಬಬಹುದೇ?  ಎಂಬುದು ತಲೆಯಲ್ಲಿ ಸುಳಿಯುತ್ತದೆ.  ಕೆಲವರು ಇಂತಹ ವಿಚಾರ ಬಂದಾಗ " ಇವೆಲ್ಲ ಬರಿ ಡೋಂಗಿ, ಒಂದಿಷ್ಟು ಕಟ್ಟು ಕಥೆ ಕಣ್ರೀ " ಎಂದು ತೇಲಿಸಿ ಬಿಡುತ್ತಾರೆ.  ಆದರೂ,  ಜನಸಾಮಾನ್ಯರಲ್ಲಿ  ಒಂದು ರೀತಿಯ ಭ್ರಾಂತಿ  ಹುಟ್ಟುತ್ತದೆ.

ಇಂತಹ ಒಂದು ಸಂಧರ್ಭದಲ್ಲಿ ಭಾರತೀಯ ಕಾಲ ನಿರ್ಣಯ ಏನು ಹೇಳುತ್ತದೆ? ಸ್ವಲ್ಪ ಗಮನಿಸೋಣ.  ಸೃಷ್ಟಿಯ ಆದಿಯಿಂದ ಅಂತ್ಯದವರೆಗೆ ಕಾಲದ ವಿಸ್ತಾರ.  ಅತ್ಯಂತ ಸೂಕ್ಷ್ಮವಾದ ಅಣುವೆ ಇರಲಿ, ಅತ್ಯಂತ ಮಹತ್ತಾದ ಲೋಕವೇ ಇರಲಿ,  ಇವೆಲ್ಲವೂ ಈ ಕಾಲದ ಗಣನೆಗೆ ಒಳಪಟ್ಟಿವೆ.  ಒಂದು ಕ್ಷಣದಿಂದ ಹಿಡಿದು ಯುಗಯುಗಗಳವರೆಗೆ  ಈ ಗಣನೆ ನಿಖರವಾಗಿದೆ. ನಾವೆಲ್ಲಾ ಬಾಯಿಪಾಟ ಮಾಡಿದ ಮಗ್ಗಿಯಷ್ಟೇ ಸರಳವಾಗಿರುವ ಈ ಕಾಲ ಚಕ್ರ-- ಕ್ಷಣ, ಚುರುಕಾ, ವಿಘಳಿಗೆ, ಘಳಿಗೆ, ದಿನ, ಮಾಸ, ವರ್ಷ,ಸಂವತ್ಸರ ಮತ್ತು ಯುಗ ಹೀಗೆ ಸಾಗುತ್ತದೆ.   ಇದು ಒಂದು ಕಾಲದ ಆವರ್ತನ.   ಈ ಆವರ್ತನಗಳಿಗೆ ಯಾವುದೇ ವಸ್ತು, ವ್ಯಕ್ತಿ, ಅಥವಾ ಶಕ್ತಿ ಸಿಲುಕಿರಲಿ ಅದು ಈ ಕಾಲದೊಂದಿಗೆ ಸುತ್ತಲೇ ಬೇಕು.  ಜನನ- ಜೀವನ-ಮರಣ ಈ ಕ್ರಮಾವರ್ತನೆಗೆ ಒಳಗಾಗಲೇ ಬೇಕು.  ಅತ್ಯಲ್ಪಕಾಲ ಬದುಕುವ ಜೀವವೇ ಆಗಲಿ, ಕೋಟ್ಯಂತರ ವರ್ಷಗಳ ಕಾಲ ಬದುಕುವ ವಸ್ತು ಅಥವಾ ಜೀವವೇ ಆಗಲಿ, ಈ ಆವರ್ತನೆಯಿಂದ ಹೊರತಲ್ಲ.  ಹುಟ್ಟಿದ್ದು ಸಾಯಲೆಬೇಕೆಂಬುದು  ಸೃಷ್ಟಿಯ ನಿಯಮ. ಎಲ್ಲವು ಲಯವಾದಾಗ ಉಳಿಯುವುದು ಶೂನ್ಯ ಮಾತ್ರ- ನಿಶೂನ್ಯ.  ಇದೇ ಬಾಹ್ಯ ಅಂತಃಕರಣಗಳಿಗೆ ನಿಲುಕದ ಅಗೋಚರ ಅದಮ್ಯನಾದ ಪರಮಾತ್ಮ.

ಕೃತಯುಗ, ತ್ರೇತಾಯುಗ, ದ್ವಾಪರಯುಗ, ಮುಗಿಸಿ ಕಲಿಯುಗಕ್ಕೆ ಕಾಲಿರಿಸಿರುವ ನಾವು, ನಾಲ್ಕು ಪಾದವಿರುವ ಕಲಿಯುಗದ ಪ್ರಥಮಪಾದದ ಹತ್ತನೇ ಒಂದು ಭಾಗದಲ್ಲಿ ಇದ್ದೇವೆ.  ಒಂದು ಲೆಕ್ಕಾಚಾರದ ಪ್ರಕಾರ ಕಲಿಯುಗಕ್ಕೆ 4,32,000 ವರ್ಷಗಳು ಎಂದು ನಿರ್ಣಯ ಮಾಡಲಾಗಿದೆ.   ಇನ್ನು ಪ್ರಳಯದ ವಿಚಾರಕ್ಕೆ ಬಂದರೆ,  ಇನ್ನು ಕನಿಷ್ಠ 4,27, 000 ವರ್ಷಗಳು ಈ ಭೂಮಿ ಸುರಕ್ಷಿತವಾಗಿ ಇರುತ್ತದೆ.  ಶತಶತಮಾನಗಳಷ್ಟು ಹಿಂದೆ ಇದ್ದ  ಅಲ್ಲಮಪ್ರಭುಗಳ ಒಂದು ವಚನ ಇಲ್ಲಿ ಪ್ರಸ್ತುತ ವೆನಿಸುತ್ತದೆ.

                  ಹಿಂದೆ ಎಷ್ಟು ಪ್ರಳಯ ಹೋಯಿತೆಂದು ಅರಿಯೆ|
                  ಮುಂದೆ ಎಷ್ಟು ಪ್ರಳಯವಾಗುವುದೆಂದು ಅರಿಯೆ|
                  ತನ್ನ ಸ್ಥಿತಿಯ ತಾನರಿಯದೆಡೆ  ಅದೇ ಪ್ರಳಯವಲಾ|
                  ತನ್ನ ವಚನ ತನಗೆ ಹಗೆಯಾದೆಡೆ ಅದೇ ಪ್ರಳಯವಲಾ|
                  ಇಂತಹ ಪ್ರಳಯ ನಿನ್ನೊಳು ಉಂಟೇ ಗುಹೇಶ್ವರಾ||

ಈ ಹಿಂದೆ ಅದೆಷ್ಟೋ ಪ್ರಳಯಗಳು ಆಗಿಹೊಗಿವೆಯೋ ತಿಳಿಯದು, ಇನ್ನುಮುಂದೆ ಅದೆಷ್ಟು ಪ್ರಳಯ ಆಗಬಹುದು ಎಂಬುದನು ಕಲ್ಪಿಸಲು ಸಾಧ್ಯವಿಲ್ಲ.  ಸಾಧಕನಾದವನು ತನ್ನ ನಿಜವಾದ ಅಮರ ಸ್ವರೂಪವನ್ನು ಅರಿಯದೆ ಹೋದರೆ ಅದೇ ನಿಜವಾದ ಪ್ರಳಯ.   ಪ್ರಕೃತಿಯಿಂದ ಅಥವಾ ಶಕ್ತಿಯ ಮೂಲಕಾರಣದಿಂದ ಹುಟ್ಟುವಂತಹ ಎಲ್ಲವು ಕಾಣುತ್ತದೆ, ರೂಪಗೊಳ್ಳುತ್ತದೆ ಕೊನೆಗೆ ಆ ಪ್ರಕೃತಿಯಲ್ಲೇ ಪ್ರಳಯ ಹೊಂದುತ್ತದೆ.   ಆದರೆ, ಆತ್ಮತತ್ವ ಯಾವ ಕಾರಣದಿಂದಲೂ ಜನ್ಮವಾದುದಲ್ಲ, ಆದ್ದರಿಂದ ಆತ್ಮಕ್ಕ ಯಾವ ಪ್ರಳಯವೂ ಇಲ್ಲ.  ಅನಾತ್ಮವಾದ ದೇಹಾದಿಗಳಲ್ಲಿ  ನಾವುಗಳು ತಾದಾತ್ಮ ಭಾವ ತಳೆದು ಇದನ್ನೇ ನಿಜವಾದ ರೂಪವೆಂದು ಭ್ರಮಿಸುವ ಕಾರಣ ಅನಾತ್ಮನು ಹುಟ್ಟುತ್ತಾನೆ, ನಂತರ ಸಾಯುತ್ತಾನೆ.  ಇದು ಅಜ್ಞಾನ.   ಈ ಅಜ್ಞಾನವೇ ಪ್ರಳಯ.   ಜ್ಞಾನದ ಬೆಳಕಲ್ಲಿ ನಿಲ್ಲಲು, ಅಜ್ನಾನವೆಂಬ ಕತ್ತಲಿನಿಂದ ಹೊರಬರಬೇಕು.  ಆಗ ಅರಿವು ಅಮೃತವಾಗುತ್ತದೆ.  ಅಮೃತಕೆಲ್ಲಿ ಪ್ರಳಯದ ಭೀತಿ?

ಪ್ರಕಾಶ್  ಹೆಚ್ ಏನ್ 

( ನನ್ನ ಈ ಚಿಂತನೆಯು  ದಿನಾಂಕ 3-12-2009 ರಲ್ಲಿಹಾಸನ ಆಕಾಶವಾಣಿಯಲ್ಲಿ  ಬಿತ್ತರಗೊಂಡಿತ್ತು }

June 6, 2012

ಪ್ರತಿಫಲ .................ಒಂದಷ್ಟು ಹರಟೆ



 ಪ್ರತಿಫಲ .................ಒಂದಷ್ಟು ಹರಟೆ 



" ಈ ಜಗತ್ತಿನಲ್ಲಿ ಒಳ್ಳೆಯದನ್ನು  ಮಾಡಿದವರಿಗೆ ಎಂದಿಗೂ ಕೆಡಕಾಗುವುದಿಲ್ಲ " ಇದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ ನಿತ್ಯಪಾಠ.  ಆದರೂ, ಕೆಲವೊಮ್ಮೆ ಈ ಮಾತಿನಲ್ಲಿ ನಮಗೆ ಸಂಶಯ ಕಾಡುತ್ತದೆ .  ಒಳ್ಳೆಯ ಕೆಲಸ ಮಾಡಲು ಹೋಗಿ ಕಷ್ಟಕ್ಕೆ ಸಿಲುಕಿಕೊಂಡಾಗ,  ಒಳ್ಳೆಯ ಕೆಲಸ ಮಾಡುವವರಿಗೆ ನೂರೆಂಟು ವಿಘ್ನಗಳು ಬಂದಾಗ, ಒಳ್ಳೆಯವರು ಕಷ್ಟ ಪಡುವುದನ್ನು   ಗಮನಿಸುವಾಗ ಸಹಜವಾಗಿ ಒಳ್ಳೆಯ ಕೆಲಸ ಮಾಡಿದವರಿಗೆ ನಿಜವಾಗಿ ಒಳಿತಾಗುತ್ತದೆಯೇ?  ಎಂಬ ಪ್ರಶ್ನೆ ಏಳುತ್ತದೆ.  ಇಂತಹ ಸಮಯದಲ್ಲೂ ನಮ್ಮ ಹಿರಿಯರ ನುಡಿ ಒಂದೇ .  "ಒಳ್ಳೆಯವರಿಗೆ ಒಳಿತೇ ಆಗಬೇಕು .  ಇದು ಸಹಜ ಮತ್ತು ಭಗವಂತನ ನಿಯಮ ಕೂಡ " ಎನ್ನುತ್ತಾರೆ. 

ಒಳ್ಳೆಯದನ್ನು ಮಾಡಲು ಹೋಗುವುದೆಂದರೆ ಕೆಲವೊಮ್ಮೆ ಸಾಗರದ ಕಡೆಗೆ ರಭಸದಿಂದ ಹರಿಯುತ್ತಿರುವ ನದಿಯಲ್ಲಿ ವಿರುದ್ದವಾಗಿ ಈಜಿದಂತೆ.  ಕಷ್ಟವಾಗಲೇ ಬೇಕು, ಏಕೆಂದರೆ ನದಿಗೆ ಒಂದೇ ಗುರಿ ಸಾಗರ ಸೇರಬೇಕೆನ್ನುವುದು, ಹೀಗಾಗಿ ಏನೇ ಎದುರು ಬಂದರು ಅದನ್ನು ತಳ್ಳಿಕೊಂಡು ಮುಂದೆ ಸಾಗಿಬಿಡುತ್ತದೆ ನದಿ. ಇದು ನಮಗೆ ಕಲಿಸುವ ಪಾಠವೆಂದರೆ "ನಿನ್ನ ಗುರಿ ಮುಟ್ಟುವ ತನಕ ಪ್ರಯತ್ನ ಜಾರಿಯಲ್ಲಿಡು, ಅಡೆ ತಡೆಗಳಿಗೆ ಹೆದರದೆ ಮುನ್ನುಗ್ಗು".   ಒಂದು ಒಳ್ಳೆಯ ಕೆಲಸ ಮಾಡುವಾಗ ಅಡ್ಡಿ ಆತಂಕಗಳು ಸಹಜವಾಗಿ ಬಂದೆ ಬರುತ್ತವೆ, ಆದರೆ ಈ ಅಡ್ಡಿ ಆತಂಕಗಳು ನಮ್ಮ ಎದೆಕುಗ್ಗಿಸಬಾರದು ಬದಲಿಗೆ ಛಲ ನಮ್ಮದಾಗಬೇಕು .  ಯಾವುದೇ ಕಷ್ಟಗಳು ನಮ್ಮನ್ನು ಹೆಚ್ಚು ಬಲಿಷ್ಟರನ್ನಾಗಿ ಮಾಡುತ್ತವೆ ಎಂಬ ವಿಶ್ವಾಸ ನಮ್ಮಲ್ಲಿ ಬರಬೇಕು.  ಏಕೆಂದರೆ, ಪ್ರತಿ ಕಷ್ಟ ಎದುರಿಸಿದಾಗಲು ನಮಗೆ  ಒಂದು ಉತ್ತಮ ಸಂಸ್ಕಾರ ಸಂಪಾದನೆಯಾಗಿರುತ್ತದೆ. ಎಂದಿಗೂ ಇದರಿಂದ ವಿಫಲತೆ ಎಂಬುದಿಲ್ಲ.  ಎಷ್ಟು ಪ್ರಯತ್ನವೋ ಅಷ್ಟು ಸಂಸ್ಕಾರ ಫಲ ಸಿಕ್ಕೆ ಸಿಗುತ್ತದೆ. ಇದು ಕೂಡ ಪ್ರಕೃತಿ ನಿಯಮ.

ಒಂದು ವಸ್ತುವಿನ ಬೆಲೆ ಹತ್ತಾರು ಸಾವಿರಗಳಾಗಬಹುದು.  ಒಮ್ಮೆಲೇ ಇಷ್ಟು ಹಣ ಹೊಂದಿಸಲು ಸಾಧ್ಯವೇ ಎಂಬ ಸಂಶಯವೂ ಬರಬಹುದು.  ಆದರೆ ಪ್ರತಿ ನೂರು ರುಪಾಯಿ ಕೂಡ ಈ  ಸಾವಿರದ ಗಾತ್ರವನ್ನು ಕಡಿಮೆ ಮಾಡಲು  ಮತ್ತು ವಿಶ್ವಾಸ ಹೆಚ್ಚಿಸಲು ಸಹಕಾರಿ. ನಾವು ಗಳಿಸಿದ ನೂರು ರೂಪಾಯಿ ಮೊತ್ತ ಕಡಿಮೆ ಎನಿಸಿದರು ಆ ಹಣಕ್ಕೆ ಇರುವ ಮೌಲ್ಯ ಇದ್ದೆ ಇರುವ ಹಾಗೆ ನಾವು ಮಾಡುವ ಪ್ರತಿ ಕೆಲಸಕ್ಕೂ  ಮೌಲ್ಯ ಸಿಕ್ಕೆ ಸಿಗುತ್ತದೆ.  ನಾವು ಮಾಡುವ ಪಾಪ, ಪುಣ್ಯ, ಸತ್ಕರ್ಮ ಎಲ್ಲದರ ಮೌಲ್ಯವು ನಮ್ಮ ನಮ್ಮ ಖಾತೆಗೆ ಜಮಾ ಆಗೇ ತಿರುತ್ತದೆ. ಯಾವುದರಿಂದಲೂ ತಪ್ಪಿಸಿಕೊಳ್ಳುವ ಮಾತೆ ಇಲ್ಲ. ನಾವು ಗಳಿಸಿಕೊಂಡ ಸಂಸ್ಕಾರ ಫಲಗಳು ಮುಗಿಯುವವರೆಗೂ ನಮ್ಮನ್ನು ನೆರಳಿನ ಹಾಗೆ ಹಿಂಬಾಲಿಸುವ ಕಾರಣ ಇದು ಒಂದು ಜನ್ಮಕ್ಕಲ್ಲ ಹಲವಾರು ಜನ್ಮಗಳವರೆಗೂ ಸಾಗುತ್ತದೆ ಎನ್ನುತ್ತದೆ ಕರ್ಮ ಸಿದ್ಧಾಂತ.  

ಆದ್ದರಿಂದಲೇ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಒಂದು ಭರವಸೆಯ ಸಂದೇಶ ಕೊಡುತ್ತಾನೆ. " ನೀನು ಒಳ್ಳೆಯದನ್ನು ಮಾಡಿದ್ದೆ ಆದರೆ ನಿನಗೆ ದುರ್ಗತಿ ಬರಲು ಸಾಧ್ಯವೇ ಇಲ್ಲ."  ಈ ಜಗತ್ತಿನ ನಿಯಮವು ಹೀಗೆಯೇ. ನಾವು ಭೂಮಿಯಲ್ಲಿ ಏನನ್ನು ಬಿತ್ತುತ್ತೆವೋ ಅದು ಒಂದಕ್ಕೆ ನೂರಾಗಿ ವಾಪಸ್ಸು ಕೊಡುತ್ತವೆ. ಮಾವು ಬಿತ್ತಿದರೆ ಮಾವು, ಬೇವು ಬಿತ್ತಿದರೆ ಬೇವು.ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಪ್ರತಿಫಲ, ಕೆಟ್ಟದ್ದು ಮಾಡಿದರೆ ಕೆಟ್ಟ ಪ್ರತಿಫಲ, ಎಂಬುದನ್ನು ಒಪ್ಪಲೇಬೇಕು. ಆದರೆ ಯಾವುದೇ ಕೆಲಸವನ್ನು ಪೂರ್ಣಮಾಡದೆ ಇದ್ದಾಗ ಅದರ ಫಲವು ಅಪೂರ್ಣವೇ.  ಆದ್ದರಿಂದಲೇ ನಮ್ಮ ಹಿರಿಯರು ಹಿಡಿದ ಕೆಲಸವನ್ನು ಮುಗಿಯುವವರೆಗೂ ಬೇರೆಡೆ ಗಮನ ಕೊಡಬೇಡ ಎಂದು ಸಾರಿ ಸಾರಿ ಹೇಳಿದ್ದು. ಇದನ್ನೇ " one thing at a time that done well, it is a best rule as many can tell " ಎಂದಿರುವುದು. 

ಈ ಜಗತ್ತಿನಲ್ಲಿ ಸೋಲದೆ, ಒಮ್ಮೆಲೇ ಜಯ ಯಾರಿಗೆ ಸಿಕ್ಕಿದೆ?  ಈ ಜಯ  ಸಿಗಬೇಕಾದರೆ ಸೋಲಿನ ರುಚಿ ಕಂಡಿರಲೇ ಬೇಕು, ಆಗಲೇ ಗೆಲುವು ಹೆಚ್ಚು ರುಚಿಕರವಾಗುವುದು.  ಒಂದು ಆದರ್ಶಕ್ಕಾಗಿ ಸಾಧನೆ ಮಾಡುವಾತನಿಗೆ ಸೋಲು ಸ್ವಾಭಾವಿಕ. ಇದನ್ನು ಸಾಧಕ ಸೋಲೆಂದು ಪರಿಗಣಿಸಲೇ ಬಾರದು. ಈ ಅಡ್ಡಿ ಆತಂಕಗಳು ನಮ್ಮ ಸಹನಶಕ್ತಿಯನ್ನು ಪರೀಕ್ಷಿಸುವ ಪ್ರಶ್ನ ಪತಿಕೆಗಳು, ಪರೀಕ್ಷಾ  ಸಮಯಗಳು. ಇದಕ್ಕೆ ಉತ್ತರಿಸದೆ ಮುಂದಿನ ತರಗತಿಗೆ ಹೋಗಲು ಸಾಧ್ಯವೇ ಇಲ್ಲ. ಒಂದೊಂದು ಪರೀಕ್ಷೆ ಗೆದ್ದ ಹಾಗೆ ನಮ್ಮ ಸಂಸ್ಕಾರ ಘಟ್ಟಿಯಾಗುತ್ತ ಹೋಗುತ್ತವೆ. ಒಂದೊಂದು ಸೋಲು ನಮ್ಮನ್ನು ಪರಿಪಕ್ವವನ್ನಾಗಿ  ಮಾಡುತ್ತವೆ.  ನಡೆಯುವವನು ಮಾತ್ರ ಎಡವಲು ಸಾಧ್ಯ.  ಸುಮ್ಮನೆ ಕುಳಿತವನಿಗೆ, ಮಲಗಿದವನಿಗೆ ಎಡವುದು ಎಂದರೇನೆಂದು ಗೊತ್ತೇ ಇಲ್ಲ.  ನಾವು ಕಾಣುವ ತಾತ್ಕಾಲಿಕ ಜಯ  , ಸೋಲು ಇವೆಲ್ಲ ಅಂತಿಮ ಗುರಿ ಮುಟ್ಟಲು ಮಧ್ಯೆ ಮಧ್ಯೆ ಇರುವ ವಿಶ್ರಾಂತಿ ತಾಣಗಳು.  ಇಲ್ಲಿ ಕುಳಿತು ವಿಶ್ರಮಿಸಿ, ಸಾಧಕ ಬಾಧಕಗಳ ಪರಾಮರ್ಶೆ ಮಾಡಬಹುದು.  ಸಾಧಕನಿಗೆ ಅಂತಿಮ ಗುರಿ ಮುಖ್ಯವೇ ಹೊರತು ಮಿಕ್ಕವು ಯಾವುದು ಅಲ್ಲ. ಪ್ರಯತ್ನಶೀಲನಿಗೆ ಪರಮಾತ್ಮನ ಸಹಾಯ ಇದ್ದೆ ಇರುತ್ತದೆ. ಆದ್ದರಿಂದ ಒಳ್ಳೆಯ ಆಲೋಚನೆಯನ್ನು ಮಾಡೋಣ, ಒಳ್ಳೆಯ ಕೆಲಸಕ್ಕೆ ಮನಸ್ಸು ಮಾಡುತ್ತಾ ಪ್ರಯತ್ನಶೀಲತೆಯಲ್ಲಿ  ನಮ್ಮನ್ನು ತೊಡಗಿಸಿಕೊಂಡು ಸಾಧನಾ ಹಾದಿಯಲ್ಲಿ ನಡೆಯಲು ಪ್ರಾರಂಭಿಸಿದರೆ ಭಗವಂತನ ಕೃಪೆ ನಮ್ಮ ಮೇಲೆ ಸದಾ ಕಾಲ ಇದ್ದೆ ಇರುತ್ತದೆ.

ಒಳ್ಳೆಯ ಪ್ರಯತ್ನ ನಮ್ಮದಾದಾಗ ಅದರ ಒಳ್ಳೆಯ ಪ್ರತಿಫಲವೂ ನಮಗೆ ದೊರೆಯಲೇ ಬೇಕು.  ಎನೆನ್ನುತ್ತಿರಾ? 

ಹೆಚ್ ಏನ್ ಪ್ರಕಾಶ್  
06 06 2012